ಬೊಗಸೆಬಿಂಬ

ಬಾಳ ಸಂಜೆಯಲಿ ಒಂಟಿ ಪಯಣ

Share Button

ಪ್ರತಿಯೊಬ್ಬ ವ್ಯಕ್ತಿಯು ಜೀವನದ ಒಂದು ಹಂತದಲ್ಲಿ ಏಕಾಂಗಿಯಾಗುವುದು ಸಹಜ. ಒಂಟಿತನದ ಈ ಘಟ್ಟವನ್ನು ಅನುಭವಿಸುವುದು ಅತ್ಯಂತ ಕ್ಲಿಷ್ಟಕರ ಹಾಗೂ ಯಾತನಾಮಯ. ಮಕ್ಕಳು ಬೆಳೆದು ದೊಡ್ಡವರಾಗಿ ಕೆಲಸದ ನಿಮಿತ್ತ ಪರಸ್ಥಳದಲ್ಲಿ ನೆಲೆಸಿದಾಗ, ಅವರ ಮದುವೆಯ ಬಳಿಕ, ಸಂಬಂಧಗಳಲ್ಲಿ ಬಿರುಕು ಮೂಡಿದಾಗ ಅಥವಾ ವ್ಯಕ್ತಿಗಳೊಡನೆ ಸಂಪರ್ಕ ಕಡಿದುಕೊಂಡಾಗ ಒಬ್ಬೊಬ್ಬರೇ ಬದುಕು ಮುಂದುವರಿಸುವ ಸಂದರ್ಭ ಬಂದಾಗ ಒಂಟಿತನವನ್ನು ಅನುಭವಿಸಬೇಕಾಗಿ ಬರುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಬಾಳ ಸಂಗಾತಿಯನ್ನು ಅಥವಾ ಪ್ರೀತಿಪಾತ್ರರನ್ನು ಕಳಕೊಂಡಾಗ ಏಕಾಂಗಿಯಾಗಿ ಬಿಡುತ್ತೇವೆ. ತನ್ನವರೆನ್ನುವವರು ಯಾರೂ ಇಲ್ಲದಾಗ ಜೀವನ ಒಬ್ಬಂಟಿ ಪಯಣವಾಗುತ್ತದೆ.

ಕೆಲವರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ತಮ್ಮ ವೈಯಕ್ತಿಕ ವಲಯ ಅಥವಾ ಅಂತರವನ್ನು ಕಾಪಾಡಿಕೊಂಡಿರುತ್ತಾರೆ. ಇಂಥಾ ಬದುಕಿಗೆ ಒಗ್ಗಿಕೊಂಡ ಮೇಲೆ ಜನರೊಡನೆ ಬೆರೆಯಲು, ಮಾತನಾಡಲು ಇಷ್ಟ ಪಡುವುದಿಲ್ಲ. ಬಹು:ಶ ಅಂತರ್ಮುಖಿ ವ್ಯಕ್ತಿತ್ವದವರಲ್ಲಿ ಈ ಗುಣಗಳು ಕಂಡು ಬರುತ್ತದೆ. ಏಕಾಂಗಿತನಕ್ಕೂ, ಒಬ್ಬಂಟಿತನಕ್ಕೂ ವ್ಯತ್ಯಾಸವಿದೆ. ವ್ಯಕ್ತಿಯು ಏಕಾಂಗಿತನವನ್ನು ಆಯ್ಕೆ ಮಾಡಬಹುದು. ಯಾವುದೇ ಕಟ್ಟುಪಾಡುಗಳಿಲ್ಲದೇ ತನ್ನದೇ ಆದ ಪ್ರಪಂಚದಲ್ಲಿ ತೃಪ್ತಿ ಪಡುವವರನ್ನು ನಾವು ಕಾಣುತ್ತೇವೆ. ಇಂಥಾ ಏಕಾಂಗಿತನವನ್ನು ಇಷ್ಟ ಪಡುವ ಜನರು ಬೇರೆಯವರೊಂದಿಗೆ ಹೆಚ್ಚಾಗಿ ಬೆರೆಯದೆ ಒಬ್ಬಂಟಿಯಾಗಿರಲು ಇಚ್ಚಿಸುತ್ತಾರೆ. ಕೆಲವೊಮ್ಮೆ ಜನರ ನಡುವೆ ಇದ್ದರೂ ಒಂಟಿ ಎಂಬ ಭಾವನೆ ಬರುತ್ತದೆ. ಸುತ್ತಲಿರುವ ಜನರೊಡನೆ ಅರ್ಥಪೂರ್ಣ ಸಂಬಂಧ ಹೊಂದಲು ವಿಫಲರಾದಾಗಲೂ ಒಂಟಿತನ ಕಾಡುತ್ತದೆ.

ಆಧುನಿಕ ಜಗತ್ತಿನಲ್ಲಿ ಯುವ ಸಮುದಾಯ ಏಕಾಂಗಿತನದ ಮೊರೆ ಹೋಗುವುದನ್ನು ನೋಡುತ್ತೇವೆ. ಇತ್ತೀಚಿನ ಅಧ್ಯಯನವೊಂದು ಒಂಟಿಯಾಗಿ, ಏಕಾಂಗಿ ಬದುಕನ್ನು ಆಯ್ಕೆ ಮಾಡುವವರು ಹೆಚ್ಚು ಸುಖಿಗಳು ಎನ್ನುತ್ತದೆ. ಜಪಾನ್‌ನಂತಹ ದೇಶದಲ್ಲಿ ಜೆನ್ z ಪೀಳಿಗೆಯ ಯುವ ಜನತೆ ಏಕಾಂಗಿತನವನ್ನು ಇಚ್ಚಿಸುತ್ತಾರೆ ಹಾಗೂ ಸಾಮಾಜಿಕ ಜೀವನದಿಂದ ಸಂಪೂರ್ಣವಾಗಿ ದೂರವಿರುತ್ತಾರೆ. ಜಪಾನಿ ಭಾಷೆಯಲ್ಲಿ ಇದನ್ನು ‘ಹಿಕಿಕೊಮೊರಿ’ ಎಂದು ಕರೆಯುತ್ತಾರೆ ಎಂದು ಓದಿದ ನೆನಪು.

ಅತ್ಯಂತ ಆಪ್ತ ಸಂಬಂಧಗಳಲ್ಲೊಂದಾದ ಒಡಹುಟ್ಟಿದವರು ಉದ್ಯೋಗ, ವಿವಾಹ, ಕೆಲಸ ಕಾರ್ಯ ಇನ್ನಿತರ ಕಾರಣಗಳಿಂದಾಗಿ ದೂರವಿರುವುದು ಸಹಜ. ಅವರೆಲ್ಲರೂ ತಮ್ಮ ತಮ್ಮ ಕೌಂಟುಬಿಕ ಜೀವನದಲ್ಲಿ ಮಗ್ನರಾಗಿದ್ದು, ವಿಶೇಷ ದಿನಗಳಂದು ಒಟ್ಟು ಸೇರುತ್ತಾರೆ. ಕೆಲವು ಸಂದರ್ಭಗಳಲ್ಲಿ ಏನಾದರೂ ಕುಟುಂಬ ಕಲಹ ಅಥವಾ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ವೈಮನಸ್ಸು ಮೂಡಿ ಅಮೂಲ್ಯ ಸಂಬಂಧ ಕಳಚಿದಾಗ, ಫೋನ್ ಸಂಪರ್ಕವೂ ಇಲ್ಲದಾಗ ನಿಜಕ್ಕೂ ಒಂಟಿಯಾಗಿ ಬಿಡುತ್ತೇವೆ. ಹೃದಯದಲ್ಲಿ ಶೂನ್ಯತೆ ಮತ್ತು ಬರಿದಾದ ಭಾವನೆ ಮೂಡುತ್ತದೆ. ಒಬ್ಬಂಟಿಯಾಗಿರುವುದು ಮನುಷ್ಯನನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲಗೊಳಿಸುತ್ತದೆ.

ಆದರೆ ಪರಿಸ್ಥಿತಿಯ ಕೈಗೊಂಬೆಯಿಂದಾಗಿ, ಬಾಳಲ್ಲಿ ಒಂಟಿತನವನ್ನು ಅನುಭವಿಸುವದೇ ಬೇರೆ. ಅಕಾಲ ಪತಿಯ ಅಗಲಿಕೆ ಇನ್ನಿಲ್ಲದ ಖಾಲಿತನವನ್ನು ಉಂಟು ಮಾಡುತ್ತದೆ. ಇದ್ದಕ್ಕಿದಂತೆ ಸಂಗಾತಿಯನ್ನು ಕಳಕೊಂಡಾಗ ಬಾಳಿನಲ್ಲಿ ಊಹಿಸಲಾರದಷ್ಟು ಮಾರ್ಪಾಡಾಗುತ್ತದೆ. ವಿಶ್ವಾಸಾರ್ಹ ಒಡನಾಡಿಯನ್ನು ಕಳೆದುಕೊಂಡ ದು:ಖ ತುಂಬಲಾರದ ನಷ್ಟವನ್ನುಂಟು ಮಾಡುತ್ತದೆ. ಬಾಳಿನುದ್ದಕ್ಕೂ ಜತೆಜತೆಯಾಗಿ ಸಾಗಿದ ಜೀವನ ಸಂಗಾತಿ ಇನ್ನಿಲ್ಲ ಎಂಬ ಕಠೋರ ಸತ್ಯವು ನಮ್ಮನ್ನು ಸಂಪೂರ್ಣವಾಗಿ ಕಂಗೆಟ್ಟಿಸುತ್ತದೆ.

ಇಂಥಾ ಒಬ್ಬಂಟಿತನದ ನೋವು ನನ್ನ ಅನುಭವಕ್ಕೂ ಬಂದಿತ್ತು. ನಾನು ನಿವೃತ್ತಿಯ ಅಂಚಿನಲ್ಲಿರುವಾಗ ನನ್ನವರನ್ನು ಕಳಕೊಂಡದ್ದು ನನ್ನ ಜೀವನದ ಅತೀ ಕಠಿಣ ಹಂತವಾಗಿತ್ತು. ಜೀವನ ಪೂರ್ತಿ ಹೊರಗೆ ದುಡಿದು, ಬದುಕಿನ ಆರಾಮದ ದಿನಗಳನ್ನು ಸಂಗಾತಿಯೊಡನೆ ಕಳೆಯುವುದು ಎಂದು ಕನಸು ಕಂಡ ನನಗೆ ಅತ್ಯಂತ ನೋವಿನ ಸಂಗತಿಯೂ ಆಗಿತ್ತು. ನಿವೃತ್ತಿಯ ಸಮಯದಲ್ಲಿ ಇಂಥಾ ಆಘಾತ ನಿಜಕ್ಕೂ ನನ್ನನ್ನು ಅಧೀರಳನ್ನಾಗಿಸಿತ್ತು. ದೈನಂದಿನ ವ್ಯವಹಾರಗಳು, ದಿನನಿತ್ಯ ವಿಚಾರಗಳು, ಭಾವನೆಗಳನ್ನು ಹಂಚಿಕೊಳ್ಳಲು ತನ್ನವರೆನ್ನುವವರು ಯಾರೂ ಇಲ್ಲ ಎಂಬ ಕಟು ಸತ್ಯ ಮೊದಲ ಬಾರಿಗೆ ಅರಿವಾಗಿತ್ತು. ಮನೆಯಲ್ಲಿ ಒಬ್ಬಳೇ ಇದ್ದು ಅನುಭವವಿಲ್ಲ. ಒಮ್ಮೆಲೆ ಬದುಕು ದುಸ್ತರವಾಗಿತ್ತು. ಇದ್ದಕ್ಕಿದ್ದಂತೆ ಸಾಮಾನ್ಯ ಬದುಕು ಮಾರ್ಪಾಡಾಗಿ ಒಂಟಿತನ, ಅನಿಶ್ಚಿತತೆ, ಅಭದ್ರತೆ ಹಾಗೂ ಭಯ ಆವರಿಸಿತ್ತು. ಇಂಥಹಾ ಸಮಯದಲ್ಲಿ ಒಂಟಿತನ ತೀವ್ರವಾಗಿ ಕಾಡುತ್ತದೆ. ನಮ್ಮ ಕಷ್ಟ, ಸುಖ:ಗಳಿಗೆ ಸ್ಪಂದಿಸಲು ಜತೆಯಲ್ಲಿ ಯಾರೂ ಇರುವುದಿಲ್ಲ. ಮಕ್ಕಳು ಪರ ಊರಿನಲ್ಲಿ ವಿವಾಹವಾಗಿ ನೆಲೆಸಿರುತ್ತಾರೆ. ನಮ್ಮನ್ನು ಅವರ ಜೊತೆಯಲ್ಲಿ ಇರಲು ಒತ್ತಾಯ ಮಾಡಿದರೂ ತನ್ನ ಮನೆ, ಊರು ಬಿಟ್ಟು ಬಿಡಲಾರದ ಭಾವನಾತ್ಮಕ ಬೆಸುಗೆಯಿಂದ ಬಂಧಿಸಲ್ಪಟ್ಟು ಒಂಟಿಯಾಗಿರಲು ಬಯಸುತ್ತೇವೆ. ಒಡಹುಟ್ಟಿದವರು, ಬಂಧುಗಳು, ಸಂಬಂಧಿಕರು, ಪ್ರೀತಿಪಾತ್ರರು ಜತೆಗಿದ್ದರೂ ಸಂಗಾತಿಯ ಸ್ಥಾನವನ್ನು ತುಂಬಲಾರರು. ಸ್ನೇಹಿತರು ಊರಲ್ಲಿದ್ದರೂ ಕುಟುಂಬ ಮತ್ತು ಕೆಲಸದ ಒತ್ತಡಗಳಿಂದ ಮಾನಸಿಕವಾಗಿ ದೂರವಿರುತ್ತಾರೆ. ಸಂಸಾರ ಜಂಜಾಟದಲ್ಲಿ ಮುಳುಗಿರುವ ಇವರು ಅಪರೂಪಕ್ಕೆ ಫೋನ್ ಮೂಲಕ ಸಂಪರ್ಕದಲ್ಲಿರುತ್ತಾರೆ. ಇನ್ನು ಕೆಲವು ಸ್ನೇಹಿತರು ನಮ್ಮ ತಟಸ್ಥತೆ ಅಥವಾ ಮೌನವನ್ನು ಅಪಾರ್ಥ ಮಾಡಿಕೊಂಡು ಸ್ನೇಹ, ಸಂಬಂಧವನ್ನೇ ಕಳಚಿದ್ದೂ ಇದೆ. ಆದರೂ ನನ್ನನ್ನು ಅರ್ಥ ಮಾಡಿಕೊಳ್ಳುವ ಕೆಲವೇ ಕೆಲವು ಆಪ್ತ ಸ್ನೇಹಿತರನ್ನು ಉಳಿಸಿಕೊಂಡಿರುವುದೇ ನನ್ನ ಸೌಭಾಗ್ಯ.

ಒಂಟಿಯಾದಾಗ ಮಾನಸಿಕ ಒತ್ತಡವು ನಮ್ಮನ್ನು ಘಾಸಿ ಗೊಳಿಸುತ್ತದೆ. ಕುಟುಂಬಸ್ಥರು, ಹಿತಚಿಂತಕರು ಹಾಗೂ ಸ್ನೇಹಿತರ ಮಾನಸಿಕ ಬೆಂಬಲ, ಸಾಂತ್ವನ ಮತ್ತು ಪ್ರೇರಣೆಯೊಂದಿಗೆ ಸಾಮಾನ್ಯ ಬದುಕಿಗೆ ಮರಳಿದರೂ ಮನಸ್ಸಿನ ಮೂಲೆಯಲ್ಲಿ ಮರೆಯಲಾರದ ಕೊರಗು ಇದ್ದೇ ಇರುತ್ತದೆ. ಹಬ್ಬ ಹರಿದಿನಗಳಂದು ಏಕಾಂಗಿ, ಅಸೌಖ್ಯವಾದಾಗ ಬಳಿಯಲ್ಲಿ ಯಾರೂ ಇಲ್ಲದಿರುವುದು, ನೋವು-ನಲಿವುಗಳನ್ನು ಹಂಚಿಕೊಳ್ಳಲಾಗದಿರುವುದು ಮುಂತಾದ ಸಮಸ್ಯೆಗಳು ತೀವ್ರವಾಗಿ ಕಾಡಿ ಅಸಹಾಯಕತೆಯ ಪರಿಸ್ಥಿತಿ ಉಂಟಾಗುತ್ತದೆ. ಇಂಥಹಾ ಬದಲಾವಣೆಗಳು ಅನಿವಾರ್ಯವಾದಾಗ ಒಂಟಿತನವನ್ನು ಸ್ವೀಕರಿಸಿ, ಹೊಸ ಬದುಕಿಗೆ ಹೊಂದಿ ಕೊಳ್ಳುವುದು ಅಗತ್ಯ ಎಂದು ನನಗೆ ಅರಿವಾಗಿತ್ತು. ಏಕಾಂಗಿತನದಿಂದಾಗಿ ಖಿನ್ನತೆ, ಬೇಸರ ಉಂಟಾದರೂ ಅದನ್ನೆಲ್ಲಾ ಮೆಟ್ಟಿ ನಿಂತು ಮನಸ್ಸಿಗೆ ನೆಮ್ಮದಿ, ಸಂತಸ ನೀಡಬಲ್ಲ ತೋಟಗಾರಿಕೆಯಲ್ಲಿ ಮನಸ್ಸನ್ನು ತೊಡಗಿಸಿದೆ. ಅರ್ಧಕ್ಕೆ ನಿಂತು ಬಿಟ್ಟ ಬರವಣಿಗೆಯನ್ನು ಮುಂದುವರಿಸಿ, ಅಪರಿಮಿತ ಖುಷಿಯನ್ನು ಕಂಡುಕೊಂಡೆ. ಆಧ್ಯಾತ್ಮಿಕ ಚಿಂತನೆಗಳು, ದೇವಾಸ್ಥಾನಗಳಿಗೆ ಭೇಟಿ ಕೊಡುವುದು, ನಡಿಗೆ, ಪ್ರವಾಸ ಮುಂತಾದ ಚಟುವಟಿಕೆಗಳು ಒಂಟಿತನವನ್ನು ಹೋಗಲಾಡಿಸಲು ನೆರವಾಯಿತು. ಯಾವುದಾದರೂ ಸಾಕುಪ್ರಾಣಿಯನ್ನು ಸಾಕಿ ಎಂದು ಕೆಲವು ಸ್ನೇಹಿತರು ಸಲಹೆ ನೀಡಿದರೂ ಈ ಇಳಿ ವಯಸ್ಸಿನಲ್ಲಿ ಅವುಗಳ ಕಾಳಜಿ ಕಷ್ಟಸಾಧ್ಯ ಎಂದರಿತು ಅಲ್ಲಿಗೆ ಆ ವಿಚಾರವನ್ನು ಕೈ ಬಿಟ್ಟೆ. ಸ್ವಾವಲಂಬನೆ, ಆತ್ಮವಿಶ್ವಾಸ ಬೆಳೆಸಿಕೊಂಡು ಧೈರ್ಯದಿಂದ ಒಂಟಿತನವನ್ನು ಸ್ವೀಕರಿಸಿ ಹೊಸ ಬದುಕಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿತ್ತು.

ಏನೇ ಆದರೂ ಒಂಟಿ ಜೀವನವು ಕೆಲವೊಂದು ಸವಾಲುಗಳಿಂದ ಕೂಡಿದೆ. ಆರೋಗ್ಯ ಸಮಸ್ಯೆಗಳು ದುತ್ತನೆ ಕಾಡಿದಾಗ, ಅಸ್ವಸ್ಥರಾದಾಗ ಸಹಾಯಕ್ಕೆ ಯಾರೂ ಇಲ್ಲದಿರುವಾಗ, ನೆರೆಹೊರೆಯವರ ಗಮನಕ್ಕೂ ಬರದಂತೆ ಜೀವನ ಅಂತ್ಯಗೊಳ್ಳುವ ಘಟನೆಗಳನ್ನೂ ಕೇಳುತ್ತೇವೆ. ಇಂದಿನ ಬದಲಾಗುತ್ತಿರುವ ಯುಗದಲ್ಲಿ ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಮತ್ತು ಸಾಮಾಜಿಕ ಮಾಧ್ಯಮದ ಹಾವಳಿಯಿಂದ ಅನೇಕ ಒಂಟಿ ಹಿರಿಯ ನಾಗರಿಕರು ಆನ್‌ಲೈನ್ ವಂಚನೆಗೆ ಒಳಗಾಗುವುದನ್ನು ಕಾಣಬಹುದು. ಸಾಧ್ಯವಾದಷ್ಟೂ ಇತರರ ಗೊಡವೆಗೆ ಹೋಗದೆ, ನಮ್ಮಷ್ಟಕ್ಕೆ ಇರುವುದು ಉತ್ತಮವಾದರೂ, ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ನಮ್ಮ ನೆರವಿಗೆ ಸ್ಪಂದಿಸುವ ವಿಶ್ವಾಸಾರ್ಹ ಒಂದೆರಡು ನೆರೆಹೊರೆಯವರು ಇರುವುದು ಒಳ್ಳೆಯದು. ಆದರೆ ಹೆಚ್ಚಾಗಿ ಬಹುತೇಕರು ಫ್ಲಾಟ್‌ಗಳಲ್ಲಿ ವಾಸವಾಗಿರುವುದರಿಂದ, ಅಕ್ಕಪಕ್ಕದವರೊಡನೆ ಮಾತುಕತೆ ಬರೀ ನಗುವಿಗೆ ಸೀಮಿತಗೊಳಿಸದೆ, ಸಂಬಂಧವನ್ನು ಗಟ್ಟಿಗೊಳಿಸುವತ್ತ ಚಿತ್ತ ಹರಿಸಬೇಕು.

ಬಾಳ ಸಂಜೆಯಲ್ಲಿ ಒಂಟಿತನ ಬಹುವಾಗಿ ಕಾಡುತ್ತದೆ. ಹೃದಯದ ಕೊರಗಿನ ಅಳಲನ್ನು ಕೇಳುವವರೇ ಇಲ್ಲದೆ ಮೌನದ ನರಳಾಟದಲ್ಲಿ ಜೀವನ ಸಾಗಿಸಬೇಕು. ಬೇಸರ, ಹತಾಶೆ, ಖಿನ್ನತೆ, ಏಕತಾನತೆಯಿಂದ ಕೂಡಿರುವ ನಮ್ಮ ಜೀವನವನ್ನು ಸುಂದರವಾಗಿಡಲು ವಾಸ್ತವವನ್ನು ಒಪ್ಪಿಕೊಂಡು ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಬದುಕಿಗೆ ಹಿಂತಿರುಗುವುದೇ ಗೆಲುವಿನ ಹೆಜ್ಜೆಯಾಗಿದೆ. “ಈಸಬೇಕು, ಇದ್ದು ಜಯಿಸಬೇಕು” ಎಂಬ ನಾಣ್ನುಡಿಯಂತೆ, ಬದುಕನ್ನು ಗೆಲ್ಲಬೇಕು. ದೈರ್ಯದಿಂದ ಬದುಕನ್ನು ಎದುರಿಸಲು ಏಕಾಂತ ನಮ್ಮನ್ನು ಸಜ್ಜು ಗೊಳಿಸುತ್ತದೆ. ಆತ್ಮಾವಲೋಕನ ಮಾಡಿಕೊಳ್ಳಲು ಒಬ್ಬಂಟಿತನ ನೆರವಾಗುತ್ತದೆ. ಒಬ್ಬಂಟಿ ಎಂದು ಕೊರಗಬೇಕಿಲ್ಲ. ಅನೇಕ ಸೃಜನಶೀಲ ಮಾರ್ಗಗಳಿವೆ. ಇವನ್ನೆಲ್ಲಾ ಅಳವಡಿಸಿಕೊಂಡು ಜೀವನ ಪ್ರೀತಿಯೊಂದಿಗೆ, ಬಾಳ ಸಂಜೆಯ ಕತ್ತಲನ್ನು ಹೋಗಲಾಡಿಸಿ ಆತ್ಮ ಗೌರವದೊಂದಿಗೆ, ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯ. ಏನೇ ದು:ಖ ದುಮ್ಮಾನಗಳಿದ್ದರೂ ನಗುವಿನಲ್ಲಿ ಮರೆಮಾಚುತ್ತಾ ಜೀವನ ಪ್ರೀತಿಯಿಂದ ಬದುಕುವುದು ಅಗತ್ಯ. ಜೀವನದ ವಿವಿಧ ಮಜಲುಗಳನ್ನು ಧೈರ್ಯದಿಂದ ಎದುರಿಸಿ ದೈನಂದಿನ ಒತ್ತಡ, ಸಂಕಷ್ಟಗಳನ್ನು ಮರೆತು ಶಿಸ್ತಿನ ಜೀವನ ಶೈಲಿಯನ್ನು ಅಳವಡಿಸಿ, ನಾಳೆಗಳ ಬಗ್ಗೆ ಭರವಸೆ ಇಟ್ಟು ನಾವು ಕುಸಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಂಡಲ್ಲಿ ಇಳಿ ವಯಸ್ಸಿನಲ್ಲಿ ಅರ್ಥಪೂರ್ಣ ಬದುಕನ್ನು ಸಾಗಿಸಲು ಸಾಧ್ಯ. ಹೀಗೆ ಅಪ್ಪಟ ಆಶಾವಾದಿಯಾಗಿ, ನಾಳೆಗಳ ಭರವಸೆಯಲ್ಲಿ ಬದುಕುತ್ತಾ ಪ್ರತಿಯೊಂದು ಕ್ಷಣವನ್ನು ಅನುಭವಿಸುತ್ತಿದ್ದೇನೆ.

ಶೈಲಾರಾಣಿ. ಬಿ. ಮಂಗಳೂರು.

8 Comments on “ಬಾಳ ಸಂಜೆಯಲಿ ಒಂಟಿ ಪಯಣ

  1. ನಿಮ್ಮ ಮನದ ಭಾವನೆಗಳನ್ನು ಹಾಗೆಯೇ ಸಂಗಾತಿಯ ಅಗಲುವಿಕೆಯ ಬಳಿಕದ ಮಾನಸಿಕ ತುಮುಲಗಳನ್ನು ಎದುರಿಸಿದ ಪರಿಯನ್ನು ಚೆನ್ನಾಗಿ ವಿವರಿಸಿರುವಿರಿ…

  2. ಏಕಾಂತ ಬೇರೆ; ಏಕಾಂಗಿತನ ಬೇರೆ
    ಇದನ್ನು ಲೇಖನವು ಸರಳವಾಗಿ ಮತ್ತು ಆಪ್ತವಾಗಿ ಅಭಿವ್ಯಕ್ತಿಸಿದೆ.

    ಸ್ವಂತ ಅನುಭವದ ಬೆಳಕಿನಲ್ಲಿ ಬರೆಹವು ಬೆಳೆದು ಬೆಳಕಾಗಿದೆ.

    ಬಾಳಸಂಜೆಯ ಒಂಟಿತನವನ್ನು ಮೆಲುಕಾಡಿದ್ದು ಮನನೀಯ.
    ನೀವು ತಿಳಿಸಿದಂತೆ ಹಲವು ತೆರನಾದ ಸೃಜನಾತ್ಮಕ ದಾರಿಗಳನು
    ಹುಡುಕಿಕೊಂಡರೆ ಸಮಸ್ಯೆಯಾಗದು. ಏನೇ ಹೇಳಿದರೂ

    ಒಂಟಿತನ ಕಾಡುತ್ತದೆ, ಬೃಹದಾರಣ್ಯವಾಗಿ. ಅದಕೇ ಅಲ್ಲವೇ
    ವಿಕಾಸದ ಹಾದಿಯಲ್ಲಿ ನಾವೆಲ್ಲ ಸಮಾಜಜೀವಿಗಳಾಗಿದ್ದು.

    ಚೆನ್ನಾಗಿದೆ, ಅಭಿನಂದನೆ ನಿಮಗೆ. ನಿಮ್ಮ ಮನದಾಳದ ನೋವು
    ಬರೆಹವಾಗಿ ಅವತರಿಸಿದ್ದು ನಿಜಕೂ ಸ್ವಾಗತಾರ್ಹ ; ಇದುವೇ ಸೂಕ್ತ ಕೂಡ.

  3. ಒಂಟಿತನದ ನೋವನ್ನು ಚಿತ್ರಿಸುತ್ತಾ ಅದಕ್ಕೆ ಪರಿಹಾರವನ್ನು ಹುಡುಕುತ್ತಾ ಹೋಗುವ ಈ ಲೇಖನನ ಬಹಳ ಆಪ್ತವಾಗಿದ್ದು ಮನಸ್ಸನ್ನು ಕಲಕುವಂತಿದೆ

  4. ಬಹಳ ಆಪ್ತವಾಗಿದೆ ಬರಹ. ಬಾಳ ಪಯಣದಲ್ಲಿ ಒಂಟಿತನ ಎದುರಾದಾಗ ಎದುರಿಸುವ ಪರಿಯನ್ನು ಬಹಳ ಚೆನ್ನಾಗಿ ಬರೆದಿದ್ದೀರಿ.

  5. ಬಹಳ ಆಪ್ತವಾದ ಬರೆಹ ..ಆಲೋಚನೆ ಗೆ ಹಚ್ಚುವಂತಿದೆ ಮೇಡಂ..

  6. ಇಳಿವಯಸ್ಸಿನಲ್ಲಿ ಜೀವನ ಸಂಗಾತಿಯನ್ನು ಕಳೆದುಕೊಂಡು ಒಬ್ಬಂಟಿಯಾಗುವ ನೋವು ಸಹಿಸಲಸದಳ ಮೇಡಂ. ಆದರೆ ಹುಲುಮಾನವರಾದ ನಮ್ಮ ಕೈಯಲ್ಲಿ ಏನೂ ಇಲ್ಲ. ಮುಂದಿನ ಬದುಕನ್ನು ಅರ್ಥಪೂರ್ಣವಾಗಿಸಲು ದೈವಸಹಾಯ ಇದ್ದೇ ಇರುತ್ತದೆ….
    ಮನಬಿಚ್ಚಿ ನುಡಿದ ಮಾತುಗಳು ಮನಮುಟ್ಟುವಂತಿವೆ ಮೇಡಂ. ಶುಭವಾಗಲಿ.

  7. ನಾನೂ ಎಷ್ಟೋ ಸಲ ಅಂದುಕೊಂಡಿದ್ದೆ, ಸದಾ ಆಕ್ಟಿವ್ ಆಗಿದ್ದ ನಮ್ಮ ಮ್ಯಾಮ್ sudden ಆಗಿ ಯಾಕೆ ಸೋಶಿಯಲ್ ಮೀಡಿಯಾದಿಂದ ಮರೆಯಾದರು ಅಂತ, ಇವತ್ತೇ ಗೊತ್ತಾಗಿದ್ದು ಈ ವಿಚಾರ, ಬೇಸರವಾಯಿತು ಓದಿ, ಅದೊಂದು ನೋವು ಹೇಳಿಕೊಂಡು ಭಾರ ಇಳಿಸುವಂತಾದ್ದಲ್ಲ ನಿಜ.
    ಏಕಾಂಗಿತನ ಕಾಡುವುದೇ ಇಲ್ಲಿವಯಸ್ಸಿನಲ್ಲಿ ಆದ್ರೂ ನಿಮ್ಮದು ನೊಂದುಕೊಳ್ಳುವಷ್ಟು ಇಳಿ ವಯಸ್ಸಲ್ಲ ಮ್ಯಾಮ್. You are evergreen ShailaRani, ಸರ್ಕಾರಿ ಕೆಲಸದಿಂದ ರಿಟೈರ್ ಆಗಿದೆ ಆಷ್ಟೇ, ನಿಮ್ಮಿಂದ ಬಹಳಷ್ಟು ಉಪಯೋಗಿ ಕೆಲಸ ಸಮಾಜಕ್ಕೆ ವಿದ್ಯಾರ್ಥಿ ಜೀವನಕ್ಕೆ ಸಿಗಬಹುದು. Loads of love ಮ್ಯಾಮ್.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *