ಸುರಹೊನ್ನೆಯ ಪಯಣದ ಸಾಕ್ಷಿಗಳು
ನಮ್ಮ ಅಕ್ಕ ಹೇಮಮಾಲಾ ‘ಸುರಹೊನ್ನೆ ‘ ಎಂಬ ಬ್ಲಾಗನ್ನು ಪ್ರಾರಂಭಿಸುತ್ತೇನೆ ಎಂದಾಗ ನಾನು ಮತ್ತು ತಮ್ಮ ಕೇಶವ ಪ್ರಸಾದ ಬಿ ಕಿದೂರು ಖುಶಿ ಪಟ್ಟೆವು. ಯಾಕೆಂದರೆ ಅಕ್ಕನಿಗೆ ಸೈನ್ಸ್ ವಿದ್ಯಾರ್ಥಿನಿಯಾಗಿದ್ದರೂ ಕನ್ನಡ ಪ್ರಬಂಧ, ಕವಿತೆಗಳಲ್ಲಿ ಬಹುಮಾನಗಳು ಬರುತ್ತಿದ್ದವು. ಹಾಗೆ ನೋಡಿದರೆ ನಾನು ಮತ್ತು ತಮ್ಮ ಅನುಕ್ರಮವಾಗಿ ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು. ನಾನು ಇಂಗ್ಲಿಷ್ ಪಾಠ ಹೇಳುವ ಉಪನ್ಯಾಸಕಿ ಆದರೆ ತಮ್ಮ ಪತ್ರಕರ್ತ. ತನ್ನ ಬಿಡುವಿಲ್ಲದ ಕೆಲಸದ ನಡುವೆಯೂ ಆಕೆ ಸಾಹಿತ್ಯದ ಆಸಕ್ತಿಯನ್ನು ಉಳಿಸಿಕೊಂಡಿದ್ದಾಳೆ ಎನ್ನುವುದೇ ಸಂತಸದ ವಿಷಯ.(ಆಕೆ ಮಲ್ಟಿ ನ್ಯಾಶನಲ್ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾಳೆ ). ಅದೂ ಅಲ್ಲದೆ ಅಕಡೆಮಿಕ್ ಸಾಹಿತ್ಯದಿಂದ(ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ನನ್ನಂತಹ ಮೇಷ್ತ್ರುಗಳು ವಿದ್ಯಾರ್ಥಿಗಳಿಗೆ ಬೋಧಿಸಿ, ಅದನ್ನೇ ಬರೆಯು ‘ಇಸಮ್’ ಗಳಿಗಿಂತ ಹೊರತಾಗಿರುವ ), ಬೇರೆ ಬೇರೆ ಕ್ಶೇತ್ರಗಳಿಂದ ಬರಹಗಳು ಬಂದರೆ ಸಾಹಿತ್ಯ ಕ್ಶೇತ್ರ ಶ್ರೀಮಂತವಾಗುತ್ತದೆ.
ಹಾಗೆಂದು ಅಕಡೆಮಿಕ್ ಶಿಸ್ತು ಬೇಡವೆಂದು ಇಲ್ಲಿ ಹೇಳುತ್ತಿಲ್ಲ. ಸಾಹಿತ್ಯದ ಆಳವಾದ ಆಸ್ವಾದನೆ, ವಿಮರ್ಶನ ಪ್ರಜ್ಞೆ, ಚಿಂತನೆ, ಬಿಗುವಿನಿಂದ ಕೂಡಿದ ಶೈಲಿ ಅಪಾರವಾದ ಓದಿನಿಂದಲೂ ಸಂಯಮದ ಅವಲೋಕನದಿಂದಲೂ , ಜೀವನಪ್ರೀತಿಯಿಂದಲೂ ಸಾಧಿತವಾಗುತ್ತದೆ. ಅದೇ ಸಂದರ್ಭದಲ್ಲಿ ಅಕಡೆಮಿಕ್ ವಲಯದಲ್ಲಿರುವ ನನ್ನಂತವರಿಗೊಂದು ಮಿತಿಯಿದೆ. ನಮ್ಮ ಚಿಂತನೆಗಳೇನಿದ್ದರೂ ಓದು, ಬರಹ, ವಿದ್ಯಾರ್ಥಿಗಳ ಒಡನಾಟ, ಹೆಚ್ಚೆಂದರೆ ಒಂದಿಷ್ಟು ಸಾಹಿತ್ಯ ಸಮ್ಮೇಳನಗಳಿಂದ , ಕಮ್ಮಟಗಳಿಂದ ರೂಪುಗೊಂಡಿರುವಂತದ್ದು.
ಸುರಹೊನ್ನೆಯಲ್ಲಿ ಗೃಹಿಣಿಯರು, ವಿದ್ಯಾರ್ಥಿಗಳು, ಚಾರಣಿಗರು, ಸಂಗೀತ, ಸಾಹಿತ್ಯಾಸಕ್ತರು ಹೀಗೆ ಎಲ್ಲ ವರ್ಗದ ಜನರೂ, ಹವ್ಯಾಸಿ ನೆಲೆಯಲ್ಲಿರುವವರೂ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಸುರಹೊನ್ನೆಯ ತಾಂತ್ರಿಕ ವಿಷಯಗಳಲ್ಲಿ ನಮ್ಮ ಪ್ರೀತಿಯ ಕಸಿನ್ ಶ್ರುತಿಯ ಪಾತ್ರ ದೊಡ್ಡದು. ಆಕೆ ಸದಭಿರುಚಿಯ ಬರಹಗಾರ್ತಿಯೂ ಹೌದು. ಈಗ ಅಂಬೆಗಾಲಿಕ್ಕುತ್ತಿರುವ ಸುರಹೊನ್ನೆ ಬರಹದ ಆಳ, ಅಗಲ, ವಿಸ್ತಾರಗಳನ್ನು ಇನ್ನೂ ಹಲವು ಮಜಲುಗಳಿಗೆ ಕೊಂಡೊಯ್ಯಲಿ, ನಿತ್ಯವಿನೂತನವಾಗಲಿ ಎಂದು ಹಾರೈಕೆ .
– ಜಯಶ್ರೀ ಬಿ ಕದ್ರಿ, ಉಪನ್ಯಾಸಕಿ, ಆಳ್ವಾಸ್ ಕಾಲೇಜು