ಚರಿತ್ರೆ ಪಾಠವೂ, ಕಳಿಂಗ ಯುದ್ಧವೂ…
ಪ್ರೌಢಶಾಲಾ ದಿನಗಳಲ್ಲಿ ‘ಚರಿತ್ರೆ’ ಪಾಠವನ್ನು ನಾನು ಇಷ್ಟಪಡುತ್ತಿರಲಿಲ್ಲ. ಪ್ರಶ್ನೆಗಳಿಗೆ ಉದ್ದುದ್ದ ಉತ್ತರ ಬರೆಯಬೇಕಾದ ಅನಿವಾರ್ಯತೆ ಜೊತೆಗೆ ಹಲವಾರು ಇಸವಿಗಳನ್ನೂ, ದೇಶ-ವಿದೇಶವನ್ನಾಳಿದ ರಾಜರುಗಳ ಹೆಸರನ್ನೂ ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಈ ರಾಜರುಗಳು ತಮ್ಮ ಪಾಡಿಗೆ ನೆಮ್ಮದಿಯಿಂದ ರಾಜ್ಯವಾಳುತ್ತಿದ್ದರೆ, ಚರಿತ್ರೆಯಲ್ಲಿ ವಿವಿಧ ಯುದ್ದಗಳು ಸಂಭವಿಸುತ್ತಿರಲಿಲ್ಲ, ನಮಗೆ ಇಸವಿಯನ್ನು ನೆನಪಿಟ್ಟಿಕೊಳ್ಳಬೇಕಾದ ಕಷ್ಟವೂ ಇರುತ್ತಿರಲಿಲ್ಲ ಎಂದು ಗೊಣಗುತ್ತಲೇ ಚರಿತ್ರೆ ಪಾಠವನ್ನು ಓದುತ್ತಿದ್ದೆ. ಮೌರ್ಯ ವಂಶದ ಸಾಮ್ರಾಜ್ಯಶಾಹಿತ್ವ, ‘ದೇವಾನಾಂಪ್ರಿಯ’ ಬಿರುದಾಂಕಿತ ಅಶೋಕ ಸಾಮ್ರಾಟನ ಉಚ್ಚ್ರಾಯ ಕಾಲದ ಆಡಳಿತ, ಕಳಿಂಗ ಯುದ್ದ, ಆಮೇಲೆ ಆತನಿಗಾದ ಹೃದಯ ಪರಿವರ್ತನೆ, ಬೌದ್ದ ಧರ್ಮದ ಸ್ವೀಕಾರ ಮತ್ತು ಪ್ರಚಾರ….ಇತ್ಯಾದಿ ಓದಿದ್ದೆ.
ಆದರೆ, 02 ಜನವರಿ 2017 ರಂದು ಒಡಿಶಾದ ಧೌಲಗಿರಿ ಬೆಟ್ಟದ ಮೇಲಿರುವ ಶಾಂತಿಸ್ತೂಪವನ್ನು ನೋಡುತ್ತಿರುವಾಗ , ಅದೇ ಚರಿತ್ರೆಯ ಪಾಠವನ್ನು ನೆನೆದು ರೋಮಾಂಚಿತಳಾದೆ. ಯಾಕೆಂದರೆ, ನಾನು ನಿಂತಿದ್ದ ‘ಧೌಲಗಿರಿ’ಯು ಕ್ರಿಸ್ತ ಪೂರ್ವ 261 ನೇ ಇಸವಿಯಲ್ಲಿ ‘ಕಳಿಂಗ ಯುದ್ದ’ ನಡೆದ ಸ್ಥಳವಾಗಿತ್ತು!
ಒಡಿಶಾದ ಭುವನೇಶ್ವರದಿಂದ 8 ಕಿ.ಮೀ ದೂರದಲ್ಲಿ ಧವಳಗಿರಿ ಅಥವಾ ಧೌಲಿ ಬೆಟ್ಟವಿದೆ.
ಅಶೋಕನ ಶಾಸನಗಳಲ್ಲಿ ಹೇಳಲ್ಪಟ್ಟಂತೆ, ‘ಕಳಿಂಗ’ ಯುದ್ದದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಮಡಿದಿದ್ದರು. ಧೌಲಿ ಬೆಟ್ಟದ ಕೆಳಗೆ ಹರಿಯುತ್ತಿರುವ ‘ದಯಾ’ ನದಿಯಲ್ಲಿ ರಕ್ತದ ಹೊಳೆ ಹರಿದಿತ್ತು. ಯುದ್ಧಾನಂತರದ ಕರಾಳ, ಬೀಭತ್ಸ ದೃಶ್ಯಗಳನ್ನು, ಜನಸಾಮಾನ್ಯರ ಸಾವು ನೋವು ನರಳಾಟಗಳನ್ನು ಕಣ್ಣಾರೆ ಕಂಡು, ಇದಕ್ಕೆಲ್ಲಾ ‘ತಾನೇ ಕಾರಣ’ ಎಂದು ಅಶೋಕ ಚಕ್ರವರ್ತಿಯು ಮನಗಂಡು, ಹೃದಯಪರಿವರ್ತನೆಗೊಂಡು, ಶಸ್ತ್ರಸನ್ಯಾಸ ಮಾಡಿ, ಬೌದ್ಧ ಧರ್ಮವನ್ನು ಸ್ವೀಕರಿಸಿದ ಸ್ಥಳವಿದು.
ಅಶೋಕ ಚಕ್ರವರ್ತಿಯು ಇನ್ನು ಮುಂದೆ ಎಲ್ಲರೂ ಶಾಂತಿಯಿಂದ ಬಾಳಬೇಕೆಂದು ಆಶಿಸಿ ಇಲ್ಲಿ ‘ಶಾಂತಿ ಸ್ತೂಪ’ವನ್ನು ನಿರ್ಮಿಸಲು ಕಾರಣಕರ್ತನಾದನು. ಧೌಲಿಗಿರಿಯಲ್ಲಿ , ಆಕರ್ಷಕವಾದ ಶಾಂತಿಸ್ತೂಪವಿದೆ.
.
– ಹೇಮಮಾಲಾ.ಬಿ
ಇತಿಹಾಸ ಜೀವಂತವಾಗಬೇಕಾದ್ದು ಅದರಿಂದ ಕಲಿಯಬೇಕಾದ್ದು ಈ ಬಗೆಯಲ್ಲೇ .ಆದರೆ ನಾವು ಪಾಠ ಕಲಿಯುವದಿಲ್ಲ. ಇದು ಕಟು ಸತ್ಯ.
Charitre nanna estada subject agittu