ಏಳುವ ಕಷ್ಟ

Share Button

Nagesha MN

ಈಗ ಎಷ್ಟೆ ತಡವಾಗಿ ಮಲಗಿದರು ಯಾರೊ ಬಡಿದೆಬ್ಬಿಸಿದಂತೆ ಐದೂವರೆಗೆ ಎಚ್ಚರವಾಗಿಬಿಡುತ್ತದೆ. ಎದ್ದ ಒಂದರ್ಧ ನಿಮಿಷದ ನಂತರ ಅಲಾರಾಂ ಬಡಿದುಕೊಂಡಾಗ, ಅದರ ಅಗತ್ಯವಿತ್ತ ಅನಿಸಿದ್ದು ಎಷ್ಟೊ ಬಾರಿ. ಎದ್ದ ಸ್ವಲ್ಪಹೊತ್ತು ಆಲಸಿಕೆ, ಸೋಮಾರಿತನದ ದೆಸೆಯಿಂದ ಹಾಗೆ ಒರಗಿಕೊಂಡೊ, ಹೊದ್ದುಕೊಂಡೊ ಕಣ್ಮುಚ್ಚಿ ಕೂರುವುದು ಮಾಮೂಲಾದರು ಪ್ರಜ್ಞಾವಸ್ಥೆಯ ಕದ ಹಂತ ಹಂತವಾಗಿ ತಟ್ಟುತ್ತಿದ್ದಂತೆ ಕ್ಷಿಪ್ರಗತಿಯಲ್ಲಿ ಜಾಗೃತಾವಸ್ಥೆಗೆ ಬರುವುದು ನಿತ್ಯದ ಅನುಭವ.

ಆ ವಯಸಿನದೊಂದು ಕಾಲಘಟ್ಟವಿತ್ತು – ಬೆಳಗ್ಗೆ ಏಳುವುದೆ ಜೀವನದ ಅತ್ಯಂತ ಕಠೋರ ಘಳಿಗೆ ಎಂದುಕೊಂಡ ಹೊತ್ತದು. ಏನು ಮಾಡಿದರು ಎಚ್ಚರಾಗುತ್ತಿರಲಿಲ್ಲ; ಸುಖನಿದ್ದೆ ಬಿಟ್ಟೇಳುವ ಮನಸಾಗುತ್ತಿರಲಿಲ್ಲ. ಅಲಾರಾಂಗಳ ಜಾಗಟೆ ತಮಗೆ ಸುಸ್ತಾಗುವ ತನಕ ಬಾರಿಸಿಕೊಂಡು ಸೊರಗಿ ಸುಮ್ಮನಾಗಬೇಕೆ ಹೊರತು, ನಾವು ಮೇಳೇಳುತ್ತಿರಲಿಲ್ಲ. ಬೆಳಗಿನ ಸಿಹಿನಿದ್ದೆ, ಜಂಜಾಟ ಜವಾಬ್ದಾರಿಗಳಿಲ್ಲದ ನಿರುಮ್ಮಳ ಮನಸ್ಥಿತಿ ಎಷ್ಟು ಹೊತ್ತು ಬೇಕಾದರು ಮಲಗಿಸಿಬಿಡುತ್ತಿತ್ತು. ಬೇಗನೆ ಮಲಗಿದ್ದರು ಸಹ ಎಚ್ಚರದ ಹೊತ್ತಲಿ ಕುಣಿದು ಕುಪ್ಪಳಿಸುವ ಬಗೆಗೆ ದಣಿದ ಮೈ ಮನಸು ಅಯಸ್ಕಾಂತದಂತೆ ನಿದ್ದೆಗೊಲಿದು ಮೈಮರೆಯುತ್ತಿತ್ತು.

ಬದುಕಿನ ಗಾಲಿ ಉರುಳಿದಂತೆ ಎಲ್ಲರ ವೈಯಕ್ತಿಕ ಚಿತ್ರಣದ ಪರಿ ಒಂದೆ ರೀತಿ ಇರುವುದಿಲ್ಲ. ಸುಖನಿದ್ರೆಯಿರಲಿ – ಮಲಗಿದರು ನಿದ್ರೆ ಬರದ ಜನರೂ ಇದ್ದ ಹಾಗೆ, ನಿರಾಳವಾಗಿ ಮಲಗಿ ನಿದ್ರಿಸುವವರು ಉಂಟು. ಅವರವರು ಪಡೆದುಕೊಂಡು ಬಂದ ಭಾಗ್ಯದನುಸಾರ ಎನ್ನುವಂತೆ ಸುಖ ನೆಮ್ಮದಿಯ ಬದುಕಿನ ಒಂದು ಸ್ಪಷ್ಟ ಕುರುಹಾಗಿ ನಿದಿರೆ ವಹಿಸುವ ಪಾತ್ರ ಅಪಾರ. ಅದರ ಒಂದು ಆಯಾಮವಾಗಿ – ಜಾತಿ, ಕುಲ, ಮತ, ದೇಶ, ವಿದೇಶಗಳೆಂಬ ಬೇಧವಿಲ್ಲದೆ ಎಲ್ಲರಲ್ಲು ಸರಿ ಸಮಾನವಾಗಿ ವ್ಯಾಪಿಸಿ ಸಮಾಜವಾದಿ ಸಮಾನತೆಯ ಜೀವಂತ ನಿದರ್ಶನವಾದ ನಿದ್ದೆಯಿಂದ, ಏಳಲಾಗದೆ ಹೆಣಗುತ್ತಿದ್ದ ಪರಿ ಈ ಕೆಳಗಿನ ಸಾಲುಗಳಲ್ಲಿದೆ – ಕವನ ರೂಪದಲ್ಲಿ 🙂

lazy to get up

ಎದ್ದಿರೇನು ಐದೂವರೆಗೆ ?
ಎದ್ದೇಳಲೆಬೇಕು ವಿಷಗಳಿಗೆ
ನುಂಗಿಕೊಂಡೆ ಕಹಿ ಗುಳಿಗೆ
ಕಣ್ಣುಜ್ಜುತ ಆಕಳಿಸುತ ಬೆಳಗೆ ||

ಬೇಕಿತ್ತ ನಸುಕಿನ ವ್ಯಾಯಮ
ಆಲಸಿಕೆ ಬದುಕಿಗೆ ಆಯಾಮ
ಎದ್ದರೇನು ಎಚ್ಚರ ಮನಸು
ದೇಹವಪ್ಪಿ ಮಲಗಿತೆ ಕನಸು ||

ಚಟಪಟನೆದ್ದು ಚಲಿಸದೇಕೊ
ಚಡಪಡಿಕೆ ಏನೊ ಮುಲುಕೊ
ಒಂದೇ ಕ್ಷಣದ ನೆಪ ಕುಣಿಕೆ
ಮಲಗಿಸೆ ಬಿಟ್ಟಿತಲ್ಲಾ ಹೊದಿಕೆ ! ||

ಕೊನೆಗೊದ್ದು ಬರುವ ಅವಸರ
ತಡವಾಯಿತೆಲ್ಲಾ ಮುಜುಗರ
ಬುಡಬುಡನೆದ್ದು ಓಡಾಡಿಸುತ್ತ
ಗಡಿಬಿಡಿಯಲೆ ಹೊರಡೆ ಚಿತ್ತ ||

ಬಿದ್ದ ನೀರಿಗೆ ಪೂರ್ಣ ಎಚ್ಚರ
ಪೇಚಾಡಿಕೊಂಡೆ ಯಾಕೀ ತರ ?
ಮರು ಬೆಳಗಿಗಿಂದೆ ಪ್ರತಿಜ್ಞೆ ಸಿದ್ದ
ಮರೆತಂತದನೆ ಹೊದ್ದು ಮಲಗಿದ್ದ ! ||

.

 

 

 – ಮೈ.ನಂ.ನಾಗೇಶ 

 

4 Responses

  1. Sneha Prasanna says:

    🙂 ಚೆನ್ನಾಗಿದೆ ಏಳುವ ಕಷ್ಟ…
    ನಿದ್ದೆಗೆ ಆಯಿತಲ್ಲವೇ ನಷ್ಟ…

    • ಧನ್ಯವಾದಗಳು 🙂
      ಎದ್ದು ಬಿದ್ದು ಏಳೊ ಬಾಳು
      ಬೇಡವೆಂದರು ನಿತ್ಯದ ಗೋಳು
      ನಿದ್ದೆಗೇನೊ ಸರಿ ನಿಜಕೂ ನಷ್ಟ
      ಒಪ್ಪಿಕೊಂಡರೂ ಬಿಡ ಕಾಡುವ ದುಷ್ಟ ||

  2. savithri s bhat says:

    ಕವಿತೆ ಸೂಪರ್

    • ಧನ್ಯವಾದಗಳು ಸಾವಿತ್ರಿಯವರೆ, ಇದನ್ನು ಬರೆಯುವ ಕಷ್ಟ ಬೆಳಿಗ್ಗೆ ಏಳುವಷ್ಟು ಕಷ್ಟದಾಗಿರಲಿಲ್ಲ ಎನ್ನುವುದಂತು ನಿಜ 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: