ಯುಗಾದಿಯ ದ್ವಿಪಾತ್ರ..

Spread the love
Share Button

Vijaya Subrahmanya

ಯುಗದ ಆದಿಯೇ ಯುಗಾದಿ.ಅರ್ಥಾತ್ ಸಂವತ್ಸರದ ಆರಂಭ.ಋತುರಾಜ ವಸಂತನ ಶುಭಾಗಮನ ದಿನ.ಯುಗಾದಿಯನ್ನು ಹಬ್ಬವನ್ನಾಗಿ ಆಚರಿಸುವುದು ಭಾರತೀಯ ಸಂಸ್ಕೃತಿ-ಪರಂಪರೆಯ ಕೊಡುಗೆ.

ಯುಗಾದಿಯ ವೈಶಿಷ್ಟ್ಯಃ- ಒಂದು ಕುಟುಂಬದಲ್ಲಿ ಒಂದು ಶಿಶುವಿನ ಜನನವಾದಾಗ ಮನೆಮಂದಿಗೆ ಹೇಗೆ ಹರ್ಷೋಲ್ಲಾಸವಾಗುವುದೋ ಅಂತೆಯೇ ನೂತನ ಸಂವತ್ಸರದ ಆಗಮನದ ವೇಳೆಯೂ ಸಡಗರ ಸಂಭ್ರಮ ಪಡುವುದು ರೂಢಿ.ಚೈತ್ರಮಾಸದ ಶುಕ್ಲ ಪ್ರತಿಪದೆ[ಪಾಡ್ಯ]ಯ ದಿನ ಯುಗಾದಿ.ಈ ಬಾರಿ 8-4-2016 ನೇ ಶುಕ್ರವಾರ ಚಾಂದ್ರಮಾನ ಯುಗಾದಿ.ಸೌರಮಾನ ಯುಗಾದಿ [ವಿಷುಕಣಿ 14-4-2016]

            “ಚೈತ್ರಮಾಸಿ ಜಗದ್ಬ್ರಹ್ಮಾ ಸಸರ್ಜ  ಪ್ರಥಮೇ ಹನಿ|

            ಶುಕ್ಲಪಕ್ಷೇ ಸಮಗ್ರಂತು  ತದಾ ಸೂರ್ಯೋದಯೇ ಸತಿ||”

ಎಂಬ ಸೂಕ್ತಿಯಂತೆ ಚೈತ್ರಮಾಸದ ಸೂರ್ಯೋದಯವಾದೊಡನೆ ಬ್ರಹ್ಮನು ಸಂಪೂರ್ಣ ಜಗತ್ತನ್ನು ಸೃಷ್ಟಿಸಿದನಂತೆ.

ಯುಗಾದಿಯಲ್ಲಿ ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ಎಂಬುದಾಗಿ ಎರಡು ವಿಧ.ಚಂದ್ರನ ಬೆಳಕಿಗೆ ಮತ್ತು ಚಲನೆಗೆ ಸೂರ್ಯನೇ ಆಧಾರವೆಂದಾದರೂ ಪ್ರಾಚೀನರು ಚಾಂದ್ರಮಾನದ ಲೆಕ್ಕಾಚಾರವನ್ನು ರೂಪಿಸಿದರು.ಭೂಮಿಯಲ್ಲಾಗುವ  ಕಾಲಪರಿವರ್ತನೆಗೆ ಸೂರ್ಯನೇ ಕಾರಣವೆಂದು ಸೌರಮಾನ ತಿಂಗಳನ್ನು ಲೆಕ್ಕಹಾಕಿ ಸೂರ್ಯನು ಮೇಷರಾಶಿಗೆ ಬಂದಾಗ ಸೌರಮಾನ ಯುಗಾದಿ[ವಿಷು] ಆರಂಭವಾಯಿತು.ನಮ್ಮ ಪಂಚಾಂಗಗಳು ಚಾಂದ್ರಮಾನ ಯುಗಾದಿಯಂದು ಆರಂಭವಾಗುತ್ತದೆ. ತಿಥಿ,ವಾರ,ನಕ್ಷತ್ರ,ಯೋಗ, ಕರಣ ಎಂಬುದಾಗಿ ದಿನಕ್ಕೆ ಐದು ಅಂಗಗಳನ್ನು ರೂಪಿಸಿ ಪಂಚಾಂಗ ಎಂದು ಕರೆದರು.

ಆಚರಣೆಃ- ನಮ್ಮ ದೇಹ,ಆತ್ಮ,ಮನಸ್ಸು, ವಾಕ್, ಚಿತ್ತ, ಅಶನ, ವಸನ ಹಾಗೂ ವಾತಾವರಣ ಇವುಗಳೆಲ್ಲದರ   ಶುದ್ಧಿಯೇ ವ್ರತ-ಪರ್ವಗಳ ಆಚರಣೆ.ಇಲ್ಲಿ  ಅಸುರೀ ಶಕ್ತಿಯ ವಿರುದ್ಧ ಮಾನವತಾ ಶಕ್ತಿ, ದೇವತಾ ಶಕ್ತಿಯ ವಿಜಯದ ಸಂಕೇತವೇ ಯುಗಾದಿ. ಈ ದಿನ ರಾಮನು ರಾವಣನನ್ನು ಕೊಂದು ಅಯೋಧ್ಯೆಗೆ  ಮರಳಿ ರಾಮರಾಜ್ಯವಾಳಲು ಪ್ರಾರಂಭಿಸಿದ  ಎಂಬ ಉಲ್ಲೇಖವೂ ಇದೆ. ದಿನ ನಿತ್ಯ ಪ್ರಾತಃಕಾಲ ಎದ್ದೊಡನೆ ಮುಖ ಮಾರ್ಜನ ಮಾಡಿಕೊಂಡು ಪಂಚಾಂಗವನ್ನು ಓದಬೇಕಂತೆ.ಆದರೆ ಯುಗಾದಿಯಂದು ಮಾತ್ರ ವರ್ಷದ  ಇಡೀ ಫಲವನ್ನು ಓದಬೇಕೆಂದು ಸಂಪ್ರದಾಯ ತಂದರು. ಮಂಗಳಸ್ನಾನ,ನೂತನ ವಸ್ತ್ರಧಾರಣೆ, ವಿಶೇಷ ಅಡುಗೆ ಈ ಮುಖೇನ ಯುಗಾದಿ ಆಚರಣೆ. ಅಲ್ಲದೆ ಬೇವು-ಬೆಲ್ಲ ಸಮನಾಗಿ ಹಂಚಿಕೊಂಡು ತಿನ್ನುವ ಪದ್ಧತಿ. ಸಿಹಿ-ಕಹಿಗಳೆರಡೂ ಬಾಳಿನ ಎರಡು ಮುಖಗಳು.ಸಿಹಿ ಬಂದಾಗ ಹಿಗ್ಗದೆ, ಕಹಿ ಬಂದಾಗ ಕುಗ್ಗದೆ ಎದುರಿಸುವ ಎದೆಗಾರಿಕೆ ಬೆಳೆಸಬೇಕೆಂಬುದೇ ಯುಗಾದಿಯ ಸಂದೇಶ.ಇದುವೇ ಬೇವು-ಬೆಲ್ಲ ತಿನ್ನುವ ತಿರುಳು.ಆರೋಗ್ಯ ದೃಷ್ಟಿಯಿಂದಲೂ ದೇಹಕ್ಕೆ ಒಳ್ಳೆಯದು.ಕ್ರಿಮಿನಾಶಕ, ರೋಗನಿರೋಧಕ ಹಾಗೂ ಸಕ್ಕರೆಕಾಯಿಲೆಯನ್ನು ಹಿಮ್ಮೆಟ್ಟಿಸುವ ಅತ್ಯಂತ ಪರಿಣಾಮಕಾರಿ ಔಷಧಿ ಎಂಬುದನ್ನಿಲ್ಲಿ ನೆನಪಿಸಬಹುದು.

      festivals-ugadi-bevu-bella   Vishu Kani......

ಸೌರಮಾನ  ಯುಗಾದಿಗೆ ’ವಿಷುಕಣಿ’ ಎಂಬುದಾಗಿ ಹಲ-ಫಲ,ಧನ-ಕನಕಾದಿ ಸುವಸ್ತುಗಳೊಂದಿಗೆ ಇಟ್ಟು ದೀಪಹಚ್ಚಿ;ದೇವರಿಗೂ ಗುರು-ಹಿರಿಯರಿಗೂ ನಮಸ್ಕರಿಸಿ ಆಶೀರ್ವಾದ ಪಡೆಯುವುದು, ಹಾಗೂ ಹಿರಿಯರೆಲ್ಲರೂ ಕಿರಿಯರಿಗೆ ಆಶೀರ್ವದಿಸುವುದು ಸಂಪ್ರದಾಯ.ಅದಲ್ಲದೆ ಗದ್ದೆ ಬೇಸಾಯಕ್ಕೆ ನೊಗ-ನೇಗಿಲು ಹಿಡಿಯುವುದಕ್ಕೆ ಮುಹೂರ್ತ ವಿಷುಕಣಿ ದಿವಸ[ಮೇಷಮಾಸ ಒಂದನೇ ದಿನ]. ಪೇಟೆ-ಪಟ್ಟಣಗಳಲ್ಲಿರುವವರು ತಮ್ಮ ಹಿರಿಯರಿರುವ ಮೂಲ ಮನೆಗೆ ತೆರಳಿ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಈ ದಿನ ನೂತನ ವಧುವು ತನ್ನ ಪತಿಯೊಂದಿಗೆ ತವರಿಗೆ ಬಂದು ಹೋಗುವುದು ಕೇರಳೀಯರ ಪರಂಪರೆಯ ವಿಶಿಷ್ಟ ಪದ್ಧತಿ.

ಆಧ್ಯಾತ್ಮಿಕ ತತ್ವಃ-ಯುಗಾದಿಯಂದು ಪಂಚಾಂಗಶ್ರವಣ ಮಾಡಿದವನಿಗೆ ಗಂಗಾಸ್ನಾನ ಮಾಡಿದ ಫಲ ದೊರೆಯುವುದಂತೆ.

ಕ್ರಿಸ್ತಶಕ ಆರಂಭವಾಗಿ ಕೆಲ ವರ್ಷಗಳ ತರುವಾಯ ಶಾಲಿವಾಹನ ಶಕೆ ಆರಂಭವಾಗುತ್ತದೆ.ದಕ್ಷಿಣಭಾರತದಲ್ಲೆಲ್ಲಾ ಈ ಶಕೆ ಬಳಕೆಯಲ್ಲಿದೆ. ನಮ್ಮ ಪಂಚಾಂಗಗಳು ಈ ಶಕೆಯನ್ನೇ ಹೇಳುತ್ತವೆ.ಶಕರು ನಮ್ಮ ದೇಶದ ಮೇಲೆ ಧಾಳಿಮಾಡಿದಾಗ; ಆ ದಿನಗಳಲ್ಲಿ, ನರ್ಮದಾ-ಕಾವೇರಿಗಳ ನಡುವೆ ರಾಜ್ಯವಾಳುತ್ತಿದ್ದ ಶಾಲಿವಾಹನ ಅವರ ಬಲವನ್ನು ಮುರಿದು ವಿಜಯಪತಾಕೆ ಹಾರಿಸಿದ.ಅದು ಚೈತ್ರ ಶುದ್ಧ ಪ್ರತಿಪದೆಯ ದಿನ.ಮುಂದೆ ಭಾರತದಲ್ಲಿ ಶಕರು ನಿರ್ನಾಮವಾದರು.ಶಾಲಿವಾಹನ ಬಂದ ಎಂಬುದಾಗಿ ಚರಿತ್ರೆ ಹೇಳುತ್ತದೆ.

ಕಾಲ ಪರಿಮಾಣಃ-ಬ್ರಹ್ಮನ ಬದುಕಿನಲ್ಲಿ ಶ್ವೇತವರಾಹಕಲ್ಪವೆಂದು ಒಂದು ಹಗಲು.ಈ ಹಗಲಿನಲ್ಲಿ ಇದು ಏಳನೇ ವೈವಸ್ವತ ಮನ್ವಂತರ ಇಪ್ಪತ್ತೆಂಟನೆ ಮಹಾಯುಗದ ನಾಲ್ಕನೇ ಪಾದವಾದ ಕಲಿಯುಗದಲ್ಲಿ ಈ ಯುಗಾದಿಗೆ ಸಂದ ವರ್ಷಗಳು 5117. ಕಲಿಯುಗದಲ್ಲಿ ಯುದಿಷ್ಠಿರ, ವಿಕ್ರಮಗಳೆಂಬ ಎರಡು ಶಕಗಳು ಮುಗಿದು; ಮೂರನೆಯದಾದ ಶಾಲಿವಾಹನ ಶಕದಲ್ಲಿ ಸಂದ ವರ್ಷಗಳು ಈ  ’ದುರ್ಮುಖ’ ಸಂವತ್ಸರಕ್ಕೆ ಸಂದ ವರ್ಷಗಳು 1938. ಪ್ರತಿಯೊಂದು ಸಂವತ್ಸರದಲ್ಲೂ ಎರಡು ಅಯನಗಳು, ಮೂರುಕಾಲ ಭೇದಗಳು.ಆರು ಋತುಗಳು,ಹನ್ನೆರಡು ಮಾಸಗಳು. ಹೀಗೆ ವರ್ಷಕ್ಕೊಮ್ಮೆ ಪುನರಾವರ್ತಿಸುವ  ನಿಸರ್ಗದ ಕಾಲಚಕ್ರ ನಿರಂತರ ಉರುಳುತ್ತಾ ಇದ್ದು ಅರಿತು ಬದುಕುವವನಿಗೆ ಜೀವನಾನುಭವ ನೀಡುತ್ತದೆ.ಒಳ್ಳೊಳ್ಳೆಯ ಸಂದೇಶಗಳನ್ನೂ ಕೊಡುತ್ತದೆ.

ಹೆರಿಗೆಯಾದ ತಾಯಿ ಮಗುವಿನ ಮುಖ ನೋಡುತ್ತಲೇ ತಾನು ಅದುವರೆಗೆ ಅನುಭವಿಸಿದ ನೋವನ್ನು ಮರೆತು;ಮಗುವಿನ ಬೆಳವಣಿಗೆಯತ್ತ ಗಮನಹರಿಸುತ್ತಾಳೆ. ಅಂತೆಯೇ ಯುಗಾದಿಯ ಸಡಗರ-ಸಂಭ್ರಮದಲ್ಲಿ ನಮ್ಮ ಹಿಂದಿನ ಕಷ್ಟಗಳನ್ನು ಮರೆಯೋಣ.ಮುಂದಿನ ಸುಖಬದುಕಿನ ಆಶಾಭಾವನೆ ತಾಳೋಣ.ಜೀವನದಲ್ಲಿ ಉತ್ಸಾಹವನ್ನು ತಾಳೋಣ. ಕತ್ತಲೆಯಿಂದ ಬೆಳಕಿನತ್ತ ಸಾಗೋಣ.

ಈ ದುರ್ಮುಖ ನಾಮ ಸಂವತ್ಸರದಲ್ಲಿ ಯಾವುದೇ ವಿಚಾರದ ಕೆಟ್ಟಮುಖವನ್ನು ಅಳಿಸಿಹಾಕಿ ಒಳ್ಳೆಯ ಮುಖ ನೀಡುವಂತೆ ಸುಮುಖ[ ಗಣಪತಿ] ನಲ್ಲಿ ಪ್ರಾರ್ಥಿಸುತ್ತಾ ಭರವಸೆಯ ಭಾವವನ್ನು ನಿರೀಕ್ಷಿಸೋಣವೇ..

 

 – ವಿಜಯಾಸುಬ್ರಹ್ಮಣ್ಯ, ಕುಂಬಳೆ

 

6 Responses

 1. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ಪ್ರಕಟ ಪಡಿಸಿ ಸಹಕರಿಸಿದ ಸಂಪಾದಕಿ ಹೇಮಮಾಲಾ ಹಾಗೂ ಓದಿ ಲೈಕ್ ಕೊಟ್ಟ ಆತ್ಮೀಯರಿಗೂ ವಿಷು ಹಬ್ಬದ ಪ್ರಯುಕ್ತ ವಿಶೇಷ ಶುಭಾಶಯಗಳೊಂದಿಗೆ ವಿಜಯಕ್ಕ.

 2. Anantha Indaje says:

  ಯುಗಾದಿ(ಸೌರ) ಮೇಷಕ್ಕೆ ಸೂರ್ಯನ ಪ್ರವೇಶವನ್ನು ಪ್ರತಿನಿಧಿಸಿ…..; “ಮಗುವಿನ ಮೊಗಕಂಡ ತಾಯಿ ಕಷ್ಟಗಳನ್ನು ಮರೆತು ಮಗುವಿನ ಏಳ್ಗೆಗೆ ಹಾರೈಸುವಂತೆ ” ನಾವು ನಿರೀಕ್ಷೆ, ಸಾಧನೆಗಳ ಹಾದಿಯಲ್ಲಿ ಸಾಗಬೇಕೆಂದ ಮಾತು ಖುಷಿ ನೀಡಿತು. ಮರೆತು ಕಷ್ಟಗಳ.., ಮೆರೆಸೋಣ ನಾಳೆಗಳ….!! ಯುಗಾದಿಯ (“ಬಿಸುಕಣಿ”ಗೆ “ಬೈಸಾಕಿ” “ವಿಶುಸಂಕ್ರಮಣ” ಕ್ಕೆ ತುಳಸಿಕಟ್ಟೆಯ ಮುಂದೆ ದೀಪ ಬೆಳಗಿ) ಶುಭಾಶಯಗಳು.!

  • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

   ಆನಂತ ಇಂದಾಜೆಯವರ ಭಾವಪೂರ್ಣ ಖುಶಿಗೆ ಹೃತ್ಪೂರ್ವಕ ಧನ್ಯವಾದಗಳು.ಇತೀ ವಿಜಯಕ್ಕ.

 3. Shankari Sharma says:

  ಯುಗಾದಿಯ ಉಪಯುಕ್ತ ಮಾಹಿತಿಗಳಿಗೆ ಧನ್ಯವಾದಗಳು…

  • ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

   ಶಂಕರಿ ಶರ್ಮ ಓದಿಮೆಚ್ಚಿಕೊಂಡ ನಿಮಗೆ ಧನ್ಯವಾದಗಳು

 4. ಉಪಯುಕ್ತ ಮಾಹಿತಿ ಹಂಚಿಕೊಂಡ ನಿಮಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: