ನೆನಪು 15 : ಕವಿ  ಎಂ ಎನ್ ವ್ಯಾಸರಾವ್ ಹಾಗೂ ಕೆ ಎಸ್ ನ ಸಖ್ಯ.

Share Button

ಕವಿ ಕೆ ಎಸ್ ನ

ಬಹುಶಃ 1974ರ ವರ್ಷ ಎಂದು ತೋರುತ್ತದೆ. ಸುಮತೀಂದ್ರ ನಾಡಿಗ ಅವರು ಒಮ್ಮೆ ಒಬ್ಬ ತರುಣ ಕವಿಯನ್ನು ನಮ್ಮ ಮನೆಗೆ ಕರೆದುಕೊಂಡು ಬಂದು  ತಂದೆಯವರಿಗೆ “ಇವರು ವ್ಯಾಸರಾವ್ ಅಂತ.ಯುಕೊ ಬ್ಯಾಂಕಿನಲ್ಲಿದ್ದಾರೆ.ಕವನಗಳ ರಚನೆಯಲ್ಲಿ ಆಸಕ್ತಿ.” ಎಂದು ಪರಿಚಯಿಸಿದರು.  ನಮ್ಮ ತಂದೆಯವರು “ಸಂತೋಷ,ಯಾವುದಾದರೂ ಕವನ ತಂದಿದ್ದೀರೋ”ಎಂದು ಕೇಳಿದರು. ವ್ಯಾಸರಾವ್ “ಹೌದು” ಎಂದಾಗ “ಸರಿ ಓದಿ” ಎಂದರು ನಮ್ಮ ತಂದೆ.

ವ್ಯಾಸರಾವ್ ಮೆಲುದನಿಯಲ್ಲಿ ಆ ಕವನವನ್ನು ಓದಿದರು. ನಮ್ಮ ತಂದೆ  “ಚೆನ್ನಾಗಿದೆ,ಬರವಣಿಗೆ ಮುಂದುವರಿಸಿ. ಬರೀತಾ ಬರೀತಾ ಕಾವ್ಯದ ಗುಟ್ಟು ತಿಳಿಯುತ್ತೆ “ಎಂದು ಪ್ರೋತ್ಸಾಹದ ಮಾತನ್ನಾಡಿದರು. ಹಾಗೆ ನಮ್ಮ ತಂದೆಯವರ ಸ್ನೇಹವಲಯದಲ್ಲಿ ಸೇರಿಕೊಂಡ ಎಮ್ ಎನ್ ವಿ ನಮ್ಮ ಮನೆಯ ಹತ್ತಿರವೇ  ತಮ್ಮ ಸ್ವಂತ ಮನೆ ಕಟ್ಟಿದಾಗ ಮತ್ತಷ್ಟು ನಿಕಟರಾದರು.

ಮುಕ್ತಶೈಲಿಯಲ್ಲೇ ಕವನಗಳನ್ನು ಬರೆಯಲು ಆರಂಭಿಸಿದರೂ ನವೋದಯದ ರೀತಿಯ ಭಾವಗೀತೆಗಳನ್ನೂ  ಬರೆದು  ಯಶಸ್ವಿಯಾದವರು. ”ನೀನಿಲ್ಲದೆ ನನಗೇನಿದೆ?, ”ನಿನ್ನ ಕಂಗಳ ಕೊಳದ” ಮುಂತಾದ ಭಾವಗಿತೆಯ ವಲಯದಲ್ಲೂ  ಜನಪ್ರಿಯವಾದ  ಗೀತೆಗಳನ್ನು ರಚಿಸಿದರು. ಸಿನಿಮಾರಂಗದತ್ತಲೂ ಆಕರ್ಷಿತರಾದರು. ದೂರದರ್ಶನ ಧಾರಾವಾಹಿಗಳ ಶೀರ್ಷಿಕೆ ಗೀತೆಗಳನ್ನೂ ಬರೆದರು, ಕತೆ ಕಾದಂಬರಿ ರಚನೆಯಲ್ಲೂ ತೊಡಗಿದರು.

ಎಂ ಎನ್ ವ್ಯಾಸರಾವ್

ಇಷ್ಟೆಲ್ಲ ಯಶಸ್ಸಿನ ಗರಿಗಳೇ ಅವರ ಟೊಪ್ಪಿಗೆಯಲ್ಲಿ ಸೇರಿಕೊಂಡರೂ ಅವರು ಅತ್ಯಂತ ವಿನಯಶೀಲ ಹಾಗೂ ಸ್ನೇಹಜೀವಿ. ನಮ್ಮ ಬ್ಯಾಂಕ್ ನ ಹಲವಾರು ಸಾಹಿತ್ಯ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ನಮ್ಮ ಮನೆಗೆ ಆಗಾಗ್ಗೆ ಬಂದು ನಮ್ಮ ತಂದೆಯವರ ಹತ್ತಿರ ಮಾತನಾಡಿಕೊಂಡು ಹೋಗುತ್ತಿದ್ದರು. ಅವರು ಬರುವುದು ಅಪರೂಪವಾದಾಗ “ಏನಯ್ಯ ,ಮನೆ ಹತ್ತಿರವೇ ಇದ್ದೂ ಬರುವುದಿಲ್ಲ” ಎಂದು ಆಕ್ಷೇಪಿಸುವ ಸಲುಗೆಯನ್ನೂ  ನಮ್ಮ ತಂದೆ ಅವರೊಂದಿಗೆ ಹೊಂದಿದ್ದರು.

ಕೆ ಎಸ್ ನ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ತುರುವೇಕೆರೆಯ ಸಾಹಿತ್ಯ ಸಂಘಟಕ ರಾಮಚಂದ್ರ ಅವರು ಒಂದು ಉತ್ತಮ  ಕವಿಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕೆ ಎಸ್ ನ ಭಾವಗೀತೆಗಳ ಗಾಯನ, ಭಾಷಣಗಳ ಸಮ್ಮಿಳನವಾದ ಆ ಕಾರ್ಯಕ್ರಮದಲ್ಲಿ ವ್ಯಾಸರಾವ್ ಅವರು ಅತಿಥಿಗಳಾಗಿ ಭಾಗವಹಿಸಿ ಸುಮಾರು ಒಂದು ಗಂಟೆ ಕಾಲ ಕೆ ಎಸ್ ನ ಅವರ ಬದುಕು ಹಾಗು ಬರಹಗಳ ಬಗ್ಗೆ ಅಪರೂಪದ ಮಾಹಿತಿ ಒದಗಿಸುವ ಸೊಗಸಾದ ಉಪನ್ಯಾಸ ನೀಡಿದರು. ಆ ದಿನ ಜಿ ಎನ್ ನರಸಿಂಹ ಮೂರ್ತಿ ಹಾಗೂ ನಾನು ಅವರನ್ನು ಆ ಸಮಾರಂಭಕ್ಕೆ ಅವರ ಜತೆ ಹೋಗಿದ್ದೆವು.ಸಮಾರಂಭದ ನಂತರ ಊಟ ಮುಗಿಸಿ ರಾಮಚಂದ್ರ ಅವರ ಮನೆಯಲ್ಲಿ ಅನೌಪಚರಿಕ ಮಾತುಕತೆ ನಡೆಸುತ್ತಿದ್ದಾಗ ಕೆ ಎಸ್ ನ ಅವರನ್ನು  ಕುರಿತ ನನಗೇ ಅಷ್ಟಾಗಿ ಗೊತ್ತಿರದಿದ್ದ ಸಂಗತಿಗಳನ್ನೂ ತಿಳಿಸಿದ್ದರು.ಅದರಲ್ಲೂ ಗೋಕಾಕ್ ಚಳವಳಿ ಸಂದರ್ಭದಲ್ಲಿ ಕಬ್ಬನ್ ಪಾರ್ಕಿನಲ್ಲಿ ಧರಣಿ ಕುಳಿತಿದ್ದ
ಸಾಹಿತಿಗಳನ್ನು(ನಮ್ಮತಂದೆಯವರೂ ಆ ಗುಂಪಿನಲ್ಲಿದ್ದರು)ಪೋಲೀಸಿನವರು ವ್ಯಾನಿನಲ್ಲಿ ತುಂಬಿಕೊಂಡು ಕಬ್ಬನ್ ಪಾರ್ಕ್ ಪೋಲಿಸ್ ಸ್ಟೇಷನ್ನಿಗೆ ಹೋದಾಗ ಅಲ್ಲಿಗೆ ಬಂದ ಅಂದಿನ ಪೋಲೀಸ್‌ ಕಮಿಷನರ್ ನಿಜಾಮುದ್ದೀನ್ ಅವರು “ನೀವೆಲ್ಲ ಅಪರೂಪಕ್ಕೆ ಇಲ್ಲಿಗೆ ಬಂದಿದ್ದೀರಿ ಇದು ನಮ್ಮ ಭಾಗ್ಯ.ನಿಮ್ಮ ಊಟೋಪಚಾರದ ವ್ಯವಸ್ಥೆಮಾಡುತ್ತೇನೆ. ದಯವಿಟ್ಟುಇಲ್ಲೇ ಒಂದು ಕವಿಗೋಷ್ಠಿ ನಡೆಸಿಕೊಡಿ” ಎಂದು ವಿನಂತಿಸಿದರಂತೆ.

ಆ ದಿನಪೂರ್ತಿ ಅವರ ಮಾತುಗಳೆಲ್ಲ ಕೆ ಎಸ್ ನ ಸುತ್ತಲೇ ಪರಿಭ್ರಮಿಸಿತ್ತು.”ನಿಮ್ಮ ತಂದೆಯ ಬಗ್ಗೆ ಮಾತನಾಡಲು  ಇನ್ನೂ  ಬೇಕಾದಷ್ಟಿದೆ,ಯಾವುದಾದರೂ ಕಾರ್ಯಕ್ರಮ ಸಂಘಟಿಸು.ಸಂತೋಷದಿಂದ ಬರುತ್ತೇನೆ “ ಎಂದಿದ್ದರು .ಆದರೆ ವಿಧಿಲಿಖಿತ  ಅದು ಸಾಧ್ಯವಾಗಲೇ ಇಲ್ಲ. ನಮ್ಮ ತಂದೆಯವರನ್ನು ಗುರುಗಳ ಸ್ಥಾನದಲ್ಲಿರಿಸಿ ಗೌರವ ನೀಡಿದವರು ವ್ಯಾಸರಾವ್. ಹಾಗೆಯೇ ನಮ್ಮ ಮನೆಯ  ಎಲ್ಲರಿಗೆಲ್ಲ ಆಪ್ತರೂ ಆಗಿದ್ದರು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:    http://surahonne.com/?p=29767

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ಬೆಂಗಳೂರು )

3 Responses

  1. Avatar ನಯನ ಬಜಕೂಡ್ಲು says:

    ಅಪರೂಪದ ವಿಚಾರಗಳನ್ನೊಳಗೊಂಡ ಲೇಖನಮಾಲೆ ಎಂದಿನಂತೆ ಸೊಗಸಾಗಿದೆ.

  2. Avatar ಶಂಕರಿ ಶರ್ಮ, ಪುತ್ತೂರು says:

    ತಮ್ಮ ಈ ಲೇಖನಮಾಲೆಯಿಂದ ಮಹಾನ್ ಸಾಹಿತಿಗಳ ಬಗ್ಗೆ ನಮಗೂ ತಿಳಿದಂತಾಯಿತು..ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: