ಕಾದಂಬರಿ

ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 30

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬೆಳಿಗ್ಗೆ ಏಳು ಗಂಟೆಗೆ ಎಚ್ಚರವಾಯಿತು. ಸುಖವಾದ ನಿದ್ರೆ. ಮೈ, ಕೈ ನೋವು ಮಾಯವಾಗಿತ್ತು. ಅವಳು ಮುಖ ತೊಳೆದು ಬಂದಾಗ ಶಕುಂತಲಾ ಕಾಫಿ ಕೊಟ್ಟು ಹೇಳಿದರು. “ಬೇಗ ರೆಡಿಯಾಗಿ ತಿಂಡಿಗೆ ಹೋಗಬೇಕಂತೆ. ನೀವು ಶಾಲೆ ಜಾಗ ನೋಡಕ್ಕೆ ಹೋಗಿ. ನಾವೆಲ್ಲಾ ತೋಟದ ಮನೆಗೆ ಹೋಗ್ತೀವಿ.”
“ಹಾಗೇ ಮಾಡಿ” ಎಂದಳು ವರು.
ಅವಳು ಸ್ನಾನ ಮಾಡಿ ಬಾಟಲ್‌ಗ್ರೀನ್ ಪ್ರಿಂಟೆಡ್ ಸಿಲ್ಕ್ ಊಟ್ಟು ಉದ್ದ ತೋಳಿನ ಬ್ಲೌಸ್ ಹಾಕಿದಳು. ಮಾಮೂಲೊಂದು ಸರ, ಬಳೆ, ಕಿವಿಯಲ್ಲಿ ಮುತ್ತಿನ ಸ್ಟಡ್ಸ್ ಧರಿಸಿ ಸಿದ್ಧಳಾದಳು. ಶರು ಚೂಡಿದಾರ್ ಧರಿಸಿದ್ದಳು.
ತಿಂಡಿ ತುಂಬಾ ಚೆನ್ನಾಗಿತ್ತು. ಉಕ್ಕರಿಸಿ ಮಾಡಿದ್ದ ಅಕ್ಕಿರೊಟ್ಟಿ, ಸಾಗು, ಚಟ್ನಿ, ಬೆಣ್ಣೆ. ಅದುವರೆಗೂ ಅಂತಹ ರೊಟ್ಟಿ ತಿಂದಿರದಿದ್ದ ರಾವ್ ಫ್ಯಾಮಿಲಿಯವರು ಖುಷಿಯಿಂದ ತಿಂಡಿ ತಿಂದರು. ಅದನ್ನು ಮಾಡುವ ರೀತಿ ತಿಳಿದುಕೊಂಡರು ಶೋಭಾ, ಶಕುಂತಲ.

ಸುಮಾರು 10 ಗಂಟೆಯ ಹೊತ್ತಿಗೆ ಕಾರ್‌ನಲ್ಲಿ ಆರ್.ಜಿ. ಹಾಗೂ ಇತರರು ಹೊರಟರು.
“ಅಪ್ಪಾ ಮೀಟಿಂಗ್ ಎಲ್ಲಿ?”
“ಸುಬ್ಬೇಗೌಡರ ಮನೆಯಲ್ಲಿ ಅಲ್ಲಿಗೇ ಉಳಿದವರು ಬರ‍್ತಾರೆ. ದಿನಸಿ ಅಂಗಡಿ ರಾಮಪ್ಪ, ಲಾರಿ ಓನರ್ ಮಹಮದ್ ಸಾಹೇಬ್ರು, ಚರ್ಚ್ ಪಾದ್ರಿಯವರಾದ ಅಂಥೋಣಿಯವರು, ಕರೀಗೌಡರು, ಬಿಳೀಗೌಡ್ರು ಎಲ್ಲರೂ ಬರ‍್ತಾರೆ.”
“ಬಿಳೀಗೌಡ್ರಾ?”
“ಕರೀಗೌಡರು ಕಪ್ಪಗಿದ್ದಾರೆ. ಅವರಣ್ಣ ಮರೀಗೌಡ್ರು ತುಂಬಾ ಬೆಳ್ಳಗಿದ್ದಾರೆ. ಆದ್ದರಿಂದ ಅವರಿಗೆ ಬಿಳೀಗೌಡ್ರೂಂತ ಹೆಸರು.”

ಸುಬ್ಬೇಗೌಡರ ಮನೆ ಸಿಕ್ಕಿತು. ತೊಟ್ಟಿಮನೆ ತುಂಬಾ ಚೆನ್ನಾಗಿದೆ ಎಂದು ಆರ್.ಜಿ. ಹೇಳಿದ್ದು ನೆನಪಾಯಿತು. ಮನೆಯ ಮುಂದೆ ಸಗಣಿ ನೀರು ಹಾಕಿ ದೊಡ್ಡ ರಂಗೋಲೆ ಹಾಕಿದ್ದರು. ಮನೆಯ ಪಕ್ಕದಲ್ಲಿ ಒಂದು ಪುಟ್ಟ ಬಚ್ಚಲು ಇತ್ತು. ಅಲ್ಲಿ ಕಟ್ಟೆಯ ಮೇಲೆ ದೊಡ್ಡ ಹಂಡೆಯಲ್ಲಿ ನೀರಿತ್ತು.
“ಕಾಲು ತೊಳೆದುಕೊಳ್ಳಿ” ಎಂದರು ಸುಬ್ಬೇಗೌಡರು.
ಎಲ್ಲರೂ ಕಾಲು ತೊಳೆದು ಒಳಗೆ ಕಾಲಿಟ್ಟರು. ಮನೆಯನ್ನು ತುಂಬಾ ಅಚ್ಚುಗಟ್ಟಾಗಿ ಇಟ್ಟಿದ್ದರು. ಕೆಂಪು ನೆಲ, ಮಧ್ಯದಲ್ಲಿ ದೊಡ್ಡ ವಿಶಾಲವಾದ ತೊಟ್ಟಿ.
ತೊಟ್ಟಿಯ ಒಂದು ಭಾಗದಲ್ಲಿ ಸೋಫಾ ಹಾಕಿ ಕುರ್ಚಿಗಳನ್ನು ಹಾಕಿದ್ದರು. ಎಲ್ಲರೂ ಅಲ್ಲಿ ಕುಳಿತರು. ಕೊಂಚ ಹೊತ್ತಿನಲ್ಲಿ ಉಳಿದವರು ಬಂದರು. ಆ ವೇಳೆಗಾಗಲೇ ಮನೆಯ ಹೆಂಗಸರು ಮಕ್ಕಳ ಕೈಲಿ ದೊಡ್ಡ ಸ್ಟೀಲ್‌ಲೋಟಗಳಲ್ಲಿ ನೀರು ಕಳಿಸಿದ್ದರು.

“ಹೇಳಪ್ಪ ಗೋಪಾಲ ಎಂತಹ ಸ್ಕೂಲು ಶುರುಮಾಡಬೇಕೂಂತ ಇದ್ದೀಯ?” ಡಾ|| ಚಂದ್ರಮೌಳಿ ಕೇಳಿದರು.
“ನಾವು ಬದಲಾದ ಸಮಾಜ ನೋಡ್ತಾ ಇದ್ದೇವೆ. ಹಾಡು ಹಗಲಲ್ಲೇ ಕೊಲೆ, ಅನಾಚಾರ, ಅತ್ಯಾಚಾರ, ಸುಲಿಗೆ, ದರೋಡೆ ಎಲ್ಲಾ ನಡೆಯುತ್ತಿದೆ. ನನಗೆ ಇದಕ್ಕೆಲ್ಲಾ ಕಾರಣ ನಾವು ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡದೇ ಇರುವುದು ಅನ್ನಿಸ್ತಿದೆ.”
“ನೀ ಏಳ್ತಿರೋದು ಸರಿ ಮಗ, ಇಂದಿನ ಉಡುಗ್ರು ನಮ್ಮ ಮಾತೇ ಕೇಳಕಿಲ್ಲ. ಕನ್ನಡ ಮಾತಾಡಕ್ಕಿಲ್ಲ. ಟಸ್‌ಪುಸ್ ಅಂತ ಮಾತಾಡ್ತಾರೆ. ತಾತ, ಅಜ್ಜಿ, ಮಾವ, ಅತ್ತೆ, ಚಿಕ್ಕಪ್ಪ, ಚಿಕ್ಕಮ್ಮ ಸಂಬಂಧ ಗೊತ್ತಿಲ್ಲ. ಮೂರೊತ್ತೂ ಆ ಮೊಬೈಲು ಇಟ್ಕೊಂಡು ಕುಂತಿರ‍್ತಾರೆ” ಕರೀಗೌಡರು ಹೇಳಿದರು.

ಅಷ್ಟರಲ್ಲಿ ನಿಂಬೆಹಣ್ಣಿನ ಪಾನಕ ಬಂತು.
“ಇವಳು ನನ್ನ ಸೊಸೆ ಕಾವೇರಿ.”
ಪಾನಕ ಕೊಟ್ಟ ಕಾವೇರಿ ಹಿರಿಯರಿಗೆ ನಮಸ್ಕರಿಸಿದಳು.
“ಅದಕ್ಕೋಸ್ಕರ ಗುರುಕುಲ ಮಾದರಿ ಶಾಲೆ ಆರಂಭಿಸೋಣ.”
“ಅಂಗಂದ್ರೇನು?”
“ಒಂದನೇ ತರಗತಿಯಿಂದಲೇ ಮಕ್ಕಳನ್ನು ನಮ್ಮ ಶಾಲೆಯಲ್ಲಿ ಇಟ್ಟುಕೊಂಡು ಅವರಿಗೆ ಆಟ-ಪಾಠಗಳ ಜೊತೆ ಸಮಾಜದಲ್ಲಿ ಹೇಗಿರಬೇಕು ಅನ್ನುವ ನಡವಳಿಕೆ ಕಲಿಸೋಣಾಂತ.”
“ನಿಮ್ಮ ದೃಷ್ಠಿಯಲ್ಲಿ ಉತ್ತಮ ನಡವಳಿಕೆ ಎಂದರೇನು?” ವಾರುಣಿ ಕೇಳಿದಳು.
“ತಂದೆ-ತಾಯಿಯರಿಗೆ ಗುರು ಹಿರಿಯರಿಗೆ ಗೌರವ ಕೊಡುವುದು, ಭೇದಭಾವವಿಲ್ಲದೆ ಎಲ್ಲರ ಜೊತೆ ಸೇರುವುದು ಸಂಬಂಧಗಳನ್ನು ಅರ್ಥಮಾಡಿಕೊಳ್ಳುವುದು, ಹಳ್ಳಿಗಳ ಪ್ರಾಮುಖ್ಯತೆ ತಿಳಿಸುವುದು, ನಮ್ಮ ಸಂಪ್ರದಾಯ, ಪರಂಪರೆ, ರೀತಿ ರಿವಾಜು ತಿಳಿಸುವುದು.”

“ಇದನ್ನೆಲ್ಲಾ ಶಾಲೆಯಲ್ಲೇ ಕಲಿಸಬೇಕಾ?” ಚಂದ್ರಾವತಿ ಕೇಳಿದರು.
“ನಿಮ್ಮ ಮಾತು ಅರ್ಥವಾಗ್ತಿಲ್ಲ.”
“ಆರ್.ಜಿ. ನಾವು ಬಂದ ತಕ್ಷಣ ನೀನು ಏನು ಏನು ಗಮನಿಸಿದೆ?”
“ಏನೂ ಇಲ್ಲ……..”

“ವರು ನೀನು ಹೇಳ್ತೀಯಾ?”
“ನನಗೆ ತಿಳಿದಿರುವುದು ಹೇಳ್ತೀನಿ. ಮನೆಯ ಮುಂದಿನ ರಂಗೋಲೆ ಗಮನಿಸಿದೆ. ಕಾಲು ತೊಳೆದುಕೊಂಡು ಒಳಗೆ ಬರಮಾಡಿಕೊಳ್ಳುವ ಪದ್ಧತಿ ಇದೆಯೆಂದು ತಿಳಿಯಿತು. ನಾವು ಬಂದೊಡನೆ ನೀರು ಕಳಿಸಿದರು. ಈ ರೀತಿಯ ಸಂಸ್ಕಾರ ಇರುವವರ ಬಗ್ಗೆ ಕೆಲವರ ಜೀವನ ಚರಿತ್ರೆಗಳಲ್ಲಿ ಕಾದಂಬರಿಗಳಲ್ಲಿ ಓದಿದ್ದೆ. ಬಂದವರ ಹೊಟ್ಟೆ ತಣ್ಣಗಿರಿಸಲು ಪಾನಕ ಕೊಟ್ಟಿದ್ದಲ್ಲದೆ ಹಿರಿಯರಿಗೆ ನಮಸ್ಕಾರ ಮಾಡಿದರು. ಇದು ಸುಸಂಸ್ಕೃತರ ಲಕ್ಷಣ. ದೊಡ್ಡವರು ಮಾತನಾಡುವಾಗ ಮಧ್ಯೆ ಮೂಗು ತೂರಿಸುವ ಅಭ್ಯಾಸ ಇಲ್ಲಿಯ ಹೆಣ್ಣು ಮಕ್ಕಳಿಗಿಲ್ಲ ಅನ್ನಿಸಿತು. ಮನೆಯನ್ನು ತುಂಬಾ ಶುಚಿಯಾಗಿ ಇಟ್ಟುಕೊಂಡಿದ್ದಾರೆ. ಇದು ನಮ್ಮ ಸಂಸ್ಕೃತಿ-ಪರಂಪರೆ…….”
“ನಿಜ ವರು. ಇದನ್ನೆಲ್ಲಾ ಈ ಮನೆಯ ಹೆಂಗಸರು ಯಾವ ಶಾಲೆಯಲ್ಲೂ ಕಲಿತಿಲ್ಲ. ತಮ್ಮ ಹಿರಿಯರಿಂದ ಕಲಿತಿದ್ದಾರೆ.”

“ಹೌದು ನನಗೂ ಹಾಗೇ ಅನ್ನಿಸಿತು. ಮಕ್ಕಳು ಪ್ರೈಮರಿ ಶಾಲೆ ದಾಟುವವರೆಗೂ ತಾಯಿಯ ಮಡಿಲಲ್ಲೇ ಬೆಳೆಯಬೇಕು. ಅದಕ್ಕೆ ನಮ್ಮ ಹಿರಿಯರು `ಮನೆಯೇ ಮೊದಲ ಪಾಠಶಾಲೆ. ಜನನಿ ತಾನೇ ಮೊದಲ ಗುರುವು’ ಅಂತ ಹೇಳಿರೋದು. ನಮ್ಮ ಸಂಪ್ರದಾಯ ಪರಂಪರೆ ರೀತಿ, ರಿವಾಜುಗಳನ್ನು ಮಕ್ಕಳು ಮನೆಯಲ್ಲೇ ಕಲಿಯಬೇಕು. ನೀವು ಶಾಲೆ ಆರಂಭಿಸಬೇಕು. ಶಾಲೆ ಮಕ್ಕಳನ್ನು ಆಕರ್ಷಿಸುವ ಕೇಂದ್ರವಾಗಬೇಕು. ಆರನೇ ತರಗತಿಯಿಂದ ಮಕ್ಕಳು ಗುರುಕುಲ ಮಾದರಿಯ ಶಿಕ್ಷಣಕ್ಕೆ ಸಿದ್ಧರಾಗಬೇಕು. ಅಂತಹ ವಾತಾವರಣ ನೀವು ಕಲ್ಪಿಸಬೇಕು” ರಾವ್ ಹೇಳಿದರು.
“ತುಂಬಾ ಚಂದಾಗಿ ಏಳಿದ್ರಿ ಸ್ವಾಮಿ. ಚಿಕ್ಕ ಮಕ್ಕಳು ಅಮ್ಮನ ಮಡಿಲಾಗೇ ಬೆಳೀಬೇಕು. ಅಂಗಾದ್ರೆ ಅವರಿಗೆ ಸಂಬಂಧಗಳು ತಿಳಿತೈತೆ” ಬಿಳೀಗೌಡ್ರು ಹೇಳಿದರು.

“ರಾಯರೇ ನಾನೊಂದು ಮಾತು ಹೇಳಬಹುದಾ? ಪಾದ್ರಿ ಅಂಥೋನಿಯವರು ಕೇಳಿದರು.
“ಹೇಳಿ ಸ್ವಾಮಿ…”
“ನೀವು ಶಾಲೆ ತೆಗೆಯುವುದಕ್ಕೆ ನನ್ನ ಆಕ್ಷೇಪಣೆಯಿಲ್ಲ. ಆದರೆ ಅದಕ್ಕಿಂತ ಮೊದಲು ನಮ್ಮ ಗ್ರಾಮಸ್ಥರಿಗೆ ಆಸ್ಪತ್ರೆಯ ಅಗತ್ಯವಿದೆ. ನಿಮಗೆ ತಿಳಿದಂತೆ ಸುತ್ತಮುತ್ತಲು ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಡಾಕ್ಟರ್‌ಗಳಿಲ್ಲ. ಇರುವ ಒಂದಿಬ್ಬರು ಡಾಕ್ಟರ್‌ಗಳು. ಔಷಧಿ ಇಲ್ಲ. ಇಂಜೆಕ್ಷನ್ ಇಲ್ಲ. ನೀವು ಹಣಕೊಟ್ಟರೆ ನಾನೇ ಔಷಧಿ ಕೊಡ್ತೇವೆ ಅಂತಿದ್ದಾರೆ. ಖಾಸಗಿ ಡಾಕ್ಟರ್‌ಗಳನ್ನು ಮಾತನಾಡಿಸುವುದಕ್ಕೇ ಆಗಲ್ಲ.”
“ನಿಜ ಸರ್……….”
“ಆದ್ದರಿಂದ ಮೊದಲು ಆಸ್ಪತ್ರೆ ತೆಗೆಯಿರಿ……”
“ರಘುಪತಪ್ಪ ನಮ್ಮ ಜವನಪ್ಪನ ಊರು ಇದೆಯಲ್ಲಾ.”
“ಹುಂ. ಕೋಟೆಹುಂಡಿ.”
“ಅಲ್ಲಿ ಜವನಪ್ಪಂದು 10 ಎಕರೆ ಭೂಮಿ ಐತೆ. ಅವನು ಅದನ್ನು ಮಾರಬೇಕೂಂತಿದ್ದಾನೆ. ಪಕ್ಕದಲ್ಲಿ ನಂದು ಎರಡೆಕರೇ ಐತೆ. ನೀವು ಅಲ್ಲಿ ಇಸ್ಕೂಲು ಶುರುಮಾಡಿ. ನಾನು ಇಸ್ಕೂಲ್‌ಗೆ ಆ ಭೂಮಿ ಕೊಡ್ತೀನಿ.”

“ಸುಬ್ಬೇಗೌಡರೇ ನಿಮಗೆ ನಾನು ಚಿರಋಣಿ. ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ನಮಗೆ ಬೇಕೇ ಬೇಕು. ಜವನಪ್ಪ ಭೂಮಿ ಯಾವಾಗ ಮಾರ‍್ತಾನಂತೆ?”
“4-5 ತಿಂಗಳಾಗಬಹುದು. ಅವನ ಮಗ ಬಾಂಬೇಲಿದಾನಲ್ಲಾ ಅವನ್ನ ಒಂದ್ಮಾತು ಕೇಳಬೇಕಂತೆ…….”
“ಆಗಲಿ ನಿಧಾನವಾಗೇ ಆಗಲಿ. ನಾನು ಆಸ್ಪತ್ರೆಯ ಬಗ್ಗೆ ಯೋಚಿಸುತ್ತೇನೆ. ನಮ್ಮ ಗೋಪಿ, ಓದು ಮುಗಿಸಿಕೊಂಡು ಬಂದ ಮೇಲೆ ಶಾಲೆ ಬಗ್ಗೆ ಯೋಚಿಸಿದರಾಯ್ತು.”

ಎಲ್ಲರಿಗೂ ಅವರ ಮಾತು ಒಪ್ಪಿಗೆಯಾಯಿತು. ವಾರುಣಿ ಕೇಳಿದಳು “ನಾವು ಮನೆ ನೋಡಬಹುದಾ?”
“ಅದಕ್ಕೇನು ತಾಯಿ. ಖಂಡಿತಾ ನೋಡಿ. ಪಟ್ಟಣದರ‍್ಗೆ ನಮ್ಮಟ್ಟಿ ಇಡಿಸ್ತದಾ?” ಸೀತಾ ಬಾವ್ವ – ಇವರ‍್ನ ಕರ‍್ಕೊಂಡೋಗಿ ಅಟ್ಟಿ ತೋರಿಸು.”
15-16 ವರ್ಷದ ಹೆಣ್ಣು ಮಗಳು ಹೊರಗೆ ಬಂದಳು. ಚೂಡಿದಾರ್ ಹಾಕಿದ್ದ ಸೀತಾ ಕೊಂಚ ಕಪ್ಪಾಗಿದ್ದರೂ ಖಳೆಯಾಗಿದ್ದಳು.
“ಏನು ಓದುತ್ತಾ ಇದೀಯಮ್ಮಾ?” ಚಂದ್ರಾವತಿ ಕೇಳಿದರು.
“ಫಸ್ಟ್ ಪಿ.ಯು.ಸಿ. ಆಯ್ತು ಮೇಡಂ.”
“ಮುಂದೆ ಏನು ಓದುತ್ತೀಯಾ? ಬಿ.ಇ., ಎಂ.ಬಿ.ಬಿ.ಎಸ್”
“ಇಲ್ಲ ಮೇಡಂ. ನಾನು ಆರ್ಟ್ಸ್ ತೆಗೆದುಕೊಂಡಿದ್ದೇನೆ. ಮುಂದೆ ಲಾಯರ್ ಆಗಬೇಕು ಅಂದ್ಕೊಂಡಿದ್ದೇನೆ.”
“ವೆರಿಗುಡ್. ನಿನಗೆ ಲಾಯರ್ ಆಗುವ ಯೋಚನೆ ಯಾಕೆ ಬಂತು?”
“ನಾನು ಮೊದಲು ಇಂಜಿನಿಯರ್ ಆಗ್ತೀನಿ ಅಂತ ಇದ್ದೆ. ಆದರೆ ಕ್ರಮೇಣ ನನಗೆ ನಮ್ಮ ಹಳ್ಳಿಯವರು ಕೋರ್ಟು ಕಛೇರಿಗಳಿಗೆ ಅನಾವಶ್ಯಕವಾಗಿ ಎಷ್ಟೊಂದು ಹಣ ಸುರಿಯುತ್ತಾರೇಂತ ತಿಳಿಯಿತು. ನಾನು ಲಾಯರ್ ಆದರೆ ನಮ್ಮ ಆಸ್ತೀನ್ನೂ ನೋಡಿಕೊಳ್ಳಬಹುದು, ಬೇರೆಯವರಿಗೂ ಸಹಾಯ ಮಾಡಬಹುದು’ ಅನ್ನಿಸಿತು.”
“ವಂಡರ್‌ಫುಲ್. ನಿನಗೆ ಈ ವಯಸ್ಸಿಗೆ ಇಂತಹ ಆಲೋಚನೆಗಳು ಬಂದಿರುವುದು ಆಶ್ಚರ್ಯದ ಸಂಗತಿ.”
“ನನ್ನಲ್ಲಿ ಈ ಬದಲಾವಣೆ ಉಂಟಾಗಲು ಕಾರಣ ನಿಮ್ಮ ಜೊತೆ ಬಂದಿದ್ದಾರಲ್ಲ ಗೋಪಾಲಣ್ಣ, ಅವರು ಆಗಾಗ್ಗೆ ಬರ‍್ತಿರ‍್ತಾರೆ. ಅವರೇ ಈ ಐಡಿಯಾ ನನ್ನ ತಲೆಯಲ್ಲಿ ತುಂಬಿದ್ದು.

ಮಾತನಾಡುತ್ತಲೇ ಸೀತಾ ಮನೆ ತೋರಿಸಿದಳು. ಸುಮಾರು 4 ದೊಡ್ಡ ಕೋಣೆಗಳಿದ್ದವು. ಅಡಿಗೆ ಮನೆ, ದೇವರಮನೆ, ಸ್ಟೋರ್‌ರೂಮ್ ಎಲ್ಲವೂ ವಿಶಾಲವಾಗಿದ್ದು, ಆಧುನಿಕ ಅನುಕೂಲತೆಗಳನ್ನು ಹೊಂದಿದವು. ಸ್ಟೋರ್‌ರೂಮ್‌ನಲ್ಲಿ ದೊಡ್ಡ ದೊಡ್ಡ ಹಿತ್ತಾಳೆ ಪಾತ್ರೆಗಳಿದ್ದವು.
“ನಮ್ಮೂರು ಜಾತ್ರೆಗೆ ನೆಂಟರಿಷ್ಟರೆಲ್ಲಾ ಬರ‍್ತಾರೆ. ಆಗ ನಾವು ಇದರಲ್ಲೇ ಅಡಿಗೆ ಮಾಡುವುದು.”
“ನಿನಗೆ ಅಡಿಗೆ ಮಾಡಕ್ಕೆ ಬರುತ್ತದಾ?”
“ಅನ್ನ, ಸಾಂಬಾರ್, ಮುದ್ದೆ ಮಾಡೋದು ಕಲ್ತಿದ್ದೇನೆ. ದೊಡ್ಡ ದೊಡ್ಡ ಅಡುಗೆಗಳು ಬರಲ್ಲ.”

ಅಷ್ಟರಲ್ಲಿ ಸೀತಾಳ ತಾಯಿ ಕಾವೇರಿ ಎದುರಿಗೆ ಬಂದರು. ಅವರನ್ನು ಚಾಪೆ ಹಾಕಿ ಕೂಡಿಸಿ ತಾಂಬೂಲ ಕೊಟ್ಟರು. ನಂತರ ಅಡಿಕೆ ಹಾಳೆಯಲ್ಲಿ ಪ್ಯಾಕ್ ಮಾಡಿದ್ದ ಬೆಣ್ಣೆ ಕೊಟ್ಟರು.
“ನಾನು ಮನೆಯಲ್ಲೇ ಬೆಣ್ಣೆ ತೆಗೆಯುತ್ತೇನೆ. ಊರಿಗೆ ಹೋದ ತಕ್ಷಣ ಕಾಯಿಸಿ ಉಪಯೋಗಿಸಿ.”
ಅವರೆಲ್ಲಾ ಹಳ್ಳಿ ಬಿಟ್ಟಾಗ ಎರಡು ಗಂಟೆಯಾಗಿತ್ತು.
“ಆರ್.ಜಿ. ನೀವು ನಮ್ಮನ್ನು ಹಾಸನಕ್ಕೆ ಕಳಿಸಿಕೊಟ್ಟರೆ ನಾವು ನೇರವಾಗಿ ಬೆಂಗಳೂರಿಗೆ ಹೋಗ್ತೀವಿ. ಮೈಸೂರಿಗೆ ಹೋಗಿ ಬೆಂಗಳೂರಿಗೆ ಹೋಗುವುದಾದರೆ ಮಕ್ಕಳಿಗೆ ಶಾಲೆ ತಪ್ಪುತ್ತದೆ.”
“ನಾನು ಇವತ್ತು ಬೆಂಗಳೂರಿಗೆ ಹೊರಟಿದ್ದೇನೆ. ನೀವು ನನ್ನ ಜೊತೆ ಬಂದು ಬಿಡಿ. ಗೋಪಿ ನೀನು ನಿನ್ನ ಕಾರ್‌ನಲ್ಲಿ ಮೈಸೂರಿನವರನ್ನು ಕರೆದುಕೊಂಡು ಹೊರಡು” ರಘುಪತಿ ಹೇಳಿದರು.
“ಆಗಲಿ ಅಪ್ಪ – ನಾವು ಐದು ಗಂಟೆಗೆ ಹೊರಡುತ್ತೇವೆ.”

ಮನೆಗೆ ಹೋದ ಕೂಡಲೇ ಊಟವಾಯಿತು. ಅವರು ಊರಿಗೆ ಹೊರಟಿರುವ ವಿಚಾರ ತಿಳಿದು, ಊಟದ ನಂತರ ಹೆಂಗಸರಿಗೆಲ್ಲರಿಗೂ ಕುಂಕುಮ, ಎಲೆ, ಅಡಿಕೆ ಕೊಟ್ಟರು. ತೆಂಗಿನಕಾಯಿಯ ಜೊತೆ ಬ್ಲೌಸ್‌ಪೀಸ್, ಪುಟ್ಟ ಗಣಪತಿಯನ್ನು ಕೊಟ್ಟರು. ಹಣ್ಣು, ತರಕಾರಿಗಳು, ಸಿಹಿ-ಖಾರದ ತಿಂಡಿಗಳು ಸಿದ್ಧವಾಗಿದ್ದವು.
ಮಧ್ಯದಲ್ಲಿ ಕಾಫಿಗೆ ಮಾತ್ರ ಆರ್.ಜಿ. ಕಾರು ನಿಲ್ಲಿಸಿದ. ಚಂದ್ರಾವತಿ ತಮ್ಮನಿಗೆ ಫೋನ್ ಮಾಡಿ ಚಪಾತಿ, ಪಲ್ಯ ಕಳಿಸಲು ಹೇಳಿದರು. ಒಂಭತ್ತುವರೆಗೆ ಅವರು ಮೈಸೂರು ತಲುಪಿದರು. ಕೃಷ್ಣ ಮನೆ ಕ್ಲೀನ್ ಮಾಡಿಸಿ ಅವರಿಗಾಗಿ ಕಾಯುತ್ತಿದ್ದರು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

4 Comments on “ಧಾರಾವಾಹಿ-ಕನಸೊಂದು ಶುರುವಾಗಿದೆ: ಪುಟ 30

  1. ಧಾರಾವಾಹಿ ಕನಸೊಂದು ಶುರುವಾಗಿದೆ.. ಓದಿಸಿಕೊಂಡುಹೋಯಿತು..ಒಬ್ಬೊಬರದು…ಒಂದೊಂದು ಕನಸು ಯಾರ್ಯಾರಕನಸು ಈಡೇರುತ್ತದೆಯೋ..ಎಂಬ ಕುತೂಹಲ ಮೇಡಂ

  2. ಕನಸು ಕಾಣುವ ಹಲವು ಮನಗಳ ಸಂಗಮ…
    ಕಥೆಯ ಓಘವೋ…ಬಹು ಹೃದಯಂಗಮ!!

  3. ಸುಲಲಿತವಾಗಿ ಓದಿಸಿಕೊಂಡು ಸುಂದರವಾಗಿ ಮುಂದುವರೆಯುತ್ತಿರುವ ಚಂದದ ಕಾದಂಬರಿ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *