ಪುಸ್ತಕ-ನೋಟ

ನಿಸಾರರ ‘ಓದುವ ಹಾಡುವ ಕವಿತೆಗಳು’ _ ಕವನ ಸಂಕಲನ 

Share Button

ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧರಾದ ಶ್ರೀ ನಿಸಾರ್ ಅಹಮದ್ ಅವರು ಜನಿಸಿದ್ದು 05.02.1939 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಯಲ್ಲಿ ತಂದೆ ಕೆ ಎಸ್ ಹೈದರ್ ಹಾಗೂ ತಾಯಿ ಹಮೀದಾ ಬೇಗಂ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಕರ್ನಾಟಕದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ  34 ವರ್ಷಗಳ ಕಾಲ ಅಧ್ಯಾಪನ ವೃತ್ತಿ ಮಾಡಿದರೂ ಇವರ ಪ್ರವೃತ್ತಿ ಕನ್ನಡ ಸಾಹಿತ್ಯ . ಹಲವಾರು ಕವನ ಸಂಕಲನಗಳು, ವಿಮರ್ಶೆ ವಿಚಾರ ಸಾಹಿತ್ಯ ಗ್ರಂಥಗಳು, ಅನುವಾದ ಗ್ರಂಥಗಳನ್ನೂ ಪ್ರಕಟಿಸಿರುವ ಇವರು ದಶವಾರ್ಷಿಕ ಕವಿತೆಗಳು, ದಶವಾರ್ಷಿಕ ವಿಮರ್ಶೆ, ದಶವಾರ್ಷಿಕ ಪ್ರಬಂಧಗಳು, ದಶವಾರ್ಷಿಕ ಸಣ್ಣಕಥೆಗಳು, ಗ್ರಂಥಗಳನ್ನು ಸಂಪಾದನೆ ಮಾಡಿದ್ದಾರೆ . ಮಕ್ಕಳ ಸಾಹಿತ್ಯದಲ್ಲೂ ಪರಿಚಯಾತ್ಮಕ ಮಾಹಿತಿ ಪೂರ್ಣ 5 ಪುಸ್ತಕಗಳು ಪ್ರಕಟವಾಗಿವೆ.

ಇವರ ಗೇಯ ಪೂರ್ಣ ಸುಂದರ ಕವಿತೆಗಳು ಭಾವಗೀತೆಗಳಾಗಿ ಹಾಡಲ್ಪಟ್ಟು ಕ್ಯಾಸೆಟ್ ಲೋಕದಲ್ಲಿ ಹೊಸ ಸಂಚಲನವನ್ನೇ ಎಬ್ಬಿಸಿದವು.

ಇವರ ವಿದ್ವತ್ ಪೂರ್ಣ ಸಾಧನೆಗೆ ಲಭಿಸಿದ ಪ್ರಶಸ್ತಿಗಳು ಅನೇಕ . ಅವುಗಳಲ್ಲಿ ಮುಖ್ಯವಾದುವು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಕುವೆಂಪು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಹಾಗೂ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗಳು .

ನಾನೀಗ ಪರಿಚಯಿಸುತ್ತಿರುವ ಪುಸ್ತಕ ನಿಸಾರ್ ಅವರ ಓದುವ ಹಾಡುವ ಕವಿತೆಗಳು ಎಂಬ ಆಯ್ದ ಕವನ ಸಂಕಲನ .ನುಡಿ ಪುಸ್ತಕದವರು ಪ್ರಕಾಶಿಸಿದ ಈ ಪುಸ್ತಕದ ಪ್ರಥಮ ಮುದ್ರಣ ೨೦೧೪ರಲ್ಲಿ  . ನಿಸಾರರ ಪ್ರಾತಿನಿಧಿಕ ೨೯  ಓದುವ ಕವಿತೆಗಳು ಹಾಗೂ ಭಾವಗೀತೆಗಳಾದ ಪ್ರಾತಿನಿಧಿಕ ಹಾಡುವ ೩೬ ಕವಿತೆಗಳ ಸಂಗ್ರಹ ಇದು. 

ನಿಸಾರರ ಓದುವ ಕವಿತೆಗಳು :
ಒಟ್ಟು 29 ಕವನಗಳಿರುವ ಈ ಭಾಗದಲ್ಲಿ  ಕವಿಯನ್ನು ಕಾಡುವ ಸಂಸ್ಕೃತಿಯ ವಿಭಿನ್ನತೆ ಹಾಗೂ ವಿಚಾರಗಳ ಒಳನೋಟದ ಸಂಘರ್ಷಗಳು  ತುಂಬ ಸೊಗಸಾಗಿ ಅನಾವರಣಗೊಂಡಿರುವ ಕವಿತೆಗಳಲ್ಲಿ “ಅಮ್ಮ ಆಚಾರ ಮತ್ತು ನಾನು”  ಒಂದು. ಯುವಕವಿ ಮದುವೆಯಾಗಲು ಹೊರಟಾಗ ಅವರ ತಂದೆ ತಾಯಿಗೆ ಸಂಪ್ರದಾಯಬದ್ಧ ಹುಡುಗಿ ಬೇಕಿರುತ್ತದೆ ಇವರಿಗೆ ವಿದ್ಯಾವಂತ ಹುಡುಗಿ ಬೇಕಿರುತ್ತದೆ. ಕಡೆಗೆ ಇವರ ಅಭಿಪ್ರಾಯಕ್ಕೆ ಕಟ್ಟುಬಿದ್ದು  ಮನೆಯವರೂ ಒಪ್ಪಿ ವಿದ್ಯಾವಂತ ಹುಡುಗಿಯನ್ನು ಮದುವೆಯಾಗುತ್ತಾರೆ.  ಆ ಹುಡುಗಿಯರ ಆಯ್ಕೆಯ ವಿಷಯದಲ್ಲಿ ನಡೆಯುವ ದ್ವಂದ್ವ ತುಮುಲಗಳನ್ನು ಹಾಸ್ಯಾತ್ಮಕವಾಗಿ ವಿವರಿಸಿರುವುದನ್ನು ಓದಿಯೇ ಅನುಭವಿಸಬೇಕು . ಮದುವೆಯಾದ ನಂತರ ಮೊದಲ ಸಲ ತಿರುಗಾಟಕ್ಕೆ ಹೊರಟಾಗ ಪತ್ನಿಯ ಆಧುನಿಕ ವೇಷವನ್ನು ನೋಡಿ ಖುಷಿಯಾದ ಕವಿ ಕಡೆಗೆ ಪೆಚ್ಚಾಗಿ ಬೇಸ್ತು ಬೀಳುವುದನ್ನು ಈ ಕಡೆಯ ಪ್ಯಾರಾದಲ್ಲಿ ಆಂಟಿ ಕ್ಲೈಮ್ಯಾಕ್ಸ್ ಆಗಿ ಚಿತ್ರಿಸಿರುವುದನ್ನು ನೋಡಿ. 

ಹೊಸಿಲು ಇನ್ನೇನು ದಾಟಬೇಕು_ ಆಗ
“ಬಂದೆ ತಡೆಯಿರಿ” ಎಂದು ಒಳಗೋಡಿ
ಬಂದು “ನಡೆಯಿರಿ” ಎಂದಾಗ
ತಲೆಸುತ್ತಿ ನಾಲಿಗೆಗೆ ಬತ್ತಿ ನಾನಾದೆ ಮೂಕ ನೋಡಿದರೆ
ಉಟ್ಟಿದ್ದಳು ನಮ್ಮಮ್ಮನ ಬುರ್ಖಾ .

“ರಂಗೋಲಿ ಮತ್ತು ಮಗ” ಕವಿತೆಯಲ್ಲಿ ಚಿಕ್ಕಂದಿನಿಂದಲೂ ರಂಗೋಲಿಯ ಬಗ್ಗೆ ವಿಶಿಷ್ಟ ಆಕರ್ಷಣೆ ಬೆಳೆಸಿಕೊಂಡ ಕವಿ ಸದಾ ಅದನ್ನು ಗಮನಿಸಿದ್ದರು ಮನೆಯಲ್ಲಿ ಬಿಡಿಸಲು ಹೋಗಿ ಕಾಫಿರ್ ಎಂದು ತಾಯಿಯ ಕೈಲಿ ಬೈಗುಳ ತಿಂದಿದ್ದರು ಕೂಡ. ಮುಂದೆ 6 ವರ್ಷದ ತಮ್ಮ ಮಗನೊಂದಿಗೆ ಬೀದಿಯಲ್ಲಿ ಹೊರಟಾಗ ಮಗನೂ ಆ ಬಗ್ಗೆ ಕುತೂಹಲ ತೋರಿಸಿದಾಗ ಅದರ ಬಗ್ಗೆ ವಿವರಣೆ ನೀಡಿ ನಮ್ಮ ಸಂಸ್ಕೃತಿಗೆ ಅದು ಸಲ್ಲದು ಎನ್ನುತ್ತಾರೆ .ಆಗ ಮಗ ಇವರು ಮನೆಯ ಮುಂದೆ ಹೆಸರು ಹಾಕಿಸಿಕೊಂಡಿರುವುದನ್ನು ನೋಡಿ ಅದು ಖುರಾನಿನಲ್ಲಿ ಹೇಳಿದೆಯೇ ಎಂದು ಕೇಳುತ್ತಾನೆ.  ಆಗ ತಮ್ಮ ಮನದ ಭಾವಗಳನ್ನು ಪ್ರಚುರಪಡಿಸಿರುವ ರೀತಿ ಹೀಗೆ :

ಆತ್ಮಸಾಕ್ಷಿಯ ಕತ್ತು ಹಿಚುಕಿ ಬಂದವನನ್ನ ಮಗುವೆನ್ನಬಹುದೇ ಇವನನ್ನ?
ಭೋಳೆ ಪ್ರಶ್ನೆ ಎಲ್ಲೆಲ್ಲಿಗೋ ಕೈಚಾಚಿ
ಪೇಚಿಗೆಡಿಸಿತು ನನ್ನ
ಆಚರಣೆ ನಂಬಿಕೆಗಳ ಮಡಿಕೆ ಮಡಿಕೆಯ ರಾಚಿ

ಕವಿ ತನ್ನ ದ್ವಂದ್ವವನ್ನು ತುಮುಲವನ್ನು ಸ್ವಲ್ಪವೂ ಮುಚ್ಚಿಡದೆ ನಿಸ್ಸಂಕೋಚವಾಗಿ ಓದುಗರ ಮುಂದೆ ಇಡುವ ರೀತಿ ನಿಜಕ್ಕೂ ವಿಸ್ಮಯಗೊಳಿಸುತ್ತದೆ.

ಹಾಗೆಯೇ ವಾಸ್ತವತೆಯನ್ನು ತೆರೆದಿಡುವ ನೈಜ ಸ್ಥಿತಿಯನ್ನು ಅನಾವರಣಗೊಳಿಸುತ್ತಲೇ ಅದಕ್ಕೊಂದು ಹಾಸ್ಯದ ಹೂರಣ ತುಂಬುವ ನಗ್ತೀರಾ ನನ್ಹಿಂದೆ ಕವನ ವಿಶ್ವವಿದ್ಯಾನಿಲಯಗಳಲ್ಲಿ ಇಂದು ಡಾಕ್ಟರೇಟ್ ಪದವಿಯನ್ನು ಪಡೆಯಬೇಕಾದರೆ ಮಾಡಬೇಕಾದ ಸರ್ಕಸ್ಸನ್ನು   ವರ್ಣಿಸುತ್ತದೆ.  “ಅಪಾರ ಪ್ರಭು ನಿನ್ನ ಕರುಣೆ” ಯಲ್ಲಿ ಒಂದು ರೀತಿ ವ್ಯಂಗ್ಯವಾಗಿ ದೇವರ ಕರುಣೆಯ ವ್ಯಾಪ್ತಿ ವೈಶಾಲ್ಯತೆಯನ್ನು ಕುರಿತು ಹೇಳುತ್ತಾರೆ.

ಗೃಹಪ್ರವೇಶದ ಉಡುಗೊರೆ ಕವಿತೆಯಲ್ಲಿ ಬೇರೆ ಕಾಣಿಕೆಯಾಗಿ ಬಂದ ವಸ್ತುಗಳೆಲ್ಲ ಕಾಲಕ್ರಮೇಣ ಹಳತಾಗಿ ಗುಜರಿ ಮೂಲೆ ಸೇರುವಾಗ ಒಬ್ಬ ತಂದುಕೊಟ್ಟ ನಿತ್ಯ ಮಲ್ಲಿಗೆಯ ಬಳ್ಳಿ ಹಬ್ಬಿ ಮನೆಯೆಲ್ಲಾ ಗಮಗಮಿಸುವ ವಸ್ತುಸ್ಥಿತಿಯನ್ನು ವರ್ಣಿಸುತ್ತಾ ಪ್ರಕೃತಿಯ ಚಿರಂತನತೆ ನಿರಂತರತೆಯ ಸೊಬಗನ್ನು ಪ್ರಾಮುಖ್ಯತೆಯನ್ನು ಓದುಗರ ಮನಸ್ಸಿನಲ್ಲಿ ಬಿತ್ತುವಲ್ಲಿ ಸಫಲರಾಗುತ್ತಾರೆ .

ಹಾಗೆಯೇ ಮತ್ತೊಂದು ಇಷ್ಟವಾದ ಕವಿತೆ “ಒಂದು ಗುಲ್ ಮೊಹರ್”  ಮೇ ತಿಂಗಳು ಬಂತೆಂದರೆ ದಾರಿಯುದ್ದಕ್ಕೂ ಸಾಲುಮರಗಳಲ್ಲಿ ಹೂ ಬಿಟ್ಟು ಕಣ್ಮನ ತಣಿಸುವ ಗುಲ್ ಮೊಹರ್ ಚಂದದ ಪದಗಳಲ್ಲಿ “ಹರುಷದ ತವರು” ಪ್ರಧಾನಿಯಾಗಿ ಇರುವ “ಜವಾಹರಲಾಲ್ ನೆಹರು” ಆದಂತೆ ಉಮರನ ರುಬಾಯಿಯಂತೆ ಕಂಗೊಳಿಸುತ್ತದೆ . ಬಿಸಿಲೆಣ್ಣೆಗೆ ಕೊಂಬೆಯ ಬತ್ತಿ ಹತ್ತಿ ಜಗಜಗಿಸುವ ದೀಪದಂತೆ ತೋರುತ್ತದೆ ಕವಿಯ ಕಣ್ಣಿಗೆ.  ಆ ಪದ್ಯದ ಕಡೆಯ 4 ಸಾಲುಗಳು ನಿಮ್ಮ ಓದಿಗಾಗಿ :

ಮೇ ಹೊತ್ತಿಹ ಮೇನೆಯ ಮದುವಣಗಿತ್ತಿ 
ಅಹಹ ನಯನಮನೋಹರಂ 
ರಂಗಿನ ದಿರಿಸಿನ ಚೈತ್ರಾವೇಶ 
ಗುಲ್ ಮೊಹರ್ ಅಲ್ಲ ಗುಲ್ ಮೊಹರಂ

ಇಲ್ಲಿ ಉಪಯೋಗಿಸಿರುವ ಪದಗಳ ವೈಶಿಷ್ಟ್ಯವನ್ನು ಗಮನಿಸಿ.  ಗುಲ್ ಎಂದರೆ ಹೂವು ಮೊಹರಂ ಎಂದರೆ ರಂಗು ರಂಗಿನ ಹಬ್ಬ. ಹೂವಿನ ಮೊಹರಂ ಆಗಿ ಕಾಣುತ್ತದೆ ಗುಲ್ ಮೊಹರ್ ಮರಗಳ ಸಾಲು ಕವಿ ನೋಟಕ್ಕೆ.  ಹಾಗೆ ಅದೇ ದೃಶ್ಯವನ್ನು ಯಥಾವತ್ತಾಗಿ ಓದುಗನ ಮನೋ ನಯನದ ಮುಂದೆ ತಂದು ನಿಲ್ಲಿಸುತ್ತದೆ ಕೂಡ.  

ಇನ್ನೂ ನಿಸಾರರ ಹಾಡುವ ಕವಿತೆಗಳ ಬಗ್ಗೆ ಕನ್ನಡಿಗರಿಗೆ ಪರಿಚಯಿಸುವ ಹಾಗೈನಿಲ್ಲ.  ವಿವಿಧ ಗಾಯಕರ ಕಂಠದಲ್ಲಿ ಮನೆಮನೆಯಲ್ಲೂ ಹಾಡಿ ಮನೆಮಾತಾಗಿರುವ ಕವಿತೆಗಳು ಅವು. ಕನ್ನಡ ನಾಡಿನ ಸುಂದರ ಪ್ರಕೃತಿಯನ್ನು ವರ್ಣಿಸುವ ನಿತ್ಯೋತ್ಸವದ ಸಾಲು ಸಾಲುಗಳು ತಾಯಿಯ ಮಹಿಮೆಯನ್ನು ಸೌಂದರ್ಯದ ಹಿರಿಮೆ ಗರಿಮೆಯನ್ನು ಕವಿಯ ಭಾವ ಭಾಷೆಯ ಒಲುಮೆಯನ್ನು ಎತ್ತಿ ಎತ್ತಿ ತೋರಿಸುತ್ತದೆ.

ಇನ್ನೂ ‘ಕುರಿಗಳು ಸಾರ್ ಕುರಿಗಳು’ ಮೈಸೂರು ಅನಂತಸ್ವಾಮಿಯವರ ಕೀಟಲೆ ಭರಿತ ಧ್ವನಿಯಲ್ಲಿ ಕೇಳದ ಕನ್ನಡಿಗರೇ ಇಲ್ಲ ಆಹಾ ಎಂಥ ಸಾಲುಗಳು . ತುಂಬಾ ಖುಷಿ ಕೊಟ್ಟದ್ದು ಕುರಿಗಳು ಕೊಟ್ಟು ಕಟುಕನ ಮಚ್ಚನ್ನು ವರ್ಣಿಸುವ ರೀತಿ:

“ಅವನ ಮಚ್ಚು ಆಹಾ!
,ಏನು ಝಳಪು ಏನು ಹೊಳಪು, ಏನು ಜಾದೂ, ಏನು ಮೋಹ!
ಆ ಹೊಳಪಿಗೆ ದಂಗಾಗಿ ಕಣ್ಣಿಗದೇ ರಂಗಾಗಿ ಒಳಗೊಳಗೇ ಜಂಗಾಗಿ………..

ಇನ್ನೂ ಬೆಣ್ಣೆಗಳ್ಳ ಕೃಷ್ಣನ ಆಟವನ್ನು ಬಣ್ಣಿಸುವ ರೀತಿ ನಯನ ಮನೋಹರ! ಮುಖಕ್ಕೆ ಬೆಣ್ಣೆ ಮೆತ್ತಿದ ಕೃಷ್ಣನ ಸೊಗಸಾದ ರೂಪವನ್ನು ತಂದು ನಿಲ್ಲಿಸುವ ಪದಗಳ ಲಾಲಿತ್ಯ . ಇದನ್ನು ಮೆಚ್ಚದ ಕಿವಿಗಳುಂಟೇ ಎಂದು ನನಗೆ ಸಂದೇಹ .

“ಕರುನಾಡ ಹಿರಿಮೆ” “ಕನ್ನಡ” ಕವನಗಳಲ್ಲಿ ಕನ್ನಡವನ್ನು ಬಣ್ಣಿಸುವ ರೀತಿ ಕರ್ಣಾನಂದವನ್ನುಂಟು ಮಾಡುತ್ತವೆ . ಕನ್ನಡ ಕವಿತೆಯ ಕೆಲವು ಸಾಲುಗಳು ಹೀಗಿವೆ :

ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು
ರವಿ ಶಶಿ ತಾರೆಯ ನಿತ್ಯೋತ್ಸವವದು
ಸರಸತಿ ವೀಣೆಯ ಸೊಲ್ಲು
ಅತ್ಯಂತ ಸುಂದರ ಉಪಮೆ ಅಲ್ಲವೇ ?

“ಮಹಿಮಾವಂತೆ ಭಾರತಿ” ಹಾಗೂ “ಸ್ವಾತಂತ್ರದ ಹಣತೆ” ಕವನಗಳಲ್ಲಿ ದೇಶಭಕ್ತಿಯ ಕಿಚ್ಚನ್ನು ಹೊತ್ತಿಸುತ್ತಾರೆ ಕವಿ . ಇನ್ನು ಭಾವಪೂರ್ಣ ಅಂತರಂಗದ ಆಲಾಪ ಗಳಾಗುವ ಈ ಸದಾ ಕಾಡುವ ಭಾವಗೀತೆಗಳನ್ನು ಮರೆಯಲು ಖಂಡಿತ ಸಾಧ್ಯವೇ ಇಲ್ಲ .

“ಎಲ್ಲ ಮರೆತಿರುವಾಗ” ಕವಿತೆಯ ‘ಭವ್ಯ ಭವಿತವ್ಯಕ್ಕೆ ಮುಖಮಾಡಿ ನಿಂತಿರುವೆ ಬೆನ್ನಲ್ಲೇ ಇರಿಯದಿರು ಓ ಚೆನ್ನ ನೆನಪೇ’ ಎಂದು ಕೇಳಿಕೊಳ್ಳುವ ಭಗ್ನ ಮನದ ಬಿನ್ನಹ ಎದೆ ತಂತಿಯ ವೀಣೆಗಳನ್ನು ಹಾಗೆಯೇ ಮೀಟಿಬಿಡುತ್ತದೆ.

“ಮತ್ತದೇ ಬೇಸರ” ಕವಿತೆಯಲ್ಲಿನ

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ

ಪ್ರಿಯನ ಬರುವಿಕೆಗಾಗಿ ಉತ್ಕಂಠತೆಯಿಂದ ಕಾಯುತ್ತಿರುವ ಪ್ರೇಯಸಿಯ ಮನದಾಳದ ತುಮುಲವನ್ನು ಭಾವ ಭಾವನೆಗಳನ್ನು ಶಬ್ದದಲ್ಲಿ ಕಟ್ಟಿಹಾಕುವ ಸಮರ್ಥ ಪ್ರಯತ್ನವೆನಿಸುತ್ತದೆ .

“ನನ್ನ ನಲಿವಿನ ಬಳ್ಳಿ” ಯಲ್ಲಿ ‘ಇಂದು ನಾ ಮೈಮರೆತು ಒಲೆಯುವೆ ಸೊಗ ಬೆರೆತು ಆಸೆಗಳ ಚಿವುಟದಿರು ಹಕ್ಕಿಯಂತೆ ‘ ಸ್ವಚ್ಛಂದ ಹಕ್ಕಿಯಾಗಿ ವಿಹರಿಸಬಯಸುವ ಮನವನ್ನು ಲೋಕದ ಮಾತುಗಳೇ ಹಿಡಿದು ಕಟ್ಟುವ ಪ್ರಯತ್ನ ಮಾಡಬೇಡಿ ಎಂದು ಎನ್ನುವ ಮಾತುಗಳು ಎಷ್ಟು ಅರ್ಥಪೂರ್ಣ!

ಇನ್ನು “ನೀ ನುಡಿಯದಿರಲೇನು” ಕವಿತೆಯಲ್ಲಿ ಕಾಣುವ ಅಗಲಿಕೆಯ ಭಾವವನ್ನು , ಮಡುಗಟ್ಟಿದ ವಿಷಾದವನ್ನು ಕವಿ “ಮಾತುಗಳೇತಕೆ ನಿನ್ನ ನೋಟವೇ ಸಾಕು” ಎಂದು ಹೇಳುತ್ತಾರೆ . ಕಡೆಯ ಸಾಲುಗಳಂತೂ ಇನ್ನೆಂದೂ ಒಂದಾಗದ ಪ್ರೇಮಿಗಳ ಮನದ ಭಾವನೆಗಳಿಗೆ ಭಾಷ್ಯ ಬರೆಯುತ್ತದೆ . ಕವಲೊಡೆದ ದಾರಿಗಳಲ್ಲಿ ಮತ್ತೆ ಎಂದೂ ಒಂದಾದಗದಂತಹ ಭವಿಷ್ಯದಲ್ಲಿ ನಗೆಮೊಗ ಒಂದೇ ನೆನಪಿನ ಭಿತ್ತಿಯಲ್ಲಿ ಸದಾ ಇರಲಿ ಎಂದು ಬಯಸುವ ಈ ಸಾಲುಗಳು ಕಣ್ಣಿನಲ್ಲಿ ನೀರನ್ನೇ ತರಿಸುತ್ತವೆ .

ಮರೆತೆಲ್ಲ ಕೊನೆಗೊಮ್ಮೆ ಮನಬಿಚ್ಚಿ ನಕ್ಕುಬಿಡು
ಬೇರೆ ಹಾದಿಯ ನಾವು ಹಿಡಿಯಬಹುದು .

ಕೆಲವೊಮ್ಮೆ ಮಾತುಗಳ ಪ್ರಪಂಚವೇ ಬೇಡ ಮೌನದ ಚಿಪ್ಪೇ ಸಾಕು ಎಂದೆನಿಸುವ ಸಂಧರ್ಭದಲ್ಲಿ “ಬೇಸರಾಗಿದೆ ಮಾತು” ಕವನದ ಈ ಸಾಲುಗಳು ನೆನಪಾಗುತ್ತವೆ.

ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ ಕನಸುವಂತೆಯೆ ಮೊಳಕೆಗೆ
ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ
ಹೊಸತು ಬದುಕಿನ ಬಳಕೆಗೆ

ಅಂತೆಯೇ ಕಳೆದ ಕ್ಷಣಗಳ ಸವಿ ಮೆಲುಕಿಗೆ “ನಾ ನಿನ್ನ ಕಂಡಾಗ” ಕವನದ ಸಾಲುಗಳು ಸಾಕ್ಷಿಯಾಗುತ್ತವೆ . ಕವಿಯ ಆಶಯದಂತೆ ಎಲ್ಲರ ಆಶಯವೂ ಕೂಡ ಅಲ್ಲವೇ

ಆ ಮೊದಲ ನೋಟದಂತೆ ಮಿಕ್ಕಿರಲಿ ನಿನ್ನ ಸೊಬಗು
ಅನುಗಾಲ ನನ್ನ ಮನಕ್ಕೆ ನೀಡಿರಲಿ ತುಂಬು ಬೆರಗು

“ಕಳೆ ಎಷ್ಟೇ ಇದ್ದರೇನು ಕನಸಿರದ ಬಾಳು ಬಾಳೆ
ಮಳೆಬಿಲ್ಲ ಸಿಂಗರಿಸಿದ ಕರಿಮುಗಿಲ ಮಾಲೆ “

ಎಂದು ನಿಸ್ಸಾರ ಬದುಕಿನಲ್ಲಿ ಕನಸಿನ ಮಹತ್ವವನ್ನು ತೋರುವ ಈ ಸಾಲುಗಳು ಸಹ ನಮ್ಮ ಬಾಳನಂನೇ ಸಮೀಕರಿಸಿದಂತೆ ಅನ್ನಿಸುತ್ತದೆ.

ವಾಸ್ತವ ಲೋಕ ಮಾನಸ ಲೋಕದ ಅಂತರಂಗ ಬಹಿರಂಗ ಗಳನ್ನೆಲ್ಲ ಚಿತ್ರಿಸುವ ಕವಿಯ ಮನಸ್ಸು ಅಂತರಾಳದ ಒಳಹೊಕ್ಕು ಆಧ್ಯಾತ್ಮದ ಪರಿ ಹಿಡಿದು ಕಾಣದ ಶಕ್ತಿಯ ಬಗ್ಗೆ ಯೋಚಿಸುತ್ತಾ ಅದರ ಬಗ್ಗೆ ಚಿಂತಿಸುವುದು ಚೇತನಾಚೇತನ ದ ತಿರುಳು ಹಾಗೂ ಅಸೀಮ ಶಕ್ತಿ ಕವನಗಳ ಮೂಲಕ .

ಬೇಸರದ ಛಾಯೆ ಇರಲಿ ಸಂತಸದ ನವೋಲ್ಲಾಸ ವೇ ಇರಲಿ ಪ್ರಕೃತಿಯ ಸುಂದರ ಬಣ್ಣನೆಯೇ ಇರಲಿ ನಾಡದೇವಿಯ ದೇಶಭಕ್ತಿಯ ಚಿಂತನೆಗಳೇ ಇರಲಿ ನಿಸಾರ್ ಅಹಮದ್ ಅವರು ಬರೆಯದ ವಿಷಯವಿಲ್ಲ . ಹೊಸ ಹೊಸ ಆಯಾಮ ಹೊಳಹುಗಳ ಮೇಲೆ ಬೆಳಕು ಚೆಲ್ಲುವ ಕವನಗಳು ನಿಜಕ್ಕೂ ವಿಚಾರಪ್ರಚೋದಕ ಮನರಂಜನಾತ್ಮಕ ಹಾಗೆಯೇ ಚಿಂತನ ಮಂಥನಕೆ ಪ್ರೇರಕವೂ ಸಹ .

ಅಗಾಧ ಹರಹಿನ ವಿಸ್ತಾರ ವೈಶಾಲ್ಯದ ಅವರ ಕಾವ್ಯ ಶಕ್ತಿಯ ಒಂದು ಪಕ್ಷಿ ನೋಟವಷ್ಟೇ ಇದು. ಅವರದೇ ಅಸೀಮ ಶಕ್ತಿ ಕವನದ ಆಶಾವಾದದ ಮುನ್ನುಡಿಯಂತಿರುವ ಕಡೆಯ ಸಾಲುಗಳ ಮೂಲಕ ಈ ಬರಹಕ್ಕೂ ಒಂದು ಅಲ್ಪ ವಿರಾಮ.

ತನು ಏರಿಗೆ ಮನ ನೀರಿಗೆ
ಅನುಮಾನ ದ್ವಂದ್ವವೋ ಜೀವನ
ಋತುವೇರುಪೇರಿನ ವಿಷಮಕೆ,
ನೀನಿರುವೆ ಸಮತೆಯ ಶ್ರಾವಣ

–ಸುಜಾತಾ ರವೀಶ್

One comment on “ನಿಸಾರರ ‘ಓದುವ ಹಾಡುವ ಕವಿತೆಗಳು’ _ ಕವನ ಸಂಕಲನ ”

  1. ನಿಸಾರರ… ಕವನ ವಿಶ್ಲೇಷಣೆ.. ನವಿರಾಗಿ ಅನಾವರಣ ಗೊಂಡಿದೆ ಸೋದರಿ ಸುಜಾತಾ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *