ನಾನೆಲ್ಲಕೂ ಆಗಬಲ್ಲ ನೆಲ್ಲಿಕಾಯಿ…
ಮನೆ ಮುಂದಿನ ರಸ್ತೆಯಲ್ಲಿ “ನೆಲ್ಲಿಕಾಯಿ…ನೆಲ್ಲಿಕಾಯಿ…..” ಅನ್ನುತ್ತಾ ಮಾರಿಕೊಂಡು ಹೋಗುತ್ತಿದ್ದರು. ಆ ಕ್ಷಣದ ಹುರುಪಿನಲ್ಲಿ 2 ಕೆ.ಜಿ ಯಷ್ಟು ನೆಲ್ಲಿಕಾಯಿಗಳನ್ನು ಕೊಂಡಿದ್ದಾಯಿತು. ಕೊಂಡಾದ ಮೇಲೆ ಏನು ಮಾಡಲಿ ಅಂದುಕೊಳ್ಳುತ್ತಿರುವಾಗ ನನ್ನ ಕರತಲದಲ್ಲಿದ್ದ ಆಮಲಕಗಳೇ ಹೀಗೆ ಹಾಡಲಾರಂಭಿಸಿದುವು. 😛
” ಇಟ್ಟರೆ ಹಿಂಡಿಯಾದೆ, ಕುಟ್ಟಿದರೆ ತೊಕ್ಕಾದೆ,
ಮೇಲಿಷ್ಟು ಸುರಿದರೆ ಉಪ್ಪಿನಕಾಯಿಯಾದೆ…
ತಿರುವಿದರೆ ಚಟ್ನಿಯಾದೆ, ಅರೆದರೆ ತಂಬುಳಿಯಾದೆ
ಬೆರೆಸಿದರೆ ಚಿತ್ರಾನ್ನವಾದೆ..
ಸಿಹಿ ಬೆರೆಸೆ ಶರಬತ್ತು ಮೊರಬ್ಬವಾದೆ…
ಲೇಹ್ಯ ಚೂರ್ಣಗಳಾದೆ, ಕೇಶತೈಲವಾದೆ
ನಾನೆಲ್ಲಕೂ ಆಗಬಲ್ಲ ನೆಲ್ಲಿಕಾಯಿ.”
ಹಾಗಾಗಿ ಅಡುಗೆಮನೆ ಹೊಕ್ಕು, 10-12 ನೆಲ್ಲಿಕಾಯಿಗಳನ್ನು ತೊಳೆದು, ಬೀಜ ಬೇರ್ಪಡಿಸಿ, 5-6 ಹಸಿರುಮೆಣಸಿನಕಾಯಿಗಳು ಮತ್ತು ಒಂದು ಕಪ್ ತೆಂಗಿನತುರಿ , ಸ್ವಲ್ಪ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ, ಸಾಸಿವೆ-ಒಣಮೆಣಸು-ಕರಿಬೇವಿನ ಒಗ್ಗರಣೆ ಕೊಟ್ಟಾಗ “ನೆಲ್ಲಿಕಾಯಿಯ ಚಟ್ನಿ” ಸಿದ್ಧವಾಯಿತು.
4 ಚಮಚೆಯಷ್ಟು ಇದೇ ಚಟ್ನಿಯನ್ನು ಇನ್ನೊಂದು ಪಾತ್ರೆಗೆ ಹಾಕಿ, 2 ಸೌಟು ಮಜ್ಜಿಗೆ ಸುರಿದು ಮಿಶ್ರ ಮಾಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ, ಬೇಕಿದ್ದರೆ ಇನ್ನಷ್ಟು ಉಪ್ಪು ಸೇರಿಸಿದಾಗ “ನೆಲ್ಲಿಕಾಯಿ ತಂಬುಳಿ“ ಯಾಯಿತು.
ಬಾಣಲಿಯಲ್ಲಿ ಸಾಸಿವೆ, ಉದ್ದಿನ ಬೇಳೆ, ಕಡ್ಲೆಬೇಳೆ, ಕಡ್ಲೆಕಾಯಿ, ಒಣಮೆಣಸು, ಎಣ್ಣೆ ಹಾಕಿ ಕರಿಬೇವಿನ ಒಗ್ಗರಣೆಗಿಟ್ಟು, ಇದೇ ಚಟ್ನಿ 4 ಚಮಚೆಯಷ್ಟು ಮತ್ತು 2 ಕಪ್ ಹದವಾಗಿ ಬೆಂದ ಅನ್ನದೊಂದಿಗೆ ಬೆರೆಸಿ , ಒಂದಿಷ್ಟು ಅರಸಿನ ಪುಡಿ ಸೇರಿಸಿ..ಎಲ್ಲವನ್ನೂ ಬೆರೆಸಿದಾಗ “ನೆಲ್ಲಿಕಾಯಿಯ ಚಿತ್ರಾನ್ನ” ವೂ ಸಂಪನ್ನಗೊಂಡಿತು.
ಶಾಲಾದಿನಗಳಲ್ಲಿ ನೆಲ್ಲಿಕಾಯಿಯನ್ನು ಉಪ್ಪು ಹಾಕಿ ತಿನ್ನುತ್ತಿದ್ದುದರ ನೆನಪಾಗಿ ಒಂದು ಬಾಟಲಿಯಲ್ಲಿ ಉಪ್ಪುನೀರು ಮತ್ತು ಹೆಚ್ಚಿದ ಹಸಿರುಮೆಣಸಿನಕಾಯಿಗಳ ಜತೆ ಶೇಖರಿಸಿಯಾಯಿತು.
ಇನ್ನೂ ಮಿಕ್ಕುಳಿದ ನೆಲ್ಲಿಕಾಯಿಗಳನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷ ಹಾಕಿ, ಕೂಡಲೇ ತೆಗೆದು, ಬೀಜ ಬೇರ್ಪಡಿಸಿ, ಅಂಗಡಿಯಲ್ಲಿ ಕೊಂಡಿದ್ದ ಉಪ್ಪಿನಕಾಯಿಯ ಮಸಾಲೆಯನ್ನು ಸೇರಿಸಿ ” ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ “ ಯನ್ನೂ ಸಿದ್ಧಗೊಳಿಸಿಯಾಯಿತು.
5 ಚಮಚ ಮೆಂತ್ಯಬೀಜ, 10-15 ಒಣಮೆಣಸಿನಕಾಯಿ, ಸ್ವಲ್ಪ ಇಂಗು – ಇವಿಷ್ಟನ್ನು ಬೇರೆ ಬೇರೆಯಾಗಿ ಘಮ್ಮೆನ್ನುವಷ್ಟು ಹುರಿದು, ಮಿಕ್ಸಿಯಲ್ಲಿ ಪುಡಿಮಾಡಿ, ಒಂದು ಕಪ್ ನಷ್ಟು ನೆಲ್ಲಿಕಾಯಿಯ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿ, ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುಟ್ಟಿ ಸಾಸಿವೆ ಒಗ್ಗರಣೆ ಕೊಟ್ಟಾಗ “ನೆಲ್ಲಿಕಾಯಿಯ ತೊಕ್ಕು” ಕೂಡ ತಯಾರಾಯಿತು.
‘ವಿಟಮಿನ್ ಸಿ’ ಯ ಆಗರವಾಗಿರುವ ನೆಲ್ಲಿಕಾಯಿಯನ್ನು ಯಾವುದೇ ರೂಪದಲ್ಲಿ ತಿಂದರೂ ಆರೋಗ್ಯಕ್ಕೆ ಒಳ್ಳೆಯದು . ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತ ಶಮನಕಾರಿಯಾಗಿದೆ . ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡಿ ನೆಲ್ಲಿಹಿಂಡಿ, ನೆಲ್ಲಿಕಾಯಿ ಉಪ್ಪಿನಕಾಯಿ, ಜ್ಯಾಮ್ ಇತ್ಯಾದಿ ತಯಾರಿಸಿದರೆ ಆರು ತಿಂಗಳ ವರೆಗೂ ಕೆಡುವುದಿಲ್ಲ.
ಆಯುರ್ವೇದದ ಹಲವಾರು ಔಷಧಿಗಳು ಮತ್ತು ಕೇಶವರ್ಧಿನಿ ತೈಲಗಳ ತಯಾರಿಕೆಯಲ್ಲಿ ನೆಲ್ಲಿಕಾಯಿಗೆ ಪ್ರಮುಖ ಸ್ಥಾನವಿದೆ.
– ಹೇಮಮಾಲಾ.ಬಿ
ಸಕಲಂ ನೆಲ್ಲಿಕಾಯಿ ಮಯ಼ಂ
Ondu putta paragraph nalli nellikai Inda thayaru maduva khadyavannu eshtu chennagi helikottiri…thank u Hema…
ಒಳ್ಳೆ ವಿಷಯ . ನೆಲ್ಲಿ ಕಾಯಿ ನಮ್ಮ ನೆಂಟನೇ ಸರಿ.
ವಾಹ್ ನೆಲ್ಲಿಕಾಯಿ ಲೇಖನ ಬಾಯಲ್ಲಿ ನೀರೂರುತ್ತಿದೆ
ನಿಮ್ಮ ಲೇಖನದಿಂದ ಪ್ರೇರಿತಳಾಗಿ ನೆಲ್ಲಿಕಾಯಿ ಚಿತ್ರಾನ್ನ ಮಾಡಿದ್ದೆ. ನಮ್ಮ ಮನೆಯಲ್ಲಿ ಅದು ಸೂಪರ್ ಹಿಟ್ ಆಯಿತು.. 🙂
ಥ್ಯಾಂಕ್ಸ್… 😀