ಅವರೇಕಾಳಿನ ಉಸ್ಲಿ ಮತ್ತು ಬಸ್ಸಾರು

Spread the love
Share Button

Hema trek Aug2014

 

 

ಅವರೆಕಾಯಿಯ ಸೀಸನ್ ಆರಂಭವಾಗಿ ಕೆಲವು ದಿನಗಳಾದವು…

ನಮ್ಮ ಅಡುಗೆಮನೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತವಾದರೂ ಅವರೇಕಾಯಿಯನ್ನು ಅಷ್ಟಾಗಿ ಸ್ವಾಗತಿಸಿರಲಿಲ್ಲ. ಯಾಕೆಂದರೆ ಅದರ ವಿವಿಧ ಅಡುಗೆ/ತಿಂಡಿಗಳು ಬಹಳ ರುಚಿ ಇರುತ್ತವಾದರೂ ತಿಂದ ಮೇಲೆ “ಕಾಲಪುರುಷಂಗೆ ಗುಣಮಣಮಿಲ್ಲಂಗಡ…ಜಡಂಗಡ….ಒಡಲೊಳು ಗುಡುಗುಟ್ಟುಂಗಡ “ ಎಂಬ ಮುದ್ದಣ ಕವಿಯ  ಹಳೆಗನ್ನಡ ಕಾವ್ಯದ ಸಾಲನ್ನು ನೆನಪಿಸುತ್ತದೆ!

ಅವರೆಕಾಯಿ ಪ್ರಿಯರ ಮನೆಗಳಲ್ಲಿ ಅವರೆಕಾಳಿನ ಉಪ್ಪಿಟ್ಟು/ಇಡ್ಲಿಯಿಂದ ದಿನ ಆರಂಭವಾಗಿ, ಮಧ್ಯಾಹ್ನದ ಊಟಕ್ಕೆ ಅವರೆಕಾಳಿನ ಭಾತ್, ಅವರೆಕಾಳಿನ ಉಸ್ಲಿ, ಬಸ್ಸಾರು, ಕೂಟು, ಹುಳಿ, ಪಾಯಸ ಇತ್ಯಾದಿ ಮೇಳೈಸಿದರೆ, ಸಂಜೆಯ ತಿಂಡಿಯಾಗಿ ಅವರೆಕಾಳಿನ ಆಂಬೊಡೆ, ಮೇಲಿಷ್ಟು ಕುರುಕಲು ಅವರೇಕಾಳಿನ ಹುರಿಗಾಳು ಸೇರಿ ಸಂಪನ್ನಗೊಳ್ಳುತ್ತದೆ. ಅವರೆಕಾಯಿ ಸೀಸನ್ ಮುಗಿಯುವ ವರೆಗೂ ತರಾವರಿ ಸಿಹಿ/ಖಾರ ಖಾದ್ಯಗಳನ್ನು ತಯಾರಿಸಿ ಉಣ್ಣುತ್ತಾರೆ.

ಇತರ ತರಕಾರಿಗಳನ್ನು ಧಾರಾಳವಾಗಿ ಕೊಳ್ಳುವ ನಾನು ಅವರೆಕಾಯಿಯನ್ನು ಒಮ್ಮೆಯೂ ಕೊಳ್ಳದಿರುವುದನ್ನು ಗಮನಿಸಿದ ನಮ್ಮ ಮನೆಯ ಸಹಾಯಕಿ ವನಜಮ್ಮಳಿಗೆ ‘ವರ್ಲ್ದ್ ಫೇಮಸ್’ ಅವರೆಕಾಯಿಗೆ ಈ ಪರಿಯ ಅವಮಾನ ಸಲ್ಲದು ಅನಿಸಿ ನನ್ನ ಮೇಲೆ ಕೋಪವೇ ಬಂದಿರಬೇಕು.

 

Avarekalu

“ಯಾಕಕ್ಕಾ ಅವರೆಕಾಯಿ ಕೊಳ್ಳಲ್ಲ..ಈಗ ಚನ್ನಾಗಿರುತ್ತೆ….” ಅಂದಳು. ಅವಳಿಗೊಂದು ಹಾರಿಕೆಯ ಉತ್ತರವಾಗಿ “ಅವರೇಕಾಳು ಬಿಡಿಸಲು ನನಗೆ ಸಮಯವಿಲ್ಲ” ಅಂದಿದ್ದೆ.

ಆದರೆ ನಮಗೆ ಅವರೇಕಾಯಿ ತಿನ್ನಿಸಲು ಪಣತೊಟ್ಟ ಆಕೆ ಈವತ್ತು ಸುಮಾರು ಅರ್ಧ ಕೆ.ಜಿ ಆಗುವಷ್ಟು ಬಿಡಿಸಿದ ಅವರೆಕಾಳುಗಳೊಂದಿಗೆ ಬಂದು “….ತಗೊಳ್ಳಿ ಸೋನೆ ಅವರೆಕಾಳು ಚೆನ್ನಾಗಿದೆ. ಕಾಳು ಬೇಯಿಸೋವಾಗ್ಲೇ ಉಪ್ಫಾಕಿ……ಆಮೇಲೆ ಹಾಕಿದ್ರೆ ಚೆನ್ನಾಗಿರಲ್ಲ….. ಧಾರಾಳವಾಗಿ ಬೆಳ್ಳುಳ್ಳಿ, ಈರುಳ್ಳಿ, ಕಾಯಿ, ಒಗ್ಗರಣೆ ಹಾಕಿ ಉಸ್ಲಿ ಮಾಡಿ….. ಹಾಂಗೇ ಕಾಳು ಬೇಯಿಸಿ, ಬಸಿದ ನೀರಿಗೆ ಒಂದಿಷ್ಟು ಸಾರಿನ ಪುಡಿ, ಅದೇ ಉಸ್ಲಿ ಸ್ವಲ್ಪ, ಒಂದು ಟೊಮ್ಯಾಟೊ. ಒಂಚೂರು ಶುಂಠಿ, ಬೆಳ್ಳುಳ್ಳಿ ರುಬ್ಬಾಕಿ ಬಸ್ಸಾರು ಕುದಿಸಿ..ಕೊತ್ತಂಬರಿ ಸೊಪ್ಪು-ಕರಿಬೇವು ಒಗ್ಗರಣೆ ಕೊಡಿ…..ಏನು ಸೂಪರ್ ಆಗಿರುತ್ತೆ…ಈಗ ತಿಂದ್ರೆ ಸರಿ, ಸಂಕ್ರಾಂತಿ ನಂತ್ರ ಅವರೇಕಾಯಿ ಚೆನ್ನಾಗಿರೋದು ಸಿಗಲ್ಲ…ಒಣಕಲು ಬರುತ್ತೆ ” ಎಂದು ಸಲಹೆ, ಅಡುಗೆಯ ವಿಧಾನ ಹಾಗೂ ಈಗ ತಿನ್ನದಿದ್ದರೆ ಆಗಬಹುದಾದ ನಷ್ಟದ ಬಗ್ಗೆ ಮಾರ್ಗದರ್ಶನ… ಎಲ್ಲವನ್ನೂ ಏಕಕಾಲದಲ್ಲಿ ಮನವರಿಕೆ ಮಾಡಿಕೊಟ್ಟಳು. ಅವಳ ಪ್ರೀತಿಗೆ ಮೂಕಳಾದೆ.

‘ಧಾರಾಳವಾಗಿ’ ಬೆಳ್ಳುಳ್ಳಿಯ ಸಿಪ್ಪೆ ಬಿಡಿಸುವುದು ನನಗೆ ಇಷ್ಟವಾಗದ ಕೆಲಸ. ಅದಕ್ಕೆ ಸುಲಭೋಪಾಯ ಏನಾದರೂ ಇದೆಯೇ ಎಂದು ಗೂಗಲ್ ಮೊರೆ ಹೊಕ್ಕಾಗ ನಿರಾಸೆಯಾಗಲಿಲ್ಲ. ಒಂದು ಮುಚ್ಛಳವಿರುವ ಪಾತ್ರೆಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಒಂದೆರಡು ನಿಮಿಷ ಚೆನ್ನಾಗಿ ಕುಲುಕಿದರೆ ಬೆಳ್ಳುಳ್ಳಿಯ ಸಿಪ್ಪೆ ಸುಲಭವಾಗಿ ತಾನಾಗಿ ಬೇರ್ಪಡುತ್ತದೆ ಎಂದಿತು ಗೂಗಲ್. ಅದನ್ನೂ ಪ್ರಯತ್ನಿಸಿದ್ದಾಯಿತು. ಸುಲಭವಾಗಿ ಬೆಳ್ಳುಳ್ಳಿ ಎಸಳುಗಳ ಸಿಪ್ಪೆ ಸುಲಿದಾಯಿತು.

 

Garlic peeling      Avarekayi usli -Bassaru

 ಹೀಗೆ ಸಿದ್ಧವಾಯಿತು, ಅವರೇಕಾಳಿನ ಉಸ್ಲಿ ಮತ್ತು ಬಸ್ಸಾರು…..

 

 

 – ಹೇಮಮಾಲಾ.ಬಿ

 

1 Response

  1. Srividya says:

    ಅವರೇಕಾಳು ಉಪ್ಪಿಟ್ಟು ಟ್ರೈ ಮಾಡಿ.
    ಬೆಳ್ಳುಳ್ಳಿ ಧಾರಾಳ ಅಂದರೆ ಬೆವರು ದುರ್ಗಂಧನೂ ಸಹಿಸಬೇಕಾಗುತ್ತೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: