ಹಲಸಿನ ಹಣ್ಣಿನ ಗುಳಿಯಪ್ಪ… ಸಿಹಿದೋಸೆ..
ಮಳೆಗಾಲ ಶುರುವಾದಾಗ ಹಲಸಿನ ಹಣ್ಣು ನೀರನ್ನು ಹೀರಿ ಸಿಹಿ ಕಡಿಮೆಯಾಗುತ್ತವೆ. ಆಗ ಅದಕ್ಕೆ ಇನ್ನಷ್ಟು ಸಿಹಿ ಸೇರಿಸಿ, ರುಚಿಯಾದ ‘ಗುಳಿಯಪ್ಪ’ ತಯಾರಿಸಬಹುದು. ಈ ಸಿಹಿತಿಂಡಿಗೆ ಸುಟ್ಟವು ಅಥವಾ ಮುಳಕ ಎಂಬ ಹೆಸರುಗಳು ಇವೆ. ಹಲಸಿನ ಹಣ್ಣಿನ ಸುಟ್ಟವು ತಯಾರಿಸುವ ವಿಧಾನ:
- ಒಂದು ಕಪ್ ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
- ಎರಡು ಕಪ್ ನಷ್ಟು ಹಲಸಿನ ಹಣ್ಣನ್ನು ಬಿಡಿಸಿ ಇಟ್ಟುಕೊಳ್ಳಿ.
- ಅರ್ಧ ಕಪ್ ನಷ್ಟು ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಿ.
- ನೀರು ಬಸಿದ ಅಕ್ಕಿಯೊಂದಿಗೆ, ಹಲಸಿನ ಹಣ್ಣು, ಕಾಯಿತುರಿ ಸೇರಿಸಿ ಗಟ್ಟಿಯಾಗಿ ರುಬ್ಬಿ. ಇದು ಇಡ್ಲಿಹಿಟ್ಟಿಂತ ಸ್ವಲ್ಪ ಗಟ್ಟಿಯಾಗಿರಬೇಕು. (ಹಲಸಿನ ಹಣ್ಣಿನಲ್ಲಿರುವ ನೀರೇ ಸಾಕಾಗುತ್ತದೆ. ಹಾಗಾಗಿ ರುಬ್ಬುವಾಗ ನೀರು ಬೇಕಿದ್ದರೆ ಮಾತ್ರ ಹಾಕಿದರೆ ಸಾಕು)
- ಸಿಹಿ ರುಚಿಗೆ ತಕ್ಕಷ್ಟು 5-6 ಚಮಚ ಬೆಲ್ಲದ ಪುಡಿ ಸೇರಿಸಿ. ಒಂದು ಚಿಟಿಕೆ ಉಪ್ಪು ಚೆನ್ನಾಗಿ ಬೆರೆಸಿ.
- ಗುಳಿಯಪ್ಪದ ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ. ಕಾದ ಎಣ್ಣೆಯಲ್ಲಿ, ಎಲ್ಲಾ ಗುಳಿಗಳಲ್ಲಿ ಹಿಡಿಸುವಷ್ಟು ಹಿಟ್ಟನ್ನು ಹಾಕಿ ಕರಿಯಿರಿ. (ಗುಳಿಯಪ್ಪದ ಬಾಣಲಿ ಇಲ್ಲವಾದರೆ, ಮಾಮೂಲಿ ಬಾಣಲಿಯೂ ಆಗುತ್ತದೆ. ಒಂದೊಂದೇ ದೊಡ್ಡ ಚಮಚೆಯಷ್ಟು ಹಿಟ್ಟನ್ನು ಎಣ್ಣೆಗೆ ಹುಯ್ದರಾಯಿತು)
- ಗುಳಿಯಪ್ಪ ಬೆಂದು ಅಂಚು ಹೊಂಬಣ್ಣಕ್ಕೆ ತಿರುಗುವಾಗ, ಒಂದು ಚಾಕುವಿನ/ಕಡ್ಡಿಯ ಸಹಾಯದಿಂದ, ಅದನ್ನು ಮಗುಚಿ ಹಾಕಿ ಇನ್ನೂ ಸ್ವಲ್ಪ ಬೇಯಿಸಿ.
- ಎರಡೂ ಬದಿಯೂ ಬೆಂದು ಹೊಂಬಣ್ಣ ಬಂದಾಗ, ಎಣ್ಣೆಯಿಂದ ತೆಗೆಯಿರಿ.
ರುಚಿಯಾದ, ಸಿಹಿಯಾದ ಸುಟ್ಟವು /ಮುಳಕ/ಗುಳಿಯಪ್ಪ ಸಿದ್ಧ. ಕ್ಯಾಲೊರಿಯ ಭಯ ಇರುವವರು, ಇದೇ ಹಿಟ್ಟನ್ನು, ಕಾವಲಿಯಲ್ಲಿ ಹುಯ್ದು ‘ಹಲಸಿನ ಹಣ್ಣಿನ ಸಿಹಿದೋಸೆ’ ಮಾಡಿ ತಿನ್ನಬಹುದು. ಅದೂ ರುಚಿಯಾಗಿರುತ್ತದೆ.
(ಚಿತ್ರಋಣ : ಅಂತರ್ಜಾಲ)
– ಸುರಗಿ
JACK FRUIT IS MY FAVOURITE
Nice recipe.
Nodidre thinnon anste
ತುಂಬಾ ರುಚಿ