ಯಾವ ಪ್ರೀತಿ ತಾನೆ ಸೋತಿದೆ? ಹೇಳು.
ಯಾವ ಪ್ರೀತಿ ತಾನೆ ಸೋತಿದೆ ಹೇಳು
ಧರ್ಮದ ದಿಕ್ಕೆಡಿಸುವ ಮತಾಂಧರ ಮೆದುಳುಗಳಲ್ಲಿ
ಚಿಗುರೊಡೆದ ದ್ವೇಷಾಸೂಯೆಗಳ
ಉರಿಯುವ ಜ್ವಾಲೆಗೆ
ಯಾವ ಕಾಲದ ಯಾವ ಯುಗದ
ಪ್ರೀತಿಸಿದ ಹೃದಯ ಬೂದಿಯಾಗಿ ಹೋಗಿದೆ ಹೇಳು.
ಬೇಕಿಲ್ಲ ಮೂರನೇ ಕಣ್ಣು
ನೆಲದಗಲಕ್ಕೂ ಹಬ್ಬುತಿಹ
ದ್ವೇಷದ ದಳ್ಳುರಿಯ ಕಾಣಲು
ನನಗೋ ಚರಿತ್ರೆಯ ದಾಸ್ಯದ ಬೇಡಿಗಳ ಬಂದನವಿದೆ
ಪವಿತ್ರಗ್ರಂಥಗಳು
ಬರೆದಿಟ್ಟ ಕರಾರುಗಳ ದಿಗ್ಬಂದನೆಯಿದೆ
ಕಿತ್ತೊಗೆದು ಬರಲೆಂದರೆ
.
ಆಕಾಶದಗಲಕ್ಕೂ ಹಾರಾಡುತ್ತಿವೆ ರಣಹದ್ದುಗಳು
ಯಾವ ಹದ್ದು ಯಾವ ಮಾಯದಲ್ಲಿ
ಬಂದೆರಗಿ ಕಣ್ಣು ಕುಕ್ಕುವುದೋ
ಗುಡ್ಡೆಯೊಳಗಿಂದ ನೆತ್ತರೆಲ್ಲುಕ್ಕಿ ಹರಿಯುವುದೊ
ಎಂಬ ಭಯದೊಳಗೆ ಬೆದರಿ ಕೂತಿಹೆ
ಆದರೂ ಎಂದಾದರೊಂದು ದಿನ
ನಿನ್ನ ಹೊಟ್ಟೆಯೊಳಗೆ ಹುಟ್ಟುವ ಮಗುವಿನಾಣೆಗೂ
.
ಹೀಗೆ ಹತ್ತಿ ಉರಿದ ಜ್ವಾಲೆ ಸುಟ್ಟು ಕರಕಲಾಗಿಸಿದ
ಮರದ ಬುಡದಲ್ಲೇ
ಹೊಸದೊಂದು ಹೂಬಳ್ಳಿ
ಚಿಗುರೊಡೆಯುವುದು
ಅವತ್ತು ನಾನದರ ಹೂವ ಕಿತ್ತು
ಎಣ್ಣೆ ನೀರೆರೆದ ನಿನ್ನ ತಲೆಗೂದಲಿಗೆ ಮುಡಿಸುವೆ
ಅಲ್ಲಿಯವರೆಗು ಕಾಯುವೆ
ಏನು?
– ಕು.ಸ.ಮಧುಸೂದನನಾಯರ್ , ರಂಗೇನಹಳ್ಳಿ