ಎಲ್ಲರಂಥವರಲ್ಲ ಇವರು

Share Button
Krishnaveni K

ಕೃಷ್ಣವೇಣಿ ಕಿದೂರು.

ಎಂಭತ್ತರ ವಯಸ್ಸಿನ ನನ್ನ ಮಾವನವರಿಗೆ ಮಕ್ಕಳೆಂದರೆ ಅತೀವ ಕಾಳಜಿ. ಹೊರಗಿನ ಹಾಲ್ ನಲ್ಲಿ ಟೆಲಿವಿಷನ್ ನ ಪಕ್ಕದಲ್ಲಿ ಅವರ ಕುರ್ಚಿ,ಮೇಜು.ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರದಲ್ಲಿ ಪರಿಣಿತರು.ಹಾಗಾಗಿ ಅವರನ್ನು ಕಾಣಲು ಬರುವವರೂ ಜಾಸ್ತಿ. ಆಗಿನ್ನೂ ಮಗ ಶಾಲೆಗೆ ಸೇರಿರಲಿಲ್ಲ.ಸಣ್ಣವ. ಮಗಳು ದೊಡ್ಡವಳು. ಟಿ.ವಿ. ಚಾಲೂ ಮಾಡಿ ಇಬ್ಬರೂ ಅದರ ಎದುರು ಕೂತ ತಕ್ಷಣ ಮಾವನವರು ಎಲ್ಲಿದ್ದರೂ ತಮ್ಮ ಕುರ್ಚಿಯಲ್ಲಿ ಕೂರುತ್ತಿದ್ದರು. ಅವರ ಮೇಜಿನ ಮೇಲೆ ಸದಾ ಕನ್ನಡಿ. ಬಲಗಡೆ ಟಿ.ವಿ.ಎದುರು ಕೂತವರಿಗೆ ಅವರೇನು ಮಾಡುತ್ತಾರೆ ಎಂದು ತಿಳಿಯದು.ತಪ್ಪಿಯೂ ಟಿ.ವಿ.ಕಡೆ ನೋಡರು. ಆದರೆ ಆ ಕನ್ನಡಿ ಟೆಲಿವಿಜನ್ ನಲ್ಲಿ ನಡೆವ ಕಾರ್ಯ ಕ್ರಮಗಳನ್ನು ಯಥಾವತ್ತು ಅವರಿಗೆ ತೋರಿಸುತ್ತಿತ್ತು. ನನಗೂ ಗೊತ್ತಿಲ್ಲ.
ನೋಡುತ್ತಿರುವ ಕಾರ್ಯಕ್ರಮದಲ್ಲಿ ಹೊಡೆದಾಟ,ಹಿಂಸೆ,ಕೊಲೆ,ರಕ್ತ ಸುರಿವ ದೃಶ್ಯ,ಪ್ರಣಯ,ಪ್ರೇಮ,ಇವೇ ಮೊದಲಾದ ದೃಶ್ಯಗಳು ಮೂಡಿಬಂದಾಗ ಕನ್ನಡಿಯಲ್ಲಿ ತದೇಕಚಿತ್ತದಿಂದ ನೋಡುತ್ತಿರುವ ಮಾವನವರು ಕನ್ನಡಿ ಬಿಟ್ಟು ಎದ್ದು ನಿಲ್ಲುತ್ತಿದ್ದರು .

Children tvಹೇಗೆಂದರೆ ಮಕ್ಕಳಿಗೆ ಬೆನ್ನು ಹಾಕಿ,ಟಿ.ವಿ.ಗೆ ಮುಖ  ಮಾಡಿ.ತೀರಾ ಹತ್ತಿರದಲ್ಲಿ ನಿಲ್ಲುವ ಕಾರಣ ಸ್ಕ್ರೀನ್ ಏನೇನೂ ಕಾಣದು.”ಯಾಕೋ ಪಂಚೆ ಸಡಿಲಾಗ್ತಿದೆ.ಗಟ್ಟಿ ಮಾಡ್ತೇನೆ”ಎನ್ನುತ್ತಾ ಎಷ್ಟಾಗುತ್ತದೋ ಅಷ್ಟು ನಿಧಾನವಾಗಿ ಗಟ್ಟಿಯಾಗೇ ಇದ್ದ ಪಂಚೆ ಬಿಚ್ಚಿ ಪುನಾ ಕಟ್ಟಲಾರಂಭಿಸುತ್ತಿದ್ದರು. ಆ ದೃಶ್ಯ ಮರೆಯಾಗದೆ ಪಂಚೆ ಉಟ್ಟು ಆಗುತ್ತಿರಲಿಲ್ಲ. ಪಂಚೆ ಬಿಚ್ಚಿದಾಗ ಪರದೆಯ ಹಾಗೆ ಅಗಲವಾಗಿ ಅಡ್ಡವಾಗಿ ನಿಲ್ಲುತ್ತಿತ್ತು. ಮುಗಿಯಿತು ಎಂದು ಕಂಡಾಗ ಪುನ ಕುರ್ಚಿಯಲ್ಲಿ ಆಸೀನತೆ. ಪದೇ ಪದೇ ಇದೇ ಕೆಲಸದ ಪುನರಾವರ್ತನೆ ಆಗುತ್ತಿತ್ತು.ಅಶ್ಲೀಲತೆ,ಕೊಲೆ,ಸುಲಿಗೆ,ಹಿಂಸೆ ಕಂಡುಬಂದಾಗೆಲ್ಲ ಪಂಚೆ ಸಡಿಲಾಗಿ ಬಿಚ್ಚಿಕೊಳ್ಳುತ್ತಿತ್ತು. ಸಹಜ ದೃಶ್ಯಗಳು ಬಂದಾಗ  ಸುಮ್ಮನೆ ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಗಮನಿಸುತ್ತ ಇರುವವರು. ಮಗಳಿಗೆ ಅಜ್ಜನ ಮನಸ್ಸು ಅರ್ಥವಾಗಿತ್ತು. ಮಗನಿಗೆ ಗೊತ್ತಿಲ್ಲ.  ಅವನು ಎದ್ದು ತನ್ನ ಎಳೆಯ ಕೈಗಳಿಂದ ಅವರನ್ನು ಹಿಡಿದು ತಳ್ಳುತ್ತಿದ್ದ. ಆ  ಎಂಭತ್ತರ ವಯಸ್ಸಿನಲ್ಲೂ ಬೆಳಗ್ಗೆದ್ದು ಇಪ್ಪತ್ತೈದು ಸೂರ್ಯನಮಸ್ಕಾರ ಮಾಡುತ್ತಿದ್ದ ಅಜ್ಜ ಎಳ್ಳಷ್ಟೂ ಅಲ್ಲಾಡುತ್ತಿರಲಿಲ್ಲ. ತನ್ನ ಶಕ್ತಿ ಪೂರ್ಣವಾಗಿ ಹಾಕಿ ನೂಕಿದರೂ ಅಜ್ಜ ಸಿಟ್ಟು ಮಾಡಿಕೊಳ್ಳುವವರಲ್ಲ. ಎಳೆಯರು ಕೆಟ್ಟ ದೃಶ್ಯಗಳನ್ನು ನೋಡಬಾರದು ಎಂದು ಅವರು ಟಿ.ವಿ.ಚಾಲೂ ಮಾಡಿದ ಕೂಡಲೇ ತಮ್ಮ ಕೆಲಸವೆಲ್ಲ ಬದಿಗಿರಿಸಿ ಅಲ್ಲಿ ಬರುತ್ತಿದ್ದರು. ಅನೇಕ ಬಾರಿ ತಮಾಷೆ,ಕಥೆ ಹೇಳಿ ಗಮನ ತಮ್ಮತ್ತ ಹರಿಯುವಂತೆ ಮಾಡಿ ಅತ್ತನೋಡದ ಹಾಗೆ ಸೆಳೆಯುವವರು. ಮಕ್ಕಳು ಮನೆಯ ಒಳಗೇ ಕೂರಬಾರದು ಎನ್ನುತ್ತ ವರ್ಷದ ಮಗುವನ್ನೆತ್ತಿ  ಕುಂಬಳೆ  ತೋರಿಸಲು ಕರೆದೊಯ್ಯುತ್ತಿದ್ದರು. ಅವನು ಹುಟ್ಟಿದಾಗ ಸಂಭ್ರಮದಲ್ಲಿ ಊರ ಪ್ರಾಥಮಿಕ ಶಾಲೆಯ ಸುಮಾರು ಆರುನೂರಕ್ಕೂ ಹೆಚ್ಚಿನ ಮಕ್ಕಳಿಗೆ ಪಾಯಸ ಮಾಡಿಸಿ ಕೊಡಿಸಿದ ಅಜ್ಜ ಅವರು. ಮಕ್ಕಳಿಗೆ ಸಲ್ಲಿಸಿದ್ದು ದೇವರಿಗೆ ಕೊಟ್ಟಂತೇ ಎನ್ನುವ ದಿವ್ಯ ಮನೋಭಾವ.

Grandpa-childಮಗಳು ಇನ್ನೂ ಹತ್ತು ತಿಂಗಳ ಮಗು. ಮಾವ ರಸಬಾಳೆ ಹಣ್ಣು  (ಮನೆಯಲ್ಲಿ ಬೆಳೆಸಿದ್ದು) ತಂದು ಮಗುವನ್ನು ಕರೆಯುತ್ತಿದ್ದರು.ಇನ್ನೂ ನಡೆಯಲು ಕಲಿತಿರದ ಮಗು ಅಂಬೆಗಾಲಿಡುತ್ತ ಧಾವಿಸುತ್ತಿತ್ತು.ಕಾಲು ನೀಡಿ ಕೂತು ತಮ್ಮ ಕಾಲ ಮೇಲೆ ಅಡ್ಡವಾಗಿ ಕವಚಿ ಮಲಗಿಸಿ ಹಣ್ಣು ತೆಳ್ಳಗೆ ಬಿಲ್ಲೆ ಬಿಲ್ಲೆಯಾಗಿ ಹೆಚ್ಚಿ ಬಾಯಿಗೆ ಕೊಡುತ್ತಿದ್ದರು.ಗಂಟಲಿಗೆ ಸಿಗಬಾರದು ಎಂಬ ದೃಷ್ಟಿಯಿಂದ ಹಾಗೆ ಮಲಗಿಸಿ ಗಲ್ಲ ತುಸು ಎತ್ತಿ ಹಿಡಿಯುತ್ತಿದ್ದರು.ಅಜ್ಜ ಎಂದರೆ ಪಂಚಪ್ರಾಣ ಮಗುವಿಗೆ.  ಹಾಗೆ ಬೆನ್ನು ಸವರುತ್ತಾ ಶಾಸ್ತ್ರೀಯ ಸಂಗೀತದ ಆಲಾಪನೆ ತೆಗೆಯುತ್ತಿದ್ದರು. ” ಪಟ್ಟಾಭಿರಾಮಾ   ರಾಮಾ……….ರಾಮಾ…. ಸೀತಾ ಲಕ್ಷ್ಮಣ ಭರತ  ಶತ್ರುಘ್ನ ಸಹಿತ  ರಾಮಾ   ರಾಮಾ”     ಉತ್ತಮ ಶಾರೀರ; ಸಂಗೀತ ಮುಗಿಯಬೇಕಾದರೆ ನಿದ್ದೆ ಕಂದನಿಗೆ.ಶೈಶವದಿಂದಲೇ ಅಜ್ಜನ ಮಡಿಲಲ್ಲಿ ಮಲಗಿ ಸಂಗೀತ ಆಸ್ವಾದಿಸಿದ ಪರಿಣಾಮ ಇರಬೇಕು ಅಂದಿನ      ಶಿಶುವಿಗೆ ಇಂದಿಗೂ ಸಂಗೀತ ಹಾಡಲೂ,ಕೇಳಲೂ ಪರಮ ಪ್ರೀತಿ.ಮುದ್ದಿನಿಂದ ಮಗುವನ್ನು ಕೋಡಮಣೀ ಎಂದು ಕರೆಯುತ್ತಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತ ಅವಳು ಕಲಿಯುವಾಗ ಮನೆಯಲ್ಲಿ ಹಾಡಿಸಿ ತಿದ್ದುವುದು ಅವರ ಅಪ್ಯಾಯಮಾನದ ಕೆಲಸ.ದೊಡ್ಡವಳಾದ ಮೇಲೆ ಕಾಲೇಜು ಮುಗಿಸಿ ಮನೆಗೆ ತಲಪುವ ಸಮಯ ಮೀರಿದರೆ ರಸ್ತೆ ಪಕ್ಕ ಹೋಗಿ ಕಾದು ನಿಲ್ಲುವ ಅಜ್ಜ ಅವರು. ಈಗಾಗಲೇ ಹೇಳಿದಂತೆ ಅವರು ಒಳ್ಳೆಯ ಜ್ಯೋತಿಷ್ಕರು.ಮೊಮ್ಮಗಳ ಜಾತಕ ಇಡೀ ಎರಡು ಹಗಲು ಜಾಲಾಡಿಸಿ ಬರೆದಿದ್ದರು.ಬರೆದು ಮುಗಿಸಿದವರೇ ಹಿಗ್ಗಿನಿಂದ ಒಳಗೆ ಬಂದು “ಕೋಡಮಣಿ”ಯನ್ನೆತ್ತಿ ಎದೆಗಪ್ಪಿದ್ದರು.

ಆಗಿನ್ನೂ ನನಗೆ ಮದುವೆಯಾದ ಹೊಸತು.ಅಂದು ಮನೆಯಲ್ಲಿ ನಾನೂ,ಮಾವನವರು ಇಬ್ಬರೇ ಇದ್ದೆವು. ಯಥಾಪ್ರಕಾರ  ಬೆಳಗ್ಗೆ ಏಳು ಘಂಟೆಗೆ ಅವರನ್ನುಕಾಣಲು  ಯಾರೋ   ಬಂದಿದ್ದರು.ನನಗೆ ಇನ್ನೂ ಹೊಸ ಊರು;ಯಾರ ಪರಿಚಯವೂ ಇಲ್ಲ.ಮಾವನವರ ಕ್ರಮ ಹೇಗೆಂದರೆ ಅವರು ಬಂದ ಕಾರ್ಯ ಮುಗಿದರೂ ಕಷ್ಟಸುಖ ವಿಚಾರಿಸುತ್ತ  ಮನೆಯ ಬಗ್ಗೆ ಕೆಲಸದ ಬಗ್ಗೆ ತಿಳಿದುಕೊಳ್ಳುತ್ತಿದ್ದರು.ಘಂಟೆ ಎಂಟಾಯಿತು, ಒಂಭತ್ತಾಯ್ತು,ಹತ್ತೂ ಆಯ್ತು.ನನಗೋ ಹಸಿವೆ.ಬೆಳಗಿನ ಉಪಾಹಾರ ಆಗಿಲ್ಲ ಇಬ್ಬರಿಗೂ. ಬಂದವರಿಗೆ ಕಾಫಿ,ಟೀ ತಿಂಡಿ ಕೊಡಬೇಕಾದರೆ ಅವರು ನನ್ನನ್ನು ಕರೆದು ಹೇಳಬಹುದು ಎಂದು ನನ್ನ ಭಾವನೆ.ನಾನಾಗಿ ಕೊಡಲು ನನಗಿನ್ನೂ ಈ ಮನೆಯ      ರಿವಾಜು ಗೊತ್ತಿಲ್ಲ.ನಾನು ತಿಂಡಿ ಮುಗಿಸಿದೆ.ಹತ್ತೂವರೆಗೆ  ಅತಿಥಿ ಹೊರಟರು.ಬೀಳ್ಕೊಟ್ಟು ಮಾವನವರು ನನ್ನ ಕರೆದರು.”ನಿನ್ನ ಉಪಾಹಾರ ಆಯ್ತಾ” ಕೇಳಿದರು.”ಆಯ್ತು” ಎಂದೆ.” ಅತಿಥಿಗೆ ಏನಾದರೂ ಕೊಡಬಹುದಿತ್ತು”  ಅಂದರು.ನನ್ನ ಭಾವನೆ ಹೇಗಿತ್ತೋ ಅದನ್ನೇ ಹೇಳಿದೆ.

“ಮನೆಗೆ ಯಾರು,ಯಾವಾಗ ಬಂದರೂ ಏನುಂಟೋ ಅದನ್ನು ಕೊಡು. ಅದಕ್ಕಾಗಿ ನೀನು ಕೇಳಬೇಕು ಎಂದಿಲ್ಲ. ಅವರನ್ನು ಹೊರಗೆ ಕೂರಿಸಿ ನಾವು ಒಳಗಡೆ ಆಹಾರ ಸೇವಿಸುವುದು ಚೆಂದ ಅಲ್ಲ. ನೀನು ಏನು ಕೊಟ್ಟರೂ ನನಗೆ ಸಂತೋಷ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಂಗೆ”
ಅಂದು ಅವಮಾನದಿಂದ ಭೂಮಿ ಬಾಯಿ ಬಿಡಬಾರದೇ ಎನಿಸಿದ್ದು ಸುಳ್ಳಲ್ಲ.ಆದರೆ ಆ ಮಾತಿನ ಹಿಂದಿನ ಸತ್ಯ ಅರ್ಥವಾದ ಹಾಗೆ ಅದರಲ್ಲಿನ ಮೌಲ್ಯ  ಅದೆಷ್ಟು ಬೆಲೆಬಾಳುವುದು ಎಂದು ಗೊತ್ತಾಯಿತು.ಸಾಧ್ಯವಿದ್ದ ಮಟ್ಟಿಗೂ ಹಾಗೆ ನಡೆದುಕೊಂಡೆ.ಕೊನೆಕೊನೆಗೆ ಅವರ ತೊಂಭತ್ತೆರಡರ ವಯಸ್ಸಿನಲ್ಲಿ ತೀರಿಕೊಳ್ಳುವಾಗ ಅವರ ಸೇವೆ ಮಾಡುವಾಗೆಲ್ಲ “ನಿನಗೆ ಎರಡಲ್ಲ,ಮೂರು ಮಕ್ಕಳು” ಎಂದು ಕೈಮುಗಿದು ಕಣ್ತುಂಬಿಕೊಳ್ಳುತ್ತಿದ್ದರು.” ಹಾಗೆ ಹೇಳಬೇಡಿ.ನನಗೇನೂ ಕಷ್ಟವಿಲ್ಲ” ಎಂದರೂ ಒಪ್ಪುತ್ತಿರಲಿಲ್ಲ. ಮಕ್ಕಳನ್ನು ಅವರು ಪ್ರೀತಿಸುತ್ತಿದ್ದ ಅಗಾಧತೆ  ನೆನಪಾದರೆ ಅವರು ಎಲ್ಲೋ ಹತ್ತಿರದಲ್ಲಿ ನಮ್ಮ ನಡುವೆಯೇ ಇದ್ದಾರೆ ಎನಿಸುತ್ತದೆ.

 

– ಕೃಷ್ಣವೇಣಿ ಕಿದೂರು.

6 Responses

  1. Vinay Kumar says:

    Thumbaa chennagi niroopisiddeeri. Hiriyara nenapugaLe haage. Gambheerantheya naduveyuu mommakkaLondingina preethiya odanaata varNisalasaadhya . Nanna thaatha na nenapu maadi kottiri neevu. Thanks aunty 🙂

  2. Shruthi Sharma says:

    ಆಪ್ತವಾದ ಬರಹ… ತುಂಬಾ ಚೆನ್ನಾಗಿದೆ.. 🙂

  3. Abhilash Sharma says:

    My great ajja…. 🙂

  4. SOMASHEKAR says:

    Wonderful performance and much thinkable website. Congrats.

  5. savithrisbhat says:

    ಲೇಖನ ಓದುತ್ತಿದ್ದ೦ತೆ ಕಣ್ಣುಗಳು ಮ೦ಜಾದುವು ಲೇಖನ ಹೃದಯ ಸ್ಪರ್ಶಿ ಯಾಗಿತ್ತು.

  6. nayana bhide says:

    ಮತ್ತೆ ಮತ್ತೆ ಹಿಡಿದಿಟ್ಟುಕೊಳ್ಳುತ್ತಿದೆ ನನ್ನನ್ನು ಈ ಲೇಖನ ಕೃಷ್ಣವೇಣಿ ಅವರೆ…ನಮ್ಮ ಮಾವನೂ ಹೀಗೇ ಇದ್ದರು…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: