ಕೃಷಿ ಮಹಿಳೆಯೂ ಸಾಹಿತ್ಯದ ಸಾಂಗತ್ಯವೂ
ಮನುಷ್ಯನ ಬದುಕಿಗೆ ಪೂರಕವಾದದ್ದು ಕೃಷಿ ಮೂಲ ಎಂಬುದನ್ನು ನಾವು ಯಾರೂ ಅಲ್ಲಗಳೆಯುವ ಹಾಗಿಲ್ಲ.ಆದರೂ ಕೃಷಿ ಎಂದರೆ ಎಲ್ಲರಿಗೂ ನಗಣ್ಯವೇ. ಎಲ್ಲರೂ ಸಾಪ್ಟ್‌ವೇರ್,ಡಾಕ್ಟರ್..ಹೀಗೇ ಉನ್ನತ ಉದ್ಯೋಗಗಳ ಬೆನ್ನು ಹತ್ತಿ, ಆ ಪದವಿ ಪಡೆಯಲೋಸುಗ ಜೀವನವನ್ನಿಡೀ ಅದಕ್ಕೆ ಮುಡಿಪಾಗಿಟ್ಟುತೇಯುತ್ತಿರುವಾಗ,ಎಷ್ಟುದುಡಿದರೂ ಹೊಟ್ಟೆಗಿದ್ದರೆ ಬಟ್ಟೆಗಿಲ್ಲ.ಬಟ್ಟೆಗಿದ್ದರೆ ಹೊಟ್ಟೆಗಿಲ್ಲದಂತಹ ಪರಿಸ್ಥಿತಿಯಲ್ಲಿ ಯಾರೂತಮ್ಮ ಮಕ್ಕಳನ್ನು ಮಣ್ಣಿನ ಮಗನನ್ನಾಗಿ ಮಾಡುವುದಕ್ಕೆ ಆಸೆ ಪಡುವುದಿಲ್ಲ. ಕೃಷಿಕರೆಂದರೆ ಎಲ್ಲರೂ ಅಸಡ್ಡೆಯಿಂದ ನೋಡುವಾಗ, ಇನ್ನು ಕೃಷಿಕ ಮಹಿಳೆಯ ಪಾಡು ಹೇಗಿರಬೇಡ?.ದಿನದ ಅಷ್ಟೂ ಹೊತ್ತು ದುಡಿಯುವುದಷ್ಟೇ ಅವಳ ಕೆಲಸ.ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಂತಹ ಪರಿಸ್ಥಿತಿ.ಅದೇ ಅಡುಗೆ ಮನೆ, ಬೆಂಕಿ,ಹೊಗೆ,ರಜೆಯಿಲ್ಲದ ಅನ್ನಸಾರುಗಳ ಏಕತಾನತೆಯ ಮದ್ಯೆ ಕೃಷಿಕ ಮಹಿಳೆಗೊಂದು ಅಸ್ಥಿತ್ವ ಇರಬಹುದಾ..? ಅಂತ ಅಂದುಕೊಳ್ಳಲೂ ಸಾಧ್ಯವಿಲ್ಲ. ಒಂದಷ್ಟು ಬೇಸರ ನೀಗಿಕೊಳ್ಳಲು ಪ್ರವಾಸ,ಪಿಕ್ನಿಕ್,ಚಾರಣ ಅಂತ ಎಲ್ಲರಂತೆ ಮನಸ್ಸಿಗೆ ಮುದ ತಂದುಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. ಕೃಷಿಕ ಮಹಿಳೆಯ ಬಿಡುಗಡೆ ಎಷ್ಟೆಂದರೆ ಒಂದು ಬೆಳಕು ಹರಿದು ಸರಿ ಸುಮಾರು ನಡು ಮಧ್ಯಾಹ್ನದ ಹೊತ್ತಿನಿಂದ ಸಂಜೆ ತನಕದ ಅವಧಿ ಅಷ್ಟೆ. ಲಗುಬಗೆಯಿಂದ ಎಲ್ಲಾ ಕೆಲಸ ಮಾಡಿಟ್ಟು ಹೋದರೆ ಆಕೆ ಸಂಜೆ ಹೊತ್ತು ಕಂತುವ ಮುಂದೆ ಮನೆ ಸೇರಲೇ ಬೇಕು. ಯಾಕೆಂದರೆ ಹಟ್ಟಿಯಲ್ಲಿ ಹಸುಗಳು ಅವಳ ದಾರಿ ಕಾಯುತ್ತಲೇ ಇರುತ್ತವೆ. ಹಾಗಾಗಿ ಹೆಚ್ಚಿನ ಹಳ್ಳಿಯ ಹೆಣ್ಣುಮಕ್ಕಳನ್ನು ನೀವು ಮಾತಿಗೆಳೆದು ನೋಡಿ. ನೀವ್ಯಾಕೆ ಅಲ್ಲಿಗೆ ಬರಲಿಲ್ಲ ಅಂತ ಒಂದು ಪ್ರಶ್ನೆಎಸೆದರೂ ಸಾಕು. ಅವರು ಕೊಡುವ ಮೊದಲ ಉತ್ತರ,ಹಟ್ಟಿಯಲ್ಲಿ ಹಾಲು ಕರೆಯುವ ಹಸು ಇದೆ. ಅದಕ್ಕೆ ಮೇವು,ಹಟ್ಟಿ ಕೆಲಸ, ದನದ ಚಾಕರಿ ಮಾಡಿ ಆಗುವಾಗ ಎಲ್ಲಿಗೂ ಬರಲಿಕ್ಕೆ ಪುರುಸೊತ್ತೆ ಆಗುವುದಿಲ್ಲ ಅಂತ .ಈ ಸ್ಥಿತಿಯನ್ನು ಅನುಭವಿಸಿ ಗೊತ್ತಿಲ್ಲದವರಿಗೆ ಇದೊಂದು ತಮಾಷೆಯ ಸಂಗತಿಯಾಗಿ,ಇವಳದ್ದು ಇದೊಂದು ಮಾಮೂಲು ಉತ್ತರ ಅಂತ ಹಗುರವಾಗಿ ಪರಿಗಣಿಸಲೂ ಬಹುದು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಕ್ಕೆ ಪುರುಸೊತ್ತು ಇಲ್ಲದಷ್ಟು ಅವಳ ಬದುಕು ಅನಿವಾರ್ಯವೆಂಬಂತೆ ಸಾಗುತ್ತಲೇ ಇರುತ್ತದೆ.
ಮದುವೆಯಾಗುವ ಮುಂಚೆ ಕಾಲೇಜು ಓದುವಾಗ ಅವಳೆಷ್ಟು ಬುದ್ಧಿವಂತಳಾಗಿದ್ದಳು ಎಂಬುದನ್ನುಒರೆಗೆ ಹಚ್ಚಲು ಯಾರಿಗೂ ತಾಳ್ಮೆ ಇಲ್ಲ. ಮಾತಿನ ಮಲ್ಲಿ, ಉತ್ಸಾಹದ ಚಿನಕುರುಳಿ,ಸಂಗೀತ ನೃತ್ಯ ಪ್ರವೀಣೆ, ಕತೆಕವಿತೆ ಎಲ್ಲದರಲ್ಲೂ ಕಾಣಿಸಿಕೊಳ್ಳುತ್ತಿದ್ದಾಕೆ ಮದುವೆಯಾಗಿ ಹಳ್ಳಿ ಸೇರಿ ಮೂಲೆಗುಂಪಾಗಿ ಅಸ್ಥಿತ್ವವೇ ಇಲ್ಲದಂತಾಗಿ ಬದುಕುವ ಸಂಗತಿಯನ್ನು ನಾವ್ಯಾರೂ ಅಲ್ಲಗಳೆಯುವ ಹಾಗಿಲ್ಲ. ಎಷ್ಟೊಂದು ಪ್ರತಿಭೆಗಳು ಹೀಗೆ ಕಮರಿ ಹೋಗುತ್ತವೆ ಎಂಬುದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ನಮ್ಮ ನಗರದ ಹೆಚ್ಚಿನ ಹೆಣ್ಣು ಮಕ್ಕಳು ಯಾವುದಾದರೂ ಸಭೆ, ಸಮಾರಂಭಗಳಿಗೆ ಹೋಗೋದಿಕ್ಕೆ ಮುಂಚೆ ಏನೆಲ್ಲಾ ಪೂರ್ವತಯಾರಿ ನಡೆಸುತ್ತಾರೆ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಹೊಸಡ್ರೆಸ್, ಅದಕ್ಕೆ ಮ್ಯಾಚಿಂಗ್ ಆಭರಣಗಳಿಗೆ ತಡಕಾಡುವುದು ಬೇಕಾ, ಬ್ಯೂಟಿ ಪಾರ್ಲರ್ ಕನ್ನಡಿಯೊಳಗೊಮ್ಮೆ ಇಣುಕಿ ಮತ್ತಷ್ಟು ಸುಂದರವಾಗಿ ಕಾಣುವುದು ಬೇಕಾ..ಇನ್ನು ವಗೈರೆ ವಗೈರೆ ಪಟ್ಟಿ ಬೆಳೆಯುತ್ತಲೇ ಹೊಗುತ್ತದೆ. ನಮ್ಮ ಕೃಷಿಕ ಹೆಣ್ಣು ಮಕ್ಕಳು ಅನಿವಾರ್ಯ ಕಾರಣಗಳಿಗೆ ಮನೆಯಿಂದ ಹೊರಗಡಿಯಿಡುವ ಸಂಧರ್ಭ ಬಂದಾಗ, ತರಾತುರಿಯಲ್ಲಿ ಅಡುಗೆ , ಮನೆ ಕೆಲಸ ಮುಗಿಸಿ, ಸೆಗಣಿ ಗಂಜಳ ತೆಗೆದು ಹಾಲು ಕರೆದು ಲಗುಬಗೆಯಲ್ಲಿ ಸೀರೆ ಸುತ್ತಿ ಪೌಡರ್ ಪೂಸಿ ತಯಾರಾಗಿ ಹೊರಟರೂ, ಅಕ್ಕಪಕ್ಕದವರ ಮೈಯಿಂದ ಸುಗಂಧದ್ರವ್ಯ ಘಂ! ಅಂತ ಹರಡಿಕೊಂಡರೂ ಇವಳು ಎಷ್ಟೇ ಸೋಪು ಹಾಕಿ ತಿಕ್ಕಿ ತೊಳೆದರೂ ದನದ ಹಟ್ಟಿಯ ಗಂಧ ಅವಳ ಮೈಯನ್ನು ಬಿಟ್ಟು ಹೋಗುವುದೇ ಇಲ್ಲ.
ಇನ್ನು ತನ್ನೊಳಗಿನ ಇರುವ ಪ್ರತಿಭೆಗೆ ನೀರೆರೆದು ಪೋಷಿಸುವ ಅಂದರೆ, ಕೆಲವು ಹೆಣ್ಣು ಮಕ್ಕಳ ಹೊರತಾಗಿ ಅವಳಿಗೆ ಯಾವತ್ತೂ ಸಮಯ, ಸಂಧರ್ಭ, ಅವಕಾಶಗಳು ಎದುರಾಗುವುದೇ ಇಲ್ಲ.ಇನ್ನು ತಾನೇ ಸಮಯ,ಸಂದರ್ಭ ಸೃಷ್ಠಿಸಿಕೊಂಡು ಹೊರಗಡಿಯಿಟ್ಟರೆ ನೂರೆಂಟು ವಿಘ್ನಗಳು, ಕುಹಕಗಳು. ಇವುಗಳೆಲ್ಲವನ್ನೂ ಮೀರಿ ಏನಾದರೂ ಸಾಧಿಸಿದಾಗ ಮಾತ್ರ ಅವಳಿಗೆ ಮನ್ನಣೆ. ಇಲ್ಲದಿದ್ದರೆ ತನ್ನ ಖುಷಿಯ ಮೇಲೆ ಕುಹಕದ ಕಲ್ಲು ಬೀರುವವರೂ ಕಡಿಮೆಯಿಲ್ಲ. ಹಾಗಾಗಿ ಕೃಷಿ ಮಹಿಳೆಯರ ಹಾಡು ಪಾಡುಗಳೆಲ್ಲಾ ಅವಳ ಸುತ್ತಲೇ ಗಿರಕಿ ಹೊಡೆಯುತ್ತಲೆ ಇರುತ್ತವೆಯಷ್ಟೆ.
ನಾನೊಬ್ಬಳು ಗೃಹಿಣಿ ಮತ್ತು ಕೃಷಿಕ ಮಹಿಳೆಯಾಗಿದ್ದು, ನಾನು ನನ್ನನ್ನು ನಿರಾಳ ಮಾಡಿಕೊಳ್ಳಲು ಬಿಡುಗಡೆಯ ಮಾಧ್ಯಮವನ್ನಾಗಿ ಬಳಸಿಕೊಂಡದ್ದು ಬರಹವನ್ನು. ನನ್ನಖುಷಿಗೋಸ್ಕರ, ನನ್ನ ಸಮಾಧಾನಕ್ಕೋಸ್ಕರ ಬರೆಯುತ್ತಿದ್ದ ಬರಹಗಳು ಇವತ್ತು ನನಗೊಂದು ಅಸ್ಥಿತ್ವನ್ನ ಮತ್ತು ಅಸ್ಮಿತೆಯನ್ನ ತಂದುಕೊಟ್ಟಿದೆಯೆಂದರೆ ನನಗೆ ತುಂಬಾ ಖುಷಿಯೆನ್ನಿಸುತ್ತದೆ. ಮೊದ ಮೊದಲಿಗೆ ಏನು ಬರೆಯೋದಪ್ಪಾ ಅಂತ ಅನ್ನಿಸುತ್ತಿತ್ತು. ಆಮೇಲೆ ಬರೆಯುತ್ತಾ ಹೋದ ಹಾಗೆ ಎಷ್ಟೊಂದು ವಸ್ತುಗಳು ಬರಹಗಳಿಗೆ?.ಮಗುವಿನ ನಗುವಿನಲ್ಲೊಂದು ಕವಿತೆ, ಮಗುವಿನ ಅಳುವಿನಲ್ಲೊಂದು ಕವಿತೆ, ಸೋಪಿನ ಬುರುಗಿನೊಳಗೊಂದು ಕವಿತೆ, ಕುದಿಯುವ ಅನ್ನದ ಸದ್ದಿನೊಳಗೊಂದು ಕವಿತೆ…ಹೀಗೇ.ಹಾಗೆ ನೋಡಿದರೆ ಕವಿತೆಗೆ ದಕ್ಕದವು ಯಾವುದಿದೆ ಈಗ?ಬದುಕಿನ ಎಲ್ಲಾ ಸೂಕ್ಷ್ಮ ಸಂಗತಿಗಳೂ ಕವಿತೆಗೆ ವಸ್ತುವೇ!. ಈಗ ಬದುಕೇ ಒಂದು ಸುಂದರ ಕವಿತೆ.
ಈಗ ಎಲ್ಲಾ ಕೆಲಸಗಳ ನಡುವೆಯೂ ಬರವಣಿಗೆ ಎಂಬುದು ಕೂಡ ಒಂದು ಅನಿವಾರ್ಯ ಕೆಲಸವೆಂಬಂತೆ ನಡೆದು ಹೋಗುತ್ತಿದೆ. ಕೃಷಿಕ ಮಹಿಳೆಗೆ ಇನ್ನಿತರ ಸಂಗೀತ,ನೃತ್ಯ, ಕಲೆಯಂತಹ ಆಸಕ್ತಿಯ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದಕ್ಕೆ ಸಾಕಷ್ಟು ಅಡೆತಡೆಗಳಿವೆ. ಇತರೇ ಕ್ಷೇತ್ರಗಳಲ್ಲಿ ಪರಿಣಿತಿಯನ್ನು ಸಾಧಿಸಬೇಕೆಂದರೆ, ಅಪ್ಪಟ ಪ್ರತಿಭೆ,ಸಮಯ, ಸಂಧರ್ಭ,ಹಣ,ಅವಕಾಶ ಎಲ್ಲವೂ ಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಒಳ್ಳೆಯ ಗುರುವಿನ ಮಾರ್ಗದರ್ಶನ ಬೇಕಾಗುತ್ತದೆ. ಆದರೆ ಸಾಹಿತ್ಯ ಹಾಗಲ್ಲ. ಗುರುವಿಲ್ಲದೆಯೇ ಕಲಿಯಬಹುದಾದ ವಿದ್ಯೆ ಅಂದರೆ ಅದು ಸಾಹಿತ್ಯ ಮಾತ್ರ.
ಒಬ್ಬ ಮಹಿಳೆ ತನ್ನ ದೈನಂದಿನ ಬದುಕಿನಲ್ಲಿ ಎಷ್ಟೆಲ್ಲ ಚಾಕರಿಗಳನ್ನು ಏಕ ಕಾಲದಲ್ಲಿ ಮಾಡಬಲ್ಲಳು.ಮಗುವಿಗೆ ಸ್ನಾನ ಮಾಡಿಸಿ, ಉಣಿಸಿ, ಜೋಜೋ ಹಾಡಿ ಮಲಗಿಸುವಲ್ಲಿಂದ ಹಿಡಿದು..ಅವಳು ದಿಂಬಿಗೆ ಒರಗುವವರೆಗೂ ಅವಳ ಕೆಲಸವೇ ಒಂದು ಕಾವ್ಯ. ಎಲ್ಲಾ ಬಿಡಿ ಬಿಡಿ ಕವಿತೆ ಸಾಲುಗಳು ಕೂಡಿ ಮಹಾ ಕಾವ್ಯವಾಗುವಂತಹ ಬದುಕು ಮಹಿಳೆಯದ್ದು.
ಅದರಲ್ಲೂ ಕೃಷಿಕ ಮಹಿಳೆಗೆ,ತನ್ನ ಸುತ್ತುಮುತ್ತಲಿನ ಹಸಿರು, ಕಪಟವೇ ಇಲ್ಲದೆ ಹಾದು ಹೋಗುವ ಶುದ್ಧ ಗಾಳಿ, ನಾದಗೈಯುವ ಝುಳು ಝುಳು ತಂಪಿನ ನೀರ ಸೆಲೆ, ಚಿಟ್ಟೆ, ಹೂವು, ದುಂಬಿ,ಪ್ರಾಣಿ,ಪಕ್ಷಿಗಳ ಸಾಂಗತ್ಯ,ಗದ್ದಲವಿಲ್ಲದ ಬದುಕು, ಜೊತೆಗೆ ಸಣ್ಣಗೆ ಮೀಟಿ ಹೋಗುವ ಯಾವುದೋ ಒಂದು ಅತೃಪ್ತಿಯಗೆರೆ..ಇಷ್ಟೇ ಸಾಕು.ಅವಳ ಬರಹಕ್ಕೆಅಗಾಧ ಶಕ್ತಿಯನ್ನುಕರುಣಿಸಬಲ್ಲವು. ಹಾಗಾಗಿ ಹಳ್ಳಿಯ ರೈತ ಮಹಿಳೆ ಒಂದಷ್ಟು ಓದಿನ ಸಾಂಗತ್ಯದಲ್ಲಿಇದ್ದರೆ, ಖಂಡಿತವಾಗಿಯೂ ಆಕೆ ಬದುಕಿದಂತೆ ಬರೆಯಬಲ್ಲಳು. ತನ್ನ ಬದುಕಿನ ಸೀಮಿತ ಚೌಕಟ್ಟಿನೊಳಗೆ ಹೊಸ ಬೆಳಕಿನ ಕಿಂಡಿಯನ್ನು ಕೊರೆದುಕೊಂಡು ಮಿತಿಯಲ್ಲಿದ್ದುಕೊಂಡೇ ಮೀರಿ ಬೆಳೆಯೋದಿಕ್ಕೆ ಶಕ್ತಳಾಗಬಲ್ಲಳು.
– ಸ್ಮಿತಾ ಅಮೃರಾಜ್.ಸಂಪಾಜೆ
ನೀವು ನನ್ನ ಗೆಳತಿಯಾದದ್ದು ನನಗೆ ಹೆಚ್ಚು ಖುಷಿ ಸ್ಮಿತಾ
ಸ್ಮಿತಾ ಮಾತ್ರವಲ್ಲ ನೀವೂ ‘ಸ್ಫೂರ್ತಿ ‘ಕೂಡ..