ಪುಸ್ತಕ-ನೋಟ

‘ಆಕಾಶವಾಣಿಯ ಆ ದಿನಗಳು’ : ಲೇಖಕಿ : ಡಾ. ವಿಜಯಾ ಹರನ್

Share Button

(ಡಾ. ವಿಜಯಾ ಹರನ್, ನಿವೃತ್ತ ಮೈಸೂರು ವಿಭಾಗದ ನಿರ್ದೇಶಕಿ ಯವರ ಅನುಭವ ಕಥನ)

ಶ್ರೀಮತಿ ಡಾ.ವಿಜಯಾಹರನ್ ರವರು ಆಕಾಶವಾಣಿಯಂತಹ ಮುಖ್ಯ ಪ್ರಸಾರ ಮಾಧ್ಯಮದಲ್ಲಿ ಮೂವತ್ತೆಂಟು ವರ್ಷಗಳ ಸುದೀರ್ಘಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅಲ್ಲಿದ್ದಾಗ ಸಾಹಿತ್ಯದ ಎಲ್ಲ ಪ್ರಕಾರಗಳ ನಿಕಟ ಪರಿಚಯ ಹೊಂದಿರುವ ಇವರು ಕನ್ನಡ ಸಾಹಿತ್ಯದ ಚಟುವಟಿಕೆಯಲ್ಲಿ ತೊಡಗಿಕೊಂಡವರಿಗೆ ಒಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ.

ಅವರು ರಚಿಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಕೃತಿ “ಆಕಾಶವಾಣಿಯ ಆ ದಿನಗಳು” ಅವರೇ ಹೇಳಿರುವಂತೆ ಇದೊಂದು ವೃತ್ತಿ ಜೀವನದ ಅನುಭವಕಥನ. ಕೃತಿಯನ್ನು ಹದಿಮೂರು ಅಧ್ಯಾಯಗಳಲ್ಲಿ ರಚಿಸಲಾಗಿದೆ. ಅವರು ತಮ್ಮ ಹೆತ್ತವರು, ಒಡಹುಟ್ಟಿದವರು, ವಿದ್ಯಾಭ್ಯಾಸ ಮುಗಿಸಿದ ನಂತರ ತಮ್ಮ ಸ್ವಸಾಮರ್ಥ್ಯದಿಂದ ಪಡೆದುಕೊಂಡ ಅಕಾಶವಾಣಿಯ ಉದ್ಯೋಗ, ಅಲ್ಲಿನ ಕರ್ತವ್ಯಗಳನ್ನು ತಮಗೆ ತಿಳಿದ ರೀತಿಯಲ್ಲಿ ಯಾವುದೇ ಚ್ಯುತಿ ಬಾರದಂತೆ ನಿಭಾಯಿಸಿದ ರೀತಿಯನ್ನು ಮನೋಜ್ಞವಾಗಿ ಓದುಗರಿಗೆ ಉಣಬಡಿಸಿದ್ದಾರೆ.

ಅವರು ಈ ನೌಕರಿಗೆ ಸೇರಿಕೊಂಡದ್ದು ಎಪ್ಪತ್ತರ ದಶಕದಲ್ಲಿ. ಆಗ ಅಲ್ಲಿದ್ದ ಸೌಲಭ್ಯಗಳು, ಕೆಲಸದ ವೇಳೆಯಲ್ಲಿ ಎದುರಿಸಿದ ಮತ್ತು ಎದುರಿಸಲೇಬೇಕಾದ ಅನಿವಾರ್ಯತೆಗಳನ್ನು ಹಲವಾರು ನಿದರ್ಶನಗಳೊಂದಿಗೆ ವಿವರಿಸಿದ್ದಾರೆ. ಅದರಲ್ಲೂ ಒಬ್ಬ ಹೆಣ್ಣುಮಗಳು ಪುರುಷರಿಗೆ ಸರಿಸಮಾನವಾಗಿ ನಿಂತು ಕೆಲಸ ಮಾಡುವುದು ಅದು ಸಾಹಸವೇ ಸರಿ. ಅದು ಹೇಗೆ ಎಂಬದನ್ನು ಈ ಅನುಭವ ಕಥನದಲ್ಲಿ ಅನಾವರಣಗೊಳಿಸಿದ್ದಾರೆ.

ಇವರು ತಮ್ಮ ವೃತ್ತಿಬದುಕಿನಲ್ಲಿ ಹಾಸನ, ಗುಲ್ಬರ್ಗಾ, ಮಂಗಳೂರು, ಮೈಸೂರು ಆಕಾಶವಾಣಿ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇವರು ಏಕಾಂಗಿಯಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಅದಕ್ಕೆ ತಮ್ಮ ಸಹೋದ್ಯೋಗಿಗಳ ಮನ ಒಲಿಸಿ ಅವರ ನೆರವಿನಿಂದ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಇವರ ಪಾತ್ರ ಹಿರಿದಾಗಿದೆ. ಅದಕ್ಕಾಗಿ ಇವರು ಪಟ್ಟ ಶ್ರಮ ಎಷ್ಟೆಂಬುದರ ಅರಿವಾಗುತ್ತದೆ. ಅಕಾಶವಾಣಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಕಾರಣೀಭೂತರಾಗಿದ್ದಾರೆ. ಅದರಲ್ಲೂ ಮೈಸೂರು ಆಕಾಶವಾಣಿಯಲ್ಲಿನ ‘ಹಟ್ಟಿಹರಟೆ’, ‘ಗಾದೆಗದ್ದುಗೆ’ ಕಾರ್ಯಕ್ರಮಗಳು ಹಳ್ಳಿಗರ ಮನ ಸೂರೆಗೊಂಡ ಅನುಭವವನ್ನು ಓದಿದರೆ ಬಹಳ ಅಪ್ಯಾಯಮಾನವೆನ್ನಿಸುತ್ತದೆ.

“ಮನೆಗೆದ್ದು ಮಾರುಗೆಲ್ಲು” ಎಂಬ ನುಡಿಯಂತೆ ಇವರು ತಮ್ಮ ವೃತ್ತಿಯ ಜೊತೆಗೆ ಕುಟುಂಬವನ್ನೂ ನಿರ್ಲಕ್ಷಿಸದಂತೆ ಅತ್ತೆ, ಪತಿ, ಮಗಳು ಎಲ್ಲರ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇವರ ಪತಿ ತಮ್ಮ ವೃತ್ತಿಯ ಕಾರಣದಿಂದ ಪರವೂರಿನಲ್ಲಿ ಇದ್ದಾಗಲೂ ಇವರು ಒಂಟಿಯಾಗಿ ಈ ಕೆಲಸಗಳನ್ನು ಮಾಡಿದ್ದಾರೆ. ಜನಗಳು ವಿಷಯ ತಿಳಿಯದೆ ಆಕ್ಷೇಪಣೆಗಳ ನುಡಿಗಳನ್ನಾಡಿದರೂ ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ಅಚ್ಚಕಟ್ಟಾಗಿ ನಿರ್ವಹಿಸಿದ್ದಾರೆ.

ಇವರಿಗೆ ತಮ್ಮ ವೃತ್ತಿಯ ಬಗ್ಗೆ ಅಪಾರ ಗೌರವ ಮತ್ತು ಶ್ರದ್ಧೆಯಿದೆ. ತಾವು ಕೆಲಸ ಮಾಡುವ ಕಡೆಯಲ್ಲಿ ಕನಿಷ್ಟ ವರ್ಗದ ನೌಕರನಿಂದ ಹಿಡಿದು ಗರಿಷ್ಠ ಮೇಲಧಿಕಾರಿಯ ವರೆಗೂ ಇವರ ಒಡನಾಟ ಸ್ತುತ್ಯಾರ್ಹವಾಗಿದೆ ಎಂದು ಹೇಳಲು ಅಡ್ಡಿಯಿಲ್ಲ. ಸಹೋದ್ಯೋಗಿಗಳ ನೆರವು ಒಂದೆಡೆಯಾದರೆ ಮತ್ತೊಂದೆಡೆ ಹಲವಾರು ಹಳವಂಡಗಳನ್ನು ಬಹಳ ಎಚ್ಚರಿಕೆಯಿಂದ ನಿವಾರಿಸಿಕೊಂಡದ್ದು, ಸಂದಿಗ್ಧ ಪರಿಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದೆ, ನಿಷ್ಠೆ, ಸತ್ಯಸಂಧತೆ, ಶ್ರವiಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆಂಬ ಅಚಲವಾದ ನಂಬಿಕೆಯೊಂದಿಗೇ ಮುನ್ನಡೆದಿರುವ ರೀತಿ ಅಚ್ಚರಿಯನ್ನುಂಟು ಮಾಡುವಂತಿದೆ.

“ಹೆಣ್ಣಿಗೆ ಹೆಣ್ಣೇ ಶತ್ರು” ಎಂಬ ಉಕ್ತಿಯಂತೆ ಒಂದು ಪರಿಸ್ಥಿತಿ ಎದುರಾಗುತ್ತದೆ. ಇವರು ಧೃತಿಗೆಡದೆ ಮುನ್ನಡೆಯುತ್ತಾರೆ. ಕೊನೆಗೆ ಸಕಾರಾತ್ಮಕ ಫಲಿತಾಂಶ ದೊರೆತಾಗ ಪ್ರಜ್ಞಾಪೂರ್ವಕವಾಗಿ ಅಂತಹ ಪರಿಸ್ಥಿತಿ ಉಂಟುಮಾಡಿದ ವ್ಯಕ್ತಿಯನ್ನು ಇವರು ಭೇಟಿಯಾದಾಗ ಹೇಳುವ ಮಾತುಗಳು ಮಾರ್ಮಿಕವಾಗಿವೆ. ಸಾಮಾನ್ಯವಾದ ಉಭಯ ಕುಶಲೋಪರಿಗಳಾದ ಮೇಲೆ “ಮೇಡಂ, ನಿಮ್ಮನ್ನು ನಾನು ಮರೆಯೋದು ಉಂಟೇ, ವಿನಾಕಾರಣ ವೈಯಕ್ತಿಕ ಜಿದ್ದಿನಿಂದ ನೀವು ನಿಲ್ಲಿಸಿದ್ದ ನನ್ನ ಒಂದು ವರ್ಷದ ವೇತನ ನಂತರ ನನ್ನ ಕೈಗೆ ಕೊನೆಗೂ ದೊರೆಯಿತು. ಅದರಿಂದ ನಾನೊಂದು ಮನೆಯನ್ನು ಕೊಂಡುಕೊಂಡೆ. ನಿಮ್ಮ ಉಪಕಾರ ಇದಕ್ಕೆ ಸಹಾಯವಾಯಿತು. ಅಲ್ಲಿಯೇ ಈಗ ನಮ್ಮ ಕುಟುಂಬದವರು ವಾಸವಿದ್ದೇವೆ.” ಎನ್ನುತ್ತಾರೆ. ಇದರಿಂದ ಅವರ ದಾಷ್ಟಿಕತೆಯ ಪರಿಚಯವಾಗುತ್ತದೆ.

ತಮಗೆ ದೊರೆತ ಒಂದು ಸಣ್ಣ ಅವಕಾಶವನ್ನೂ ವ್ಯರ್ಥಮಾಡದೆ ಸದುಪಯೋಗ ಮಾಡಿಕೊಂಡಿರುವ ಪರಿಯಂತೂ ವರ್ಣಿಸಲಸದಳ. ಇವರು ನೌಕರಿಗೆ ಸೇರಿಕೊಂಡಾಗ ಸ್ನಾತಕೋತ್ತರ ಪದವೀಧರರಾಗಿದ್ದರು. ಕೌಟುಂಬಿಕ ಜವಾಬ್ದಾರಿ, ಉದ್ಯೋಗದಲ್ಲಿನ ಹೊಣೆಯ ನಡುವೆಯೇ ಸಾಹಿತ್ಯದಲ್ಲಿ ಡಾಕ್ಟರೇಟ್ ಗಳಿಸಿಕೊಂಡದ್ದು ಇವರ ಧೃಢಸಂಕಲ್ಪ ಮತ್ತು ಅಧ್ಯಯನಶೀಲತೆಗೆ ಸಾಕ್ಷಿಯಾಗಿದೆ. ಇವರ ಉದ್ಯೋಗದ ಸಂದರ್ಭದಲ್ಲಿ ಪರಿಚಯವಾದ ಯಾವುದೇ ವ್ಯಕ್ತಿಗಳನ್ನು ಇವರು ಮರೆತಿಲ್ಲ. ಅಂತಹವರ ಬಗ್ಗೆ ವ್ಯಕ್ತಿತ್ವದ ಪರಿಚಯಾತ್ಮಕ ನೋಟವನ್ನು ಬರವಣಿಗೆಯಲ್ಲಿ ಕಾಣಬಹುದು. ಹೆಸರಾಂತ ಸಾಹಿತಿಗಳ, ಸಾಧಕರ ಅನುಭವದ ನುಡಿಗಳನ್ನು ಸಾಂದರ್ಭಿಕವಾಗಿ ಬಳಸಿಕೊಂಡಿರುವ ರೀತಿ ಅನನ್ಯವಾಗಿದೆ.

ಹೀಗೆ ಹೇಳುತ್ತಾ ಹೋದರೆ ತುಂಬ ದೀರ್ಘವಾಗುತ್ತದೆ. ಒಟ್ಟಾರೆಯಾಗಿ ಕೃತಿ ‘ಆಕಾಶವಾಣಿಯ ಆ ದಿನಗಳು’ ಇವರ ಸಮೃದ್ಧ ಅನುಭವದ ಹೂರಣಕ್ಕೆ ಕಟ್ಟಿದ ತೋರಣವಾಗಿದೆ. ಮಹಿಳೆಯೆಂದು ಕೇವಲವಾಗಿ ಕಾಣಬೇಡಿ, ಆಕೆ ಮನಸ್ಸು ಮಾಡಿದರೆ ಮಹಲನ್ನೂ ನಿರ್ಮಿಸಬಲ್ಲಳು, ಮಹತ್ವವಾದ ಏನನ್ನಾದರೂ ಸಾಧಿಸಬಲ್ಲಳು ಎಂಬುದಕ್ಕೆ ಸಾಕ್ಷೀಭೂತರಾಗಿದ್ದಾರೆ ಡಾ.ವಿಜಯಾಹರನ್. ವೃತ್ತಿನಿರತ ಕಿರಿಯರಿಗೆ ಮಾಗದರ್ಶನ, ಹಿರಿಯರಿಗೆ ಅನುಭವದ ನೆನಪಿನಂಗಳ. ಒಮ್ಮೆ ಓದಲೇಬೇಕಾದ ಕೃತಿ ಇದೆನ್ನಬಹುದು. ಇದರಲ್ಲಿ ಎರಡು ಮಾತಿಲ್ಲ.

-ಬಿ.ಆರ್.ನಾಗರತ್ನ,ಮೈಸೂರು.

6 Comments on “‘ಆಕಾಶವಾಣಿಯ ಆ ದಿನಗಳು’ : ಲೇಖಕಿ : ಡಾ. ವಿಜಯಾ ಹರನ್

  1. ಪ್ರಕಟಣೆಗಾಗಿ ಧನ್ಯವಾದಗಳು ಗೆಳತಿ ಹೇಮಾ

  2. ‘ಆಕಾಶವಾಣಿಯ ಆ ದಿನಗಳು`, ಅನುಭವ ಕಥನದ ವಿಮರ್ಶಾತ್ಮಕ ಲೇಖನ ಚೆನ್ನಾಗಿ ಮೂಡಿಬಂದಿದೆ ನಾಗರತ್ನ ಮೇಡಂ. ನಮ್ಮ, ದೂರವಾಣಿಯ ಆ ದಿನಗಳನ್ನೂ ಬರೆದರೆ ಹೇಗೆ? ಎಂಬ ಯೋಚನೆ ಸುರುವಾಗಿದೆ ನೋಡಿ!

    1. ಧನ್ಯವಾದಗಳು ಶಂಕರಿ ಮೇಡಂ.. ನಿಮ್ಮ ದೂರವಾಣಿ ಆ ದಿನಗಳ ಬಗ್ಗೆ ನಿಮ್ಮ ಅನುಭವ ಗಳನ್ನು ಬರೆಯಿರಿ..ನಮಗೂ ಹಲವಾರು ವಿಷಯಗಳ ಅರಿವಾಗುತ್ತದೆ..

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *