ತೇಲುವ ಆ ಮೋಡದ ಮೇಲೆ…
ಪುಟ್ಟ ಹಳ್ಳಿಯಲ್ಲಿ ಬಾಲ್ಯ ಕಳೆದ ನಮಗೆ ಅಲ್ಲಿ ಆಗಿನ ಕಚ್ಚಾಮಣ್ಣಿನ ರಸ್ತೆಯ ಮೇಲೆ ವಿಪರೀತ ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ಲಾರಿ, ಬಸ್ಸುಗಳನ್ನು ನೋಡುವುದೇ ಆಧುನಿಕತೆಯ ಸಂಪರ್ಕ ಎನಿಸುತ್ತಿತ್ತು. ಬಾನಿನಲ್ಲಿ ಅಪರೂಪಕ್ಕೆ ಕಾಣಸಿಗುತ್ತಿದ್ದ ‘ಲೋಹದ ಹಕ್ಕಿ’ ವಿಮಾನದ ಸದ್ದು ಅಪ್ಪಿ-ತಪ್ಪಿ ಕೇಳಿಸಿದರೆ, ಮನೆಯಂಗಳಕ್ಕೆ ಓಡೋಡಿ ಬಂದು ಅದು ಕಾಣಿಸುವಷ್ಟೂ ದೂರ ಕತ್ತೆತ್ತಿ ನೋಡಿ ಸಂಭ್ರಮಿಸುತ್ತಿದ್ದೆವು. ಆಕಾಶದಲ್ಲಿ ರಾಕೆಟ್ ಹೋದ ಜಾಗದಲ್ಲಿ ಬಿಳಿ ಗೆರೆ ಎಳೆದಂತೆ ಕಾಣಿಸುತ್ತಿದ್ದ ಅದರ ಹೊಗೆ, ನಿಧಾನವಾಗಿ ಅರಳಿ ಅಗಲವಾಗುತ್ತಾ ಗಾಳಿಯೊಂದಿಗೆ ಲೀನವಾಗುವುದನ್ನು ನೋಡಿ ಅದನ್ನು ಇತರರಿಗೆ ವರ್ಣಿಸುವುದರಲ್ಲಿ ಅಪರಿಮಿತ ಉತ್ಸಾಹವಿತ್ತು. ಪಕ್ಕದ ಊರಿನಲ್ಲಿ ಗೇರುಕೃಷಿಗೆ ಔಷಧ ಸಿಂಪಡಿಸಲು ‘ಹೆಲಿಕಾಪ್ಟರ್’ ಎಂಬ ಮಿಡತೆಯನ್ನು ಹೋಲುವ ಸಣ್ಣ ವಿಮಾನ ಬಂದಿದೆಯಂತೆ, ಅದರ ತಲೆಯ ಮೇಲೆ ರೆಕ್ಕೆ ಇದೆಯಂತೆ ಎಂಬ ಕಥೆಗಳು ಶಾಲೆಯಲ್ಲಿ ಹರಿದಾಡುತ್ತಿದ್ದುವು. ಕೆಳಮಧ್ಯಮ ವರ್ಗದವರಾಗಿದ್ದ ನಮಗೆ ಆಕಾಶದಲ್ಲಿ ಪ್ರಯಾಣಿಸುವುದು ಸಾಧ್ಯವೇ ಇಲ್ಲ, ವಿಮಾನಯಾನದ ಅವಕಾಶ ಎಂದಿಗೂ ಲಭಿಸಲಾರದು ಎಂಬ ದೃಢ ನಂಬಿಕೆ ಬೇರೂರಿದ್ದ ಕಾಲವದು.
ಬದಲಾದ ಕಾಲಗತಿಯಲ್ಲಿ, ಉದ್ಯೋಗ ನಿಮಿತ್ತ ಮತ್ತು ವೈಯುಕ್ತಿಕ ಪ್ರವಾಸದ ಸಲುವಾಗಿ ಹಲವಾರು ಬಾರಿ ವಿಮಾನದಲ್ಲಿ ಪ್ರಯಾಣಿಸಬೇಕಾಗಿ ಬಂತು. ಆದರೆ ನನಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವ ಅವಕಾಶ ಮೊದಲ ಬಾರಿಗೆ ಲಭಿಸಿದ್ದು 17 ಸೆಪ್ಟೆಂಬರ್ 2016 ರಂದು. ಚಾರ್ ಧಾಮ್ ಯಾತ್ರೆಯ ಅಂಗವಾಗಿ, ಕೇದಾರನಾಥವನ್ನು ತಲಪಲು ನಮಗೆ ಗೌರಿಕುಂಡದಿಂದ ಕಾಲ್ನಡಿಗೆ, ಕುದುರೆ ಸವಾರಿ, ಡೋಲಿ ಮತ್ತು ಕೆಲವು ಸಂಸ್ಥೆಗಳು ಒದಗಿಸುವ ಹೆಲಿಕಾಪ್ಟರ್ ಸೇವೆ – ಇಷ್ಟು ಆಯ್ಕೆಗಳಿವೆ. ನಮ್ಮ ತಂಡದ ಎಲ್ಲರೂ ಹೆಲಿಕಾಪ್ಟರ್ ಮೂಲಕ ಹೋಗುವುದೆಂದೂ ಬೆಟ್ಟದಿಂದ ಇಳಿದು ಬರುವಾಗ 16 ಕಿ.ಮೀ ಚಾರಣ ಮಾಡುವುದೆಂದೂ ನಿರ್ಧರಿಸಿದ್ದೆವು .
ಉತ್ತರಾಖಂಡದ ‘ನಾರಾಯಣ ಕಟ್ಟ’ ಎಂಬಲ್ಲಿ ಆರ್ಯನ್ ಏವಿಯೇಷನ್ ಸಂಸ್ಥೆಯ ಹೆಲಿಕಾಪ್ಟರ್ ಪ್ರಯಾಣಕ್ಕೆ ಟಿಕೆಟ್ ಖರೀದಿಸಿದೆವು. ಒಬ್ಬರಿಗೆ ರೂ.3500/ -. ಅಲ್ಲಿಂದ ಹೊರಟ ಹೆಲಿಕಾಪ್ಟರ್ ಕೇವಲ 7 ನಿಮಿಷದಲ್ಲಿ ಕೇದಾರನಾಥದಲ್ಲಿ ಇಳಿಯುತ್ತದೆ. ಮೊದಲು ನಮ್ಮ ತೂಕವನ್ನು ಅಲ್ಲಿ ದಾಖಲಿಸುತ್ತಾರೆ. 80 ಕೆ.ಜಿ ಗಿಂತ ಹೆಚ್ಚು ಉಳ್ಳವರು ಹೆಚ್ಚುವರಿ ಹಣವನ್ನು ಕೊಡಬೇಕಂತೆ! ನಮ್ಮ ಕೈಚೀಲದ ಭಾರ 2 ಕಿಲೋ ಗಿಂತ ಹೆಚ್ಚಿರಬಾರದು. ಹಾಗಾಗಿ ಬ್ಯಾಗ್ ನಲ್ಲಿ ಅಲ್ಲಿನ ಹವೆಗೆ ಅನಿವಾರ್ಯವಾಗಿದ್ದ ಸ್ವೆಟರ್, ಉಣ್ಣೆಯ ಶಾಲು, ಕೈಗವಸು ಇತ್ಯಾದಿಗಳನ್ನು ಮಾತ್ರ ಇಟ್ಟುಕೊಂಡೆವು. ನೀರಿನ ಬಾಟಲಿಯನ್ನು ಖಾಲಿ ಮಾಡಿ ಕೈಚೀಲದ ತೂಕವನ್ನು 2 ಕೆ.ಜಿ ಗೆ ಹೊಂದಿಸಿದೆವು. ನಮ್ಮ ತಂಡದವರಿಗೆ ಮಧ್ಯಾಹ್ನ 1 ರಿಂದ 3 ಗಂಟೆಯ ಸಮಯ ನಿಗದಿಯಾಗಿತ್ತು.
ಒಂದು ಮನೆಯ/ಅಂಗಡಿಯ ತಾರಸಿಯ ಮೇಲೆ ಬಿಳಿ ಬಣ್ಣದಲ್ಲಿ ದೊಡ್ಡ ವೃತ್ತ ರಚಿಸಿ ಅದರಲ್ಲಿ H ಅಕ್ಷ್ರರ ಮೂಡಿಸಿದ್ದರು. ಅದೇ ಹೆಲಿಪ್ಯಾಡ್. ನಮ್ಮ ಸರದಿಗಾಗಿ ಕಾದೆವು. ಆದರೆ ಮೋಡ ಕವಿದಿದ್ದ ಕಾರಣ ನಮಗೆ ಮತ್ತು ನಮ್ಮಿಂದ ಮೊದಲು ಅಲ್ಲಿ ಕಾಯುತ್ತಿದ್ದವರಿಗೂ ಅವಕಾಶ ಸಿಕ್ಕಿರಲಿಲ್ಲ. ಹಸಿವೆಯಾಗಿತ್ತು. ಅಲ್ಲಿಯೇ ಕೆಳಗಡೆ ಪುಟ್ಟ ಅಂಗಡಿಯಲ್ಲಿ ಮ್ಯಾಗಿ ಮತ್ತು ಆಲೂಪರಾಠಾ ಲಭ್ಯವಿತ್ತು. ನಾವು ಆರ್ಡರ್ ಮಾಡಿ, ತಿನ್ನಲಾರಂಭಿಸಿದಾಗ ಮೋಡ ತಿಳಿಯಾಗಿ , ಹೆಲಿಕಾಪ್ಟರ್ ಹತ್ತಲು ಕರೆಬಂದರೆ ಎಂಬ ಆತಂಕವಿತ್ತು. ಅಲ್ಲಿ ಕೂಡಲೇ ಸಿಗುತ್ತಿದ್ದುದು ಮ್ಯಾಗಿ ನೂಡಲ್ಸ್ ಮಾತ್ರ. ಹೀಗೆ, ಮಕ್ಕಳಿಗೆ ‘ಮ್ಯಾಗಿ ತಿನ್ನಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂದು ಸದಾ ಬೋಧಿಸುವ ಅಮ್ಮಂದಿರಾದ ನಾವು ಅನಿವಾರ್ಯವಾಗಿ ಮ್ಯಾಗಿ ತಿಂದು ಹೊಟ್ಟೆ ತುಂಬಿಸಿಕೊಂಡೆವು.
ಸಂಜೆ ನಾಲ್ಕು ಘಂಟೆಗೆ ಕರೆ ಬಂತು. ಪ್ರತಿ ಟ್ರಿಪ್ ನಲ್ಲಿ 6 ಜನರಿಗೆ ಅವಕಾಶ. ಸಿಬ್ಬಂದಿಯವರು ನಮ್ಮ ತೂಕವನ್ನು ಗಮನಿಸಿ, ಅನುಕ್ರಮವಾಗಿ ಕೂರಿಸಿದರು. ಇದೇ ಅನುಕ್ರಮಣಿಕೆಯಲ್ಲಿ ಹೆಲಿಕಾಪ್ಟರ್ ಹತ್ತಬೇಕು ಅಂದರು (ಬಹುಶ: ಸಮತೋಲನ ಕಾಯ್ದುಕೊಳ್ಳಲು) . ಕೊನೆಗೂ ಹೆಲಿಕಾಪ್ಟರ್ ಬಂತು. ಅದರ ರೆಕ್ಕೆಗಳ ತಿರುಗಾಟಕ್ಕೆ ಸುತ್ತುಮುತ್ತಲಿನ ಗಾಳಿ ಬೀಸುವ ವೇಗ ವಿಪರೀತವಾಗಿತ್ತು. ತತ್ಕ್ಷಣ ಅಲ್ಲಿನ ಸಿಬ್ಬಂದಿಯವರು ನಮ್ಮ ಕೈಚೀಲಗಳನ್ನು ತಾವು ಎತ್ತಿಕೊಂಡು ಹೆಲಿಕಾಪ್ಟರ್ ನೊಳಗೆ ಇಟ್ಟರು. ಬಾಗಿಲು ತೆರೆದು ನಮ್ಮನ್ನು ಹೆಚ್ಚುಕಡಿಮೆ ಹೆಲಿಕಾಪ್ಟರ್ ನೊಳಗೆ ದಬ್ಬಿ ಬಾಗಿಲು ಹಾಕಿಯೇ ಬಿಟ್ಟರು. ಕ್ಷಣಾರ್ಧದಲ್ಲಿ ಹೆಲಿಕಾಪ್ಟರ್ ಮೇಲೇರತೊಡಗಿತು. ಪೈಲಟ್ ಬಳಿ ಒಬ್ಬರನ್ನು ಕೂರಿಸಿದ್ದರು. ಅವರಿಗೆ ಬೆನ್ನು ಹಾಕಿ ಎರಡು ಸೀಟುಗಳು ಮತ್ತು ಇವುಗಳಿಗೆ ಎದುರುಬದುರಾಗಿ ಮೂರು ಸೀಟುಗಳು. ಹೀಗೆ ಒಟ್ಟು ಆರು ಪ್ರಯಾಣಿಕರು ಮತ್ತು ಒಬ್ಬ ಪೈಲಟ್ ಅನ್ನು ಹೊತ್ತ ಹೆಲಿಕಾಪ್ಟರ್ ಹಾರತೊಡಗಿತು.
ಹಿಮಾಲಯದ ಪ್ರಕೃತಿ ಸೌಂದರ್ಯವನ್ನು ಮೇಲಿನಿಂದ ನೋಡುವ ಅವಕಾಶ ನಿಜಕ್ಕೂ ಅದ್ಭುತವಾಗಿತ್ತು. ‘ಬಯಲುದಾರಿ’ ಚಿತ್ರದ ಅನಂತನಾಗ್ ನಟನೆಯ ಹೆಲಿಕಾಪ್ಟರ್ ಹಾಡು ‘ಎಲ್ಲಿರುವೆ ಮನವ ಕಾಡುವ ರೂಪಸಿಯೆ…..” ಗುನುಗಿದೆವು. ನಿಜಕ್ಕೂ ‘ತೇಲುವ ಆ ಮೋಡದ ಮೇಲೆ, ನಾವೂ ತೇಲಿದಂತೆ ‘ ಆಯಿತು.
ಪೈಲಟ್ ಬಳಿ ಕುಳಿತವರು ಫೊಟೋ ಕ್ಲಿಕ್ಕಿಸಬಾರದೆಂಬ ನಿಯಮವಿದೆಯಂತೆ . ನನಗೆ ಹಿಂದಿನ ಸೀಟ್ ಸಿಕ್ಕಿದ್ದುದು ಫೊಟೋ ತೆಗೆಯಲು ಅನುಕೂಲವಾಯಿತು. ನೋಡು ನೋಡುತ್ತಿದ್ದಂತೆ ಹಸಿರ ಸಿರಿಯ ಕಣಿವೆಗಳ ನಡುವೆ ಕೇದಾರನಾಥಕ್ಕೆ ಹೋಗುವ ಕಾಲುದಾರಿ, ಅಲ್ಲಿದ್ದ ಟೆಂಟ್ ಗಳು, 2013 ರ ಜಲಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದ ಹಳ್ಳಿಗಳು ಕಾಣಿಸಿಕೊಂಡೆವು. ಅಷ್ಟರಲ್ಲಿ ನಮ್ಮ 7 ನಿಮಿಷಗಳ ಹೆಲಿಕಾಪ್ಟರ್ ಪ್ರಯಾಣ ಮುಗಿದೇ ಹೋಗಿತ್ತು! ಆಗ ಎಲ್ಲರ ಬಾಯಿಯಿಂದಲೂ ಬಂದ ಉದ್ಗಾರ “ಇಷ್ಟು ಬೇಗ ಕೇದಾರಕ್ಕೆ ತಲಪಿಯೇ ಬಿಟ್ಟೆವಾ” !.
ವಿಮಾನದಲ್ಲಿ ಪ್ರಯಾಣಿಸುವಾಗ, ನಿರ್ದಿಷ್ಟ ಎತ್ತರ ತಲಪಿದ ಮೇಲೆ ಕಿಟಿಕಿಯಿಂದ ಹೊರಗಡೆ ನೋಡುವಾಗ ಹತ್ತಿಯ ರಾಶಿಯಂತೆ ಬರಿ ಮೋಡಗಳೇ ಕಾಣಿಸಿ ಏಕತಾನತೆ ಉಂಟಾಗುತ್ತದೆ. ವಿಮಾನದ ಚಲನೆಯ ಅನುಭವವೂ ಕಡಿಮೆಯಿರುವುದರಿಂದ ಇದ್ದಲ್ಲೇ ಇರುವಂತೆ ಭಾಸವಾಗುತ್ತದೆ. ಹಲವಾರು ಗಂಟೆಗಳ ಕಾಲದ ಪ್ರಯಾಣವಾದರೆ ಯಾವಾಗ ಇಳಿಯುತ್ತೇವೆಯೋ ಎನಿಸಿಬಿಡುತ್ತದೆ. ಆದರೆ ಹೆಲಿಕಾಪ್ಟರ್ ಕಡಿಮೆ ಎತ್ತರದಲ್ಲಿ ಹಾರಾಡುವುದರಿಂದ ಕೆಳಗಿನ ಭೂ ವೈವಿಧ್ಯತೆ ನಿಚ್ಚಳವಾಗಿ ಕಾಣಿಸುತ್ತದೆ. ಚಲನೆಯ ವೇಗವೂ ಅನುಭವಕ್ಕೆ ಬರುತ್ತದೆ.
ಕೇದಾರದಿಂದ ಹಿಂತಿರುಗಿ ಬರುವಾಗ 16 ಕಿ.ಮಿ ನಡೆದು ಗೌರಿಕುಂಡಕ್ಕೆ ಬಂದೆವು. ಎರಡೂ ವಿಶಿಷ್ಟವಾದ ಸ್ಮರಣಾರ್ಹ ಅನುಭವಗಳಾಗಿದ್ದುವು.
– ಹೇಮಮಾಲಾ.
ವಾಹ್, ವಾಹ್, ನಾನೇ ಹೆಲಿಕಾಪ್ಟರ್ ನಲ್ಲಿ ತಿರುಗಾಡಿದಂತೆ ಆಯಿತು
Excellent Writing.
ಪ್ರವಾಸ ಕಥನ ತುಂಬಾ ಚೆನ್ನಾಗಿದೆ…
ಥ್ಯಾಂಕ್ಸ್.. 🙂
ಖಂಡಿತಾ ನಿಮ್ಮ ಅನುಭವದ ಸಾಲುಗಳು ನಮ್ಮನ್ನೂ ತೇಲಿಸಿದವು.
ತೇಲುವ ಆ ಮೋಡದ ಮೇಲೆ ನನಗೂ ಹೋಗಬೇಕೆನ್ನಿಸಿತು
ಓದಿದ ಮೇಲೆ ಕೇದಾರನಾಥ ಕ್ಕೆ ಹೋಗಬೇಕೆಂದು ಆಸೆಯಾಗುತ್ತಿದೆ
ಧನ್ಯವಾದಗಳು..ನಿಮ್ಮಾಸೆಯಂತೆಯೇ ಸುಖಕರವಾಗಿ ಕೇದಾರನಾಥಕ್ಕೆ ಹೋಗಿ ಬರುವಂತಾಗಲಿ..
ಹೆಲಿಕಾಪ್ಟರ್ ಪ್ರಯಾಣದ ವಿವರಣೆ ಚೆನ್ನಾಗಿದೆ,
ಧನ್ಯವಾದಗಳು..
ಸುಂದರ ನಿರೂಪಣೆ.. 🙂