ಪ್ರವಾಸ

ದೇವರ ದ್ವೀಪ ಬಾಲಿ : ಪುಟ-10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
‘ಕಿಂತಾಮಣಿ’ ಎಂಬ  ಜ್ವಾಲಾಮುಖಿ
ನಮಗೆ ಕೊಡಲಾದ  ಪ್ರೇಕ್ಷಣೀಯ ಸ್ಥಳಗಳಲ್ಲಿ ‘ಕಿಂತಾಮಣಿ’ ಎಂಬ  ಜ್ವಾಲಾಮುಖಿ ಪರ್ವತದ ಹೆಸರನ್ನು  ಓದಿ ಬಹಳ ಕುತೂಹಲಿಯಾಗಿದ್ದೆ.    ಬಟೂರ್ ನ  ಬೆಸಾಕಿಹ್ ದೇವಾಲಯ ಸಮುಚ್ಛಯದಿಂದ  ಅಂದಾಜು 2 ಕಿಮೀ ದೂರದಲ್ಲಿರುವ   ವೀಕ್ಷಣಾ ಸ್ಥಳಕ್ಕೆ ನಮ್ಮನ್ನು ಕರೆದೊಯ್ದರು. ಅಲ್ಲಿಗೆ ಕಾಣಿಸುವ ‘ಬಟೂರ್ ಪರ್ವತ’ದ ತುದಿಯಲ್ಲಿ ಜ್ವಾಲಾಮುಖಿಯ ಬಾಯಿ ಇದೆಯಂತೆ. ಕರಿಮಣ್ಣು, ಜೇಡಿಮಣ್ಣು ಚೆಲ್ಲಿದ್ದಂತೆ ಕಾಣಿಸುತ್ತಿದ್ದ ಆ ಶಿಖರವು ನಾವಿದ್ದ ಜಾಗದಿಂದ  ನೋಡುವಾಗ  ವಿಶೇಷ ಪರ್ವತವಾಗಿ ಕಾಣಿಸಲಿಲ್ಲ. ಸುಮಾರು 3-4 ಗಂಟೆ ಚಾರಣ ಮಾಡಿದರೆ   ಬಟೂರ್  ಪರ್ವತದ ಶಿಖರಕ್ಕೆ ತಲಪಲು ಸಾಧ್ಯವಿದೆಯಂತೆ.  1963 ರಲ್ಲಿ  ಈ ಜ್ವಾಲಾಮುಖಿಯು  ಸಿಡಿದು ಹೊರಹೊಮ್ಮಿದ ಲಾವಾ ಮತ್ತು ಬೆಂಕಿಜ್ವಾಲೆಯಿಂದ  1000 ಕ್ಕೂ ಹೆಚ್ಚು ಸಾವುನೋವುಗಳು ಸಂಭವಿಸಿದುವಂತೆ.  ವೀಕ್ಷಣಾ ಸ್ಥಳದ  ಪಕ್ಕದಲ್ಲಿ ಸ್ಥಳೀಯರು  ಮಣಿಸರ, ಟಿ ಶರ್ಟ್,  ಕಿತ್ತಳೆ ಇತ್ಯಾದಿ ಮಾರುತ್ತಿದ್ದರು. ನಮ್ಮನ್ನು ನೋಡಿದ ತಕ್ಷಣ ‘ಇಂಡಿಯಾ..ರೂಪೀಸ್’ ಎಂದು ಭಾರತೀಯ ಕರೆನ್ಸಿಯನ್ನೂ ಸ್ವೀಕರಿಸುತ್ತೇವೆಂದು ದುಂಬಾಲು ಬೀಳುತ್ತಿದ್ದರು. ನಾವು ಕೆಲವರು  ಸಣ್ಣ-ಪುಟ್ಟ ವ್ಯಾಪಾರ ಮಾಡಿದೆವು.  

ಕ್ಲುಂಗ್ ಕುಂಗ್  (Klungkung) ಜಸ್ಟೀಸ್ ಹೌಸ್
17 ನೆ ಯ ಶತಮಾನದಲ್ಲಿ ಕ್ಲುಂಗ್ ಕುಂಗ್   ವಂಶದವರು  ಆಡಳಿತ ನಡೆಸುತ್ತಿದ್ದ  ಸ್ಥಳದಲ್ಲಿ ಮೊದಲು ಅರಮನೆಯತ್ತು.  ಆ ಕಾಲದಲ್ಲಿ ಡಚ ವಸಾಹತುಶಾಯಿ  ಜನರೊಂದಿಗೆ ನಡೆದಿದ್ದ ಯುದ್ಧದಲ್ಲಿ ಅರಮನೆಯ ಬಹುತೇಕ ಭಾಗಗಳು ನಾಶವಾಗಿದೆ.  ‘ಕೆರ್ತಾ ಗೋಸಾ’  (Kertha Gosa) ಎಂದು ಕರೆಯಲ್ಪಡುವ ಸುಂದರವಾದ ನ್ಯಾಯ ತೀರ್ಮಾನ ಸಭಾಂಗಣ ಈಗಲೂ ಇದೆ. ಈ ಸಭಾಂಗಣದ ಮೇಲ್ಚಾವಣಿಯಲ್ಲಿ ಇರುವ ವರ್ಣಚಿತ್ರ, ರೇಖಾಚಿತ್ರಗಳಲ್ಲಿ ಮಹಾಭಾರತದ ಪಾತ್ರಗಳ ಚಿತ್ರಗಳಿವೆ.  ಕೆರ್ತಾ ಗೋಸಾದ ವಿಶಾಲವಾದ ಮತ್ತು ತೆರೆದ ಸಭಾಂಗಣಗಳು, ದ್ವಾರಗಳು, ಗೋಡೆಗಳು ಮತ್ತು ಮುಖ್ಯ ರಚನೆಗಳಲ್ಲಿ  ಸೊಗಸಾದ ಸಾಂಪ್ರದಾಯಿಕ ಬಾಲಿನೀಸ್ ವಾಸ್ತುಶಿಲ್ಪವನ್ನು ನೋಡಬಹುದು.  ಪಕ್ಕದಲ್ಲಿ ಕೆರೆಯ ನಡುವೆ ಕಟ್ಟಲಾದ ಮಂಟಪವೊಂದಿದೆ.  ಲಿಂಗದ ಆಕಾರದ  ಮಂದಿರವೊಂದಿದೆ.  ಆವರಣದಲ್ಲಿ ಇರುವ ಮ್ಯೂಸಿಯಂನಲ್ಲಿ  ರಾಜರ ಕಾಲದ ವಸ್ತುಗಳು, ಆಯುಧಗಳು, ಯುದ್ದದ ಚಿತ್ರಗಳು, ಸಂಗೀತೋಪಕರಣಗಳು ….ಹೀಗೆ ಹಲವಾರು  ವಸ್ತುಗಳನ್ನು ಓರಣವಾಗಿ  ಜೋಡಿಸಿ ಇಟ್ಟಿದ್ದಾರೆ.

ಸರೊನ್ (Saron) ಎಂಬ  ಸಂಗೀತೋಪಕರಣ
ಇದ್ದಕಿದ್ದಂತೆ  ಸುಶ್ರಾವ್ಯವಾದ ನಾದ ತೇಲಿ ಬಂತು.  ಗಮನಿಸಿದಾಗ ನಮ್ಮ ಮಾರ್ಗದರ್ಶಿ  ಮುದ್ದಣನು  ಸಂಗೀತೋಪಕರಣವೊಂದನ್ನು ನುಡಿಸುತ್ತಿದ್ದುದು ಕಾಣಿಸಿತು. ವಿಚಾರಿಸಿದಾಗ ಅದು ‘ಸರೊನ್ ‘  ಎಂಬ  ದೇಶೀ  ಆರ್ಕೆಸ್ಟ್ರಾಗಳಲ್ಲಿ ಬಳಸುವ ವಾದ್ಯ ಎಂದು ಗೊತ್ತಾಯಿತು.  ಲೋಹ ಮತ್ತು  ಅರ್ಧವಾಗಿ ಸೀಳಿದ 8-10 ಬಿದಿರಿನ ತುಂಡುಗಳನ್ನು ಜೋಡಿಸಿದ್ದ ಉಪಕರಣವದು.  ಎರಡು ಬಿದಿರಿನ ಕಡ್ಡಿಗಳನ್ನು  ಅರ್ಧ ಸೀಳಿದ ಬಿದಿರಿನ  ಜೋಡಣೆ ಮೇಲೆ  ಲಯಬದ್ಧವಾಗಿ ಬಡಿಯುವಾಗ ಇಂಪಾದ ಸಂಗೀತ ಕೇಳುತ್ತಿತ್ತು.   ಭಾರತದ  ಶ್ರೀಕೃಷ್ಣನ ಕೊಳಲು ರೂಪದಲ್ಲಿ ಕಂಗೊಳಿಸಿದ ಎಳೆ ಬಿದಿರು, ಇಂಡೋನೇಶ್ಯಾದಲ್ಲಿ ದೊಡ್ಡ ಪಿಯಾನೋದ ಗಾತ್ರದಲ್ಲಿ ಲಯವಾದ್ಯವಾಗಿ ರೂಪುಗೊಂಡಿರುವ ರೀತಿ ಸೋಜಿಗವೆನಿಸಿತು. 


ಕೃಷ್ಣ ಒಲೆಹ್ ಒಲೆಹ್ (ಬಾಲಿಯ ಹಳ್ಳಿಯಲ್ಲಿ ಮಾಲ್ )
ಬಾಲಿಗೆ ಬಂದ ನೆನಪಿಗೆ ಏನಾದರೂ ಸ್ಮರಣಿಕೆ ಖರೀದಿಸುವ ಹುಮ್ಮಸ್ಸಿತ್ತು. ಈ ಬಗ್ಗೆ ಮುದ್ದಣ ಅವರನ್ನು ಕೇಳಿದಾಗ, ಸಂಜೆ ನಿಮ್ಮನ್ನು ಕೃಷ್ಣ ವಿಲೇಜ್ ಶಾಪಿಂಗ್ ಮಾಲ್ ಗೆ ಕರೆದೊಯ್ಯುವೆ ಎಂದ. ಅಲ್ಲಿಗೆ ತಲಪಿದಾಗ, ನಮ್ಮೂರ ನೋಟ ಕೈಬೀಸಿ ಕರೆಯಿತು. ಭವ್ಯವಾದ ಶಾಪಿಂಗ್ ಮಾಲ್ ಮುಂದೆ ಶ್ರೀಕೃಷ್ಣನ ಸುಂದರವಾದ ವಿಗ್ರಹ. ಅದರ ಎದುರು ಹಸಿರು ಭತ್ತದ ಗದ್ದೆಗಳು, ಪ್ರವಾಸಿಗರಿಗೆ ಕೂರಲು ಹಕ್ಕಿಗೂಡಿನಂತಹ ಆಸನಗಳು, ಪುಟ್ಟ ಕೊಳ, ಅದರಲ್ಲಿ ಅರಳಿದ ನೈದಿಲೆಗಳು, ಭತ್ತದ ಗದ್ದೆಯ ಏರಿಯಲ್ಲಿ ಜಾಗರೂಕತೆಯಿಂದ ನಡೆದಾಗ ಎದುರಾದ ಕಾವಲುಗಾರನ ಅಟ್ಟಣಿಗೆ….. ಅಹಾ, ಭಾರತದ ಹಳ್ಳಿಗಳಲ್ಲಿ ಮರೆಯಾಗುತ್ತಿರುವ ಗ್ರಾಮೀಣ ದೃಶ್ಯ ಇಲ್ಲಿ ಅನಾವರಣಗೊಂಡಿತ್ತು.

ಅಲ್ಲಿ ಕೆಲವು ಫೊಟೊ ಕ್ಲಿಕ್ಕಿಸಿ ಮಾಲ್ ನ ಒಳಗಡೆ ಹೋದಾಗ, ವೈಭವಯುತವಾದ ಚಿತ್ರಣ. ಮುಖ್ಯದ್ವಾರದಲ್ಲಿ ಇರಿಸಲಾಗಿದ್ದ, ಅಲಂಕೃತ ವಿಚಿತ್ರ ಪ್ರಾಣಿಯೊಂದರ ಪ್ರತಿಕೃತಿ ಗಮನ ಸೆಳೆಯಿತು. ಅದು ಬಾಲಿನೀಸ್ ಸಂಸ್ಕೃತಿಯಲ್ಲಿ ಅದೃಷ್ಟ ಎಂದು ನಂಬಲಾಗುವ ಕಾಲ್ಪನಿಕ ಪ್ರಾಣಿ ‘ಬಾರಂಗೊ’ (Barong) ಅಂತೆ. ಬಾಲಿನೀಸ್ ‘ಬಾರಂಗೊ’ ನೃತ್ಯಪ್ರಕಾರದಲ್ಲಿ ಇಂತಹ ಬೊಂಬೆಯನ್ನು ತಮ್ಮ ಮೈಯಲ್ಲಿ ಆಧರಿಸಿಕೊಂಡು ಕಲಾವಿದರು ನೃತ್ಯ ಮಾಡುತ್ತಾರಂತೆ.

ಎಲ್ಲಾ ಮಾಲ್ ಗಳಲ್ಲಿ ಇರುವಂತೆ ಇಲ್ಲಿಯೂ ವಿವಿಧ ವಸ್ತುಗಳು, ವಿವಿಧ ಸ್ಥಳೀಯ ಹಣ್ಣು-ತರಕಾರಿಗಳು ಮಾರಾಟಕ್ಕೆ ಲಭ್ಯವಿದ್ದುವು . ನಮ್ಮ ತಂಡದ ಕೆಲವರು ಹಣ್ಣುಗಳು, ಟಿ-ಶರ್ಟ್ಸ್ ಇತ್ಯಾದಿ ಖರೀದಿ ಮಾಡಿದೆವು. ಆಮೇಲೆ ಹೋಂ ಸ್ಟೇಗೆ ಹಿಂತಿರುಗಿ , ಬಾಯಿಗೆ ರುಚಿಯಾದ , ಹೊಟ್ಟೆಗೆ ಹಿತವಾದ ಅನ್ನ, ಸಾರು, ಪಲ್ಯ, ಮಜ್ಜಿಗೆ ಉಪ್ಪಿನಕಾಯಿ ಊಟ ಮುಗಿಸಿ, ಬಾಲಿಯಲ್ಲಿ ಮೂರನೆಯ ದಿನಕ್ಕೆ ಮಂಗಳ ಹಾಡಿದೆವು.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=44132

ಹೇಮಮಾಲಾ.ಬಿ. ಮೈಸೂರು

2 Comments on “ದೇವರ ದ್ವೀಪ ಬಾಲಿ : ಪುಟ-10

  1. ಪ್ರವಾಸ ಕಥನ ಪೂರಕ ಚಿತ್ರ ಗಳೊಂದಿಗೆ ಹಾಗೂ ವಿವರಣೆಗಳೊಂದಿಗೆ ಚಂದವಾಗಿ ಮೂಡಿಬಂದಿದೆ… ಗೆಳತಿ ಹೇಮಾ… ಧನ್ಯವಾದಗಳು

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *