ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಅಂದು ಸಾಯಂಕಾಲ ವರು ಮಾನಸಾಳಿಗೆ ಫೋನ್ ಮಾಡಿದಳು.
“ನಾನು ಈ ವಾರದಲ್ಲಿ ಬರ‍್ತೀನಿ. ಯೋಚಿಸಬೇಡ.”
“ನಿಧಾನವಾಗಿ ಬಾ. ನಾನು ಇರುವುದಕ್ಕೆ ವ್ಯವಸ್ಥೆ ಆಗಿದೆ.”
“ಎಲ್ಲಿದ್ದೀಯಾ?”
“ಓನರ್ ಮನೆಯಲ್ಲಿ.”
“ಅದು ಹೇಗೆ ಸಾಧ್ಯವಾಯಿತು?”
ಅವಳು ಚಂದ್ರಾವತಿ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಹೇಳಿ ರಾಗಿಣಿ, ರಾಮಗೋಪಾಲ್ ಸಹಾಯ ಮಾಡಿದ್ದರ ಬಗ್ಗೆ ತಿಳಿಸಿದಳು. ಸಿಂಧು, ಕೃತಿಕಾ…… ಅವರ ಫ್ರೆಂಡ್‌ಗೆ ಚಂದ್ರಾವತಿ ಮಾಡಿರುವ ಊಟದ ವ್ಯವಸ್ಥೆಯ ಬಗ್ಗೆ ತಿಳಿಸಿದಳು. ಆದರೆ ರಾಮವರ್ಮ ಬಗ್ಗೆ ಏನೂ ಹೇಳಲಿಲ್ಲ.

“ಒಳ್ಳೆಯದಾಯ್ತು ಕಣೆ. ಇದುವರೆಗೂ ನನ್ನನ್ನು ಅಪರಾಧಿ ಮನೋಭಾವ ಕಾಡ್ತಾ ಇತ್ತು. ಈಗ ಸಮಾಧಾನವಾಯ್ತು.”
“ನಾನು ಈ ಶನಿವಾರ ಬರ‍್ತಿದ್ದೀನಿ. ನಿನ್ನ ರಾಜಕುಮಾರ ಭಾನುವಾರ ಬರದೇ ಇದ್ದರೆ ನಾನು ನಿಮ್ಮನೆಗೆ ಬರ‍್ತೀನಿ.”
“ಅವರು ಬರಲ್ಲ ಕಣೆ. ಕನ್ಯಾಕುಮಾರಿಯಲ್ಲಿ ಅವರ ಫ್ರೆಂಡ್ ಮದುವೆಯಿದೆಯಂತೆ ಅಲ್ಲಿಗೆ ಹೋಗ್ತಿದ್ದಾರೆ…….”
“ಹಾಗಾದರೆ ನಾನು ಭಾನುವಾರ ಬೆಳಿಗ್ಗೆ ಬರ‍್ತೀನಿ.”
“ಆಯ್ತು ಬಾ. ನಾನೂ ನಿನ್ನ ಹತ್ತಿರ ತುಂಬಾ ಮಾತನಾಡಬೇಕು.”

ಶನಿವಾರ ಬೆಳಿಗ್ಗೆಯೇ ವಾರುಣಿ ಬೆಂಗಳೂರಿಗೆ ಹೊರಟಳು. ಅವಳು ಮನೆ ತಲುಪಿದಾಗ 10 ಗಂಟೆಯಾಗಿತ್ತು. ಅಮ್ಮ ಮಾಡಿಕೊಟ್ಟ ಬಿಸಿಬಿಸಿದೋಸೆ ತಿಂದು ಕಾಫಿ ಕುಡಿದಳು. ಕೆಲಸ ಮಾಡುತ್ತಲೇ ಶಕುಂತಲಾ ತಮ್ಮ ದುಬೈ ಪ್ರವಾಸದ ಬಗ್ಗೆ ಹೇಳಿದರು.
“ತುಂಬಾ ಚೆನ್ನಾಗಿ ನೋಡಿಕೊಂಡ್ರು. ನೀಲಾ, ಅಂಜಲಿ ಇಬ್ಬರೂ ನಿನ್ನನ್ನು ತುಂಬಾ ಜ್ಞಾಪಿಸಿಕೊಂಡ್ರು. ನಿನಗೆ ಅನಿಕೇತ್ ನೆನಪಿದ್ದಾನಾ?”
“ಏನೋ ಅಲ್ಪ ಸ್ವಲ್ಪ…….”
“ಅವನು ಮಾತ್ರ ನೀವಿಬ್ಬರೂ ಜಗಳವಾಡುತ್ತಿದ್ದುದನ್ನು ನೆನಪು ಮಾಡಿಕೊಂಡ. ನಿಮ್ಮಿಬ್ಬರಿಗೆ ಜಗಳವಾದಾಗಲೆಲ್ಲಾ ನೀನು ಅವನ ಕೈ ಕಚ್ಚುತ್ತಾ ಇದ್ದೆಯಂತೆ. ‘ಈಗಲೂ ಯಾರ ಹತ್ತಿರವಾದರೂ ಜಗಳಾವಾಡಿದರೆ ಕೈ ಕಚ್ಚುತ್ತಾಳಾಂತ’ ಕೇಳಿದ.”
“ನಂಗೇನೂ ನೆನಪಿಲ್ಲವಮ್ಮ.”

“ಆ ಹುಡುಗ ಎಂ.ಟೆಕ್ ಮಾಡ್ತಿದ್ದಾನಂತೆ. ಕೊಂಚಾನೂ ಜಂಭವಿಲ್ಲ. ನಿನ್ನ ಓದು ಮುಗಿಯುವ ಹೊತ್ತಿಗೆ ನಾವು ಈ ಮನೆ ಬಿಡಬೇಕಾಗಬಹುದು.”
“ನನಗೆಲ್ಲಿ ಕೆಲಸ ಸಿಗುತ್ತದೋ ಅಲ್ಲಿಗೆ ಹೋಗೋಣಾಮ್ಮ.”
“ನಿಮ್ಮ ಪಾರ್ವತಿ ಅತ್ತೆ ಏನೇನೋ ಹೇಳಿದರು. ನನ್ನ ಪುಣ್ಯ ನಿಮ್ಮ ತಂದೆ ಅದಕ್ಕೆ ಜಗ್ಗಲಿಲ್ಲ.”
“ಅತ್ತೆ ಏನು ಹೇಳಿದರು?”
ಶಕುಂತಲಾ ಎಲ್ಲಾ ವಿವರಿಸಿದರು.
“ಅಪ್ಪ ಆ ರೀತಿ ಹೇಳಿದ್ದು ಆಶ್ಚರ್ಯನೇ!”
“ಶ್ರೀಪತಿ ಚೆನ್ನಾಗಿ ಬುದ್ಧಿ ಹೇಳಿದ್ದಾನೆ. “ನಿಮ್ಮ ಒಳ್ಳೆಯತನವನ್ನು ನಿಮ್ಮ ತಮ್ಮಂದಿರು, ಅಕ್ಕ-ತಂಗಿ ದುರುಪಯೋಗಪಡಿಸಿಕೊಳ್ತಿದ್ದಾರೆ. ನೀವು ಇನ್ನು ಮುಂದಾದರೂ ಮಕ್ಕಳ ಬಗ್ಗೆ ಯೋಚಿಸೀಂತ.”
“ಒಳ್ಳೆಯದಾಯಿತು.”
“ಶೋಭಾ ಬಗ್ಗೆ ನನಗೆ ಒಂದು ತರಹ ಆತಂಕ. ಅವಳು ನಮ್ಮ ಜೊತೆಯೇ ಇದ್ರೆ ಒಳ್ಳೆಯದು. ಶಿವಶಂಕರ ಹೊಟ್ಟೆಗೂ ಹಾಕದೆ ಸಾಯಿಸಿಬಿಡ್ತಾನೆ.”

“ಹಾಗೇನೂ ಆಗಲ್ಲ. ಚಿಕ್ಕಮ್ಮಾನೂ ಬದಲಾಗ್ತಾರೆ ನೋಡ್ತಿರು. ಅಂದಹಾಗೆ ಚಿಕ್ಕಮ್ಮ ಎಲ್ಲಿ ಕಾಣಿಸ್ತಿಲ್ಲ…….”
“ಇವತ್ತು ಪೇರೆಂಟ್ಸ್ ಮೀಟಿಂಗ್ ಇದೆ. ಗಂಡನನ್ನು ಎಳೆದುಕೊಂಡು ಹೋಗಿದ್ದಾಳೆ. ಅಲೋಕ್ ಹಠಮಾಡಿ ಅಪ್ಪನನ್ನು ರ‍್ಕೊಂಡು ಹೋಗಿದ್ದಾನೆ” “ನೀನು ಇವತ್ತು ಬರದೇಯಿದ್ರೆ ನಾನು ನಾಳೆಯಿಂದ ಸ್ಕೂಲಿಗೆ ಹೋಗಲ್ಲಾಂತ” ಹೇಳಿದ. ಶಿವು ಮಗನ ಹಠಕ್ಕೆ ತಲೆಬಾಗಿದ.
“ಜಾನಕಿ ಚಿಕ್ಕಮ್ಮ ದೇವಕಿ ಅತ್ತೆ ಹೇಗಿದ್ದಾರೆ?”
ಅವರು ಬದಲಾಗೋದುಂಟಾ? ಇವತ್ತೂ ಕೂಡ ಇಬ್ಬರೂ ತಿರುಗಕ್ಕೆ ಹೊರಟಿದ್ದಾರೆ.”
“ಹೋಗಲಿ ಬಿಡು. ಶರು, ಶಂಕರ ಎಲ್ಲಿ?”
“ಶರೂಗೆ ಯಾವುದೋ ಕಂಪ್ಯೂಟರ್ ಸೆಂಟರ್‌ಗೆ ಹೋಗಿದ್ದಾಳೆ. ಶಂಕರನ್ನ ಡಿಬೇಟ್ ಕಾಂಪಿಟೇಷನ್‌ಗೆ ಕಳಿಸಿದ್ದಾರೆ.”
“ಸರಿಯಮ್ಮ. ನಾನು ಬಟ್ಟೆ ವಾಶ್‌ಗೆ ಹಾಕಬೇಕು.”
“ನೀನು ಅಲ್ಲಿ ಹೇಗಿದ್ದೀಯೆ?”
“ಇರು ಬಟ್ಟೆ ಹಾಕಿ ಬರ‍್ತೀನಿ” ಎಂದು ವರು ವಾರದಿಂದ ಸುತ್ತಿಟ್ಟಿದ್ದ ಬಟ್ಟೆ ತಂದು ವಾಷಿಂಗ್ ಮಿಷನ್‌ಗೆ ಹಾಕಿದಳು. ಅವಳು ವಾಪಸ್ಸು ಬಂದಾಗ ಶಕುಂತಲಾ ತರಕಾರಿಗಳನ್ನು ಹರಡಿಕೊಂಡು ಕುಳಿತಿದ್ದರು.
“ನಾಳೆ ಪೂರಿ, ಸಾಗು ಮಾಡ್ತೀನಿ ನಿನ್ನ ಕಥೆ ಏನು ಹೇಳೂ…”

ವರು ತಾಯಿಯ ಬಳಿ ಚಂದ್ರಾವತಿಯ ಘಟನೆ ಹೇಳಿದಳು. ಅವಳಿಗೆ ಯಾವ ವಿಚಾರ ಮುಚ್ಚಿಡಬೇಕು. ಯಾವ ವಿಚಾರ ಹೇಳಬೇಕು ಎಂದು ಗೊತ್ತಿದ್ದರಿಂದ ಶಕುಂತಲಾಗೆ ಅನುಮಾನ ಕಾಡಲಿಲ್ಲ.
“ಮಾನಸ ಓದು ಬಿಡಬಾರದಿತ್ತು….”
“ಅಮ್ಮ ಅವಳಿಗೆ ಓದುವ ಆಸಕ್ತಿಯಿಲ್ಲ. ಅವಳು ಬಯಸಿದಂತಹ ಹುಡುಗ ಸಿಕ್ತಿದ್ದಾನೆ. ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ್ದಾಳೆ ಅವಳು. ಅವಳೇನು ಕೆಲಸಕ್ಕೆ ಸೇರಬೇಕಾ? ಮದುವೆಯಾಗಿ ಆರಾಮವಾಗರ‍್ತಾಳೆ ಬಿಡು.”
“ಅವಳಿಗೆ ಅಡಿಗೆ ಮಾಡಕ್ಕೆ ಬರತ್ತೇನೆ?”
“ಅಕ್ಕಿಯಲ್ಲಿ ಅನ್ನ ಮಾಡ್ತಾರೇಂತ ಗೊತ್ತು. ನಮ್ಮ ಜೊತೆ ಇದ್ದಾಗ ಬ್ರೂಕಾಫಿ ಮಾಡೋದು, ಟೀ ಮಾಡೋದು, ಚಪಾತಿ ಬೇಯಿಸೋದು ಕಲಿಸಿದ್ವಿ. ತರಕಾರಿ ತುಂಬಾ ನಿಧಾನವಾಗಿ ಹೆಚ್ತಾ ಇದ್ದಳು. ಅವಳತ್ತೆ ಮನೆಯವರು ಶ್ರೀಮಂತರಾಗಿರುವುದರಿಂದ ಅಡಿಗೆಯವರು ಇರಬಹುದು.”

“ನಾವು ಮನೆ ಬಿಡಬೇಕೂಂದ್ರೆ ಇವರಿಗೆಲ್ಲಾ ಸಂಕಟ, ನಿಮ್ಮ ಪಾರ್ವತಿ ಅತ್ತೆಗೆ ಕೊಂಚ ಅನುಮಾನ…..”
“ಏನು ಅನುಮಾನ?”
“ನಮ್ಮನ್ನೆಲ್ಲಾ ಬೇರೆ ಮನೆಗೆ ಕಳುಹಿಸಿ, ನಿಮ್ಮನ್ನು ಇದೇ ಮನೇಲಿ ಇಟ್ಟುಕೋತಾಳ ನಿಮ್ಮ ನೀಲಾಂತ ಕೇಳಿದರು. ನಿಮ್ಮಪ್ಪ ತುಂಬಾ ಚೆನ್ನಾಗಿ ಉತ್ತರ ಕೊಟ್ಟರು.”
“ಏನು ಹೇಳಿದರು?”
“ಅವರು ಮನೆ ಕಟ್ಟಿದ ಮೇಲೆ, ಅವರ ಮನೆ ಮೇಲೆ ಮನೆ ಕಟ್ಟಿಕೊಡಬಹುದು. ಅದೆಲ್ಲಾ 5-6 ವರ್ಷದ ಮಾತು, ಸಧ್ಯಕ್ಕೆ ನಾವೂ ಗಂಟು-ಮೂಟೆ ಕಟ್ಟಬೇಕು. ನಮ್ಮ ವರು ಎಲ್ಲಿ ಕೆಲಸಕ್ಕೆ ಸರ‍್ತಾಳೋ ಅಲ್ಲಿಗೆ ಹೋಗ್ತೀವಿ” ಅಂದ್ರು.
ವರು ಜೋರಾಗಿ ನಕ್ಕಳು.
ಅಷ್ಟರಲ್ಲಿ ಮಲಗಿದ್ದ ರಾವ್ ಎದ್ದು ಬಂದರು.
“ವರು, ಯಾಕೆ ನಗ್ತಿದ್ದೀಯಾ?”
“ಅಮ್ಮ ಹೇಳಿದಳು. “ನಿಮ್ಮ ಅಪ್ಪಂಗೆ ಬುದ್ಧಿ ಬಂದಿದೆ ಕಣೇಂತ. ಸಧ್ಯ ಇಷ್ಟು ವರ್ಷಗಳಾದ ಮೇಲೆ ಬುದ್ಧಿ ಬಂತಲ್ಲಾ ಅನ್ನುವ ಖುಷಿಗೆ ನಗ್ತಾ ಇದ್ದೀನಿ.”
“ತಮಾಷೆ ಮಾಡು. ಇತ್ತೀಚೆಗೆ ದುಬೈಗೆ ಹೋಗಿ ಬಂದ ಮೇಲೆ ನಿಮ್ಮಮ್ಮ ತುಂಬಾ ಬದಲಾಗಿದ್ದಾಳೆ. ನೀನೂ ಅವಳ ತಾಳಕ್ಕೆ ತಕ್ಕ ಹಾಗೆ ಕುಣಿ.”
“ಆಗಲೀಪ್ಪ, ಸಾಯಂಕಾಲ ಪೇಟೆಗೆ ಹೋಗಿ ಗೆಜ್ಜೆ ತರ‍್ತೀನಿ.” ಎಂದಾಗ ರಾವ್ ಕೂಡ ಜೋರಾಗಿ ನಕ್ಕರು.

“ವರು ತಟ್ಟೆ ಹಾಕು, ಊಟ ಮಾಡೋಣ.”
“ಅಮ್ಮ ನಂಗೆ ಹಸಿವಿಲ್ಲ. ನೀವು ಊಟ ಮಾಡಿ. ನಾನು ಶರೂ ಜೊತೆ ಮಾಡ್ತೀನಿ” ಎಂದು ತನ್ನ ರೂಮ್ ಕಡೆಗೆ ಹೆಜ್ಜೆ ಹಾಕಿದಳು.
ಸಾಯಂಕಾಲದ ವೇಳೆಗೆ ಎಲ್ಲರೂ ಮನೆಗೆ ಬಂದರು. ಶರೂ “ಎಲ್ಲರೂ ತುಂಬಾ ಬದಲಾಗಿದ್ದಾರೆ. ಶೋಭಾ ಚಿಕ್ಕಮ್ಮ ಇದ್ದ ಹಾಗೆ ಇದ್ದಾರೆ. ಜಾನಕಿ ಚಿಕ್ಕಮ್ಮ ದೇವಕಿ ಅತ್ತೆ ತುಂಬಾ ವ್ಯಂಗ್ಯವಾಗಿ ಮಾತಾಡ್ತಾರೆ” ಎಂದಳು.
“ಯಾಕೆ ಹಾಗೆ ಮಾತಾಡ್ತಾರೆ?”
“ನಾವು ದುಬೈಗೆ ಹೋಗಿ ಬಂದಮೇಲೆ ಈ ತರಹ ಶುರುವಾಗಿದೆ. ಒಂದು ತರಹ ಹೋಟ್ಟೆಕಿಚ್ಚು ಅವರಿಗೆ.”
“ಅವರು ಏನಾದ್ರೂ ಮಾತಾಡಲಿ. ನೀನು ಜಗಳವಾಡಬೇಡ”
“ಇಲ್ಲ ವರು. ನಾನು ಉತ್ತರಕೊಡಕ್ಕೇ ಹೋಗಲ್ಲ” ಎಂದಿದ್ದಳು.
ಸಾಯಂಕಾಲ ಎಲ್ಲರೂ ಕಾಫಿ ಕುಡಿಯುವಾಗ ಜಾನಕಿ ಕೇಳಿದಳು. “ನೀನು ಯಾವಾಗ ದುಬೈಗೆ ಹೋಗ್ತೀಯ ವರು?”
“ಈಗಲೇ ಹೇಗೆ ಹೋಗಕ್ಕಾಗತ್ತೆ ಚಿಕ್ಕಮ್ಮ? ನನಗೆ ರಜ ಬಂದಾಗ ನೋಡಬೇಕು.”
“ಪುಣ್ಯ ಮಾಡಿದ್ದೆ ಬಿಡು. ಕಾಸೂ ಖರ್ಚಿಲ್ಲದೆ ವಿಮಾನ ಹತ್ತಕ್ಕೆ ಅದೃಷ್ಟವಿರಬೇಕು.”
“ನಾವು ಯಾರಿಗಾದರೂ ಸಹಾಯ ಮಾಡಿದರೆ ದೇವರು ಬಡ್ಡಿ ಸಹಿತ ವಾಪಸ್ಸು ಕೊಡ್ತಾನೆ ಚಿಕ್ಕಮ್ಮ. ನಮ್ಮಪ್ಪ-ಅಮ್ಮ ನೀಲಾ ಆಂಟಿಗೆ ಸಹಾಯ ಮಾಡಿದ್ದಕ್ಕೆ ತಾನೇ ಅವರು ವಿಶ್ವಾಸ ತೋರಿಸ್ತಿರೋದು? ನಾನು ನನ್ನ ಪ್ರಪಂಚ ಸ್ವಾರ್ಥಿಗಳಾದರೆ ಯಾರು ವಿಶ್ವಾಸ ತೋರಿಸ್ತಾರೆ? ಶ್ರೀಮಂತಿಕೆ ಇದ್ರೆ ಸಾಲದು. ಶ್ರೀಮಂತ ಹೃದಯಾನೂ ಇರಬೇಕು.”
ಶಾಲಿನಲ್ಲಿ ಸುತ್ತಿ ಹೊಡೆದ ಹಾಗಿತ್ತು ಅವಳ ಮಾತು ಯಾರೂ ಉತ್ತರಿಸಲಿಲ್ಲ.

ಮರುದಿನ ತಿಂಡಿ ತಿಂದುಕೊಂಡು ವರು ಮಾನಸಾಳ ಮನೆಗೆ ಹೊರಟಳು. ಅವರ ಮನೆಯಲ್ಲಿ ಸಂಭ್ರಮ ತುಂಬಿತ್ತು. ತಾತ ಚೇತರಿಸಿಕೊಂಡಿದ್ದರು. ಮಾನಸಾಳ ತಾಯಿ ವರೂನ್ನ ಬಹಳ ವಿಚಾರಿಸಿಕೊಂಡರು. “ನಮ್ಮ ಮನು ಬಿಟ್ಟಿದ್ದರಿಂದ ನಿನಗೇನು ತೊಂದರೆಯಾಗಲಿಲ್ಲವೇನಮ್ಮಾ?” ಎಂದು ಹತ್ತಾರು ಬಾರಿ ಕೇಳಿದರು.
“ಇಲ್ಲ ಆಂಟಿ. ನನಗೂ ಎಲ್ಲವೂ ಅನುಕೂಲವಾಗಿದೆ” ಎಂದು ವರು ಹೇಳಿದ ಮೇಲೆ ಅವರಿಗೆ ಸಮಾಧಾನವಾಯಿತು.
ನಂತರ ಗೆಳತಿಯರು ಮಹಡಿ ಮೇಲೆ ಹೋಗಿ ಬಾಲ್ಕನಿಯಲ್ಲಿದ್ದ ಉಯ್ಯಾಲೆಯಲ್ಲಿ ಕುಳಿತರು. ಅಡಿಗೆಯ ಭಾಗ್ಯಮ್ಮ ದ್ರಾಕ್ಷಿಯ ಜ್ಯೂಸ್ ತಂದುಕೊಟ್ಟರು.

“ಮನು ನಿನ್ನ ರಾಜಕುಮಾರನ ಫೋಟೋ ತೋರಿಸಲ್ವಾ?”
“ತೋರಿಸ್ತೀನಿ ಮೊದಲು ಜ್ಯೂಸ್ ಕುಡಿ.”
ಮಾನಸ ಫೋಟೋ ತಂದು ತೋರಿಸಿದಳು.
ನಿಖಿಲ್ ಭಾರದ್ವಾಜ್ ತುಂಬಾ ಚೆನ್ನಾಗಿದ್ದ.
“ನಿನಗೆ ತಕ್ಕ ಜೋಡಿ. ತುಂಬಾ ಚೆನ್ನಾಗಿದ್ದಾರೆ.”
“ನಾನು ತುಂಬಾ ಆತುರಬಿದ್ದು ಮದುವೆ ಆಗ್ತಿದ್ದೀನೇನೋ ಅನ್ನಿಸ್ತಿದೆ.”
“ಯಾಕೆ ಹಾಗಂತೀಯ?
“ನಾನು ಇಲ್ಲಿ ಯಾರ ಅಂಕೆಗೂ ಸಿಗದೆ ಬೆಳೆದಿದ್ದೇನೆ. ಒಬ್ಬಳೇ ಮಗಳೂಂತ ಅಮ್ಮ-ಅಪ್ಪ ನನ್ನ ಬೈತಿರಲಿಲ್ಲ. ತಾತನಿಗಂತೂ ನಾನು ಮುದ್ದಿನ ಮೊಮ್ಮಗಳು. ಅವರು ಕೂಡ ನನ್ನನ್ನು ಬೈಯ್ಯುತ್ತಿರಲಿಲ್ಲ. ಅಜ್ಜಿ ಮಾತ್ರ ನನಗೆ ಬೈದು ಬುದ್ಧಿ ಹೇಳುತ್ತಿದ್ದರು.”

“ನಿಜ ನಿನಗೆ ಈ ಮನೇಯಲ್ಲಿ ಬೇಕಾದಷ್ಟು ಸ್ವಾತಂತ್ರ್ಯವಿತ್ತು. ಆದರೆ ನೀನದನ್ನು ದುರುಪಯೋಗ ಮಾಡಿಕೊಂಡಿಲ್ಲವಲ್ಲಾ……….?”
“ನಿಜ. ಆದರೆ ಈ ಸ್ವಾತಂತ್ರ್ಯ ಮುಂದೆ ಇರುತ್ತದೋ ಇಲ್ಲವೋ ತಿಳಿಯದು. ಆರಾಮವಾಗಿ ಕಾಲಕಳೆಯುವುದು ಬಿಟ್ಟು ಮದುವೆ ಅನ್ನುವ ಬಂಧನಕ್ಕೆ ಸಿಕ್ಕಿಹಾಕಿಕೊಳ್ತಿದ್ದೀನಲ್ಲಾಂತ ಭಯವಾಗ್ತಿದೆ.”
“ಭಯ ಯಾಕೆ ಮಾನಸ? ಅವರೆಲ್ಲಾ ನಿಮ್ಮ ತಂದೆಯವರಿಗೆ ಪರಿಚಿತರೇ ತಾನೆ?”
“ಇರಬಹುದು. ಆದರೆ ನನಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಆಗುತ್ತದಾ?”
“ಪ್ರತಿ ಹೆಣ್ಣುಮಗಳೂ ಅಂತಹ ದಿನ ಎದುರಿಸಲೇ ಬೇಕು. ತವರು ಅನ್ನುವುದು ತಾಯಿಯ ಮಡಲಿದ್ದ ಹಾಗೆ. ಮದುವೆಯಾಗಿ ಹೋಗುವಾಗ ಹೊಸ ಪರಿಸರ ಹೇಗಿರುತ್ತದೋ ಅನ್ನುವ ಭಯ ಕಾಡೇ ಕಾಡುತ್ತದೆ. ಆದರೆ ನಿನ್ನ ಗಂಡನ ಪ್ರೀತಿ ನೀನು ಗೆಲ್ಲುವಂತೆ ಮಾಡುತ್ತದೆ. ಧೈರ್ಯವಾಗಿರು.”
“ನಿಖಿಲ್ ನನ್ನನ್ನು ಸಪೋರ್ಟ್ ಮಾಡ್ತಾರಲ್ವಾ?”
“ನಿನ್ನನ್ನು ಮೆಚ್ಚಿ ಮದುವೆ ಆಗ್ತಿರುವಾಗ ನಿನ್ನನ್ನು ಸಪೋರ್ಟ್ ಮಾಡದೇ ರ‍್ತಾರಾ? ತಾಳ್ಮೆಯಿಂದ ಎಲ್ಲಾ ಗೆಲ್ಲಬಹುದು. ಅವರಿಗೂ ಹೊಸ ಸೊಸೆ, ಬೇರೆ ಮನೆಯಿಂದ ಬಂದವಳು ಅನ್ನುವ ಕಾಳಜಿ ಇರಲ್ವಾ?”
“ನಿನ್ನ ಮಾತು ಕೇಳಿ ಸಮಾಧಾನವಾಯ್ತು ಕಣೆ.”

“ವೆರಿಗುಡ್.”
“ನಿನ್ನ ಸಮಾಚಾರವೇನು?”
“ನಮ್ಮಮ್ಮ-ಅಪ್ಪ 10 ದಿನ ದುಬೈಗೆ ಹೋಗಿ ಬಂದ ಮೇಲೆ ಮನೆಯಲ್ಲಿ ತುಂಬಾ ಬದಲಾವಣೆಯಾಗಿದೆ.”
“ಏನು ಬದಲಾವಣೆ?”
“ನಮ್ಮ ತಂದೆಗೆ ಧೈರ್ಯಬಂದಿದೆ.”
“ಹೌದಾ?”
ವರು ನೀಲಾ-ಶ್ರೀಪತಿ ಬಗ್ಗೆ, ಅವರ ಪ್ರೀತಿ ವಿಶ್ವಾಸದ ಬಗ್ಗೆ ಹೇಳಿದಳು.
“ನಿಮ್ಮ ನೀಲಾ ಆಂಟಿಗೆ ಎಷ್ಟು ಜನ ಮಕ್ಕಳು?”
“ಇಬ್ಬರು. ಅಂಜಲಿ, ಅನಿಕೇತ್. ಅಂಜಲಿ ಮದುವೇಗೆ ಅಮ್ಮ-ಅಪ್ಪ ಹೋಗಿದ್ದಿದ್ದು…”
“ಆ ಅನಿಕೇತ್ ಏನ್ಮಾಡ್ತಿದ್ದಾನೆ?”
“ಎಂ.ಟೆಕ್ ಮಾಡ್ತಿದ್ದಾನಂತೆ. ಇನ್ನು ಆರು ತಿಂಗಳಿಗೆ ಎಂ.ಟೆಕ್ ಮುಗಿಯುತ್ತದಂತೆ. ಆಮೇಲೆ ದುಬೈಗೆ ಹೋಗಿ ಅಕ್ಕ-ಭಾವನ ಕಂಪನಿಯಲ್ಲಿ ಕೆಲಸ ಮಾಡ್ತಾನಂತೆ……..”
“ಅವನೂ ದುಬೈ ನಿವಾಸೀನಾ?”
“ಇಲ್ಲ. ಬೆಂಗಳೂರಿನಲ್ಲಿ ಕಂಪನಿ ಶುರು ಮಾಡುತ್ತಾನಂತೆ. ಆಗ ನಾವಿರುವ ಮನೆ ಒಡೆಸಿ ಕಟ್ಟಿಸ್ತಾನಂತೆ. ನಾವು ಆಗ ಮನೆ ಬಿಡಬೇಕಾಗುತ್ತದೆ.”

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ : https://surahonne.com/?p=43609
(ಮುಂದುವರಿಯುವುದು)

ಸಿ.ಎನ್. ಮುಕ್ತಾಮೈಸೂರು

4 Comments on “ಕನಸೊಂದು ಶುರುವಾಗಿದೆ: ಪುಟ 9

  1. ಸಮಯ ಬದಲಾದಂತೆ ಸಹಜವಾಗಿ ಎಲ್ಲವು ಬದಲಾಗುತ್ತದೆ.

  2. ಕನಸೊಂದು ಶುರುವಾಗಿದೆ ಧಾರಾವಾಹಿ ಸರಾಗವಾಗಿ ಓದಿಸಿಕೊಂಡುಹೋಗುತ್ತಿದೆ…ಮೇಡಂಪಾತ್ರಗಳ ಮನಸ್ಥಿತಿ..ಬದಲಾಗುವ ನಿಟ್ಟಿನಲ್ಲಿ ಸಾಗುತ್ತಿದೆ…ನನ್ನ ಅನಿಸಿಕೆ..

  3. ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಸಂಪಾದಕರಿಗೆ ಹಾಗೂ ಕಾದಂಬರಿಯ ಪ್ರತಿಕಂತನ್ನೂ ಆಸಕ್ತಿ ಯಿಂದ ಓದಿ
    ಅಭಿಪ್ರಾಯ ತಿಳಿಸುತ್ತಿರುವ ಆತ್ಮೀಯ ಗೆಳತಿಯರಿಗೆ ನನ್ನ ನಮನಗಳು.

  4. ಕುತೂಹಲಕಾರಿಯಾದ ಕಥಾಹಂದರ, ಸಹಜ ಹರಿವು ಓದುಗರ ಮನಸೆಳೆಯುತ್ತದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *