ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 18
ಕೋಲ್ಕತ್ತ ಬಾಜಾರಿನತ್ತ..
ಮಧ್ಯಾಹ್ನದ ಸುಗ್ರಾಸ ಭೋಜನವನ್ನು ಸವಿದು, ಮುಂದಿನ ನಮ್ಮ ಕಾರ್ಯಕ್ರಮದಂತೆ ಕೋಲ್ಕತ್ತದ ಪ್ರಸಿದ್ಧ ಸೈನ್ಸ್ ಸಿಟಿಗೆ ಹೋಗಲು ಎಲ್ಲರೂ ಸಿದ್ಧರಿದ್ದರೂ, ಆ ಸಂಜೆ ಅಲ್ಲಿ ಖರೀದಿಯ ಅವಕಾಶವನ್ನೂ ನೀಡಲಾಯಿತು. ಊರಿನಿಂದ ಅಷ್ಟು ದೂರ ಬಂದು, ನೆನಪಿಗೋಸ್ಕರವಾದರೂ ಅಲ್ಲಿಯ ಪ್ರಸಿದ್ಧ ಹತ್ತಿ, ರೇಶ್ಮೆ ಬಟ್ಟೆಗಳ ಖರೀದಿ ಆಗಬೇಕಿತ್ತಲ್ಲಾ.. ಸೈನ್ಸ್ ಸಿಟಿಗೆ ನಾವು ಉಳಕೊಂಡಿದ್ದ ಹೋಟೇಲ್ ಮಲ್ಬೆರಿಯಿಂದ ಕೇವಲ 10ಕಿ.ಮೀ.ದೂರ ಇರುವುದಾದರೂ, ಸಂಚಾರ ದಟ್ಟಣೆಯಿಂದಾಗಿ ಪ್ರಯಾಣಕ್ಕೆ ಸುಮಾರು ಒಂದು ಗಂಟೆ ಮೇಲೆ ಸಮಯ ತಗಲುವುದೆಂದರು ಬಾಲಣ್ಣನವರು. ನಮ್ಮಲ್ಲಿ ಕೆಲವರಿಗೆ ಎರಡೂ ಕಡೆಗೆ ಹೋಗಲು ಇಚ್ಛೆ ಇದ್ದರೂ, ಅದು ಸಾಧ್ಯವಿಲ್ಲದ ಕಾರಣ ಒಂದು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಿತ್ತು. ನನಗೆ ಸೈನ್ಸ್ ಸಿಟಿಗೆ ಹೋಗಲು ತುಂಬಾ ಆಸೆ ಇದ್ದಿತಾದರೂ, ಮಗಳಿಗಾಗಿ ಕೆಲವು ವಸ್ತುಗಳು ಖರೀದಿಸಲಿದ್ದುದರಿಂದ ಅಲ್ಲಿಯ ಅಂಗಡಿಗಳಿಗೆ ಭೇಟಿ ನೀಡಲು ನಿಶ್ಚೈಸಿದೆ. ನಾವು ಕೆಲವು ಮಂದಿ ಪೇಟೆ ಕಡೆಗೆ ಹೋಗಲು ತಯಾರಿ ನಡೆಸಿದರೆ, ಇನ್ನುಳಿದವರು ಸೈನ್ಸ್ ಸಿಟಿಗೆ ಹೋಗುವ ಸನ್ನಾಹದಲ್ಲಿದ್ದರು.
ನಮ್ಮನ್ನು ಬಸ್ಸಿನಲ್ಲಿ ಪೇಟೆಗೆ ಬಿಟ್ಟು ಬಂದು, ಸೈನ್ಸ್ ಸಿಟಿಗೆ ಹೋಗುವವರನ್ನು ಕರೆದೊಯ್ಯುವ ಯೋಜನೆಯನ್ನು ಬಾಲಣ್ಣನವರು ಮೊದಲೇ ರೂಪಿಸಿದ್ದರಿಂದ ಎಲ್ಲರಿಗೂ ಅನುಕೂಲವಾಯ್ತು.ಆ ದಿನ ಆದಿತ್ಯವಾರವಾಗಿದ್ದರಿಂದ ಹೆಚ್ಚಿನ ಎಲ್ಲಾ ಅಂಗಡಿಗಳು ಮುಚ್ಚಿದ್ದುವು.. ಇಡೀ ಪೇಟೆಯೇ ಬಿಕೋ ಅನ್ನುತ್ತಿತ್ತು. ಒಂದು ಕಡೆ ರಸ್ತೆಯ ಎರಡೂ ಬದಿಗಳಲ್ಲಿ, ಸುಮಾರು ದೂರದ ವರೆಗೆ ಹಳೆಯ ಹರಿದ ಪ್ಲಾಸ್ಟಿಕ್ ಪರದೆಗಳನ್ನು ಇಳಿ ಬಿಟ್ಟಿರುವುದು ಕಾಣಿಸಿತು. ಅದುವೇ ಅಲ್ಲಿಯ ಪ್ರಸಿದ್ದ ಹಳೆ ಬಜಾರ್, ಬಟ್ಟೆಗಳು ಅನುಕೂಲಕರ ದರದಲ್ಲಿ ಸಿಗುತ್ತವೆ ಎಂದು ತಿಳಿಸಿ ನಮ್ಮನ್ನು ಅಲ್ಲಿಯೇ ಇಳಿಸಿ ಬಸ್ಸು ಹೊರಟು ಹೋಯಿತು. ಅಪರಿಚಿತ ನಗರದಲ್ಲಿ ನಾವು ಸ್ವಲ್ಪ ಜನ ಮಹಿಳೆಯರು ಹಾಗೂ ಇಬ್ಬರು ಅವರ ಪತಿದೇವರ ಜೊತೆ ಬಂದಿದ್ದರು. ನಾವು ಸಮಾನ ಮನಸ್ಕರ ಗುಂಪು ಮಾಡಿಕೊಂಡು ಖರೀದಿಗೆ ಹೊರಟೆವು. ನಾವು ಉಳಕೊಂಡ ಹೋಟೆಲ್ ನ ಸಂಪರ್ಕ ಸಂಖ್ಯೆಯನ್ನು ಬರೆದಿಟ್ಟುಕೊಂಡು, ಸ್ಥಳದ ಗುರುತಾಗಿ ಹೋಟೆಲ್ ಪಕ್ಕದ ಒಂದು ದೊಡ್ಡ ಕಟ್ಟಡದ ಹೆಸರು ನೆನಪಿಟ್ಟುಕೊಂಡೆವು.
ಪ್ಲಾಸ್ಟಿಕ್ ಪರದೆಯ ಹಿಂದೆ ಹೋಗಿ ನೋಡಿದಾಗ ಅಲ್ಲಿ ಬೇರೆಯೇ ಲೋಕದ ಅನಾವರಣ ವಾಯ್ತು.. ವಿವಿಧ ರೀತಿಯ ನೂರಾರು ಬಟ್ಟೆ ಅಂಗಡಿಗಳು! ಅದನ್ನು ನೋಡಿದಾಗ, ಮತ್ತು ಈಗಲೂ ಒಂದು ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ.. ಅಲ್ಲಾ..ನಮ್ಮೂರಲ್ಲಿ ಬಟ್ಟೆ ಅಂಗಡಿಗಳ ಎದುರು ಚಂದದ ಬಟ್ಟೆಗಳನ್ನು ನೇತು ಹಾಕಿ, ಝಗ ಝಗ ಬೆಳಕಿನಲ್ಲಿ ಮಾರಾಟಕ್ಕೋಸ್ಕರ ಪ್ರದರ್ಶಿಸುತ್ತಾರೆ. ಆದರೆ ಇಲ್ಲಿ ಯಾಕೆ ಹೀಗೆ? ಜನರ ಕಣ್ಣಿಗೆ ಬೀಳದಂತೆ, ಹೊರಗಡೆಯಿಂದ ಕೊಳಕು ಪ್ಲಾಸ್ಟಿಕ್ ನಿಂದ ಮುಚ್ಚಿ ಬಿಟ್ಟಿದ್ದಾರೆ ಯಾಕೆ?? ಅಲ್ಲಿಯ ಜನರಿಗೆ ಅದರ ಒಳಗಡೆ ಚಂದದ ಬಟ್ಟೆಗಳು ಮಾರಾಟಕ್ಕಿರುವುದು ಗೊತ್ತಿರಬಹುದೇನೋ.. ಇರಲಿ.. ನಾವು ಗೊಂದಲದ ಗೂಡಾಗಿಯೇ ಒಳ ಹೊಕ್ಕೆವು. ಮಧ್ಯೆ ನಡೆದಾಡಲು ದಾರಿಯಿದ್ದು, ಇಕ್ಕೆಲಗಳಲ್ಲೂ ಪುಟ್ಟ ಪುಟ್ಟ ಅಂಗಡಿಗಳು ಚೊಕ್ಕವಾಗಿ ಕುಳಿತಿದ್ದುವು. ಕೋಲ್ಕತ್ತದ ಬಟ್ಟೆಗಳು ಕೈ ಕಸೂತಿ ಕಲೆಗೆ ಹೆಸರಾಗಿವೆ. ಹಾಗೆಯೇ ಅಲ್ಲಿಯ ಹತ್ತಿ ಮತ್ತು ಸಂಭಲ್ ಪುರಿ(Sambhalpuri) ರೇಶ್ಮೆ ಬಟ್ಟೆಗಳೂ ಪ್ರಸಿದ್ಧ. ನಾವು ನಾಲ್ಕು ಮಂದಿ ಗೆಳತಿಯರು ಎಲ್ಲಾ ಅಂಗಡಿಗಳನ್ನು ಸುತ್ತಾಡಿ ಬೇಕಾದುದನ್ನು ಖರೀದಿಸಿದೆವು. ನನಗೋ ಮಗಳ ಬೇಡಿಕೆಯಂತೆ ರೇಶ್ಮೆ ಸೀರೆ ತಗೊಳ್ಳಬೇಕಿತ್ತು. ಆದರೆ ಅದು ಸಿಗಬಹುದಾದ ಅಂಗಡಿಗಳು ಒಂದೂ ಕಾಣಲಿಲ್ಲ. ಕೊನೆಗೆ ಒಬ್ಬೊಬ್ಬರ ಬಳಿ ವಿಚಾರಿಸುತ್ತಾ ಸಾಗಿದಾಗ, “ಇಲ್ಲೇ ಹತ್ತಿರದಲ್ಲಿ ಒಂದು ಅಂಗಡಿ ತೆರೆದಿದೆ ನೋಡಿ” ಎಂದು ಅವರು ತೋರಿಸಿದ ದಾರಿಯಲ್ಲಿ ಹೋಗುತ್ತಾ..ಹೋಗುತ್ತಾ ಒಂದು ಕಿಲೋಮೀಟರ್ ಗೂ ಜಾಸ್ತಿ,ನಾವು ನಾಲ್ಕು ಮಾತೆಯರು(ನನ್ನ ಜೊತೆಗೆ ಲೀಲಾವತಿ, ಜ್ಯೋತಿ ಲಕ್ಷ್ಮಿ, ಸವಿತ) ನಡೆದದ್ದಂತೂ ಸತ್ಯ!
ಅಂತೂ ಇಂತೂ, ದೊಡ್ಡದಾದ ಬಟ್ಟೆಯಂಗಡಿ ಮುಂದೆ ನಿಂತಾಗ ಅಬ್ಬಬ್ಬಾ ಎನ್ನಿಸಿತು! ದೊಡ್ಡದಾದ ಹವಾ ನಿಯಂತ್ರಿತ ಹಾಲ್ ನಲ್ಲಿ ಕೂರಿಸಿ ರೇಷ್ಮೆ ಸೀರೆಗಳನ್ನು ನಮ್ಮ ಮುಂದೆ ಹರಡಿದಾಗ ಎಲ್ಲರ ಮೊಗದಲ್ಲಿ ನಗು…ಆದರೆ ಅದರಲ್ಲಿ ನಮೂದಿಸಿದ್ದ ಬೆಲೆಯನ್ನು ನೋಡಿದಾಗ ನನ್ನ ನಗು ಮಾಯ! ಬೆಲೆಯು ಪರ್ಸಿಗಿಂತ ಭಾರವೆಂದೆನಿಸಿ ಹೋಗೋಣವೆಂದುಕೊಂಡಾಗಲೇ ಎದುರಿಗೇ ಕಾಣಿಸಿದ ಸೊಗಸಾದ ಸೀರೆಯ ಬೆಲೆ ಕಡಿಮೆಯೆನಿಸಿತು. ಅದನ್ನೇ ತಗೊಳ್ಳೋಣವೆಂದು ಆರಿಸಿದಾಗ ಅಲ್ಲಿದ್ದವರು ಹೇಳಿದ ಮಾತು ಕೇಳಿ ನಂಬಲೇ ಆಗಲಿಲ್ಲ. “ಮೇಡಂ, ಕೆಲಸದವರ ತಪ್ಫಿನಿಂದಾಗಿ ಇದರಲ್ಲಿ ನಮೂದಿಸಿದ ಬೆಲೆ ಇಷ್ಟು ಕಡಿಮೆಯಿದೆ. ನಿಜವಾಗಿಯೂ ಬೆಲೆ ಇದರ ದುಪ್ಪಟ್ಟು ಇದೆ. ನೀವು ಈ ಸೀರೆ ಬೇಡವೆಂದರೆ ಈಗಲೇ ಇದನ್ನು ಗೋಡೌನಿಗೆ ಕಳಿಸಿ ಸರಿಯಾದ ಬೆಲೆ ಹಾಕಿಸ್ತಾರೆ” ಎಂದರು. ‘ಏನಪ್ಪಾ.. ಇಷ್ಟೂ ದೇವರ ದಯವಾ…’ ಎಂದು ದಿಗ್ಮೂಢಳಾದೆ!!. ತುಂಬಾ ಸಂತೋಷದಿಂದ ಅದನ್ನು ಖರೀದಿಸಿ ಹೊರಬಂದಾಗ ನಡೆದುದೆಲ್ಲಾ ನಿಜವಾ..ಸುಳ್ಳಾ ಎಂದು ಯೋಚಿಸುವಂತಾಯ್ತು. ಹಿಂತಿರುಗುವ ದಾರಿಯಲ್ಲಿ ಸಿಕ್ಕಿದ ಅಂಗಡಿಗಳಿಂದಲೂ ನಾವೆಲ್ಲರೂ ಇನ್ನೂ ಸ್ವಲ್ಪ ಬಟ್ಟೆಗಳನ್ನು ಖರೀದಿಸಿ ನಡೆದಾಗ ಎದುರಲ್ಲೇ ಒಂದು ವಿಶೇಷವನ್ನು ಗಮನಿಸಿದೆವು. ಟೀ ಶರ್ಟ್ ಗಳಿಗೆ ವಿವಿಧ ರೀತಿಯ ಚಿತ್ರಗಳನ್ನು, ಬರಹಗಳನ್ನು ಯಂತ್ರದಲ್ಲಿ ಹಾಕುತ್ತಿದ್ದುದು ತುಂಬಾ ಕುತೂಹಲಕಾರಿಯಾಗಿತ್ತು. ಅದಾಗಲೇ ಸಂಜೆ ಐದು ಗಂಟೆ.. ಹೋಟೇಲಿಗೆ ಹಿಂತಿರುಗಲು ರಿಕ್ಷಾ ಹತ್ತಿ ಡ್ರೈವರ್ ಬಳಿ ನಮ್ಮ ಹೋಟೇಲಿನ ಹೆಸರು ಹೇಳಿದರೆ ಅವನು ಸರಿಯಾಗಿ ತಿಳಿಯದು ಎನ್ನಬೇಕೇ! ಸ್ಥಳದ ಗುರುತಿಗಾಗಿ ಇದ್ದ ಕಟ್ಟಡದ ಹೆಸರು ನಮಗೆಲ್ಲರಿಗೂ ಮರತೇ ಹೋಗಿತ್ತು! ಗಾಬರಿಯಾದರೂ ತೋರ್ಪಡಿಸಿಕೊಳ್ಳದೆ ಸ್ವಲ್ಪ ದೂರ ಹೋದ ಮೇಲೆ ಬಾಲಣ್ಣನವರಿಗೆ ಫೋನ್ ಮಾಡಿ ಸರಿಯಾದ ಎಡ್ರಸ್ ತಿಳಿದುಕೊಂಡ ಮೇಲೆ ನೆಮ್ಮದಿಯಾಯಿತು ಎನ್ನಿ!
ಹೋಟೆಲ್ ತಲಪಿದಾಗ, ಸೈನ್ಸ್ ಸಿಟಿಗೆ ಹೋದವರೆಲ್ಲಾ ಅಲ್ಲಿಯ ವಿಶೇಷತೆಗಳನ್ನು ಹೇಳಿದ್ದೇ ಹೇಳಿದ್ದು.. ನಾವು ಕುತೂಹಲದಿಂದ ಕೇಳಿದ್ದೇ ಕೇಳಿದ್ದು. ನಮಗೆ ಆ ಅವಕಾಶ ತಪ್ಪಿಹೋಯಿತೆಂದು ಸ್ವಲ್ಪ ಬೇಸರವಾಗಿದ್ದಂತೂ ನಿಜ. ಸಮಯ ಮೀರಿದುದರಿಂದ ಸಂಜೆಯ ಕಾಫಿ ಆ ದಿನದ ಮಟ್ಟಿಗೆ ನಮಗೆ ಖೋತಾ ಆಗಿತ್ತು.
ರಾತ್ರಿ ಊಟಕ್ಕೆ ಇನ್ನೂ ಬಹಳ ಸಮಯವಿದ್ದುದರಿಂದ ಅಲ್ಲಿಯ ಇನ್ನೊಂದು ಪ್ರಸಿದ್ದ ನ್ಯೂ ಬಜಾರ್ ಗೆ ಎಲ್ಲರೂ ಕೂಡಿ ಹೋದಾಗ ಅದಾಗಲೇ ಕತ್ತಲಾಗಿತ್ತು. ವ್ಯಾಪಾರ ಸಂಕೀರ್ಣದ ಸುತ್ತಲೂ ಇರುವ ರಸ್ತೆಯ ಇಕ್ಕೆಲಗಳಲ್ಲಿ ಜೋರಾಗಿ ವ್ಯಾಪಾರ ನಡೆಯುತ್ತಿತ್ತು. ಅಲ್ಲಿಯ ಜನ ದಟ್ಟಣೆಯಿಂದಾಗಿ ಮುಂದಕ್ಕೆ ನಡೆಯಲೂ ಕಷ್ಟ ಸಾಧ್ಯವೆನಿಸುತ್ತಿತ್ತು. ಅಲ್ಪ ಸ್ವಲ್ಪ ಖರೀದಿ, ಸುತ್ತಲಿನ ಝಗಝಗಿಸುವ ನೋಟ, ವ್ಯಾಪಾರಿಗಳ ಚಾಕಚಕ್ಯತೆ, ಎಲ್ಲವನ್ನೂ ಆಸ್ವಾದಿಸುತ್ತ,ಅಲ್ಪಸ್ವಲ್ಪ ಖರೀದಿ ಯನ್ನೂ ಮಾಡುತ್ತಾ, ಸಮಯ ಸರಿದುದೇ ತಿಳಿಯಲಿಲ್ಲ. ರಾತ್ರಿ ಎಂಟು ಗಂಟೆ ಹೊತ್ತಿಗೆ, ನಮಗೆ ತಿಳಿಯಪಡಿಸಿದ ಜಾಗದಲ್ಲಿ ಎಲ್ಲರೂ ಸೇರಿದೊಡನೆ ನಮ್ಮನ್ನು ಕರೆದೊಯ್ಯಲು ಬಸ್ಸು ಬಂದಿತ್ತು. ಹೋಟೆಲ್ ನಲ್ಲಿ ರೆಡಿಯಾಗಿದ್ದ ಸುಗ್ರಾಸ ಭೋಜನವನ್ನು ಸವಿದು ನಮ್ಮ ಮುಂದಿನ ಪ್ರಯಾಣಕ್ಕಾಗಿ ತಯಾರಾದಾಗ, ಸಿಕ್ಕಿಂಗೆ ಹತ್ತು ಗಂಟೆಗೆ ತೆರಳುವ ರೈಲು ಹಿಡಿಯಲು ನಮ್ಮ ಸುಖಾಸೀನ ಬಸ್ಸು ತಯಾರಾಗಿ ನಿಂತಿತ್ತು. ಎಲ್ಲರ ಜೊತೆಗಿನ ಕೊನೆಯ ಬಸ್ಸು ಪ್ರಯಾಣ ಅದಾಗಿತ್ತು. ಒಂಭತ್ತು ಗಂಟೆ ಹೊತ್ತಿಗೆ ಸೀಲ್ಧಾ ರೈಲ್ವೇ ಸ್ಟೇಶನ್ ತಲಪಿ, ಸಮಯಕ್ಕೆ ಸರಿಯಾಗಿ ಬಂದ ರೈಲಿನಲ್ಲಿ, ಹವಾನಿಯಂತ್ರಿತ ಬೋಗಿಯಲ್ಲಿ ಮಲಗಿ, ಮುಂದಿನ ನಮ್ಮ ಕನಸಿನ ತಾಣ ಗ್ಯಾಂಗ್ ಟೋಕ್ ಬಗ್ಗೆ ನೆನೆಯುತ್ತಾ ನಿದ್ರಾದೇವಿಗೆ ಶರಣಾದೆವು…
(ಮುಂದುವರಿಯುವುದು..)
ಹಿಂದಿನ ಪುಟ ಇಲ್ಲಿದೆ :http://surahonne.com/?p=25517
-ಶಂಕರಿ ಶರ್ಮ, ಪುತ್ತೂರು.
ಪ್ರತೀ ವಾರವೂ ಈ ಪ್ರವಾಸ ಕಥನ ಸುಂದರವಾಗಿ ಮೂಡಿ ಬರುತ್ತಿದೆ , ನಾವೂ ಖುದ್ದಾಗಿ ಅಲ್ಲೇ ಇದ್ದು ಎಲ್ಲವನ್ನೂ ನೋಡಿ ಸಂಭ್ರಮಿಸಿದ ಅನುಭವ ನೀಡುತ್ತಿದೆ .
ಧನ್ಯವಾದಗಳು ಮೇಡಂ.