ನಡೆದು ನೋಡಾ ಪಶ್ಚಿಮಘಟ್ಟದ ಕಾಡಾ- ಭಾಗ-1
ಈ ಬಾರಿ ಯೂಥ್ ಹಾಸ್ಟೆಲ್ ಕರ್ನಾಟಕ ಘಟಕ ಆಯೋಜಿಸಿರುವ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಒಂದು – ಎರಡು ದಿನಗಳ ಚಾರಣಕ್ಕೆ ಹೋಗಿ ಗೊತ್ತೇ ಹೊರತು ಐದು ದಿನಗಳ ಈ ಚಾರಣ ನನಗೆ ಹೊಸತು. 3 ತಿಂಗಳ ಮೊದಲೇ ಈ ಚಾರಣ ಕೈಗೊಳ್ಳಬೇಕು ಎಂಬ ಕನಸು ಕಂಡಿದ್ದೆ. ಅದು ನೆರವೇರಿಯೇಬಿಟ್ಟಿತು. ಚಾರಣ ಹವ್ಯಾಸ ಒಮ್ಮೆ ನಮಗೆ ಅಂಟಿಕೊಂಡಿತೆಂದರೆ ಮತ್ತೆ ಎಷ್ಟು ಒದರಿದರೂ ಬಿಡುವ ಪೈಕಿ ಅಲ್ಲ!
ಒಟ್ಟು ಐದು ತಂಡ (ದಶಂಬರ 2014, 7-15) ಒಂದೊಂದು ತಂಡದಲ್ಲಿ 40 ಜನರಿಗೆ ಅವಕಾಶ. ಪ್ರಕೃತಿಯನ್ನು ಅರಿಯುವ, ಮಲೆನಾಡಿನ ಜನಜೀವನ ತಿಳಿಯುವ, ಅರಣ್ಯದ ಸೊಬಗು ಪರಿಚಯಿಸುವ ಕಾರ್ಯಕ್ರಮವೇ ಈ ಪಶ್ಚಿಮಘಟ್ಟದ ಚಾರಣದ ಉದ್ದೇಶ. ನಗರಜೀವನದ ಗಡಿಬಿಡಿ, ಗದ್ದಲದಿಂದ ಒಂದಷ್ಟು ದಿನ ದೂರವಿದ್ದು ಅಪ್ಪಟ ಗ್ರಾಮಜೀವನದ ಅನುಭವ ಸವಿಯುವ ಅಮೂಲ್ಯ ಅವಕಾಶ.
ಶೀಗೇಕೇರಿಯತ್ತ ದೂರದೃಷ್ಟಿ
ದಶಂಬರ 8 ನೇ ತಾರೀಕಿನಂದು ರಾತ್ರೆ 10.30 ಕ್ಕೆ ಮೈಸೂರಿನಿಂದ ಹುಬ್ಬಳ್ಳಿ ಧಾರವಾಡ ರೈಲಿನಲ್ಲಿ ನಾವು ಪ್ರಯಾಣಿಸಿದೆವು. ತಾರೀಕು 9-12-2014 ಬೆಳಗ್ಗೆ 8ಗಂಟೆಗೆ ಹುಬ್ಬಳ್ಳಿಯಲ್ಲಿ ರೈಲಿಳಿದು ಹತ್ತಿರದಲ್ಲೇ ಇದ್ದ ಕಾಮತ್ ಖಾನಾವಳಿಯಲ್ಲಿ ತಿಂಡಿ ತಿಂದು ಒಂದು ಕಿಮೀ ದೂರ ನಡೆದು ಬಸ್ ನಿಲ್ದಾಣ ತಲಪಿದೆವು. 9.15 ಕ್ಕೆ ಯಲ್ಲಾಪುರಕ್ಕೆ ಹೋಗುವ ಬಸ್ ಹತ್ತಿದೆವು. 10.45 ಕ್ಕೆ ಯಲ್ಲಾಪುರದಲ್ಲಿಳಿದೆವು. ಅಲ್ಲಿಂದ ಬಾರೆ, ಶೀಗೇಕೇರಿಗೆ ಹೋಗುವ ಬಸ್ಸಿಗೆ ಹತ್ತಿದೆವು. 11.15 ಕ್ಕೆ ಹೊರಟು ಬಾರೆ ತಿರುವಿನಲ್ಲಿಳಿದೆವು. ಬಸ್ ಬಾರೆ ಊರಿಗೆ ಹೋಗಿ ತಿರುಗಿ ಬಂತು. ಮತ್ತೆ ಅದೇ ಬಸ್ ಹತ್ತಿ 12.45 ಕ್ಕೆ ಶೀಗೇಕೇರಿ ಊರು ತಲಪಿದೆವು.
ಅಲ್ಲಿ ನಾರಾಯಣ ಭಟ್ಟರು ನಮ್ಮನ್ನು ಸ್ವಾಗತಿಸಿ, ತಂಪು ಕಷಾಯ- ತಂಬ್ಳಿ ಕೊಟ್ಟರು. ಅಲ್ಲಿಂದ ಸುಮಾರು 3 ಕಿಮೀ ನಡೆದು ಶೀಗೇಕೇರಿ ಶಾಲೆ ತಲಪಿದೆವು. ದಶಂಬರ 9 ರಿಂದ 13 ರ ತನಕ ಒಟ್ಟು ಐದು ದಿನಗಳ ಚಾರಣದಲ್ಲಿ ನಾವು ಮೊದಲು ಉತ್ತರಕನ್ನಡದ ಯಲ್ಲಾಪುರ ಜಿಲ್ಲೆಯ ಶೀಗೇಕೇರಿ ಕ್ಯಾಂಪಿಗೆ ಮಧ್ಯಾಹ್ನ ತಲಪಿಕೊಂಡೆವು. ಮೈಸೂರು, ಬೆಂಗಳೂರು, ಮಹಾರಾಷ್ಟ್ರ, ಕೇರಳ, ಸಾಗರ ಇತ್ಯಾದಿ ಊರುಗಳಿಂದ ಬಂದು ಸೇರಿದ ನಾವು ಒಟ್ಟು 37 ಮಂದಿ ಇದ್ದೆವು. ಅಲ್ಲಿ ಅನ್ನ, ಸಾರು, ಸಾಂಬಾರು, ಪಲ್ಯ, ಹಪ್ಪಳ, ಕೇಸರಿಭಾತ್ ಭರ್ಜರಿ ಊಟ ಮಾಡಿ ವಿಶ್ರಾಂತಿ.
ನಮಗೆ ಹೊಸದಾಗಿ ಕಟ್ಟಿದ ಮನೆಯೊಂದರಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಿದ್ದರು. ಯಾರಾದರೂ ಅಧ್ಯಾಪಕರು ಶಾಲೆಗೆ ನೇಮನಗೊಂಡರೆ ಎಂದು ಕಟ್ಟಿಸಿದ್ದಂತೆ. ಅಲ್ಲಿ ನಮಗೆಲ್ಲ ಟೊಪ್ಪಿ, ಟಿಶರ್ಟ್ ಕೊಟ್ಟು ನಮ್ಮ ಹೆಸರು ಭಾವಚಿತ್ರವಿರುವ ಗುರುತಿನ ಚೀಟಿ ಕೊಟ್ಟರು.
ಸೂರ್ಯಕಲ್ಯಾಣಿ ಗುಡ್ಡದತ್ತ ದೌಡು!
ಸಂಜೆ 3 ಕಿಮೀ ದೂರದ ಸೂರ್ಯಕಾಂತಿಗುಡ್ಡಕ್ಕೆ ಹೋಗುವ ಮೂಲಕ ಚಾರಣಕ್ಕೆ ಮುನ್ನುಡಿ ಬರೆದೆವು. ಶೋಲಾ ಕಾಡು. ಗಿಡಮರಗಳು ಎತ್ತರವಿಲ್ಲ. ಕುರುಚಲು ಗಿಡ, ಹುಲ್ಲುಗಳು. ಬೆಟ್ಟದಲ್ಲಿ ಹುಲ್ಲು ಚೆನ್ನಾಗಿ ಬೆಳೆದಿತ್ತು. ಮೊದಲ ಎರಡು ಗುಂಪು ಈ ಮೊದಲೇ ಅಲ್ಲಿ ನಡೆದ ಕಾರಣ ದಾರಿ ನಮಗೆ ಸುಗಮವಾಗಿತ್ತು! ಆರ್ಕಿಡ್ ಸಸ್ಯಗಳನ್ನು ಕಂಡೆವು. ಆ ಸಂಜೆ ಹುಲ್ಲಿನ ಮೇಲೆ ಸೂರ್ಯನ ಬೆಳಕು ಹರಡಿ ಹುಲ್ಲು ಸುವರ್ಣವರ್ಣದಲ್ಲಿ ಕಾಂತಿ ಬೀರುವುದನ್ನು ನೋಡಿ ತಣಿದೆವು.
ಗುಡ್ಡದ ಮೇಲಿಂದ ಸೂರ್ಯ ಅಸ್ತಂಗತನಾಗುವುದನ್ನು ಕಣ್ಣುತುಂಬಿಸಿಕೊಂಡೆವು. ಜೋಳದ ಕುರುಕಲು, ಚಹಾ ಸೇವನೆಯಾಗಿ ಕೆಳಗೆ ಇಳಿದೆವು.
ಶೀಗೇಕೇರಿ ಶಾಲೆಯ ಏಕೋಪಾಧ್ಯಾಯರು ನಾರಾಯಣ ಭಟ್. ಐದನೇ ತರಗತಿ ವರೆಗೆ ಇದೆ. ಉಪಾಧ್ಯಾಯರು ಬರುವುದೇ ಇಲ್ಲವಂತೆ ಅಲ್ಲಿಗೆ. ಅವರೊಬ್ಬರೇ ಮಕ್ಕಳನ್ನು ಸುಧಾರಿಸಿ ಪಾಟ ಮಾಡಬೇಕು. ಅವರ ಮನೆ ಶಾಲೆ ಸಮೀಪದಲ್ಲಿಯೇ ಇದೆ. ಆ ಊರು ತಲಪಬೇಕಾದರೆ ಬಸ್ಸಿಳಿದು 3 ಕಿಮೀ ನಡೆದೇ ಹೋಗಬೇಕು. ಬೇರೆ ಸಾರಿಗೆ ವ್ಯವಸ್ಥೆ ಇಲ್ಲ. ಹೆಚ್ಚಿನ ಮನೆಯವರು ಬೈಕ್ ಇಟ್ಟುಕೊಂಡಿದ್ದಾರೆ. ಊರವರು ಮನೆಗೆ ವಿದ್ಯುತ್ ಸಮಸ್ಯೆಗೆ ಸೋಲಾರ್ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ.
ನಾರಾಯಣ ಭಟ್ ದಂಪತಿಗಳು, ಅವರ ಮಗಳು ಸ್ಮಿತಾ, ಅವರ ನೆಂಟರಿಷ್ಟರು ಸೇರಿ ರಾತ್ರೆಗೆ ಅಡುಗೆ ತಯಾರಿಯಲ್ಲಿದ್ದರು. ಒಂದಿಬ್ಬರು ಚಪಾತಿ ಲಟ್ಟಿಸುತ್ತಿದ್ದರು. ಸೌದೆ ಹಾಕಿ ದೊಡ್ಡ ಹಂಚಿನಲ್ಲಿ ಇಬ್ಬರು ಚಪಾತಿ ಬೇಯಿಸುತ್ತಿದ್ದರು. ಒಲೆಯಲ್ಲಿ ಅನ್ನ ಬೇಯುತ್ತಿತ್ತು. ಇನ್ನೊಂದೆಡೆ ರುಬ್ಬುವ ಯಂತ್ರದಲ್ಲಿ ಬೆಳಗಿನ ತಿಂಡಿ ದೋಸೆಗೆ ಹಿಟ್ಟು ತಯಾರಾಗುತ್ತಿತ್ತು. ನಾವು 37 ಮಂದಿ, ಮೈಸೂರಿನ ಗಂಗೋತ್ರಿ ಘಟಕದ ಸೇವಾ ಕಾರ್ಯಕರ್ತರು, ಊರವರು ಎಲ್ಲ ಸೇರಿ ಸುಮಾರು 50 ಕ್ಕೂ ಹೆಚ್ಚು ಜನರಿದ್ದರು.
ಸ್ಥಳೀಯ ಮಕ್ಕಳ ಪ್ರತಿಭಾವರಣ
ಸ್ನಾನ ಮಾಡಿ ಶುಚಿಯಾಗಿ ಕೂತೆವು. ಸ್ನಾನಕ್ಕೆ ಹಂಡೆಯಲ್ಲಿ ಬಿಸಿನೀರು ಕಾಯಿಸಿದ್ದರು. ಸಂಜೆ 7 ಗಂಟೆಗೆ ಬಿಸಿ ಬಿಸಿ ಸೂಪು. 6.30 ಕ್ಕೆ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ದೊಡ್ಡ ಹಾಲಿನಲ್ಲಿ ನಡೆದುವು. ಹಾಡು, ನೃತ್ಯ, ಇತ್ಯಾದಿ. ಮಕ್ಕಳ ಉತ್ಸಾಹ, ಅವರ ಪ್ರತಿಭೆ ನೋಡಿ ನಾವೆಲ್ಲ ಹರುಷಗೊಂಡೆವು. ಗಾಂಧೀ ವೇಷಧಾರಿ ಘನಗಂಭೀರದಿಂದ ಚರಕದೆದುರು ಕೂತು ನೂತದ್ದು, ಬಬ್ರುವಾಹನ- ಅರ್ಜುನ ಮಾತುಕತೆಯ ಸ್ಮಿತಾಳ ಏಕಪಾತ್ರಾಭಿನಯ, ಇತ್ಯಾದಿ ಎಲ್ಲರ ಮೆಚ್ಚುಗೆ ಗಳಿಸಿತು. ಅವಳು ಸಂಕಷ್ಟಿ ವ್ರತದಲ್ಲಿದ್ದಳಂತೆ. ಊಟ ಮಾಡದೆಯೆ ಕಂಚಿನಕಂಠ, ಇನ್ನು ಊಟ ಮಾಡಿ ಮಾತಾಡಿರುತ್ತಿದ್ದರೆ! ನಮ್ಮ ತಂಡದ ಮಾನ ಕಾಪಾಡಿದವಳು ಅಪೂರ್ವ. ಸುಶ್ರಾವ್ಯವಾಗಿ ಎರಡು ಹಾಡು ಹಾಡಿದಳು.
ರಾತ್ರೆ 9 ಗಂಟೆಗೆ ಭರ್ಜರಿ ಊಟ. ಚಪಾತಿ, ಪಲ್ಯ, ಅನ್ನ ಸಾಂಬಾರು, ಒತ್ತುಶ್ಯಾವಿಗೆ ರಸಾಯನ, ತಂಬ್ಳಿ, ಮಜ್ಜಿಗೆಹುಲ್ಲು ಸಾರು. ಅಬ್ಬ ಹೊಟ್ಟೆಬಿರಿಯ ಊಟ. ಕ್ಯಾಂಪ್ ಫಯರ್ ಎಂದು ಹತ್ತು ಗಂಟೆಗೆ ಸೌದೆ ಉರಿ ಹಾಕಿದರು. ಕೆಲವರು ಮನಸ್ಸಿಲ್ಲದ ಮನಸ್ಸಿನಲ್ಲಿ ಅಲ್ಲಿ ಸುತ್ತ ಸೇರಿದರು. ಅರ್ಧ ಜನ ಬರಲೇ ಇಲ್ಲ. ಸೌದೆ ಉರಿಯುವ ಮೊದಲೇ ಸಭೆ ಬರಖಾಸ್ತು! ದೂರದಿಂದ ಪ್ರಯಾಣ ಮಾಡಿ ಬಂದ ಆಯಾಸದಿಂದಲೋ ಯಾರೂ ಉತ್ಸಾಹಿಗಳಾಗಿರಲಿಲ್ಲ. ತುಪ್ಪ ಬೆರೆಸಿದ ಖರ್ಜೂರ, ಬೀಡ, ಕಷಾಯ ಸರಬರಾಜಾಯಿತು. ನಿದ್ದೆ.
ಬೆಳಗಾಗೆದ್ದು ಪಕ್ಷಿವೀಕ್ಷಣೆ
10.12.2014. ಬೆಳಗ್ಗೆ ಆರು ಗಂಟೆಗೆ ಚಹಾ. 6.30 ಗಂಟೆಗೆ ಪಕ್ಷಿ ವೀಕ್ಷಣೆಗೆ ಆಸಕ್ತಿ ಇರುವವರು ಒಂದಷ್ಟು ಮಂದಿ ಶಿವಪ್ರಕಾಶ್ ನೇತೃತ್ವದಲ್ಲಿ ಹೊರಟೆವು. ಸುಮಾರು ಪಕ್ಷಿಗಳ ಕೂಗು ಮಾತ್ರ ಕೇಳಿಸಿತು. ಲೋರಿಕೇಟ್, ಪಾಂಡ್ ಹೆರಾನ್, ಗದ್ದೆಗುಮ್ಮ ಇತ್ಯಾದಿ ಒಂದೆರಡು ಮಾತ್ರ ಕಣ್ಣಿಗೆ ಗೋಚರಿಸಿದುವು. ಬೆಳಕು ಅಷ್ಟಾಗಿ ಇರಲಿಲ್ಲ. ಛಾಯಾಚಿತ್ರಕ್ಕೆ ಸಿಗಲಿಲ್ಲ. ಕೆಲವು ಅಸ್ಪಷ್ಟವಾಗಿ ಸಿಕ್ಕವು. ಸೂರ್ಯೋದಯವಾಗುವುದನ್ನು ನೋಡಿದೆವು! 7.30 ಗೆ ವಾಪಾಸಾದೆವು. ಅರ್ಧ ಕಿಮೀ ದೂರವೂ ಹೋಗಿರಲಿಲ್ಲ.
ಬರೋಬ್ಬರಿ ತಿಂಡಿ ಉದ್ದಿನ ದೋಸೆ, ಕುಂಬಳಕಾಯಿ ದೋಸೆಯನ್ನು ಹಂಚಿನಲ್ಲಿ ಬೇಯಿಸುತ್ತಿದ್ದರು. ನಾವು ತಿಂದೆವು. ಡಬ್ಬಕ್ಕೆ ಚಪಾತಿ, ಗಸಿ, ಚಿತ್ರಾನ್ನ ಹಾಕಿಸಿಕೊಂಡೆವು.
ಬೀಳ್ಕೊಡುಗೆ
ತಂಡದ ಛಾಯಾಚಿತ್ರ ತೆಗೆಸಿಕೊಂಡು, ನಮಗೆ ಆದರೋಪಚಾರ ನೀಡಿದ ನಾರಾಯಣ ಭಟ್ ಬಳಗದವರೊಡನೆಯೂ ಚಿತ್ರ ತೆಗೆಸಿಕೊಂಡು ತಿಂಡಿ ತಿಂದಾಗಿ ಹೊಟ್ಟೆ ಭಾರದೊಂದಿಗೆ ಬೆನ್ನ ಚೀಲದ ಭಾರವನ್ನೂ ಹೊತ್ತು ಸಜ್ಜಾದೆವು. ಹಸಿರು ಬಾವುಟ ತೋರಿಸಿ ನಮ್ಮನ್ನು ಬೀಳ್ಕೊಟ್ಟರು.
……….ಮುಂದಿನ ಭಾಗದಲ್ಲಿ ‘ಕರಿಕಲ್ಲಿನತ್ತ ಲಕ್ಷ್ಯ’……….
– ರುಕ್ಮಿಣಿಮಾಲಾ, ಮೈಸೂರು
ಸೂಪರ್ ಆಗಿದೆ ನಿಮ್ಮ ಚಾರಣದ ಅನುಭವ ಮತ್ತು ಬರಹ. ಮುಂದಿನ ಭಾಗವನ್ನು ಓದಲು ಕಾಯುತ್ತಿದ್ದೇನೆ.