ಇಲ್ಲಿ… ಬೆಳಕನ್ನು ಆಳುತ್ತಿದೆ ಕತ್ತಲೆ
ನಾವಿದ್ದಾಗ ನೀವೇಕೆ ಬೇಕೆಂದು
ದೀಪಗಳನ್ನು ಆರಿಸುತ್ತವೆ ಮಿಣುಕುಹುಳುಗಳು.
ಬಂಧಿಸಲ್ಪಟ್ಟು ದುರ್ಗಂಧಪೂರಿತವಾಗುತ್ತದೆ ಗಾಳಿ,
ನದಿಗಳನ್ನು ಕುಡಿಯುತ್ತವೆ ತಿಮಿಂಗಿಲಗಳು,
ಮೂಡಿಬರುವ ಬಂಡವಾಳದ ಸುಂಟರಗಾಳಿಗೆ
ಚೆಂಡಿನಂತೇ ಎగರುತ್ತವೆ ಬೆಟ್ಟಗಳು.
ಮರಳುಗಾಡುಗಳಾಗಿಬಿಡುತ್ತವೆ ಸಮುದ್ರಗಳು,
ಅಗ್ನಿದಾಹಕ್ಕೆ ಎಲೆಗಳ ಕಣ್ಣೀರು ಸುರಿದು
ದಹನಗೊಳ್ಳುತ್ತವೆ ಅರಣ್ಯಗಳು.
ಮನುಷ್ಯರು ಕಲ್ಮಶಿತ ಕೆಸರುಕುಂಟೆಗಳಾಗುತ್ತಾರೆ,
ಆರಿಹೋದ ಕಣಗಿಗಳಾಗುತ್ತಾರೆ,
ಬಿರುಕು ಬಿದ್ದ ಕೃಷಿಭೂಮಿಗಳಾಗುತ್ತಾರೆ.
ಕಣ್ಣೀರಿನ ಹನಿಗಳಂತೆ ಬಿದ್ದು ಹೋಗುತ್ತವೆ ಹೂಗಳು.
ಹತ್ತಿರದಲ್ಲೇ ಶಸ್ತ್ರಸಜ್ಜಿತವಾಗಿ ಕಾವಲು ಕಾಸುತ್ತದೆ ನೆರಳು,
ಕಂಠದಿಂದ ಮಾತು ಚಿಮ್ಮಲಾರದು.
ತುಟಿಗಳ ಬೀಗದಿಂದ ದವಸ ದಾಣ್ಯದ ಕಣಗಳು
ರೆಕ್ಕೆ ಹುಳಗಳಂತೆ ಹಾರಿ ಹೋಗುತ್ತವೆ.
ಅನುಮಾನಿಸಲ್ಪಟ್ಟ ಮಗಳಂತೆ
ಹೊರಹಾಕಲ್ಪಡುತ್ತದೆ ಸತ್ಯ.
ಗಾಯಗಳ ರಕ್ತ ತೂಗಿಕೊಂಡು
ಧರ್ಮದ ಸೂಕ್ಷ್ಮೋಪದೇಶ ಕೊಡುತ್ತಾರೆ,
ಮೇಕೆ ಹಿಂಡುಗಳನ್ನು ಆಳುತ್ತವೆ ತೋಳಗಳು.
ಮೀನುಗಳ ಕೆರೆಯಲ್ಲಿ
ಕಾವಲುಗಾರರಾಗಿ ನಿಲ್ಲುತ್ತವೆ ಬಕಗಳು,
ಗದ್ದೆಯ ಮೇಲಿನ ಭಾಷಣಕಾರರಾಗುತ್ತಾರೆ ಹುಲಿಗಳು,
ಚಾಂದ್ರಾಯಣವ್ರತ ಮಾಡುತ್ತಾರೆ ಸಿಂಹಗಳು.
ಕಣ್ಣೀರು ಸುರಿಸುತ್ತಾ ಕರ್ಮಸಿದ್ಧಾಂತದ ಮುಂದೆ
ತಲೆಯೊಗ್ಗುತ್ತವೆ ನರಿ ಜಾತಿ.
ಅಸತ್ಯ ಪಾದಗಳ ಕೆಳಗೆ ನುಚಿಯಲ್ಪಡುತ್ತದೆ ಸತ್ಯ,
ಅಧರ್ಮವೇ ರಾಜ್ಯಭಾರ ನಡೆಸುತ್ತದೆ,
ಅನ್ಯಾಯವೇ ತೀರ್ಪು ನೀಡುತ್ತದೆ.
ಸ್ವಾರ್ಥವು ಮಂಜಿನಂತೆ ಆವರಿಸುತ್ತದೆ-
ಇದೆಲ್ಲವನ್ನು ನೋಡುತ್ತಾ…
ಬೆಟ್ಟದ ಮೇಲೆ ಇರುವ ದೇವರು ಕಣ್ಣುಮುಚ್ಚಿಬಿಡುತ್ತಾನೆ.
ತೆಲುಗು ಮೂಲ : ಸಿರಿಕಿ ಸ್ವಾಮಿನಾಯುಡು
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್
Nice
ಅನುವಾದದ ಕವನ…ದೃಷ್ಟಾಂತ ಗಳ ಮೂಲಕ ಹೇಳಿರುವ ರೀತಿ ಚೆನ್ನಾಗಿದೆ… ಸಾರ್
ಸೊಗಸಾದ ಭಾವಾನುವಾದ!