‘ನೆಮ್ಮದಿಯ ನೆಲೆ’-ಎಸಳು 4
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು….. ಮುಂದಕ್ಕೆ ಓದಿ)
ಬೀಗರು ” ನಮಸ್ಕಾರಾಮ್ಮ, ಇದೇನು ನೆನ್ನೆಯಷ್ಟೇ ಬಂದುಹೋದವರು ಮತ್ತೆ ವಕ್ರಿಸಿದ್ದಾರೆ ಅಂದುಕೊಳ್ಳಬೇಡಿ. ನಾವು ರಾತ್ರಿ ಎಲ್ಲ ಯೋಚಿಸಿ ಈ ನಿರ್ಧಾರಕ್ಕೆ ಬಂದೆವು ” ಎಂದರು. “ಅದು ಸರಿ ದೇವ್ರೂ, ವಿಷಯ ಏನೂಂತ ಬೇಗ ಹೇಳ್ಬಿಡಿ. ಪಾಪ ಅವರು ಆತಂಕದಿಂದ ನಿಂತಿದ್ದಾರೆ” ಎಂದರು ಶಾಸ್ತ್ರಿಗಳು. “ಹಾ ಹಾ..ಅಲ್ಲಿಗೇ ಬರುತ್ತಿದ್ದೇನೆ. ನೀವು ಶಾಸ್ತ್ರಿಗಳ ಕೈಯಲ್ಲಿ ಹೇಳಿಕಳುಹಿಸಿದಾಗ ನಾವು ಯಾವಾಗಲಾದರೂ ಸಿದ್ಧವೆಂದು ಹೇಳಿದ್ದೆವು. ಆದರೆ ನಾವು ಇಲ್ಲಿಂದ ಹೋದಮೇಲೆ ನನ್ನ ಮಗ ಈ ಲಗ್ನಪತ್ರಿಕೆಯ ಕಾರ್ಯವೊಂದು ಸಾರಿ. ಮತ್ತೊಂದು ಸಾರಿ ಮದುವೆ ಎಂಬ ಪ್ರಕ್ರಿಯೆಗಳೇಕೆ? ಎರಡೂ ಕುಟುಂಬಗಳಲ್ಲಿನ ಹಿರಿಯರು, ಮದುವೆ ಮಾಡಿಕೊಳ್ಳುವವರು ಒಪ್ಪಿಕೊಂಡ ಮೇಲೆ ಮುಗಿಯಿತು. ಒಂದು ದೇವಸ್ಥಾನದಲ್ಲಿ ಮಾಂಗಲ್ಯಧಾರಣೆ ಮಾಡಿಸಿ ನಂತರ ಒಂದು ಆರತಕ್ಷತೆ ಇಟ್ಟುಕೊಂಡು ಕರೆಯಬೇಕಾದವರನ್ನೆಲ್ಲ ಒಮ್ಮೆಗೇ ಕರೆದು ಮುಗಿಸಿದರಾಯಿತು. ಅಲ್ಲೆಲ್ಲೂ ಉಳಿದುಕೊಳ್ಳದೆ ಅದೇ ಸಂಜೆಗೆ ಹುಡುಗಿಯನ್ನು ಕರೆತಂದು ಮನೆತುಂಬಿಸಿಕೊಂಡರಾಯಿತು. ಹುಡುಗರಿಗೆ ಅವರದ್ದೇ ಕೆಲಸಕಾರ್ಯಗಳಿದ್ದು ಬಡುವು ಸಿಗುವುದು ಕಷ್ಟ. ವಯಸ್ಸಾದವರೇ ಎಲ್ಲದಕ್ಕೂ ಓಡಾಡುವುದು ಸುಲಭದ ಮಾತಲ್ಲ. ಮುಖ್ಯವಾದವರನ್ನು ಆಹ್ವಾನಿಸಲಿ. ನಾವೂ ಹಾಗೇ ಮಾಡೋಣ. ಎಷ್ಟು ಜನರನ್ನು ಸೇರಿಸಿದರೂ ಅಷ್ಟೇ. ಅವರ ಮನೆಯೇ ಸಾಕಷ್ಟು ದೊಡ್ಡದಾಗಿದೆ. ಅಲ್ಲೇ ಚಪ್ಪರ ಹಾಕಿಸಿ ಮಾಡಿಕೊಟ್ಟರೂ ಸರಿಯೇ” ಎಂದು ಹೇಳಿದ. ನನಗೂ ನನ್ನವಳಿಗೂ ಅದೇ ಉತ್ತಮವೆಂದು ಅನ್ನಿಸಿತು. ತಡಮಾಡುವುದು ಬೇಡವೆಂದು ನಾನೇ ತಿಳಿಸಿ ಹೋಗೋಣವೆಂದು ಬಂದುಬಿಟ್ಟೆ. ನಾನಂತೂ ನಮ್ಮ ಅಭಿಪ್ರಾಯವನ್ನು ನಿಮಗೆ ತಿಳಿಸಿದ್ದೇನೆ. ಮುಂದಿನ ಆಯ್ಕೆ ನಿಮ್ಮದೆ. ನೀವು ಹೇಗೆ ಹೇಳುತ್ತೀರೋ ಹಾಗೆ. ನಾವಂತೂ ನಿಮ್ಮ ನಿರ್ಧಾರಕ್ಕೆ ಬದ್ಧರು” ಎಂದರು.
ಅವರ ಮಾತುಗಳನ್ನು ಕೇಳಿದ ನಾನು ನಿರಾತಂಕದಿಂದ ನೆಮ್ಮದಿಯ ಉಸಿರುಬಿಟ್ಟೆ. ಹಾಗೇ ಅವರ ಉದಾತ್ತ ಧ್ಯೇಯದ ಬಗ್ಗೆ ಹೆಮ್ಮೆಯೆನಿಸಿತು. ನನ್ನನ್ನು ನೋಡಲು ಬಂದಾಗ ಇದೇ ಊರಿನಲ್ಲಿದ್ದ ನನ್ನ ಒಡಹುಟ್ಟಿದವರು ಬರದೇ ಹೋದದ್ದನ್ನು ಅವರು ಗಮನಿಸಿದ್ದಾರೆ. ಅವರ ಮನೆಯಲ್ಲಿ ಹೇಗೋ ಅಥವಾ ಅಲ್ಲಿಯೂ ಇದೇ ಅನುಭವವೋ, ಅದಿಲ್ಲದಿದ್ದರೆ ನನ್ನನ್ನು ಮದುವೆಯ ನಂತರ ನಂಜನಗೂಡಿನ ಮನೆಯಲ್ಲಿಯೇ ಇರಬೇಕೆಂದು ಏಕೆ ಕೇಳಿಕೊಳ್ಳುತ್ತಿದ್ದರು. ಹುಂ ಇದಕ್ಕೆ ನನ್ನ ಹೆತ್ತವರು ಏನು ಹೇಳಬಹುದೆಂದು ಮೈಯೆಲ್ಲಾ ಕಿವಿಯಾಗಿಸಿ ಇನ್ನೂ ಸ್ವಲ್ಪ ಮುಂದೆ ಬಾಗಿ ನಿಂತೆ.
ಸ್ವಲ್ಪ ಹೊತ್ತು ಯಾರೂ ಏನೂ ಮಾತನಾಡಲಿಲ್ಲ. ಕೊನೆಗೆ ಅವರೇ ಮೌನ ಮುರಿದು “ಇದೇನು ದಂಪತಿಗಳು ಏನೂ ಮಾತನಾಡದೆ ಬೊಂಬೆಗಳಂತೆ ಕುಳಿತಿರಿ?” ಎಂದರು. ನನ್ನ ಅಪ್ಪ, ಅಮ್ಮ “ನಮಗೇನು ಹೇಳಬೇಕೋ ಗೊತ್ತಾಗದೆ ಮೂಕರಾಗಿದ್ದೇವೆ. ಸ್ವಲ್ಪ ಆಲೋಚಿಸಿ ಹೇಳಬಹುದೇ?” ಎಂದರು. “ಓಹೋ ಅದಕ್ಕೇನಂತೆ, ಹಾಗೆ ಸಂಕೋಚಪಟ್ಟುಕೊಳ್ಳಬೇಡಿ. ನಮಗೇನೂ ಬೇಸರವಿಲ್ಲ. ನಿಧಾನವಾಗಿ ಚರ್ಚಿಸಿ ಹೇಳಿ. ನಾನಿನ್ನು ಬರುತ್ತೇನೆ” ಎಂದು ಎದ್ದರು. ತಕ್ಷಣ ಅಮ್ಮ “ಅಯ್ಯೋ, ಹಾಗೇ ಹೊರಟು ಬಿಡುವುದೇ? ಸ್ವಲ್ಪ ತಿಂಡಿಯನ್ನಾದರೂ..” ಎಂದರು.
“ಕ್ಷಮಿಸೀಮ್ಮಾ, ನಾನು ತಿಂಡಿತಿಂದೇ ಹೊರಟಿದ್ದು. ಪದೇಪದೇ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೆ ನೆನ್ನೆ ತೆಗೆದುಕೊಂಡಿರಲ್ಲಾ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಅದನ್ನೂ ಹೇಳಿಬಿಡುತ್ತೇನೆ. ಇಲ್ಲಿಗೆ ಬರುವಾಗಲೇ ನೆನ್ನೆ ಅಮ್ಮ, ಮಗ ಸೇರಿ ಮಾತುಕತೆ ನಡೆಸಿ ನಮಗೆ ಸಮ್ಮತಿ ಎನ್ನಿಸಿ ಅವರೇನಾದರೂ ಕೊಟ್ಟರೆ ನಾವುಗಳು ತಿನ್ನುವಾಗ ನೀವು ಹಾಗೇ ಬಿಮ್ಮನೆ ಕುಳಿತರೆ ಸರಿಯಾಗುವುದಿಲ್ಲ ಎಂದು ಹೇಳಿ ನನಗೆ ಬರೀ ಒಂದು ಲೋಟ ಹಾಲು ಹಣ್ಣು ಕೊಟ್ಟು ಕರೆತಂದಿದ್ದರು. ಅದಕ್ಕೇ ನೆನ್ನೆ ತಿಂದದ್ದು. ಈಗ ಕಾಫಿ ನಡೆಯುತ್ತೆ” ಎಂದು ಹೇಳಿ ಅಮ್ಮನಿತ್ತ ಕಾಫಿ ಕುಡಿದು ಹೊರಟುಬಿಟ್ಟರು. “ಈ ಬಗ್ಗೆ ನೀವು ಮಕ್ಕಳೊಡನೆ ಸಮಾಲೋಚಿಸಿ ನಿಮ್ಮ ನಿರ್ಧಾರ ನನಗೆ ತಿಳಿಸಿ. ನಾನು ಅವರಿಗೆ ಹೇಳುತ್ತೇನೆ “ಎಂದು ಶ್ಯಾಮರಾಯರೂ ಅವರೊಡನೆ ನಡೆದೇಬಿಟ್ಟರು.
ನಮ್ಮ ಮನೆಗೆ ಸಂಬಂಧವನ್ನು ಕೇಳಿಕೊಂಡು ಬಂದಾಗ ‘ನ’ ಕಾರಾತ್ಮಕ ಮನೋಭಾವನೆಯಿಂದ ಚಡಪಡಿಸುತ್ತಿದ್ದ ನನ್ನ ಪೋಷಕರಿಗೆ ನಾನು ನನ್ನ ಸಮ್ಮತಿಯನ್ನು ತಿಳಿಸುವುದರೊಂದಿಗೆ ಈ ಬಾಂಧವ್ಯಕ್ಕೆ ನಾಂದಿ ಹಾಡಿದ್ದೆ. ಅದರಂತೆ ವಧುಪರೀಕ್ಷೆ ನಡೆದು ಸಕಾರಾತ್ಮಕ ಉತ್ತರವೂ ಗಂಡಿನವರಿಂದ ಬಂದಿತ್ತು. ಅದನ್ನು ಸಂತೋಷದಿಂದ ನನ್ನ ಒಡಹುಟ್ಟಿದವರಿಗೆ ತಿಳಿಸಿ ಮುಂದಿನ ತಯಾರಿಯಲ್ಲಿದ್ದರು ಪೋಷಕರು. ಈಗ ಧಿಢೀರ್ ಬೆಳವಣಿಗೆಯಿಂದ ಗೊಂದಲಗೊಂಡು ಹೇಗೆ ಮುಂದುವರಿಯಬೇಕೆಂದು ಒದ್ದಾಡುತ್ತಿದ್ದಾರೆ ಹೆತ್ತವರು. ನನ್ನ ಒಡಹುಟ್ಟಿದವರ ನಾಟಕೀಯ ನಡವಳಿಕೆಯಿಂದ ನೊಂದುಕೊಂಡಿದ್ದ ನನಗೆ ನನ್ನನ್ನು ಕೈಹಿಡಿಯುವಾತನ ಯೋಚನೆ ಸರಿಯೆನ್ನಿಸಿತು. ನಾನೇ ವಿಷಯವನ್ನು ಮೊದಲು ಮಾತನಾಡಿದರೆ ಒಳಿತೆನ್ನಿಸಿ “ಅಪ್ಪಾ, ಅಮ್ಮ ಏನು ಯೋಚಿಸುತ್ತಿದ್ದೀರಿ?” ಎಂದೆ. “ಅದೇ ಮಗಳೇ ನಮ್ಮ ಭಾವೀ ಬೀಗರು ಹೇಳಿದ್ದರ ಬಗ್ಗೆ. ಇದನ್ನು ನಮ್ಮ ಗಂಡುಮಕ್ಕಳಿಗೆ ಹೇಗೆ ತಿಳಿಸಬೇಕು?, ಬಂಧುಬಾಂಧವರು ಏನನ್ನುತ್ತಾರೋ?, ಮೇಲಾಗಿ ಮದುವೆಯ ಬಗ್ಗೆ ನೀನು ಏನೇನು ಕನಸುಗಳನ್ನು ಕಟ್ಟಿಕೊಂಡಿದ್ದೀಯೋ? ಇವುಗಳ ಬಗ್ಗೆ ತೂಗಿ ತೂಗಿ ವಿಚಾರ ಮಾಡುತ್ತಿದ್ದೇವೆ”ಎಂದರು ಅಪ್ಪ. ಅದಕ್ಕೆ ಹೌದೆನ್ನುವಂತೆ ತಲೆ ಆಡಿಸಿದರು ಅಮ್ಮ. ನನಗೆ ಅವರನ್ನು ನೋಡಿ ನಗು ಬಂತು. ಕಷ್ಟಪಟ್ಟು ತಡೆದುಕೊಂಡು “ಇವೇ ಆಲೋಚನೆಗಳಾ? ಹಾಗಾದರೆ ಇವುಗಳಿಗೆಲ್ಲ ನಾನೊಂದು ಪರಿಹಾರ ಸೂಚಿಸಲಾ? ಅಪ್ಪಾ, ಚಿಕ್ಕ ಬಾಯಲ್ಲಿ ದೊಡ್ಡಮಾತೆಂದು ಭಾವಿಸಬೇಡಿ. ಅಲ್ಲದೆ ನಿಮಗೆ ತಿಳಿಯದೇ ಇರುವುದೇನಿದೆ, ತೀರ್ಮಾನಕ್ಕೆ ಬರಲು ಹಿಂಜರಿಯುತ್ತಿದ್ದೀರಷ್ಟೇ” ಅಂದೆ.
“ಅದ್ಯಾಕೆ ಮಗಳೇ ಹಾಗೆನ್ನುತ್ತೀ, ಇದು ನಿನ್ನದೇ ಬಾಳಿನ ಪ್ರಶ್ನೆ. ಅದೇನು ಹೇಳು ಸಾಧ್ಯವೆನ್ನಿಸಿದರೆ ನಡೆಸೋಣ ಎಂದರು ಅಪ್ಪ. ಬಹುತೇಕ ಜನರು ಸರಳ ವಿವಾಹಗಳನ್ನು ಮಾಡಬೇಕೆಂದು ಬಾಯಲ್ಲಿ ಹೇಳುತ್ತಾರೆ. ಆದರೆ ಬಹುತೇಕರು ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲ. ಯಾರು ಏನು ಅಂದುಕೊಳ್ಳುತ್ತಾರೋ? ಎನ್ನುವ ಅಂಜಿಕೆ, ಅಂತಸ್ತಿಗೆ ಕುಂದುಬರಬಹುದೆನ್ನುವ ಪ್ರತಿಷ್ಠೆ, ಅವನ್ನು ಗಮನದಲ್ಲಿಟ್ಟುಕೊಂಡೇ ಅನೇಕ ರೀತಿಯ ಬೇಡಿಕೆಗಳನ್ನು ಮುಂದೊಡ್ಡುವ ವರಮಹಾಶಯರ ಕುಟುಂಬದವರು, ತಮ್ಮ ಕೈಯಲ್ಲಾಗದಿದ್ದರೂ ಕಷ್ಟಪಟ್ಟು ಹೆಣಗಾಡುತ್ತಾ ಅವನ್ನು ಪೂರೈಸಲು ಸಾಲಗಾರರಾಗಿ ಜೀವನ ಪರ್ಯಂತ ಒದ್ದಾಡುವವರನ್ನು ಕಂಡಿದ್ದೀರಿ. ಇವೆಲ್ಲ ನಿಮ್ಮೆದುರಿಗಿಲ್ಲದಿದ್ದರೂ ನಾನು ಭಾವೀ ಮಾವ, ಅತ್ತೆ, ಪತಿಯ ಅಭಿಪ್ರಾಯವನ್ನು ಅನುಮೋದಿಸುತ್ತೇನೆ. ಹೇಗೇ ಮಾಡಿದರೂ ಅದರಲ್ಲಿ ಲೋಪಗಳನ್ನು ಹುಡುಕುವ ಜನಗಳಿದ್ದೇ ಇರುತ್ತಾರೆ. ನಾವು ಗಟ್ಟಿ ನಿರ್ಧಾರ ತಳೆದು ನಿಂತರೆ ಯಾರೂ ಏನೂ ಮಾಡಲಾರರು. ಇನ್ನು ಅಣ್ಣಂದಿರು, ಅತ್ತಿಗೆಯರು, ಅಕ್ಕನ ವಿಚಾರಗಳ ಬಗ್ಗೆ ನಿಮಗೆ ಈಗಾಗಲೇ ಮನವರಿಕೆಯಾಗಿದೆ. ಹೆಚ್ಚಿಗೆ ವಿವರಿಸಿ ಹೇಳುವುದೇನಿದೆ. ಇದು ನನ್ನ ಸ್ಪಷ್ಟವಾದ ನೇರವಾದ ಅಭಿಪ್ರಾಯ. ಇದರಿಂದ ನನಗಾವುದೇ ಬೇಸರವಾಗಲೀ, ನಿರಾಸೆಯಾಗಲಿ ಆಗುವುದಿಲ್ಲ. ತೀರ್ಮಾನ ತೆಗೆದುಕೊಳ್ಳುವುದು ನಿಮಗೆ ಬಿಟ್ಟದ್ದು” ಎಂದು ನನ್ನ ಹೆತ್ತವರಿಗೆ ಹೇಳಿದೆ. ಆಗ ಕೆಲಸದ ಸಾಕಮ್ಮನ ಆಗಮನವಾದ್ದರಿಂದ ಅಮ್ಮ ಅವಳಿಗೆ ತಿಂಡಿ ಕೊಡಲು ನನಗೊಪ್ಪಿಸಿದ ಕೆಲಸ ಮಾಡಲು ಒಳನಡೆದೆ.
ಇವೆಲ್ಲ ಆದ ಒಂದೆರಡು ದಿನ ಮದುವೆಯ ಬಗ್ಗೆ ನನ್ನೆದುರಿನಲ್ಲಿ ಯಾವ ಮಾತುಕತೆಗಳೂ ನಡೆಯಲಿಲ್ಲ. ಕಾರಣ ಅಣ್ಣ, ಅತ್ತಿಗೆಯರು ನಮ್ಮ ಮನೆಗೆ ಮತ್ತೆ ಆಗಮಿಸಿದರು. ನಮ್ಮ ಭಾವೀ ಬೀಗರ ಮನೆಯವರ ಅಭಿಪ್ರಾಯಕ್ಕೆ ಅವರುಗಳು ಪ್ರತಿಕ್ರಿಯೆ ಸೂಚಿಸಲು ಬಂದಿದ್ದಾರೋ ಅಥವಾ ಮತ್ತಿನ್ನೇಕೋ ಎಂದು ಯೋಚಿಸುತ್ತಿದ್ದಾಗಲೇ ಅತ್ತಿಗೆಯರಿಬ್ಬರೂ “ಏನಮ್ಮಾ ಸುಕನ್ಯಾ, ನಿನಗೆ ಸರಳ ವಿವಾಹವಂತೆ, ಅಥವಾ ತಾಳಿಭಾಗ್ಯವನ್ನು ಸಿಂಪಲ್ ಮಾಡಿ ಮೂರು ಗಂಟು ಹಾಕಿಸಿ ಮುಗಿಸುತ್ತಾರೇನೋ? ” ಎಂದು ಚುಡಾಯಿಸಿದರು. ನನಗೆ ನೀವುಗಳು ಗಂಟು ಉಳಿಸಲು ನಮ್ಮ ಅಣ್ಣಂದಿರನ್ನು ಬುಟ್ಟಿಗೆ ಹಾಕಿಕೊಂಡು ನಮ್ಮ ಹೆತ್ತವರ ಹತ್ತಿರ ಉಳಿತಾಯವಾದ ಗಂಟನ್ನು ಇಡಿಯಾಗಿ ದಕ್ಕಿಸಿಕೊಂಡಿರಲ್ಲವೇ ಎಂದೆನ್ನಲು ಬಾಯಿಯ ತುದಿಯವರೆಗೂ ಬಂದರೂ ಬೇಡ ಇದರಿಂದ ಇನ್ನೇನಾದರೂ ಗದ್ದಲವಾದೀತು ಎಂದು ಸುಮ್ಮನಿದ್ದೆ.
ನೋಡೋಣ ನನ್ನ ಅಣ್ಣಂದಿರೇನು ಹೇಳುತ್ತಾರೋ? ಅಂದುಕೊಳ್ಳುತ್ತಿದ್ದಂತೆ ಅಣ್ಣಂದಿರು “ಅಲೆಲೆ ! ಈ ವಿಚಾರ ನಮ್ಮ ಮೊದ್ದು ತಲೆಗಳಿಗೆ ಹೊಳೆಯಲೇ ಇಲ್ಲ. ಏನು ಸೋದರೀ, ಎಷ್ಟು ನಿಮ್ಮ ಬಡ್ಜಟ್? ನಿನ್ನ ಆದರ್ಶ ಪುರುಷನ ಲೆಕ್ಕಾಚಾರದ ಒಳಗುಟ್ಟೇನು? ನಮ್ಮ ಅಪ್ಪಾ ಅಮ್ಮ ಪೆದ್ದುಗಳು ಇದರ ಹಿಂದಿರುವ ಮರ್ಮವನ್ನು ಅರಿಯದೇ ಅವರನ್ನು ಹೊಗಳಿದ್ದೇ ಹೊಗಳಿದ್ದು” ಅವರ ಮುಂದಿನ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದ್ದರಿಂದ ನಾನು ಎದ್ದು ನನ್ನ ರೂಮಿಗೆ ಬಂದುಬಿಟ್ಟೆ. ಆದರೂ ಅವರುಗಳ ವ್ಯಂಗ್ಯ ನಗು ನನ್ನ ಕಿವಿಗಳಿಗೆ ಬೇಡವೆಂದರೂ ಕೇಳಿಸುತ್ತಿತ್ತು. ಛೀ..ಅತ್ತಿಗೆಯರಂತೂ ಹೊರಗಿನಿಂದ ಬಂದವರು, ಆದರೆ ಒಂದೇ ರಕ್ತ ಹಂಚಿಕೊಂಡು ಹುಟ್ಟಿದ್ದ ನನ್ನ ಅಣ್ಣಂದಿರಿಗೇನಾಗಿದೆ? ಛೀ..ಛೀ ಮನಸ್ಸು ಬಹಳ ನೊಂದಿತು. ಹೆತ್ತವರು ಅವರೊಡನೆ ಎಲ್ಲ ವಿಷಯಗಳನ್ನು ಚರ್ಚಿಸಿದ್ದಾರೆಂದು ತಿಳಿಯಿತು. ಹಾಗೆಯೇ ನನ್ನ ಅಭಿಪ್ರಾಯಕ್ಕೆ ಅವರು ಮಾನ್ಯತೆ ನೀಡಿದ್ದಾರೆಂಬ ವಿಷಯ ಕೂಡ ಮನದಟ್ಟಾಗಿ ಸಂತಸವಾಯಿತು. ನಂತರ ಹೆತ್ತವರೇ ಭಾವೀ ಬೀಗರ ಮನೆಗೆ ಹೋಗಿ ಖುದ್ದಾಗಿ ತಮ್ಮ ಸಮ್ಮತಿಯನ್ನು ತಿಳಿಸಿ ಬಂದರು.
ಒಂದು ವಾರದ ನಂತರ ಅಣ್ಣಂದಿರ ಕುಟುಂಬ ಮನೆಗೆ ಆಗಮಿಸಿತು ಅನ್ನುವುದಕ್ಕಿಂತ ಅಪ್ಪನೇ ಫೋನ್ ಮಾಡಿ ಅವರನ್ನು ಕರೆಸಿದ್ದಾರೆಂದರೆ ತಪ್ಪಾಗಲಾರದು. ಮದುವೆಗೆ ಹುಡುಗನ ಬಟ್ಟೆಬರೆಗೆ, ಇತರೆ ಖರ್ಚು, ನೆಂಟರಿಷ್ಟರು, ಮನೆಯವರಿಗೆ ಮತ್ತು ಮಕ್ಕಳಿಗೆ ಉಡುಗೊರೆ, ಮದುಮಗಳಿಗೆ ಬಟ್ಟೆಬರೆ ಇತ್ಯಾದಿ ವಿಷಯಗಳ ಚರ್ಚೆ ಪ್ರಾರಂಭವಾಯಿತು. ಅತ್ತಿಗೆಯಂದಿರು “ಓ ! ಸರಳ ವಿವಾಹವೆಂದಿರಿ, ಅದರಿಂದ ಉಡುಗೊರೆಗಳಿಗೂ ಕತ್ತರಿ ಬೀಳುತ್ತದೇನೋ ಅಂದುಕೊಂಡಿದ್ದೆವು. ಪರವಾಗಿಲ್ಲ ಪದ್ಧತಿಯಂತೆಯೇ ನಡೆಸುತ್ತೀರಿ” ಎಂದು ಕೊಂಕು ನುಡಿಯದೇ ಬಿಡಲಿಲ್ಲ. ಇವರು ಪದ್ಧತಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ ಎಂದುಕೊಂಡೆ ನನ್ನ ಮನಸ್ಸಿನಲ್ಲೇ. ಒಬ್ಬ ಅತ್ತಿಗೆ ಅಂದಹಾಗೆ “ಮಾವಾ, ಲಗ್ನಪತ್ರಿಕೆಯಾದರೂ ಮಾಡಿಸುತ್ತೀರಲ್ಲವಾ? ಅಥವಾ ಹಾಗೇ” ಅನ್ನುವಷ್ಟರಲ್ಲಿ ದೊಡ್ಡಣ್ಣ ರಾಘವ “ಲೇ ಗೀತಾ, ಪತ್ರಿಕೆ ಮಾಡಿಸದಿದ್ದರೆ ಈ ಅರಮನೆಯ ವಿಳಾಸ ಯಾರಿಗೆ ಗೊತ್ತಾಗುತ್ತೇ? ” ಎಂದನು. ಆ ಮಾತುಗಳು ತಮ್ಮ ಕಿವಿಯಮೇಲೆ ಬೀಳಲೇ ಇಲ್ಲವೇನೋ ಎಂಬಂತೆ ಅಪ್ಪ “ನೋಡೀಮ್ಮ, ಈ ಮನೆಯಲ್ಲಿ ನಡೆಯುತ್ತಿರುವ ಕೊನೆಯ ಮಂಗಳಕಾರ್ಯವಾದ್ದರಿಂದ ಕೈ ಸಡಿಲ ಬಿಟ್ಟೇ ಖರ್ಚುಮಾಡಬೇಕೆಂದಿದ್ದೆ. ಆದರೆ ಆ ಹುಡುಗನ ಕಡೆಯವರೇ ಸರಳತೆಯನ್ನು ಬಯಸಿ ಬಾಯಿಬಿಟ್ಟು ಕೇಳಿಕೊಂಡಿದ್ದಾರೆ. ಸುಕನ್ಯಾ ಕೂಡ ತನ್ನ ಸಮ್ಮತಿಯಿತ್ತಿದ್ದಾಳೆ. ಹಾಗೆಂದು ನಾವು ಆಚರಿಸಿಕೊಂಡು ಬಂದಿರುವ ಕೆಲವನ್ನು ಬಿಡಲಾಗುತ್ತದೆಯೇ?” ಎಂದುತ್ತರಿಸಿದರು.
“ಅದು ಸರಿ ಮಾವಾ, ನೀವೆಷ್ಟು ನಮಗೆ ಉಡುಗೊರೆ ಕೊಡಬೇಕೆಂದಿದ್ದೀರೋ ಅಷ್ಟನ್ನು ನಗದಾಗೇ ಕೊಟ್ಟುಬಿಡಿ. ನಾವು ಅದಕ್ಕೆ ಸ್ವಲ್ಪ ಸೇರಿಸಿ ನಮಗೆ, ಮಕ್ಕಳಿಗೇನು ಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ” ಅಂದರು. ಅದಕ್ಕೆ “ಹೌದಪ್ಪಾ, ನಿಮ್ಮ ಸೊಸೆ ಹೇಳಿದ್ದೇ ಸರಿ, ನೀವು ಅದೂ ಇದೂ ಅಂತ ನಮಗಿಷ್ಟವಿಲ್ಲದ್ದನ್ನು ತೆಗೆದುಕೊಟ್ಟರೆ ದಾಕ್ಷಿಣ್ಯಕ್ಕೆ ತೆಗೆದುಕೊಂಡರೂ ಪ್ರಯೋಜನವಿಲ್ಲ. ಅದೇ ಒಳ್ಳೆಯ ಐಡಿಯಾ”ಎಂದರು ಅಣ್ಣಂದಿರು.
ಅವರುಗಳ ನಡುವೆ ನಡೆಯುತ್ತಿದ್ದ ಸಂಭಾಷಣೆಯನ್ನು ಆಲಿಸುತ್ತಿದ್ದ ನನಗೆ ನನ್ನ ಅಣ್ಣಂದಿರು ತಮ್ಮ ಸ್ವಂತಿಕೆಯನ್ನೇ ಕಳೆದುಕೊಂಡಿದ್ದಾರಾ? ನಾನು ಚಿಕ್ಕವಳಿದ್ದಾಗ ಅವರು ನನ್ನನ್ನು ರೇಗಿಸುತ್ತಾ ಹಿಂದೆಮುಂದೆ ತಿರುಗುತ್ತಾ ಆಗಿಂದಾಗ್ಗೆ ಚಿಕ್ಕಪುಟ್ಟ ಉಡುಗೊರೆಗಳನ್ನು ತಂದುಕೊಡುತ್ತಾ ಅಕರಾಸ್ಥೆಯಿಂದ ನಡೆದುಕೊಳ್ಳುತ್ತಿದ್ದ ಅಣ್ಣಂದಿರೇ ಇವರು? ಎಂಬ ಅನುಮಾನವಾಯಿತು. ಹಾಗೆ ನೋಡಿದರೆ ಹೊರಗಿನಿಂದ ಬಂದ ನನ್ನ ಅಕ್ಕನ ಗಂಡನೇ ವಾಸಿ. ವಿಷಯ ತಿಳಿದನಂತರ ಅಕ್ಕನೊಡಗೂಡಿ ನನ್ನನ್ನು ಅಭಿನಂದಿಸಿದರು. ಅತ್ತೆ ಮಾವನನ್ನು ಏನಾದರೂ ತಮ್ಮ ಕಡೆಯಿಂದ ಸಹಾಯ ಬೇಕೇ? ನಿಮ್ಮ ಮಗಳನ್ನು ಮೊದಲೇ ಸಹಾಯಕ್ಕೆ ಕಳುಹಿಸಿಕೊಡಲೇ? ನೀವು ಅಲ್ಲಿ ಇಲ್ಲಿ ಓಡಾಡುತ್ತಿರುವಾಗ ಮನೆಯಲ್ಲಿ ಸುಕನ್ಯಾ ಒಬ್ಬಳೇ ಆಗುತ್ತಾಳೆ. ಉಮಾ ಕೂಡ ಜೊತೆಗಿದ್ದರೆ ಒಳ್ಳೆದಲ್ಲವಾ? ಎಂದೆಲ್ಲಾ ವಿಚಾರಿಸಿದರು. ಹಾಗೆಂದು ನನ್ನಕ್ಕನನ್ನು ಇಲ್ಲಿಗೆ ಕಳುಹಿಸುವ ಆಸಾಮಿಯೇನಲ್ಲ. ಮದುವೆಯಾಗಿ ಎರಡು ಮಕ್ಕಳ ತಾಯಾದ ನಮ್ಮಕ್ಕ ಬಾಣಂತನಕ್ಕೆಂದು ಬಂದಿದ್ದು ಬಿಟ್ಟರೆ, ಅದೂ ಮೂರು ತಿಂಗಳು ಮಾತ್ರ, ನಂತರ ಯಾವಾಗಲೋ ತೀರಾ ಬಲವಂತ ಮಾಡಿ ಕರೆದರೆ ಜೊತೆಯಲ್ಲೇ ತಾವೂ ಬಂದು ಹೋಗುತ್ತಿದ್ದರು. ಅವರ ಮಕ್ಕಳು, (ನಮ್ಮಮ್ಮನ ಮೊಮ್ಮಕ್ಕಳು) ಅಜ್ಜಿ ತಾತನ ಬಳಿ ಇದ್ದದ್ದು ಬೆರಳೆಣಿಕೆಯಷ್ಟು ಸಮಯ ಮಾತ್ರ. ಈ ವಿಷಯದಲ್ಲಿ ನನ್ನ ಅಪ್ಪ, ಅಮ್ಮನಿಗೆ ಕೊರಗಿದ್ದರೂ ಹೋಗಲಿ ಬಿಡು. ಅವಳಿರುವುದು ತುಂಬಿದ ಕುಟುಂಬದ ಮಯಲ್ಲ್ಲಿ. ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ದೇವರು ಅವರನ್ನು ಹಾಗೇ ಅನ್ಯೋನ್ಯತೆಯಲ್ಲಿಟ್ಟಿರಲಿ ಎಂದು ಬಾಯ್ತುಂಬ ಹಾರೈಸುತ್ತಿದ್ದರು. ಇದನ್ನೆಲ್ಲ ಪ್ರತ್ಯಕ್ಷವಾಗಿ ಕಂಡಿದ್ದ ನಾನು ಒಮ್ಮೊಮ್ಮೆ ನಾನೇನಾದರೂ ಮದುವೆಯಾಗಿ ಹೋದರೆ ಹೀಗಾಗುವುದಕ್ಕೆ ಅವಕಾಶ ಕೊಡುವುದಿಲ್ಲಪ್ಪಾ. ಅತ್ತಿಗೆಯರಿಗೆ ಅವರ ತವರಿನ ಒಡನಾಟ ಮಾತ್ರ, ಅಕ್ಕನಿಗೆ ಗಂಡನ ಮನೆಯ ಒಡನಾಟ ಮಾತ್ರ ಸೀಮಿತವಾಗಿತ್ತು. ನಾನು ಎರಡೂ ಕಡೆಯ ಒಡನಾಟ ಇಟ್ಟುಕೊಳ್ಳುವಂತೆ ಮಾಡು ದೇವಾ ಎಂದು ಬೇಡಿಕೊಳ್ಳುತ್ತಿದ್ದೆ. ಮರುಕ್ಷಣವೇ ಇನ್ನೂ ಮದುವೆಯೇ ಆಗಿಲ್ಲದ ನಾನು ‘ಕೂಸು ಹುಟ್ಟುವುದಕ್ಕೆ ಮೊದಲೇ ಕುಲಾವಿ ಹೊಲಿಸಿದಂತೆ’ ಯೋಚಿಸಿದ್ದಕ್ಕೆ ನಾಚಿಕೆಯಾಯಿತು. ನನ್ನ ಕೈ ಹಿಡಿಯುವ ಪುಣ್ಯಾತ್ಮ ಎಲ್ಲಿ ಇದ್ದಾನೋ ಎಂದು ತಲೆಕೊಡವಿಕೊಳ್ಳುತ್ತಿದ್ದೆ. ಆದರೀಗ ಅ ಆಲೋಚನೆಯನ್ನು ಪರಿಶೀಲಿಸುವಂತಾಗಿದೆ. ನಾನು ಆದಷ್ಟೂ ಎರಡೂ ಕುಟುಂಬಕ್ಕೆ ಸೇತುವೆಯಾಗಬೇಕು ಎಂದುಕೊಂಡೆ.
“ಏ..ಸುಕನ್ಯಾ..ಎಲ್ಲಿ ಮಾಯವಾದೇ? ಅಷ್ಟೊತ್ತಿನಿಂದ ನಾವು ಕೂಗುತ್ತಿದ್ದೇವೆ. ಯಾವ ಲೋಕದಲ್ಲಿದ್ದೀ? ಆಗಲೇ ಕನಸಿನ ಲೋಕಕ್ಕೆ ಹೊರಟುಬಿಟ್ಟೆಯಾ? ನಿನ್ನ ಭಾವೀ ಪತಿ ಫೋನ್ ಗೀನ್ ಮಾಡುತ್ತಾರೆಯೇ? “ಎಂದು ಛೇಡಿಸುವಂತೆ ನಕ್ಕರು ನನ್ನಿಬ್ಬರೂ ಅತ್ತಿಗೆಯರು.
“ಇಲ್ಲ ಹಾಗೇನಿಲ್ಲ, ಏನು ಹೇಳಿ ಅತ್ತಿಗೆ? “ಎಂದೆ.
“ಮಹಾರಾಯಿತಿ, ನಿನಗೇನು ಉಡುಗೊರೆ ಬೇಕೆಂದು ಕೇಳುತ್ತಿದ್ದಾರೆ ನಿನ್ನ ಅಣ್ಣಂದಿರು” ಹೇಳು.
“ನನಗೇನೂ ಬೇಡ, ನೀವೆಲ್ಲಾ ಮದುವೆಗೆ ಬಂದು ನಗುನಗುತ್ತಾ ಪಾಲ್ಗೊಂಡು ಸುಸೂತ್ರವಾಗಿ ನಡೆಸಿಕೊಟ್ಟರೆ ಅಷ್ಟೇ ಸಾಕು” ಎಂಬ ಮಾತು ತುದಿನಾಲಿಗೆವರೆಗೆ ಬಂದಿದ್ದರೂ ತಡೆದುಕೊಂಡು “ನಿಮಗೇನು ಕೊಡಬೇಕೆನ್ನಿಸುತ್ತೆಯೋ ಅದನ್ನು ಕೊಡಿ. ಇಂಥದ್ದೇ ಕೊಡಬೇಕೆಂಬ ಆಸೆ ನನಗಿಲ್ಲ “ಎಂದೆ.
“ಇಷ್ಟು ವಯಸ್ಸಿಗೇ ವೈರಾಗ್ಯ ಬಂದಿದೆ. ಕಟ್ಟಿಕೊಳ್ಳುವವನ ಪುಣ್ಯ ಬಿಡು. ಅತ್ತೆ ಮಾವಾ ನಾವಿನ್ನು ಬರುತ್ತೇವೆ. ಹಾ ಒಂದು ವಿಷಯ, ನಾವು ಹೇಳಿರುವ ದಿನಾಂಕ ನೆನಪಿರಲಿ, ಲಗ್ನಪತ್ರಿಕೆ ಮಾಡಿಸುವಾಗ ನೋಡಿ ಹಾಕಿಸಿ. ಆಮೇಲೆ ಬರಲಿಕ್ಕಾಗದೇ ಇದ್ದರೆ ಆಕ್ಷೇಪಿಸಬೇಡಿ, ಬರೋಣವೇ ” ಎಂದು ಅಪ್ಪ ತಮಗೆ ಕೊಟ್ಟ ಹಣವನ್ನು ಪಡೆದುಕೊಂಡು ಹೊರಟರು.
ಅಲ್ಲಿಯವರೆಗೆ ಅಡುಗೆ ಮನೆಯಲ್ಲೇ ಇದ್ದ ಅಮ್ಮ ಹೊರಗೆ ಬಂದು “ಲೋ ಮಕ್ಕಳಿಗೆ ಫೋನ್ ಮಾಡ್ರೋ, ಎಲ್ಲಾರಿಗೂ ಸೇರಿಸಿ ಅಡುಗೆ ಮಾಡಿದ್ದೀನಿ. ಊಟ ಮಾಡಿಕೊಂಡು ಹೋಗುವಿರಂತೆ” ಅಂದರು.
“ಅಮ್ಮಾ ಪ್ಲೀಸ್, ಡಬ್ಬಿಗಳಿಗೆ ಹಾಕಿಕೊಟ್ಟುಬಿಡಿ. ಮಕ್ಕಳಿಗೆ ನಾಳೆ ಟೆಸ್ಟ್ ಇದೆ, ಓದಿಕೊಳ್ಳುತ್ತಿದ್ದಾರೆ” ಎಂದರು.
ಆಗ ನಾನೇ ಎದ್ದು ಅಡುಗೆ ಮನೆಗೆ ಹೋಗಿ ಕಟ್ಟೆಯ ಮೇಲಿದ್ದ ಪಾತ್ರೆಗಳ ಮುಚ್ಚಳ ತೆಗೆದು ನೋಡಿದೆ. ಚಪಾತಿ, ಹುರುಳೀಕಾಯಿ ಪಲ್ಯ, ಅನ್ನ, ತಿಳಿಸಾರು, ಕರಿದ ಹಪ್ಪಳ ಸಂಡಿಗೆ, ಶ್ಯಾವಿಗೆ ಪಾಯಸ. ಓಹೋ ಅಂದುಕೊಂಡು ಬರದಿದ್ದ ಮಕ್ಕಳಿಗೆ ಇವತ್ತು ಸಿಹಿ ! ಎಂದುಕೊಳ್ಳುತ್ತಾ ನಾಲ್ಕು ಜನಕ್ಕಾಗುವಷ್ಟು ಡಬ್ಬಿಗಳಿಗೆ ತುಂಬಿ ಚೀಲದಲ್ಲಿ ಅಲುಗಾಡದಂತೆ ಇಟ್ಟು ತಂದುಕೊಟ್ಟೆ. ಅವರಿಬ್ಬರೂ ಎದುರುಬದುರು ಫ್ಲಾಟ್‌ಗಳಲ್ಲೇ ಇರುವುದರಿಂದ ಅಲ್ಲಿ ಹಂಚಿಕೊಂಡು ಊಟಮಾಡುತ್ತಾರೆಂಬ ಬಾವನೆ ನನ್ನದಾಗಿತ್ತು. ಅವರೆಲ್ಲರೂ ಹೋದಮೇಲೆ ಸುಮಾರು ಹೊತ್ತು ಒಬ್ಬರಿಗೊಬ್ಬರು ಮಾತನಾಡದೆ ಕುಳಿತ ಹೆತ್ತವರನ್ನು ನೋಡಿ ನನಗೆ ಬಹಳ ಕೆಟ್ಟದ್ದೆನ್ನಿಸಿತು. ಅದರ ಗುಂಗಿನಿಂದ ಅವರನ್ನು ಹೊರತರಲು ನಿರ್ಧರಿಸಿ ನಾನು “ನಾವೂ ಊಟ ಮಾಡೋಣ, ಇಲ್ಲವಾದರೆ ರಾತ್ರಿಯೆಲ್ಲಾ ನೀವಿಬ್ಬರೂ ಹೀಗೇ” ಎಂದು ಎಬ್ಬಿಸಿದೆ. ಯಾರೊಬ್ಬರಿಗೂ ಮಾತನಾಡುವ ಉಮೇದಿರಲಿಲ್ಲ. ಮೌನವಾಗಿ ಊಟಮುಗಿಸಿ ಮುಂದಿನ ಬಾಗಿಲುಗಳನ್ನು ಭದ್ರಪಡಿಸಿದೆ. ಮಲಗಲು ನನ್ನ ರೂಮಿನ ಕಡೆ ತಿರುಗಿದೆ.
ಅಷ್ಟರಲ್ಲಿ “ಅಪ್ಪ ಬಾಯಿಲ್ಲಿ ಮಗಳೇ “ಎಂದು ಕರೆದರು. ಏನಪ್ಪ ಎಂದು ಅವರಿದ್ದಲ್ಲಿಗೆ ಹೋದೆ. ‘ನೋಡು ನಿನಗೂ ನಿಮ್ಮ ಅಕ್ಕನಿಗೆ ಕೊಟ್ಟಂತೆ ಕೆಲವು ಒಡವೆಗಳನ್ನು ನಿಮ್ಮಮ್ಮ ತೆಗೆದಿರಿಸಿದ್ದಾಳೆ. ಇವಲ್ಲದೆ ಬೇರೇನಾದರೂ ಬೇಕಾ?’ ಎಂದು ಒಡವೆಗಳಿಟ್ಟಿದ್ದ ಪೆಟ್ಟಿಗೆಯನ್ನು ನನ್ನ ಕೈಗಿತ್ತರು.
“ಅಪ್ಪಾ.. ನೋಡುವುದೇನಿದೆ. ಅದರಲ್ಲಿ ಏನೇನಿದೆ ಎನ್ನುವುದನ್ನು ಅಮ್ಮ ಒಂದು ನೂರು ಸಾರಿ ಹೇಳಿರಬೇಕು. ಅವೇ ಸಾಕಪ್ಪಾ” ಎಂದೆ. ಅದನ್ನು ಕೇಳಿದ “ಅಮ್ಮ ಕೂಸೇ, ನೋಡು ಈ ಪದಕದ ಚೈನು ನಿನಗೆ ಬಹಳ ಸೇರುತ್ತೆ ಹೌದಲ್ಲವೋ? ಅದನ್ನು ಬೇಕಾದರೂ ನೀನೇ ತೆಗೆದುಕೋ” ಎಂದು ಅದನ್ನು ಕೈಯಲ್ಲಿ ಹಿಡಿದು ಅಲ್ಲಿಗೆ ಬಂದರು.
“ಬೇಡಮ್ಮಾ, ಅದು ನನಗಿಂತಲೂ ನಿನಗೇ ಚೆನ್ನಾಗಿ ಒಪ್ಪುತ್ತೆ. ಅಲ್ಲದೆ ಕರೀಮಣಿಸರದ ಜೊತೆಗೆ ಅದೊಂದನ್ನೇ ನೀವು ಯಾವಾಗಲೂ ಹಾಕಿಕೊಳ್ಳುವುದು. ಅಪ್ಪ ಪ್ರೀತಿಯಿಂದ ನಿಮಗೆಂದೇ ಮಾಡಿಸಿ ಕೊಟ್ಟಿರುವುದು. ಅದನ್ನು ನೀವೇ ಇಟ್ಟುಕೊಳ್ಳಿ” ಎಂದು ಹೇಳಿದೆ.
“ಈ ಮಗಳು ಯಾವಾಗಲೂ ಹೀಗೇ, ಬಾಯಿಬಿಟ್ಟು ಇಂಥದ್ದು ಬೇಕೆಂದು ಎಂದೂ ಕೇಳಿದ್ದೇ ಇಲ್ಲ. ಈಗಲೇ ನೋಡಿ ಬಾಯಿಬಿಟ್ಟು ಇಷ್ಟು ಮಾತನಾಡಿದ್ದು. ನಿಮ್ಮ ಅಕ್ಕನ್ನ ನೋಡು, ಅವಳ ಮದುವೆಯಲ್ಲಿ ಸಾಕಷ್ಟು ಕೊಟ್ಟಿದ್ದೆವು. ಬರೋದು ಅಪರೂಪಕ್ಕೆ ಒಮ್ಮೆಯಾದರೂ ಹಿಂದಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಿದ್ದೇ ನೆನಪಿಲ್ಲ. ಅವಳಿರುವ ಮನೆಯೂ ಸಾಕಷ್ಟು ಸ್ಥಿತಿವಂತರದ್ದೇ. ಈಗ ನಿನಗಾಗಿ ಬಂದಿರುವವರ ಕುಟುಂಬ ಅಷ್ಟೊಂದು ಸಿರಿವಂತರಲ್ಲವೆಂದು ತೋರುತ್ತದೆ. ನಾವಿಬ್ಬರೂ ಅವರ ಮನೆಗೆ ಹೋಗಿ ನೋಡಿಬಂದೆವಲ್ಲಾ. ಈಗಲೂ ಮತ್ತೊಮ್ಮೆ ಯೋಚಿಸು, ಇನ್ನು ಕಾಲ ಮಿಂಚಿಲ್ಲ. ನಮ್ಮ ಅನಿಸಿಕೆಯಂತೆಯೇ ನೀನು ತಾಳಹಾಕಬೇಕೆಂದೇನಿಲ್ಲ. ಅಲ್ಲದೆ ನಿನ್ನ ದೊಡ್ಡ ಅತ್ತಿಗೆಯ ಅಣ್ಣನವರಿಗೆ ಆ ಕುಟುಂಬ ಚೆನ್ನಾಗಿ ಗೊತ್ತಂತೆ. ಅವರು ‘ಲೇ ಗೀತಾ, ನಿನ್ನ ನಾದಿನಿಗೇನಾಗಿದೆ? ಸುಂದರಿ, ವಿದ್ಯಾವಂತೆ. ನಿನ್ನ ಅತ್ತೆಮಾವನವರು ಅವಳನ್ನು ಎಲ್ಲರಿಗಿಂತ ಹೆಚ್ಚಿನ ಮುತುವರ್ಜಿಯಿಂದ ಬೆಳೆಸಿದ್ದಾರೆ. ಹುಡುಗನು ವಿದ್ಯಾವಂತ, ನೋಡಲೂ ಚೆನ್ನಾಗಿದ್ದಾನೆ, ಕೆಲಸದಲ್ಲಿದ್ದಾನೆ. ಎಲ್ಲವೂ ಸರಿ. ಆದರೆ ಅವರ ತಂದೆಯವರು ಅಂಥಹ ಅನುಕೂಲವಂತರಲ್ಲ. ಈಗಲೂ ನಮ್ಮ ಮನೆದೇವರಿಂದ ಪ್ರಸಾದವಾಗಲಿಲ್ಲವೆಂದು ಕಾರಣ ಹೇಳಿ ಕಳುಹಿಸಲು ನಿನ್ನ ಅತ್ತೆ ಮಾವನವರಿಗೆ ಹೇಳು’ ಅಂದರಂತೆ. ಇದನ್ನು ಕೇಳಿದ ಮೇಲೆ ನಾವು ತುಂಬ ಭಾವುಕರಾಗಿ ಅವಸರ ಪಟ್ಟೆವೇನೋ ಎಂದೆನ್ನಿಸುತ್ತಿದೆ” ಎಂದರು ಇಬ್ಬರೂ ಒಕ್ಕೊರಲಿನಿಂದ.
ಅದೆಲ್ಲ ಕೇಳಿದ ನನಗೆ ನಖಶಿಖಾಂತ ಉರಿಯತೊಡಗಿತು. “ಏನು? ಇಷ್ಟೆಲ್ಲ ಮುಂದುವರೆದ ಮೇಲೂ ನೀವುಗಳೂ ಈ ರೀತಿ ಯೋಚನೆ ಮಾಡುತ್ತಿರುವುದು ಸರಿಯಾ?.. ನಾನು ಹಣ, ಅಂತಸ್ತು, ಬಯಸಿ ಹೋಗುತ್ತಿಲ್ಲ. ಅದು ನಿಮಗೂ ಗೊತ್ತು. ಆ ದಿನ ನನ್ನ ಮಾತಿಗೆ ಅತಿ ಉತ್ಸಾಹದಿಂದ ತಾಳಹಾಕಿ ಹಾರೈಸಿದವರು, ಈಗ ಇಲ್ಲಸಲ್ಲದ ಯೋಚನೆ ಬಿಟ್ಟು ಮುಂದುವರೆಯಿರಿ. ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂತೆಗೆಯುವುದಿಲ್ಲ. ಈಗ ಗಂಟೆ ಹನ್ನೊಂದಾಯಿತು” ಮಲಗುವ ಯೋಚನೆ ಮಾಡಿ ಎಂದಂದು ನನ್ನ ರೂಮಿಗೆ ಬಂದುಬಿಟ್ಟೆ.
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31100
(ಮುಂದುವರಿಯುವುದು)
-ಬಿ.ಆರ್ ನಾಗರತ್ನ, ಮೈಸೂರು
ಒಂದು ಸಾಮಾನ್ಯ ಕುಟುಂಬ ಬಹಳ ಹಿಂದೆ ಇರುತಿದ್ದ ಚಿತ್ರಣ, ಪರಿಸ್ಥಿತಿ, ಎಲ್ಲವೂ ಬಹಳ ಚೆನ್ನಾಗಿ, ಕಣ್ಣಿಗೆ ಕಟ್ಟುವಂತೆ ಚಿತ್ರಿತಗೊಂಡಿದೆ ಕಥೆಯಲ್ಲಿ. ಇವತ್ತಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬಹುಷಃ ಯಾರಿಗೂ ಇರಲಿಕ್ಕಿಲ್ಲ. ಕಾದಂಬರಿ ಬಹಳ ಚೆನ್ನಾಗಿ ಮುಂದುವರಿಯುತ್ತಿದೆ
ಕಥೆ ಇನ್ನು ಓದಿಸಿಕೊಂಡು ಹೊಗುತ್ತದೆ.ಧನ್ಯವಾದಗಳು
ಹಿಂದಿನ ಕಾಲದ ಸಂಪ್ರದಾಯಗಳು ಅಚ್ಚೊತ್ತಿರುವ ಕಥೆಯು ಬಹಳ ಚೆನ್ನಾಗಿ ಮುಂದುವರಿಯುತ್ತಿದೆ… ಧನ್ಯವಾದಗಳು ಮೇಡಂ.
ಇಂದಿನ ದಿನಗಳಲ್ಲಿ ಈ ರೀತಿಯ ಕುಟುಂಬಗಳು ಕಾಣಸಿಗುವುದು ಬಲು ಅಪರೂಪವಾದರು , ಹಿಂದಿನ ಕಾಲದ ಸಾಮಾನ್ಯ ಕುಟುಂಬದೊಳಗಿನ ಸಂಪ್ರದಾಯವನ್ನು ಕಥೆಯಲ್ಲಿ ಬಹಳ ನೈಪುಣ್ಯತೆಯಿಂದ ನಿರೂಪಣೆ ಮಾಡಿರುವುದು ಓದುಗರ ಮನದಲ್ಲಿ ನೆಲೆ ನಿಲ್ಲುತ್ತದೆ …..
ಮುಂದಿನ ಭಾಗದ ನಿರೀಕ್ಷಿಯೊಂದಿಗೆ ಧನ್ಯವಾದಗಳು …..
ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು
ಕೌಟುಂಬಿಕ ಸರಳ ಕಥೆ..ಚೆನ್ನಾಗಿ ಓದಿಸಿಕೊಂಡು ಹೋಗುತ್ತಿದೆ.
ಮೇಡಂ, ಹಳೆಯ ಕಾಲದ ಕಾದಂಬರಿ ಗಳಂತೆ ಪಾತ್ರಗಳು ಕಣ್ಣಮುಂದೆ ಬರುತ್ತವೆ. ಚೆನ್ನಾಗಿದೆ ಮೇಡಂ