ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 11

Spread the love
Share Button


ಜಗನ್ನಾಥನಿಗೆ ಮಹಾ ನೈವೇದ್ಯ

ಪುರಿ ಶ್ರೀ ಜಗನ್ನಾಥ ದೇವರ ದಿವ್ಯ ದರುಶನದ ಭಾಗ್ಯ ಪಡೆದು, ಅಲ್ಲಿಯ ವಿಶೇಷತೆಗಳ ಬಗ್ಗೆ ತಿಳಿಯುವ ಕಾತುರದಿಂದ ಅರ್ಚಕರನ್ನು(ಪಂಡಾರವರು) ಹಿಂಬಾಲಿಸಿದೆವು. ಅವರು ಇನ್ನೂ ಸಾಕಷ್ಟು ಕುತೂಹಲಕಾರಿ ವಿಷಯಗಳ ಬಗ್ಗೆ  ತಿಳಿಯಪಡಿಸಿದರು…

ದೇಗುಲದ ಮುಖ್ಯದ್ವಾರವೇ ಸಿಂಹದ್ವಾರ, ಅದುವೇ ಧರ್ಮದ್ವಾರ. ಅದರ ಎದುರಿಗೆ ನಿಲ್ಲಿಸಲ್ಪಟ್ಟಿದೆ 10 ಮೀ. ಎತ್ತರದ ಅರುಣಸ್ಥಂಭ. ಕೋನಾರ್ಕಿನ ಸೂರ್ಯ ದೇಗುಲವು ಶಿಥಿಲಗೊಳ್ಳುತ್ತಿರುವುದರಿಂದ, ಅಲ್ಲಿದ್ದ  ಸ್ತಂಭ ವನ್ನು ಇಲ್ಲಿ ತಂದು ನಿಲ್ಲಿಸಲಾಯಿತು. ಸ್ತಂಭದ ಮೇಲ್ಭಾಗದಲ್ಲಿ  ಅರುಣ ದೇವರು ಕುಳಿತ ಭಂಗಿಯಲ್ಲಿರುವ ಸುಂದರವಾದ ಮೂರ್ತಿಯನ್ನು  ಕಾಣಬಹುದು. ಉಳಿದ ಮೂರು ದಿಕ್ಕುಗಳಲ್ಲಿ; ಪಶ್ಚಿಮದಲ್ಲಿ ವ್ಯಾಘ್ರದ್ವಾರ , ಉತ್ತರದಲ್ಲಿ ಹಸ್ತಿದ್ವಾರ, ದಕ್ಷಿಣದಲ್ಲಿ ಅಶ್ವದ್ವಾರಗಳು ಅತ್ಯಂತ ಎತ್ತರವಾಗಿದ್ದು, ತಮ್ಮ ಅತ್ಯುತ್ತಮ ಕಲಾ ಕೆತ್ತನೆಗಳಿಂದ ಗಮನ ಸೆಳೆಯುತ್ತವೆ. ವಿಸ್ತಾರವಾದ ದೇಗುಲದ ಆವರಣವು  ಸಾಧಾರಣ 7ಮೀ ಎತ್ತರದ ಪೌಳಿಯಿಂದ ಆವೃತವಾಗಿದೆ.

ನಮ್ಮ ಈ ಭರತಖಂಡದಲ್ಲಿ ಚತುರ್ಧಾಮಗಳ ಮಹಿಮೆ ಅಪಾರ. ಪುರಿ ಶ್ರೀ ಜಗನ್ನಾಥ ದೇವರ ಸನ್ನಿಧಿಯು ಈ ಚತುರ್ಧಾಮಗಳಲ್ಲೊಂದಾಗಿರುವುದು ವಿಶೇಷ. ಪೂರ್ವ ದಿಕ್ಕಿನಲ್ಲಿ ಪುರಿಯ ಶ್ರೀ ಜಗನ್ನಾಥ ದೇವರು, ಪಶ್ಚಿಮದ ದ್ವಾರಕೆಯಲ್ಲಿ ದ್ವಾರಕನಾಥ, ದಕ್ಷಿಣದ ರಾಮೇಶ್ವರದಲ್ಲಿ ರಾಮನಾಥ ಮತ್ತು ಉತ್ತರದ ಬದರಿಯಲ್ಲಿ ಬದರೀನಾಥ. ಮಹಾವಿಷ್ಣು ರಾಮೇಶ್ವರದಲ್ಲಿ ಜಳಕವಾಡಿ, ದ್ವಾರಕೆಯಲ್ಲಿ  ಸಮಾಲೋಚನೆ ನಡೆಸಿ, ಪುರಿಯಲ್ಲಿ ಭೋಜನಗೈದು, ಬದರಿಯಲ್ಲಿ ವಿಶ್ರಮಿಸುವನೆಂದು ಭಕ್ತರ ನಂಬಿಕೆ. ಅಂತೆಯೇ ಭೋಜನಕ್ಕಾಗಿ ಪುರಿಗೆ ಬಂದಾಗ ಆ ಮಹಾಮಹಿಮ ಲೋಕೋದ್ಧಾರಕನಿಗೆ ಸಾಮಾನ್ಯ ಅಡುಗೆ ಸಾಕೇ?! ಹಾಂ..ಅದಕ್ಕಾಗಿಯೇ ದೇಗುಲದ ಎಡಬದಿಗಿದೆ ಜಗತ್ತಿನ ಅತ್ಯಂತ ದೊಡ್ಡ ಪಾಕಶಾಲೆ. ಎರಡು ಮೂರು ಗಂಟೆಗಳೊಳಗೆ ಒಂದು ಲಕ್ಷ ಜನರಿಗೆ ಉಣಬಡಿಸುವ ವ್ಯವಸ್ಥೆಯಿರುವುದು ಇಲ್ಲಿಯ ವಿಶೇಷ. ಸಾವಿರದಿಂದ, ಎರಡು ಲಕ್ಷ ಜನರು ಬಂದು ಪ್ರಸಾದ ಸ್ವೀಕರಿಸಿದರೂ, ಎಂದೂ ಮಹಾಪ್ರಸಾದವು ವ್ಯರ್ಥವಾದುದೇ ಇಲ್ಲ. ಶ್ರೀ ಜಗನ್ನಾಥ ದೇವರಿಗೆ ದಿನದಲ್ಲಿ ಏಳು ಬಾರಿ ನೈವೇದ್ಯ, ಆದೂ, 56ಬಗೆ ವೈವಿಧ್ಯಮಯ ವ್ಯಂಜನಗಳಿಂದ! ಇವುಗಳೋ,752 ಒಲೆಗಳಲ್ಲಿ,  ಅದಕ್ಕಾಗಿಯೇ ವಿಶೇಷ ರೀತಿಯಲ್ಲಿ ತಯಾರಿಸಲಾದ ಮಣ್ಣಿನ ಮಡಿಕೆಗಳಲ್ಲಿ, ಕಟ್ಟಿಗೆ ಉಪಯೋಗಿಸಿ ಸಾಂಪ್ರದಾಯಿಕವಾಗಿ ತಯಾರಿಸುವಂತಹುಗಳು. ಆ ಕಟ್ಟಿಗೆಯಾದರೂ ಯಾವುದು ಅಂತೀರಾ… ಜಗನ್ನಾಥನ ರಥೋತ್ಸವವಾದ ಬಳಿಕ, ಆ ರಥವನ್ನು ಮರುವರ್ಷ ಬಳಸುವಂತಿಲ್ಲ. ರಥವನ್ನು ಕಳಚಿ, ಆ ಕಟ್ಟಿಗೆಯನ್ನೇ ದೇವರ ನೈವೇದ್ಯದ ಅಡಿಗೆಗೆ ಬಳಸುತ್ತಾರೆ. ಮರುವರುಷದ ರಥವು ಕಹಿಬೇವಿನ ಮರದಿಂದ ಪುನಃ ಎರಡೇ ತಿಂಗಳುಗಳಲ್ಲಿ ತಯಾರಾಗಿ ಬಿಡುತ್ತದೆ. ಪಾಕಶಾಲೆಯಲ್ಲಿ ಪಾಕತಯಾರಿಯ ಉಸ್ತುವಾರಿಯನ್ನು ಸ್ವತಃ ಮಹಾಲಕ್ಷ್ಮಿ ದೇವಿಯೇ  ನಡೆಸುವಳೆಂದು ಪ್ರತೀತಿ. ಪಾಕವು ಸರಿಯಾಗಿಲ್ಲವಾದಲ್ಲಿ ನಾಯಿಯ ನೆರಳು ಕಾಣಿಸುಕೊಳ್ಳುವುದು.. ಆಗ ಮಾಡಿದ ಪಾಕವನ್ನೆಲ್ಲಾ ನೆಲದಲ್ಲಿ ಹೂತು ಬೇರೆಯೇ ಅಡಿಗೆ ತಯಾರಿಸುವ ಬಗ್ಗೆ ತಿಳಿದು ತುಂಬಾ ಆಶ್ಚರ್ಯವಾಯಿತು. ಏಳು ಮಡಿಕೆಗಳನ್ನು ಒಂದರ ಮೇಲೊಂದಿಟ್ಟು ಕಟ್ಟಿಗೆಯಲ್ಲಿ ಬೇಯಿಸುವರು. ವಿಚಿತ್ರವೆಂದರೆ, ಮೇಲ್ಭಾಗದ ಮಡಿಕೆಯ ಅನ್ನ ಮೊದಲು ಬೇಯುವುದಂತೆ! ಸಂಪ್ರದಾಯದಂತೆ ಅಡುಗೆಯಲ್ಲಿ ನೀರುಳ್ಳಿ, ಬೆಳ್ಳುಳ್ಳಿ ಮತ್ತು ಮೆಣಸು ನಿಷಿದ್ಧ. ಅಡುಗೆ ತಯಾರಿಗಾಗಿ,  ಆವರಣದಲ್ಲಿರುವ ಗಂಗಾ ಮತ್ತು ಯಮುನಾ ಎಂಬ ಎರಡು ಬಾವಿಗಳಿಂದ ನೀರನ್ನು ಉಪಯೋಗಿಸುವರು. ಜಗನ್ನಾಥ ದೇವರಿಗೆ ‘ಅನ್ನಬ್ರಹ್ಮ’ನನ್ನು ನೈವೇದ್ಯಗೈದು, ಆ ಬಳಿಕ ಅಲ್ಲಿಯ ವಿಮಲದೇವಿಗೆ ನೈವೇದ್ಯ ಮಾಡಿಯಾದ ಬಳಿಕವೇ ಮಹಾಪ್ರಸಾದವಾಗುವುದು ರೂಢಿ. ಪ್ರಸಾದವನ್ನು ಭಕ್ತರಿಗೆ ವಿತರಿಸುವರಲ್ಲದೆ,  ನಿಗದಿತ ಮೊತ್ತ ನೀಡಿ ಮಹಾಪ್ರಸಾದವನ್ನು ಭೋಗ ಮಂಟಪದಲ್ಲಿ ಪಡೆಯಬಹುದು. ದೇವರಿಗೆ ನೈವೇದ್ಯವಾದ ಮಹಾಪ್ರಸಾದವು ದೇಗುಲದ ಬಲಭಾಗದಲ್ಲಿರುವ ಆನಂದ ಬಾಜಾರಿನಲ್ಲಿ ಮಾರಾಟ ಮಾಡಲಾಗುತ್ತದೆ.

ಪುರಿ ಜಗನಾಥ ಮಂದಿರದ ಮಹಾಪ್ರಸಾದ, (ಚಿತ್ರಕೃಪೆ: ಅಂತರ್ಜಾಲ)

ಪುರಿ ಎಂದರೆ ಪೂರ.. ಪೂರ್ಣವಾದುದು.. ಎಷ್ಟೋ ತೀರ್ಥಯಾತ್ರೆಯನ್ನು ಮಾಡಿ ದೇವಾಲಯಗಳಲ್ಲಿ ದೇವರ ದರುಶನಗೈದರೂ, ಪುರಿಯಲ್ಲಿ ಶ್ರೀ ಜಗನ್ನಾಥ ದೇವರ ದರುಶನ ಮಾತ್ರದಿಂದ ಪೂರ್ಣ ಫಲವು ಪ್ರಾಪ್ತಿಯಾಗಿ, ವಿಷ್ಣು ಸಾಯುಜ್ಯವನ್ನು ಹೊಂದುವರೆಂಬ ಬಲವಾದ  ನಂಬಿಕೆಯಿದೆ. ಪಂಡಾರವರು ತಿಳಿಯಪಡಿಸಿದಂತೆ, 214ಅಡಿಗಳಷ್ಟು ಎತ್ತರದ ದೇಗುಲದ ಮೇಲ್ಭಾಗದ ಗೋಪುರದಲ್ಲಿ 12ಅಡಿಗಳಷ್ಟು ಎತ್ತರದ ಅಷ್ಟಧಾತುಗಳಿಂದ ನಿರ್ಮಿತ ವೃತ್ತಾಕಾರದ ಚಕ್ರವನ್ನು, ನೀಲಚಕ್ರ ಎನ್ನುವರು. ಅದರ ಮೇಲೆ ಸಣ್ಣ, ದೊಡ್ಡ, ಕೆಂಪು ಮತ್ತು ಹಳದಿ ಬಣ್ಣಗಳ ಪತಾಕೆಗಳನ್ನು ಹಾರಿಸುವರು. ಒಡಿಸ್ಸವನ್ನು ಚಂಡಮಾರುತಗಳಂತಹ ಗಂಡಾಂತರಗಳಿಂದ ರಕ್ಷಿಸುವ,  ಪಾಪಿಗಳನ್ನು ಉದ್ಧರಿಸುವ  ಶಕ್ತಿಯುಳ್ಳ ಈ ಪತಾಕೆಗಳನ್ನು
ದಿನಾ ಸಾಯಂಕಾಲದ ಸಮಯ ಬದಲಾವಣೆ ಮಾಡಲಾಗುತ್ತದೆ. ಕೋನಾರ್ಕಿನಂತೆ ಪಗೋಡದ ಆಕಾರದಲ್ಲಿರುವ  ಈ ದೇವಸ್ಥಾನವು, ಬಿಳಿ ಪಗೋಡವೆಂದೂ ಪ್ರಸಿದ್ಧಿ.(ಕೋನಾರ್ಕಿನ ದೇಗುಲ ಕರಿ ಪಗೋಡವೆಂದು ಹೆಸರು ಪಡೆದಿದೆ)

ಮುಂದಕ್ಕೆ, ಅರ್ಚಕರೊಂದಿಗೆ ಸಾಗುತ್ತಿದ್ದಾಗಲೇ, ದೇಗುಲದ ಆವರಣದಲ್ಲಿ ದೊಡ್ಡದಾದ ವೃಕ್ಷವೊಂದರ  ಕಾಂಡದಲ್ಲಿ ಸಾವಿರಾರು ದಾರಗಳನ್ನು ಸುತ್ತಿರುವುದು  ಕಂಡು ಆಶ್ಚರ್ಯಗೊಂಡೆವು. ಅದುವೇ ಆಗಿತ್ತು ವಟ ವೃಕ್ಷ. ಪುರಾಣದಲ್ಲಿರುವಂತೆ, ಪ್ರಳಯ ಕಾಲದಲ್ಲಿ ಪರಮಾತ್ಮನು ಪುಟ್ಟ ಮಗುವಿನ ರೂಪದಲ್ಲಿ ಈ ವೃಕ್ಷದ ಎಲೆಯ ಮೇಲೆ ಪವಡಿಸಿದನಂತೆ. ಮನೋಭೀಷ್ಟ ಈಡೇರಲು ಇದರ ಕಾಂಡಕ್ಕೆ, ನಿಗದಿತ ಮೊತ್ತಕ್ಕೆ ದೊರಕುವ ದಾರವನ್ನು  ಕಟ್ಟುವುದು ರೂಢಿ. ಹಾಗೆಯೇ ನಮ್ಮಲ್ಲಿ ಕೆಲಮಂದಿ ದಾರ ಕಟ್ಟಿ ಪ್ರಾರ್ಥನೆ ಸಲ್ಲಿಸಿದರು. ಸ್ವಲ್ಪ ಮುಂದಕ್ಕೆ ಹೋದಂತೆ, ನಮಗೊಂದು ದೊಡ್ಡದಾದ ಉದ್ದದ ಕಲ್ಲೊಂದನ್ನು ತೋರಿಸಿದರು. ಅದರ ಒಂದು ತುದಿಯಲ್ಲಿ ಶಬ್ದ ಮಾಡಿದಾಗ  ಇನ್ನೊಂದು ತುದಿಯಲ್ಲಿ ತುಂಬಾ ಚೆನ್ನಾಗಿ ಆ ಶಬ್ದ ಕೇಳಿಸುತ್ತಿತ್ತು. ಸರಿಯಾಗಿ ಪರಿಶೀಲಿಸಿದರೆ, ಒಳಗೆ ಟೊಳ್ಳಾಗಿರಲಿಲ್ಲ! ವಿಚಿತ್ರವಾದ ಈ ಕಲ್ಲು ಎಲ್ಲಿಂದ ಬಂತೆಂದು ಯಾರಿಗೂ ಗೊತ್ತಿಲ್ಲವಂತೆ, ಅದಕ್ಕೇ ಅದರ ಹೆಸರು ಮಾಯಾಕಲ್ಲು. ಅದಾಗಲೇ ಸುಡು ಬಿಸಿಲಿಗೆ ದೇಗುಲದ ಆವರಣದ ಕಲ್ಲು ಚಪ್ಪಡಿಗಳು ಎಲ್ಲರ ಕಾಲುಗಳನ್ನು ಚುರುಗುಟ್ಟಿಸುತ್ತಿದ್ದವು. ಪಂಡಾರವರು ನಮ್ಮ ಮನಸ್ಸನ್ನರಿತವರಂತೆ, ತಣ್ಣನೆಯ ಮಂಟಪದಲ್ಲಿ ನಮ್ಮನ್ನೆಲ್ಲ ಕುಳ್ಳಿರಿಸಿ, ತಕ್ಷಣ ಎಲ್ಲಿಂದಲೋ ಮಹಾಪ್ರಸಾದವನ್ನು ತಂದು ನಮ್ಮಲ್ಲೊಬ್ಬರ ಕೈಯಲ್ಲಿಟ್ಟರು. ಮಹಾಭಾಗ್ಯದಲ್ಲಿ ಪಡೆದ, ರುಚಿಯಾದ ಮಹಾಪ್ರಸಾದವನ್ನು ನಾವೆಲ್ಲರೂ ಭಕ್ತಿಯಿಂದ ಪಡೆದು ಧನ್ಯರಾದೆವು.  ಅಷ್ಟರಲ್ಲಿ, ಅಲ್ಲೊಬ್ಬರು ಅರ್ಚಕರು ಪ್ರಸಾದವನ್ನು ಹಂಚುತ್ತಿರುವುದು ಕಾಣಿಸಿತು. ನಾವು ಕೈಯೊಡ್ಡಿ ಪಡಕೊಂಡು ಸೇವಿಸಿದಾಗ ಬಲು ಸಿಹಿ, ಅತ್ಯಂತ ಮಧುರ ರುಚಿಯಿಂದ ಕೂಡಿದ ಮಹಾಪ್ರಸಾದವು ಹಾಲು-ಬೆಲ್ಲ ಕುದಿಸಿ ಮಾಡಿದ ಅತಿ ವಿಶೇಷವಾದ *ರಬ್ಡೀ* ಆಗಿತ್ತು. ಇದರ ಬಗ್ಗೆ ಬಾಲಣ್ಣನವರು ಮೊದಲೇ ತಿಳಿಸಿ, “ಅದರ ರುಚಿಯನ್ನು ನೀವೆಲ್ಲರೂ ನೋಡಲೇ ಬೇಕು” ಎಂದು ಸೂಚಿಸಿದ್ದರು. ನಮಗರಿಯದಂತೆ ಅದು ಕೂಡಾ ನೆರವೇರಿತ್ತು. ಅನಾಮತ್ತಾಗಿ ಒದಗಿ ಬಂದ ನಮ್ಮ ಈ ಸುಯೋಗಕ್ಕೆ ಏನೆಂದು ಹೇಳಲಿ!  ನಾವು ಕುಳಿತಿದ್ದ ಮಂಟಪದ ಒಂದು ಬದಿಯಲ್ಲಿ ಪರಿ ಪರಿಯ ಪ್ರಸಾದಗಳನ್ನು ಮಾರಾಟಕ್ಕಿಟ್ಟಿದ್ದರು. ನಾವು ಕೆಲವರು ಆ ಪ್ರಸಾದಗಳನ್ನು ಖರೀದಿಸಿ ಎಲ್ಲರಿಗೂ ಹಂಚಿ ತಿಂದೆವು. ಅಷ್ಟರಲ್ಲೇ ಪಂಡಾರವರು ನಮ್ಮನ್ನೆಲ್ಲಾ ಕರೆದು ದೇಗುಲದ ಇನ್ನೂ ಕೆಲವು ವಿಶೇಷತೆಗಳನ್ನು ಹೇಳತೊಡಗಿದರು…

(ಮುಂದುವರಿಯುವುದು..)

ಹಿಂದಿನ ಪುಟ ಇಲ್ಲಿದೆ :

 -ಶಂಕರಿ ಶರ್ಮ, ಪುತ್ತೂರು.

4 Responses

 1. K Vishwanatha says:

  ಹಸ್ತಿ ದ್ವಾರ.ಅಶ್ವ ದ್ವಾರ… ಗಳೆಂದು ಕರೆಯಲಾಗುವ ದ್ವಾರಗಳಲ್ಲಿ ಹಸ್ತಿ, ಅಶ್ವ ..ಗಳ ಕೆತ್ತನೆಗಳಿವೆಯೆ? ದ್ವಾರಗಳನ್ನು ಗುರುತಿಸಲು ಮಾತ್ರ ಇರುವ ಹೆಸರುಗಳೆ? ಕೇವಲ ರಥಗಳಿಗೆ ಉಪಯೋಗಿಸಿದ ಕಟ್ಟಿಗೆಗಳು ವರ್ಷ ಪೂರ್ತಿ ಅಡಿಗೆಗಳಿಗೆ ಸಾಕಾಗುತ್ತೆಯೆ? ಇತರ ಕಟ್ಟಿಗೆಗಳನ್ನು ಮಿಕ್ಸ್ ಮಾಡುತ್ತಾರೆಯೆ?
  ದ್ರವ ಹಾಗೂ ವಾಯುವಿನಲ್ಲಿ ಉಷ್ಣದ ಮೇಲ್ಮುಖ ಚಲನೆಯ ಕುರಿತು ತರಗತಿಯಲ್ಲಿ ಬೋಧಿಸಲು ಒಂದು ಉತ್ತಮ ಉದಾಹರಣೆ ನಿಮ್ಮಿಂದ ದೊರಕಿತು .ಧನ್ಯವಾದಗಳು.

  • Shankari Sharma says:

   ಹೌದು..ಹಸ್ತಿದ್ವಾರ, ಅಶ್ವದ್ವಾರ ಇತ್ಯಾದಿಗಳಲ್ಲಿ ಆಯಾಯ ಕೆತ್ತನೆಗಳಿವೆ. ರಥದ ಕಟ್ಟಿಗೆಗಳು ಪಾಕ ಶಾಲೆಯಲ್ಲಿ ಉಪಯೋಗಿಸಲ್ಪಡುವುದರ ಜೊತೆಗೆ ಇತರ ಕಟ್ಟಿಗೆಗಳೂ ಉಪಯೋಗದಲ್ಲಿವೆ. ಪ್ರತಿಕ್ರಿಯೆಗೆ ಧನ್ಯವಾದಗಳು.

 2. ನಯನ ಬಜಕೂಡ್ಲು says:

  ಮೇಡಂ, ವಾರದಿಂದ ವಾರಕ್ಕೆ ನಿಮ್ಮ ಪ್ರವಾಸ ಕಥನ ಹೊಸ ಹೊಸ ವಿಚಾರಗಳನ್ನು ಹೊತ್ತು ಬರುತ್ತಿದೆ . ಈ ಭಾಗವೂ ತುಂಬಾ ಚೆನ್ನಾಗಿದೆ .

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: