ರಾಜಸ್ಥಾನದಲ್ಲಿ ಊಟೋಪಚಾರ…
ಅದೆಷ್ಟು ವೈವಿಧ್ಯಮಯ ನಮ್ಮ ಭಾರತ!
ಇತ್ತೀಚೆಗೆ ರಾಜಸ್ಥಾನದ ಜೈಸಲ್ಮೇರ್ ನಲ್ಲಿ ನಡೆಯುವ ಆಯೋಜಿಸಲಾಗಿದ್ದ ಕ್ಯಾಂಪ್ ನಲ್ಲಿ ಭಾಗವಹಿಸಿದ್ದೆವು. ಜೈಸಲ್ಮೇರ್ ನಗರವು ಈ ರಾಜ್ಯದ ಪಶ್ಚಿಮ ಭಾಗದಲ್ಲಿದೆ. ಅಪ್ಪಟ ಮರುಭೂಮಿ ಪ್ರದೇಶವಾದ ಇಲ್ಲಿಂದ 120 ಕಿ. ಮಿ. ದೂರದಲ್ಲಿ ಪಾಕಿಸ್ಥಾನದ ಸೀಮಾರೇಖೆ ಇದೆ. ರಜಪೂತರು, ಮೊಘಲರು ಆಳಿದ ಈ ನಗರದಲ್ಲಿ ಹಳದಿ ಬಣ್ಣದ ಕಲ್ಲಿನಿಂದ ಕಟ್ಟಲಾದ ವಿವಿಧ ಕಟ್ಟಡಗಳು, ಹವೇಲಿಗಳು ಹಾಗೂ ಥಾರ್ ಮರುಭೂಮಿಯ ಮರಳುದಿಬ್ಬಗಳು ಮುಖ್ಯ ಪ್ರವಾಸಿ ಆಕರ್ಷಣೆ. ಕಲ್ಲಿನ ಕಟ್ಟಡಗಳ ಮೇಲೆ ಬಿಸಿಲು ಬಿದ್ದಾಗ ಅವು ಬಂಗಾರದ ಬಣ್ಣದಿಂದ ಕಂಗೊಳಿಸುವುದರಿಂದ ಜೈಸಲ್ಮೇರ್ ನಗರಕ್ಕೆ ಗೋಲ್ಡನ್ ಸಿಟಿ ಎಂಬ ಅನ್ವರ್ಥ ನಾಮವಿದೆ.
ನಾವು ವಿವಿಧ ಸ್ಥಳಗಳನ್ನು ಸಂದರ್ಶಿಸುವುದರ ಜತೆಗೆ , ರಾಜಸ್ಥಾನದ ವಿಶಿಷ್ಟ ತಿನಿಸುಗಳನ್ನು ಸವಿದೆವು. ಅವುಗಳಲ್ಲಿ ಪ್ರಮುಖವಾದುವು ‘ ದಾಲ್ – ಬಾಟಿ -ಚೂರ್ಮ’ , ‘ಕೇರ್ ಸಾಂಗ್ರಿ ಕಾ ಸಬ್ಜಿ’ ಮತ್ತು ‘ಗೇವಾರ್’. .
ದಾಲ್ – ಬಾಟಿ –ಚೂರ್ಮ‘
ಗೋಧಿ ಹಿಟ್ಟು ಮತ್ತು ತುಪ್ಪವನ್ನು ಬಳಸಿ ಚಪಾತಿ ಹಿಟ್ಟು ತಯಾರಿಸಿ, ಅದನ್ನು ಕೆಂಡದಲ್ಲಿ ಸುಟ್ಟು ಬಾಟಿ ತಯಾರಿಸುತ್ತಾರೆ. ಇದಕ್ಕೆ ವಿವಿಧ ಬೇಳೆಕಾಳುಗಳ ದಾಲ್ ನ ಸಂಯೋಜನೆ . ಬಾಟಿಯನ್ನು ಪುಡಿಮಾಡಿ ಇನ್ನಷ್ಟು ತುಪ್ಪ ಸುರುವಿ ಸಕ್ಕರೆ- ಏಲಕ್ಕಿ-ಗೋಡಂಬಿ ಹಾಕಿ ಬೆರೆಸಿದಾಗ ಚೂರ್ಮ ಸಿದ್ದವಾಗುತ್ತದೆ. ಒಟ್ಟಾರೆಯಾಗಿ ಈ ತಿನಿಸು ಬಹು ರುಚಿ.
ಕೇರ್ ಸಾಂಗ್ರಿ ಕಾ ಸಬ್ಜಿ
ಥಾರ್ ಮರುಭೂಮಿಯಲ್ಲಿ ಮಾತ್ರ ಬೆಳೆಯುವ ಒಂದು ವಿವಿಧ ಕಾಳು ( ಕೇರ್ ) ಮತ್ತು ಒಣಬೀನ್ಸ್ ನಂಥಹ ಸಾಂಗ್ರಿಯನ್ನು ನೀರಿನಲ್ಲಿ ನೆನೆಸಿ ಮಾಡುವ ಪಲ್ಯ ಇದು. ಬಾಜ್ರ ಅಥವಾ ಗೋಧಿ ರೊಟ್ಟಿಯೊಂದಿಗೆ ಬಡಿಸುವ ವ್ಯಂಜನ.
ಗೇವಾರ್
ಮೈದಾ ಹಿಟ್ಟು , ಹಾಲು, ಸಕ್ಕರೆ ಮತ್ತು ತುಪ್ಪವನ್ನು ಬಳಸಿ ತಯಾರಿಸುವ ಗೇವಾರ್ ಸ್ವಾದಿಷ್ಟವಾಗಿದೆ. ಸುಮಾರಾಗಿ ನಮ್ಮ ದೋಸೆ ಮತ್ತು ಕೇಕ್ ನ್ನು ಹೋಲುವ ಈ ಸಿಹಿತಿನಿಸು ರಾಜಸ್ಥಾನದದಲ್ಲಿ ಶುಭ ಕಾರ್ಯಗಳಿಗೆ ಬೇಕೇ ಬೇಕಂತೆ .
–– ಹೇಮಮಾಲಾ.ಬಿ
07/03/2014
interesting information and good pictures
Once I got a chance to visit rajasthani tadka restaurant and tasted the food. The food tastes really yummy…. Thanks to Hema for sharing this.