‘ನೆಮ್ಮದಿಯ ನೆಲೆ’-ಎಸಳು 5

Share Button


(ಇದುವರೆಗಿನ ಕಥಾಸಾರಾಂಶ:
ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸುಕನ್ಯಾ ಹಾಗೂ ಬೀಗರ ಒಮ್ಮತದ ಅಭಿಪ್ರಾಯದಂತೆ ಮನೆಯಲ್ಲಿಯೇ ಸರಳ ವಿವಾಹ ನಡೆಸಲು ಸಿದ್ಧತೆ ಆರಂಭವಾಯಿತು…..ಮುಂದಕ್ಕೆ ಓದಿ)

ಮಾರನೆಯ ದಿನ ಸ್ನಾನ ಪಾನಾದಿಗಳನ್ನು ಮುಗಿಸಿ ಅಮ್ಮ ಹಾಕಿಕೊಟ್ಟ ದೋಸೆ ತಿನ್ನುತ್ತಾ ಕುಳಿತಿದ್ದ ನನಗೆ ಫೋನ್ ರಿಂಗಾಗಿದ್ದು ಕೇಳಿಸಿತು. ಅಲ್ಲಿಯೇ ಹತ್ತಿರವಿದ್ದ ಅಪ್ಪ ಎತ್ತಿಕೊಂಡು ‘ಹಾ.. ಆಯಿತು ಸರಿ’ ಎಂದದ್ದು ಕೇಳಿಸಿತು. ಹಿಂದಿನ ರಾತ್ರಿಯ ಪ್ರಸಂಗದಿಂದ ಅಸಮಾಧಾನ ಹೊಂದಿದ್ದ ನಾನು ಮೌನವಾಗಿ ತಿಂಡಿ ತಿನ್ನುವದನ್ನು ಮುಂದುವರಿಸಿದ್ದೆ. ಏನೋ ಹೇಳಲು ಬಂದ ಅಪ್ಪ ನನ್ನನ್ನು ನೋಡಿ ‘ಮಗಳೇ ಹನ್ನೊಂದು ಗಂಟೆಗೆ ಭಾವೀ ಬೀಗರು ಬರುತ್ತಾರಂತೆ’. ಎಂದರು.

ನಾನು ಉತ್ತರ ನೀಡದ್ದನ್ನು ಕಂಡು ಅಮ್ಮ ‘ಏನು ಸಮಾಚಾರ? ಏತಕ್ಕೆ ಬರುತೇನೆಂದು ಹೇಳಿದರು?’ ಎಂದು ಕೇಳಿದರು. ‘ಹುಡುಗಿಗೆ ಬಟ್ಟೆ ಬರೆ, ಒಡವೆ ತೆಗೆದುಕೊಳ್ಳಲಿಕ್ಕೆ ಹಣ ಕೊಡಲು ಬರುತ್ತಿದ್ದಾರೆ. ಶಾಸ್ತ್ರಿಗಳು ಹಾಗಂತ ಹೇಳಿದರು’ ಎಂದರು. ‘ಹಾಗಾದರೆ ಒಂದು ಮಾತು, ನೀವೂ ಹುಡುಗನಿಗೆ ತೆಗೆದಿಟ್ಟಿರುವ ಹಣವನ್ನು ಅವರೊಟ್ಟಿಗೆ ಕಳುಹಿಸಿಬಿಡಿ. ನಮ್ಮ ಹುಡುಗರು ನಿಗದಿ ಮಾಡಿರುವ ದಿನಾಂಕಕ್ಕೇ ಮದುವೆ ಇಡಿಸಿದರೆ ಬಟ್ಟೆ ಹೊಲಿಯಲು ಸಮಯ ಅಷ್ಟಿರುವುದಿಲ್ಲ. ಅಮ್ಮಮ್ಮಾ ಅಂದರೆ ಒಂದು ತಿಂಗಳು ಮಾತ್ರ ಸಿಗುತ್ತದೆ’. ಎಂದರು ಅಮ್ಮ.

‘ಹೌದು ಅದು ಒಳ್ಳೆಯದೇ ‘ಎಂದು ಅಪ್ಪ ಆ ಹಣವನ್ನು ತೆಗೆದಿರಿಸಲು ತಮ್ಮ ರೂಮಿಗೆ ಹೋದರು. ಆಗ ಅಮ್ಮ “ನೋಡು ಮಗಳೇ, ಅವರುಗಳು ಹೇಳಿದಾಗ, ನಾವು ಅವರ ಮನೆಯನ್ನು ನೋಡಿದಾಗ ಒಂದು ಕ್ಷಣ ನಮಗೆ ಮತ್ತೆ ಆಲೋಚಿಸುವಂತೆ ಮಾಡಿದ್ದು ನಿಜ. ಅದಕ್ಕೇ ನಿನ್ನನ್ನು ಯೋಚಿಸು ಎಂದು ಕೇಳಿದ್ದು. ತಪ್ಪು ತಿಳಿಯಬೇಡ. ನಿನ್ನ ಬಿಗಿ ಮುಖ ಬಿಟ್ಟು ಎಂದಿನಂತೆ ಇರು. ನಮ್ಮದು ತಪ್ಪಾಯಿತು”. ಎಂದು ಅಲವತ್ತುಕೊಂಡರು. ‘ನೋಡಮ್ಮಾ ನಿಮಗೆ ಹೇಳಿದಂತೆ ದೊಡ್ಡ ಅತ್ತಿಗೆ ನನಗೂ ಹೇಳಿದ್ದರು. ಆಗ ನಾನು ಸಿರಿವಂತಿಕೆ ಬಯಸಿ ಹೋಗುತ್ತಿಲ್ಲ. ಅವರಿಗೆ ತಮ್ಮ ಹೆತ್ತವರ ಬಗ್ಗೆ ಇರುವ ಕಾಳಜಿ ಕಂಡು ನನಗೆ ತುಂಬ ಇಷ್ಟವಾಗಿದೆ’ ಎಂದಿದ್ದೆ. ಅದಕ್ಕವರು ‘ನಮ್ಮನ್ನು ಪರೋಕ್ಷವಾಗಿ ಚುಚ್ಚುತ್ತಿದ್ದೀಯಾ?. ಇದೆಲ್ಲಾ ಹೇಳುವುದು ಸುಲಭ. ನಿಭಾಯಿಸುವುದು ಕಷ್ಟ. ಆಹಾ ನಾನೂ ನೋಡುತ್ತೇನೆ ಎಷ್ಟು ದಿನಾ ಅಂತ?’ ಎಂದು ಕಾಲಪ್ಪಳಿಸಿ ಹೋಗಿದ್ದರು. ನಾನು ಆ ವಿಷಯ ನಿಮ್ಮ ಮುಂದೆ ಹೇಳಿರಲಿಲ್ಲ. ಹಾಗಿದ್ದೂ ಮತ್ತೆ ಅವರು ನಿಮ್ಮ ಕಿವೀನೂ ಊದಿದ್ದಾರೆ. ನೀವೂ ಅವರ ಕಡೆ ವಾಲಿದ್ದಕ್ಕೆ ಬೇಸರವಾಯಿತಷ್ಟೇ. ಹಾಗೇ ಅಪ್ಪನೂ ನೋಡಿದೆಯಾ ನಿಮ್ಮಕ್ಕ ಶ್ರೀಮಂತರ ಮನೆ ಸೇರಿದ್ದಾಳೆ. ಮಹಾರಾಣಿಯಾಗಿದ್ದಾಳೆ. ಭಾವ ಅವಳನ್ನು ಅರಗಿಣಿಯಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು. ಎಲ್ಲವೂ ಸರಿಯೇ, ಆದರೆ ಅಕ್ಕನಿಗೆ ಒಂದೇ ಒಂದು ಗುಂಡುಸೂಜಿಯಷ್ಟಾದರೂ ಸ್ವಾತಂತ್ರ್ಯವಿದೆಯಾ? ಅವಳನ್ನು ಪೊಪೆಟ್ ಥರಾ ಆಡಿಸುತ್ತಾರೆ. ಆದರೆ ಇವರು ನೋಡು ನಮ್ಮ ಆಸೆ ಅಭಿರುಚಿಗೆ ಅಡ್ಡಬರುತ್ತಿಲ್ಲ. ಅದೇ ನನಗೆ ಖುಷಿ ತಂದ ವಿಷಯ” ಎಂದು ಅವರನ್ನು ಅಪ್ಪಿಕೊಂಡೆ.

ಬೆಳಗ್ಗೆ ಹೇಳಿದ್ದ ಸಮಯಕ್ಕೆ ಸರಿಯಾಗಿ ನನ್ನ ಭಾವೀ ಮಾವನವರು ಶ್ಯಾಮರಾಯರನ್ನು ಹಿಂದಿಕ್ಕಿಕೊಂಡು ನಮ್ಮ ಮನೆಗೆ ಆಗಮಿಸಿದರು. ಉಭಯಕುಶಲೋಪರಿ ಆದಮೇಲೆ ಅವರು “ಮಗೂ ಸುಕನ್ಯಾ, ಬಾಮ್ಮಾ ಇಲ್ಲಿ”  ಎಂದು ಕರೆದರು. ಅದನ್ನು ನಿರೀಕ್ಷಿಸದಿದ್ದ ನಾನು ತಡಬಡಾಯಿಸಿಕೊಂಡು ರೂಮಿನಿಂದ ಹೊರಬಂದೆ.

“ತೊಗೋಮ್ಮ” ಎಂದು ಅಡಿಕೆ ವೀಳ್ಯದೆಲೆ, ಹೂ, ಹಣ್ಣುಗಳಿದ್ದ ತುಂಬಿದ ತಟ್ಟೆಯನ್ನು ನನ್ನ ಮುಂದೆ ಹಿಡಿದರು. ನಾನು ಕೈಚಾಚಿ ಅದನ್ನು ತೆಗೆದುಕೊಂಡೆ. ಅವರಿಗೆ ನಮಸ್ಕರಿಸಿದೆ. “ನೋಡಮ್ಮಾ, ಇದು ನನ್ನವಳು ಕೊಟ್ಟು ಕಳುಹಿಸಿದ ಒಡವೆ ಪೆಟ್ಟಿಗೆ. ಇದು ಹಣವಿರುವ ಚೀಲ. ಇದೋ ನೋಡು ಇದು ಅವಳು ಕೊಟ್ಟ ಪತ್ರ. ಇದರಲ್ಲಿ ಎಲ್ಲವನ್ನೂ ವಿವರವಾಗಿ ಬರೆದಿದ್ದಾಳಂತೆ. ಅದರಂತೆ ಮಾಡು ಮಗೂ ” ಎಂದರು. ನಾನು ತಲೆ ಅಲ್ಲಾಡಿಸಿ ಅವೆಲ್ಲವನ್ನೂ ಹಿಡಿದುಕೊಂಡು ಒಳಕ್ಕೆ ಬಂದೆ.

ಆ ನಂತರ ನನ್ನಪ್ಪ ಹುಡುಗನಿಗೆ ಕೊಡಬೇಕಾದ ಹಣವನ್ನಿತ್ತು ಅವರಿಗೆ ತಲುಪಿಸುವಂತೆ ಹೇಳುತ್ತಿದ್ದುದು ಕೇಳಿಸಿತು. ಆ ನಂತರ ಕಾಫಿ ಸಮಾರಾಧನೆ ಮುಗಿಸಿ ಅವರು ಊರಿಗೆ ತೆರಳಿದರು.

ಅವರುಗಳು ಹೋದಮೇಲೆ ನಾನು ತಟ್ಟೆ, ಚೀಲ, ಪತ್ರ, ಪೆಟ್ಟಿಗೆಗಳೊಡನೆ ಹೊರಗೆ ಬಂದು ಅಪ್ಪ ಅಮ್ಮನನ್ನು ಕರೆದು ಮುಂಬಾಗಿಲನ್ನು ಭದ್ರಪಡಿಸಿ ಅವರಿಗೆ ಎಲ್ಲವನ್ನೂ ಒಪ್ಪಿಸಿದೆ. ನಗುತ್ತಾ ನಾನಿದ್ದೆಡೆಗೆ ಬಂದು ಎದುರುಬದುರಾಗಿ ಕುಳಿತರು. “ಈಗೇನು ಮಗಳೇ ಹೇಳು?” ಎಂದು ಕೇಳಿದರು. ಅವರು ಕೊಟ್ಟಿದ್ದ ಪತ್ರವನ್ನು ತೆಗೆದರು. ಅದರಲ್ಲಿ ” ಕೆಲವು ಹಳೆಯ ಒಡವೆಗಳನ್ನು ಇದರಲ್ಲಿಟ್ಟಿದ್ದೇನೆ. ನಿನಗೇನು ಬೇಕೋ ಹಾಗೆ ಹೊಸ ನಮೂನೆಯಂತೆ ಮಾಡಿಸಿಕೋ. ಹಣದಲ್ಲಿ ನಮ್ಮ ಕಡೆಯಿಂದ ಕೊಡುವ ಐದು ಸೀರೆ, ಹಾಗೂ ಬೀಗರಿಗೆ ಕೊಡುವ ಸೀರೆ, ಬಟ್ಟೆಗಳನ್ನು ಖರೀದಿಸುವುದು. ಮದುವೆ ಒಂದೇ ದಿವಸದ್ದಾದರೂ ಸಂಪ್ರದಾಯವಿರಲಿ. ಅಪ್ಪ ಅಮ್ಮ ಬಂದಾಗ ಅವರ ಬಳಿ ನಿಮ್ಮ ಮನೆಯಿಂದ ನಿನಗೆ ಕೊಡಲಾಗುವ ಒಡವೆಗಳ ಬಗ್ಗೆ ವಿಚಾರಿಸಿದ್ದೆ. ನಾವು ಏನು ಕೊಡಬಹುದೆಂದು ಲೆಕ್ಕಾಚಾರ ಹಾಕಿ ಬೇರೆ ಸೊಸೆಯಂದಿರಿಗೆ ಕೊಟ್ಟ ಹಾಗೇ ನಿನಗೂ ಕೊಟ್ಟಿದ್ದೇನೆ. ತಪ್ಪು ತಿಳಿಯಬೇಡ. ನಿನಗೆ ನನ್ನ ಪ್ರೀತಿಯ ಆಶೀರ್ವಾದಗಳು” ಎಂದಿತ್ತು.

ನಂತರ ಒಡವೆಯ ಪೆಟ್ಟಿಗೆಯನ್ನು ತೆರೆದೆ. ಅವರು ತಿಳಿಸಿದಂತೆ ಹಳೆಯ ಒಡವೆಗಳು. ಆದರೆ ಮಜಬೂತಾಗಿದ್ದ ಪದಕದ ಚೈನು, ಅಗಲವಾದ ಬಳೆಗಳು, ಓಲೆ, ವಂಕಿ, ಉಂಗುರ ಇದ್ದವು. ಅವನ್ನು ನೋಡಿದ ನಾನು “ಉಂಗುರ ಓಲೆ ಎರಡನ್ನು ಬಿಟ್ಟು ಉಳಿದವನ್ನು ಪಾಲಿಷ್ ಮಾಡಿಸಿ ಹಾಗೇ ಇಟ್ಟುಕೊಳ್ಳುತ್ತೇನೆ. ತುಂಬಾ ಚೆನ್ನಾಗಿವೆ. ಅಮ್ಮಾ ಓಲೆ, ಉಂಗುರ ಮಾತ್ರಾ ಬೇರೆ ಮಾಡಿಸಿಕೊಳ್ಳುತ್ತೇನೆ. ಸರಿಯಾ?” ಎಂದೆ. “ನಿನ್ನಿಷ್ಟ ಮಗಳೇ ” ಎಂದರು. ಕವರನ್ನು ತೆರೆದು ನೋಡಿದ ನನಗೆ ಅಚ್ಚರಿಯಾಯಿತು. ಸರಿಯಾಗಿ ಐವತ್ತು ಸಾವಿರಕ್ಕೂ ಮಿಕ್ಕಿತ್ತು. ನನಗೆ ಮೊದಲಿನಿಂದಲೂ ದುಬಾರಿಯಾದ ಬಟ್ಟೆಗಳನ್ನು ಕೊಳ್ಳುವುದು ಇಷ್ಟವಿರಲಿಲ್ಲ. ಈಗಲೂ ಒಂದೆರಡು ಚೆನ್ನಾಗಿರುವ ಸೀರೆಗಳ ಜೊತೆ ಉಳಿದವು ಸಾಧಾರಣವಾದವು, ಅಮ್ಮನಿಗೆ ಅವರು ಒಪ್ಪಿದ್ದು, ಅಪ್ಪನಿಗೂ ಬೇಕಾದದ್ದು ಕೊಡಿಸಿಬಿಡುವುದೆಂದು ತೀರ್ಮಾನಿಸಿದೆ. ಎಲ್ಲವನ್ನೂ ನನ್ನಿಚ್ಛೆಗೇ ಬಿಟ್ಟರು ಹೆತ್ತವರು.

ಒಂದು ಒಳ್ಳೆಯ ದಿವಸ ನೋಡಿ ನಾನಂದುಕೊಂಡಂತೆಯೇ ಎಲ್ಲವನ್ನೂ ತಯಾರಿ ಮಾಡಿಕೊಂಡೆ. ಬಟ್ಟೆ ಬರೆಗಳನ್ನು ಕೊಂಡಿದ್ದಾಯಿತು. ಲಗ್ನ ಪತ್ರಿಕೆಯೂ ತಯಾರಾಗಿ ಬಂದಿತು. ದೇವರ ಮುಂದೆ ಇಟ್ಟು ಅದನ್ನು ಪೂಜಿಸಿ ಭಾವೀ ಬೀಗರಿಗೆ ಕೊಟ್ಟುಬಂದಾಯಿತು. ಮೊದಲೇ ಅಂದುಕೊಂಡಂತೆ ಬೇಕಾದವರನ್ನು ಕರೆದದ್ದಾಯಿತು. ಅಂತೂ ನನ್ನ ಹೆತ್ತವರ ಆಸೆಯಂತೆ ನಾನು ಹುಟ್ಟಿ ಬೆಳೆದ ಹಿರಿಯರ ಮನೆ ಮದುವೆ ಕಾರ್ಯಕ್ಕೆ ಸಿಂಗಾರಗೊಳ್ಳತೊಡಗಿತು. ಮದುವೆಯ ದಿನ ಹತ್ತಿರ ಬಂದೇಬಿಟ್ಟಿತು. ಮನೆಮುಂದೆ ಖಾಲಿಯಿದ್ದ ಜಾಗದಲ್ಲಿ ಹಸಿರು ಚಪ್ಪರವೆದ್ದಿತು. ತಲೆಬಾಗಿಲಿನಲ್ಲಿ ಹಸಿರು ತೋರಣ, ಮೇಲೆ ಕಮಾನು, ಸಮನಾಗಿ ಕನಕಾಂಬರದ ಇನ್ನೊಂದು ತೋರಣ ತೂಗಾಡಿತು. ಕನಕಾಂಬರಕ್ಕೂ ದಟ್ಟ ಹಸಿರಿನ ಎಲೆಗಳ ಬಣ್ಣಕ್ಕೂ ಹೊಂದಾಣಿಕೆ ಹೇಳಿ ಮಾಡಿಸಿದಂತಿತ್ತು. ಮಲ್ಲಿಗೆಯ ಪರಿಮಳ ಎಲ್ಲೆಲ್ಲೂ ತುಂಬಿತ್ತು. ಮಕ್ಕಳ ಓಡಾಟ, ಹೆಣ್ಣುಮಕ್ಕಳ ಬಣ್ಣಬಣ್ಣದ ಉಡುಪುಗಳ ಪ್ರದರ್ಶನ, ಹೆಂಗಸರ ಭಾರಿ ಸೀರೆಗಳ ವಿಮರ್ಶೆ, ಸಂಬಂಧದ ಬಗ್ಗೆ ಚರ್ಚೆ ಎಲ್ಲಾ ಒಂದುಬಗೆಯ ಉತ್ಸಾಹಪೂರ್ಣ ವಾತಾವರಣವನ್ನು ಅನಾವರಣಗೊಳಿಸಿತ್ತು.

ಮನೆಯ ಇಬ್ಬರೂ ಸೊಸೆಯರು ತಮ್ಮ ಎಂದಿನ ಬಿಗಿಮುಖಗಳನ್ನು ತೊರೆದು ಸಂಭ್ರಮದಿಂದ ಓಡಾಡುತ್ತಿದ್ದರು. ಅಣ್ಣಂದಿರು ತಮ್ಮ ಅಸಮಾಧಾನ ಮರೆತು ಕೆಲಸಕಾರ್ಯಗಳನ್ನು ಗಮನಿಸುತ್ತಿದ್ದರು. ಇದಕ್ಕೆ ಅಕ್ಕ, ಭಾವನವರೂ ಸ್ಪಂದಿಸುತ್ತಿದ್ದರು. ಮಕ್ಕಳು ಕುಣಿದು ಕುಪ್ಪಳಿಸುತ್ತಿದ್ದರು. ನನ್ನ ಅಮ್ಮನ ಸಡಗರವಂತೂ ಹೇಳತೀರದಾಗಿತ್ತು. ಅವರ ಮುಖದಲ್ಲಿ ವಯಸ್ಸಿಗೆ ಮೀರಿದ ಲವಲವಿಕೆ ಬಂದು ಸೇರಿತ್ತು. ಹಣೆಯಲ್ಲಿ ಮಾಮೂಲಿಗಿಂತ ಸ್ವಲ್ಪ ದೊಡ್ಡಸೈಜಿನ ಕುಂಕುಮದ ಬೊಟ್ಟು, ಗಂಧದ ಮೈಬಣ್ಣ. ಕೆಂಪು ಅಂಚು ಹಾಗೂ ಮಿತವಾದ ಜರಿಯಿದ್ದ ಕಾಂಜೀವರಂ ರೇಷ್ಮೆಸೀರೆಯಿಂದಾಗಿ ವಿಶೇಷತೆ ಮೈತಾಳಿತ್ತು. ತಲೆಗಂಟಿಗೆ ಮಲ್ಲಿಗೆಯ ದಂಡೆ, ಕ್ಯತುಂಬಾ ಗಾಜಿನ ಬಳೆಗಳು, ಅವುಗಳ ಮುಂದಕ್ಕೆ ಚಿನ್ನದ ಒಂದೊಂದು ಕಡಗ, ಕತ್ತಿನಲ್ಲಿ ಕರಿಮಣಿಸರದೊಂದಿಗೆ ಪದಕದ ಚೈನು, ಕಿವಿಯಲ್ಲಿ ಕೆಂಪಿನ ಬೆಂಡೋಲೆ, ವ್ಹಾ ! ಹಾಗೇ ಅಪ್ಪನ ಕಡೆಗೆ ದೃಷ್ಟಿ ಹಾಯಿಸಿದೆ. ಬಿಳಿಕೂದಲು ತುಂಬಿದ್ದತಲೆ, ಚಿಕ್ಕದಾಗಿ ಕತ್ತರಿಸಿ ಟ್ರಿಮ್ ಮಾಡಿದ್ದ ದಟ್ಟ ಬಿಳಿಯಮೀಸೆ, ರೇಷ್ಮೆಯಪಂಚೆ, ಶರಟು, ಶಲ್ಯ, ಕೈನಲ್ಲಿ ಬೆರಳಿಗೊಂದು ಬಿಳಿಕಲ್ಲಿನ ಉಂಗುರ, ಅದು ಅವರ ಮದುವೆಯಲ್ಲಿ ಮಾವ ಕೊಟ್ಟಿದ್ದಂತೆ, ನಗುಮುಖ ಹೊತ್ತು ಬಂದವರನ್ನು ಗಮನಿಸುತ್ತಾ ಓಡಾಡುತ್ತಿದ್ದಾರೆ. ಕಂಬದ ಒಂದು ಪಕ್ಕದಲ್ಲಿ ನಿಂತು ಎಲ್ಲವನ್ನೂ ನೋಡುತ್ತಿದ್ದ ನನ್ನ ಕೈಯನ್ನು ಯಾರೋ ಎಳೆದಂತಾಯಿತು. ಆ ಕಡೆ ತಿರುಗಿದೆ. ಅಕ್ಕ ! ಅದ್ಯಾವ ಮಾಯದಲ್ಲಿ ಅಲ್ಲಿಗೆ ಬಂದು ನನ್ನನ್ನು ನೋಡುತ್ತಿದ್ದಳೋ ಕಾಣೆ “ಸುಕನ್ಯಾ ಇಲ್ಯಾಕೇ ನಿಂತಿದ್ದೀ, ಒಳಗೆ ನಡೆ ಯಾರಾದರೂ ನೋಡ್ಯಾರು. ಮದುವೆ ಹೆಣ್ಣು ಹೀಗೆ ಹೊರಗಡೆ ” ಎಂದು ಬಹತೇಕ ನನ್ನನ್ನೆಳೆದುಕೊಂಡೇ ಒಳಕ್ಕೆ ಕರೆತಂದಳು.

ಹೊರಗಿನ ರೂಮಿನಲ್ಲಿ ಕೂಡಿಸದೆ ಒಳಗಿನ ರೂಮಿನಲ್ಲಿ ಕೂಡಿಸಿ ” ಪುರೋಹಿತರು ಹೇಳಿ ಕಳುಹಿಸಿದಾಗ, ಅಥವಾ ನಾವ್ಯಾರಾದರೂ ಕರೆಯಲು ಬಂದಾಗ ಮಾತ್ರ ಹೊರಗೆ ಬರಬೇಕು. ಅದುವರೆಗೆ ಹೊರಕ್ಕೆ ಬಂದುಗಿಂದೀಯೆ ಜೋಕೆ” ಎಂದು ಎಚ್ಚರಿಸಿ ಹೊರನಡೆದಳು.

ಏನು ಮಾಡುವುದಪ್ಪಾ ನೆನ್ನೆ ರಾತ್ರಿಯೇ ಬಂದಿಳಿದಿದ್ದ ಬಂಧುಗಳಿಂದ ಮನೆಯಲ್ಲೆಲ್ಲಾ ಕಲರವ, ಬೆಳಗಿನ ಶಾಸ್ತ್ರಕ್ಕೆ ಸಿದ್ಧತೆ, ಚರ್ಚೆ, ಈ ಗದ್ದಲದ ಜೊತೆಗೆ ನನ್ನ ಮನಸ್ಸಿನ ತಳಮಳ ಸೇರಿ ಸರಿಯಾಗಿ ರಾತ್ರಿ ನಿದ್ರೆಯೇ ಬಂದಿರಲಿಲ್ಲ. ಇನ್ನೇನು ಕಣ್ಣಿಗೆ ನಿದ್ರೆ ಹತ್ತುತ್ತಿದೆ ಎನ್ನುವಷ್ಟರಲ್ಲಿ ಹೆತ್ತಮ್ಮ ಬಂದು “ಏಳು ಮಗಳೇ ಮಂಗಳಸ್ನಾನ ಮಾಡಿ ಗೌರಿ ಪೂಜೆ ಮುಗಿಸಿ ಅಲಂಕಾರ ಮಾಡಿಕೊಂಡು ಕುಳಿತುಕೊಳ್ಳುವಿಯಂತೆ, ಇಲ್ಲದಿದ್ದರೆ ಎಲ್ಲಕ್ಕೂ ತಡವಾಗುತ್ತದೆ” ಎಂದು ಅವಸರಿಸಿ ಎಬ್ಬಿಸಿದರು. ಅವರ ಆಣತಿಯಂತೆ ಎಲ್ಲವನ್ನೂ ಮುಗಿಸಿ ಬೆಳಗಿನ ಉಪಾಹಾರವನ್ನು ಮುಗಿಸಿದ್ದೆ. ಅದನ್ನು ನೋಡಿದ ಅಕ್ಕ “ನಮಗೆಲ್ಲಾ ಧಾರೆಯಾಗುವವರೆಗೂ ತಿನ್ನಲು ಏನೂ ಕೊಟ್ಟಿರಲೇ ಇಲ್ಲ. ಬರೀ ಒಂದು ಲೋಟ ಹಾಲು ಮಾತ್ರ. ಈಗ ಚಿಕ್ಕಮಗಳಿಗೆ ಎಲ್ಲದರಲ್ಲೂ ರಿಯಾಯಿತಿ ” ಎಂದು ಅಣಕವಾಡಿದ್ದಳು.

ನಂತರ ಎಲ್ಲರೂ ಅವರವರ ಕೆಲಸಗಳನ್ನು ಮಾಡಲು ಹೊರಟುಹೋದರು. ನನಗೋ ಒಬ್ಬಳೇ ಕುಳಿತು ತೂಕಡಿಕೆ ಬರುತ್ತಿತ್ತು. ಹಾಗೆಯೇ ಹೊರಗೆ ಕಾಲಿಟ್ಟಿದ್ದೆ. ಆದರೆ ಅಕ್ಕ ತಂದು ಇಲ್ಲಿ ಕೂಡಿಸಿಬಿಟ್ಟಳು. ಅಷ್ಟರಲ್ಲಿ “ಕೂಸೇ ರೆಡಿಯಾದೆಯಾ?” ಎಂದು ಕೇಳುತ್ತಾ ನಮ್ಮಮ್ಮನ ಆಗಮನವಾಯಿತು. “ಎಲ್ಲಿ ನಿನ್ನ ಗೆಳತಿಯರ್‍ಯಾರೂ ಬರಲಿಲ್ಲವೇ?” ಎಂದು ಕೇಳಿದರು.” ಬಂದಿದ್ದಾರಮ್ಮಾ ಅಲ್ಲೆಲ್ಲೋ ಹೊರಗೆ ಇರಬೇಕು. ಅವರಿಗೆಲ್ಲ ನಿಮ್ಮ ಅಳಿಯನನ್ನು ಕಾಣುವ ಕುತೂಹಲ. ನಾನು ಅವರುಗಳಿಗೆ ಫೋಟೋ ಆಗಲಿ, ಇತರ ಮಾಹಿತಿಗಳ್ಯಾವುದನ್ನೂ ತೋರಿಸಿಲ್ಲ. ಅದಕ್ಕೇ ಆಕ್ಷೇಪಣೆ ಮಾಡಿದರು. ಹೊರಗೇ ಅಡ್ಡಾಡುತ್ತಿದ್ದಾರೆ” ಎಂದೆ.  “ಏನು ಹುಡುಗುಬುದ್ಧೀನೋ, ಅವರು ನಿನ್ನ ಜೊತೆಯಲ್ಲಿ ಇರುತ್ತಾರೆಂದುಕೊಂಡೆ. ಎಲ್ಲಿ ಸ್ವಲ್ಪ ಹೀಗೆ ನಿಲ್ಲು ನೋಡೋಣ” ಎಂದು ನನ್ನನ್ನು ಅಡಿಯಿಂದ ಮುಡಿಯವರೆಗೆ ಪರೀಕ್ಷಾ ದೃಷ್ಟಿಯಿಂದ ವೀಕ್ಷಿಸಿ “ನನ್ನ ಕಣ್ಣದೃಷ್ಟಿಯೇ ನಿನಗೆ ತಾಗೀತು, ಎಂದು ಅಲ್ಲಿದ್ದ ಕಾಡಿಗೆ ಡಬ್ಬದಿಂದ ತುದಿ ಉಗುರಲ್ಲಿ ತೆಗೆದು ಗಲ್ಲದ ಒಂದು ಪಕ್ಕದಲ್ಲಿ ಚುಕ್ಕಿಯೊಂದನ್ನಿಟ್ಟು ಅದರ ಮೇಲೆ ಪೌಡರ್ ಪಫ್ ಮಾಡಿ ಮಂಟಪಕ್ಕೆ ಬರುವ ಮೊದಲು ದೇವರಿಗೆ ನಮಸ್ಕಾರ ಮಾಡಿ ಬಾ” ಎಂದು ಆದೇಶಿಸುತ್ತಿದ್ದಂತೆ “ಭಾಗೀ, ಎಲ್ಲಿದ್ದೀ?” ಎಂಬ ಅಪ್ಪನ ಕರೆಯಿಂದ ಎಚ್ಚೆತ್ತು ಹೊರನಡೆದರು.

ಸ್ವಲ್ಪ ಸಮಯ ಕಳೆದಿರಬೇಕು “ಲೇ..ಸುನೀ” ಎಂಬ ಅಬ್ಬರದ ಕೂಗು ಕಿವಿಗೆ ತಾಕಿತು. ಅದರೊಂದಿಗೆ ನನ್ನ ಗೆಳತಿಯರ ಪಟಾಲಂ ಆಗಮಿಸಿತು. ಇವರಿಂದ ಇನ್ನೇನು ಪ್ರಶ್ನೆಗಳನ್ನು ಎದುರಿಸಬೇಕೋ ಎಂದುಕೊಂಡೆ.

ಒಬ್ಬಳು “ಆಹಾ ನಿನ್ನ ರಾಜಕುಮಾರ ಬಂಧುಬಳಗ ಸಮೇತ ಆಗಮಿಸಿದ ತಾಯಿ. ಹ್ಯಾಂಡ್ಸಮ್ ಆಗಿದ್ದಾನೆ. ಆದರೆ ಅವರಿರುವ ಎತ್ತರಕ್ಕೆ ನೀನು” ಎಂದಳು. ಇನ್ನೊಬ್ಬಳು “ಏ..ಬಿಡೆ, ಸುನಿಯ ಹೆತ್ತವರೇ ಇಲ್ಲವೇ? ಹಾಗೇ ಇವರ ಜೋಡಿಯೂ. ಅದೂ ಸರಿಯೇ ನಮಗೆ ಫೋಟೋ ಏಕೆ ತೋರಿಸಲಿಲ್ಲ? ಎಂಬುದಕ್ಕೆ ಕಾರಣ ಈಗ ಸಿಕ್ಕಿತು ಬಿಡು “ಎಂದಳು ಇನ್ನೊಬ್ಬಳು.

ಇವರಿಗೆಲ್ಲ ನಾನೇನು ಹೇಳಲಿ, ನನ್ನನ್ನು ನೋಡಿಕೊಂಡು ಸಮ್ಮತಿ ಪಡೆದುಹೋದ ಭೂಪತಿ, ಭಾವೀಪತಿ ನಂತರ ಒಂದೇ ಒಂದು ಸಾರಿ ಫೋನ್ ಮಾಡಿ ಹಿರಿಯರ ಹಾಗೆ ಯೋಗಕ್ಷೇಮ ವಿಚಾರಿಸಿದ್ದನ್ನು ಬಿಟ್ಟರೆ ಬೇರೇನೂ ಕೇಳಲೇ ಇಲ್ಲ. ಇವತ್ತೇ ಮತ್ತೆ ಬರುತ್ತಿರುವುದು. ಅದನ್ನು ಇವರಿಗ್ಹೇಳುವುದುಂಟೇ. ಹಾ..ನನ್ನ ಪುಣ್ಯ, ಅತ್ತಿಗೆಯ ಅಕ್ಕನ ಆಗಮನ ಇವರ ಬಾಯಿಗೆ ಬೀಗ ಹಾಕಿತು.

“ಮದುಮಗಳೇ ಸಿದ್ಧ ತಾನೇ? ಪುರೋಹಿತರು ಕರೆಯುತ್ತಿದ್ದಾರೆ ನಡೆ. ನೀವುಗಳೂ ಅವಳ ಜೊತೆಗೂಡಿ. ನಾನು ಕೆಲವೊಂದು ಸಾಮಾನು ತೆಗೆದುಕೊಂಡು ರೂಮಿಗೆ ಬೀಗ ಹಾಕಿಕೊಂಡು ಬರುತ್ತೇನೆ” ಎಂದರು ಅಕ್ಕ.

ನಾನು ಅಮ್ಮ ಹೇಳಿದಂತೆ ದೇವರಕೋಣೆಗೆ ಹೋಗಿ ನಮಸ್ಕಾರಮಾಡಿ ಮಂಟಪವನ್ನು ಪ್ರವೇಶಿಸಿ ಹಸೆಮಣೆ ಮೇಲೆ ಕುಳಿತೆ. ನನಗಿಂತ ಮೊದಲೇ ವಿರಾಜಮಾನರಾಗಿದ್ದ ನನ್ನ ಬಾಳಸಂಗಾತಿಯಾಗುವವರ ಕಡೆಗೆ ಕಿರುಗಣ್ಣಿನ ನೋಟ ಹರಿಸಿದೆ. ಅಚ್ಚಬಿಳಿಯ ರೇಷ್ಮೆ ವಸ್ತ್ರದಲ್ಲಿ ಮೋಹಕವಾಗಿ ಕಾಣಿಸುತ್ತಿದ್ದರವರು. ಗಂಭೀರ ಮುಖ. ಕೆಲವು ಪೂಜಾಕಾರ್ಯಗಳೆಲ್ಲ ಮುಗಿದ ಮೇಲೆ ಪುರೋಹಿತರು ಎರಡೂ ಕುಟುಂದ ಮುಖ್ಯರಾದವರಿಂದ ಧಾರೆ ಎರೆಸಿದರು. ಮಂಗಳವಾದ್ಯಗಳ ಸದ್ದು ಜೋರಾಗಿ ಮೊಳಗುವುದರೊಂದಿಗೆ ನನ್ನ ಕುತ್ತಿಗೆಗೆ ತಾಳಿಭಾಗ್ಯವಾಯಿತು.

 

ಸಾಂದರ್ಭಿಕ ಚಿತ್ರಮೂಲ: ಅಂತರ್ಜಾಲ

ಓ ! ಮದುವೆ ಆಗಿಹೋಯಿತೇ? ಎಂದಿತು ಮನಸ್ಸು. ಅಪ್ಪ “ವಧೂವರರು ಹೋಗಿ ದೇವರಿಗೆ ನಮಸ್ಕರಿಸಿ ಹಿರಿಯರಿಂದ ಆಶಿರ್ವಾದ ಪಡೆದು ನಿಮ್ಮ ಉಡುಪು ಬದಲಾಯಿಸಿಕೊಂಡು ಆರತಕ್ಷತೆಗೆ ಸಿದ್ಧರಾಗಿ ಬಂದುಬಿಡಿ” ಎಂದು ಆಜ್ಞಾಪಿಸಿದರು.
ನಂತರದ್ದೆಲ್ಲ ಯಾಂತ್ರಿಕವಾಗಿ ಸಾಗಿತು. ಆರತಕ್ಷತೆಯಲ್ಲಿ ಕುಳಿತಾಗ ನೆಂಟರಿಷ್ಟರು, ಸ್ನೇಹಿತವೃಂದದವರು, ಎಲ್ಲರ ಪರಿಚಯ ಸಾಂಗವಾಗಿ ನಡೆಯಲು ಪ್ರಾರಂಭವಾಯಿತು. ನನ್ನವರ ಒಡಹುಟ್ಟಿದವರೆಲ್ಲರನ್ನೂ ನಾನು ನೋಡಿರಲಿಲ್ಲ. ಅವರುಗಳು ವೇದಿಕೆಗೆ ಬಂದಾಗ ಅವರೆಲ್ಲರನ್ನೂ ನನಗೆ ನನ್ನವರೆ ಪರಿಚಯಿಸಲು ಮುಂದಾದರು. ಆದಕ್ಕವರ ಅಣ್ಣ “ಲೋ ದಯಾ, ನಮ್ಮನ್ನು ನಾವೇ ಪರಿಚಯಿಸಿಕೊಳ್ಳುತ್ತೇವೆ ಬಿಡೋ ಮಾರಾಯ” ಎಂದು ಹೇಳುತ್ತಾ ಮುಂದೆ ಬಂದ ವ್ಯಕ್ತಿಯನ್ನು ನೋಡಿದೆ.

ಅವರು “ನೋಡಮ್ಮಾ, ನಾನು ದಯಾನಂದನ ದೊಡ್ಡ ಅಣ್ಣ ಶಿವಾನಂದ, ಬರೋಡಾದಲ್ಲಿದ್ದೇನೆ, ಈಕೆ ನನ್ನ ಧರ್ಮಪತ್ನಿ ಕೌಸಲ್ಯಾ. ನಮ್ಮ ಮಕ್ಕಳು ಶೀತಲ್, ಶಶಾಂಕ. ಇವಳು ನನ್ನ ಸೋದರಿ ಅನ್ನಪೂರ್ಣ, ಆಕೆಯ ಪತಿ ನಾಗೇಶ್, ಅವರ ಮಕ್ಕಳಿಗೆ ಪರೀಕ್ಷೆ ಸಮಯವಾದ್ದರಿಂದ ಬಂದಿಲ್ಲ. ಇವರು ಚೆನ್ನೈನಲ್ಲಿದ್ದಾರೆ. ಇದೋ ನೋಡು ನನ್ನ ತಮ್ಮ ಸದಾನಂದ, ಮುಂಬೈನಲ್ಲಿದ್ದಾನೆ, ಈತನ ಪತ್ನಿ ಕುಮುದ. ಇವರ ಮಗ ಮುರುಳಿ. ನನ್ನ ಇನ್ನೊಬ್ಬ ತಮ್ಮ ನಿತ್ಯಾನಂದ ಆತನ ಪತ್ನಿ ಮಂದಾರ. ಅವರ ಮಗಳು ಶಿವಾನಿ. ಇವರಿರುವುದು ಪುಣೆಯಲ್ಲಿ. ಹೀಗೆ ನಾವುಗಳು ದೂರದೂರುಗಳಲ್ಲಿ ಇರುವುದರಿಂದ ನಾವ್ಯಾರೂ ನಿನ್ನನ್ನು ನೋಡಲು ಬಂದಿರಲಿಲ್ಲ. ಅಲ್ಲದೆ ನಮ್ಮ ಪ್ರಕಾರ ಮದುವೆಯಾಗುವವರು, ಮದುವೆ ಮಾಡುವವರು ಒಪ್ಪಿದರೆ ಆಯಿತು. ನಮ್ಮಲ್ಲಿ ಯಾರೂ ಯಾವುದೇ ಆಕ್ಷೇಪಣೆ ಮಾಡುವುದಿಲ್ಲ. ಹಾ.. ಇನ್ನೊಂದು ವಿಷಯ, ಕೇಳಿಸಿಕೋ ನಮ್ಮೆಲ್ಲರ ಹೆಸರುಗಳನ್ನು ‘ಆನಂದ’ ದಲ್ಲಿ ಕೊನೆಯಾಗುವಂತೆ ನಮ್ಮ ಹಡೆದವರು ಇಟ್ಟಿದ್ದಾರೆ. ಅದರಂತೆ ನಾವು ಇದ್ದುದರಲ್ಲಿಯೇ ಆನಂದವಾಗಿದ್ದೇವೆ. ನೀನೂ ಸಹ ದಯಾನಂದನೊಡನೆ ಮನೆಯ ಕುಟುಂಬದ ಸದಸ್ಯಳಾಗಿ ಆನಂದವಾಗಿರಬೇಕೆಂದು ನಾವೆಲ್ಲರೂ ಹಾರೈಸುತ್ತೇವೆ” ಎಂದರು.

ಅವರು ಸರಳವಾಗಿ ನೇರವಾಗಿ ಸ್ಪಷ್ಟ ಮಾತುಗಳಿಂದ ಒಡಹುಟ್ಟಿದವರನ್ನು, ಅವರ ಕುಟುಂಬದವರನ್ನು ಪರಿಚಯಿಸಿದ್ದು, ಸೂಚ್ಯವಾಗಿ ಅವರ ರೀತಿನೀತಿಗಳನ್ನು ತಿಳಿಸಿದ ಕ್ರಮ ನನಗೆ ತುಂಬ ಹಿಡಿಸಿತು. ಅವರು ಪರಿಚಯಿಸಿದ ಯಾವ ಜೋಡಿಗಳನ್ನಾಗಲಿ, ಅವರ ಮಕ್ಕಳನ್ನಾಗಲೀ ತೆಗೆದು ಹಾಕುವಂತಿರಲಿಲ್ಲ. ಅದರಲ್ಲೂ ನನ್ನವರ ಅಕ್ಕನವರು ಎಲ್ಲರಿಗಿಂತ ಚೆಲುವೆ ಎಂದೆನ್ನಿಸಿತು. ಅಹಮಿಕೆ ಇಲ್ಲದ ಸದಾಸೀದಾ ವ್ಯಕ್ತಿಗಳು. ಇಂತಹ ಕುಟುಂಬವನ್ನು ನಾನು ಆಯ್ಕೆ ಮಾಡಿಕೊಂಡದ್ದು ತಪ್ಪಿಲ್ಲ ಎನ್ನಿಸಿ ಮನಸ್ಸು ನಿರಾಳವಾಯಿತು.

ಆರತಕ್ಷತೆ ಮುಗಿದ ತಕ್ಷಣ ಊಟದ ಏರ್ಪಾಟಾಗಿತ್ತು. ನಮ್ಮ ಕಡೆ, ಅವರಕಡೆ ಎಲ್ಲರೂ ಸೇರಿ ಸುಮಾರು ಇನ್ನೂರು ಜನರಿರಬಹುದು. ಊಟದ ವಿಷಯದಲ್ಲೂ ಬೀಗರ ಕಡೆಯಿಂದ ಮುನ್ಸೂಚನೆ ಬಂದಿತ್ತು. ಒಂದೇ ಊಟವೆಂದು ಹತ್ತಾರು ಬಗೆಯ ತಿನಿಸುಗಳನ್ನು ಮಾಡಿಸಬೇಡಿ. ಎಲ್ಲವನ್ನೂ ಬಡಿಸಿಕೊಂಡು ತಿನ್ನದೇ ಎಲೆಮೇಲೆ ಉಳಿಸಿ ಬಿಸಾಡುವ ಬದಲಿಗೆ ಎರಡು ರೀತಿಯ ಕೋಸಂಬರಿಗಳು, ಪಲ್ಯ, ಉಪ್ಪಿನಕಾಯಿ, ಹಪ್ಪಳಸಂಡಿಗೆ, ತಿಳಿಸಾರು, ಒಂದು ಸಿಹಿ ಐಟಂ, ಮೊಸರು, ಅನ್ನ ಇಷ್ಟಿದ್ದರೆ ಸಾಕು. ನಿಮಗಿಷ್ಟವಾದ ತರಕಾರಿ, ಸಿಹಿ ಎಂದಿದ್ದಕ್ಕೆ ನನ್ನ ಹೆತ್ತವರು, ಅಣ್ಣಂದಿರು ಅಸ್ತು ಎಂದಿದ್ದರು. ಅದರಂತೆಯೇ ತಯಾರಿ, ಸಿಹಿಗೆ ಚಿರೋಟಿ, ಭೋಜನ ಅಚ್ಚುಕಟ್ಟಾಗಿ ನಡೆದಿತ್ತು. ಇದೊಂದು ಮದುವೆಯ ಮನೆ ಎನುವುದಕ್ಕಿಂತ ಸ್ನೇಹಬಳಗದ ಕೂಟ ಎಂದರೆ ಅತಿಶಯೋಕ್ತಿಯಾಗಲಾರದು. ಬಹಳ ಕಾಲದಿಂದ ಪರಿಚಯದವರೋ ಎನ್ನುವಂತೆ ಒಬ್ಬರಿಗೊಬ್ರರು ಹೊಂದಿಕೊಂಡು ಕೆಲಸಕಾರ್ಯಗಳಲ್ಲಿ ಭಾಗಿಯಾಗುತ್ತ ಸಮಾರಂಭವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದರು.

ಊಟವಾದ ಮೇಲೆ ಎಲ್ಲರಿಗೂ ಫಲತಾಂಬೂಲ ನೀಡಿ ಬೀಳ್ಕೊಡುವ ಸರದಿ ಪ್ರಾರಂಭವಾಯಿತು. ಬುಟ್ಟಿ ತುಂಬ ತಿಂಡಿ ತುಂಬಿ, ಮಡಿಲಕ್ಕಿ ತುಂಬಿ ಗಂಡನ ಮನೆಗೆ ಕಳುಹಿಸಲು ಹೆತ್ತವರು, ಒಡಹುಟ್ಟಿದವರು ಸಿದ್ಧರಾದರು.

ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=31139

(ಮುಂದುವರಿಯುವುದು)
-ಬಿ.ಆರ್ ನಾಗರತ್ನ, ಮೈಸೂರು

9 Responses

  1. ನಯನ ಬಜಕೂಡ್ಲು says:

    ಬದುಕೆಂಬ ಆಗಸದ ಬಗೆ ಬಗೆಯ ಬಣ್ಣಗಳು. ಕಾದಂಬರಿ ಬಹಳ ಚೆನ್ನಾಗಿದೆ.

  2. ಮಾಲತಿ says:
  3. ASHA nooji says:

    ಚೆನ್ನಾಗಿ ಮೂಡಿ ಬಂದಿದೆ ಕಾದಂಬರಿ

  4. ಶಂಕರಿ ಶರ್ಮ says:

    ಈ ಸಲದ ಕಥಾಭಾಗವು ಬಹಳ ಚೆನ್ನಾಗಿ ಮೂಡಿಬಂದಿದೆ. ಗಡದ್ದಾದ ಮದುವೆ ಊಟವಂತೂ ಸಿಕ್ಕಿತು ಈಸರ್ತಿ! ಮುಂದೇನಾಗುವುದೋ ಎನ್ನುವ ಕಾತರ.. ಚಂದದ ಧಾರಾವಾಹಿ…ಧನ್ಯವಾದಗಳು ಮೇಡಂ.

  5. ಬಿ.ಆರ್.ನಾಗರತ್ನ says:

    ಸಹೃದಯ ಓದುಗರಿಗೆ ಧನ್ಯವಾದಗಳು.

  6. ನಮ್ಮ ಕಾಲದ ಮದುವೆಯ ಮೆಲುಕು ಹಾಕುವಂತಾಯಿತು

  7. Vandana says:

    Kadambari chennagi baruttide

  8. ಬಿ.ಆರ್.ನಾಗರತ್ನ says:

    ಧನ್ಯವಾದಗಳು.

  9. Savithri bhat says:

    ಮದುವೆ ಸಮಾರಂಭಕ್ಕೆ ಹೋದಂತೆ ಬಂದುಬಳಗದವರನ್ನು
    ನೋಡಿದಷ್ಟು ಕುಷಿಯಾಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: