ಪರಾಗ

ವಾಟ್ಸಾಪ್ ಕಥೆ 79 : ನಿಜವಾದ ಸಂಪಾದನೆ.

Share Button

ಒಬ್ಬ ಮನುಷ್ಯನ ಅಂತ್ಯಕಾಲ ಸಮೀಪಿಸಿತ್ತು. ಅವನನ್ನು ಕರೆದೊಯ್ಯಲು ತನ್ನ ಜೋಳಿಗೆಯೊಂದನ್ನು ಹಿಡಿದಿದ್ದ ಯಮದೂತ ನಿಂತಿದ್ದುದನ್ನು ಕಂಡ. ಆ ದೂತನು ‘ಬಾ ಮಗು ನಿನ್ನ ಕಾಲ ಸಮಾಪ್ತಿ ಆಯಿತು. ಹೊರಡುವ ಸಮಯ ಬಂದಿದೆ” ಎಂದು ಕರೆದ.
ಮನುಷ್ಯನಿಗೆ ದೂತನು ಜೋಳಿಗೆಯನ್ನು ಹಿಡಿದಿದ್ದಾನಲ್ಲಾ ಅದರಲ್ಲೇನಿದೆ ತಿಳಿದುಕೊಳ್ಳುವ ಕುತೂಹಲ “ನಿನ್ನ ಜೋಳಿಗೆಯಲ್ಲೇನಿದೆ?” ಎಂದು ಕೇಳಿದ.
ದೂತನು “ಅದು ನಿನಗೆ ಸಂಬಂಧಿಸಿದ ವಸ್ತುಗಳು” ಎಂದ.
“ಹಾಗಾದರೆ ನನ್ನ ಹಣ, ಬಟ್ಟೆಬರೆ, ಪುಸ್ತಕಗಳು ಇವೆಲ್ಲವೂ ಇವೆಯಾ?”
“ಇಲ್ಲಪ್ಪಾ, ಆ ವಸ್ತುಗಳೆಲ್ಲ ಈ ಭೂಮಿಗೆ ಸಂಬಂಧಿಸಿದವು. ಅದ್ಯಾವುದೂ ನಿನ್ನವಾಗಿರಲಿಲ್ಲ”
“ನನ್ನ ನೆನಪುಗಳು?”
“ಊಹು, ಅವು ಕಾಲಕ್ಕೆ ಸಂಬಂಧಿಸಿದವು”
“ನನ್ನ ಸ್ನೇಹಿತರು, ಕುಟುಣಬದ ಸದಸ್ಯರು, ಸಂಬಂಧಿಕರು?”
“ಹುಚ್ಚಪ್ಪಾ, ಅವು ನೀನು ಪ್ರಯಾಣಿಸಿದ ಬದುಕಿನ ದಾರಿಗೆ ಸಂಬಂಧಿಸಿದವು” ಎಂದನು

ಆಗ ಮನುಷ್ಯನ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತು. ಜಾರುತ್ತಿರುವ ಕಂಬನಿಯನ್ನು ಒರೆಸಿಕೊಳ್ಳಲೂ ಹೋಗದೆ “ಹಾಗಾದರೆ ಮತ್ತೇನಿದೆ?” ಎಂದು ಕೇಳಿದಾಗ ಯಮದೂತನು ತನ್ನ ಜೋಳಿಗೆಯನ್ನು ಪೂರ್ತಿಯಾಗಿ ತೆರೆದು ತೋರಿದನು. ಅದು ಖಾಲಿಯಾಗಿತ್ತು.
“ಹಾಗಾದರೆ ನನಗೆ ಸಂಬಂಧಿಸಿದ್ದು ಏನೂ ಇಲ್ಲವೇ?” ಎಂದು ನಿರಾಸೆಯಿಂದ ಮನುಷ್ಯ ಕೇಳಿದನು.
ದೂತನು ಒಮ್ಮೆ ನಗುತ್ತಾ “ಮಗೂ ನಿಜ ನಿನಗೆ ಸಂಬಂಧಿಸಿದ್ದು ಏನೂ ಇಲ್ಲವೇ ಇಲ್ಲ. ಒಂದನ್ನು ಹೊರತು ಪಡಿಸಿ” ಎಂದನು.
ಮನುಷ್ಯ ಅಚ್ಚರಿಯಿಂದ “ಯಾವುದದು ಹೊರತು ಪಡಿಸಿದ್ದು?”
“ಈ ಕ್ಷಣ ಮಾತ್ರ. ನೀನು ನಿನಗಾಗಿ ಬದುಕಿದ ಪ್ರತಿಕ್ಷಣ ನಿನ್ನದು.” ಎಂದುತ್ತರಿಸಿದ ದೂತ.

ಹೌದಲ್ಲವೇ? ನಾವು ಬದುಕಿದ್ದಾಗ ಪ್ರತಿಕ್ಷಣವೂ ನಮ್ಮದೇ. ಹೇಗೆಂದರೆ ನಾವು ಬದುಕಿದ ರೀತಿಯಿಂದ ಅದು ನಿರ್ಧರಿಸಲ್ಪಟ್ಟಿದೆ. ದಯೆ, ಶಾಂತಿ, ಪ್ರಾಮಾಣಿಕತೆ, ಪ್ರೇಮ, ಆರೋಗ್ಯಕರ ಮನಸ್ಥಿತಿ, ಈಗಿರುವಂತೆಯೇ ಬದುಕನ್ನು ಒಪ್ಪಿಕೊಳ್ಳುವುದು ಇಂತಹವನ್ನು ನಾಶಮಾಡುವ ನಕಾರಾತ್ಮಕ ಗುಣಗಳು ನಮ್ಮಿಂದ ದೂರವಿರಿಸಿರಬೇಕು. ಹಾಗಾದಾಗ ಅವು ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳಲಾರವು. ಅವುಗಳಿಂದ ಪ್ರಭಾವಿತರಾಗದೇ ಇದ್ದರೆ ಅವು ನಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ. ನಿರಂತರ ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಳ್ಳುತ್ತಾ ಹೋದಂತೆ ಕೆಟ್ಟ ಯೋಚನೆಗಳು ನಮ್ಮ ಮನಸ್ಸಿನ ನೆಮ್ಮದಿಯನ್ನು ಕೆಡಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಆಗ ನಮ್ಮ ಆಲೋಚನೆಗಳನ್ನು ನಾವೇ ನಿಯಂತ್ರಿಸುವುದನ್ನು ಕಲಿತುಕೊಳ್ಳುತ್ತೇವೆ. ಹಾಗಾದಾಗ ಬದುಕಿನ ಪ್ರತಿಕ್ಷಣವೂ ಶ್ರೀಮಂತವಾಗುತ್ತದೆ. ಅದು ನಮ್ಮದಾಗುತ್ತದೆ.

ಸಂಗ್ರಹಣೆ ಮತ್ತು ರೇಖಾಚಿತ್ರ ರಚನೆ : ಬಿ.ಆರ್.ನಾಗರತ್ನ, ಮೈಸೂರು

7 Comments on “ವಾಟ್ಸಾಪ್ ಕಥೆ 79 : ನಿಜವಾದ ಸಂಪಾದನೆ.

  1. ಬದುಕುವ ರೀತಿಯ ಕುರಿತಾಗಿ ಸರಳವಾಗಿ ಉತ್ತಮ ಸಂದೇಶವನ್ನು ನೀಡುವ ಕಥೆ.

  2. ಸಾಗರದಷ್ಟು ಸಕಾರಾತ್ಮಕ ಸಂದೇಶವನ್ನು ಹೊತ್ತ ಪುಟ್ಟ ಕಥೆಯು ಓದುಗರನ್ನು ಸ್ವವಿಮರ್ಶೆಗೆ ಒಳಪಡಿಸುವಂತಿದೆ…ಧನ್ಯವಾದಗಳು ನಾಗರತ್ಮ ಮೇಡಂ.

  3. ಪ್ರಕಟಣೆಗಾಗಿ ಸುರಹೊನ್ನೆ ಪತ್ರಿಕೆಯ ಸಂಪಾದಕರಿಗೆ ಹೃತ್ಪೂರ್ವಕವಾದ ಧನ್ಯವಾದಗಳು…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *