ಪರಾಗ

ನೀಳ್ಗತೆ : ವಿಚ್ಛೇದನ – ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಅಂದು ರಾತ್ರಿ ಸಂತೋಷ್ ಫೋನ್ ಮಾಡಿದ. “ಅಮ್ಮ ಇವತ್ತು ಕೆಲಸಕ್ಕೆ ಜಾಯಿನ್ ಆದೆ. 80,000/- ಸಂಬಳ. ನಾನು ಅಕ್ಷಯ್ ಜೊತೆಯಲ್ಲಿದ್ದೇನೆ. ನಾನೂ ಖರ್ಚುಶೇರ್ ಮಾಡಿಕೊಳ್ತೇನೆ. ನಮ್ಮ ಕಂಪನಿ ಬಸ್ ಇದೆ. ಬಸ್ಟಾಂಡ್ ನಮ್ಮನೆಗೆ 1 ಕಿ.ಮೀ ದೂರ. ನಾವೇ ರಾತ್ರಿ ಅಡಿಗೆ ಮಾಡ್ತೇವೆ. ಬೆಳಿಗ್ಗೆ ಒಬ್ಬ ಹೆಂಗಸು ಬಂದು ತಿಂಡಿ ಮಾಡ್ತಾರೆ. ಮಧ್ಯಾಹ್ನ ‘ಫುಡ್‌ಕೋರ್ಟ್’ನಲ್ಲಿ ಊಟ.”
“ಈಗ ಸಮಾಧಾನವಾಯ್ತು.”
“ಅತ್ತೆ ಹೇಗಿದ್ದಾರೆ?”
ಅವಳು ಅತ್ತಿಗೆಯ ಸ್ಥಿತಿ ವಿವರಿಸಿದಳು.
“ಸಂಜೀವ ಹೇಗಿದ್ದಾನೆ?”
“ಈ ಊರಿನಲ್ಲಿ ಅವನ ಫ್ರೆಂಡ್ ಇದ್ದಾನೆ. ಅವನ ಜೊತೆ ಅವನ ರೂಮ್‌ನಲ್ಲಿರ‍್ತಾನೇಂತ ಕಾಣತ್ತೆ…..”
“ಅಮ್ಮ ನಾನು ಅವನ ಓದಿನ ಖರ್ಚು ವಹಿಸಿಕೊಳ್ತೇನೆ. ನೀನು ಯೋಚಿಸಬೇಡ.”
“ನಿನ್ನ ಖರ್ಚು ವೆಚ್ಚ ನೋಡಿಕೋ. ಬಾಂಬೆ ತುಂಬಾ ಕಾಸ್ಟ್ಲೀ ಊರೂಂತ ಕೇಳಿದ್ದೇನೆ. ಒಂದೆರಡು ತಿಂಗಳು ನಾನೇ ಸಂಜಯ್ ಖರ್ಚು ನೋಡಿಕೊಳ್ತೇನೆ.”
“ಆಗಲಮ್ಮ” ಎಂದ ಸಂತೋಷ್.

ಮರುದಿನ ಆ ಊರಿನಲ್ಲಿರುವ ಬಿ.ಎಡ್ ಕಾಲೇಜ್‌ಗಳ ಬಗ್ಗೆ ತಿಳಿದುಕೊಂಡಳು. ನಂತರ ಅತ್ತಿಗೆಯನ್ನು ಟ್ರೀಟ್ ಮಾಡುತ್ತಿದ್ದ ಡಾಕ್ಟರನ್ನು ಭೇಟಿಮಾಡಿದಳು.
“ಅವರು ಒಂದು ತಿಂಗಳಾದರೂ ಫಿಸಿಯೋ ಥೆರಫಿಸ್ಟ್ ಸಹಾಯ ತೊಗೋಬೇಕು. ಜೊತೆಯಲ್ಲಿ ಪುಷ್ಟಿಯಾದ ಆಹಾರ ತೆಗೆದುಕೊಳ್ಳಬೇಕು. ಮೈಯಲ್ಲಿ ಶಕ್ತೀನೇ ಇಲ್ಲದಿದ್ರೆ ಏನು ಚೇತರಿಸಿಕೊಳ್ತಾರೆ ಹೇಳಿ.”
“ಯಾರಾದ್ರೂ ಫಿಸಿಯೋ ಥೆರಫಿಸ್ಟ್ ನ ನೀವೇ ಸಜೆಸ್ಟ್ ಮಾಡಿ ಡಾಕ್ಟರ್.”
“ನಿಮ್ಮನೆ ಹತ್ತಿರ ರಾಡ್ತಿಗಸ್ ಎನ್ನುವ ಫಿಸಿಯೋ ಥೆರಫಿಸ್ಟ್ ಇದ್ದಾರೆ. 40-45 ವರ್ಷ. ಒಳ್ಳೆಯ ವರ್ಕರ್. ಬೇರೆಯವರು ಒಂದು ಸಿಟ್ಟಿಂಗ್‌ಗೆ 750 ಚಾರ್ಜ್ ಮಾಡಿದರೆ ಇವರು 500 ರೂ. ಚಾರ್ಜ್ ಮಾಡ್ತಾರೆ.”
“ಆಗಲಿ. ಅವರ ಫೋನ್ ನಂಬರ್ ಕೊಡಿ. ನಾನೇ ಕಾಂಟ್ಯಾಕ್ಟ್ ಮಾಡ್ತೀನಿ.”
“ಹಾಗೇ ಮಾಡಿ” ಎಂದರು ಡಾಕ್ಟರ್ ಸುದರ್ಶನ್.

ರಾತ್ರಿ ಅಶ್ವಿನಿ ರಾಡ್ರಿಗಸ್‌ಗೆ ಫೋನ್ ಮಾಡಿದಳು. ಅವರು ಮರುದಿನದಿಂದ ಬೆಳಿಗ್ಗೆ ೯ ಗಂಟೆಗೆ ಬರುವುದಾಗಿ ಹೇಳಿದರು.
“ಡಾ|| ಸುದರ್ಶನ್ ಒಂದು ಹೊತ್ತಿಗೆ ೫೦೦ ರೂ. ಅಂತ ಹೇಳಿದ್ದಾರೆ. ನಾನು ಪೇ ಮಾಡ್ತೀನಿ. ಮನೆ ಗೊತ್ತಿದೆಯಾ?”
“ಗೊತ್ತಿದೆ ಮ್ಯಾಡಂ.”
ಅಶ್ವಿನಿ, ಅತ್ತಿಗೆಗೆ ವಿಚಾರ ತಿಳಿಸಿದಳು.
“ಅತ್ತಿಗೆ ನಾನು ಇಲ್ಲಿರುವವರೆಗೂ ನೀವು ನಾನು ಹೇಳಿದ ಹಾಗೆ ಕೇಳಬೇಕು. ನಾನು ನಿಮ್ಮ ದೊಡ್ಡ ಮಗಳಲ್ವಾ?”
“ಆಗಲಿ ಕಣೆ. ನಿನ್ನಿಂದ ನಾನು ಮೊದಲಿನಂತಾದರೆ ಸಾಕು.”

ಬಾಲಚಂದ್ರ ಏನೂ ಮಾತಾಡಲಿಲ್ಲ. ಅಶ್ವಿನಿಯ ಸ್ವಭಾವ ಅವನಿಗೆ ಗೊತ್ತಿತ್ತು. ಯಾವುದಾದರು ನಿರ್ಧಾರ ತೆಗೆದುಕೊಂಡರೆ ಜಪ್ಪಯ್ಯ ಅಂದರೂ ಬದಲಾಯಿಸುತ್ತಿರಲಿಲ್ಲ.
ರಾತ್ರಿ ಶಾಲಿನಿ ಬಂದಮೇಲೆ ಅಶ್ವಿನಿ ಕೇಳಿದಳು. “ನಾಳೆ ರಜ ಹಾಕಕ್ಕೆ ಆಗುತ್ತದಾ?”
“ಯಾಕೆ ಅತ್ತೆ?”
“ಹಾಕಕ್ಕಾಗತ್ತೋ ಇಲ್ಲವೋ ಹೇಳು.”
“ನಾಳೆ ರಜ ಹಾಕಿದ್ದೇನೆ. ಸಂಜು, ಅವನ ಫ್ರೆಂಡ್, ಆ ಫ್ರೆಂಡ್ ತಂಗಿ ಸ್ನೇಹ, ನಾನು ಸಿನಿಮಾಕ್ಕೆ ಹೊರಟಿದ್ದೇವೆ.”
“ಒಳ್ಳೆಯದು. ಬೆಳಿಗ್ಗೆ ನೀನು ಬೆಳಿಗ್ಗೆ ಸಂಜು ಜೊತೆ ಬಿ.ಎಡ್. ಕಾಲೇಜ್‌ಗೆ ಹೋಗಿ, ಅಡ್ಮಿಷನ್ ಯಾವಾಗ ಕೇಳಿಕೊಂಡು ಬಾ.”
“ಬಿ.ಎಡ್‌ಗೆ ಯಾರು ಸೇರ‍್ತಾರೆ ಅತ್ತೆ?”
“ನಾನು………..”
“ತಮಾಷೆ ಮಾಡ್ತಿದ್ದೀರಾ?”
“ನಿನಗೋಸ್ಕರಾನೇ ಬಿ.ಎಡ್ ಬಗ್ಗೆ ವಿಚಾರಿಸ್ತಿರೋದು. ನೀನು ಬಿ.ಎಡ್. ಮಾಡಬೇಕು ಅಷ್ಟೆ…….”
“ಹಾಗಲ್ಲ ಅತ್ತೆ. ನಾನು ಓದಕ್ಕೆ……..”
“ಹಣಕಾಸಿನ ಬಗ್ಗೆ ಯೋಚನೆ ಮಾಡಬೇಡ. ಇನ್ನೇನು ಪ್ರಶ್ನೆಗಳನ್ನೂ ಕೇಳಬೇಡ…..”
ಶಾಲಿನಿಗೆ ಖುಷಿಯಾಯಿತು.

ಸಂಜೂ ಮಲಗಕ್ಕೆ ಬಂದಾಗ ಅಶ್ವಿನಿ ಕೇಳಿದಳು.
“ಶಾಲಿನೀನ್ನ ತುಂಬಾ ಹಚ್ಚಿಕೊಂಡಂತಿದೆ.”
“ಹೌದಮ್ಮ. ನನಗೆ ಅವಳನ್ನು ನೋಡಿದ ಮೇಲೆ ಶಾಲಿನಿಯ ತರಹದ ತಂಗಿ ಇರಬೇಕು ಅನ್ನಿಸ್ತಿದೆ…. ಅದಕ್ಕೆ ನನಗೆ ಶಾಲಿನಿ ಇಷ್ಟ.”
“ಅವಳನ್ನೇ ನಿನ್ನ ತಂಗಿ ಅಂದು ಕೋ. ನಾಳೆ ಬೆಳಿಗ್ಗೆ ಅವಳ ಜೊತೆ ಬಿ.ಎಡ್ ಕಾಲೇಜಿಗೆ ಹೋಗಿ ಅಡ್ಮಿಷನ್ ಬಗ್ಗೆ ವಿಚಾರಿಸಿಕೊಂಡು ಬಾ. ಅವಳು ಬಿ.ಎಡ್ ಮಾಡಿದರೆ ಒಳ್ಳೆಯದು.
“ಆಗಲೀಮ್ಮ. ಅಮ್ಮಾ ಇನ್ನೊಂದು ವಿಷಯ.”
“ಏನು?”
“ಅಪ್ಪ ನನಗೆ ಫೋನ್ ಮಾಡಿದ್ರು………..”
“ಆಶ್ಚರ್ಯ!”
“ನೀನು ಅವರ ಕಾಲ್ ರಿಸೀವ್ ಮಾಡ್ತಿಲ್ಲವಂತೆ. ನಿಮ್ಮಮ್ಮಂಗೆ ಫೋನ್ ಮಾಡಕ್ಕೆ ಹೇಳು” ಅಂದ್ರು.
“ಸರಿ” ಎಂದಳು ಅಶ್ವಿನಿ. ರಾತ್ರಿ ಅವಳು ಶಶಿಕಾಂತ್‌ಗೆ ಫೋನ್ ಮಾಡಿ ಅರ್ಧಗಂಟೆ ಮಾತಾಡಿದಳು.


ಅಂದು ಭಾನುವಾರ ಅಭಯ್ ಲೇಟಾಗಿ ಎದ್ದ. ಅವನು ಗಂಟೆ ನೋಡಿದ. ಒಂಭತ್ತು ಗಂಟೆಯಾಗಿ ಹತ್ತು ನಿಮಿಷಗಳಾಗಿದ್ದವು. ಅವನು ಬ್ರಷ್ ಮಾಡಿ ಡಿಕಾಕ್ಷನ್ ಹಾಕಿದ. ಕರೆಗಂಟೆ ಶಬ್ಧವಾಯಿತು. ಜಾನೂ ಬಂದಿದ್ದಳು.
“ಅಣ್ಣ ಹಾಲು ತಂದಿದ್ದೇನೆ. ನೀವು ಈ ಕಡೆ ಬನ್ನಿ. ನಾನು ಕಾಫಿ ಮಾಡ್ತೀನಿ.”
ಅವಳು ಕೊಟ್ಟ ಕಾಫಿ ಕುಡಿಯುತ್ತಾ ಪೇಪರ್ ಓದುತ್ತಿದ್ದಾಗ ಶಶಿಕಾಂತ ಒಳಗೆ ಬಂದ.
“ಹಾಯ್ ಶಶಿ. ಇದೇನೋ ಅಪರೂಪ ದರ್ಶನ?”
“ಕೆಲಸ ಇತ್ತು ಬಂದೆ. ಸ್ನಾನ ಮಾಡು ತಿಂಡಿಗೆ ಹೊರಗೇ ಹೋಗೋಣ.”
“ಅಶ್ವಿನಿ ಇಲ್ಲಾಂತ ನಿನಗೆ ಹೇಗೆ ಗೊತ್ತಾಯ್ತು?”
“ಅವರಿದ್ದಿದ್ರೆ ಇಷ್ಟು ಹೊತ್ತಿಗೆ ನನಗೂ ಕಾಫಿ ತರ‍್ತಿದ್ರು.”
“ಹುಂ. ಮಾಲೂರಿಗೆ ಹೋಗಿದ್ದಾಳೆ. ಸಂಜೂನ್ನೂ ಕರ‍್ಕೊಂಡು ಹೋಗಿದ್ದಾಳೆ.”
“ನೀನು ಸ್ನಾನ ಮಾಡಿ ಬಾ.”

ಅಭಯ್ ಸ್ನಾನಕ್ಕೆ ಹೋದ. ಶಶಿಕಾಂತ್ ಟೇಬಲ್ ಮೇಲಿದ್ದ ಪ್ಲವರ್‌ವಾಜ್‌ನಲ್ಲಿದ್ದ ಕೀ ತೆಗೆದುಕೊಂಡು ಮುಂದಿನ ರೂಮು ಬಾಗಿಲು ತೆಗೆದ. ಅದು ಅಭಯ್ ಪೇಷೆಂಟ್ಸ್ಗಳನ್ನು ನೋಡುವ ರೂಮು. ಟೇಬಲ್ ಮೇಲೆ ಒಂದು ಮಣ ಕಸವಿತ್ತು. ಡ್ರಾ ತೆಗೆದ. ನೋಟುಗಳನ್ನು ತುರುಕಲಾಗಿತ್ತು. ಅವನು ಅದನ್ನು ಕರ್ಚೀಫ್‌ನಲ್ಲಿ ಕಟ್ಟಿಟ್ಟ. ನಂತರ ಜಾನೂವನ್ನು ಕರೆದು ರೂಮು ಕ್ಲೀನ್ ಮಾಡಿಸಿದ. ಅವಳಿಗೆ ಸಾವಿರ ಕೊಟ್ಟು “ನಾವು ಹೊರಗೆ ಹೋಗುತ್ತೇವೆ. ನಾವು ಬರುವಷ್ಟರಲ್ಲಿ ಮನೆ ಕ್ಲೀನ್ ಮಾಡಬೇಕು. ಒಗೆಯೋ ಬಟ್ಟೆ ವಾಷಿಂಗ್ ಮಿಷನ್‌ಗೆ ಹಾಕಿ, ಐರನ್‌ಗೆ ಕೊಡಬೇಕಾದ ಬಟ್ಟೆ……….”
“ನಾನವೆಲ್ಲಾ ಮಾಡ್ತೀನಿ ಬಿಡಿ ಅಣ್ಣ.”
“ನಿಮ್ಮ ಹತ್ತಿರ ಮನೆ ಕೀ ಇದೆಯಾ?”
“ಇದೆ.”
ಅವನು “ನೀವು ತಿಂಡಿ ತಿಂದು ಬನ್ನಿ” ಎಂದು ಕಳಿಸಿ ಕರ್ಚೀಫ್‌ನಲ್ಲಿದ್ದ ನೋಟುಗಳನ್ನು 100, 200, 500 ರ ಬಂಡಲ್ ಮಾಡಿದ ಒಟ್ಟು 40,000/- ರೂ.ಗಳಿದ್ದವು.
ಅಭಯ್ ರೆಡಿಯಾಗಿ ಹೊರಗೆ ಬಂದ.

“ಅಭಿ ಈ ಕಟ್ಟು ತೊಗೋ. ಮುಂದಿನ ರೂಂನಲ್ಲಿತ್ತು. ೪೦,೦೦೦ ಇದೆ. ಅದರಲ್ಲಿ ಒಂದು ಸಾವಿರ ನನಗೆ ಕೊಡು. ಜಾನಮ್ಮಂಗೆ ಮನೆ ಕ್ಲೀನ್ ಮಾಡಲು ಕೊಟ್ಟಿದ್ದೇನೆ.”
ಇಬ್ಬರೂ ಶಶಿಕಾಂತ್ ಕಾರ್‌ನಲ್ಲಿ ಹೊರಟರು. ಶಶಿ ಒಂದು ಪ್ರತಿಷ್ಠಿತ ಹೋಟೆಲ್ ಮುಂದೆ ನಿಲ್ಲಿಸಿದ. ಇಬ್ಬರೂ ತಮಗೆ ಬೇಕಾದುದನ್ನು ತರಿಸಿ ತಿಂದು, ಕಾಫಿ ಕುಡಿದರು. ಅಭಯ್ ಬಿಲ್ ಪೇ ಮಾಡಿದ.
“ನಿಮ್ಮನೆಗೇ ಹೋಗೋಣ. ನಾನು ನಿನ್ನ ಹತ್ತಿರ ಮಾತಾಡಬೇಕು.”
“ಇಲ್ಲೇ ಎಲ್ಲಾದ್ರೂ ಕುಳಿತು ಮಾತಾಡೋಣ. ಆಮೇಲೆ ಊಟ ಮಾಡಿ…..”
“ಬೇಡ. ನಿಮ್ಮನೆಗೆ ಹೋಗೋಣ. ನಾವೇ ಅಡಿಗೆ ಮಾಡೋಣ.”
ದಾರಿಯಲ್ಲಿ ಶಶಿ ತರಕಾರಿ ತೆಗೆದುಕೊಂಡ.

ಅವರು ಮನೆಗೆ ಹೋಗುವ ವೇಳೆಗೆ ಜಾನಮ್ಮ ಮನೆ ಕ್ಲೀನ್ ಮಾಡಿ, ತರಕಾರಿ ಬುಟ್ಟಿ ಕ್ಲೀನ್ ಮಾಡುತ್ತಾ ಕುಳಿತಿದ್ದಳು.
“ಜಾನಮ್ಮ ಈ ಹುರುಳಿಕಾಯಿ ಹುಳಿಗೆ ಮುರಿದುಕೊಡು. ಎರಡು ಆಲೂಗಡ್ಡೆ ಹೆಚ್ಚಿಕೊಡು” ಅಭಯ್ ಹೇಳಿದ.
“ಅಡಿಗೆ ಮಾಡ್ಕೋತೀರಾ?”
“ಹುಂ…..”
“ಅಕ್ಕಿ ಡಬ್ಬ, ಬೇಳೆ ಡಬ್ಬ, ಹುಣಸೆಹಣ್ಣು, ವಗ್ಗರಣೆಡಬ್ಬ ಎಲ್ಲಾ ಕಟ್ಟೆ ಮೇಲಿಡಲಾ?”
“ಇಡು.”
ಅಭಯ್ ಬಟ್ಟೆ ಬದಲಾಯಿಸಿ ಬೇಳೆ, ಹೋಳು ಕುಕ್ಕರ್‌ಗೆ ಹಾಕಿ ಕೂಗಿಸಿ, ಅಕ್ಕಿ ನೆನೆಹಾಕಿದ. ಜಾನಮ್ಮ ಹುಳಿಪುಡಿ, ಸಾರಿನಪುಡಿ ಡಬ್ಬ ತೆಗೆದಿಟ್ಟಿದ್ದಳು.
ಅಭಯ ಅನ್ನ, ಹುಳಿ ಮಾಡಿ ಹಪ್ಪಳ, ಸಂಡಿಗೆ ಕರೆದಿಟ್ಟ. ಶಶಿ ಅನ್‌ಲೈನ್‌ನಲ್ಲಿ ಮೊಸರು ತರಿಸಿದ. ಊಟ ಮಾಡಿ ಟೇಬಲ್ ಕ್ಲೀನ್ ಮಾಡಿ ಕುಳಿತರು.
“ಥ್ಯಾಂಕ್ಸ್ ಶಶಿ. ಇವತ್ತು ನಿನ್ನಿಂದ ಒಳ್ಳೆಯ ಊಟ ಮಾಡುವಂತಾಯಿತು. ನನಗೆ ಅಡಿಗೆ ಮಾಡೇ ಮರೆತುಹೋಗಿತ್ತು.”
“ಇನ್ನು ಮೇಲೆ ಅಭ್ಯಾಸ ಮಾಡಿಕೋ……”
“ಯಾಕೋ?”
“ಅತ್ತಿಗೆ, ಮಕ್ಕಳು ವಾಪಸ್ಸು ಬರಲ್ಲ.”
“ಯಾರು ಹೇಳಿದ್ರು?”
“ನಾನು ಮಾತಾಡುವುದನ್ನೆಲ್ಲಾ ಸರಿಯಾಗಿ ಕೇಳು. ಮಧ್ಯ ಮಾತಾಡಬೇಡ.”

ಅಭಯ್ ಸುಮ್ಮನೆ ಕುಳಿತ. ಅಶ್ವಿನಿ ತನ್ನನ್ನು ಮನೆಗೆ ಕರೆದು ಹೇಳಿದ್ದ ವಿಚಾರಗಳನ್ನೆಲ್ಲಾ ಹೇಳಿದ.
“ಅತ್ತಿಗೆ ತುಂಬಾ ಯೋಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ.”
“ಇಷ್ಟು ದಿನ ನೀನು ಯಾಕೆ ನನಗೆ ಈ ವಿಚಾರ ಹೇಳಲಿಲ್ಲ?”
“ಅತ್ತಿಗೆ ಮನಸ್ಸು ಬದಲಾಯಿಸಬಹುದು ಅಂದುಕೊಂಡಿದ್ದೆ. ನೆನ್ನೆ ರಾತ್ರಿ ಫೋನ್ ಮಾಡಿ “ಡೈವೋರ್ಸ್ ಪೇಪರ್ ರೆಡಿಮಾಡಿ’ ಅಂತ ಹೇಳಿದರು.”
“ನನ್ನ ಹತ್ತಿರ ಡೈವೋರ್ಸ್ ತೆಗೆದುಕೊಂಡರೆ ಹೇಗೆ ಜೀವನ ಸಾಗಿಸ್ತಾಳಂತೆ? ಅವಳಣ್ಣ ಕುಬೇರಾನಾ?”
“ನಿಮ್ಮ ಮನೆಯಿಂದ 3 ಲಕ್ಷ ತೆಗೆದುಕೊಂಡು ಹೋಗಿದ್ದಾರೆ. ತೆಗೆದುಕೊಂಡು ಹೋಗೋದು ಬೇಡ ಅಂದುಕೊಂಡೆ. ಆದರೆ ಈ ಮನೆಗೆ ಇಷ್ಟುದಿನ ದುಡಿದಿದ್ದಕ್ಕೆ ಸಂಬಳ ಬೇಡವಾ? ಪ್ರೀತಿ, ಗೌರವವಂತೂ ಸಿಗಲಿಲ್ಲ. ನನಗೆ ಜೀವನಾಂಶ ಸಿಗುವವರೆಗೂ ಈ ಹಣ ಸಾಕು. ನಮ್ಮನೆ ಖಾಲಿ ಇದೆ. ನಾನು ಕೇಟರಿಂಗ್ ಶುರು ಮಾಡ್ತೀನಿ” ಅಂದ್ರು.
“ಅವಳಿಗೆ ನಮ್ಮನೆಯಲ್ಲಿ ಏನು ಕಡಿಮೆಯಾಗಿರೋದು?”
“ನೆಮ್ಮದಿ.”
“ಶಶಿ……”

“ಕೂಗಬೇಡ. ನನಗೆ ನಿನ್ನ ಸ್ವಭಾವ ಗೊತ್ತು. ನೀನೂ ನೆಮ್ಮದಿಯಾಗಿರಲ್ಲ. ಬೇರೆಯವರು ನೆಮ್ಮದಿಯಾಗಿರಕ್ಕೂ ಬಿಡಲ್ಲ. ನಿಮ್ಮ ತಂದೆ ನಾಲ್ಕು ಹೆಣ್ಣು ಮಕ್ಕಳ ಮದುವೆ ಮಾಡಿ, ನಿನ್ನ, ನಿಮ್ಮಣ್ಣನ್ನ ಓದಿಸಿದರು. ಅವರು ಅನಿವಾರ್ಯವಾಗಿ ಆಸ್ತಿ ಮಾರಬೇಕಾಯಿತು. ಆ ಕಷ್ಟದಲ್ಲೂ ನಿನ್ನಣ್ಣನ್ನ ಎಂ.ಎ. ಓದಿಸಿದರು. ನಿನ್ನನ್ನು ಎಂ.ಬಿ.ಬಿ.ಎಸ್ ಓದಿಸಿದರು.” ನಮ್ಮಪ್ಪ-ಅಮ್ಮ ನಮಗೆ ಆಸ್ತಿ ಮಾಡಲಿಲ್ಲ.” ಅಂತ ಹಂಗಿಸಿ ಹಂಗಿಸಿ ಅವರು ನಿಮ್ಮಣ್ಣನ ಮನೆಯಲ್ಲೇ ಇರುವ ಹಾಗೆ ಮಾಡ್ದೆ. ತಿಂಗಳಿಗೊಂದಿಷ್ಟು ಹಣ ಕಳಿಸಿ ಕೈ ತೊಳೆದುಕೊಂಡೆ. ಈಗ ನಿನ್ನ ಬುದ್ಧಿಯಿಂದ ಹೆಂಡತಿ ಮಕ್ಕಳನ್ನೂ ದೂರ ಮಾಡಿಕೊಳ್ತಿದ್ದೀಯ.”
“ನೀನು ಅವಳು ಹೇಳಿದ್ದಕ್ಕೆ ಒಪ್ಪಿದೆಯಾ? ಡೈವೋರ್ಸ್ ಪೇಪರ್ ಸಿದ್ಧಮಾಡಿದೆಯಾ?”
“ಈ ವಿಚ್ಛೇದನದಿಂದ ನನಗೇನೂ ನಷ್ಟ ಆಗಲ್ಲ. ಅತಿ ಸಾಮಾನ್ಯ ಹೆಂಗಸು ನಾನು. ಅವರಿಗೂ ನಷ್ಟವಾಗಲಾರದು. ಅವರೂ ಅವರ ರೂಪ, ಬುದ್ಧಿವಂತಿಕೆ, ಶ್ರೀಮಂತಿಕೆಗೆ ತಕ್ಕವರನ್ನು ಮದುವೆಯಾಗ್ತಾರೆ ಬಿಡಿ” ಅಂದಳು.
ಅಭಯ್‌ಗೆ ಒಂದು ತರಹವಾಯಿತು.

“ಶಶಿ ನೀನು ನಾಳೆ ರಜ ಹಾಕು. ಮಾಲೂರಿಗೆ ಹೋಗಿ ಬರೋಣ.”
“ನಾನು ಬರಲ್ಲ. ನೀನೇ ಹೋಗಿ ಬಾ. ಅತ್ತಿಗೆ ನೀನು ಹೋದರೆ ಮನಸ್ಸು ಬದಲಾಯಿಸಬಹುದು.”

(ಮುಂದುವರಿಯುವುದು)
ಈ ಕತೆಯ ಹಿಂದಿನ ಭಾಗ ಇಲ್ಲಿದೆ : https://surahonne.com/?p=45453

ಸಿ.ಎನ್. ಮುಕ್ತಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *