‘ಪುರಿ’ಯಲ್ಲಿರುವ ಜಗನ್ನಾಥ ಮಂದಿರ..

Share Button

ಭಾರತದ ಪೂರ್ವದಲ್ಲಿರುವ ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರದಿಂದ 60 ಕಿ.ಮೀ ದೂರದಲ್ಲಿ ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿರುವ ಪುಟ್ಟ ನಗರ ‘ಪುರಿ’ . ಇದು ಅತ್ಯಂತ ಪ್ರಾಚೀನ ನಗರಗಳ ಪೈಕಿ ಒಂದು. ಇಲ್ಲಿ ವೈಷ್ಣವರ ಪ್ರಸಿದ್ಧ ಜಗನ್ನಾಥ ಮಂದಿರವಿದೆ. ಆದಿ ಶಂಕರಾಚಾರ್ಯರು ಸ್ಥಾಪಿಸಿದ ಚತುರ್ಧಾಮಗಳಲ್ಲಿ ಪುರಿಯೂ ಒಂದು.

ಹನ್ನೊಂದನೆ ಶತಮಾನದ ಕೊನೆಯಲ್ಲಿ ಕಟ್ಟಲಾದ ಜಗನ್ನಾಥ ದೇವಸ್ಥಾನದಿಂದಾಗಿ ಪುರಿಯು ‘ಜಗನ್ನಾಥನ ಧಾಮ’ವೆಂದು ಪ್ರಸಿದ್ದವಾಗಿದೆ. ಜಗನ್ನಾಥನು ವಿಷ್ಣುವಿನ ಒಂದು ರೂಪ. ಸುಭದ್ರೆಯು ತನ್ನ ಅಣ್ಣಂದಿರಾದ ಶ್ರೀ ಕೃಷ್ಣ ಮತ್ತು ಬಲರಾಮರೊಂದಿಗೆ ಪೂಜಿಸಲ್ಪಡುವ ಏಕೈಕ ಮಂದಿರವಿದು. ಇಲ್ಲಿನ ಮುಖ್ಯ ದೇವಾಲಯವನ್ನು ರಾಜ ಚೋಡ ಗಂಗದೇವ ಮತ್ತು ರಾಜ ಅನಂಗ ಭೀಮದೇವ ಕಟ್ಟಿಸಿದರು.

ಹೆಚ್ಚಿನ ಹಿಂದೂ ದೇವಾಲಯಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಅಥವಾ ಲೋಹದಿಂದ ಎರಕ ಹೊಯ್ದ ಮೂರ್ತಿಗಳು ಪೂಜಿಸಲ್ಪಡುತ್ತವೆ. ಆದರೆ ಪುರಿಯಲ್ಲಿ ಜಗನ್ನಾಥ, ಸುಭದ್ರೆ ಮತ್ತು ಬಲಭದ್ರರ ಮೂರ್ತಿಗಳನ್ನು ವಿಶಿಷ್ಟ ಜಾತಿಯ ಮರದಿಂದ ಕೆತ್ತುತ್ತಾರೆ. ಈ ಮೂರ್ತಿಗಳನ್ನು ಪ್ರತಿ 12 ಅಥವಾ 19 ವರ್ಷಕ್ಕೊಮ್ಮೆ ಬದಲಾಯಿಸುತ್ತಾರೆ. ಪುರಿ ದೇವಸ್ಥಾನದ ಬಗ್ಗೆ ಪ್ರಚಲಿತವಿರುವ ದಂತಕಥೆ ಹೀಗಿದೆ:

ಸತ್ಯಯುಗದ ಕಾಲದಲ್ಲಿ, ಅವಂತಿ ರಾಜ್ಯದಲ್ಲಿ ಚಂದ್ರವಂಶದ ದೊರೆಯಾದ ಇಂದ್ರದ್ಯುಮ್ನನು ರಾಜ್ಯವಾಳುತ್ತಿದ್ದನು. ಒಬ್ಬ ಯಾತ್ರಾರ್ಥಿಯು ಆತನನ್ನು ಭೇಟಿಯಾಗಿ, ಒಡ್ಡರ ದೇಶದಲ್ಲಿ ಬುಡಕಟ್ಟು ಅರಸನಾದ ವಿಶ್ವವಸುವು, ನೀಲಿ ಬಣ್ಣದಿಂದ ಶೋಭಿಸುವ ‘ನೀಲಮಾಧವ’ನನ್ನು ಪೂಜಿಸುತ್ತಾನೆಂದು ತಿಳಿಸಿದನು. ವಿಷ್ಣುವಿನ ಭಕ್ತನಾಗಿದ್ದ ಇಂದ್ರದ್ಯುಮ್ನನು ತಾನೂ ಆ ನೀಲಮಾಧವನನ್ನು ಅರ್ಚಿಸಬೇಕೆಂದು ಸಂಕಲ್ಪ ತೊಟ್ಟನು. ವಿಶ್ವವಸುವು ಪೂಜಿಸುತ್ತಿದ್ದ ನೀಲಮಾಧವ ವಿಗ್ರಹವನ್ನು ಪಡೆಯಬೇಕೆನ್ನುವ ಹಂಬಲದಿಂದ ವಿದ್ಯಾಪತಿ ಎನ್ನುವ ಬ್ರಾಹ್ಮಣನನ್ನು ಕಳುಹಿಸಿದ. ಆ ವಿದ್ಯಾಪತಿಯು ದಟ್ಟಾರಣ್ಯದಲ್ಲಿ ನೀಲಮಾಧವನ ವಿಗ್ರಹವನ್ನು ಹುಡುಕುತ್ತಾ ಬರುವಾಗ ವಿಶ್ವವಸುವಿನ ಪುತ್ರಿಯಾದ ಲಲಿತೆಯನ್ನು ಕಂಡು ಮೋಹಿಸಿ ಅವಳನ್ನು ವರಿಸಿದನು. ಲಲಿತೆಯ ಮಾತಿಗೆ ಕಟ್ಟುಬಿದ್ದ ವಿಶ್ವವಸುವು ತನ್ನ ಅಳಿಯನ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಿ ನೀಲಮಾಧವನಿರುವ ಸ್ಥಳಕ್ಕೆ ಕರೆದೊಯ್ದನು. ಜಾಣನಾಗಿದ್ದ ವಿದ್ಯಾಪತಿಯು ಸಾಸಿವೆ ಬೀಜಗಳನ್ನು ದಾರಿಯುದ್ದಕ್ಕೂ ಚೆಲ್ಲಿದ್ದನು. ಕೆಲದಿನಗಳ ಬಳಿಕ ಚಿಗುರಿದ ಸಾಸಿವೆ ಗಿಡಗಳ ಜಾಡನ್ನು ಹಿಡಿದು ವಿದ್ಯಾಪತಿ ಮತ್ತು ಇಂದ್ರದ್ಯುಮ್ನನು ವಿಗ್ರಹವಿರುವ ಸ್ಥಳಕ್ಕೆ ಬರಲು ಹವಣಿಸಿದಾಗ, ಅಲ್ಲಿದ್ದ ವಿಗ್ರಹವೇ ಕಣ್ಮರೆಯಾಗಿ, ಸಮುದ್ರದ ಮರಳು ಆವರಿಸಿತ್ತು. ವಿಗ್ರಹವು ನಾಪತ್ತೆಯಾಗಿದ್ದರಿಂದಾಗಿ ಬೇಸರಗೊಂಡು ಸಾಯಲು ಹೊರಟ ಇಂದ್ರದ್ಯುಮ್ನನಿಗೆ ಅಶರೀರವಾಣಿಯೊಂದು “ ಇನ್ನು ಮುಂದೆ ನಾನು ನೀಲಮಾಧವನಾಗಿ ಕಾಣಸಿಗಲಾರೆ, ಅಶ್ವಮೇಧ ಯಾಗವನ್ನು ಮಾಡಿ ನನ್ನನ್ನು ಪೂಜಿಸು, ಸಮುದ್ರದಲ್ಲಿ ಮರದ ದಿಮ್ಮಿಯೊಂದು ತೇಲಿ ಬರಲಿದೆ, ಅದರಿಂದ ಜಗನ್ನಾಥ , ಬಲರಾಮ, ಸುಭದ್ರೆ ಮತ್ತು ಚಕ್ರ ಹೀಗೆ ನಾಲ್ಕು ಮೂರ್ತಿಗಳನ್ನು ನಿರ್ಮಿಸಿ ಪೂಜಿಸು” ಎಂದು ಆದೇಶಿಸಿತು.

ಅದರಂತೆ ಸಮುದ್ರದ ಬಳಿ ಹೋದ ಇಂದ್ರದ್ಯುಮ್ನನಿಗೆ ಮರದ ದಿಮ್ಮಿ ಕಾಣಿಸಿತು. ಆಗ ದೇವಶಿಲ್ಪಿ ವಿಶ್ವಕರ್ಮನು ಬಡಗಿಯ ರೂಪದಲ್ಲಿ ಬಂದು ತಾನೇ ಆ ವಿಗ್ರಹಗಳನ್ನು ನಿರ್ಮಾಣ ಮಾಡಲು ಆರಂಭಿಸಿದನು. ವಿಶ್ವಕರ್ಮನು ವಿಗ್ರಹಗಳ ನಿರ್ಮಾಣ ಕಾರ್ಯ ಸಂಪೂರ್ಣವಾದ ಮೇಲೆ ತಾನೇ ಕೊಠಡಿಯಿಂದ ಹೊರಬರುವೆ, ಅಲ್ಲಿಯ ವರೆಗೆ ತನ್ನ ಕೆಲಸವನ್ನು ಯಾರೂ ಗಮನಿಸಬಾರದು ಎಂದು ಮೊದಲಾಗಿಯೇ ಸೂಚಿಸಿದ್ದನು. ಇದಾಗಿ ಕೆಲವು ದಿನಗಳಾದರೂ ಕೆತ್ತನೆಯ ಕೆಲಸದ ಸದ್ದು ಕೇಳಿಸದ ಕಾರಣ ಆತಂಕಗೊಂಡ ಇಂದ್ರದ್ಯುಮ್ನ ಮತ್ತು ರಾಣಿ ಗುಂಡಿಚಾ ವಿಶ್ವಕರ್ಮನು ಕೆಲಸ ಮಾಡುತ್ತಿದ್ದ ಕೊಠಡಿಯ ಬಾಗಿಲನ್ನು ತೆರೆಸಿದರು. ಕೊಟ್ಟ ಮಾತಿಗೆ ತಪ್ಪಿದ ರಾಜನ ನಡೆಯಿಂದ ಕುಪಿತನಾದ ವಿಶ್ವಕರ್ಮನು ಅಪೂರ್ಣಗೊಂಡಿದ್ದ ವಿಗ್ರಹಗಳನ್ನು ಅಲ್ಲಿಯೇ ಬಿಟ್ಟು ಅದೃಶ್ಯನಾದನು. ಆ ಅಪೂರ್ಣ ವಿಗ್ರಹಗಳನ್ನೇ ಪ್ರತಿಷ್ಠೆ ಮಾಡುವಂತೆ ರಾಜನಿಗೆ ದೈವದ ಅಪ್ಪಣೆಯಾಯಿತು, ಹಾಗಾಗಿ ಅಪೂರ್ಣ ವಿಗ್ರಹಗಳನ್ನೇ ಪೂಜಿಸುವ ಪದ್ಧತಿ ಜಾರಿಗೆ ಬಂತು. ಅಂದಿನಿಂದ ಇಂದಿನವರೆಗೂ ಜಗನ್ನಾಥ, ಬಲಭದ್ರ, ಸುಭದ್ರೆಯರು ಪೂರ್ಣವಾದ ಕೈಗಳಿಲ್ಲದ ವಿಗ್ರ್ಗಹಗಳಾಗಿ ಆರಾಧಿಸಲ್ಪಡುತ್ತಾರೆ. ರಥೋತ್ಸವವ ಸಂದರ್ಭದಲ್ಲಿ ಬೆಳ್ಳಿಯ ಕೈಗಳನ್ನು ಜೋಡಿಸಲಾಗುತ್ತದೆ.

ಪ್ರತಿ 12 ಅಥವಾ 19 ನೆ ವರುಷಕ್ಕೊಮ್ಮೆ ಬರುವ ಪುರಿಯಲ್ಲಿ ‘ನಬಕಳೇಬರ’ ಎಂಬ ಸಂಪ್ರದಾಯಕ್ಕನುಗುಣವಾಗಿ , ಜಗನ್ನಾಥ, ಸುಭದ್ರೆ, ಬಲಭದ್ರ ಮತ್ತು ಸುದರ್ಶನ ಚಕ್ರಗಳ ಹೊಸ ವಿಗ್ರಹಗಳನ್ನು ಕೆತ್ತುವ ಕೆಲಸಕ್ಕೆ ಚಾಲನೆ ಕೊಡಲಾಗುತ್ತದೆ. ಒಡಿಯಾ ಭಾಷೆಯಲ್ಲಿ ನಬ ಎಂದರೆ ‘ಹೊಸ’, ಕಳೇಬರ ಎಂದರೆ ‘ಶರೀರ’ ಎಂಬ ಅರ್ಥ. ಯಾವ ವರ್ಷದಲ್ಲಿ ಆಷಾಢ ಮಾಸದಲ್ಲಿ ಅಧಿಕಮಾಸವಾಗಿ ಬರುತ್ತದೋ ಅಥವಾ ಯಾವ ಆಷಾಢ ಮಾಸದಲ್ಲಿ ಒಂದೇ ತಿಂಗಳಿನಲ್ಲಿ ಎರಡು ಹುಣ್ಣಿಮೆಗಳು ಬರುತ್ತವೋ ಆ ವರ್ಷದಲ್ಲಿ ಹೊಸ ವಿಗ್ರಹಗಳನ್ನು ನಿರ್ಮಿಸುವ ಕಾರ್ಯವನ್ನು ಆರಂಭಿಸುತ್ತಾರೆ. ಇದಕ್ಕಾಗಿ, ‘ದಾರು’ ಎಂಬ ವಿಶಿಷ್ಟ ಜಾತಿಯ ಬೇವಿನ ಮರವನ್ನು ಗುರುತಿಸುತ್ತಾರೆ. ಪ್ರತಿಯೊಂದು ವಿಗ್ರಹದ ರಚನೆಗೆ ಗುರುತಿಸಲಾಗುವ ದಾರು ಮರಕ್ಕೆ ವಿಶಿಷ್ಟ ಆಯ್ಕಾ ವಿಧಾನಗಳಿವೆ. ಮರದ ಬಣ್ಣ, ಮರದಲ್ಲಿರುವ ರಚನೆ, ಮರ ಇರುವ ಸ್ಥಳ ಇತ್ಯಾದಿಗಳ ಆಧಾರದಲ್ಲಿ ಸೂಕ್ತ ದಾರು ಮರವನ್ನು ಗುರುತಿಸುವುದೂ ದೊಡ್ಡ ಕೆಲಸ. ಇದಕ್ಕೂ ನಿಗದಿತ ಕುಟುಂಬದ ವಂಶಸ್ಥರು, ಬಡಗಿಗಳು ಮತ್ತು ಸರಕಾರದ ತಂಡವಿರುತ್ತದೆ.

ಸುದರ್ಶನ ಚಕ್ರಕ್ಕೆ ಬಳಸುವ ‘ದಾರುಬ್ರಹ್ಮ’ ಮರವು ಕೆಂಬಣ್ಣದ ತೊಗಟೆಯನ್ನು ಹೊಂದಿದ್ದು, ಮರಕ್ಕೆ ಮೂರು ಕೊಂಬೆಗಳಿರಬೇಕು. ಮರದಲ್ಲಿ ಚಕ್ರವನ್ನು ಹೋಲುವ ರಚನೆಯೂ ಇರಬೇಕು. ಬಲಭದ್ರನ ವಿಗ್ರಹಕ್ಕೆ ಬಳಸುವ ಮರಕ್ಕೆ ಏಳು ಕೊಂಬೆಗಳಿರಬೇಕು ಮತ್ತು ಅದರ ಕಾಂಡವು ನಸುಕಂದು ಅಥವಾ ಬಿಳಿ ಬಣ್ಣದಾಗಿದ್ದಾಗಿರಬೇಕು. ಮರದಲ್ಲಿ ನೇಗಿಲನ್ನು ಹೋಲುವ ರಚನೆಯಿರಬೇಕು. ಸುಭದ್ರೆಯ ವಿಗ್ರಹಕ್ಕೆ ಬಳಸುವ ದಾರುವಿಗೆ ಐದು ಕೊಂಬೆಗಳಿದ್ದು, ಮರದ ಕಾಂಡವು ಹಳದಿ ಬಣ್ಣವನ್ನು ಹೊಂದಿರಬೇಕು. ಮರದಲ್ಲಿ ಕಮಲದ ಚಿಹ್ನೆಯಿರಬೇಕು. ಜಗನ್ನಾಥನ ವಿಗ್ರಹಕ್ಕೆ ಬೇಕಾಗುವ ಮರವು ಮುಖ್ಯವಾಗಿ ನಾಲ್ಕು ಕೊಂಬೆಗಳನ್ನೂ, ಶಂಖ-ಚಕ್ರದ ಚಿಹ್ನೆಗಳನ್ನೂ ಹೊಂದಿದ್ದು, ಕಡು ಬಣ್ಣದ್ದಾಗಿರಬೇಕು . ಮರದಲ್ಲಿ ಯಾವುದೇ ಪ್ರಾಣಿ/ಪಕ್ಷಿಗಳ ವಾಸ ಇರಬಾರದು ಇತ್ಯಾದಿ ಬಹಳಷ್ಟು ನಿಯಮಗಳಿವೆ.

ಮರಗಳನ್ನು ಗುರುತಿಸಿದ ನಂತರ , ಬಹಳ ಸುರಕ್ಷತೆಯಿಂದ , ನಿಗದಿತ ಮುಹೂರ್ತದಲ್ಲಿ ಮರಗಳನ್ನು ಕಡಿದು, ಗಾಡಿಗಳಲ್ಲಿ ಪುರಿ ದೇವಾಲಯದ ಆವರಣಕ್ಕೆ ತಂದು , ಸೂಕ್ತ ಪೂಜಾ ವಿಧಾನಗಳ ನಂತರ ವಿಗ್ರಹಗಳನ್ನು ಕೆತ್ತುತ್ತಾರೆ. 21 ದಿನಗಳ ಕಾಲ ನಡೆಯುವ ವಿಗ್ರಹರಚನೆಯ ಸಂದರ್ಭದಲ್ಲಿ ಅಖಂಡ ಮಂತ್ರಪಠನ ಮತ್ತು ಭಜನೆಗಳು ನೆರವೇರುತ್ತವೆ. ಅಧಿಕ ಆಷಾಢಮಾಸದ ಚತುರ್ದಶಿಯಂದು ಹೊಸ ವಿಗ್ರಹಗಳನ್ನು ಹಲವಾರು ವಿಧಿವಿಧಾನಗಳ ಶಾಸ್ತ್ರೋಕ್ತವಾಗಿ ಪೂಜಿಸಿ, ಅವುಗಳಿಗೆ ದೈವತ್ವವನ್ನು ಆವಾಹಿಸುತ್ತಾರೆ. ಇದಾದ ಮೇಲೆ ಹೊಸ ವಿಗ್ರಹಗಳನ್ನು ಪೂಜಿಸಲಾಗುತ್ತದೆ ಮತ್ತು ಹಳೆ ವಿಗ್ರಹಗಳನ್ನು ದೇವಾಲಯದ ಆವರಣದಲ್ಲಿ ಹೂಳಲಾಗುತ್ತದೆ. ಈ ಉತ್ಸವದ ಸಂದರ್ಭದಲ್ಲಿ ಪುರಿಗೆ ದೇಶ-ವಿದೇಶಗಳಿಂದ ಲಕ್ಷಾಂತರ ಜನ ಬರುತ್ತಾರೆ.

ಪ್ರತಿ ವರ್ಷ ಆಷಾಢ ಶುಕ್ಲ ಪಕ್ಷದ ದ್ವಿತೀಯದಂದು, ಅಂದರೆ ಜುಲೈ ತಿಂಗಳಿನಲ್ಲಿ ಪುರಿಯಲ್ಲಿ ವಾರ್ಷಿಕ ರಥೋತ್ಸವವು ಬಲು ವಿಜೃಂಭಣೆಯಿಂದ ನೆರವೇರುತ್ತದೆ. ರಥಯಾತ್ರೆಯ ಸಂದರ್ಭದಲ್ಲಿ ಜಗನ್ನಾಥ, ಬಲರಾಮ ಹಾಗೂ ಸುಭದ್ರೆಯರ ಉತ್ಸವ ಮೂರ್ತಿಗಳನ್ನು ದೇವಾಲಯಗಳ ಆಕಾರದಲ್ಲಿ ನಿರ್ಮಿಸಿ ಸಿಂಗರಿಸಲಾದ ಮೂರು ರಥಗಳಲ್ಲಿ ಮೆರವಣಿಗೆಯ ಮೂಲಕ ಮೂರು ಕಿ.ಮೀ ದೂರದಲ್ಲಿರುವ ಗುಂಡಿಚಾ ಮಂದಿರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಒಂಭತ್ತು ದಿನಗಳ ಕಾಲ ತಂಗಿದ ಮೂರ್ತಿಗಳನ್ನು ಮತ್ತೆ ಮುಖ್ಯ ದೇವಾಲಯಕ್ಕೆ ಮರಳಲಾಗುತ್ತದೆ. ಲಕ್ಷಾನುಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವ ಈ ಅದ್ಭುತ ಉತ್ಸವದಲ್ಲಿ ಕೆಲವು ಬಾರಿ ಕಾಲ್ತುಳಿತ ಮತ್ತು ಮರಣಗಳೂ ಸಂಭವಿಸಿವೆ.

ಪುರಿ ಜಗನ್ನಾಥ ಭೋಜನಪ್ರಿಯ. ಭಾರತದ ದೇವಾಲಯಗಳಲ್ಲಿರುವ ಅತಿ ದೊಡ್ಡ ಅಡುಗೆಮನೆ ಇಲ್ಲಿದೆ. ಇಲ್ಲಿನ ಇನ್ನೊಂದು ವಿಶೇಷ ಏನೆಂದರೆ ಪ್ರತಿದಿನ ಹೊಸ ಮಡಿಕೆಗಳಲ್ಲಿ, ವಿವಿಧ ಭಕ್ಷ್ಯ-ಭೋಜ್ಯಗಳನ್ನು ತಯಾರಿಸಿ ದೇವರಿಗೆ ಅರ್ಪಿಸಿ ‘ಮಹಾಪ್ರಸಾದ’ವಾಗಿ ಭಕರಿಗೆ ಉಣಬಡಿಸುತ್ತಾರೆ. ಪ್ರತಿದಿನ ಒಂದೇ ಪ್ರಮಾಣದಲ್ಲಿ ಅಡುಗೆ ಮಾಡುತ್ತಾರೆ. ಭಕ್ತರ ಸಂಖ್ಯೆಯು ಪ್ರತಿದಿನ ಹೆಚ್ಚು-ಕಡಿಮೆ ಇರುವುದಾದರೂ ಆಹಾರವು ಕಡಿಮೆಯಾಗುವುದೂ ಇಲ್ಲವಂತೆ, ಮಿಗುವುದೂ ಇಲ್ಲವಂತೆ!

ಸ್ಥಳೀಯರ ನಂಬಿಕೆಯಂತೆ ಪುರಿಗೆ ಭೇಟಿ ನೀಡದಿದ್ದರೆ ಹಿಂದುಗಳ ತೀರ್ಥಯಾತ್ರೆ ಅಪೂರ್ಣವಾಗಿರುತ್ತದೆ ಹಾಗೂ ಜಗನ್ನಾಥ ತಾನಾಗಿ ಕರೆಸಿಕೊಂಡರೆ ಮಾತ್ರ ಭಕ್ತರಿಗೆ ದರ್ಶನ ಲಭ್ಯವಾಗುತ್ತದೆ.

27 ಡಿಸೆಂಬರ್ 2016 ರಂದು ‘ಪುರಿ’ಯ ಜಗನ್ನಾಥನ ಮಂದಿರಕ್ಕೆ ಭೇಟಿ ಕೊಟ್ಟಿದ್ದೆವು . ಅಲ್ಲಿನ ಜನಜಂಗುಳಿ, ಅರ್ಚಕರ ಧನದಾಹ, ಅಶುಚಿತ್ವ ಇತ್ಯಾದಿ ಕಿರಿಕಿರಿ ಎನಿಸಿತಾದರೂ ಬಹಳ ವಿಶೇಷತೆಗಳನ್ನು ಹೊಂದಿದ ದೇವಾಲಯಕ್ಕೆ ಭೇಟಿ ಕೊಟ್ಟ ಖುಷಿಯೂ ಲಭಿಸಿತು.

ಪುರಿ ಜಗನ್ನಾಥ ಮಂದಿರದ ಹೊರಗಡೆ ಸರದಿ ಸಾಲಿನ ವ್ಯವಸ್ಥೆ ಇದೆಯಾದರೂ ಗರ್ಭಗುಡಿಯ ಎದುರಲ್ಲಿ ಸಾಲು ಚದುರಿಹೋಗಿ ಅನಾವಶ್ಯಕ ನೂಕುನುಗ್ಗಲು, ಗೊಂದಲ ಆರಂಭವಾಗುತ್ತದೆ. ಅಲ್ಲಿ ಎರಡು ಕಡೆ ಅರ್ಚಕರು ಕೋಲುಗಳನ್ನು ಪಟಪಟಿಸಿ ಸದ್ದು ಮಾಡುತ್ತಿದ್ದರು. ನಾವು ಸಾಲಿನಲ್ಲಿ ಮುಂದೆ ಹೋಗುತ್ತಿರುವಾಗ, ಆ ಕೋಲುಗಳಿಂದ ನಮ್ಮ ತಲೆ-ಬೆನ್ನಿಗೆ ಮೆತ್ತಗೆ ಹೊಡೆಯುತ್ತಾರೆ. ಅದು ಅವರು ಆಶೀರ್ವಾದ ಮಾಡುವ ವಿಧಾನವಂತೆ. ಅವರ ಕೈಗೆ ದುಡ್ಡು ಕೊಟ್ಟರೆ ಸರಿ- ಇಲ್ಲವಾದರೆ ನಮಗೆ ಅರ್ಥವಾಗದ ಭಾಷೆಯಲ್ಲಿ ಬಯ್ಯುತ್ತಾರೆ! ಇನ್ನು ಕೆಲವರು ಪ್ರಸಾದದ ಚಿಕ್ಕ ಬುಟ್ಟಿಗಳನ್ನು ಮಾರುತ್ತಾರೆ. ಅದಕ್ಕೆ ರಸೀದಿ ಕೊಡುವುದಿಲ್ಲ.

ಕಷ್ಟಪಟ್ಟು ದೇವರ ಎದುರು ಬಂದು ಇನ್ನಾದರೂ ದರ್ಶನ ಸಿಕ್ಕೀತೆ ಎಂದು ಗರ್ಭಗುಡಿಯತ್ತ ನೋಡಿದರೆ, 3-4 ಅರ್ಚಕರು ನೋಟುಗಳೇ ತುಂಬಿದ ದೊಡ್ಡ ಹರಿವಾಣವನ್ನು ತಮ್ಮ ಮುಂದೆ ಇರಿಸಿಕೊಂಡು ದೇವರಿಗೆ ಅಡ್ಡವಾಗಿ ನಿಂತಿದ್ದರು . ಉದ್ದವಿರುವವರು ಹೇಗೋ ಅರ್ಚಕರ ತಡೆಗೋಡೆಯನ್ನು ತಪ್ಪಿಸಿಕೊಂಡು ದೇವರನ್ನು ನೋಡಬಹುದು. ಕುಳ್ಳಗೆ ಇರುವವರಿಗೆ ಅರ್ಚಕರ ದರ್ಶನ ಮತ್ತು ದರ್ಪ ಮಾತ್ರ ಲಭ್ಯ! ಜನರ ನೂಕುನುಗ್ಗಲಿಂದ ತಪ್ಪಿಸಿಕೊಂಡು ಹೊರಬಂದರೆ ಸಾಕಪ್ಪಾ ಅನಿಸುತ್ತದೆ. ಒಟ್ಟಿನ ಮೇಲೆ ಇಲ್ಲಿ ಶಿಸ್ತುಪಾಲನೆ ಉತ್ತಮವಾಗಬೇಕು.

(ಚಿತ್ರ: ಅಂತರ್ಜಾಲ )

 

 – ಹೇಮಮಾಲಾ.ಬಿ

2 Responses

  1. Ashoka Vardhana says:

    ಅರ್ಚಕರ ಸೀಳುದಬ್ಬೆ ಹಣಕೊಟ್ಟವರಿಗೆ ಮಿದುವಾಗಿ ಆಶೀರ್ವಾದ, ಕೊಡದವರಿಗೆ ತುಸು ಬಿರುಸಾಗಿ ಶಿಕ್ಷೆ!! ಇಲ್ಲಿನ ಅನ್ನ ಪ್ರಸಾದವನ್ನು ಭಕ್ತರು ಯಾವ ಆಸರೆಯೂ ಇಲ್ಲದೇ ಬೊಗಸೆಯಲ್ಲಿ ತಂದು ದೇವಳದ ಕೊಳಕು ನೆಲದ ಮೇಲೆ ಹಾಕಿ ತಿಂದು, ಉಚ್ಚಿಷ್ಟವನ್ನು ಹಾಗೇ ಬಿಟ್ಟು ಹೋಗುವ ಪರಿ ನೋಡಿ ನಮಗೆ ಹೇವರಿಕೆ ಬಂದಿತ್ತು ( ೧೯೮೦ರ ದಶಕ). ಆದರೆ ಅದೇ ನೆಲದ ಮೇಲೆ ದೇವರ ನೈವೇದ್ಯಕ್ಕಿರುವ ಅಕ್ಕಿಯನ್ನು ಹೊತ್ತು ಸಾಗುವ ಅರ್ಚಕರ ಮಡಿಯ ಬೊಬ್ಬೆ ಕೇಳಿದರೆ ಎಂಥವರಿಗೂ ಮೈ ಉರಿಯುತ್ತದೆ. ದೇವಳದ ಶಿಥಿಲಗೊಂಡ ಚಪ್ಪರದ ಶಿಲಾಫಲಕಗಳು ನಮ್ಮನಂತರದ ದಿನಗಳಲ್ಲಿ ಕಳಚಿ ಬಿದ್ದ ವರದಿಗಳನ್ನು ಕೇಳಿದ್ದೆ. ಈಗ ಜೀರ್ಣೋದ್ಧಾರ ಸರಿಯಾಗಿರಬಹುದೆಂದು ಭಾವಿಸುತ್ತೆನೆ

    • Hema says:

      ನಾವು ಸಂಜೆಯ ಸಮಯ ಪುರಿಯ ದೇವಾಲಯಕ್ಕೆ ಭೇಟಿ ಕೊಟ್ಟಿದ್ದ ಕಾರಣವೋ ಗೊತ್ತಿಲ್ಲ, ಊಟದ ಅವ್ಯವಸ್ಥೆ ಕಣ್ಣಿಗೆ ಬಿದ್ದಿರಲಿಲ್ಲ. ಮಂದಿರದಿಂದ ಹೊರ ಹೋಗುವ ದಾರಿಯಲ್ಲಿ ಬಹಳಷ್ಟು ಪ್ರಸಾದದ (ವಿವಿಧ ತಿಂಡಿ/ತಿನಿಸು/ಪೇಯಗಳ) ಮಳಿಗೆಗಳಿದ್ದುವು. ಈಗ disposable cups/plates ಲಭ್ಯವಿರುವುದರಿಂದ ಅವುಗಳ ಕಸವೇ ಜಾಸ್ತಿ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: