ಈ ಕೆಂಪಮ್ಮನ ಹೆಸರೆ ಡ್ರಾಗನ್ ಫ್ರೂಟು, ನೋಡಲೆ ಸೊಗಸು ಅವಳಾಕಿದ ಸೂಟು!
ಸಿಂಗಾಪುರದ ಹಣ್ಣಿನ ಮಾರುಕಟ್ಟೆಯೊಳಗೆ ಕಾಲಿಟ್ಟೆ – ಅದೋ, ಅಲ್ಲೆ ಎದುರುಗಡೆಯೆ ಸ್ವಾಗತಿಸುತ್ತಾ ಕಾಣಿಸಿಕೊಂಡ ‘ಡ್ರಾಗನ್ ಹಣ್ಣು’ ಕೇಳಿತು, “ಯಾಕೆ, ನಾನಿಲ್ಲವೆ?” ಎಂದು. ‘ಸರಿ, ಇಂದು ನಿನ್ನಯ ಪಾಳಿ’ ಎಂದನ್ನುತ್ತಲೆ, ಕೈಗೊಂದೆರಡು ಕೆಂಗುಲಾಬಿ ಕೆಂಪಿನ ಡ್ರಾಗನ್ ಹಣ್ಣುಗಳನ್ನೆತ್ತಿಕೊಂಡು ತರಕಾರಿ ಸಾಲಿನತ್ತ ಓಡಿದೆ. ಶಾಪಿಂಗು ಮುಗಿಸಿ ‘ಕ್ಯಾಶ್ ಕೌಂಟರಿನತ್ತ’ ಬಂದರೆ, ಅಲ್ಲಿ ನಿಜವಾದ ‘ಶಾಕ್’ ಕಾದಿತ್ತು – ನನಗೆ ತಿಳಿದಂತೆ ತೀರಾ ಅಷ್ಟೇನು ದುಬಾರಿಯಲ್ಲದ ಈ ಹಣ್ಣಿಗೆ ಕೆಜಿಗೆ ಐದು ಡಾಲರು ಬಿಲ್ಲು ಹಾಕಿದಾಗ! ಈ ಹಣ್ಣುಗಳ ‘ಸ್ಥೂಲ ಕಾಯದಿಂದಾಗಿ’ ಎರಡು ಹಣ್ಣೆ ಒಂದು ಕೇಜೀಗೂ ಮೀರಿ ತೂಕವಿತ್ತು. ಒಂದನ್ನು ವಾಪಸಿಟ್ಟುಬಿಡಲೆ ಅಂದುಕೊಳ್ಳುತ್ತಿರುವಾಗಲೆ, ಮನಸ್ಸು ಬದಲಿಸಿ ಎರಡನ್ನು ದುಬಾರಿ ಬೆಲೆ ತೆತ್ತು ಹೊತ್ತು ತಂದೆ. ಅದನ್ನು ಮನೆಗೆ ತಂದ ಮೇಲೆ , ಒಂದಷ್ಟು ಅದರ ಇತಿಹಾಸ ಕೆದಕಿದ ಮೇಲೆ ನಾ ತಂದ ಹಣ್ಣೇಕೆ ಅಷ್ಟೊಂದು ದುಬಾರಿಯೆಂದು ಗೊತ್ತಾಗಿ, ನಾನು ಟೋಪಿ ಬೀಳಲಿಲ್ಲವೆಂದು ತುಸು ಸಮಾಧಾನವಾಯ್ತು. ಅದು ಏಕೆ, ಎತ್ತ ಅನ್ನುವ ಪುರಾಣ ಊದುವ ಮೊದಲೆ, ಈ ಹಣ್ಣಿನ ಜಾತಕವನ್ನೊಂದಷ್ಟು ಅಲ್ಲಾಡಿಸಿ ಬರುವ ಬನ್ನಿ.
ಸಾಮಾನ್ಯರ ಆಡು ಭಾಷೆಯಲ್ಲಿ ‘ಡ್ರಾಗನ್ ಫ್ರೂಟ್’ ಎಂದೆ ಹೆಸರಾದ ಈ ಮನಮೋಹಕ ಆಕಾರ ಮತ್ತು ಬಣ್ಣದ ಸುಂದರಿಯ ನಿಜವಾದ ಹೆಸರು ‘ಪಿತಾಯ’ ಅಥವಾ ‘ಪಿತಹಾಯ’ ಎಂದು. ಸಾಧಾರಣವಾಗಿ ಕಡುಗೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಈ ನೀರೆ ಆಗಾಗ ಗುಲಾಬಿ ಅಥವ ಹಳದಿಯ ಸೀರೆಯಲ್ಲೂ ಮಿಂಚುವುದುಂಟಂತೆ. ನಮ್ಮ ಬಾಳೆಹಣ್ಣಿನ ಸಿಪ್ಪೆಯ ಹಾಗೆ ಸುಲಭದಲೆ ಬಿಚ್ಚಬಹುದಾದ ತೆಳುವಾದ ಸಿಪ್ಪೆಯನ್ನು ಹೊದ್ದಿರುವ ಈ ಹಣ್ಣಿನ ಸಿಪ್ಪೆಯೆ ಸಮೃದ್ದ ನಾರಿನ ಪೋಷಕಾಂಶದಿಂದ ಶ್ರೀಮಂತವಂತೆ – ಸಿಪ್ಪೆ ಶುಚಿಯಾಗಿದ್ದು ನೀವು ತಿನ್ನುವ ಧೈರ್ಯ ಮಾಡಿದರೆ! ಆದರೆ ಆ ಸಿಪ್ಪೆ ಬಿಚ್ಚುವಾಗ ನೀವು ತುಸು ದುಶ್ಯಾಸನನನ್ನು ನೆನೆದರೆ ಒಳಿತು – ಹೆಚ್ಚು ಕಡಿಮೆ ದ್ರೌಪದಿ ವಸ್ತ್ರಾಪಹರಣದಂತೆಯೆ ಈ ಡ್ರಾಗಿಣಿಯ ‘ಸಿಪ್ಪಾಪಹರಣವೂ’ ಆಗುವುದರಿಂದ ಮಹಾಭಾರತದ ಆ ಸೀನು ನೆನಪಿನಲ್ಲಿದ್ದರೆ, ಈ ವಿದೇಶಿ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಸುಲಭವು, ಅಷ್ಟೆ ರೋಚಕವೂ ಆದೀತು! ಅಂದಹಾಗೆ ವಿದೇಶಿ ನಾರಿಯರಿಗೆ ನಮ್ಮ ಹಾಗೆ ಮೈ ತುಂಬಾ ಬಟ್ಟೆಯುಟ್ಟು ರೂಢಿಯಿಲ್ಲವಲ್ಲಾ, ಈ ಡ್ರಾಗಿಣಿಯೇಕೆ ಹೀಗೆ? ಎಂದು ಕೇಳಬೇಡಿ – ಹಳೆ ಕಾಲದವಳಿರಬೇಕೆನ್ನಿ, ಸಂಪ್ರದಾಯದ ಗೊಡ್ಡು ಎನ್ನಿ – ತಲೆಯಿಂದ ಕಾಲಿನವರೆಗೆ, ತಲೆಯೂ ಸೇರಿದ ಹಾಗೆ ಇವಳು ಪೂರ್ತಿ ಒಳ ಸೇರಿರುವುದಂತೂ ನಿಜ! ಹೊರಗಿನ ಸಿಪ್ಪೆಯ ವಿನ್ಯಾಸ, ಲಾವಣ್ಯ, ಲಾಸ್ಯ ನೋಡಿದರೆ – ಅದನ್ನು ನೋಡೆ ಹೊಸ ಸೀರೆ ಡಿಸೈನುಗಳು ಹುಟ್ಟಿಕೊಂಡರೂ ಅಚ್ಚರಿಯಿಲ್ಲ! ಒಳಗೆ ಹಣ್ಣಿನ ರೂಪ, ಹೊರಗೆ ಸುಂದರ ಹೂವಿನ ಸೊಬಗಿನ ಚಳಕ ಹೊತ್ತ ಯಾವುದಾದರೂ ಹಣ್ಣಿನ ಉದಾಹರಣೆ ಕೊಡಿರೆಂದರೆ, ಈ ಹಣ್ಣನ್ನು ಕಣ್ಣು ಮುಚ್ಚಿಕೊಂಡು ಹೆಸರಿಸಬಹುದು!
ಹೊರಗಿನಿಂದಲೆ ನೋಡಲು ಭಾರಿ ಕುಳದಂತೆ ಕಾಣುವ ಈ ಹಣ್ಣಿನ ಒಳಭಾಗ ಮಾತ್ರ ಅಪ್ಪಟ ಬಂಗಾರಿ – ಒಳಗೆಲ್ಲ ಬಾಳೆಹಣ್ಣಿನ ಹಾಗೆ ಬರಿ ತಿನ್ನಬಹುದಾದ ತಿರುಳೆ; ಆದರೆ ಈ ರಸಭರಿತ ತಿರುಳಿನ ತುಂಬಾ ಸಹಸ್ರಾರು ತೆಗೆದು ಬಿಸಾಡಲಾಗದ ಸಣ್ಣ, ಸಣ್ಣ ಬೀಜಗಳು – ನಮ್ಮ ಸಹಸ್ರಾಕ್ಷನ ಹಾಗೆ (ಹಣ್ಣಿನ ಹೋಲಿಕೆಯೆ ಬೇಕೆಂದರೆ – ಕಿವಿ ಫ್ರೂಟಿನ ಹಾಗೆ ಎನ್ನಬಹುದು). ಆದರೆ ಹಾಗೆಂದು ಬೀಜದ ಒಳಗಿರಬಹುದಾದ ಕೊಬ್ಬಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ – ತುಸುವೆ ಕೊಬ್ಬಿರುವುದು ನಿಜವಾದರೂ, ಬರಿ ಅಸಂತೃಪ್ತ ಕೊಬ್ಬೆ ತುಂಬಿದ್ದು, ಟ್ರಾನ್ಸ್ ಫ್ಯಾಟಿನ ಹಂಗಿಲ್ಲದೆ ಇರುವುದರಿಂದ ತಲೆಕೆಡಿಸಿಕೊಳ್ಳುವ ಪ್ರಮೇಯವೇನಿಲ್ಲ – ಪೀಡ್ಜ, ಬರ್ಗರುಗಳಂತ ಎಷ್ಟೊ ಜಂಕು ಫುಡ್ಡುಗಳಿಗಿಂತ ಖಂಡಿತ ಎಷ್ಟೋಪಟ್ಟು ಕೆಳಮಟ್ಟದ ಕೊಬ್ಬಷ್ಟೆ ಇರುವುದು. ಅಂದ ಹಾಗೆ ಈ ಒಳ ತಿರುಳು ಸಾಮಾನ್ಯವಾಗಿ ಬಿಳಿ ಬಣ್ಣದಿದ್ದರೂ, ಹೆಚ್ಚು ರುಚಿಯಿರುವುದು ಮಾತ್ರ ಕೆಂಪನೆಯ ತಿರುಳಿನ ಹಣ್ಣಿಗೆ . ಹೀಗಾಗಿ ಕೆಂಪು ಕವಚದ ಕೆಂಪು ತಿರುಳಿನ ಹಣ್ಣಿಗೆ ಬೆಲೆಯೂ ಹೆಚ್ಚು – ಈಗ ತಿಳಿಯಿತೆ, ನಾನು ತಂದ ಹಣ್ಣಿಗೇಕೆ ತುಟ್ಟಿ ಬೆಲೆಯೆಂದು.
ಈ ಹಣ್ಣಿನ ಇನ್ನೊಂದು ವೈವಿಧ್ಯ ಹಳದಿ ಸೀರೆಯನುಟ್ಟ ಚೆಲುವೆ – ಆದರೆ ಒಳಗಿನ ತಿರುಳು ಮಾತ್ರ ಬಿಳಿಯೆ. ಅದೇನೆ ಇರಲಿ – ಹೊರಗಿನ , ಒಳಗಿನ ಬಣ್ಣ ಯಾವುದೇ ಇರಲಿ ಎಲ್ಲದರ ಬೀಜವೂ ಒಂದೆ ತರಹ, ಒಂದೆ ಬಣ್ಣ , ‘ ವಿವಿಧತೆಯಲ್ಲಿ ಏಕತೆ’ ಅನ್ನುವ ಹಾಗೆ! ಬಿಳಿ ತಿರುಳಿನ ಹಣ್ಣು ತುಸು ಮೆಲುವಾದ ಸಿಹಿಯ ಹೂರಣ ಹೊಂದಿದ್ದರೆ, ಕೆಂಪು ಹಣ್ಣು ಮಾತ್ರ ಅಪ್ಪಟ ರಸಭರಿತ ಸಿಹಿ – ತಿಂದ ಬಳಿಕವೂ ನಾಲಿಗೆಯ ಮೇಲುಳಿಯುವಷ್ಟು. ಸಾಧಾರಣ ಅರ್ಧ ಕೇಜಿಗೂ ಹೆಚ್ಚು ತೂಗುವ ಇಡಿ ಹಣ್ಣನ್ನು ಒಬ್ಬೊಬ್ಬರೆ ಒಂದೆ ಸಾರಿಗೆ ತಿಂದುಬಿಡುತ್ತಾರಂತೆ. ಆದರೆ ಈ ಬಣ್ಣ ನೈಸರ್ಗಿಕವಾದದ್ದೆ ಇದರಲ್ಲಿ ಗಾಬರಿಪಡಲೇನೂ ಇಲ್ಲ ಅನ್ನುತ್ತವೆ ಇದನ್ನು ಬೆಳೆಯುವ ಮೂಲಗಳು. ಅಲ್ಲದೆ ಇದರ ಔಷದೀಯ ಗುಣದಿಂದಾಗಿ ಬಿಳಿ ತಿರುಳಿಗಿಂತ ಕೆಂಪು ತಿರುಳೆ ಶ್ರೇಷ್ಠ (ಅದಕ್ಕೆ ಹೆಚ್ಚು ಬೆಲೆ ಕೂಡಾ) ಅನ್ನುತ್ತಾರೆ.
ಈ ಹಣ್ಣಿನ ಮತ್ತೊಂದು ಸಾಧಾರಣವಾಗಿ ಗೊತ್ತಿರದ ವೈಶಿಷ್ಟ್ಯವೆಂದರೆ – ಇದೊಂದು ಕ್ಯಾಕ್ಟಸ್ ಜಾತಿಗೆ ಸೇರಿದ ಹಣ್ಣು ಎಂಬುದು. ಮೂಲತಃ ಉತ್ತರ ಮತ್ತು ದಕ್ಷಿಣ ಅಮೇರಿಕಾ ಮೂಲಗಳಿಂದ ಜನಿಸಿ ವಲಸೆಗೊಂಡ ಈ ಹಣ್ಣು ಈಗ ಆಗ್ನೇಯ ಏಷಿಯಾ ಮತ್ತು ಪೂರ್ವ ಏಷಿಯಾ ಭಾಗಗಳಲ್ಲಿ ಹೇರಳವಾಗಿ ಬೆಳೆಯಲ್ಪಡುವ ಹಣ್ಣು. ಇದರ ಹೂವ್ವುಗಳು ರಾತ್ರಿ ಮಾತ್ರವೆ ಅರಳುವುದಂತೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿಂದ ಕರೆದರೂ – ಎಲ್ಲಾ ಕಡೆ ಹೆಚ್ಚು ಕಡಿಮೆ ಡ್ರಾಗನ್ನಿನ ಹೆಸರಿರುವುದು ಕುತೂಹಲಕರ!
ಡ್ರಾಗನ್ ಫ್ರೂಟ್ ನಲ್ಲಿ ಸುಲಭದಲ್ಲಿ ಹೀರಿಕೊಳ್ಳಲ್ಪಡುವ ವಿಟಮಿನ್ ‘ಸಿ ’ಯಥೇಚ್ಚವಾಗಿದೆ. ಇದರ ಸರ್ವೋತ್ತಮ ಆರೋಗ್ಯದ ಯೋಗ್ಯತೆಯೆಂದರೆ ‘ಉತ್ಕರ್ಷಣ ನಿರೋಧಕ’ ಗುಣ (ಆಂಟಿ ಆಕ್ಸಿಡೆಂಟ್ ಗುಣ). ಸಿಪ್ಪೆ ಮತ್ತು ಹಣ್ಣಿನಲ್ಲಿ ನಾರಿನಂಶ ಹೇರಳವಾಗಿದೆ ಹಾಗೂ ಹಾನಿಕಾರಕವಾದ ಕೊಬ್ಬು ಮತ್ತು ಕೊಲೆಸ್ಟೆರಾಲ್ ಅತಿ ಕಡಿಮೆ ಇವೆ.
.
– ನಾಗೇಶ ಮೈಸೂರು (ಸಿಂಗಾಪುರ ).
ಲೇಖನ ಚೆನ್ನಾಗಿದೆ…
ಧನ್ಯವಾದಗಳು 🙂