ಎಲ್ಲವೂ ಸುಲಭವಾಗಬೇಕು ಎಂಬುದು ಎಲ್ಲರ ಬಯಕೆ

Share Button

ಉತ್ಪಾದಕತೆಗೆ ಸೋಮಾರಿತನವೇ ಶತ್ರು. ಆದ್ದರಿಂದ ವಿಶ್ರಾಂತಿ ಮತ್ತು ಆಲಸ್ಯದ ನಡುವಿನ ಗೆರೆಯನ್ನು ಅರಿತುಕೊಳ್ಳಬೇಕು. ಆಗ ಅಗತ್ಯ ವಿಶ್ರಾಂತಿ ತೆಗೆದುಕೊಂಡು ಚೇತೋಹಾರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ವಿರಾಮದ ಬಳಿಕ ಪಡೆದ ಚೈತನ್ಯವನ್ನು ಗುರಿ ಸಾಧನೆಗೆ ಬಳಸಿಕೊಳ್ಳದೆ ಸಮಯವನ್ನು ವ್ಯರ್ಥಗೊಳಿಸಿದಾಗ ನಮಗೆ ಸಮಸ್ಯೆ ತಂದುಕೊಂಡಂತೆಯೇ ಸರಿ.

ಕೇಳದಿದ್ದರೂ ಆವರಿಸಿಕೊಳ್ಳುವ ಜಡತ್ವವನ್ನು ಕೆಲವು ವಿಧಾನಗಳ ಸಹಾಯದಿಂದ ಕಳೆದು ಕ್ರಿಯಾಶೀಲರಾಗಲು ಸಾಧ್ಯವಿದೆ. ಯಾವುದೇ ಚಟುವಟಿಕೆಯಲ್ಲಿ ನಿರತರಾಗಲು ಸಾಕಷ್ಟು ಚೈತನ್ಯ ಇರಲೇಬೇಕು. ವ್ಯಾಯಾಮ ಮಾಡುವುದರಿಂದ ನಮ್ಮ ಚೈತನ್ಯದ ಮಟ್ಟ ಹೆಚ್ಚುತ್ತದೆ. ಆಗ ದಿನದುದ್ದಕ್ಕೂ ದಣಿವರಿಯದೆ ಕಾರ್ಯನಿರ್ವಹಿಸಬಹುದು. ಪ್ರತಿ ದಿನ ಸ್ವಲ್ಪ ನಡೆದರೂ ಮೈಮನಕ್ಕೆ ಕಸುವು ಸಿಗುತ್ತದೆ. ಎಲ್ಲಿ ಆಲಸ್ಯ ಇರುತ್ತದೆಯೋ ಅಲ್ಲಿ ಯಾವುದೇ ಕೆಲಸ ಸಾರ್ಥಕವಾಗುವುದಿಲ್ಲ.

ಅಗತ್ಯದ ಪ್ರಜ್ಞೆ :
ಕೆಲವರಿಗೆ ಯಾವುದೇ ಕೆಲಸ ಆರಂಭಿಸುವುದು ಕಷ್ಟಕರ. ಮುಂದಿನದ್ದೆಲ್ಲ ಸುಲಲಿತ ಎನ್ನಿಸುತ್ತದೆ. ಅಂತಹ ಸಮಸ್ಯೆ ಇದ್ದಲ್ಲಿ ಕೆಲಸ ಆರಂಭಿಸಲು 5 ರಿಂದ 15  ನಿಮಿಷ ಸಮಯ ನಿಗದಿಪಡಿಸಿ. ಸೋಮಾರಿತನವನ್ನು ಹೋಗಲಾಡಿಸಲು ನನಗಿದು ಅಗತ್ಯ ಎಂಬ ಪ್ರಜ್ಞೆಯನ್ನು ಪರಿಣಾಮಕಾರಿಯಾಗಿ ಬಳಸಿ. ಕೆಲಸ ಪೂರ್ಣಗೊಳಿಸಲು ನಿಗದಿತ ಗಡುವನ್ನು ವಿಧಿಸುವುದರಿಂದ ಈ ಅಗತ್ಯದ ಪ್ರಜ್ಞೆ ಬೆಳೆದುಕೊಳ್ಳುತ್ತದೆ.ಎಷ್ಟೋ ಸಲ ಗುರಿಗಳನ್ನು ಸಾಧಿಸಲು ಪಡಬೇಕಾದ ಕಷ್ಟಗಳ ಬಗ್ಗೆ ಏನೇನೋ ವಿಪರೀತ ಕಲ್ಪಿಸಿಕೊಂಡು ಆಲಸಿಗಳಾಗುತ್ತೇವೆ. ಬದಲಿಗೆ ಪೂರ್ಣಗೊಳಿಸಿದ ನಂತರದ ಪ್ರಯೋಜನಗಳ ಬಗ್ಗೆ ಆಮೂಲಾಗ್ರವಾಗಿ ಯೋಚಿಸಬೇಕು. ಆಗ ಆಲಸ್ಯ ಮಾಯವಾಗಿ ಸ್ಪೂರ್ತಿ ಉಕ್ಕದಿರುವುದಿಲ್ಲ.

ಸೋಮಾರಿತನ ನಿಜಕ್ಕೂ ಸಮಾಜಕ್ಕಂಟಿದ ಸಮಸ್ಯೆ. ರೋಗವಲ್ಲದಿದ್ದರೂ ವರ್ತನೆಯಲ್ಲಿ ಕಂಡುಬರುವ ದೋಷ. ಆದ್ದರಿಂದ ಯಾವಾಗ ಆಲಸ್ಯದ ಲಕ್ಷಣ ಕಾಣಿಸಿಕೊಳ್ಳುತ್ತದೆಯೋ, ಕೂಡಲೇ ಚಲನಶೀಲತೆಯನ್ನು ಒಗ್ಗಿಸಿಕೊಳ್ಳಿ. ಕುರ್ಚಿಯಲ್ಲಿ ತೂಕಡಿಸುತ್ತ ಕುಳಿತಿದ್ದರೆ, ದೀರ್ಘವಾಗಿ ಶ್ವಾಸ ತೆಗದುಕೊಳ್ಳಿ. ಎದ್ದು ಮುಖ ತೊಳೆದು ಬನ್ನಿ. ಒಂದರ ಮೇಲೊಂದರಂತೆ ಕೆಲಸಗಳನ್ನು ಮಾಡಿ. ಇಂತಹ ಪದ್ಧತಿ ಯಾರನ್ನಾದರೂ ಶ್ರಮಸಹಿಷ್ಣುಗಳನ್ನಾಗಿಸುತ್ತದೆ.

ಎಷ್ಟೋ ಸಲ ಅಂಜಿಕೆಯಿಂದ ನಮ್ಮೆಲ್ಲ ಬುದ್ಧಿ ಶಕ್ತಿ, ದೈಹಿಕ ಮತ್ತು ಮನೋಬಲವನ್ನು ಬಳಸಿಕೊಳ್ಳದೆ, ಬದುಕಿಯೂ ಬದುಕದಂತೆ ದಿನ ದೂಡುತ್ತೇವೆ. ಹಾಗೆಯೇ ಎಷ್ಟೋ ದಿನಗಳು ಸಂದಿರಬಹುದು. ಆದರೆ ತತ್ಪರಿಣಾಮದ ಕೀಳರಿಮೆ ಬಿಟ್ಟು ಮುಂದುವರಿಯಲೇಬೇಕು. ಬಿಡುವಿನ ವೇಳೆಯಲ್ಲಿ ಹೆಚ್ಚುವರಿ ಆದಾಯವನ್ನು ತಂದುಕೊಡಬಲ್ಲ ಉಪ ವೃತ್ತಿಗಳನ್ನು ಕೈಗೊಳ್ಳಬಹುದು. ಸಂಪಾದನೆ ಸಾಕಷ್ಟಿದ್ದರೂ, ಆಲಸ್ಯ ಕಾಡುತ್ತಿದ್ದರೆ, ನಿಮ್ಮ ಹವ್ಯಾಸವನ್ನು ಪುಷ್ಟಿಗೊಳಿಸುವುದರೊಂದಿಗೆ ಹೋಗಲಾಡಿಸಬಹುದು.

ಮೇಲ್ನೋಟಕ್ಕೆ ಆನಂದದಾಯಕ :
ವೃತ್ತಿ ಹಾಗೂ ಪ್ರವೃತ್ತಿಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳದೇ ಇದ್ದಲ್ಲಿ ನಿಶ್ಚಿತವಾಗಿ ಆಲಸ್ಯ ಅಂಟಿಕೊಳ್ಳುತ್ತದೆ. ಇಂತಹ ಜಡತ್ವ ನಿಮ್ಮ ಸೃಜನಶೀಲತೆಯನ್ನೂ, ಯೋಚನಾ ಶಕ್ತಿಯನ್ನೂ, ಪ್ರಯೋಗಶೀಲತೆಯನ್ನೂ ನಿಸ್ಸಂದೇಹವಾಗಿ ಕಸಿದುಕೊಳ್ಳುತ್ತದೆ. ಆಗ ಸುತ್ತಲಿನ ಜಗತ್ತು ನಿಮ್ಮನ್ನು ಕಾಯುವುದಿಲ್ಲ. ಕೆಲಸವನ್ನು ಕದಿಯುವುದು ಮೇಲ್ನೋಟಕ್ಕೆ ಆನಂದದಾಯಕವಾಗಿರಬಹುದು. ಆದರೆ ಅದರಿಂದ ಕೊನೆಗೆ ಸಮಾಧಾನವಂತೂ ಸಿಗುವುದಿಲ್ಲ.

ದುರದೃಷ್ಟವಶಾತ್ ಒಬ್ಬ ವ್ಯಕ್ತಿ ನಿಜವಾಗಿ ಅಲ್ಲದಿದ್ದರೂ ಅನ್ಯ ಕಾರಣಗಳಿಂದ ಸೋಮಾರಿಯಂತೆ ಇತರರಿಗೆ ಕಾಣಬಹುದು. ಆತ ವಿಕಲಚೇತನನಾಗಿರಬಹುದು. ಇಲ್ಲವೇ ಸಣ್ಣ ಪುಟ್ಟ ಗುರಿಗಳನ್ನು ಸಾಧಿಸುವುದು ಹೇಗೆ ಎಂದು ತಿಳಿಯದೆ ಕಂಗಾಲಾಗಿರಬಹುದು. ಯಾವುದೋ ಬಗೆಹರಿಯದ ಖಿನ್ನತೆ ಮನಸ್ಸನ್ನು ಕದಡಿರಬಹುದು. ಅನಾರೋಗ್ಯ ಕಾಡುತ್ತಿರಬಹುದು. ಕೆಲಸವನ್ನು ಮಾಡುವ ವಿಧಾನ ಅಥವಾ ತಿಳುವಳಿಕೆ ಇಲ್ಲದೆ ಆಲಸಿಯಂತೆ ಕಾಣಬಹುದು. ಇಲ್ಲವೇ ನಿಧಾನವಾಗಿ ಕಲಿಯುವ ಸ್ವಭಾವದವರಾಗಿರಬಹುದು. ನನಗೆ ಹೆಚ್ಚು ಅನುಭವ ಇದೆ ಎಂದುಕೊಂಡು ಅನಿವಾರ್ಯವಾಗಿ ಹೇಳಿಕೊಂಡು ಕೆಲಸಕ್ಕೆ ಸೇರಿರಬಹುದು. ಆದರೆ ಇಂಥ ಲೋಪಗಳನ್ನೆಲ್ಲ ಬಗೆಹರಿಸಬಹುದು. ಆದ್ದರಿಂದ ಒಬ್ಬ ವ್ಯಕ್ತಿಯನ್ನು ಮೇಲ್ನೋಟಕ್ಕೆ ಕಂಡ ತಕ್ಷಣ ಆತ ಸೋಮಾರಿ ಅಂತ ಆತುರದ ನಿರ್ಧಾರ ತೆಗೆದುಕೊಳ್ಳಲೇಬಾರದು. ಸಿಕ್ಕಸಿಕ್ಕಲ್ಲಿ ಜರೆಯುವ ತಪ್ಪು ಮಾಡಕೂಡದು.

ಕೊನೆಯದಾಗಿ ಪೋಷಕರಿರಾ, ಮಕ್ಕಳೆದುರು ಸೋಮಾರಿಗಳಾಗದಿರಿ. ನಿಮ್ಮನ್ನು ಕಂಡು ಮಕ್ಕಳು ಅದನ್ನೇ ಅನುಸರಿಸುತ್ತವೆ. ಆದ್ದರಿಂದ ನಿಜವಾಗಿಯೂ ಪರಿವರ್ತನೆ ಹೊಂದಿ ಮಾದರಿಯಾಗಿ.ಎಲ್ಲವೂ ಸುಲಭವಾಗಿ, ಅನಾಯಾಸವಾಗಿ ದಕ್ಕಬೇಕು ಎಂಬುದು ಎಲ್ಲರ ಬಯಕೆ. ಆದರೆ ಈ ಜಗತ್ತಿನಲ್ಲಿ ಶ್ರಮ, ತಾಳ್ಮೆ, ಸ್ವಲ್ಪ ತ್ಯಾಗ ಇಲ್ಲದೆ ಏನೂ ಸಿಗುವುದಿಲ್ಲ. ಸಿಕ್ಕಿದರೂ ಬಹುಕಾಲ ಉಳಿಯುವುದಿಲ್ಲ.

 

– ಕೇಶವ ಪ್ರಸಾದ.ಬಿ.ಕಿದೂರು.

 

5 Responses

  1. jayashree says:

    Last paragraph is particularly meaningful and true.

  2. Niharika says:

    ಉತ್ತಮ ಬರಹ..

  3. Pushpalatha Mudalamane says:

    Work is Worship !There can b no substitute for Hard Work !

  4. Pushpalatha Mudalamane says:

    ಶ್ರಮಯೇವ ಜಯತೇ !ಕಾಯಕವೇ ಕೈಲಾಸ !ಎಲ್ಲಾ ಹೇಳುವುದು ಇದನ್ನೇ !:)

  5. Krishnaveni Kidoor says:

    ವಿಪರೀತ ಮಳೆ ಬರುವಾಗ ಸ್ವಲ್ಪ ಸೋಮಾರಿತನ ತನ್ನಷ್ಟಕ್ಕೆ ಅಂಟಿಕೊಳ್ಳುತ್ತದೆ .ಕಾರಣ ಗೊತ್ತಾಗುವುದಿಲ್ಲ .ಬರಹ ಹಿಡಿಸಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: