ಯಮನಿಂದ ವರ ಪಡೆದ ನಚಿಕೇತ

Share Button

ಬಹಳ ಹಿಂದೆ ಜನರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರನ್ನೊಲಿಸಿ ಕೊಳ್ಳುವುದಕ್ಕಾಗಿ ಮೂರ್ತಿ ಪೂಜೆಯನ್ನೋ ದೇವತಾದರ್ಶನವನ್ನೂ ಮಾಡದೆ  ಕಠಿಣವಾದ ತಪಸ್ಸು ಅಥವಾ ಯಾಗ, ಯಜ್ಞಾದಿಗಳನ್ನು ಮಾಡುತ್ತಿದ್ದರು. ಸಂತಾನಕ್ಕಾಗಿ ಕುಟುಂಬ ಸುಖಕ್ಕಾಗಿ  ಮಳೆ-ಬೆಳೆಗಾಗಿ ಹೀಗೆ ಹಲವು ವಿಧದ ಬಯಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ವೇದೋಕ್ತ ಯಾಗಗಳನ್ನು ಮಾಡುತ್ತಿದ್ದರು. ಇಂತಹ ಒಂದು ಕಾಲದಲ್ಲಿ ‘ವಾಜಶ್ರವಸ’ ಎಂಬ ಬ್ರಾಹ್ಮಣನಿದ್ದ. ಅವನು ದಾನ-ಧರ್ಮಾದಿಗಳಿಗೆ ಹೆಸರಾದ ಜನಸಿದವ. ಅವನು ಹಲವು ಯಾಗಗಳನ್ನೂ ಮಾಡಿದ್ದನು. ಹೀಗಿರಲು ಒಮ್ಮೆ ಆತನಿಗೆ  ವಿಶ್ವವನ್ನೇ ಆಳುವ ಅಧಿಕಾರ ಪಡೆಯುವ ಬಯಕೆಯಾಯಿತು. ಅದಕ್ಕಾಗಿ ‘ವಿಶ್ವಜಿತ್’ ಎಂಬ ಒಂದು ಶ್ರೇಷ್ಠ ಯಜ್ಞವನ್ನು ಮಾಡಲು ನಿರ್ಧರಿಸಿದನು. ಸರಿ, ಈ ಯಾಗಕ್ಕಾಗಿ, ಪುರೋಹಿತರು, ಶೋತೃಗಳು ಮೊದಲಾದವರನ್ನು ಕರೆಸಿಕೊಂಡು ಸಕಲ  ಸಿದ್ಧತೆಗಳನ್ನು ಮಾಡಿ ಯಾಗ ಪ್ರಾರಂಭಿಸಿದನು. ಯಾಗ ಕೊನೆಯ ಹಂತಕ್ಕೆ ತಲುಪಿತು. ಯಾಗದ ಕೊನೆಗೆ ಪುರೋಹಿತರಿಗೆ, ಬ್ರಾಹ್ಮಣರಿಗೆ, ಅದಕ್ಕೆ ಸಹಕರಿಸಿದ್ವ್ರಿಗೆ  ಉತ್ತಮವಾದ ದಾನಗಳಿಂದ ಸಂತುಷ್ಟಿಗೊಳಿಸಬೇಕು. ಇಲ್ಲದಿದ್ದರೆ ಯಾಗವು ಫಲಕೊಡದು. ಅದಕ್ಕಾಗಿ ವಾಜಶ್ರವಸು ಗೋವುಗಳನ್ನು, ಧನಕನಕಾಧಿಗಳನ್ನು, ತನ್ನಲ್ಲಿರುವ  ವಸ್ತುಗಳನ್ನು ದಾನ ಮಾಡಿದನು. ಆದರೆ ಅವನು ದಾನ ಮಾಡಿದ ವಸ್ತುಗಳಾದರೂ ಎಂತಹುದು?   ಬಡಕಲಾದ ಮುದಿ ಗೋವುಗಳು, ಅಲ್ಪಪ್ರಮಾಣದ ಧನ-ಕನಕಗಳು, ಪ್ರಯೋಜನಕ್ಕೆ ಬಾರದ ವಸ್ತುಗಳು!  ಇವುಗಳನ್ನೆಲ್ಲ ಪಡೆದವರಿಗೆ ಉಪಯೋಗವಾದರೂ ಏನು? ಈ ಬಗೆ ಚಿಂತಿಸಿದವನು ವಾಜಶ್ರವಸನ ಮಗ ಹತ್ತು ವರ್ಷದ ಎಳೆ ಬಾಲಕ. ಹೀಗೆ ಕಾಟಾಚಾರಕ್ಕಾಗಿ ಕ್ರಿಯೆಗಳನ್ನು ಮಾಡುತ್ತಿದ್ದರೆ ಅದು ಸತ್ಪಲವನ್ನು ಕೊಡಲು ಸಾಧ್ಯವೇ? ಇದರಿಂದ ಮುಂದೆ ಕಷ್ಟ ಅನುಭವಿಸಬೇಕಾಗದೇ ? ಇದನ್ನು ಅಪ್ಪನಿಗೆ  ಹೇಳುವುದು ಹೇಗೆ?  ತುಂಬಿದ ಸಭೆಯಲ್ಲಿ ಹೇಳಲು ಸಾಧ್ಯವೇ  ? ಸಮಯ ಕಾಯುತ್ತಿದ್ದನು ಬಾಲಕ.

ತನ್ನ ತಂದೆಯು ಅನುಪಯುಕ್ತವಾದ ವಸ್ತುಗಳನ್ನು ದಾನ ಮಾಡಿದುದರಿಂದ ಉಂಟಾದ ಪಾಪವು ಕಿಂಚಿತ್ತಾದರೂ ಪರಿಹಾರ ಕಾಣಲು ತನ್ನನ್ನೇ ದಾನ ಮಾಡಿದರೆ ಸಿಗಬಹುದೆಂದೆಣಿಸಿದ ಬಾಲಕ ತಂದೆಯ ಬಳಿಗೆ ಹೋಗಿ ‘ನನ್ನನ್ನು ಯಾರಿಗೆ ದಾನ ಮಾಡುತ್ತೀಯಾ? ಎಂದು ಕೇಳಿದ. ತಂದೆ ಸುಮ್ಮನಿದ್ದನು. ಸ್ವಲ್ಪದರಲ್ಲಿ ಪುನಃ ಅದೇ ಪ್ರಶ್ನೆಯನ್ನು ಕೇಳಿದ. ಆಗಲೂ ಅಪ್ಪ ಏನೂ ಹೇಳಲಿಲ್ಲ. ಇನ್ನೊಮ್ಮೆ, ಮಗದೊಮ್ಮೆ  ಮಗನು ಅದನ್ನೇ ಕೇಳತೊಡಗಿದನು. ಈಗ ವಾಜಶ್ರವಸುವಿಗೆ ಅಸಾಧ್ಯ ಕೋಪ ಬಂತು. ಆ ಕೋಪದಲ್ಲಿ ‘ನಿನ್ನನ್ನು ಮೃತ್ಯುವಿಗೆ ಕೊಡುತ್ತೇನೆ’ ಎಂದನು. ನಚಿಕೇತನಿಗಾದರೋ ಈ ಮಾತು ಅನಿರೀಕ್ಷಿತವಾಗಿತ್ತು. ಅಪ್ಪ ತನ್ನನ್ನು ಯಾರಾದರು ಯತ್ವಿಜರಿಗೆ ದಾನ ಮಾಡಬಹುದೆಂದು ಭಾವಿಸಿದ್ದ. ಆದರೆ ಈಗ ಮೃತ್ಯುವಿಗೆ ಕೊಡುತ್ತೇನೆ ಎಂದಾಗ ಅಂತಹ ತಪ್ಪು ನಾನೇನು ಮಾಡಿದೆ ಎಂದು ಯೋಚಿಸಿದ. ವಾಜಶ್ರವಸನಾದರೋ ಕೋಪ ಶಮನವಾದಾಗ ಹಾಗೆಂದುದಕ್ಕೆ ನೊಂದುಕೊಂಡ. ಆದರೆ ನಚಿಕೇತನು ಯಮಪುರಿಗೆ ಹೋಗಲು ಸಿದ್ಧನಾಗಿ ನನ್ನನ್ನು ಯಮನಿಗೆ ಯಾವ ಅರ್ಪಿಸುತ್ತೀ ಎಂದು ಕೇಳಿದನು.

ಆದರೆ ತಂದೆಯು ಕೋಪದ ಭರದಲ್ಲಿ ಹಾಗೆ ಹೇಳಿದರೂ ಮಗನನ್ನು ಯಮಪುರಿಗೆ  ಅಟ್ಟುವನೇ ?  ಅವನು ಸುಮ್ಮನಿದ್ದನು. ಆಗ ನಚಿಕೇತನು ತಂದೆಗೆ ‘ಅಪ್ಪಾ… ಆಡಿದ ಮಾತಿಗೆ ತಪ್ಪಿದರೆ ಪಾಪವು ಕಟ್ಟಿಟ್ಟ ಬುತ್ತಿ. ನಮ್ಮ ಪೂರ್ವಿಕರು ಆದರ್ಶ ಜೀವನ ನಡೆಸಿದ್ದಾರೆ, ಅವರು ಕಷ್ಟ-ದುಃಖಗಳನ್ನು ಸಹಿಸಿಕೊಂಡು ಶ್ರೇಷ್ಠತಮ ವ್ಯಕ್ತಿಗಳೆನಿಸಿ ಮಾದರಿಯಾಗಿದ್ದಾರೆ. ಸಾಮಾನ್ಯ ಜೀವಿಗಳು ಲೋಕದಲ್ಲಿ ಹುಟ್ಟುತ್ತವೆ. ಜೀವಿಸುತ್ತವೆ. ಸಂತಾನಾಭಿವೃದ್ಧಿ ಮಾಡುತ್ತವೆ. ಸಾಯುತ್ತವೆ. ಆದರೆ ಶ್ರೇಷ್ಠ ವ್ಯಕ್ತಿಗಳೆನಿಸಿಕೊಂಡ ನಾವು ಸಾವಿಗೆ ಹೆದರಬಾರದು ಅಲ್ಲವೇ ? ಎಂದನು. ಮಗನ ಮಾತನ್ನು ಕೇಳಿದ ತಂದೆ  ಇವನನ್ನು ಮನಸಿಲ್ಲದ ಮನಸ್ಸಿನಿಂದ ಯಮಲೋಕಕ್ಕೆ ಕಳುಹಿಸುತ್ತಾನೆ. ಯಮನ ಎಲ್ಲರೂ ಹೆದರಿ ನಡುಗುತ್ತಾರೆ ತಾನೇ! ಆದರೆ ನಚಿಕೇತ ಒಂದಿಷ್ಟೂ ಎದೆಗುಂದದೆ ತಂದೆಯನ್ನು ಒತ್ತಾಯಿಸಿ ಯಮಲೋಕಕ್ಕೆ ಬಂದನೆಂದರೆ ಅವನ ಎಣೆಯುಂಟೇ ? ಅವನು ಯಮನಲ್ಲಿಗೆ ಬಂದನೇನೋ ನಿಜ, ಆದರೆ ಅಲ್ಲಿ ಯಮನಿರಲಿಲ್ಲವಂತೆ. ಯಮನ ಮನೆ ಬಾಗಿಲಲ್ಲಿ ನಚಿಕೇತ ಮೂರು ದಿನ ಕಾಯಬೇಕಾಯಿತು. ಮೂರು ದಿನ ಮೇಲೆ ತನ್ನ ಮನೆಗೆ ಬಂದ ಯುಮನಿಗೆ ಪರಮಾಶ್ಚರ್ಯವೂ ಜೊತೆಗೆ ಒಂದಿಷ್ಟು ಅಳುಕೂ ಉಂಟಾಯಿತಂತೆ, ಈ ಹುಡುಗನನ್ನು ಯಾರೂ ಕರೆದುಕೊಂಡು ಬರಲಿಲ್ಲ. ಸ್ವಇಚ್ಛೆಯಿಂದ ಬಂದಿದ್ದಾನೆ. ಮೂರು ದಿನ ನೀರಿಲ್ಲದೆ ನನಗಾಗಿ ಕಾಯುತ್ತಿದ್ದಾನೆ. ಅದೂ ಬ್ರಾಹ್ಮಣ ಹುಡುಗ, ಬ್ರಹ್ಮ ತೇಜಸ್ಸಿನಿಂದ ಬೆಳಗುವ ಈ ಬಾಲಕನನ್ನು ಆದರಿಸಿ ಸತ್ಕಾರ ಮಾಡದಿದ್ದಲ್ಲಿ ತನಗೇನಾದರೂ ಪಾಪ ತಟ್ಟಬಹುದೋ ಎಂಬ ಅಳುಕು ಯಮನಿಗೂ ಉಂಟಾಯಿತಂತೆ. ಕೂಡಲೇ ಅವನನ್ನುಸ್ವಾಗತಿಸಿ ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿದನಂತೆ. ಆ ಬ್ರಾಹ್ಮಣ ಬಾಲಕನನ್ನು ಮಾತನಾಡಿಸುತ್ತಾ ‘ನೀನು ಮೂರು ದಿನಗಳ ಕಾಲ ನನ್ನ ಮನೆ ಬಾಗಿಲಿನಲ್ಲಿ ನನಗಾಗಿ ಕಾದೆ. ಅದಕ್ಕಾಗಿ ನನ್ನನ್ನು ಕ್ಷಮಿಸು, ಮಾತ್ರವಲ್ಲ ಮೂರು ವರಗಳನ್ನೂ ಕೇಳಿಕೋ ಕೊಡುವುದಕ್ಕೆ ಸಿದ್ಧನಿದ್ದೇನೆ’ ಎಂದನಂತೆ.

ನಚಿಕೇತನು ಯಮನಿಂದ ವರವನ್ನು ಪಡೆಯಲು ಬಂದವನಲ್ಲವಾದರೂ ಅವನು ಕೇಳಿದಾಗ ತಿರಸ್ಕರಿಸಿದರೆ ಅಹಂಕಾರದ ವರ್ತನೆಯಾಗುವುದೆಂದು ಯಮನ ಮಾತಿಗೆ ಬೆಲೆಕೊಟ್ಟು ಮೊದಲನೆಯ ವರವಾಗಿ ‘ಯಮಧರ್ಮರಾಯನೇ ನನ್ನ ತಂದೆಯು ನನ್ನ ವಿಷಯದಲ್ಲಿ ಶಾಂತಚಿತ್ತನೂ ಕ್ರೋಧರಹಿತನೂ ಆಗಲಿ. ಇಲ್ಲಿಂದ ನನ್ನನ್ನು ಕಳುಹಿಸಿದ ಮೇಲೆ ತಂದೆಯು ಗುರುತಿಸಿ ಮಾತನಾಡಿಸಲಿ. ಇದುವೇ ನಾನು ಪ್ರಾರ್ಥಿಸುವ ಮೊದಲನೆ ವರ’ ಎಂದು ಕೇಳುತ್ತಾನೆ.

ಆಗ ಯಮನು ‘ತೇಜೋವಂತ ಬಾಲಕನೇ, ನನ್ನ ಆಜ್ಞೆಯಂತೆ ನಿನ್ನ ತಂದೆಯ ನಿನ್ನ ಗುರುತು ಹಿಡಿಯುವನು. ನಿನ್ನ ಆತ್ಮ ಮಾತ್ರ ಯಮಲೋಕಕ್ಕೆ ಬಂದಿದೆ. ಅಂತ ಪುನಃ ಹೋಗಿ ದೇಹವನ್ನು ಪ್ರವೇಶಿಸಿ ಎದ್ದು ನಿಂತಂತೆ ಮಾಡುತ್ತೇನೆ. ಮೃತ್ಯುವಿನಿಂದ ಬಿಡಲ್ಪಟ್ಟ  ನಿನ್ನನ್ನು ನೋಡಿ ತಂದೆ ಸಂತೋಷ ಪಡುತ್ತಾನೆ’ ಎಂದು ಒಂದನೇ ವರದಲ್ಲಿ ನಚಿಕೇತನಿಗೆ ಅನುಗ್ರಹವೀಯುತ್ತಾನೆ. ಅನಂತರ ನಚಿಕೇತನು ಎರಡನೇ ವರ   ಯಾಚಿಸುತ್ತಾನೆ. ‘ಸ್ವಾಮೀ ಸ್ವರ್ಗಲೋಕದಲ್ಲಿ ಜನನ ಮರಣವಾಗಲೀ ರೋಗರುಜಿನವಾಗಲೀ, ಹಸಿವೆ ಬಾಯಾರಿಕೆಯಾಗಲೀ, ದುಡಿಮೆಯಾಗಲೀ ಇಲ್ಲ. ಯಾವ ಭಯವೂ ಇಲ್ಲವಂತೆ. ಅಲ್ಲಿರುವವರು ಅಮೃತತ್ವ ಪಡೆಯುತ್ತಾರಂತೆ. ಅಲ್ಲಿಗೆ ಹೇಗೆ ?  ಏನು ಮಾಡಿದರೆ ಹೋಗಲು ಸಾಧ್ಯ ?  ಎಂಬುದಾಗಿ ತಿಳಿಸು’. ಆಗ ಯಮನು  ‘ನಚಿಕೇತ, ಸ್ವರ್ಗಲೋಕಕ್ಕೊಯ್ಯುವ ಮಾರ್ಗ, ಬುದ್ದಿಯೆಂಬ ಗುಹೆಯಲ್ಲಿದೆ. ಅದನ್ನು ತಿಳಿದುಕೋ.

ನೀನು ಕೇಳುವ ಸ್ವರ್ಗ ಎಂದರೆ ಭೋಗ ಭೂಮಿ ಎಂದರ್ಥ. ಅದನ್ನು ಪಡೆಯಲು ಯಾಗ, ಪರೋಪಕಾರ, ಪುಣ್ಯ ಕಾರ್ಯಗಳನ್ನು ಮಾಡಿ ಅಲ್ಪಕಾಲದ ಸುಖಭೋಗಗಳನ್ನು ಅನುಭವಿಸುವುದು. ಅದು ತೀರಿದ ಮೇಲೆ ಪುನಃ ಹಿಂದಕ್ಕೆ ಬರಲೇಬೇಕು. ಆದರೆ ನಿಷ್ಕಾಮ ಕರ್ಮಿಗಳಿಗೆ ಯಾವ ಆಕಾಂಕ್ಷೆಯೂ ಇರುವುದಿಲ್ಲ. ಅವನು ಕೇವಲ ಭಕ್ತಿಯಿಂದ ಅವನನ್ನು ಪ್ರೇರಿತವಾಗಿ ಭಗವಂತನನ್ನು ಪ್ರೀತಿಸುತ್ತಾನೆ. ಅಂತಹವನಿಗೆ ಮೋಕ್ಷವೂ ಶಾಶ್ವತ ಸುಖವೂ ಲಭಿಸುವುದು. ಅವನ ಪುಣ್ಯ ಕ್ಷೀಣಿಸುವುದೆಂದಿಲ್ಲ. ಹಾಗಾಗಿ ಅವನು   ಅನಂತರ ಭೂಮಿಗೆ ಮರಳುವುದಿಲ್ಲ. ಆ ಉಪದೇಶವನ್ನು ಬಲ್ಲವರಿಂದ ಅಂದರೆ  ಶ್ರೇಷ್ಠ ಗುರುಗಳಿಂದ ಕೇಳಿ ಪಡೆದುಕೊಳ್ಳಬೇಕು. ಇಲ್ಲೀಗ ನಾನೇ ಗುರು ನೀನೇ ಶಿಷ್ಯ.

ಯಮನು ನಚಿಕೇತನಿಗೆ ಯಾಗ ಮಾಡಲು ಬೇಕಾದ ಅಗ್ನಿಯನ್ನೂ ಕುಂಡವನ್ನು ತಯಾರಿಸುವ ವಿಧಾನವನ್ನೂ ಹೋಮ ಮಾಡುವ ಮಂತ್ರಗಳನ್ನೂ ಹೇಳಿಕೊಟ್ಟ.ಹೀಗೆ ಪಾಠ ಮಾಡಿದ ‘ಗುರು’ವಾದ ಯಮನು; ನಚಿಕೇತ ಚಾಚೂ ತಪ್ಪದೆ ಒಪ್ಪಿಸುತ್ತಾನೆ. ಇದರಿಂದ ಸಂತೋಷಗೊಂಡ ಯಮನು ‘ನೀಗ ವಿವರಿಸಿದ ಯಾಗಕ್ಕೆ ನಿನ್ನ ಹೆಸರನ್ನೇ ಕೊಡುತ್ತೇನೆ. ಇಂದಿನಿಂದ ಈ ಯಾಗದೊಂದಿಗೆ ನಿನ್ನ ಹೆಸರೂ ಶಾಶ್ವತವಾಗುತ್ತದೆ. ಅದುವೇ ‘ನಚಿಕೇತಯಜ್ಞ’ ಎಂದು ಹೇಳಿದ ಯಮನು ತನ್ನ ಕೊರಳಿನಲ್ಲಿದ್ದ ಮಣಿಹಾರವನ್ನು ನಚಿಕೇತನ ಕೊರಳಿಗೆ ಹಾಕುತ್ತಾನೆ. ಮುಂದೆ ಯಜ್ಞದ ಫಲವನ್ನೂಹೇಳುತ್ತಾನೆ. ಶಾಸ್ತ್ರವನ್ನೋದಿ ಚೆನ್ನಾಗಿ ಮನದಲ್ಲಿ ವಿಮರ್ಶೆ ಮಾಡಿ ನಂತರ ಅರಿತವರ ಮೂಲಕ ಶ್ರದ್ದೆಯಿಂದ ಮನಃಪೂರ್ವಕವಾಗಿ ಈ ಯಜ್ಞವನ್ನು ಮಾಡಬೇಕು. ಕೊನೆಗೆ ಅದಕ್ಕೆ ತಕ್ಕ ದಾನ-ದಕ್ಷಿಣೆಗಳನ್ನು ಕೊಡಬೇಕು. ಯಾಗದ ಕೊನೆಯಲ್ಲಿ ಸಂಭಾವತರಿಗೆ ಯೋಗ್ಯ ಸಂಭಾವನೆಯನ್ನು ಕೊಟ್ಟರೆ ಮಾತ್ರ ಯಾಗದಿಂದ ಪೂರ್ಣಫಲ ದೊರೆಯುವುದು. ಹೀಗೆ ಯಾರು ಮಾಡುತ್ತಾರೋ ಅವರು ದೇವಲೋಕಕ್ಕೆ ಹೋಗಿ ಬಹಳ ಕಾಲ ಸುಖಭೋಗಗಳನ್ನು ಅನುಭವಿಸುವರು. ನಂತರ ಮೂರನೇ ವರವನ್ನು ನಚಿಕೇತ ಪ್ರಾರ್ಥಿಸುತ್ತಾನೆ.

‘ಯಮದೇವನೆ, ಮನುಷ್ಯ ಸತ್ತ ಮೇಲೆ ಏನಾಗುತ್ತಾನೆ? ಅವನ ಜೀವಾತ್ಮವು ಇರುತ್ತದೆಯೆಂದೂ, ಇಲ್ಲ ಎಂದೂ ಚರ್ಚೆಯಿದೆ. ಇದರ ಕುರಿತು ನನಗೆ ಉಪದೇಶಿಸು’ .ಈ ಪ್ರಶ್ನೆ ನಚಿಕೇತನಿಂದ ಬಂದಾಗ ಅದಕ್ಕೆ ಉತ್ತರ ಪಡೆಯಲು ಅವನು ಸತ್ಪಾತ್ರನೇ ಎಂದು ಪರೀಕ್ಶಿಸುವುದಕ್ಕಾಗಿ, ಯಮನು’ ನಚಿಕೇತ, ನೀನೀಗ ಕೇಳಿದ ವಿಷಯ ಅತಿ ಸೂಕ್ಷ್ಮವಾದುದುದು. ಈ ಆತ್ಮನ ಕುರಿತು ಹಿಂದೆ ದೇವತೆಗಳೂ ಕೂಡ  ಸಂಶಯಪಟ್ಟ ಕಾರಣ ನೀನಿದನ್ನು ಬಿಟ್ಟು ಬೇರೆ ವರವನ್ನು ಕೇಳು. ಬೇಕಾದರೆ, ಹಲವಾರು ವರ್ಷಗಳ ಕಾಲ ಜೀವಿಸುವ ಮಕ್ಕಳು, ಮರಿಗಳು, ಬೇಕಿದ್ದರೆ ಗೋವುಗಳನ್ನು, ಆನೆಗಳನ್ನು, ಧನಕನಕಾದಿಗಳನ್ನು, ಅಪ್ಪರ ಸ್ತ್ರೀಯರೇ ಮುಂತಾದವರ ಭೋಗ ಪಡೆಯುವ ಅಭಿಲಾಷೆಯಿದ್ದಲ್ಲಿ ಕೇಳು, ಕರುಣಿಸುವೆನು’ ಎನ್ನುತ್ತಾನೆ. ಆದರೆ ನಚಿಕೇತನು ಈ ಪ್ರಲೋಭನೆಗೆ  ಒಳಗಾಗದೆ ಸಕಲವನ್ನೂ ತ್ಯಜಿಸಿ ಆತ್ಮ ವಿಚಾರ ತಿಳಿಯುವುದಕ್ಕಾಗಿಯೇ  ಬಂದವನಲ್ಲವೇ ? ‘ ಯಮಧರ್ಮರಾಯ, ನನಗೆ ಅಂತಹ ಭೋಗಗಳೆಲ್ಲ ಯಾವುದೂ ಬೇಡ ನನಗೆ. ‘ಆತ್ಮಜ್ಞಾನದ ಬಗ್ಗೆಯೇ ಬೇಕು’ ಎಂದು  ಪಣ ತೊಡುತ್ತಾನೆ. ನಚಿಕೇತನು ಆತ್ಮಜ್ಞಾನದ  ಬಗ್ಗೆ ಅರಿಯಲು ಬಂದವನೆಂದು ಖಚಿತವಾದ ಮೇಲೆ ಯಮನು ಉಪದೇಶವೀಯಲು ಪ್ರಾರಂಭಿಸುವನು.

‘ನಚಿಕೇತ, ಜ್ಞಾನದಲ್ಲಿ ಶ್ರೇಯಸ್ಸು ಮತ್ತು ಪ್ರೇಯಸ್ಸು ಎಂಬ ಎರಡು ವಿದಗಳಿವೆ. ಶ್ರೇಯಸ್ಸು  ಎಂಬುದು ಭವಿಷ್ಯದಲ್ಲಿ ಮೋಕ್ಷದ ಕಡೆಗೆ ಒಯ್ಯುವುದು, ಪ್ರೇಯಸ್ಸು ಇಹಲೋಕದ ಸಂಸಾರ, ಐಶ್ವರ್ಯ, ಕೀರ್ತಿ ಕಡೆಗೆ ಒಯ್ಯುತ್ತದೆ. ಇವುಗಳು ಮೊದಲಲು ಸುಖ ಕೊಟ್ಟರೂ ಮತ್ತೆ ಕಷ್ಟಕ್ಕೆ ತಳ್ಳುತ್ತವೆ. ಇದು ಪಡೆಯುವುದು ಸುಲಭವಾದರೂ, ಬಿಡುಗಡೆಗೆ ಕಷ್ಟ, ಶ್ರೇಯಸ್ಸು ಹಾಗಲ್ಲ,  ಪಡೆಯುವುದು ಕಷ್ಟವಾದರೂ ಮುಂದೆ ಮುಕ್ತಿಗೆ  ದಾರಿಯಾಗಿ ದೇವೈಕ್ಯರಾಗುತ್ತೇವೆ. ವಿವೇಕಿಯಾದವನು ಶ್ರೇಯಸ್ಸನ್ನು ಆರಿಸಿಕೊಳ್ಳುತ್ತಾನೆ.

ಜೀವ ಸತ್ತರೂ ಆತ್ಮ ಸಾಯಲಾರ. ಆತ್ಮ ಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ. ಈತ ಜನ್ಮರಹಿತ, ನಿತ್ಯ ಶಾಶ್ವತ. ದೇಹ, ಆತ್ಮನಿಗೆ ಒಂದು ಮನೆಯಂತೆ, ಕೆಲವು ಕಾಲ ಅವನು ಆ ಮನೆಯಲ್ಲಿದ್ದು ಅನಂತರ ಅದನ್ನು ತೊರೆದು ಇನ್ನೊಂದು ಮನೆಗೆ ಹೋಗುತ್ತಾನೆ. ಅರ್ಥಾತ್ ಇನ್ನೊಂದು ದೇಹಕ್ಕೆ ಹೋಗುತ್ತಾನೆ. ಕರ್ಮಕ್ಕನುಸಾರವಾಗಿ , ಜ್ಞಾನಕ್ಕನುಸಾರವಾಗಿ ಜೀವಿಗಳು ಈ ದೇಹವನ್ನು ತ್ಯಜಿಸಿದ ಮೇಲೆ  ಮುಂದಿನ ಶರೀರವನ್ನು ಪಡೆಯುವವು. ತಾವು ಬದುಕಿರುವಾಗ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗನುಸಾರವಾಗಿ ಮುಂದಿನ ದೇಹ (ಮನೆ) ನಿರ್ಧಾರವಾಗುತ್ತದೆ. ಒಳ್ಳೆ ಕೆಲಸದಿಂದ ಬ್ರಹ್ಮೈಕ್ಯರಾಗುತ್ತಾರೆ. ಶಾಶ್ವತ ಸುಖಿಗಳಾಗುತ್ತಾರೆ. ಅಂದರೆ ಜೀವನ್ಮುಕ್ತಿಯನ್ನು ಪಡೆಯುತ್ತಾರೆ. ಬ್ರಹ್ಮನನ್ನು ಮಾತಿನಿಂದಾಗಲೀ ಕಣ್ಣಿನಿಂದಾಗಲೀ ಪಡೆಯಲು ಸಾಧ್ಯವಿಲ್ಲ. ಅವನನ್ನು ಯೋಗದ ಮೂಲಕ, ಧ್ಯಾನದ ಮೂಲಕ, ವಿಚಾರ ಮತ್ತು ಅನುಭವಗಳಿಂದ ಸಾಕ್ಷಾತ್ಕರಿಸಿಕೊಳ್ಳಬೇಕು.

ಹೀಗೆ ಯಾವನು ಮಾಡುತ್ತಾನೋ ಅವನು ತನ್ನ ಹೃದಯದಲ್ಲಿ ನೆಲಸಿರುವ  ಕಾಮನೆಗಳಿಂದ ಪಾರಾಗಿ ಅಮೃತನಾಗುತ್ತಾನೆ. ಇಲ್ಲಿಯೇ ಬ್ರಹ್ಮನನ್ನು ಪಡೆಯುತ್ತಾನೆ. ನಚಿಕೇತನು ಮೃತ್ಯುವಿನಿಂದ ಹೇಳಲ್ಪಟ್ಟ ಈ ಬ್ರಹ್ಮ ವಿದ್ಯೆಯನ್ನು ಸಂಪೂರ್ಣವಾದ ಯೋಗ ವಿದ್ಯೆಯನ್ನೂ ಪಡೆದು ಸಂತುಷ್ಟನಾಗಿ, ಸಶರೀರನಾಗಿ ಬ್ರಹ್ಮಲೋಕಕ್ಕೆ ಹೋದನು. ಬ್ರಹ್ಮ ಸಾಕ್ಷಾತ್ಕಾರಕ್ಕೆ ಈ ಮೂಲಕ ನಚಿಕೇತನು ಮಾರ್ಗ ತೋರಿಸುತ್ತಾನೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ 

3 Responses

  1. Anonymous says:

    ನನ್ನ ಲೇಖನ ಪಬ್ಲಿಷ್ ಮಾಡಿದ ಹೇಮಮಾಲಾ ಹಾಗೂ ಓದಿದ ಬಳಗಕ್ಕೂ ಕೃತಜ್ಞತೆಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ.

  3. ಶಂಕರಿ ಶರ್ಮ, ಪುತ್ತೂರು says:

    ಯಮನೊಂದಿಗೆ ಮಾತಾಡಿ ಮೃತ್ಯುವನ್ನು ಗೆದ್ದ ನಚಿಕೇತನ ಬಗೆಗೆ ಮತ್ತೊಮ್ಮೆ ಮನನ ಮಾಡಿದಂತಾಯಿತು..ಧನ್ಯವಾದಗಳು ವಿಜಯಕ್ಕ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: