‘ರಿಯಾಲಿಟಿ ಶೋ’ಗಳಿಂದ ಮುಕ್ತಿ ಸಿಗುವುದೆಂದು?
ದೂರದರ್ಶನದ ಚಂದನವಾಹಿನಿಯಲ್ಲಿ 2001ರಲ್ಲಿ ‘ನಿತ್ಯೋತ್ಸವ’ ಎಂಬ ಹೆಸರಿನ ಸಂಗೀತ ಸ್ಪರ್ಧೆಯೊಂದು ಪ್ರಸಾರವಾಗುತ್ತಿತ್ತು.ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ಸಂಜೆ 6ರಿಂದ 6:30ರವರೆಗೆ ಕನ್ನಡದ ಪ್ರೇಕ್ಷಕರು ಸಂಗೀತ ಸುಧೆಯನ್ನು ಸವಿಯುತ್ತಿದ್ದರು.ದಿವಂಗತ ರಾಜು ಅನಂತಸ್ವಾಮಿಯವರ ನವಿರಾದ ಅಚ್ಚಕನ್ನಡದ ನಿರೂಪಣೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ನೀಡುತ್ತಿತ್ತು.ಅಂದು ‘ರಿಯಾಲಿಟಿ ಶೋ’ ಎಂಬ ಕಲ್ಪನೆ ಅಷ್ಟಾಗಿ ಇರಲಿಲ್ಲ.ಆಗ ಇದ್ದ ಒಂದೆರಡು ಕನ್ನಡ ಚಾನೆಲ್ ಗಳಲ್ಲಿ ‘ನಿತ್ಯೋತ್ಸವ’ದಂತೆ ಸಂಗೀತ,ನೃತ್ಯ ಸ್ಪರ್ಧೆಗಳು ಪ್ರಸಾರವಾಗುತ್ತಿದ್ದವು.ಆದರೆ ಎಲ್ಲವೂ ನಮ್ಮ ಭಾರತೀಯ,ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳೇ ಆಗಿದ್ದವು.
ನಂತರದ ಕೆಲವು ವರ್ಷಗಳಲ್ಲಿ ಟಿವಿ ಚಾನೆಲ್ ಗಳು ನಾಯಿಕೊಡೆಯಂತೆ ತಲೆಯೆತ್ತಿದವು.‘ಟಿ.ಆರ್.ಪಿ’ ಎಂಬ ಶಬ್ದವೂ ಬಳಕೆಗೆ ಬಂತು. ಟಿ.ಆರ್.ಪಿ.ಗಾಗಿ ಚಾನೆಲ್ ಗಳು ‘ರಿಯಾಲಿಟಿ ಶೋ’ ಎಂಬ ಹೊಸ ಅಸ್ತ್ರವನ್ನು ಕಂಡುಕೊಂಡವು.ಮೊದಲಿನಿಂದಲೂ ಇದ್ದಂಥ ಸಂಗೀತ,ನೃತ್ಯ ಸ್ಪರ್ಧೆಗಳನ್ನು ಹೊಸ ಹೊಸ ಹೆಸರಿನಲ್ಲಿ ಅದ್ಧೂರಿ ಪ್ರಚಾರಕೊಟ್ಟು ಚಾನೆಲ್ ಗಳು ಪ್ರಸಾರಮಾಡತೊಡಗಿದವು.ತೀರ್ಪುಗಾರರಾಗಿ ಮತ್ತು ಅತಿಥಿಗಳಾಗಿ ಸಿನಿಮಾ ತಾರೆಯರನ್ನು ಕರೆಸುತ್ತಿದ್ದರಿಂದ ‘ಸೆಲಿಬ್ರೆಟಿ ರಿಯಾಲಿಟಿ ಶೋ’ ಎಂಬ ಹೆಸರಿಗೆ ಜನರು ಆಕರ್ಷಿತರಾಗಿ ರಿಯಾಲಿಟಿ ಶೋಗಳನ್ನು ಮಂತ್ರಮುಗ್ಧರಾಗಿ ವೀಕ್ಷಿಸತೊಡಗಿದರು.ಭರ್ಜರಿ ವೇಷಭೂಷಣ,ಜಗಮಗಿಸುವ ಬೆಳಕಿನ ವೇದಿಕೆ,ನಿರೂಪಕರ ಆಂಗ್ಲ ಮಿಶ್ರಿತ ಕನ್ನಡ,ತೀರ್ಪು ಸರಿಯಿಲ್ಲವೆಂದು ವೇದಿಕೆಯಲ್ಲೇ ಹೊಡೆದಾಡಿಕೊಳ್ಳುವ ವಿಲಕ್ಷಣ ಸಂಗತಿಗಳ ಮುಂದೆ ಸರ್ಕಾರದ ‘ದೂರದರ್ಶನ’ ಚಾನೆಲ್ ಸಂಪೂರ್ಣವಾಗಿ ಮೂಲೆಗೆ ಸರಿಯಿತು.‘ಜನಮರುಳೋ ಜಾತ್ರೆ ಮರುಳೋ’ ಎಂಬಂತೆ ವೀಕ್ಷಕರು ಈ ರಿಯಾಲಿಟೀ ಶೋಗಳ ನೈಜತೆಯನ್ನು ವಿಚಾರಿಸದೇ ಮೂಕಪ್ರೇಕ್ಷಕರಾಗಿ ‘ಮೂರ್ಖರ ಪೆಟ್ಟಿಗೆ’ಯ ಮುಂದೆ ಕೂತರು.
ಹೆಸರೇ ಸೂಚಿಸುವಂತೆ ರಿಯಾಲಿಟಿ ಶೋ ಎಂದರೆ ವಾಸ್ತವ ಕಾರ್ಯಕ್ರಮ ಅಥವಾ ವಾಸ್ತವಕ್ಕೆ ಹತ್ತಿರವಾದ ಕಾರ್ಯಕ್ರಮ.ಆದರೆ ವಾಸ್ತವತೆಯನ್ನು ತೋರಿಸುವ ಭರಾಟೆಯಲ್ಲಿ ಈ ರಿಯಾಲಿಟಿ ಶೋಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಅತಿರೇಕದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾರಂಭಿಸಿದವು.ಹಾಗಾಗಿ ಅಲ್ಲಿ ಮಾನವೀಯ,ನೈತಿಕ,ಸಾಮಾಜಿಕ,ಧಾರ್ಮಿಕ ಮೌಲ್ಯಗಳಿಗೆ ಬೆಲೆಯೇ ಇಲ್ಲವಾಯಿತು.ಅಲ್ಲಿ ನೀಡುವ ವಿವಿಧ ಸವಾಲುಗಳನ್ನು ‘ಟಾಸ್ಕ್’ ಎಂಬ ಹೆಸರಿನಲ್ಲಿ ಸ್ಪರ್ಧಿಗಳಿಂದ ಮಾಡಿಸಲಾಯಿತು.
ರಿಯಾಲಿಟಿ ಶೋಗಳ ಅರ್ಥಹೀನ ‘ಟಾಸ್ಕ್’ಗಳ ಒಂದು ಝಲಕ್ ನೋಡೋಣ.ಅದೊಂದು ಜನಪ್ರಿಯ ಕನ್ನಡ ವಾಹಿನಿಯ ರಿಯಾಲಿಟಿ ಶೋ.ನಗರದ ಹುಡುಗಿಯರು ಹಳ್ಳಿ ಜೀವನವನ್ನು ಹೇಗೆ ಕಳೆಯುತ್ತಾರೆ ಎಂಬುದು ಆ ರಿಯಾಲಿಟಿ ಶೋನ ಥೀಮ್.ಅದೊಂದು ದಿನ ಆ ಹುಡುಗಿಯರಿಗೆ ಹಾಲು ಕರೆಯುವ ಟಾಸ್ಕ್ ನೀಡಲಾಯಿತು.ಆದರೆ ಹಾಲು ಕರೆಯುವಾಗ ಹಸು ಏನಾದರೂ ಕಾಲು ಅಲ್ಲಾಡಿಸಿದರೆ ಅಥವಾ ಝಾಡಿಸಿ ಒದ್ದರೆ ಆ ಸ್ಪರ್ಧಿಗಳು ಶೋನಿಂದ ಹೊರಬೀಳುತ್ತಾರೆ.ಎಲಿಮಿನೇಟ್ ಆಗದೇ ಇರಲು ಒಂದು ಮಾರ್ಗವಿದೆ.ಅದೇನೆಂದರೆ ಆ ಹುಡುಗಿಯರು ಹಸುವಿನ ಗುದದ್ವಾರಕ್ಕೆ ಮುತ್ತು ಕೊಡಬೇಕು.ಮುತ್ತು ಕೊಡುವಾಗ ಏನಾದರೂ ಹಸು ಕಾಲು ಝಾಡಿಸಿದರೆ ಆ ಸ್ಪರ್ಧಿ ಶೋನಿಂದ ಹೊರನಡೆಯಬೇಕು.
ಹೌದು ಸ್ವಾಮಿ.ಓದಲಿಕ್ಕೇ ಅಸಹ್ಯವಾಗುತ್ತದಲ್ಲವೇ?ಆದರೆ ಇದು ನಿಜವಾಗಿಯೂ ರಿಯಾಲಿಟಿ ಶೋವೊಂದರಲ್ಲಿ ನಡೆದದ್ದು.ಅಂಥದ್ದೇ ಒಂದು ರಿಯಾಲಿಟಿ ಶೋವೊಂದರಲ್ಲಿ ಇನ್ನೊಂದು ಟಾಸ್ಕ್ ನೀಡಲಾಯಿತು.ಸ್ಪರ್ಧಿಗಳು ಹಳ್ಳಿಯ ಹುಡುಗನನ್ನು ಗೋಳು ಹೊಯ್ದುಕೊಳ್ಳಬೇಕು.ಯಾರು ಚೆನ್ನಾಗಿ ಗೋಳು ಹೊಯ್ದುಕೊಳ್ಳುತ್ತಾರೋ ಅವರಿಗೆ ಹೆಚ್ಚಿನ ಅಂಕಗಳು ಸಿಗುತ್ತವೆ.ಅದಕ್ಕೆ ಇಬ್ಬರು ಸ್ಪರ್ಧಿಗಳಂತೂ ಒಬ್ಬ ಹುಡುಗನ ಚಡ್ಡಿಯನ್ನೇ ಬಿಚ್ಚಿ ಬೆತ್ತಲು ಮಾಡಿ ಗೋಳು ಹೊಯ್ದುಕೊಂಡರು.ಆ ಹುಡುಗ ಜೋರಾಗಿ ಅತ್ತಷ್ಟೂ ಸ್ಪರ್ಧಿಗಳಿಗೆ ಅಂಕಗಳು ಜಾಸ್ತಿ ಸಿಕ್ಕವು.ಮಾನವ ಹಕ್ಕುಗಳ ಉಲ್ಲಂಘನೆಯಾಯಿತೆಂದು ಆ ಹುಡುಗನ ಪರವಾಗಿ ಯಾರೂ ಧ್ವನಿ ಎತ್ತಲೇ ಇಲ್ಲ.ಎಲ್ಲರೂ ಕಣ್ಣು ಬಾಯಿ ಬಿಟ್ಟುಕೊಂಡು ರಿಯಾಲಿಟಿ ಶೋಗಳ ‘ಟಾಸ್ಕ್’ಗಳನ್ನು ನೋಡಿದರು.
‘ಜಂಗಲ್ ಜಾಕಿ’ ರಾಜೇಶನ ಕಥೆಯಂತೂ ಎಲ್ಲರಿಗೂ ಗೊತ್ತೇ ಇದೆ.ಹೆಚ್.ಡಿ.ಕೋಟೆಯ ಕಾಡಿನಲ್ಲಿ ಸ್ವಚ್ಛಂದವಾಗಿದ್ದ ಆತನನ್ನು ಮತ್ತು ಇನ್ನೂ ಅನೇಕ ಆದಿವಾಸಿ ಜನಾಂಗದವರನ್ನು ರಿಯಾಲಿಟಿ ಶೋ ಹೆಸರಿನಲ್ಲಿ ನಗರಕ್ಕೆ ಕರೆದುಕೊಂಡು ಬಂದರು.ಅಲ್ಲಿ ರಾಜೇಶ ಜಯಗಳಿಸಿ ರಾತ್ರಿ ಬೆಳಗಾಗುವುದರೊಳಗೆ ಹೀರೋ ಆಗಿಬಿಟ್ಟ.ಅವನನ್ನು ಹಾಕಿಕೊಂಡು ನಿರ್ದೇಶಕರೊಬ್ಬರು ‘ಜಂಗಲ್ ಜಾಕಿ’ ಎಂಬ ಸಿನಿಮಾವನ್ನೂ ಮಾಡಿದರು.ಸಿನಿಮಾ ಅಂದುಕೊಂಡಹಾಗೆ ಬಿಡುಗಡೆಯಾಗದಿದ್ದಾಗ ರಾಜೇಶ ಖಿನ್ನನಾದ.ನಗರ ಜೀವನದ ಆಡಂಬರವನ್ನು ಕಂಡವನಿಗೆ ಮತ್ತೆ ಕಾಡಿಗೆ ಹೋಗಿ ತನ್ನ ಮೊದಲಿನ ಜೀವನವನ್ನು ನಡೆಸುವುದನ್ನು ಕಲ್ಪಿಸಿಕೊಳ್ಳಲೂ ಆಗಲಿಲ್ಲ.ಹಣ,ಹೆಸರು,ಪ್ರಶಸ್ತಿಗಾಗಿ ಹಪಹಪಿಸತೊಡಗಿದ.ಚಿತ್ರ ಬಿಡುಗಡೆಯಾಗದಿದ್ದುದ್ದಕ್ಕೆ ಮಾನಸಿಕ ರೋಗಿಯಾದ. ಕೊನೆಗೊಂದು ದಿನ ತನ್ನ ಮನೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆಯತಪ್ಪಿ ಟೆರೇಸ್ ನಿಂದ ಬಿದ್ದು ದುರ್ಮರಣವನ್ನಪ್ಪಿದ.ಆಧುನಿಕ ಜಗತ್ತಿನ ಗಂಧಗಾಳಿಯೇ ಗೊತ್ತಿಲ್ಲದ ರಾಜೇಶನನ್ನು ರಿಯಾಲಿಟಿ ಶೋಗೆ ಕರೆದುಕೊಂಡು ಬಂದವರು ಅವನನ್ನು ವಾಪಾಸ್ಸು ಹಾಡಿಗೆ ತಲುಪಿಸುವ ಕೆಲಸವನ್ನು ಮಾಡಲಿಲ್ಲ.ಆಧುನಿಕ ಜಗತ್ತಿಗೆ ತೆರೆದುಕೊಂಡ ರಾಜೇಶನ ಸಾವಿಗೆ ರಿಯಾಲಿಟಿ ಶೋ ನೇರವಾಗಿ ಕಾರಣವಾಯಿತು.
ಇನ್ನು ದೊಡ್ಡ ಧಣಿ ‘ಬಿಗ್ ಬಾಸ್’ ವಿಚಾರಕ್ಕೆ ಬರೋಣ.ಮೊದಲು ಬಿಗ್ ಬಾಸ್ ವಿದೇಶದ ಟಿವಿ ಚಾನೆಲ್ ಒಂದರಲ್ಲಿ ಇಂಗ್ಲೀಷ್ ನಲ್ಲಿ ಆರಂಭವಾಯಿತು.ಭಾಲಿವುಡ್ ನಟಿ ಶಿಲ್ಪಾ ಶೆಟ್ಟಿಯೂ ಭಾಗವಹಿಸಿ ಜೇಡ್ ಗುಡಿ ಎಂಬ ಪ್ರತಿಸ್ಪರ್ಧಿಯ ಜೊತೆ ಎಂಥದೋ ಎಡವಟ್ಟನ್ನೂ ಮಾಡಿಕೊಂಡು ಬಂದರು.ನಂತರ ಇದು ಹಿಂದಿಗೆ ಬಂತು ಕಳೆದ ವರ್ಷ ಕನ್ನಡಕ್ಕೂ ಬಂತು.ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಾರೆ ಎಂಬ ಕಾರಣಕ್ಕೆ ಸಾಕಷ್ಟು ಕುತೂಹಲವನ್ನೂ ಉಂಟುಮಾಡಿತು.ಆದರೆ ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್’ ಬಂಡವಾಳ ಗೊತ್ತಾಯಿತು.ಮನೆಯೊಳಗಿನ ಸ್ಪರ್ಧಿಗಳು ವಿವಿಧ ಟಾಸ್ಕ್ ಗಳನ್ನು ಎದುರಿಸಿದ್ದಕ್ಕಿಂತ ಜಗಳವಾಡಿದ್ದೇ ಹೆಚ್ಚು.ಅಲ್ಲದೇ ಯಾವ ಮಾನದಂಡದ ಮೇಲೆ ಬಿಗ್ ಬಾಸ್ ಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಾರೋ ದೇವರೇ ಬಲ್ಲ.ಅಲ್ಲಿ ಭಾಗವಹಿಸಿದ್ದ ಎಲ್ಲಾ ಸೆಲೆಬ್ರೆಟಿಗಳು ಒಂದಲ್ಲಾ ಒಂದು ಕಾರಣಕ್ಕೆ ಸಾರ್ವಜನಿಕ ಜೀವನದಲ್ಲಿ ವಿವಾದಕ್ಕೀಡಾಗಿದ್ದವರೇ.ಅಂಥ ವಿವಾದಾತ್ಮಕ ವ್ಯಕ್ತಿಗಳು ಮನೆಯೊಳಗೆ 98ದಿನಗಳ ಕಾಲ ಜಗಳವಾಡುತ್ತಾರೆ.ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸಲು ವೀಕ್ಷಕರು ವೋಟ್ ಮಾಡುತ್ತಾರೆ.
ಆದರೆ ಕೊನೆಗೆ ಬಿಗ್ ಬಾಸ್ ನಲ್ಲಿ ಯಾರೋ ಒಬ್ಬರು ಗೆದ್ದಾಗ ವೋಟ್ ಮಾಡಿದವರಿಗೆಲ್ಲಾ ಮರ್ಮಾಘಾತವಾಗುತ್ತದೆ.ಏಕೆಂದರೆ ಯಾರಿಗೆ ಅತೀ ಕಡಿಮೆ ವೋಟ್ ಬಿದ್ದಿರುತ್ತದೋ ಅವರೇ ಗೆದ್ದಿರುತ್ತಾರೆ.ಇಲ್ಲೂ ಅಷ್ಟೇ,ಯಾವ ಮಾನದಂಡದ ಮೇಲೆ ವಿಜಯಿಯನ್ನು ಆಯ್ಕೆ ಮಾಡುತ್ತಾರೆ ಎಂದು ಯಾರಿಗೂ ಗೊತ್ತಾಗುವುದಿಲ್ಲ.ಮೊಬೈಲ್ ನ ಕರೆನ್ಸಿ ಖರ್ಚು ಮಾಡಿಕೊಂಡು ವೋಟ್ ಮಾಡಿದವರೂ ವಿಚಾರಿಸುವ ಗೋಜಿಗೆ ಹೋಗುವುದಿಲ್ಲ.ಅಲ್ಲದೇ ಗೆದ್ದವರಿಗೆ 50ಲಕ್ಷ ರೂಪಾಯಿ ನಗದು ಮತ್ತು ಬೆಂಗಳೂರಿನಲ್ಲಿ ಒಂದು ಬೆಲೆಬಾಳುವ ಅದ್ಧೂರಿ ಫ್ಲಾಟ್ ಉಡುಗೊರೆಯಾಗಿ ಸಿಗುತ್ತದೆ.ಏನು ಸಾಧನೆ ಮಾಡಿದ್ದಾರೆಂದು ಅಷ್ಟು ಮೊತ್ತದ ಉಡುಗೊರೆ ಕೊಡುತ್ತಾರೋ?ನಮ್ಮ ದೇಶದಲ್ಲಿ ಕೋಟ್ಯಂತರ ಜನರು ಕೊಳಗೇರಿಗಳಲ್ಲಿ ವಾಸಿಸುತ್ತಾರೆ.ಮಾನ ಮುಚ್ಚಿಕೊಳ್ಳುವ ಬಟ್ಟೆಗಾಗಿ ಪರದಾಡುತ್ತಾರೆ.ಆದರೆ ಬಂಗಲೆಯೊಳಗೆ 98 ದಿನ ಜಗಳವಾಡಿದವರಿಗೆ ಒಂದು ಕೋಟಿ ಮೊತ್ತದ ಉಡುಗರೆ! ಇಂಥ ರಿಯಾಲಿಟಿ ಶೋಗಳನ್ನು ನೋಡುವ ಅನಿವಾರ್ಯ ಕರ್ಮ ನಮ್ಮ ಜನರಿಗೆ.
‘ಹುಚ್ಚನ ಮದುವೇಲಿ ಉಂಡವನೇ ಜಾಣ’ ಎಂಬಂತೆ ನಮ್ಮ ನ್ಯೂಸ್ ಚಾನೆಲ್ ಗಳು ಇಂಥ ರಿಯಾಲಿಟಿ ಶೋಗಳಲ್ಲಿ ವಿಜೇತರಾದವರನ್ನು ದೊಡ್ದ ಯುದ್ಧ ಗೆದ್ದು ಬಂದವರಂತೆ ಬಿಂಬಿಸಿ ಅವರ ಸಂದರ್ಶನವನ್ನು ದಿನವಿಡೀ ಪ್ರಸಾರ ಮಾಡಿ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ.ಆದರೆ ಬೆವರು,ರಕ್ತ ಸುರಿಸಿ ಕಷ್ಟಪಟ್ಟು ಏಷ್ಯನ್ ಗೇಮ್ಸ್,ಕಾಮನ್ ವೆಲ್ತ್ ಕ್ರೀಡಾಕೂಟಗಳಲ್ಲಿ ಗೆದ್ದು ಪದಕ ಗಳಿಸಿದ ನಮ್ಮ ಹೆಮ್ಮೆಯ ಕ್ರೀಡಾಪಟುಗಳನ್ನು ತಮ್ಮ ಸ್ಟುಡಿಯೋಗೆ ಎಷ್ಟು ಸಲ ಕರೆಸಿದ್ದಾರೆ?ಕರೆಸಿದರೂ ರಿಯಾಲಿಟಿ ಶೋಗಳಲ್ಲಿ ಗೆದ್ದವರಿಗೆ ಕೊಟ್ಟಷ್ಟು ಗೌರವ,ಮರ್ಯಾದೆಯನ್ನು ಕ್ರೀಡಾಳುಗಳಿಗೆ ಕೊಡುತ್ತಾರೆಯೇ?ರಿಯಾಲಿಟಿ ಶೋಗಳಲ್ಲಿ ಯಾರು ವಿಜೇತರಾಗುತ್ತಾರೆ ಎಂದು ಬಿಗ್ ಡಿಬೇಟ್ ನಡೆಸುವ ಇವರು ಏಷ್ಯನ್ ಗೇಮ್ಸ್,ಕಾಮನ್ ವೆಲ್ತ್ ಗೇಮ್ಸ್ ಗಳ ಫೈನಲ್ ಪಂದ್ಯಕ್ಕೆ ಮುನ್ನ ಬಿಗ್ ಡಿಬೇಟ್ ಮಾಡಿದ್ದಾರೆಯೇ?
ಸದಾ ನಮ್ಮ ಸಂಸ್ಕೃತಿ,ಪರಂಪರೆ,ಆಚಾರ-ವಿಚಾರಗಳನ್ನು ವ್ಯಂಗ್ಯ ಮಾಡುವ ಈ ರಿಯಾಲಿಟಿ ಶೋಗಳನ್ನು ಜನರು ವೀಕ್ಷಿಸುವ ಮುನ್ನ ಸ್ವಲ್ಪ ಆಲೋಚಿಸಬೇಕು.ಸ್ಪರ್ಧಿಗಳಿಗೆ ವೋಟ್ ಮಾಡುವ ಮುನ್ನ ಅವರು ನಿಜಕ್ಕೂ ತಮ್ಮ ವೊಟ್ ಗೆ ಅರ್ಹರೇ ಎಂಬುದನ್ನು ಚಿಂತಿಸಲಿ.ಮನೋರಂಜನೆ,ಟಿ.ಆರ್.ಪಿ.ಗಾಗಿ ರಿಯಾಲಿಟಿ ಶೋಗಳಲ್ಲಿ ಏನು ಬೇಕಾದರೂ ಪ್ರಸಾರ ಮಾಡಿ ನೈಜತೆಯನ್ನು ವೈಭವೀಕರಿಸುವುದನ್ನು ಚಾನೆಲ್ ಗಳು ನಿಲ್ಲಿಸಬೇಕು.ಮಾಡಲೇಬೇಕೆಂದಿದ್ದರೆ ಅಸಭ್ಯ,ಅಸಡ್ಢಾಳ ರಿಯಾಲಿಟಿ ಶೋಗಳನ್ನು ಪ್ರಸಾರ ಮಾಡದಿರಲಿ.ಇಲ್ಲವಾದಲ್ಲಿ ಒಂದಲ್ಲ ಒಂದು ದಿನ ಪ್ರೇಕ್ಷಕರು ಎಚ್ಚೆತ್ತುಕೊಂಡು ಚಾನೆಲ್ ಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬರಬಹುದು.
-ಲಕ್ಷ್ಮೀಶ ಜೆ.ಹೆಗಡೆ
ಬಹಳ ಉತ್ತಮ ಬರಹ. ವಾಸ್ತವಕ್ಕೆ ಹಿಡಿದ ಕನ್ನಡಿ.
ಮನ ಮುಟ್ಟುವ, ಮನ ತಟ್ಟುವ ಮನೋಜ್ನ ಲೇಖನ. ನಾನ೦ತೂ ಇದನ್ನೆಲ್ಲಾ ನೋಡುವುದೇ ಇಲ್ಲ. ಜನ ಎಚ್ಚೆತ್ತುಕೊಳ್ಳಬೇಕು ನೋಡುವವರೇ ಇಲ್ಲವಾದರೆ ಟಿ ಆರ್ ಪಿ ಎಲ್ಲಿ೦ದ ಬರಬೇಕು. ಆದ್ರೆ ಜನ ಯಾವಾಗ ಇದನ್ನೆಲ್ಲಾ ಅರಿಯುತ್ತಾರೆ ಗೊತ್ತಿಲ್ಲ. ಅ೦ತೂ ಎಲ್ಲಕ್ಕೂ ಒ೦ದು ಅ೦ತ್ಯ ಇದ್ದೇ ಇದೆ ಅದ೦ತೂ ಖ೦ಡಿತ ಅಸ್ಟರಲ್ಲಿ ಏನೂ ಹಾಳಾಗದಿರಲಿ ಅನ್ನುವುದು ಆಶಯ.
ಒಳ್ಳೆಯ ಬರಹ ,ನಾನಂತೂ ಇತ್ತೀಚೆಗೆ ಟಿ ವಿ ನೋಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ ,ನೋಡಿ ತಲೆ ನೋವು ತರಿಸಿ ಕೊಳ್ಳುವ ಬದಲು ಸುಮ್ಮನಿರುವುದೇ ವಾಸಿ ಎಂದು
ತುಂಬಾ ಚೆನ್ನಾಗಿ ಬರೆದಿದ್ದೀರಿ! ಲೇಖನ ಇಷ್ಟವಾಯಿತು.. 🙂
ಸುಮಾರು ಜನರ ಮನದ ಮಾತನ್ನು ಸೊಗಸಾಗಿ ಬಿಚ್ಚಿಟ್ಟಿದ್ದೀರಿ. ಅಭಿನಂದನೆಗಳು 🙂
ನಾವು ಭ್ರಮಾಲೋಕದಲ್ಲಿ ಇರುವಂತೆ ಕಲ್ಪನೆಮಾಡಿ ನಮ್ಮನ್ನು ಅದರ ಚಕ್ರವ್ಯುಹಕ್ಕೆ ತಳ್ಳುವುದೇ ದೂರದರ್ಶನ.ಜೀವ ಇಲ್ಲದ ಡಬ್ಬ. ಜೀವ ಇರುವ ನಮ್ಮನ್ನೆಲ್ಲ ಜೀವಿಸಿರುವಗೆ ಕೊಂದು ಬಿಡುತ್ತೆ.
ಅತಿಯಾದ ರಂಜನೆ ತುಂಬಿದ ಬರಹಗಳ ಬದಲಿಗೆ ಇಂಥ ವಿಷಯಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ನಮ್ಮ ಅರಿವು ವಿಸ್ತಾರವಾಗುತ್ತದೆ .ಇಂಥ ನೈಜ ವಿಚಾರ ಎಲ್ಲರಿಗೂ ಗೊತ್ತಿರಬೇಕು .ಉತ್ತಮ ಬರವಣಿಗೆ .ವಿಷಯದ ಆಯ್ಕೆ ಚೆನ್ನಾಗಿದೆ .