ಬಾಯಿ ಹುಣ್ಣು !…ಹೇಗೆ ಉಣ್ಣಲಿ ಇನ್ನು?!
ಇದು ಬಾಯಿ ಹುಣ್ಣು ಕಾಣಿಸಿಕೊಂಡಾಗ ಹಲವರ ಅಳಲು. ಬಾಯಿಯ ಒಳಭಾಗ(ನಾಲಿಗೆ,ವಸಡು,ಕೆನ್ನೆಯ ಒಳಭಾಗ ಹಾಗೂ ತುಟಿಯ ಒಳಭಾಗ) ದಲ್ಲಿಕಾಣಿಸಿಕೊಳ್ಳುವ ನೋವಿನಿಂದ ಕೂಡಿದ ಸಣ್ಣ ಗುಳ್ಳೆಗಳಿಗೆ ಬಾಯಿಹುಣ್ಣು (Mouth Ulcer) ಎನ್ನುವರು. ಒಂದರಿಂದ ಹಲವಾರು ಗುಳ್ಳೆಗಳು ಒಮ್ಮೆಲೇ ಕಾಣಿಸಿಕೊಳ್ಳಬಹುದು. ಏನನ್ನೂ ತಿನ್ನಲೂ,ಕುಡಿಯಲೂ ಹಾಗೂ ಮಾತನಾಡಲೂ ಆಗದಂತಹ ಪರಿಸ್ಥಿತಿ.ಸಾಧಾರಣವಾಗಿ ಏಳರಿಂದ ಹತ್ತು ದಿನಗಳೊಳಗೆ ಇದು ವಾಸಿಯಾಗುತ್ತದೆ. ಕೆಲವೊಂದು ಸರಳ ಚಿಕಿತ್ಸಾ ವಿಧಾನಗಳನ್ನು ಅನುಸರಿಸಿದರೆ ಶೀಘ್ರವಾಗಿ ಗುಣವಾಗುತ್ತದೆ.
ಕಾರಣಗಳು:-
- ಅತಿಯಾದ ಖಾರ ಹಾಗೂ ಉಷ್ಣ ಗುಣಯುಕ್ತ ಆಹಾರ ಸೇವನೆ.
- ಮಲಬದ್ಧತೆ ಮತ್ತು ನಿದ್ರಾಹೀನತೆ.
- ಕೆಲವೊಂದು ಔಷಧಿಗಳ ಅಡ್ಡಪರಿಣಾಮ.
- ಆಕಸ್ಮಿಕವಾಗಿ ಕಚ್ಚಿ ಹೋಗುವುದು / ಹಲ್ಲುಜ್ಜುವಾಗ ಉಂಟಾಗುವ ಗಾಯ.
- ಹಲ್ಲು ಸರಿಗೆ.
- ಪೋಷಕಾಂಶಗಳ ಕೊರತೆ (ಕಬ್ಬಿಣ, ಫೋಲಿಕ್ ಆಸಿಡ್,ವಿಟಾಮಿನ್ ಬಿ ಕಾಂಪ್ಲೆಕ್ಸ್)
- ಅತಿಯಾದ ತಂಬಾಕು ಸೇವನೆ.
- ಬಾಕ್ಟೀರಿಯ, ವೈರಸ್ ಅಥವಾ ಫಂಗಲ್ ಸೋಂಕು.
- ಮಧುಮೇಹ.
- ಮಾನಸಿಕ ಒತ್ತಡ.
ಸರಳ ಪರಿಹಾರ:-
- ಪೇರಳೆ/ಸೀಬೆ ಮರದ ಚಿಗುರು, ನೇರಳೆ ಚಿಗುರು, ಜಾಜಿ ಎಲೆ, ಬಸಳೆ ಎಲೆ,ದಾಸವಾಳ ಮೊಗ್ಗು – ಇವುಗಳಲ್ಲಿ ಯಾವುದಾದರೊಂದನ್ನು ದಿನಕ್ಕೆರಡು ಬಾರಿ ಜಗಿಯುವುದು.
- ಒಂದು ಚಮಚ ಜೇನು ಅಥವಾ ತುಪ್ಪವನ್ನು ಬಾಯೊಳಗಿಟ್ಟುಕೊಂಡು ಅದು ಜೊಲ್ಲುರಸದೊಡನೆ ಸೇರಿ ಬಾಯಿ ತುಂಬಿದಾಗ ಉಗಿಯುವುದು.
- ತೆಂಗಿನ ಮರದ ಎಳೆಯ ಕಾಯಿ (ಚೆಂಡೇಲು/ಚೆಂಡುರುಳೆ)ಯನ್ನು ನೀರಿನಲ್ಲಿ ತೇಯ್ದು ಹುಣ್ಣಿಗೆ ಹಚ್ಚುವುದು.
- ಒಂದು ಚಮಚ ತ್ರಿಫಲಾ /ಯಷ್ಟಿಮಧು ಚೂರ್ಣ(ಆಯುರ್ವೇದಿಕ್ ಮೆಡಿಕಲ್ ಸ್ಟೋರ್ ಗಳಲ್ಲಿ ಲಭ್ಯವಿದೆ)ವನ್ನು ಒಂದು ಗ್ಲಾಸ್ ನೀರಿನೊಂದಿಗೆ ಬೆರೆಸಿ ಕುದಿಸಿ ತಣಿಸಿ ಅದರಲ್ಲಿ ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸುವುದು.
- ಊಟದಲ್ಲಿ ಯಾವುದಾದರೂ (ನೆಲ್ಲಿಕಾಯಿ/ನೆಲ್ಲಿಂಡಿ/ಒಂದೆಲಗ/ಗಿನಕಿ ಸೊಪ್ಪು/ಕರಿಬೇವು/ಮೆಂತೆ) ತಂಬುಳಿಯನ್ನು ಬಳಸುವುದು.
ತಡೆಗಟ್ಟುವ ವಿಧಾನ:-
- ಕಾರಣಗಳನ್ನು ವರ್ಜಿಸುವುದೇ ಇದಕ್ಕೆ ಉತ್ತಮ ಪರಿಹಾರ.
- ಖಾರ ಹಾಗೂ ಮಸಾಲೆಯುಕ್ತ ಆಹಾರಗಳನ್ನು ಆದಷ್ಟು ಕಡಿಮೆ ಸೇವಿಸಬೇಕು.
- ದಿನವೂ ಸರಿಯಾಗಿ ಮಲಶೋಧನೆಯಾಗುವಂತೆ ನಾರಿನಿಂದ ಕೂಡಿದಂತಹ ತರಕಾರಿಗಳನ್ನು ಸೇವಿಸಬೇಕು. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು.
- ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು.ಕಬ್ಬಿಣ ಸತ್ವ ಹಾಗೂ ಫೋಲಿಕ್ ಆಸಿಡ್-ಪಾಲಕ್, ನುಗ್ಗೆ ಸೊಪ್ಪು, ಹರಿವೆ ಸೊಪ್ಪು,ಬೀಟ್ ರೂಟ್, ಬೆಂಡೆಕಾಯಿ, ಕಿತ್ತಳೆ.ವಿಟಾಮಿನ್ ಬಿ ಕಾಂಪ್ಲೆಕ್ಸ್-ಹಾಲು, ಚೀಸ್, ಮೊಸರು, ಬೀಜಗಳು (ನೆಲಗಡಲೆ,ಬಾದಾಮಿ,ಗೇರುಬೀಜ), ಮಾಂಸಗಳು,ಧಾನ್ಯಗಳು.
- ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಬೇಕು-ಸಂಗೀತಗಳನ್ನು ಕೇಳುವುದರ ಮೂಲಕ, ಉತ್ತಮಪುಸ್ತಕಗಳನ್ನು ಓದುವುದರ ಮೂಲಕ, ಯೋಗ,ಧ್ಯಾನ ಅಥವಾ ಯಾವುದೇ ಹವ್ಯಾಸಗಳನ್ನು ಬೆಳೆಸುವುದರ ಮೂಲಕ.
- ಚೆನ್ನಾಗಿ ನಿದ್ರಿಸಬೇಕು.
- ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳಬೇಕು.
- ತಂಬಾಕು ಸೇವನೆಯನ್ನು ವರ್ಜಿಸಬೇಕು.
ಬಾಯಿಹುಣ್ಣು ಹತ್ತುದಿನಗಳ ನಂತರವೂ ಕಡಿಮೆಯಾಗದಿದ್ದರೆ ಅಥವಾ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ ವೈದ್ಯರ ಸಲಹೆ ಅಗತ್ಯ.
– ಡಾ. ಹರ್ಷಿತಾ ಎಂ.ಎಸ್
Useful information for the common problem
Dhanyavaadagalu
Very nice information mam, thank you.
ಧನ್ಯವಾದಗಳು
ನಿಮ್ಮ ಅಮೂಲ್ಯವವಾದ ಸಲಹೆ ಗಳಿಗೆ ವಂದನೆಗಳು, ಹೀಗೆ ಯೆ ಮುಂದೆ ವರಿಸಿ
Dhanyavaadagalu
ನನ್ನ ಅನುಭವ ..ಚಿಕ್ಕಂದಿನಿದಲೇ ನಿರಂತರ ಬಾಯಿಹುಣ್ಣಿನ ತೊಂದರೆ..ಪ್ರಯೋಜನವಾಗದ.ಸಾಕಷ್ಟು ವೈದ್ಯರ ಭೇಟಿ…ಆತ್ಮೀಯ ಬಂಧುಗಳ ಸಲಹೆಯಂತೆ ದಿನಕ್ಕ್ರೆರಡು ಬಾರಿ ಲಿವ್-೫೨ ಸೇವನೆಯಿಂದ ನಿವಾರಣೆಯಾದ ತೊಂದರೆ ಇನ್ನು ವರೆಗೆ ಕಾಣಿಸಿಕೊಂಡಿಲ್ಲ….!!
Good information madam.. Liv 52 improves digestion, appetite and helps in proper absorption of nutrients…