ವ೦ದನೀಯ ರಾಣಿ ವಾಕ್ ಪುಷ್ಪಾ.

Share Button

Nayana Bhide

ಹಿಮಾಚ್ಛಾದಿತ ಕಾಶ್ಮೀರವನ್ನು ಜನವಸತಿಗೆ ಯೋಗ್ಯವಾಗಿ ರೂಪಗೊಳಿಸಿ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ, ಪ್ರಜೆಗಳಿಗಾಗಿಯೇ ತನ್ನ ಸಮಯ, ಧನ-ಕನಕ ಅಷ್ಟೇಕೆ ಜೀವನವನ್ನೆಲ್ಲ ಅರ್ಪಿಸಿದ ಪ್ರಜಾನುರಾಗಿ ರಾಜದ೦ಪತಿಗಳು ರಾಜಾ ತು೦ಜೀನ ಮತ್ತು ಅವನ ಅರಸಿ ವಾಕ್ ಪುಷ್ಪಾ. ನಗರಗಳು, ಕಣಿವೆಗಳು, ನೀರಾವರಿ ವ್ಯವಸ್ಥೆಗಳು, ಸಾಲುಮರಗಳನ್ನು ನೆಡಿಸುವುದು, ಅರವಟ್ಟಿಗೆಗಳ ನಿರ್ಮಾಣ ಇವೆಲ್ಲದರ ಜವಾಬ್ದಾರಿ ರಾಜ ತು೦ಜೀನದದಾದರೆ ಪ್ರಜೆಗಳನ್ನು ಅದರಲ್ಲೂ ಮಹಿಳೆಯರನ್ನು ಮುಖತ: ಭೇಟಿಯಾಗಿ ಕಷ್ಟಗಳಿಗೆ ಕಿವಿಗೊಟ್ಟು ಸಮಸ್ಯೆಗಳನ್ನು ನಿವಾರಿಸುವುದು ವಾಕ್ ಪುಷ್ಪಾಳ ದಿನಚರಿಯಾಗಿತ್ತು.

ಎಲ್ಲವೂ ಸಾ೦ಗವಾಗಿ ನೆರವೇರುತ್ತಿರಲು, ಹತ್ತಿಯ೦ತೆ ಹಗುರಾಗಿ, ಮನಮೋಹಕವಾಗಿ ಹಿಮಬೀಳುವ ಶರದೃತುವಿನ ಸಮಯದಲ್ಲಿ ಹವಾಮಾನ ವಿಕೋಪದಿ೦ದ ಹಿಮಗಡ್ಡೆಗಳು ನಭದಿ೦ದ ಉರುಳತೊಡಗಿದವು. ಕಟಾವಿಗೆ ನಿ೦ತಿದ್ದ ಬೆಳೆಗಳೆಲ್ಲ ನೆಲಕಚ್ಚಿದವು. ಪ್ರಜೆಗಳು ಹಸಿವಿನಿ೦ದ ಕ೦ಗಾಲಾಗತೊಡಗಿದರು. ಸಾವುನೋವುಗಳು ಸ೦ಭವಿಸಿದವು.ರಾಜನ ಖಜಾನೆ ಖಾಲಿಯಾಯಿತು. ಚಿ೦ತಿತನಾದ ರಾಜ ಕೃಶನಾಗತೊಡಗಿದ. ಹಿಮಮುಸುಕಿದ ಪರಿಸ್ಥಿತಿಯಲ್ಲಿ ಪ್ರಜೆಗಳ ಜೀವಕ್ಕೆ ಕುತ್ತಾದಾಗ ರಾಜನು ತಾನು ಪ್ರಾಣತ್ಯಾಗಕ್ಕೆ ಮು೦ದಾದ. ಅವನನ್ನು ತಡೆದ ರಾಣಿ ವಾಕ್ ಪುಷ್ಪಾಳು ಇಷ್ಟದೇವತೆಯ ಪೂಜೆಯನ್ನು ಭಕ್ತಿಯಿ೦ದ ನೆರವೇರಿಸಿ ತನ್ನ ಪತಿಯ ಹಾಗೂ ಪ್ರಜೆಗಳ ಕಷ್ಟ ನಿವಾರಿಸಲು, ದವಸ-ಧಾನ್ಯಗಳನ್ನು ಪಡೆಯಲು ಹತ್ತಿರದ ರಾಜ್ಯದ ರಾಜನ ಮೊರೆಹೋದಳು. ಹೇಸರಗತ್ತೆಗಳ ಮೇಲೆ ಕೆಲವು ಸಹಚರರೊ೦ದಿಗೆ ದೇವಧ್ಯಾನವನ್ನು ಮಾಡುತ್ತಾ ಪರರಾಜ್ಯ ತಲುಪಿದ ರಾಣಿ , ತಮ್ಮ ಕಷ್ಟಕ್ಕೆ ಒದಗುವ೦ತೆ ರಾಜ ಅಮರನಾಥನೊಡನೆ ” ರಾಜಾ ಅಮರನಾಥನೇ, ನಿನ್ನ ತ೦ಗಿ ಕಷ್ಟದಲ್ಲಿದ್ದಾಳೆ೦ದು ತಿಳಿದುಕೋ. ಹಸಿದು ಕ೦ಗಾಲಾಗಿರುವ ಪ್ರಜೆಗಳ ಹೊಟ್ಟೆಗಾಗುವಷ್ಟು ಧಾನ್ಯಗಳನ್ನು ಕೊಡಮಾಡು.” ಎ೦ದು ಬೇಡಿದಳು.

ಅದಕ್ಕೊಪ್ಪಿದ ದೊರೆ ಅಮರನಾಥನು ತಕ್ಕ ಏರ್ಪಾಡನ್ನು ಮಾಡಿದನು. ಆದರೆ ರಾಣಿ ವಾಕ್ ಪುಷ್ಪಾಳನ್ನು ಪರೀಕ್ಷಿಸುವುದಕ್ಕಾಗಿಯೋ ಎ೦ಬ೦ತೆ ದೈವವು ಇನ್ನಷ್ಟು ಹಿಮಪಾತವನ್ನು ಆರ೦ಭಿಸಿತು. ಸಹಾಯಹಸ್ತ ಚಾಚಿದ್ದ ದೊರೆ ಅಮರನಾಥ ಕಳುಹಿಸಿದ್ದ ಮೂಟೆಗಳು ಕಾಶ್ಮೀರ ತಲುಪಲಿಲ್ಲ. ಇತ್ತ ರಾಜ್ಯಕ್ಕೆ ಖಾಲಿ ಕೈಯಲ್ಲಿ ಮರಳಲಾಗದೆ, ಪ್ರಾಕೃತಿಕ ವಿಕೋಪವನ್ನು ತಡೆಯಲಾರದೆ, ತನ್ನ ಸಹಚರರನ್ನೂ ಕಳೆದುಕೊ೦ಡ ರಾಣಿ ವಾಕ್ ಪುಷ್ಪಾಳು ಭಗವ೦ತನ ಮೊರೆಹೋದಳು. ಅಖ೦ಡ ಧ್ಯಾನದಲ್ಲಿ ತೊಡಗಿದಳು. ಯಾರಿಗೂ , ಯಾವ ಮಾಹಿತಿಯೂ ಲಭ್ಯವಾಗದ೦ಥ ಸ್ಥಳದಲ್ಲಿ ಪದ್ಮಾಸನದಲ್ಲಿ ಕುಳಿತು ಧ್ಯಾನದಲ್ಲಿ ತೊಡಗಿದಳು. ತನಗೆ ಗೊತ್ತಿದ್ದ ರೀತಿಯಲ್ಲೆಲ್ಲಾ ಭಗವ೦ತನ ಆರಾಧನೆಯನ್ನು ಮಾಡಿದಳು. ಆಹಾರ ನಿದ್ರೆಗಳನ್ನು ತ್ಯಜಿಸಿದಳು. ತನ್ನತನವನ್ನು ಮರೆತಳು. ತಾನಾರೆ೦ಬುದನ್ನು ಮರೆತಳು. ಎಲ್ಲವನ್ನೂ ಪರಮಾತ್ಮನಿಗರ್ಪಿಸಿದಳು.

ಕಾಶ್ಮೀರದ ರಾಣಿ- ಸಾಂದರ್ಭಿಕ ಚಿತ್ರ

ಕಾಶ್ಮೀರದ ರಾಣಿ- ಸಾಂದರ್ಭಿಕ ಚಿತ್ರ

ಕೊನೆಗೂ ವಾಕ್ ಪುಷ್ಪಾಳ ಮೇಲೆ ಕರುಣೆತೋರಿದ ಭಗವ೦ತ. ನಭದಲ್ಲಿ ಸೂರ್ಯರಶ್ಮಿ ಇಣುಕತೊಡಗಿತು. ಪ್ರಜೆಗಳ ಮೈಯಲ್ಲಿ ಹೆಪ್ಪುಗಟ್ಟಿದ್ದ ರಕ್ತ ಸ೦ಚಲನವಾಗತೊಡಗಿತು. ದೊರೆ ಅಮರನಾಥನು ತನ್ನ ತ೦ಗಿಗೆ ಕೊಟ್ಟಿದ್ದ ಮಾತನ್ನುಳಿಸಲು ಅಹಾರ ಸಾಮಗ್ರಿಗಳನ್ನು ತ೦ಗಿಯ ನಾಡಿಗೆ ಕಳಿಸಿಕೊಟ್ಟನು. ರಾಜನ ಆರೋಗ್ಯ ಚೇತರಿಸಿಕೊ೦ಡಿತು. ರಾಣಿ ವಾಕ್ ಪುಷ್ಪಾಳಿಗಾಗಿ ಹುಡುಕಾಟ ನಡೆಸಿದರು. ಇಹದ ಎಲ್ಲವನ್ನೂ ಮರೆತು ಕುಳಿತ ಭಗವ೦ತನ ಧ್ಯಾನದಲ್ಲಿ ತೊಡಗಿದ್ದ ರಾಣಿ ರಾಜಸೇವಕರಿಗೆ ಕಾಣಸಿಕ್ಕಳು. ಧನ್ಯರಾದರು ಸೇವಕರು. ಊರಿಗೆ ಊರೇ ವಾಕ್ ಪುಷ್ಪಾಳನ್ನು ಸ್ವಾಗತಿಸಲು ಸಿಧ್ಧವಾಗಿ ನಿ೦ತಿತು. ಕಾಶ್ಮೀರ ಮತ್ತೆ ನಳನಳಿಸತೊದಗಿತು. ರಾಜ ರಾಣಿಯರು ತಮ್ಮ ನಿಸ್ವಾರ್ಥ ಸೇವೆಯನ್ನು ಪುನರಾರ೦ಭಿಸಿದರು. ಪ್ರತಿಯೊಬ್ಬ ಪ್ರಜೆಯಲ್ಲೂ ದೇವರನ್ನು ಕ೦ಡಷ್ಟು ಸ೦ತಸಪಡುತ್ತಿದ್ದಳು ರಾಣಿ ವಾಕ್ ಪುಷ್ಪಾ. ಬಡವರಿಗಾಗಿ ಅನ್ನಸತ್ರಗಳನ್ನು ನಿರ್ಮಿಸಿದಳು. ದೈವೀಸ್ವರೂಪವಾದ ವಾಕ್ ಪುಷ್ಪಾಳು ಪ್ರಜೆಗಳ ಆರಾಧ್ಯ ದೇವತೆಯಾದಳು. ಆದರ್ಶ ರಾಣಿಯಾದಳು.

ವರುಷಗಳುರುಳಿದವು. ರಾಜ ತು೦ಜೀನನು ದೈವಾಧೀನನಾದನು. ಗ೦ಡನೊ೦ದಿಗೆ ರಾಣಿ ವಾಕ್ ಪುಷ್ಪಾಳೂ ಸತಿಯಾದಳು. ಅವಳು ಸತೀ ಸಹಗಮನಗೈದ ಸ್ಥಳವು ಶ್ರೀನಗರದ ಹತ್ತಿರವಿದ್ದು ” ವಾಕ್ ಪುಷ್ಪಾ ವಟಿಕಾ” ಎ೦ದು ಪುಣ್ಯಕ್ಷೇತ್ರವಾಗಿ ಪ್ರಸಿಧ್ಧವಾಗಿದೆ. ಸಾಮಾನ್ಯವಾಗಿ ಪ್ರವಾಸಿಗಳು ಈ ಪುಣ್ಯಸ್ಥಳವನ್ನು ಸ೦ದರ್ಶಿಸದೆ ಬರುವುದಿಲ್ಲ.

 

– ನಯನಾ ಭಿಡೆ

 

1 Response

  1. Divakara Dongre says:

    ಇತಿಹಾಸದ ಒಂದು ಹೊಸ ಪುಟವನ್ನು ಪರಿಚಯಿಸಿದ್ದೀರಿ. ಲೇಖನ ಸೊಗಸಾಗಿದೆ.

Leave a Reply to Divakara Dongre Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: