ಅನನ್ಯ ಕಲಾ ಆರಾಧಕ ಪಿ.ಜಯರಾಮ್
ತಮ್ಮೆಲ್ಲಾ ಭಾವಲಹರಿಗಳನ್ನು ಭಾವಚಿತ್ರ ಮತ್ತು ಭೂದೃಶ್ಯ ಚಿತ್ರಗಳ ಮೂಲಕ ಅದ್ಭುತವಾಗಿ ಬಿಂಬಿಸುತ್ತಿರುವ ಪಿ.ಜಯರಾಮ್ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮಿಕ್ಕೇರಿ ಗ್ರಾಮದಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದಾರೆ. ಬಾಲ್ಯದಲ್ಲಿಯೇ ಪೋಲಿಯೊ ಕಾಯಿಲೆಗೆ ತುತ್ತಾಗಿ ತಮ್ಮ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದರೂ ಧೃತಿಗೆಡದೆ ತೆವಳುತ್ತಾ ಪ್ರಾಥಮಿಕ ಶಾಲೆಗೆ ಹೋಗಿದ್ದಾರೆ. ನಡೆಯಲು ಬಾರದಿದ್ದರೂ ಹೆತ್ತವರ ಪ್ರೀತಿ ಮತ್ತು ಸ್ನೇಹಿತರ ಸಹಕಾರದಿಂದ ಓದುವುದರಲ್ಲಿ ಆಸಕ್ತಿ ವಹಿಸಿಕೊಂಡು ಚಿತ್ರಕಲೆಯಲ್ಲಿ ಪದವಿ ಪಡೆದು ಪ್ರಸ್ತುತ ಕ್ರಿಯಾಶೀಲ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.
ಉಳಿದವರಿಗಿಂತ ಕೊಂಚ ಭಿನ್ನವಾಗಿ ಸಾಧಿಸಬೇಕೆಂಬ ತುಡಿತವುಳ್ಳ ಜಯರಾಮ್ ಭೂದೃಶ್ಯ, ಚುಕ್ಕೆಚಿತ್ರ, ರೇಖಾಚಿತ್ರ ಹಾಗೂ ಭಾವಚಿತ್ರಗಳನ್ನು ಕಟ್ಟಿಕೊಡಲು ನಿರಂತರವಾಗಿ ಕನವರಿಸುತ್ತಾ ಚಲನಶಿಲರಾಗಿದ್ದಾರೆ. ಪ್ರಸ್ತುತ ಪ್ರತಿ ರೇಖೆಗಳನ್ನು ಎಳೆಯುವಾಗೊಮ್ಮೆ ಹೆಗಲ ಮೇಲೆ ಹೊತ್ತುಕೊಂಡು ಅಲೆದಾಡಿದ ಅಪ್ಪನನ್ನು ಧ್ಯಾನಿಸುತ್ತಾ ಭಾವುಕರಾಗುತ್ತಾರೆ.
ಹಾಳೆ, ಪೆನ್ಸಿಲ್, ಪೆನ್ನು, ಬಣ್ಣ, ಕ್ಯಾನವಾಸ್ ನಿತ್ಯ ಇವುಗಳೊಂದಿಗೆ ಸಂವಾದಿಸುತ್ತಾ ಹೊಸ ಹೊಸ ಕಲಾ ಹೊಳಹುಗಳನ್ನು ಶೋಧಿಸಿಕೊಳ್ಳುವುದರ ಜೊತೆಗೆ ಮಂಡ್ಯ, ಮೈಸೂರು, ಶ್ರೀರಂಗಪಟ್ಟಣ ಮತ್ತು ಶ್ರವಣಬೆಳಗೋಳದಲ್ಲಿ ನಡೆದ ರಾಜ್ಯಮಟ್ಟದ ಕಲಾಶಿಬಿರಗಳಲ್ಲಿ ಪಾಲ್ಗೊಂಡು, ನಾಡಿನ ಹಲವಡೆ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಕಲಾರಸಿಕರ ಕಣ್ಮನ ತಣಿಸಿದ್ದಾರೆ.
ಆರ್ಥಿಕವಾಗಿ ಮತ್ತು ದೈಹಿಕವಾಗಿ ಜಯರಾಮ್ ಅನುಭವಿಸಿದ ನೋವುಗಳಿಗೆ ಅವರ ಕಲಾಕೃತಿಗಳೆ ಸಾಂತ್ವನ ಹೇಳುತ್ತಿವೆ ಮತ್ತು ಅವರ ಅಂತರಂಗವನ್ನು ತೆರೆದಿಟ್ಟಿವೆ. ಚಿತ್ರಕಲಾ ಲೋಕದಲ್ಲೊಂದಿಷ್ಟು ನೆಮ್ಮದಿ ಕಂಡುಕೊಂಡ ಜಯರಾಮ್ ನಿಜಕ್ಕೂ ಒರ್ವ ಅನನ್ಯ ಕಲಾ ಆರಾಧಕ. ತಮ್ಮ ಅಂಗವಿಕಲತೆಯನ್ನು ಮೀರಿ ನಿಂತು, ಚಿತ್ರಕಲೆಯಲ್ಲಿ ಇನ್ನಷ್ಟು ವಿಶಿಷ್ಟವಾಗಿ ಸಾಧಿಸಬೇಕೆಂಬ ಹಂಬಲವುಳ್ಳವರು. ಸೃಜನಶೀಲತೆಯತ್ತ ತೆರೆದುಕೊಂಡು ವಿಭಿನ್ನ ಶೈಲಿಯಲ್ಲಿ ರೇಖೆ ಎಳೆಯುತ್ತಿರುವ ಜಯರಾಮ್ ಹೊಸತಲೆಮಾರಿನ ಕಲಾವಿದರಿಗೆ ಮಾದರಿಯಾಗಿದ್ದಾರೆ. ಇಂತಹ ವಿಶೇಷ ಚಿತ್ರಕಲಾ ಶಿಕ್ಷಕರನ್ನು ಇಲಾಖೆ ಹಾಗೂ ಲಲಿತಕಲಾ ಆಕಾಡೆಮಿ ಗುರುತಿಸಿ ಗೌರವಿಸಬೇಕಿದೆ.
– ಕೆ.ಬಿ.ವೀರಲಿಂಗನಗೌಡ್ರ , ಸಿದ್ದಾಪುರ
ನಿಜಕ್ಕೂ ಅದ್ಭುತ ಕಲಾಕ್ರತಿಗಳು
ಅನನ್ಯ ಕಲಾರಾಧಕರಿಗೆ ನಮೋ..ನಮೋ..ಎಂಬೆ..
ಶ್ರೀ ಜಯರಾಮ್ ಅವರ ಕಲಾವಂತಿಕೆಗೆ ತುಂಬು ಹೃದಯದ ಅಭಿನಂದನೆಗಳು. ದೇವರು ಅವರಿಗೆ ಉಜ್ವಲವಾದ ಭವಿಷ್ಯವನ್ನು ಒದಗಿಸಲಿ ಎಂದು ಆಶಿಸುತ್ತೇನೆ. ಇವರನ್ನು ಪರಿಚಯಿಸಿದ ಶ್ರೀ ಕೆ.ಬಿ. ವೀರಲಿಂಗನಗೌಡ್ರ ಅವರ ಸೌಜನ್ಯತೆಗೆ ಧನ್ಯವಾದಗಳು.