ಬೆಳಕು-ಬಳ್ಳಿ

ಎರಡನೇ ನೆರಳು

Share Button

1
ಎಲ್ಲೆಲ್ಲೋ ಅಲೆದು ತಡಕಿ ಬಂದೆನು.
ರಾತ್ರಿ ಕುದಿದು, ದಟ್ಟ ಕಟ್ಟಿದ
ಸ್ವಪ್ನದ ಕೆನೆಯ ಪದರಗಳಾಚೆ
ಕಣ್ಣ ಹಿಂದೆ ಕೀಕಾರಣ್ಯದ ಮೂಲೆಮೂಲೆಗಳಲ್ಲಿ
ಕಲಕಿದ ನಿದ್ರೆಯ ಮರುಭೂಮಿಯ ಮರಳ ತೆರೆಗಳಲ್ಲಿ.
ಬಳಲಿ, ದಣಿದು ಬವಳಿಬಿದ್ದ ನಿದ್ರೆಯ ನೀರ ಬಿಸಿಲಿನಲ್ಲಿ,
ಆ ಎರಡನೇ ನೆರಳು ನೀನೇನಾ…?

2
ಹಾಡೊಂದು ಕೇಳಿಸಿದೊಡನೆ ಎಲ್ಲೋ ಉಸ್ಸೂರನೆನ್ನುತ್ತಾ,
ಕ್ರಮ ತಪ್ಪದ ದಿನಚರಿ,
ಕೊಕ್ಕೆಗೆ ನೇತಾಡಿದ್ದ ತವಕ
ಪ್ರಾಣ ಬಂದು ಸಜೀವವಾಗುತ್ತದೆ.
ಹಾಡಿನೊಂದಿಗೇ ಸಾಗಿ ಕಣ್ಣು ಮುಚ್ಚಲಾಗದ ಸಮುದ್ರವಾಗುತ್ತದೆ—
ಸಮುದ್ರವೇ ಹಾಡಾಗಿ, ಪ್ರವಾಹವಾಗಿ, ಎಲ್ಲೆಗಳನ್ನು ಅಳಿಸಿಬಿಟ್ಟಾಗ,
ಅಣುಅಣುವಿನಲ್ಲಿಯೂ ಶ್ರುತಿ-ಲಯಗಳ ಆರ್ಭಟವೇ!

3
ಆ ದಿನ ಸ್ತಬ್ಧವಾಗಿ ಉದಯಿಸಿದ ಮೌನವನು
ಕೆರಳಿಸಿ ಕೆರಳಿಸಿ ಚೌಕಾಸಿ ಮಾಡಿದ ನೋಟಗಳು;
ಪ್ರಶಂಸೆಗಳ ಎರೆ ಹಾಕಿ ವಶೀಕರಿಸಿದ ಕ್ಷಣದಲ್ಲಿ,
ತಾಯಿಬೇರು ಗಳೊಂದಿಗೆ ನನ್ನನು ಕೀಳಿಸಿ,
ನಿನ್ನ ಬದುಕಿನಲಿ ನಾಟಿಕೊಂಡಾಗ
ವೇದವಾಗಿ, ನಾದವಾಗಿ, ಭೂ-ಆಕಾಶಗಳ ನಡುವೆ ಗಾನವಾಗಿ,
ನಿನ್ನ ಸುತ್ತಲೂ ಇನ್ನು ಸುಂಟರಗಾಳಿಯಂತೆ—

4
ಮೇಲ್ಮೇಲೆ ಎಲ್ಲೋ ತೋರಿಸಿದೆನೆಂದು,
ನೀಲಿ ಗಾಳಿಯ ವಯ್ಯಾರದ ಅಲೆಗಳೊಳಗೆ
ಸುಳಿದು ತಿರುಗುವ ದೃಶ್ಯಾದೃಶ್ಯ ವೃತ್ತಗಳಾಗಿ
ಯಾರಿಗೆ ಗೊತ್ತು… ಏನಾದೆವೋ, ಏನಾಗಲಿಲ್ಲವೋ!

ತೆಲುಗು ಮೂಲ : ಸ್ವಾತೀ ಶ್ರೀಪಾದ


ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್

3 Comments on “ಎರಡನೇ ನೆರಳು

  1. ಅನುವಾದ ಕವನ… ಚೆನ್ನಾಗಿದೆ ಚಿತ್ರ ವೂ ಸೂಕ್ತ ವಾಗಿದೆ..

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *