ಬೊಗಸೆಬಿಂಬ

ಸಾಹಿತ್ಯ ಸಾತತ್ಯ

Share Button

ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾವ್ಯವೇ ಶ್ರೇಷ್ಠವಾದುದು. ಏಕೆಂದರೆ ಇದು ಉಳಿದ ಪ್ರಕಾರಗಳಿಗಿಂತ ಸಂಕೀರ್ಣ ಮತ್ತು ಕಷ್ಟಸಾಧ್ಯ ರಚನೆ. ಹಿಂದೆ ಎಲ್ಲವನ್ನೂ ಕಾವ್ಯ ಎಂದೇ ಕರೆದು ಗೌರವಿಸುತ್ತಿದ್ದರು. ಇದ್ದುದು ಎರಡೇ: ಪದ್ಯಕಾವ್ಯ ಮತ್ತು ಗದ್ಯಕಾವ್ಯ. ಹತ್ತನೇ ಶತಮಾನದ ಕಾವ್ಯ ಮೀಮಾಂಸಕನಾದ ರಾಜಶೇಖರನು ಮೊದಲ ಬಾರಿಗೆ ‘ಸಾಹಿತ್ಯ’ ಎಂಬ ಪದವನ್ನು ಬಳಸಿದನು; ತದನಂತರ ಇದು ಪ್ರಚುರತೆ ಪಡೆಯಿತು. ಈಗ ಎಲ್ಲವನ್ನೂ ಸಾಹಿತ್ಯ ಎಂದೇ ಕರೆದುಕೊಳ್ಳಲಾಗಿದೆ; ಕಾವ್ಯವು ಸಾಹಿತ್ಯದ ಒಂದು ಪ್ರಕಾರ ಎನಿಸಿಕೊಂಡಿದೆ. ನಾಟಕ, ಕತೆ, ಕಾದಂಬರಿ, ಪ್ರಬಂಧ, ವಿಮರ್ಶೆ, ಪ್ರವಾಸ ಕಥನ, ಆತ್ಮ ಕಥನ, ಜೀವನಚರಿತೆ, ಮಕ್ಕಳ ಸಾಹಿತ್ಯ, ಚಿತ್ರಗಳು ಪತ್ರಗಳು, ಅಭಿನಂದನ ಗ್ರಂಥ, ಸಂಸ್ಮರಣ ಗ್ರಂಥ ಹೀಗೆ. ಈ ಒಂದೊಂದರಲ್ಲೂ ಹಲವು ಒಳಪ್ರಕಾರಗಳಿವೆ. ಉದಾಹರಣೆಗೆ ಕಾವ್ಯದಲ್ಲಿ ಮಹಾಕಾವ್ಯ, ಖಂಡಕಾವ್ಯ, ಭಾವಗೀತೆ, ಶೋಕಗೀತೆ, ಪ್ರಗಾಥ, ಹನಿಗವನ ಅಥವಾ ಚುಟುಕುಗಳು, ತ್ರಿಪದಿ, ಚೌಪದಿ, ಕಥನಕವನ, ನೀಳ್ಗವಿತೆ, ಸುನೀತ ಅಥವಾ ಅಷ್ಟಷಟ್ಪದಿ ಹೀಗೆ. ಗೀತೆಗಳಲ್ಲೇ ಹಲವು ಪ್ರಕಾರಗಳಿವೆ: ಭಾವಗೀತೆ, ಭಕ್ತಿಗೀತೆ, ರಂಗಗೀತೆ, ನಾಡಗೀತೆ, ದೇಶಭಕ್ತಿಗೀತೆ, ಲಾವಣಿ, ಚಲನಚಿತ್ರಗೀತೆ ಇತ್ಯಾದಿ. ಇವೆಲ್ಲವನ್ನೂ ಸೃಜನಪ್ರಧಾನ ಸಾಹಿತ್ಯ ಎಂದೇ ಕರೆಯಲಾಗುವುದು. ಇನ್ನು ವಿಮರ್ಶೆ, ಮೀಮಾಂಸೆ, ವಿಚಾರಾತ್ಮಕ ಲೇಖನಗಳು, ಸಂಶೋಧನಾ ಲೇಖನಗಳು, ಸಂಪ್ರಬಂಧ, ಮಹಾಪ್ರಬಂಧ, ಕ್ಷೇತ್ರಾಧ್ಯಯನ, ಸಂಪಾದನಾ ಕೃತಿ ಇವೆಲ್ಲ ಚಿಂತನಪ್ರಧಾನ ಸಾಹಿತ್ಯ. ಇಂಥಲ್ಲಿ ಸೃಜನೆಗಿಂತ ಚಿಂತನೆಗೆ ಪ್ರಾಧಾನ್ಯ. ಇವೆಲ್ಲ ಮೇಲುನೋಟದ ವರ್ಗೀಕರಣಗಳು. ಅತ್ಯುತ್ತಮವಾದ ಬರೆಹವು ಇವೆಲ್ಲವನ್ನೂ ಮೀರಿ ಮುಂದಕ್ಕೆ ಹೋಗುವ ಶಕ್ತಿ ಸಾಮರ್ಥ್ಯಗಳನ್ನು ಪಡೆದಿರುತ್ತದೆ; ನಮ್ಮೆಲ್ಲ ಕೃತಕ ಸೀಮಾರೇಖೆಗಳನ್ನು ದಾಟಿ ಧಾಂಗುಡಿಯಿಡುತ್ತದೆ. ಸೃಜನವೂ ಚಿಂತನವೂ ಹದವಾಗಿ ಬೆರೆತ ಹೊಸದೊಂದು ಪ್ರಕಾರವೇ ಆಗಿಬಿಡುತ್ತದೆ.

ಸತ್+ಹಿತ ಎಂತಲೂ ಸ+ಹಿತ ಎಂತಲೂ ಸಾಹಿತ್ಯವನ್ನು ನಿಷ್ಪತ್ತಿಸುವರು. ಸತ್ ಎಂದರೆ ಒಳ್ಳೆಯದು; ಹಿತ ಎಂದರೆ ಮನಸಿಗೆ ಹಿಡಿಸಿದುದು. ಏನೆಂದರೂ ಹೊಸದೊಂದು ಭಾವಲೋಕವನ್ನೂ ಚಿಂತನಲೋಕವನ್ನೂ ತೆರೆದು ತೋರುವ ಅಭಿವ್ಯಕ್ತಿಯಿದು. ಉಪಮೆ, ರೂಪಕ, ಪ್ರತಿಮೆ, ಪ್ರತೀಕ, ಅಲಂಕಾರಗಳ ಮೂಲಕ ಸೃಷ್ಟಿಶೀಲವಾದುದು. ಹೇಳುವುದನ್ನು ಹೊಸರೀತಿಯಲ್ಲಿ ವಿನ್ಯಾಸಗೊಳಿಸಿ ನಮ್ಮ ಮುಂದಿಡುವ ಎಲ್ಲ ಬರೆಹಗಳೂ ಸಾಹಿತ್ಯವೇ. ‘ಚಂದಿರನೇತಕೆ ಓಡುವನಮ್ಮ, ಮೋಡಕೆ ಹೆದರಿಹನೆ? ಬೆಳ್ಳಿಯ ಮೋಡದ ಅಲೆಗಳ ಕಂಡು ಚಂದಿರ ಬೆದರಿಹನೆ?’ ಎಂದೊಂದು ಮಗು ತನ್ನ ತಾಯಿಯನ್ನು ಕೇಳುವಾಗ ಕವಿಯ (ಕುವೆಂಪು) ಪ್ರತಿಭೆ ಜಾಗರವಾಡುವುದು. ‘ಚಂದಿರ ದೇವರ ಪೆಪ್ಪರಮೆಂಟೇನಮ್ಮ?’ ಎಂದು ಮುಗ್ಧವಾಗಿ ಪ್ರಶ್ನಿಸುವುದು. ‘ಬಾನಿನ ಜಗುಲಿಯ ನೀಲಿಯಲಿ ಬೆಳ್ಮುಗಿಲಿನ ಕೂಸಾಡುತಿದೆ’ ಎನ್ನುತ್ತಾರೆ ಕವಿ ಜಿ ಎಸ್ ಶಿವರುದ್ರಪ್ಪನವರು. ಮನೆಯ ಅಂಗಳದಲ್ಲಿ ಆಟವಾಡುತಿರುವ ಮಗುವನ್ನು ಕಂಡ ಕವಿಯ ಮನವು ಬೃಹತ್ತಾದ ರೂಪಕಭಾಷೆಯಲ್ಲಿ ವ್ಯಕ್ತಿಸುತ್ತದೆ. ಇಂಥಲ್ಲಿ ನೀಲಾಕಾಶವೇ ಆಟದಂಗಳ; ಬಿಳಿಯ ಮೋಡಗಳೇ ಕೂಸು! ಕವಿಯ ಕಲ್ಪನೆಗೆ ಇತಿಮಿತಿಯಿಲ್ಲ; ‘ಸ್ಕೈ ಈಸ್ ದ ಲಿಮಿಟ್’ ಎನ್ನುತ್ತಾರಲ್ಲ ಹಾಗೆ!! ಯಾರೂ ಊಹೆ ಮಾಡದಂಥ, ಒಂದಕ್ಕೂ ಮತ್ತೊಂದಕ್ಕೂ ಸಂಬಂಧವೇ ಇಲ್ಲದಂಥ ವಿಲಕ್ಷಣ ಸಂಗತಿಗಳನ್ನು ಜೊತೆಗೂಡಿಸುವುದರಲ್ಲಿಯೂ ಕವಿಯ ಪ್ರತಿಭೆ ಅದ್ವಿತೀಯ. ಭೀಮ ಮತ್ತು ಜರಾಸಂಧರಿಬ್ಬರ ಕಾಳಗವನ್ನು ಪಂಪಮಹಾಕವಿಯು ವ್ಯಾಖ್ಯಾನಿಸುವ ಸಂದರ್ಭದ ಎರಡು ಪ್ರತಿಮೆಗಳನ್ನು ಗಮನಿಸಿದರೆ ಇದು ತಿಳಿಯುವುದು. ‘ತತ್‌ಕುಲಶೈಲಂ ಕುಲಶೈಲದೊಳ್ ಕಲುಷದಿಂ ಪೋರ್ವಂತೆವೊಲ್ ಪೋರ್ದು, ನೈದಿಲ ಕಾವಂ ತುದಿಗೆಯ್ದೆ ಸೀಳ್ವ ತೆರದಿಂ ಸೀಳ್ದಂ ಜರಾಸಂಧನಂ.’ ಭೀಮನೂ ಜರಾಸಂಧರಿಬ್ಬರೂ ಕುಲಪರ್ವತಗಳು. ಎರಡು ಪರ್ವತಗಳು ಹೋರಾಡಿದಂತಿತ್ತು. ಇದರಿಂದೇನಾಯಿತು? ಭೀಮನು ಜರಾಸಂಧನನ್ನು ಬಗೆದದ್ದು, ನೈದಿಲೆಯ ಹೂವಿನ ಕಾವನ್ನು ಸೀಳಿ ಬಿಸಾಡಿದಷ್ಟು ಸಲೀಸಾಗಿತ್ತು! ಪರ್ವತ ಮತ್ತು ನೈದಿಲೆ ಹೂವಿನ ಪ್ರತಿಮೆಗಳನ್ನು ಗಮನಿಸೋಣ. ಎಲ್ಲಿಗೆಲ್ಲಿಯ ಸಂಬಂಧ? ಕವಿಯ ಕಾಣ್ಕೆಯು ಇವೆರಡನ್ನೂ ಬೆಸೆದು ಹೋರಾಟದ ಚಿತ್ರವನ್ನು ಕಣ್ಮುಂದೆ ಕಟ್ಟಿ ಕೊಡುವುದು. ಇದಕ್ಕಾಗಿಯೇ ಕಾವ್ಯವು ಅತ್ಯುನ್ನತ ಪ್ರಕಾರ. ಕಲ್ಪನೆಯು ವಿಲಾಸವಾಡಲು ಕವಿತೆಯೆಂಬ ಆಡುಂಬೊಲ ಕೊಡುವ ಅವಕಾಶವು ಆಕಾಶದಷ್ಟು.

ಕಾವ್ಯದ ಆಕರವನ್ನು ‘ಪ್ರತಿಭೆ’ ಎಂದು ಕರೆಯುವರು. ಪ್ರತಿಭಾವಂತರು ಕಾವ್ಯರಚಕರು. ಹೊಸದನ್ನು ಕಾಣುವುದು ಮತ್ತು ಕಟ್ಟುವುದು ಪ್ರತಿಭೆಯ ಲಕ್ಷಣ. ಇದನ್ನು ಲಾಕ್ಷಣಿಕರು ‘ನವನವೋನ್ಮೇಷಶಾಲಿನೀ, ನವನವೋಲ್ಲೇಖಶಾಲಿನೀ’ ಎಂದು ಬಣ್ಣಿಸಿರುವರು. ಕಾವ್ಯದ ಪರಿಕರ ಎಂದು ಇನ್ನೊಂದಿದೆ. ಪ್ರತಿಭೆಯೊಂದೇ ಕಾವ್ಯದ ಆಕರ; ಆದರೆ ಪರಿಕರಗಳು ಹಲವು: ಮೊದಲನೆಯದು ವ್ಯುತ್ಪತ್ತಿ. ‘ಉಚಿತಾನುಚಿತ ವಿವೇಕೋ ವ್ಯುತ್ಪತ್ತಿಃ’ ಅಂದರೆ ಯಾವುದು ಉಚಿತ? ಯಾವುದು ಅನುಚಿತ ಎಂಬ ವಿವೇಕವೇ ಇದು. ಬರೆದವರು ಒಮ್ಮೆ ಓದಿಕೊಳ್ಳಬೇಕು; ಕೇಳಿಕೊಳ್ಳಬೇಕು. ಓದುಗರ ಕಣ್ಣಿನಿಂದ ಕಾಣಲು ಯತ್ನಿಸಬೇಕು. ಆಗ ಗೊತ್ತಾಗುತ್ತದೆ. ನಾನು ಬರೆದದ್ದು ಸರಿಯೋ, ಬೆಸವೋ ಎಂದು. ಪರಿಕರಗಳಲ್ಲಿ ಇನ್ನೊಂದು ‘ಬಹುಜ್ಞತೆ.’ ಅಂದರೆ ಹಲವು ವಿಭಿನ್ನ ಕ್ಷೇತ್ರಗಳ ಪ್ರವೇಶ ಮತ್ತು ವಿಷಯ ಪ್ರಭುತ್ವ. ವಿಶಾಲವಾದ ಅಧ್ಯಯನವು ಬೇಕು. ಎಷ್ಟು ಬರೆಯುತ್ತೇವೆಯೋ ಅದರ ಹತ್ತು ಪಟ್ಟು ಓದಬೇಕು. ಅವರು ಆ ಪಂಥದವರು; ನನಗೆ ಒಗ್ಗುವುದಿಲ್ಲಎಂಬ ದೂರನ್ನಾಗಲೀ ದೂರವನ್ನಾಗಲೀ ಹೊಂದಬಾರದು. ‘ಹತ್ತು ಸಲ ಓದುವುದಕ್ಕಿಂತ ಒಂದು ಸಲ ಬರೆಯುವುದು ಲೇಸು’ ಎಂಬುದು ವಿದ್ಯಾಭ್ಯಾಸಕ್ಕೆ ಸರಿ ಹೊಂದುತ್ತದೆ; ಇದಕ್ಕಲ್ಲ! ಹಾಗೆಂದು ಎಲ್ಲವನ್ನೂ ಓದಿಕೊಂಡೇ ಬರೆಹಕ್ಕಿಳಿಯಬೇಕೆಂದಲ್ಲ. ಸಾಹಿತ್ಯದ ಹಿನ್ನೆಲೆ, ಪರಂಪರೆಯ ಅರಿವಿದ್ದರೆ ನಮ್ಮ ಬರೆಹವು ಹೆಚ್ಚು ಕಾಲ ನಿಲ್ಲುವಂಥದ್ದಾಗುವುದು; ಇಲ್ಲದಿದ್ದರೆ ನಾವು ಬರೆದಿದ್ದೇ ಸರಿ ಎಂದಾಗುವುದು. ಪ್ರಾರಂಭದಲ್ಲಿ ಎಲ್ಲರದೂ ಬರಿ-ಹರಿ ಸಾಹಿತ್ಯವೇ. ಬರೆದದ್ದನ್ನು ಹರಿದು ಎಸೆದಿರುತ್ತೇವೆ. ಈಗ ಟೈಪಿಸುವ ಕಾಲ. ಹಾಗಾಗಿ ಬರೆದದ್ದನ್ನು ನಾವೇ ಒಮ್ಮೆ ಓದುಗರ ಸ್ಥಾನದಲ್ಲಿ ಪರಕಾಯ ಪ್ರವೇಶ ಮಾಡಿ ಓದಿಕೊಳ್ಳಬೇಕು. ಅಸಂಗತ, ಅಸಮರ್ಪಕ ಮತ್ತು ಅಪೂರ್ಣ ಎನಿಸಿದರೆ ಸರಿಪಡಿಸಿಕೊಳ್ಳಬೇಕು. ನಮಗೆ ಸಮಾಧಾನವಾಗಬೇಕು; ಆನಂತರ ಪ್ರಕಟಣೆಗೆ ಕಳಿಸುವ ವಿಚಾರ. ಬಹಳ ಮುಖ್ಯವಾಗಿ ಪುನರುಕ್ತ ದೋಷವನ್ನು ನಿವಾರಿಸಿಕೊಳ್ಳಬೇಕು. ಈಗಾಗಲೇ ತಜ್ಞರು, ಚಿಂತಕರು, ಇತರ ಬರೆಹಗಾರರು ಈ ವಿಚಾರದಲ್ಲಿ ಏನು ಹೇಳಿದ್ದಾರೆಂಬುದನ್ನು ಒಮ್ಮೆ ಪರಾಂಬರಿಸಿರಬೇಕು; ಇದನ್ನು ಅವಲೋಕನ ಎನ್ನುವರು. ಅದರಲ್ಲೂ ಸಮಕಾಲೀನ ಬರೆಹದ ರೀತಿ ರಿವಾಜುಗಳತ್ತ ನಮ್ಮ ಅಭ್ಯಾಸ ಹೆಚ್ಚಿರಬೇಕು. ನಮ್ಮ ಸಂತೋಷಕ್ಕೆ ಬರೆಯುವುದಾದರೂ ಪ್ರಕಟಣೆಗೆ ಕಳಿಸುವುದರಿಂದ ಒಂದು ವಿಧವಾದ ಸಾಮಾಜಿಕ ಜವಾಬ್ದಾರಿ ಇರುತ್ತದೆ. ಪ್ರಕಟಿಸುವ ಸಂಪಾದಕರಿಗೆ ಇರುಸು ಮುರುಸಾಗದ ಹಾಗೆ, ಮುಖ್ಯವಾಗಿ ಆಯಾ ಪತ್ರಿಕೆ, ಮ್ಯಾಗಜೀನುಗಳ ಧ್ಯೇಯ ಧೋರಣೆಗಳತ್ತ ಕಣ್ಣಾಡಿಸಿ, ನೀತಿ ನಿಬಂಧನೆಗಳಿಗೆ ಒಳಪಡುವುದೇ? ಎಂದು ನಾವೇ ವಿಚಾರಿಸಿಕೊಳ್ಳಬೇಕು.

ಸಾಹಿತ್ಯವನ್ನು ಮೂರು ರೀತಿಯಾಗಿ ವಿಂಗಡಿಸುವ ಹಗೂರ ವಿಧಾನವೊಂದಿದೆ: ಪ್ರಬೋಧ ಸಾಹಿತ್ಯ, ಪ್ರಮೋದ ಸಾಹಿತ್ಯ ಮತ್ತು ಪ್ರಮಾದ ಸಾಹಿತ್ಯ ಎಂಬುದಾಗಿ. ಪ್ರಮೀಳಾ ಸಾಹಿತ್ಯ ಎಂದೂ ಇನ್ನೊಂದನ್ನು ಸೇರಿಸಬಹುದು! ಅರಿವನ್ನು ವಿಸ್ತರಿಸುವ ಬೋಧನಾಮಾರ್ಗವೇ ಪ್ರಬೋಧ. ನೀತಿಮೌಲ್ಯಗಳನ್ನು ಪ್ರತಿಪಾದಿಸುವುದು ಇದರ ಧಾಟಿ. ಮಂಕುತಿಮ್ಮನ ಕಗ್ಗವು ಇದಕ್ಕೆ ಉತ್ತಮ ನಿದರ್ಶನ. ನಾವು ಇದರಲ್ಲಿ ಧ್ವನಿ, ರಸ, ಅಲಂಕಾರಗಳನ್ನು ನಿರೀಕ್ಷಿಸಲಾಗದು. ಆದರೆ ಬರೆದವರು ಕವಿಹೃದಯದವರಾದರೆ ಉಪಮೆ, ರೂಪಕಾದಿ ಧ್ವನಿಚಿತ್ರಗಳನ್ನು ತಂದು ಬೋಧನೆಯು ಮನಕಾಯಾಸವಾಗದಂತೆ ನೋಡಿಕೊಳ್ಳುವರು; ಅಂಥವು ಚಿಂತನೀಯವೂ ವಿಚಾರಣೀಯವೂ ಆಗಿರ್ಪುದು. ಇದು ಒಂದು ಬಗೆಯಲ್ಲಿ ಅರಳಿಸುವ ಸಾಹಿತ್ಯವೂ ಹೌದು. ನಂತರದ್ದು ಪ್ರಮೋದ ಸಾಹಿತ್ಯ. ಇದು ಶುದ್ಧವಾಗಿ ಮನೋರಂಜನೀಯ. ಮನೋರಂಜನೆಯಲ್ಲೂ ಹಲವು ಮಜಲುಗಳಿವೆ. ಕೀಳು ಮನೋರಂಜನೆಯಾದರೆ ಅದು ಅಧಮ. ಇದು ಸಾಹಿತ್ಯದಲ್ಲಿ ಶೀಲಾಶ್ಲೀಲ ಚರ್ಚೆಯನ್ನು ಹುಟ್ಟು ಹಾಕುವುದು. ಪ್ರಮೋದ ಸಾಹಿತ್ಯದಲ್ಲಿ ಆಮೋದಕ್ಕೇ ಪ್ರಾಶಸ್ತ್ಯ. ಬುದ್ಧಿಗಿಲ್ಲಿ ಕೆಲಸ ಕಡಮೆ. ಆದರೆ ಪತ್ತೇದಾರಿ ಕಾದಂಬರಿಗಳು ಇದಕ್ಕೆ ಅಪವಾದ. ಇದು ಒಂದು ರೀತಿಯಲ್ಲಿ ಕೆರಳಿಸುವ ಸಾಹಿತ್ಯವೂ ಹೌದು. ನಮ್ಮ ಭಾವಗಳನ್ನು ಶಮನಗೊಳಿಸುವುದರ ಬದಲಿಗೆ ಇನ್ನಷ್ಟು ಹುರಿದುಂಬಿಸುವತ್ತ ಬೊಟ್ಟು ಮಾಡುತ್ತವೆ. ಇನ್ನು ಕೊನೆಯದು ಪ್ರಮಾದ ಸಾಹಿತ್ಯ. ಇದನ್ನು ನರಳಿಸುವ ಸಾಹಿತ್ಯವೆನ್ನಬಹುದು. ಇಂಥವನ್ನು ಬರೆಯದಿದ್ದರೂ ಯಾರಿಗೂ ನಷ್ಟವಿಲ್ಲ. ಹಾಗೆ ನೋಡಿದರೆ ಇದು ಸಾಹಿತ್ಯವೇ ಅಲ್ಲ. ಆದಷ್ಟೂ ನಕಾರಾತ್ಮಕತೆಯನ್ನು ಹರಡುವತ್ತ ಇವು ಉತ್ಸಾಹಿ. ಮಂದಿಯಲ್ಲಿ ವಿಷಬೀಜ ಬಿತ್ತುವುದರಲ್ಲಿ ಸದಾ ಮುಂದು. ಪ್ರಜಾಸತ್ತಾತ್ಮಕವಲ್ಲದ, ಸಂವಿಧಾನದ ಆಶಯಗಳಿಗೆ ವಿರೋಧವೆನಿಸುವ ರೀತಿಯಲ್ಲಿ ಹಲವು ಅಸಮಾನತೆಗಳನ್ನು ಸಮರ್ಥಿಸುವುದು; ಮತಧರ್ಮದ ಹೆಸರಿನಲ್ಲಿ ಸಹಿಷ್ಣುತೆಯನ್ನು ಕದಡುವುದು; ವ್ಯಕ್ತಿನಿಂದೆ ಮಾಡುವುದು; ಬಹುಜನರ ನಂಬಿಕೆ ಮತ್ತು ಆಚರಣೆಗಳನ್ನು ವಿಡಂಬಿಸುವುದು ಒಟ್ಟಿನಲ್ಲಿ ಇಂಥವು ನಕಾರಾತ್ಮಕವಾದವು. ನಮ್ಮ ಮಾನಸಿಕ ಆರೋಗ್ಯವನ್ನು ಹಾಳುಗೆಡಹುವಂಥವು. ಇಂಥ ರಚನಾಕಾರರಲ್ಲಿ ಹಲವು ಗುಪ್ತ ಕಾರ್ಯಸೂಚಿಗಳು ಕೆಲಸ ಮಾಡುತ್ತಿರುತ್ತವೆ. ಎತ್ತಿಕಟ್ಟುವ ಹೇಸಿಗೆ ಬುದ್ಧಿ ಹಿಂದೆ ನಿಂತು ಗಹಗಹಿಸುತ್ತಿರುತ್ತದೆ. ಅನಗತ್ಯವಾದ ಕೆಲವೊಂದು ಚಾರಿತ್ರಿಕ ಸಂಶೋಧನೆಗಳು ಸಹ ಇಂಥ ಧೋರಣೆಯವೇ. ಉದಾಹರಣೆಗೆ ಪಂಪನು ಸಂನ್ಯಾಸಿ ಎಂದೊಬ್ಬರು, ಅಲ್ಲಲ್ಲ; ಆತನಿಗೆ ಇಬ್ಬರು ಮಡದಿಯರು ಎಂದು ಇನ್ನೊಬ್ಬರು ವಾದ-ತರ್ಕಗಳನ್ನು ಮಂಡಿಸುವುದರಿಂದ ಏನೂ ಉಪಯೋಗವಿಲ್ಲ ಮತ್ತು ಆತನ ಕೊಡುಗೆಗಳ ಮೇಲಾಗಲೀ ಆತನ ಪ್ರತಿಭೆಯ ವರ್ಚಸ್ಸಿಗಾಗಲೀ ಕುಂದಿಲ್ಲ! ಹೀಗೆ ವ್ಯಕ್ತಿಯನ್ನು ಕುರಿತ ಆಸಕ್ತಿಯು ಮೇಲು ನೆಲೆಯದು; ಇಂಥವರು ಹೆಚ್ಚು ಮೇಲಕ್ಕೇರಲಾರರು; ಅವರ ಸಾಮರ್ಥ್ಯವಷ್ಟೇ. ವ್ಯಕ್ತಿತ್ವದಾಚೆಗೆ ನೀಡಿದ ಅವರ ಕೊಡುಗೆಗಳತ್ತ ದೃಷ್ಟಿ ಹಾಯಿಸಬೇಕು. ಈ ಕಾಲದ ನೀತಿ ಮೌಲ್ಯ ಮತ್ತು ಯುಗಧರ್ಮ ಸಂಬಂಧೀ ವಿಚಾರಗಳನ್ನು ಆ ಕಾಲಕ್ಕನ್ವಯಿಸಿ ಚರ್ಚಿಸುವಾಗ ಇತಿಮಿತಿಗಳನ್ನು ಅರಿತು ಮಾತಾಡಬೇಕು ಮತ್ತು ಬರೆಯಬೇಕು. ವ್ಯಕ್ತಿ ಮುಖ್ಯವಾದರೆ ಕೊಡುಗೆ ಮರೆತು ಬಿಡಬೇಕು; ಕೊಡುಗೆ ಮುಖ್ಯವಾದರೆ ವ್ಯಕ್ತಿಯನ್ನು ಮರೆತು ಬಿಡಬೇಕು. ಇದು ಬರೀ ಸಾಹಿತ್ಯವಿಮರ್ಶೆಯ ಸರಳಸೂತ್ರವಲ್ಲ; ಬದುಕಿನದು ಕೂಡ.

‘ಕಾವ್ಯಮಾನಂದಾಯ’ ಎಂಬುದು ನಮ್ಮ ಪ್ರಾಚೀನೋಕ್ತಿ. ಆನಂದ ಮತ್ತು ಅರಿವುಇವೆರಡೇ ಸಾಹಿತ್ಯದ ಸದಾಶಯ ಎಂಬುದನ್ನು ನಮ್ಮ ಪೂರ್ವಜರು ಒತ್ತಿ ಒತ್ತಿ ಹೇಳಿದ್ದಾರೆ. ಎಲ್ಲ ಬಗೆಯ ಭಾವನಿರಸನ, ಬಿಡುಗಡೆ ಮತ್ತು ಸಂತಸಗಳು ‘ಆನಂದ’ದಲ್ಲೂ ಎಲ್ಲ ಬಗೆಯ ತಿಳಿವಳಿಕೆ, ಜ್ಞಾನ, ಜೀವನಾನುಭವಗಳು ‘ಅರಿವಿ’ನಲ್ಲೂ ಮಿಳಿತ. ಅಂದರೆ ಪ್ರಾಚೀನ ಕಾಲದಲ್ಲಿ ಸಾಹಿತ್ಯವು ಈಗಿನಂತೆ ಸರ್ವ ಸ್ವತಂತ್ರವಾಗಿರಲಿಲ್ಲ. ಅದು ಮತಧರ್ಮದ ನೆರಳಿನಲ್ಲಿ ಬಾಳಿ ಬದುಕಬೇಕಾಗಿತ್ತು. ಮತಧರ್ಮವನ್ನು ಪ್ರಚಾರ ಮಾಡುವ ಮತ್ತು ಪ್ರಸಾರ ಮಾಡುವ ಹತಾರವಾಗಿತ್ತು. ಅದಕಾಗಿಯೇ ಭಕ್ತಿಸಾಹಿತ್ಯವು ಅಷ್ಟೊಂದು ಪ್ರಮಾಣದಲ್ಲಿ ರಚಿತವಾದದ್ದು! ದೈವಕೀರ್ತನೆ, ಸ್ಮರಣೆ, ಆತ್ಮಾನುಸಂಧಾನ, ಮುಕ್ತಿಚಿಂತನೆ, ಧಾರ್ಮಿಕ ಕಟ್ಟುಕಟ್ಟಳೆ, ನೇಮನಿಷ್ಠೆಗಳೇ ಬಹುಪಾಲು ತುಂಬಿದ್ದು. ಅಂತಹುದರಲ್ಲಿ ನಡು ನಡುವೆ ಜೀವನಮೌಲ್ಯಗಳನ್ನು ಪ್ರತಿಪಾದಿಸುವ ಕಾವ್ಯವೂ ರಚಿತವಾದವು. ಉತ್ತಮಕವಿಯಾದವರು ತಾವು ಹೇಳಬೇಕಾದುದನ್ನು ಹೇಗೋ ಹೇಳಿಯೇ ಇರುತ್ತಾರೆ. ಉದಾಹರಣೆಗೆ, ಪ್ರಭುತ್ವವನ್ನು ಓಲೈಸಬೇಕಾಗಿ ಬಂದರೂ ಪಂಪಮಹಾಕವಿಯು ತನ್ನಂತರಂಗದ ಮಾತುಗಳನ್ನು ಹೇಳದೇ ಬಿಟ್ಟಿಲ್ಲ. ನೇರವಾಗಿ ಹೇಳಿದರೆ ಪ್ರಭುತ್ವವು ಕೋಪಗೊಂಡೀತು ಎಂಬ ಕಾರಣಕ್ಕಾಗಿ ಪ್ರಾಣಿಪಕ್ಷಿಗಳ ರೂಪಕ-ಪ್ರತಿಮೆಗಳಲ್ಲಿ ದುರ್ಗಸಿಂಹನು ತನ್ನ ಪಂಚತಂತ್ರದಲ್ಲಿ ಮಾತಾಡುವನು. ‘ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಾ’ ಎಂದ ಪಂಪಕವಿಯು ಕರ್ಣ ಪಾತ್ರದ ಮೂಲಕ ತನ್ನ ಮನದಾಳದ ಹೊಳಹುಗಳನ್ನು ಧ್ವನಿಪೂರ್ಣವಾಗಿಸಿ, ‘ಕರ್ಣರಸಾಯನಮಲ್ತೆ ಭಾರತಂ’ ಎನ್ನುವನು. ಅಜಿತನಾಥ ತೀರ್ಥಂಕರನ ಜನ್ಮಾಂತರ ಕತೆಯನ್ನು ಹೇಳುವಾಗಲೂ ಶಕ್ತಿಕವಿ ರನ್ನನು ತನ್ನ ಮಾತೃಸ್ವರೂಪಿಯಾದ ಅತ್ತಿಮಬ್ಬೆಯ ಚರಿತೆಯನ್ನು ಭಕ್ತಿಭಾವದಿಂದ ತಂದಿದ್ದಾನೆ. ‘ಊರ ಮುಂದೆ ಹಾಲ ಹಳ್ಳ ಹರಿವುತ್ತಿರಲು ಬಿಜ್ಜಳನ ಭಂಡಾರವೆನಗೇಕಯ್ಯಾ?’ ಎಂದು ಪ್ರಶ್ನಿಸುವುದರ ಮೂಲಕ ಬಸವಣ್ಣನವರು ಶಕ್ತಿರಾಜಕಾರಣಕ್ಕೆ ಸೆಡ್ಡು ಹೊಡೆಯುತ್ತಾರೆ. ತಮ್ಮ ಮೇಲೆ ಬಂದ ಆರೋಪವನ್ನು ತಳ್ಳಿ ಹಾಕುತ್ತಾರೆ. ಶಿವಶರಣರು ಕಾಯಕಜೀವಿಗಳಾಗಿ ಶ್ರಮಪಟ್ಟು ದುಡಿದು, ದೇಶದ ಅರ್ಥವ್ಯವಸ್ಥೆಯನ್ನು ಸಂಪನ್ನಗೊಳಿಸುತ್ತಾರೆ. ತಾವು ದುಡಿದಿದ್ದರಲ್ಲಿ ಒಂದು ಪಾಲನ್ನು ದಾಸೋಹಕ್ಕೆ ವಿನಿಯೋಗಿಸುತ್ತಾರೆ. ಇದನ್ನರಿಯದ ರಾಜನು ಅರ್ಥಮಂತ್ರಿ ಬಸವಣ್ಣನವರ ಮೇಲೆ ಭಂಡಾರದ ದುರುಪಯೋಗದ ಚ್ಯುತಿ ಹೊರಿಸಿದಾಗ ಬಸವಾದಿ ಪ್ರಮಥರು ಕೊಟ್ಟ ಉತ್ತರವಿದು: ‘ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ, ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ ಕೂಡಲಸಂಗಮದೇವಾ’ ಚಿನ್ನದ ಒಂದು ಚೂರನ್ನಾಗಲೀ ಬಟ್ಟೆಯ ಒಂದೆಳೆಯನ್ನಾಗಲೀ (ಸೀರೆ ಎಂಬುದು ಆಗ ಬಟ್ಟೆ ಎಂದರ್ಥದಲ್ಲಿ ಬಳಕೆಯಾಗುತ್ತಿತ್ತು) ನಾನು ಇಂದಿಗೆಂದೋ ನಾಳೆಗೆಂದೋ ಬೇಕೆಂದು ಎತ್ತಿಟ್ಟುಕೊಂಡವನಲ್ಲ ಎಂದು ತನ್ನ ಇಷ್ಟದೈವದೊಂದಿಗೆ ಕಾವ್ಯಾತ್ಮಕವಾಗಿ ತಮ್ಮಳಲನ್ನು ತೋಡಿಕೊಳ್ಳುತ್ತಾರೆ. ಕುಮಾರವ್ಯಾಸನಂತೂ ‘ಅರಸು ರಾಕ್ಷಸ ಮಂತ್ರಿಯೆಂಬುವ ಮೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು; ಉರಿ ಉರಿವುತಿದೆ ದೇಶ, ನಾವಿನ್ನಿರಲು ಬಾರದೆನ್ನುತ್ತ ಜನ ಬೇಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ’ ಎಂದು ಕರ್ಣಾಟ ಭಾರತ ಕಥಾಮಂಜರಿಯ ಸಭಾಪರ್ವದಲ್ಲಿ ನೇರಛಾಟಿಯೇಟು ಬೀಸುತ್ತಾನೆ. ದಾಸಸಾಹಿತ್ಯವೂ ಸಾಮಾಜಿಕ ಕಳಕಳಿಯನ್ನು ಸಾರದೇ ಬಿಟ್ಟಿಲ್ಲ. ‘ಜಾಲಿಯ ಮರದಂತೆ ಧರೆಯೊಳು ದುರ್ಜನರು’ ಎಂಬುದನ್ನು ಒತ್ತಿ ಹೇಳುತ್ತಾರೆ ಪುರಂದರದಾಸರು. ‘ಮಡಿಮಡಿಯೆಂದಡಿಗಡಿಗೆ ಹಾರುವೆ; ಮಡಿ ಮಾಡುವ ಬಗೆ ಬೇರುಂಟು. ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟುಕೊಂಡರೆ ಅದು ಮಡಿಯಲ್ಲ; ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು’ ಎಂದು ಕುಟುಕುತ್ತಾರೆ. ‘ಜಪವ ಮಾಡಿದರೇನು; ತಪವ ಮಾಡಿದರೇನು; ಕಪಟ ಗುಣ ವಿಪರೀತ ಕಲುಷವಿದ್ದವರು’ ಎಂದು ಕನಕದಾಸರು ಮರ್ಮಕ್ಕೆ ಮುಟ್ಟಿಸುವರು.

ಯುರೋಪಿನ ಭಾಷಾಸಾಹಿತ್ಯಗಳ ಸಂಪರ್ಕಕ್ಕೆ ಬಂದ ಮೇಲೆ ನಮ್ಮ ದೇಶಭಾಷೆಗಳಲ್ಲಿ ರಚಿತವಾಗುತ್ತಿದ್ದ ಸಾಹಿತ್ಯದ ಧೋರಣೆ ಬದಲಾಯಿತು. ದೇಶದ ಸ್ವಾತಂತ್ರ್ಯದೊಂದಿಗೆ ಸಾಹಿತ್ಯವೂ ಹಲವು ಕಟ್ಟುಕಟ್ಟಳೆಗಳಿಂದ ಸ್ವತಂತ್ರವಾಯಿತು. ಹಲವು ರೀತಿಯ ಸಾಹಿತ್ಯ ಪ್ರಕಾರಗಳು ಕನ್ನಡಕ್ಕೆ ಪರಿಚಯವಾದವು. ಚಂಪೂಕಾವ್ಯ, ದೀರ್ಘಗದ್ಯ, ವಚನಗಳು, ಕೀರ್ತನೆಗಳು, ಕಂದಪದ್ಯ, ಷಟ್ಪದಿ, ತ್ರಿಪದಿ, ರಗಳೆ, ಸಾಂಗತ್ಯ ಮೊದಲಾದ ಛಂದೋಲಯನಿಯತಿಗಳಲ್ಲಿ ರಚಿತವಾಗುತ್ತಿದ್ದ ಪ್ರಾಸಬದ್ಧ ರಚನೆಗಳು ಹೊಸ ರೂಪ ಪಡೆದವು. ಗದ್ಯಕ್ಕೆ ಮುಂದಾಳತ್ವ ಪ್ರಾಪ್ತವಾಯಿತು. ಹಳಗನ್ನಡವು ನಡುಗನ್ನಡವಾಗಿ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಹೊಸಗನ್ನಡಕ್ಕೆ ತಿರುಗಿತು. ಸಂಸ್ಕೃತದ ಕಟ್ಟುಕಟ್ಟಳೆಯು ಕ್ರಮೇಣ ಕಡಮೆಯಾಗತೊಡಗಿತು; ಮುಕ್ತಛಂದಸ್ಸು ಮುಂದಾಯಿತು. ಗದ್ಯಪ್ರಕಾರಗಳು ಮನೆವಾಳ್ತನ ಮಾಡಿದವು. ಸಾಮಾನ್ಯರೂ ಓದುಗರೂ ಬರೆಯಬಹುದೆಂಬ ಆತ್ಮವಿಶ್ವಾಸ ಲಭಿಸಿತು. ಸಾಹಿತಿಯಾಗಲು ವಿಶೇಷ ವಿದ್ಯೆಯೇನೂ ಬೇಕಾಗಿಲ್ಲ. ಜೀವನಾನುಭವವನ್ನು ನೆಚ್ಚಿಕೊಂಡು ಬರೆಯಬಹುದೆಂಬ ಅನಿಸಿಕೆ ಪ್ರಬಲವಾಯಿತು. ಜ್ಞಾನಪೀಠ ಪುರಸ್ಕೃತರಾದ ಶಿವರಾಮ ಕಾರಂತರೇ ಇದಕ್ಕೆ ಸ್ಪಷ್ಟ ಉದಾಹರಣೆ. ಅವರ ಕಾದಂಬರಿಗಳೆಲ್ಲ ಜೀವನ ಶೋಧನೆಯೇ. ‘ವ್ಯಕ್ತಿಗಿಂತ ಸಾಹಿತ್ಯ ದೊಡ್ಡದು; ಸಾಹಿತ್ಯಕ್ಕಿಂತ ಬದುಕು ದೊಡ್ಡದು’ ಎಂದ ಅವರು ಕೊನೆಯವರೆಗೂ ಪ್ರಯೋಗಶೀಲರಾಗಿಯೇ ರಚನಾತ್ಮಕ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಕವಿ ಕುವೆಂಪು ಅವರು ಹೇಳುವಂತೆ ಶ್ರೀಸಾಮಾನ್ಯರ ಯುಗ ಮುಂದಾಯಿತು. ಪಾಶ್ಚಿಮಾತ್ಯರ ಭಾಷಾಸಾಹಿತ್ಯಗಳ ಪ್ರಭಾವವು ಇನ್ನಷ್ಟು ಹೆಚ್ಚಾಗಿ, ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರಗಳೆಂಬ ಪಂಥಗಳು ಇಪ್ಪತ್ತನೆಯ ಶತಮಾನದಲ್ಲಿ ಹುಟ್ಟಿಕೊಂಡವು. ಇವೆಲ್ಲ ದೃಷ್ಟಿಧೋರಣೆಗಳು. ವಿಪರೀತ ಓದಿಕೊಂಡ, ಇಂಗ್ಲಿಷ್ ಬಲ್ಲ ವಿಶ್ವವಿದ್ಯಾನಿಲಯದ ಅಕಡೆಮಿಕ್ ಮಂದಿಯು ಹಲವು ವಿದೇಶೀಯ ತತ್ತ್ವ ಸಿದ್ಧಾಂತಗಳ ಕಣ್ಣಿನಿಂದ ಸಾಹಿತ್ಯ ರಚಿಸಿದ್ದರಿಂದಲೂ ವಿದೇಶೀ ಸಾಹಿತ್ಯದ ಪ್ರಭಾವಕ್ಕೆ ಸಿಕ್ಕಿಕೊಂಡಿದ್ದರಿಂದಲೂ ಇವು ಮುನ್ನೆಲೆಗೆ ಬಂದವು; ಹಾಗೆಯೇ ಈಗ ಹಿನ್ನೆಲೆಗೆ ಸಂದವು. ಶುದ್ಧ ಸಾಹಿತ್ಯ ಮತ್ತು ಆನ್ವಯಿಕ ಸಾಹಿತ್ಯಗಳೆಂಬ ವಿಧವು ತಲೆಯೆತ್ತಿತು.

ಸರಳೀಕರಿಸಿ ಹೇಳುವುದಾದರೆ ನವೋದಯ ಮಾರ್ಗವು ಶುದ್ಧ ಸಾಹಿತ್ಯವಾದರೆ, ಅದರ ಮುಂದಿನ ಪ್ರಗತಿಶೀಲ, ನವ್ಯ ಮತ್ತು ನವ್ಯೋತ್ತರವು ಆನ್ವಯಿಕ ಸಾಹಿತ್ಯ. ಏಕೆಂದರೆ ಹಲವು ಅನ್ಯಜ್ಞಾನ ಶಿಸ್ತು ಮತ್ತವುಗಳ ಸೈದ್ಧಾಂತಿಕತೆಗಳ ಪ್ರಭಾವದಿಂದಾಗಿ ಆನ್ವಯಿಕ ಸಾಹಿತ್ಯ ಜನಿಸುವುದು. ಯುರೋಪಿನ ತತ್ತ್ವಶಾಸ್ತ್ರ, ಮನೋವಿಜ್ಞಾನ, ಸಮಾಜವಿಜ್ಞಾನ, ಭಾಷಾವಿಜ್ಞಾನಗಳ ಹಲವು ತತ್ತ್ವಗಳು ಈ ಸಾಹಿತ್ಯರಚನೆಯ ಪ್ರೇರಣೆ. ಹಾಗೆ ನೋಡಿದರೆ ಸಾಹಿತ್ಯವೇ ಬಹುಶಿಸ್ತೀಯತೆಗೆ ಅತ್ಯುತ್ತಮ ಉದಾಹರಣೆ. ಅದಕಾಗಿಯೇ Literature has no syllabus ಎಂಬ ಮಾತಿರುವುದು. ಸಾಹಿತಿ ಅಥವಾ ಕವಿಯು ಜಗತ್ತಿನ ಎಲ್ಲ ಬಗೆಯ ತಿಳಿವು ಮತ್ತು ಅನುಭವಗಳಿಗೂ ತೆರೆದುಕೊಂಡಿರಬೇಕು. ಸತ್ಯ ಸಾಕ್ಷಾತ್ಕಾರವೇ ಸಾಹಿತ್ಯದ ಮೂಲಾಶಯವಾದರೂ ಅದನ್ನು ಅಭಿವ್ಯಕ್ತಿಸುವ ಮಾರ್ಗವು ಕಲಾತ್ಮಕವೂ ಸೃಷ್ಟಿಶೀಲವೂ ಆಗಿರಬೇಕು. ಅನುಭವಿಸಿ ಬರೆದದ್ದು ಸಾಹಿತ್ಯ; ಉಳಿದುದೆಲ್ಲ ಕೇವಲ ವರದಿ ಎಂದು ಬಿಟ್ಟಿದ್ದಾರೆ ಕಾರಂತರು. ಇದು ಅವರ ದೃಷ್ಟಿಕೋನ. ಕಾವ್ಯ ಅಥವಾ ಸಾಹಿತ್ಯದಲ್ಲಿ ಇದಮಿತ್ಥಂ ಎಂಬ ಮಾತಿಲ್ಲ. ಇದರಲ್ಲಿ ದಾರಿಯೇ ಗುರಿ; ಪಯಣ ನಿರಂತರ. ಫಲಿತ ಸ್ಥಿತ್ಯಂತರ. ಆಯಾ ಕಾಲಧರ್ಮ ಮತ್ತು ಮನೋಧರ್ಮಗಳಿಗೆ ಅನುಸಾರವಾಗಿ ಸಾಹಿತ್ಯದ ದೃಷ್ಟಿಸೃಷ್ಟಿಗಳೂ ಬದಲಾಗುತ್ತಿರುತ್ತವೆ. ಒಂದು ಕಾಲದಲ್ಲಿ ಸಾಹಿತ್ಯದ ಕೇಂದ್ರ ಮತಧರ್ಮವಾಗಿತ್ತು; ನಂತರ ಅದು ಮನುಷ್ಯರತ್ತ ತಿರುಗಿತು; ಇದೀಗ ಒಟ್ಟೂ ಜೀವಪರ ಕಾಳಜಿಯತ್ತ ತಿರುಗಿದೆ. ಒಟ್ಟಿನಲ್ಲಿ ಇಲ್ಲಿ ವ್ಯಕ್ತಿಗತ ಅನಿಸಿಕೆ, ಅಭಿವ್ಯಕ್ತಿ ಮತ್ತು ಧೋರಣೆಗಳಿಗೆ ನೆಲೆಬೆಲೆ. ಜೀವಂತಿಕೆ ಇದರ ಸೆಲೆ. ಉಳಿದ ಸಮಾಜವಿಜ್ಞಾನಗಳಂತೆ ಪರಿಕಲ್ಪನೆ ಮತ್ತು ಅಂಕಿಅಂಶಗಳೊಂದಿಗೆ ಹೊಡೆದಾಡಿದರೆ, ಸಾಹಿತ್ಯ ಹಾಗಲ್ಲ. ಸಾಹಿತ್ಯಸೃಷ್ಟಿಯ ವ್ಯಕ್ತಿಗತ ಅನುಭವವನ್ನು ಸಾಹಿತ್ಯ ವಿಮರ್ಶೆಯು ವಿವರಿಸಿ, ಮೌಲ್ಯಮಾಪನ ಮಾಡುತ್ತದೆ; ಸಾಧಾರಣೀಕರಣಗೊಳಿಸಿ, ಸಾರ್ವತ್ರಿಕ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಹಿತಿಗೂ ಓದುಗನಿಗೂ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ನಿರ್ವಹಿಸಬೇಕು.

ಡಾ. ಹೆಚ್ ಎನ್  ಮಂಜುರಾಜ್, ಹೊಳೆನರಸೀಪುರ

6 Comments on “ಸಾಹಿತ್ಯ ಸಾತತ್ಯ

  1. ಸತ್ವಪೂರ್ಣವಾದ ಲೇಖನ ಬರೆಹಗಾರರಿಗೆ ಬೇಕಾದ …ಕಿವಿಮಾತುಗಳು ಹಾಗೆಯೇ ಸಾಹಿತ್ಯ ನೆಡೆದು ಬಂದ ಹಾದಿ ಮತ್ತು ವೈಚಾರಿಕತೆ… ವಂದನೆಗಳು ಸಾರ್

  2. ಬಹಳ ವಿಶೇಷವಾದ ಲೇಖನ. ಸಾಹಿತ್ಯ ದ ಬಗ್ಗೆ ತಿಳಿಯದವರಿಗೆ ಕಿವಿಮಾತು.. ಹೊಸ ಬರಹಗಾರರಿಗೆ
    ಮಾರ್ಗ ದರ್ಶನ.

  3. ಸಾಹಿತ್ಯ ದರ್ಶನದೊಂದಿಗೆ ಹೊಸ ಬರಹಗಾರರಿಗೆ ಉತ್ತಮ ದಾರಿದೀಪವೆನಿಸಬಲ್ಲ ಸುದೀರ್ಘ ಲೇಖನ,!

  4. ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು.

    ಮಾನ್ಯ ಸಂಪಾದಕರ ಸಲಹೆಯ ಮೇರೆಗೆ
    ಇಂಥ ವಸ್ತುವನ್ನು ಕುರಿತು ಬರೆಯುತ್ತಿದ್ದೇನೆ.

    ಯಾರೂ ಅನ್ಯಥಾ ಭಾವಿಸದಿರಿ.
    ಎಲ್ಲಾದರೂ ಅಸ್ಪಷ್ಟತೆಯೋ ಅನಿರ್ದಿಷ್ಟತೆಯೋ
    ಕಂಡು ಬಂದರೆ ದಯಮಾಡಿ ತಿಳಿಸಿರಿ.

    ಸರಿ – ಪಡಿಸಿ – ಕೊಳ್ಳುವೆ ಅಥವಾ
    ಅಂಥವನ್ನು ಇನ್ನಷ್ಟು ಆಳಗಲದಲಿ ವಿವರಿಸುವೆ.

    ವಂದನೆಗಳು.

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *