‘ಅಣ್ಣನ ನೆನಪುಗಳು’-ಪೂರ್ಣಚಂದ್ರ ತೇಜಸ್ವಿ
ಬಹಳಷ್ಟು ದಿನಗಳ ನಂತರ, ನಿನ್ನೆ ಓದಲೆಂದು ಒಂದು ಪುಸ್ತಕವನ್ನು ಕೈಗೆತ್ತಿಕೊಂಡಿದ್ದೆ. ಪೂರ್ಣಚಂದ್ರ ತೇಜಸ್ವಿಯವರು, ತಮ್ಮ ತಂದೆಯವರಾದ ರಾಷ್ಟ್ರಕವಿ ಕುವೆಂಪುರವರ ಬಗ್ಗೆ ಬರೆದ ‘ಅಣ್ಣನ ನೆನಪುಗಳು’ ಎಂಬ ಕೃತಿ ಅದು. ಇದಕ್ಕೆ ಕಾರಣವೂ ಇತ್ತು. ನವೆಂಬರ್ 9, 2014 ರಂದು ಕುಪ್ಪಳಿಯಲ್ಲಿರುವ ‘ಕವಿಮನೆ’ಗೆ ಹೋಗಿದ್ದಾಗ ಅಲ್ಲಿನ ಪುಸ್ತಕ ಮಳಿಗೆಯಿಂದ ಸ್ಮರಣಿಕೆಯಾಗಿ ಇರಲಿ ಎಂದು ಈ ಪುಸ್ತಕವನ್ನು ಖರೀದಿಸಿದ್ದೆ.
ಅಲ್ಲಿ ಪುಸ್ತಕವನ್ನು ಖರೀದಿಸಿದರೆ, ಪುಸ್ತಕದಲ್ಲಿ ‘ಕವಿ ಮನೆ ಕುಪ್ಪಳಿ ‘ ಎಂಬ ಮುದ್ರೆಯೊತ್ತಿ ಕೊಡುತ್ತಾರೆ.
ಒಬ್ಬ ಮಹಾನ್ ಕವಿ-ಸಾಹಿತಿಯ ಬಗ್ಗೆ ಇನ್ನೊಬ್ಬ ಮೇರು ಪ್ರತಿಭೆಯ ಸಾಹಿತಿ ಬರೆಯುವುದು ಹೇಗಿರಬಹುದು? ಬಹಳ ಸಾಹಿತ್ಯಪೂರ್ಣವಾಗಿ, ಕ್ಲಿಷ್ಟಕರವಾದ ಪದಗಳನ್ನು ಹೊಂದಿದ್ದು, ಸಾಹಿತ್ಯದ ಗಂಧವೇ ಇಲ್ಲದ ನನಗೆ ‘ಬೋರ್’ ಹೊಡೆಸಿ, ನಾಲ್ಕು ಪುಟ ಓದುವಷ್ಟರಲ್ಲಿ ನಿದ್ದೆಗೆ ಜಾರಬಹುದು ಅಂದುಕೊಂಡಿದ್ದೆ. ಆದರೆ ತೇಜಸ್ವಿಯವರ ನಿರೂಪಣೆ ಎಷ್ಟು ಸೊಗಸಾಗಿ ಇತ್ತೆಂದರೆ, ಸುಮಾರು 250 ಪುಟಗಳ ಪುಸ್ತಕವನ್ನು ಈಗಲೇ ಓದಿಯೇ ತೀರಬೇಕಂಬ ಹಠ ಹುಟ್ಟಿಸಿತು. ಸರಳ ಹಾಸ್ಯಭರಿತ ಶೈಲಿಯಲ್ಲಿ, ತಮ್ಮ ಬಾಲ್ಯದ ತುಂಟಾಟ, ಚಿತಾವಣೆಗಳು, ಪೀಕಲಾಟಗಳ ನಡುವೆ ಅಲ್ಲಲ್ಲಿ ಕುವೆಂಪುರವರ ವ್ಯಕ್ತ-ಅವ್ಯಕ್ತ ಸಾನ್ನಿಧ್ಯವನ್ನು ಚಿತ್ರಿಸಿದ ಕೃತಿಯಿದು.
ತೇಜಸ್ವಿಯವರೇ ಬರೆದುಕೊಂಡಂತೆ, ” ನಾನು ಬರೆಯುತ್ತಿರುವುದೇನು ? ನನ್ನ ಆತ್ಮ ಕಥೆಯೇ? ನಮ್ಮ ಅಣ್ಣನ ನೆನಪೋ ? ಕನ್ನಡ ಸಂಸ್ಕೃತಿ ಇತಿಹಾಸದ ಅವಲೋಕನವೋ ? ಈ ಗೊಂದಲಗಳನ್ನು ಸ್ಪಷ್ಟಗೊಳಿಸಿಕೊಳ್ಳುವುದೇ ಕಷ್ಟ!” (ಪುಟ 64). ಸಾಮಾನ್ಯ ಓದುಗಳಾದ ನನಗೆ ಅನಿಸಿದ್ದು, ಇವರು ನಮಗೆ ತೀರಾ ಪರಿಚಿತರೇನೋ ಎಂಬ ಆಪ್ತ ಭಾವನೆ ಮೂಡಿಸುವ ‘ಅಪ್ಪ-ಮಗ’ ಜೋಡಿ.
ನವೆಂಬರ್ ತಿಂಗಳಿನಲ್ಲಿ ಈ ‘ಸರಸ್ವತಿ ಪುತ್ರ’ರ ನೆನಪಿನ ಪುಸ್ತಕವನ್ನು ಓದಿ ನಾನು ಪುಲಕಿತಳಾದೆ.
– ಹೇಮಮಾಲಾ.ಬಿ. ಮೈಸೂರು
ಈ ಹೊತ್ತಿಗೆಗೆ ಇನ್ನೂ ಒಂದು ಆಯಾಮವಿದೆ ನಾವು ಕಂಡ ಕುವೆಂಪುಗಿಂತ ಒಬ್ಬ ತಂದೆಯಾಗಿ ಮಕ್ಕಳ (ತೇಜಸ್ವಿ) ಭವಿಷ್ಯದ ದರ್ಶನಕ್ಕೆ ನೀಡಿದ ಕಾಣ್ಕೆ ಎಲ್ಲರಿಗೂ ಮಾದರಿಯಾಗಿ ನಿಲ್ಲುವಂತಹದ್ದು.
ನಿಜಕ್ಕೂ ತುಂಬ ಚೆನ್ನಾಗಿದೆ ಪುಸ್ತಕ
ತೇಜಸ್ವಿಯವರ ಈ. ಕೃತಿ ನಿಜಕ್ಕೂ ಮಹತ್ವಪೂರ್ಣ ವಾಗಿದೆ. ನಮ್ಮೆಲ್ಲರನ್ನುಬಾಲ್ಯದ ತುಂಟಾಟಗಳನ್ನು ನೆನಪಿಗೆ ತರುತ್ತದೆ. ಬೀದಿನಾಯಿಯನ್ನು ಬಾಲ ಕತ್ತರಿಸಿ ಜಾತಿ ನಾಯಿ ಮಾಡುವುದು,,,ಯಾರದೋ ಮೇಕೆಗೆ ನಾಯಿ ಛೂ ಬಿಟ್ಟು ಕಚ್ಚಿಸಿ ಬೈಸಿಕೊಳ್ಳುವುದು,,,ಕುವೆಂಪು ರವರು ಸಾಮಾನ್ಯ ರಂತೆ ಗಾಣಕ್ಕೆ ಹಿಂಡಿತರಲು ಹೋಗುವುದು, ,,,ಎಲ್ಲಾ ಘಟನೆ ಗಳು ನಮ್ಮ. ತಂದೆಯ. ಕೈ ಹಿಡಿದುಕೊಂಡು ಓಡಾಡುತ್ತ. ಕಥೆ ಕೇಳಿದ್ದು ನೆನಪಿಗೆ ಬರುತ್ತದೆ.ಇನ್ನೊಮ್ಮೆ ಓದಲು ಹೇಮಲತಾ ನೆನಪಿಗೆ ತಂದಿದ್ದೀರಿ ಥ್ಯಾಂಕ್ಸ್. .
ಧನ್ಯವಾದಗಳು.
ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆಗೆ ಈ ಸಾಹಿತ್ಯ ಸಂಭಂದ ಲೇಖನಕ್ಕಿಂತ ಬೇರೊಂದು ನಿದರ್ಶನದ ಅವಶ್ಯಕತೆ ಇದಿಯೇ ?
ಧನ್ಯವಾದಗಳು.
ಓದು ಕುಂಠಿತವಾಗುತ್ತಿರುವ ಹಾಗೂ ಒಳ್ಳೆಯ ಓದು ವಿರಳವಾಗುತ್ತಿರುವ ಸಂದರ್ಭದಲ್ಲಿ ನಿಮ್ಮ ಪುಸ್ತಕಪ್ರೀತಿ, ಅಭಿರುಚಿ ಅನಿಸಿಕೆ ಹಂಚಿಕೊಳ್ಳುತ್ತಿರುವ ಬಗೆ ಅನನ್ಯ.