ಕಾಲನ ಪ್ರವಾಹಕ್ಕೆ ಸಿಕ್ಕ ತರಗೆಲೆ ನಾನು
ಬಿಡದ ಸೆಳೆತಕ್ಕೆ ಸಿಕ್ಕು ತೇಲಿ ಸಾಗುತಿಹೆನು
ಎಷ್ಟೊಂದು ತಿರುವುಗಳು ಈ ಹಾದಿಯಲ್ಲಿ
ಗಳಿಗೆಗೊಂದು ಏರಿಳಿತಗಳು ಈ ತೊರೆಯಲ್ಲಿ
ಭೋರ್ಗರೆಯುವ ಹರಿವಿನಲ್ಲಿ ಹುಟ್ಟಿದ ಗುಳ್ಳೆಗಳು
ಸ್ವಲ್ಪ ದೂರ ಹೋಗಿ ಒಡೆದು ಹೋಗುತಿಹವು
ಅಡ್ಡ ಬಂದ ಮರದ ಕೊಂಬೆಗೆ ಸಿಲುಕಿ ತುಸು ಹೊತ್ತು ನಿಂತೆ
ತಿರುಗುವ ಸುಳಿಗೆ ಸಿಕ್ಕು ಮತ್ತೆ ಸುತ್ತ ತೊಡಗಿದೆ
ಚಲನೆಯ ಗತಿಯಲ್ಲಿ ಪಸರಿಸುತ್ತಿವೆ ಬಗೆ ಬಗೆಯ ಚಿಂತೆಗಳು
ಮುಗಿದು ಹೋಯಿತೇನೋ ಈ ಬದುಕು ಎಂಬ ಭಾವನೆಗಳು
ದಡ ಸೇರಬೇಕೆಂದು ಪ್ರವಾಹಕ್ಕೆ ಒಗ್ಗಿಕೊಂಡಿರುವೆ
ಜೊತೆಗಿದ್ದ ಎಲೆಗಳ ಬಿಟ್ಟು ಮುಂದೆ ಮುಂದೆ ಹೊರಟಿರುವೆ
ಎಂದೂ ಮುಗಿಯದ ಪಯಣವಿದು ಎಂದೆನಿಸತೊಡಗಿದೆ
ಆಸರೆಗೆ ಸಿಕ್ಕ ಅಡೆ ತಡೆಯ ಆವರಿಸುವುದ ಬಿಟ್ಟು ಬೇರೆ ದಾರಿಯಿಲ್ಲವಾಗಿದೆ
ಅನ್ವೇಷಣೆಯ ಈ ಪ್ರವಾಸ ಹೊಸತನವ ತರಲಿ
ಕಾತುರತೆಯ ಈ ಬದುಕು ಏಕತಾನತೆಯ ಮರೆಸಲಿ
ಸೇರುವ ತಾಣ ಹಾಗೂ ತಲುಪುವ ಗುರಿ ಬಗ್ಗೆ ನನಗಿಲ್ಲ ಯಾವ ಧಾವಂತ
ಮುಂದೆ ಚಲಿಸುವುದೊಂದೇ ಎನಗಿರುವ ಆಯ್ಕೆಯ ಹಂತ

-ಶರಣಬಸವೇಶ ಕೆ. ಎಂ


ಅರ್ಥಗರ್ಭಿತ ಕವನ.
ಸೂಚ್ಯ ಸಂದೇಶ ಹೊತ್ತ ಅರ್ಥಪೂರ್ಣ ವಾದ ಕವನ ಸಾರ್
ಎಂದು ಮುಗಿಯದ ಪಯಣದಂತೆ ಈ ಬದುಕು
ಹಲವು ಅಡೆತಡೆಗಳಿದ್ದರೂ ಮುಂದೆ ಸಾಗುವ ಬಯಕೆ
ಬೇರೆ ಆಯ್ಕೆಯೂ ಇಲ್ಲ
ಹೌದಲ್ಲ ಎಲ್ಲರ ಬದುಕಿನ ಕಥನವನ್ನು ಸೊಗಸಾಗಿ ಚಿತ್ರಿಸಿರುವ ಕವನ
ಇತ್ತೀಚೆಗೆ ನಿಮ್ಮ ರಚನೆಗಳು ಕಡಮೆಯಾಗಿದ್ದವು.
ಈ ವಾರ ಕಾಣಿಸಿಕೊಂಡಿದೆ, ಅಭಿನಂದನೆ.
ಕಾಲನ ಪ್ರವಾಹಕೆ ಸಿಕ್ಕ ತರಗೆಲೆ ಎಂಬುದೇ ಅತ್ಯದ್ಭುತ ಪ್ರತೀಕ.
ಇಂಥ ನಿರಹಂ ಬೇಕು, ಬರೆಯಲು ಮತ್ತು ಬರೆಯುತ ಕಲಿಯಲು.
ತರಗೆಲೆಯಾದರೂ ಒಳ್ಳೆಯ ಗೊಬ್ಬರ ಮಣ್ಣಿಗೆ
ನಾವೇನಾಗುವೆವೋ? ಗೊತ್ತಿಲ್ಲ, ಅಂದ ಹಾಗೆ ನಾವೂ ಮಣ್ಣಿಗೆ !
ದಿನಕರ ದೇಸಾಯಿಯವರ ನನ್ನ ದೇಹದ ಬೂದಿ
ಎಂಬ ಕವಿತೆಯು ನೆನಪಾಯಿತು, ಸಾಧ್ಯವಾದರೆ ಒಮ್ಮೆ ಓದಿ
ಬರೆವಣಿಗೆ ಸಾಗುತಿರಲಿ, ಇದೊಂದೇ ನಮ್ಮ ಅಹಮಿನ ಶೋಧನೆ
ಉಳಿದದ್ದು ಬರೀ ದೊಂಬರಾಟ ; ಕೂಗುಮಾರಿಯ ಯಾತನೆ.
ಧನ್ಯವಾದಗಳು ಸುರಹೊನ್ನೆಯ ಅನರ್ಘ್ಯ ರತ್ನಗಳಾದ ನಯನ ಬಜಕೂಡ್ಲು ಮೇಡಂ, ಗಾಯತ್ರಿದೇವಿ ಸಜ್ಜನ್ ಮೇಡಂ ಹಾಗೂ ನಾಗರತ್ನ ಮೇಡಂ ಅವರಿಗೆ.
ಈ ಎಲ್ಲಾ ರತ್ನಗಳ ಆಕರವಾದ ಹೇಮಾಮಾಲಾ ಮೇಡಂ ಗೂ ಅನಂತಾನಂತ ಧನ್ಯವಾದಗಳು
ಜೀವನದ ಎಲ್ಲಾ ಹಂತಗಳಿಗೂ ಅನ್ವಯ ವಾಗುವ ಕವನ. ತುಂಬಾ ಸರಳವಾಗಿ ಸುಂದರವಾಗಿ ಮೂಡಿ ಬಂದಿದೆ ,,
ಬಾಳ ನದಿಯಲ್ಲಿ ನಮ್ಮ ಪಯಣದ ಗುರಿಯನ್ನು, ಪರಿಯನ್ನು ಯಥಾವತ್ತಾಗಿ ಚಿತ್ರಿಸಿದ ಕವನ ಚೆನ್ನಾಗಿದೆ.
ಬಾಳ ಪಯಣವನ್ನು ಪ್ರವಾಹಕ್ಕೆ ಸಿಕ್ಕ ತರಗೆಲೆಗೆ ಹೋಲಿಸುತ್ತಾ ಒಳಹರಿವುಗಳ ಕುರಿತಾಗಿ ಬಿಚ್ಚಿಟ್ಟ, ಬಚ್ಚಿಟ್ಟ ಕವನ ಅರ್ಥವತ್ತಾಗಿ ಮೂಡಿ ಬಂದಿದೆ.
ಸುರಹೊನ್ನೆಯ ಪ್ರತಿಭಾವಂತ ಬರಹಗಾರರು ಆಗಿರುವ H. N Manjuraj sir ತುಂಬಾ ಅದ್ಬತವಾಗಿ ವಿಮರ್ಶೆ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಿಮ್ಮ ಈ ಪ್ರತಿಕ್ರಿಯೆ ನಮಗೆ ದಾರಿದೀಪವಾಗಿದೆ. ನೀವು ಹೇಳಿದಂತೆ ದಿನಕರ ದೇಸಾಯಿ ಅವರ ಕವನ ಓದುತ್ತೇನೆ ಸರ್…….ಈ ಬರಹದ ಪ್ರಕ್ರಿಯೆ ನೀವು ಸೂಚಿಸದಂತೆ ನಮ್ಮ ಅಂತರಾಳದ ಶೋಧನೆ………ತುಂಬಾ ತುಂಬಾ ಧನ್ಯವಾದಗಳು ಸರ್.
ಸುರಹೊನ್ನೆ ಬಳಗದ ಜೀವಾಳವಾದ ಹಿರಿಯರು ಆಗಿರುವ ಪದ್ಮಾ ಆನಂದ್ ಮೇಡಂ ಹಾಗೂ ಶಂಕರಿಶರ್ಮ ಮೇಡಂ ಓದಿ ಪ್ರತಿಕ್ರಿಯೆ ನೀಡುವುದೇ ನಮಗೆ ಆಶೀರ್ವಾದ ಇದ್ದಹಾಗೇ.,.ಅವರಿಗೆ ಪ್ರಣಾಮಗಳು
TVB Rajan sir ಓದಿ ಮನದಾಳದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು.
ನಮ್ಮ ಬರಹವನ್ನು ಪ್ರಕಟಿಸಿ ಅದನ್ನು ಇಷ್ಟೆಲ್ಲಾ ಮಹನೀಯರು ಓದಲು ಕಾರಣವಾಗುವಂತೆ ಮಾಡಿರುವ ಸುರಹೊನ್ನೆ ಪತ್ರಿಕೆಯ ಸಂಪಾದಕರಾದ ಹೇಮಾಮಾಲಾ ಮೇಡಂ ಗೆ ಮತ್ತೊಮ್ಮೆ ಧನ್ಯವಾದಗಳು