ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
“ಭಯಪಡಕ್ಕೆ ಅವನೇನು ಹುಲೀನಾ, ಕರಡೀನಾ?”
“ಹಾಗಲ್ಲ ಆಂಟಿ……..”
“ಹೋಗಲಿ ಬಿಡು. ನಾನೇ ಸಂಧ್ಯಕ್ಕಂಗೆ ಹೇಳ್ತೀನಿ. ನಿನಗೆ ಭಾವನ ನಂಬರ್ ಕಳಿಸ್ತೇನೆ.”
“ಓ.ಕೆ. ಆಂಟಿ” ಎಂದ ರಾಗಿಣಿ ವಾರುಣಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.
“ಸರಿ ಬಿಡು. ನೀನೂ ಕಾಲೇಜ್ ಬಿಡ್ತೀಯಾಂತ ಆಯ್ತು.”
“ಒಂದು ಮಾತು ಹೇಳಲಾ?”
“ಹೇಳು……….”
“ನಿನ್ನ ಜೊತೆ ಯಾರು ತುಂಬಾ ಕ್ಲೋಸ್ ಆಗಿರ‍್ತಾರೋ ಅವರಿಗೆ ಬೇಗ ಮದುವೆಯಾಗತ್ತೆ ಅನ್ನಿಸ್ತಿದೆ. ಮಾನಸಾ ಮದುವೆ ನಿಶ್ಚಯವಾಯ್ತು. ನನ್ನದು ಆಗುವಂತಿದೆ. ಮುಂದೆ ಯಾರದು?”
“ಮನೆ ಮುಂದೆ ಒಂದು ಬೋರ್ಡ್ ಹಾಕೋಣಾಂತಿದ್ದೇನೆ.”
“ಏನಂತ?”
“ಯಾರು ಯಾರಿಗೆ ಮದುವೆ ಸೆಟ್ಲ್ ಆಗಿಲ್ಲವೋ ಅಂತ ಹುಡುಗಿಯರು ಬಂದು ನನ್ನ ಜೊತೆ ಇರೀಂತ……”
ರಾಗಿಣಿ ಜೋರಾಗಿ ನಕ್ಕಳು.
ಮರುದಿನ ರಾಗಿಣಿ ವಾಪಸ್ಸಾದಳು.

ಆ ದಿನವೇ ತಮ್ಮ ಮನೆಗೆ ಹೋದಳು. ಬುಧವಾರ ಅವಳು ಕ್ಲಾಸ್‌ನಲ್ಲಿದ್ದಾಗ ಚಿನ್ನಪ್ಪ ಒಂದು ಚೀಟಿ ತಂದು ಲೆಕ್ಚರರ್ ಕೈಗೆ ನೀಡಿದ. ಅವರು ಅದನ್ನು ಓದಿ ಹೇಳಿದರು. “ರಾಗಿಣಿ, ನಿಮ್ಮನ್ನು ನೋಡಲು ನಿಮ್ಮ ಊರಿನವರು ಯಾರೋ ಬಂದಿದ್ದಾರೆ. ಯು ಮೇ ಗೋ………”
ಅವಳು ಆತುರಾತುರದಿಂದ ಹೊರಗೆ ಬಂದಳು. ತಮ್ಮ ಊರಿನಿಂದ ಯಾವ ಸುದ್ದಿ ಬಂದಿದೆಯೋ ಎಂಬ ಆತಂಕ ಅವಳನ್ನು ಕಾಡಿತು. ಬಾಲಾಜಿ ಮುಗುಳ್ನಗುತ್ತಾ ನಿಂತಿದ್ದ.
“ನೀವು?”
“ಯಾಕೆ ಬರಬಾರದಿತ್ತಾ?”
ಅವಳು ಉತ್ತರಿಸಲಿಲ್ಲ.
“ಬನ್ನಿ ಹೋಗೋಣ.”
ಅವನು ಕಾರ್‌ನ ಬಾಗಿಲು ತೆಗೆದ. ಅವಳು ಕುಳಿತಳು.
“ಯಾವಾಗ ಬಂದ್ರಿ?”
“ನೆನ್ನೆ ರಾತ್ರಿ ಬೆಂಗಳೂರಿಗೆ ಬಂದೆ. ನನ್ನ ಫ್ರೆಂಡ್‌ನ ಕಾರು ತೆಗೆದುಕೊಂಡು ಬೆಳಿಗ್ಗೆ ಮೈಸೂರಿಗೆ ಬಂದೆ. ಹೋಟೆಲ್ ಸ್ಯಾಂಡಲ್‌ವುಡ್‌ನಲ್ಲಿ ಇಳಿದುಕೊಂಡಿದ್ದೇನೆ.”
“ಆಂನ್ನ ಮೀಟ್ ಮಾಡಿದ್ರಾ?”
“ಮಾಡೋಣ ಅಂದ್ಕೊಂಡೆ. ಮನೆ ಗೊತ್ತಾಗಲಿಲ್ಲ. ಗಂಗೋತ್ರಿಯಾದರೆ ಎಲ್ಲರಿಗೂ ಗೊತ್ತಲ್ವಾ ಅದಕ್ಕೆ ಬಂದೆ.”
“ಈಗ ಮನೆಗೆ ಹೋಗೋಣ. ನೀವು ಮೊದಲು ಅವರನ್ನು ಮೀಟ್ ಮಾಡಿ. ಅವರ ಪರ‍್ಮಿಶನ್ ಇಲ್ಲದೆ ನಾನು ಎಲ್ಲಿಗೂ ಬರಲ್ಲ.”
“ಆಯ್ತು. ಮನೆ ಎಲ್ಲಿದೆ ಹೇಳಿ.”

ಜೊತೆಯಾಗಿ ಬಂದವರನ್ನು ನೋಡಿ ಚಂದ್ರಾವತಿಗೆ ಖುಷಿಯಾಯಿತು.
“ಯಾವಾಗ ಬಂದೆ?”
ಅವನು ಹೇಳಿದ.
“ಅಯ್ಯಪ್ಪ ಫೋನ್ ಮಾಡಿದ್ರಾ?”
“ಹೌದು ಚಿಕ್ಕಮ್ಮ. ಅಮ್ಮ-ಅಪ್ಪ ಈ ಭಾನುವಾರ ಬರ‍್ತಾರೆ. ಅಯ್ಯಪ್ಪ ಅವರ ಮಿಸೆಸ್, ರಾಗಿಣಿಯ ತಾಯಿ, ತಮ್ಮ ಎಲ್ಲರೂ ಶನಿವಾರ ಮೈಸೂರಿಗೆ ರ‍್ತಾರಂತೆ. ಭಾನುವಾರ ಸರಳವಾಗಿ ಎಂಗೇಜ್‌ಮೆಂಟ್ ಮಾಡಬೇಕೂಂತ ಇದ್ದಾರೆ.”
“ಹೌದಾ? ಒಳ್ಳೆಯದು ಮದುವೆ ಯಾವಾಗಂತೆ?”
“ಇನ್ನು ಎರಡು ತಿಂಗಳ ನಂತರ ತಿರುಪತಿಯಲ್ಲಿ ಮದುವೆ. ಆಮೇಲೆ ಹೈದರಾಬಾದ್‌ನಲ್ಲಿ ರಿಸೆಪ್ಷನ್.”
“ರಾಗಿಣಿಯ ಓದು?”
“ರಾಗಿಣಿಗೆ ಇಷ್ಟವಿದ್ದರೆ, ಹೈದರಾಬಾದ್‌ನಲ್ಲೇ ಓದಬಹುದು. ಅಪ್ಪ ಹೇಗೂ ಡಿಗ್ರಿಯಾಗಿದೆ. ಎಲ್.ಎಲ್.ಬಿ. ಮಾಡಲಿ ಅಂತಿದ್ರು.”
“ಏನೂ ಬೇಡ. ಇದುವರೆಗೂ ನಿಮ್ಮಮ್ಮ ಆ ದೊಡ್ಡ ಮನೆಯ ಉಸ್ತುವಾರಿ ನೋಡಿಕೊಂಡು ಸೋತಿದ್ದಾಳೆ. ರಾಗಿಣಿ ಆ ಕೆಲಸ ಮಾಡಲಿ.”
ರಾಗಿಣಿ ಏನೂ ಮಾತಾಡಲಿಲ್ಲ. ಅಷ್ಟರಲ್ಲಿ ಮಲ್ಲಿ ಮಜ್ಜಿಗೆ ತಂದು ಕೊಟ್ಟಳು.
ಚಂದ್ರಾವತಿ ಅವಳನ್ನು ಪರಿಚಯಿಸಿದರು.
“ಬಾಲಾಜಪ್ಪ, ಇವರು ನನ್ನ ಹೈದರಾಬಾದ್‌ಗೆ ಕರ‍್ಕೊಂಡು ಬರಲಿಲ್ಲ. ಆದರೆ ಈ ಸಲ ಮದುವೆಗೆ ರ‍್ಕೊಂಡು ಬರದಿದ್ರೆ ಮಾತ್ರ ನಾನು ಸುಮ್ನಿರಲ್ಲ.”
“ಏನು ಮಾಡ್ತೀಯಾ?” ರಾಗಿಣಿ ನಗುತ್ತಾ ಕೇಳಿದಳು.
“ಈ ಮನೆ ಕೆಲಸ ಬಿಡ್ತೀನಿ.”
“ತಾಯಿ, ನಾನು ಹೋಗದಿದ್ರೂ ನಿನ್ನನ್ನು ಕಳಿಸ್ತೀನಿ. ಕೆಲಸ ಬಿಡುವ ಮಾತು ಮಾತ್ರ ಆಡಬೇಡ” ಚಂದ್ರಾವತಿ ಗದರಿದರು.


ನಾಗರಾಜನ ಮದುವೆಗೆ ಒಂದು ತಿಂಗಳಿತ್ತು. ಮಾನಸ ಮದುವೆಗೆ 11/2 ತಿಂಗಳಿತ್ತು. ರಾಗಿಣಿ ಮದುವೆ ಯಾವಾಗ ಆಗುತ್ತದೋ ಗೊತ್ತಿರಲಿಲ್ಲ. ವರೂಗೆ ತಲೆ ಕೆಟ್ಟಂತಾಗಿತ್ತು. ಮೂವರಿಗೂ ಹೇಳಿದ್ದಳು.
“ನೀವು ಭಾನುವಾರ ಮದುವೆ ಮಾಡಿಕೊಂಡ್ರೆ ಬರ‍್ತೀನಿ. ಇಲ್ಲದಿದ್ದರೆ ಇಲ್ಲ. ದಯವಿಟ್ಟು ನನ್ನನ್ನು ಯಾರೂ ಒತ್ತಾಯ ಮಾಡಬೇಡಿ.”
“ಏನೇ ಹಾಗಂದ್ರೆ?” ಮಾನಸ ಕೇಳಿದ್ದಳು.
“ನಾನು ಒಳ್ಳೆಯ ಮಾರ್ಕ್ಸ್ ತೆಗೆದರೆ ನನ್ನ ಕನಸು ನನಸಾಗೋದು ನನ್ನ ಮೇಲೆ ತಮ್ಮ, ತಂಗಿಯರ ಜವಾಬ್ದಾರಿಯಿದೆ. ನಮ್ಮ ಶರು ಮುಂದಿನ ವರ್ಷ ಬಿ.ಎ. ಓದ್ತೀನಿ ಅಂದಿದ್ದಾಳೆ. ಮತ್ತೊಂದು ಸಲ ಎಲ್‌ಎಲ್.ಬಿ. ಅಂತಾಳೆ. ಸ್ಥಿಮಿತಬುದ್ಧೀನೇ ಇಲ್ಲ. ನಾಳೆ ಮದುವೆ ಆಗ್ತೀನಿ ಅಂದ್ರೂ ಆಶ್ಚರ್ಯವಿಲ್ಲ.”
“ನಿನಗಿಂತ ಅವಳು ಎಷ್ಟು ವರ್ಷ ಚಿಕ್ಕವಳು?”
“3 ವರ್ಷ ಚಿಕ್ಕವಳು. ಪಿ.ಯು.ಸಿ. ಆಗತ್ತಲೂ 2 ವರ್ಷ ಕಾಲೇಜ್‌ಗೆ ಹೋಗಲಿಲ್ಲ.”
“ಯಾಕೆ?”
“ಕಂಪ್ಯೂಟರ್ ಕಲಿತರೆ ತುಂಬಾ ಸಂಪಾದಿಸಬಹುದೂಂತ ಭಾವಿಸಿದ್ದಳು. ಕಂಪ್ಯೂಟರ್ ಕಲಿತಳು. ತುಂಬಾ ಕಡೆ ಗ್ರಾಜುಯೇಟ್ ಆಗಿರಬೇಕು ಅಂತಹವರಿಗೇ ಕೆಲಸ ಅಂದ್ರು. ಅವಳ ಕಂಪ್ಯೂಟರ್ ಸೆಂಟರ್‌ನವರು ಇವಳ ಕೈಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಡಿ.ಟಿ.ಪಿ ಮಾಡಿಸಿ 10-15 ರೂ. ಕೈಗಿಡ್ತಿದ್ದರು. ಈಗಲೂ ಅಲ್ಲೇ ಕೆಲಸ ಮಾಡ್ತಾಳೆ. ನನ್ನ ತಮ್ಮನಿಗೆ ಇಂಜಿನಿಯರ್ ಆಗಬೇಕೂಂತ ಆಸೆಯಿದೆ. ಚೆನ್ನಾಗಿ ಓದ್ತಾನೆ.”
“ಆದರೂ ನೀನು ಮದುವೆಗೆ ಬರದಿದ್ದರೆ ಬೇಜಾರು ಕಣೆ.”
“ಪ್ಲೀಸ್ ಒತ್ತಾಯ ಮಾಡಬೇಡ” ಎಂದಳು ವರು.

ಭಾನುವಾರ ಸರಳವಾಗಿ ರಾಗಿಣಿಯ ಎಂಗೇಜ್‌ಮೆಂಟ್ ನಡೆಯಿತು.
“ನಾನು ಫೋನ್ ಮಾಡ್ತೀನಿ. ಕಂಚಿಗೆ ಹೋಗಿ ಸೀರೆ ತರೋಣ” ಎಂದರು ಸಂಧ್ಯಾ.
“ಆಗಲಿ ಅದಕ್ಕೇನಂತೆ” ಎಂದರು ಕಾವೇರಿಯಮ್ಮ.
ತಿರುಪತಿ ಮದುವೆಗಾಗಲಿ, ಹೈದರಬಾದ್ ರಿಸೆಪ್ಷನ್‌ಗಾಗಲಿ ತನ್ನ ಕ್ಲಾಸ್‌ನವರು ಬರಲಾಗುವುದಿಲ್ಲವೆಂದು ರಾಗಿಣಿಗೆ ಗೊತ್ತಿತ್ತು. ಬಾಲಾಜಿ ಅವಳಿಗಾಗಿ ಮೈಸೂರಿನಲ್ಲಿ ‘ಡ್ಯಾಪೋಡಿಲ್ಸ್’ ಹೋಟೆಲ್‌ನಲ್ಲಿ ಪಾರ್ಟಿ ಅರೇಂಜ್ ಮಾಡಿ, ಅವಳ ಲೆಕ್ಚರ‍್ಸ್ ಹಾಗೂ ಕ್ಲಾಸ್‌ಮೇಟ್ಸ್ ಗೆ ಖುದ್ದಾಗಿ ಆಹ್ವಾನಿಸಿದ. ತೇಜಸ್ವಿ ಕಾರಿಯಪ್ಪ, ಚಂದ್ರಾ ಆಂಟಿ ಶಾರದ, ಮಲ್ಲಿ ಪಾರ್ಟಿ ಅಟೆಂಡ್ ಮಾಡಿದರು.
ಚಂದ್ರಾವತಿ ಒಂದು ಸಾಯಂಕಾಲ ಹೇಳಿದರು.
“ಮುಂದಿನವಾರ ಕಂಚಿಗೆ ಹೋಗಬೇಕು. ನೀನು ಬರಲ್ಲ ಅಂತಿದ್ದೀಯಲ್ಲಾ?”
“ಹೌದು ಆಂಟಿ. ಕಾವೇರಿಯಮ್ಮ ಬರ‍್ತಾರೆ. ರಾಗಿಣಿ, ಅವರ ತಾಯಿ ಬರ‍್ತಾರೆ. ನಿಮ್ಮಕ್ಕ ಬರ‍್ತಾರೆ. ನಾನ್ಯಾಕೆ? ನಾನು ಈ ಸಲ ಸೆಮಿನಾರ್‌ನಲ್ಲಿ ಪೇಪರ್ ಪ್ರೆಸೆಂಟೇಷನ್ ಒಪ್ಪಿಕೊಂಡಿದ್ದೇನೆ. ಪ್ರಿಪೇರ್ ಆಗಬೇಕು.”
“ಈ ಸಲಾನೂ ಡ್ರಾಮಾ ತೊಗೊಂಡಿದ್ದೀಯಾ?”
“ಇಲ್ಲ ಆಂಟಿ. ಕೀಟ್ಸ್ ದು ಪದ್ಯ ತೆಗೆದುಕೊಳ್ಳೋಣಾಂತಿದ್ದೇನೆ.”
“ಯಾವ ಪದ್ಯ?”
“ಟು ಅಟಮನ್ (ಖಿo ಂuಣumಟಿ)”
“ಪದ್ಯ ತುಂಬಾ ಚೆನ್ನಾಗಿದೆ.”
“ಹೌದು ಆಂಟಿ. ರಾಮಗೋಪಾಲ್ ವರ್ಡ್ಸ್ ವರ್ತ್ ದು ತೆಗೊಂಡಿದ್ದಾರೆ. ರಾಗಿಣಿ ಇರಲ್ವಲ್ಲಾ – ನಾನು ನಿಮ್ಮ ಮನೆಗೆ ಬರಬಹುದಾ?” ಅಂತ ಕೇಳಿದರು.
“ಅದಕ್ಕೇನಂತೆ? ಧಾರಾಳವಾಗಿ ಬರಕ್ಕೆ ಹೇಳು.” ಎಂದರು ಚಂದ್ರಾ ಆಂಟಿ.

ರಾಗಿಣಿ ಕಾಲೇಜ್‌ಗೆ ಬರುವುದು ನಿಲ್ಲಿಸಿದ್ದಳು. ಕೃತಿಕಾ ಸಿಂಧು ಹೆಚ್ಚು ಕೆಳಗೆ ಬರುತ್ತಿರಲಿಲ್ಲ. ಆದರೆ ಅವರಿಗೆ ತಿರುಪತಿಗೆ ಮದುವೆಗೆ ಹೋಗುವ ಮನಸ್ಸಿತ್ತು.
“ಆಂಟಿ, ನೀವು ಶಾರದಾನ್ನ ಬಿಟ್ಟು ಹೋಗಿ. ನಾನು ಮಲ್ಲಿ ನೋಡಿಕೊಳ್ತೇವೆ. ನಿಮ್ಮನ್ನು ಬಿಟ್ಟಿರುವುದು ಅವಳಿಗೆ ಅಭ್ಯಾಸವಾಗಲಿ.”
“ಈ ಭಾನುವಾರ ಸತ್ಯಮ್ಮ ರ‍್ತಿದ್ದಾರಂತೆ. ಅವರು ನನ್ನನ್ನು ಏನೋ ಕೇಳಬೇಕಂತೆ. ನಾನು ಬಿಟ್ಟು ಹೋಗ್ತೀನಿ ನೋಡೋಣ.”
“ಹಾಗೇ ಮಾಡಿ, ಆದರೆ ಹೇಳಿ ಹೋಗಿ.”
ಆ ಭಾನುವಾರ ಬೆಳಿಗ್ಗೆ ತಿಂಡಿ ತಿಂದುಕೊಂಡು ಮಗಳಿಗೆ ಹೇಳಿ ಚಂದ್ರಾವತಿ ಸತ್ಯಮ್ಮನನ್ನು ಭೇಟಿ ಮಾಡಲು ಹೋದರು. ಶಾರದಾ ಕೊಂಚವೂ ಗಲಾಟೆ ಮಾಡಲಿಲ್ಲ. ಆರಾಮವಾಗಿ ಟಿ.ವಿ. ನೋಡಿದಳು. ನಂತರ ನಿದ್ರೆ ಮಾಡಿದಳು. “ಅಮ್ಮ ಎಲ್ಲಿ” ಎಂದು ಕೂಡ ಕೇಳಲಿಲ್ಲ.

ಚಂದ್ರಾವತಿ ಒಂದು ಗಂಟೆಗೆ ವಾಪಸ್ಸಾದರು. “ಊಟ ಆಯ್ತು ವರು. ಸತ್ಯಮ್ಮ ತುಂಬಾ ಚೆನ್ನಾಗಿ ಅಡಿಗೆ ಮಾಡಿದ್ರು. ಕೂಟು ತಿಂದು ತುಂಬಾ ದಿನಗಳಾಗಿದ್ದವು. ನಿನಗೂ ಕೂಟು ಕಳಿಸಿದ್ದಾರೆ.”
ಊಟದ ನಂತರ ಅವರೇ ಹೇಳಿದರು. “ಮುಂದಿನ ತಿಂಗಳು 25ನೇ ತಾ ಮದುವೆ. ಶುಕ್ರವಾರ ಬೀಳತ್ತೆ. ಇಲ್ಲಿಂದ ಕಾರು, ವ್ಯಾನ್‌ಗಳಲ್ಲಿ ಗುರುವಾರ ಹೊರಡುವುದಂತೆ. ಶುಕ್ರವಾರ ಮದುವೆ, ಶನಿವಾರ ವಾಪಸ್ಸಾಗುವುದು. ಭಾನುವಾರ ರಾಗಿಣೀನ್ನ ಕರೆದುಕೊಂಡು ಅವರ ಹೈದರಾಬಾದ್‌ಗೆ ಹೋಗ್ತಾರೆ. ನೀನು ಬರಕ್ಕಾಗಲ್ಲವಲ್ಲಾಂತ ಬೇಜಾರಾಗ್ತಿದೆ.”
“ಹೋಗಲಿ ಬಿಡಿ. ಋಣವಿದ್ದಷ್ಟೇ ಲಭ್ಯ.”
“ಸತ್ಯಮ್ಮನಿಗೆ, ಮಾಂಗಲ್ಯಧಾರಣೆಗೆ ಮೊದಲು ಮಗಳ ಕೈಲಿ ಗೌರಿಪೂಜೆ ಮಾಡಿಸಬೇಕೂಂತ ಇಷ್ಟ. ಆದರೆ ಅದಕ್ಕೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು. ಸಂಧ್ಯಾ, ಕಾವೇರಮ್ಮ ‘ಅದೆಲ್ಲಾ ಅಷ್ಟು ಮುಖ್ಯಾನಾಂತ ಕೇಳಿದರಂತೆ.’ ತುಂಬಾ ಬೇಜಾರು ಮಾಡಿದರು.”
“ನಾನು ನಮ್ಮ ಚಿಕ್ಕಮ್ಮನ್ನ ವಿಚಾರಿಸಿ ಹೇಳ್ತೀನಿ.”
“ನಿಮ್ಮ ಚಿಕ್ಕಮ್ಮ ತಿರುಪತಿಯವರಾ?”
“ಇಲ್ಲ. ಅವರಕ್ಕ ಅಲ್ಲಿದ್ದಾರೆ. ಹೋದ ತಿಂಗಳು ಅಕ್ಕನ ಕೊನೆಮಗಳ ಮದುವೆಯಾಯ್ತು. ಗಂಡ-ಹೆಂಡತಿ ಹೋಗಿಬಂದ್ರು.”
“ಹೌದಾ? ಅವರನ್ನು ಕೇಳು……”
“ಇವತ್ತೇ ಕೇಳ್ತೀನಿ.”

ಅಂದು ರಾತ್ರಿ ಅವಳು ಶೋಭಾ ಚಿಕ್ಕಮ್ಮನಿಗೆ ಫೋನ್ ಮಾಡಿದಳು.
“ನಮ್ಮಕ್ಕನ ಗಂಡ, ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಪುರೋಹಿತರು ಮನೆ ದೇವಸ್ಥಾನಕ್ಕೆ ಹತ್ತಿರವಾಗಿದೆ. ಅವರಿಗೆ ಹೇಳಿದ್ರೆ ಗೌರಿಪೂಜೆಗೆ ಎಲ್ಲಾ ತಮ್ಮ ಮನೆಯಲ್ಲೇ ಅಣಿ ಮಾಡಿಕೊಡ್ತಾರೆ.”
“ಹೌದಾ?”
“ನೀನು ನನ್ನ ಗುರುತು ಹೇಳು. ಖಂಡಿತಾ ಭಾವ ಎಲ್ಲಾ ರೆಡಿ ಮಾಡಿಕೊಡ್ತಾರೆ.”
“ನಾನು ಮದುವೆಗೆ ಹೋಗ್ತಿಲ್ಲ ಚಿಕ್ಕಮ್ಮ. ಮೂರುದಿನ ಕಾಲೇಜಿಗೆ ಚಕ್ಕರ್ ಕೊಡಕ್ಕಾಗಲ್ಲ.”
“ನಿನ್ನ ಬದಲು ನಾನು ಹೋಗಲಾ? ಅಲೋಕಂಗೆ ಹೇಗೂ ರಜವಿದೆ.”
“ಅವನಿಗ್ಯಾಕೆ ರಜ?”
“ಅವರ ಸ್ಕೂಲಲ್ಲಿ ಏನೋ ಪ್ರೋಗ್ರಾಂ……..”
“ಹಾಗಾದ್ರೆ ಅಲೋಕನ್ನ ಕರ‍್ಕೊಂಡು ಹೋಗಿ. ನಾನು ಆಂಟಿಗೆ ಹೇಳ್ತೀನಿ.”
“ನೀನು ಮೊದಲು ಅವರನ್ನು ಕೇಳು.”

ಚಂದ್ರಾವತಿ ಖುಷಿಯಿಂದ ಒಪ್ಪಿದರು. ಅವರು ಅಕ್ಕನ ಜೊತೆ ಕಂಚಿಗೆ ಹೋಗಿ ಬಂದರು. ಶಾರದಾ ಕೊಂಚವೂ ಗಲಾಟೆ ಮಾಡದೆ ಮಲ್ಲಿ ಹಾಗೂ ವರು ಜೊತೆ ಇದ್ದಳು.
ಮಾನಸಾ ಮದುವೆ ನಾಲ್ಕುದಿನಗಳಿದ್ದಾಗ ಒಂದು ಭಾನುವಾರ ಚಂದ್ರಾವತಿ ಕಾರ್‌ನಲ್ಲಿ ವರು ಜೊತೆ ಬೆಂಗಳೂರಿಗೆ ಹೊರಟರು.
“ನಿಮ್ಮ ಮನೆಯವರ ಪರಿಚಯ ಮಾಡಿಕೊಂಡು, ಮಾನಸಾ ಮನೆಗೆ ಹೋಗಿ ಬರೋಣಾಂತಿದ್ದೇನೆ. ಕರೆದುಕೊಂಡು ಹೋಗ್ತೀಯಾ?”
“ಆಗಲಿ ಆಂಟಿ. ನಮ್ಮನೆಯಲ್ಲೇ ಊಟ ಮಾಡಬೇಕು.”
“ಆಗಲಿ ಅದಕ್ಕೇನಂತೆ…….”
ವರು ಮೊದಲೇ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಳು. ದಾರಿಯಲ್ಲೇ ಅವರು ತಿಂಡಿ ತಿಂದಿದ್ದರು. ವರು ಮನೆಯಲ್ಲಿ ಕಾಫಿ ಕುಡಿದು ಮಾನಸ ಮನೆಗೆ ಹೋದರು. ಮಾನಸಾಗೆ ತುಂಬಾ ಖುಷಿಯಾಯಿತು. ಚಂದ್ರಾ ಅವಳಿಗೆ ಮುದ್ದಾದ ಬೆಳ್ಳಿ ಗಣಪತಿ ಉಡುಗೊರೆಯಾಗಿ ಕೊಟ್ಟರು.
ವರು ಮನೆಯಲ್ಲಿ ಊಟವಾಯಿತು. ಚಂದ್ರಾವತಿ ಶಕುಂತಲಾಗೆ ಸರಳವಾಗಿದ್ದ ಕಾಂಜಿವರಂ ಸೀರೆ, ವರು ತಂದೆಗೆ ಜರೀಪಂಚೆ ಉಡುಗೊರೆ ನೀಡಿದರು. ದೇವಕಿ, ಜಾನಕಿ ಹೊಟ್ಟೆ ಉರಿದುಕೊಂಡರು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ :  https://surahonne.com/?p=44128
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

3 Comments on “ಕನಸೊಂದು ಶುರುವಾಗಿದೆ: ಪುಟ 18

  1. ಕನಸೊಂದು ಧಾರಾವಾಹಿ ಓದಿಸಿಕೊಂಡುಹೋಯಿತು… ಮೇಡಂ

  2. ನಿಜಕ್ಕೂ ಕನಸೊಂದಲ್ಲ, ಕನಸುಗಳ ಮೆರವಣಿಗೆಯೇ ಹೊರಟಂತಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *