ಕಾಯುವಿಕೆ
ಅದೊಂದು ಸದ್ದಿಗೆ ಕಾಯುತ್ತ!
ಸುರಿಯುವ ಮೊದಲ ಮಳೆಯ ಕೊನೆಯ ಹನಿ
ತಲುಪುವ ಮುಂಚೆಯೇ ನೆಲಕೆ ನಡೆದು ಬಿಟ್ಟೆ
ದಡಾರನೆ ಬಾಗಿಲು ತೆಗೆದ ರಭಸಕ್ಕೆ ಮಳೆಯ ಇರುಚಲು
ಬಡಿದು ನಡುಮನೆಯೆಲ್ಲ ಒದ್ದೆಯಾಯಿತು
ಆಮೇಲಿನದನ ಹೇಳಲಿ
ಮಳೆ ನಿಂತಮೇಲೂ ತೊಟ್ಟಿಕ್ಕುತ್ತಲೇ ಇದ್ದ
ಹನಿಗಳ ತಟಪಟ ಸದ್ದಿಗೆ ನಿದ್ದೆ ಬಾರದೆ
ನೆನಪುಗಳ ಹೆಕ್ಕುತ್ತಾ ಕೂತೆ
ಮುಚ್ಚಿದ ಬಾಗಿಲ ಮೇಲೆ ನಿನ್ನ ಬೆರಳುಗಳು
ಬೀಳಬಹುದೆಂದುಕೊಂಡು
ಬಡಿತದ ಸದ್ದಿಗೆ ಕಿವಿಗೊಟ್ಟು ಕೂತೆ
ಶತಮಾನಗಳ ಕಾಲವೂ
ಅದೊಂದು ಸದ್ದಿಗೆ ಕಾಯುತ್ತ!
– ಕು.ಸ.ಮಧುಸೂದನನಾಯರ್