ಲಹರಿ

ಎತ್ತೆಣಿಂದೆತ್ತ ಸಂಬಂಧವಯ್ಯಾ !- ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮದ್ಯಪಾನದ ಸುತ್ತ ; ಬಂಧನಗಳ ಹುತ್ತ

ಒಳ್ಳೆಯತನ ಮತ್ತು ಕೆಟ್ಟತನ ಎಂಬ ಮನುಷ್ಯ ಸ್ವಭಾವಗಳಿಗೂ ಕುಡಿತಕ್ಕೂ ಯಾವ ಸಂಬಂಧವೂ ಖಂಡಿತ ಇಲ್ಲ. ಆದರೆ ‘ಕುಡಿತ ಕೆಟ್ಟದ್ದು ಹಾಗಾಗಿ ಕುಡಿಯುವವರು ಕೆಟ್ಟವರು’ ಎಂಬ ಅಲಿಖಿತ ಶಾಸನ ನಮ್ಮ ಸಮಾಜದಲ್ಲಿ ಚಾಲ್ತಿಯಲ್ಲಿದೆ. ಇದರ ಪ್ರಕಾರ ಜಗತ್ತಿನ ಶೇಕಡಾ ತೊಂಬತ್ತೊಂಬತ್ತು ಮಂದಿ ಕೆಟ್ಟವರೇ ಆಗಿಬಿಡುತ್ತಾರೆ. ಕುಡಿಯದವರು ತೀರಾ ಅಂದರೆ ತೀರಾ ಕಡಮೆ. ಮೋಜು ಮಸ್ತಿಗಾಗಿ ಕುಡಿಯದಿದ್ದರೂ ಕೆಲವೊಂದು ಅನಾರೋಗ್ಯದ ನಿಮಿತ್ತ (ಇದು ನೆಪವಷ್ಟೇ!) ಆಲ್ಕೋಹಾಲ್ ಅನ್ನು ಗುಟ್ಟಾಗಿ ಸೇವಿಸುವವರೂ ಇದ್ದಾರೆ. ದಮ್ಮು, ಗೂರಲು, ಅಸ್ತಮಾ ಎಂದೆಲ್ಲಾ ಕರೆಸಿಕೊಳ್ಳುವ ಶ್ವಾಸಕೋಶದ ಖಾಯಿಲೆಗೆ ಆಲ್ಕೋಹಾಲ್ ಮದ್ದು ಎಂದು ಯಾರು ನಿಯಮ ಮಾಡಿದರೋ? ಬಹುಶಃ ಇಂಥ ಖಾಯಿಲೆಪೀಡಿತರೇ ತಮ್ಮ ಚಟವನ್ನು ಅಧಿಕೃತಗೊಳಿಸುವ ಸಲುವಾಗಿ ಪ್ರಚಾರಿಸಿದ್ದಿರಬೇಕು. ದೇಹವನ್ನು ಬೆಚ್ಚಗಿಡಬೇಕು; ಇಲ್ಲದಿದ್ದರೆ ಅಸ್ತಮಾ ಭೀಕರ ಸ್ವರೂಪ ಪಡೆದು ಪಾರ್ಶ್ವವಾಯುವಿಗೆ ತುತ್ತಾಗಬಹುದು ಎಂಬ ಎಚ್ಚರಿಕೆಯನ್ನೂ ಇಂಥವರು ಕೊಡುವುದನ್ನು ಮರೆಯುವುದಿಲ್ಲ! ಅದಕಾಗಿ ಈಗ ಮನೆಯನ್ನು ಕಟ್ಟಿಸಿಕೊಳ್ಳುವಾಗಲೇ ಲಿಕ್ಕರಿಗಾಗಿಯೇ ಒಂದು ರೂಮನ್ನು (ಕುಡಿತದ ಕೊಠಡಿ!) ಕಟ್ಟಿಸಿಕೊಂಡು, ಪ್ರತ್ಯೇಕವಾಗಿ ಒಂದು ರೆಫ್ರಿಜಿರೇಟರನ್ನು ಪ್ರತಿಷ್ಠಾಪಿಸುವ ನೂತನ ವೈಭವವೊಂದು ಮೈದಾಳಿದೆ. ಮನೆಯವರ ಕೆಲಸ ಕಾರ್ಯಗಳಿಗೆ ಅಡಚಣೆಯಾಗದ ರೀತ್ಯ ತಮ್ಮ ಸಂಜೆಯ ಪಾನಗೋಷ್ಠಿಯನ್ನು ಸುಲಲಿತವಾಗಿಯೂ ಸುಸೂತ್ರವಾಗಿಯೂ ನಡೆಸಬಹುದಾಗಿದೆ! ನಾನ್‌ವೆಜ್ಜಿಗೂ ಡ್ರಿಂಕ್ಸಿಗೂ ಅವಿನಾಭಾವ. ಅದರಿಂದ ಇದೂ ಇದರಿಂದ ಅದೂ ಪರಸ್ಪರ ಚೋದಿತ. ಬೀಗರ ಔತಣವೇ ಮೊದಲಾದ ದೊಡ್ಡ ದೊಡ್ಡ ಅಡುಗೆ ಕಾರ್ಯಕ್ರಮಗಳಾಗುವಾಗ ಮಾಂಸ ಬೇಯುವಾಗಲೇ ಅರ್ಧ ಬಾಟಲು ಬ್ರಾಂದಿ ಸುರಿಯುತ್ತಾರೆಂಬ ಆಘಾತಕಾರಿ ಸಂಗತಿಯೊಂದಿದೆ. ಇದು ನಿಜವೋ ಅಲ್ಲವೋ ಭಗವಂತನಿಗೆ ಗೊತ್ತು. ಒಂದು ಬಗೆಯ ನಶೆಯೇರಲು ಇದನ್ನು ಬಳಸುತ್ತಾರೆ ಎಂದೊಬ್ಬರು ಹೇಳಿದ್ದರು.

ನನಗೆ ಪದವಿ ತರಗತಿಯಲ್ಲಿ ಪಾಠ ಮಾಡಿದ್ದ ಓರ್ವ ಮಹಿಳಾ ಗುರುಗಳು ಇದ್ದಕ್ಕಿದ್ದಂತೆ ಕಳೆದ ವಾರ ‘ನನ್ನ ಫೋನ್ ನಂಬರು ಲಭಿಸಿತು’ ಎಂಬ ಕಾರಣಕ್ಕಾಗಿ ನನ್ನೊಂದಿಗೆ ಮಾತಾಡುತ್ತಾ ‘ನಿನ್ನ ಮೈಗ್ರೇನು ಈಗ ಹೇಗಿದೆಯೋ? ನೀನು ವಿಪರೀತ ಸಾಚಾ ಎಂದುಕೊಂಡು ನೋವನ್ನು ಅನುಭವಿಸಿ ಸಾಯಬೇಡ; ಆಲ್ಕೋಹಾಲ್ ಶುರು ಮಾಡು. ಮೊದಲು ಬಿಯರ್ ಮೂಲಕ ಆರಂಭಿಸು. ಇವತ್ತು ಅದು ಕಾಮನ್ನು. ಹೆಣ್ಣುಮಕ್ಕಳೇ ಜ್ಯೂಸ್ ಥರ ಕುಡೀತಾರೆ. ನಿನಗೇನಾಗಿದೆ ಧಾಡಿ!’ ಎಂದು ಕ್ಲಾಸು ತೆಗೆದುಕೊಂಡರು. ನಾನು ಹೌಹಾರಿದೆ. ಅವರ ಬಿಡುಬೀಸುತನ ಮತ್ತು ದಾರ್ಷ್ಟ್ಯ ಸ್ವಭಾವಗಳು ಚೆನ್ನಾಗಿ ಗೊತ್ತಿದ್ದ ನಾನು ಬೇಕೆಂತಲೇ ಅವರಿಂದ ದೂರವಿದ್ದೆ. ಅವುಗಳ ಅಭ್ಯಾಸದ ಹೊಸ ತಲೆನೋವಿಗಿಂತ ಈಗಿರುವ ವಂಶಪಾರಂಪರ್ಯ ತಲೆನೋವೇ ಇರಲಿ ಮೇಡಂಎಂದು ನಯವಾಗಿ ತಿರಸ್ಕರಿಸಿ ಫೋನಿಟ್ಟೆ. ‘ಇಂಥ ಗುರುಗಳೂ ಇರುತ್ತಾರೆಯೇ?’ ಎಂದು ನನ್ನ ಮಡದಿ ಅಚ್ಚರಿಪಟ್ಟಳು. ಹಾಗೆ ನೋಡಿದರೆ ಒಂದೇ ಒಂದು ಸಲವೂ ಅದರ ರುಚಿ ನೋಡಬೇಕು! ಅದರ ನಶೆಯಲ್ಲಿ ತೇಲಾಡಬೇಕು ಎಂದು ಯಾವತ್ತೂ ಮನಸಿಗೆ ಬಂದೇ ಇಲ್ಲ. ಕುಡಿಯುವವರ ಜೊತೆ ಕುಳಿತುಕೊಳ್ಳುವ ಕೆಲವೊಂದು ಅನಿವಾರ್ಯ ಸಂದರ್ಭ ಎದುರಾಗಿದ್ದಾಗಲೂ ನಾನೇನೂ ಮುಜುಗರಪಟ್ಟುಕೊಳ್ಳದೇ ಅವರೇನು ಕುಡಿಯುತ್ತಿದ್ದಾರೆಂದೂ ಆಸಕ್ತಿ ವಹಿಸದೇ, ಅದೂ ಇದೂ ಮಾತಾಡುತ್ತಾ ಹೆಚ್ಚೆಂದರೆ ಯಾವುದೋ ಒಂದು ಕೂಲ್ ಡ್ರಿಂಕ್ಸ್ ಅನ್ನು ನಿಧಾನವಾಗಿ ಸೇವಿಸಿದ್ದಿದೆ. ‘ಆಲ್ಕೋಹಾಲ್ ಕೆಟ್ಟದ್ದು, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ’ ಎಂಬುದಕ್ಕಿಂತಲೂ ‘ಕುಡಿತದ ಚಟ ಹತ್ತಿಬಿಟ್ಟರೆ ಕಷ್ಟ’ ಎಂಬ ಆತಂಕಕ್ಕಿಂತಲೂ ಅದರ ಆವಶ್ಯಕತೆ ಖಂಡಿತ ಮನುಷ್ಯನಿಗೆ ಇಲ್ಲ ಎಂಬ ಅಭಿಮತವಷ್ಟೇ. ಬಹುಶಃ ನಮ್ಮನ್ನು ಸಾಕಿ ಬೆಳೆಸಿದ ವಾತಾವರಣ, ಕೊಟ್ಟಂಥ ಸಂಸ್ಕಾರ, ಗುರುಹಿರಿಯರ ಸಂಸರ್ಗ, ಪಡೆದ ವಿದ್ಯೆ ಇವೆಲ್ಲವೂ ಬದುಕಿನ ಮೇಲೆ ಬೀರಿದ ಗಾಢ ಪರಿಣಾಮ. ಅಂಥವರ ಸಹವಾಸ ಒದಗದೇ ಇದ್ದುದು ಅಥವಾ ಹುಡುಕಿಕೊಂಡು ಹೋಗದೇ ಇದ್ದುದು ಇವೆಲ್ಲ ಪ್ರಭಾವ ಬೀರಿದ ಇತರ ಅಂಶಗಳು. ತಿನ್ನುವ ಒಂದು ತುತ್ತು ಅನ್ನಕಾಗಿ ಕಷ್ಟದ ಜೀವನ ನಡೆಸಬೇಕಾಗಿ ಬಂದಂಥ ಕುಟುಂಬ, ಮಾನ ಮರ್ಯಾದೆಗಾಗಿ ಅಂಜಿ ಬಾಳುವ ಕೆಳಮಧ್ಯಮ ವರ್ಗ, ಧರ್ಮ-ಸಂಸ್ಕೃತಿ-ಪರಂಪರೆಗಳ ಚೌಕಟ್ಟಿನಲ್ಲಿ ಬೆಳೆದ ಧಾರ್ಮಿಕ ಆವರಣ ಸಹ ಇಂಥಲ್ಲಿ ಮ್ಯಾಟರಾಗುತ್ತದೆ. ಬಹುಶಃ ಚಿಕ್ಕಂದಿನಿಂದಲೂ ‘ಕುಡಿತ ಕೆಟ್ಟದ್ದು; ಕುಡಿಯುವವರು ಕೆಟ್ಟವರು’ ಎಂದೇ ಬಿಂಬಿತವಾದ ಎಚ್ಚರವೂ ಕೆಲಸ ಮಾಡುತ್ತದೆ. ಹಾಗಾದರೆ ಕುಡಿಯುವ ಅಭ್ಯಾಸ ಇರುವವರಿಗೆ ಸಂಸ್ಕೃತಿ ಸಂಸ್ಕಾರಗಳು ಇಲ್ಲವೇ? ಎಂದು ನೀವು ಮರು ಪ್ರಶ್ನಿಸಬಹುದು! ಧೂಮಪಾನ ಮತ್ತು ಮದ್ಯಪಾನಗಳು ನಮ್ಮ ಸನಾತನ ಸಂಸ್ಕೃತಿಗೆ ಮಾಡುವ ಅಪಮಾನ ಎಂದಷ್ಟೇ ಹೇಳಬಹುದು. ಇಂಥಲ್ಲಿ ಧಾರ್ಮಿಕ ಎಂಬುದಕಿಂತ ಮಾನಸಿಕ ಆರೋಗ್ಯ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸದಾಚಾರ, ಸನ್ನಡತೆ, ಸೌಜನ್ಯಗಳಿಂದ ಬದುಕುವವರಿಗೆ ಆಲ್ಕೋಹಾಲ್ ನಿಜಕ್ಕೂ ಮರ್ಯಾದೆಗೇಡು. ಕುಡಿದವರು ಮತ್ತು ಕುಡಿದು ತೂರಾಡುವವರು ಅದರ ಮಾರನೆಯ ದಿನ ಅನುಭವಿಸುವ ‘ಹ್ಯಾಂಗೋವರು’ (ನಿಶ್ಚೇಷ್ಟಿತ ಸ್ಥಿತಿ, ಮದ್ಯಬೇಸರ, ಅಮಲಿನಿಂದಾದ ಅಸ್ವಸ್ಥತೆ) ತರುವ ಅಸಹಾಯಕತೆ, ನಿಷ್ಕ್ರಿಯತೆಗಳನ್ನು ಬಲ್ಲವರು ಹೇಳುವಾಗ ಅಯ್ಯೋ ಎನಿಸುತ್ತದೆ.

‘ನೀವು ತೆಗೆದುಕೊಳ್ಳುವ ಇಂಗ್ಲಿಷ್ ಮೆಡಿಸನ್ನಿನಲ್ಲಿ ಆಲ್ಕೋಹಾಲ್ ಇರುತ್ತದೆ. ಟಾನಿಕ್ಕುಗಳಲ್ಲಿ ಅಷ್ಟೇಕೆ? ಕೆಮ್ಮಿನ ಸಿರಪ್ಪಿನಲ್ಲಿ ಸಹ ಆಲ್ಕೋಹಾಲ್ ಇರುತ್ತದೆ’ ಎಂದಾಗ ‘ಇರಲಿ ಬಿಡಿ, ಅದು ಅವುಷಧವಾಗಿ ಕೊಡುತ್ತಾರೆ. ವೈದ್ಯರು ಕೊಟ್ಟಿದ್ದು; ಅವರು ದೇವರಿಗೆ ಸಮಾನ’ ಎಂದು ನಮ್ಮ ತಾಯಿಯವರು ನಿರಾಳವಾಗಿ ಉತ್ತರಿಸಿ ಸುಮ್ಮನಾಗುತ್ತಿದ್ದರು. ‘ಸಿಗರೇಟು, ಹೆಂಡ, ಜೂಜು, ಅನ್ಯಸ್ತ್ರೀ ಸಹವಾಸ ಇವೆಲ್ಲಾ ಚರಿತ್ರಹೀನರ ಚರ್ಯೆಗಳು. ಕಾಸೂ ಹಾಳು; ತಲೆಯೂ ಬೋಳು ಎಂಬಂತೆ, ಹಣವನ್ನೂ ಆರೋಗ್ಯವನ್ನೂ ಕಳೆದುಕೊಳ್ಳುವುದಲ್ಲದೇ, ಚಾರಿತ್ರ್ಯವನ್ನು ಕಳೆದುಕೊಂಡು ಬದುಕಿದ್ದರೂ ಸತ್ತ ಹಾಗೆ’ ಎಂದೇ ನಾವು ಪುಟ್ಟವರಿದ್ದಾಗ ನಮ್ಮ ಮನೆಯ ಹಿರಿಯರು ಹೇಳುತ್ತಿದ್ದ ಮತ್ತು ನಾವು ಕಿವಿಗೊಟ್ಟು ಕೇಳುತ್ತಿದ್ದ ಮಾತುಗಳು. ಮಾನ ಹೋದರೇನು? ಪ್ರಾಣ ಹೋದರೇನು?’ ಎಂದೇ ನಮ್ಮ ಕುಟುಂಬದಲ್ಲಿ ಆಗಾಗ ಕೇಳಿಸಿಕೊಳ್ಳುತ್ತಿದ್ದ ಬಾಳಿನ ಅಜೆಂಡಾ. ಹಾಗಾಗಿ ‘ಇವರೇಕೆ ಹೀಗೆ ಕುಡಿದು ತೂರಾಡುತ್ತಾರೆ? ಏನೇನೋ ಮಾತಾಡುತ್ತಾರೆ? ಗಲಾಟೆ ಮಾಡುತ್ತಾರೆ! ಇದರ ಅಗತ್ಯವಿದೆಯೇ?’ ಎಂಬಂಥ ತಿರಸ್ಕಾರ ಬೆರೆತ ಅಸಹ್ಯ ನನ್ನಲ್ಲಿ ಮೂಡಿ, ದೂರವಾಗುತ್ತಿದ್ದೆ. ಗಂಗೋತ್ರಿಯಲ್ಲಿ ವ್ಯಾಸಂಗ ಮಾಡುವಾಗ ದೊಡ್ಡವರೆನಿಸಿಕೊಂಡ ಸಾಹಿತಿವರೇಣ್ಯರು ಮತ್ತು ಹೊಸ ಪೀಳಿಗೆಯ ಅಧ್ಯಾಪಕರು ಪಾರ್ಟಿ ಹೆಸರಿನಲ್ಲಿ ಆಗಾಗ ಒಂದೆಡೆ ಸೇರಿ ಗುಂಡು ಹಾಕುವ ಅಭ್ಯಾಸ ಕೇಳಿ, ನೋಡಿ ನನಗೆ ಮುಜುಗರವಾಗುತ್ತಿತ್ತು. ನನ್ನ ಮತ್ತು ಬೇರೆ ವಿಭಾಗದ ಕೆಲವು ವಿದ್ಯಾರ್ಥಿಗಳು ಹಾಗೂ ಹಾಸ್ಟೆಲಿನಲ್ಲಿ ಇದ್ದಾಗಿನ ಕೆಲವು ಸಹನಿವಾಸಿಗಳು, ಸಾಹಿತಿ ಮತ್ತು ಸಾಹಿತ್ಯದ ನೆಪದಲ್ಲಿ ಹೊರಗೆ ಹೋಗಿ ಬಿಯರ್ ಕುಡಿದು ಬರುವ ದೊಡ್ಡವರೊಂದಿಗೆ ಕುಳಿತು ಕುಡಿದು ಹರಟಿ ಹಾಯಾದ ಅವರ ಪಾಲಿನ ಸವಿಸಂಜೆಗಳನ್ನು ಅವರ ಬಾಯಾರೇ ಕೇಳುವಾಗ ನನಗೇನೂ ಅನಿಸುತ್ತಿರಲಿಲ್ಲ. ‘ಬಡವಾ, ನೀನು ಮಡಗಿದ ಹಾಗಿರು’ ಎಂದೇ ಇದ್ದುಬಿಟ್ಟೆ. ಇನ್ನು ಸಂಶೋಧನೆ ಕೈಗೊಂಡ ದಿನಮಾನಗಳಲ್ಲಿ ಕೂಡ ಗಂಗೋತ್ರಿಯಲ್ಲಿ ಇದ್ದಾಗ ‘ಅವನನ್ನು ಕರೆಯಬೇಡಿ, ಪಾಪದ ಪ್ರಾಣಿ’ ಎಂದೇ ಎಲ್ಲರೂ ನನ್ನನ್ನು ಡ್ರಾಪ್ ಮಾಡಿ ಪಾರ್ಟಿ ಮಾಡುತ್ತಿದ್ದರು. ಒಮ್ಮೆ ಮಾತ್ರ ಎಲ್ಲರ ಬಲವಂತಕ್ಕಾಗಿ ಒಂದು ದಿನದ ಪ್ರವಾಸಕ್ಕೆ ಹೋದಾಗ ನನಗಿಂತ ಹಿರಿಯರಾದ ಕೆಲವರು ಕುಡಿದು ತೂರಾಡಿ, ವಾಂತಿ ಮಾಡಿಕೊಂಡಿದ್ದನ್ನು ಕಣ್ಣಾರೆ ನೋಡಿ ಕುಪಿತನಾಗಿದ್ದೆ. ಆ ಮೂಲಕ ಇಡೀ ವಾಹನದ ತುಂಬ ಹರಡಿದ ದುರ್ನಾತವಂತೂ ಸಹಿಸಲಸಾಧ್ಯವಾಗಿತ್ತು. ಎಣ್ಣೆ ಬಾಟಲುಗಳ ಶಬ್ದ, ಮದ್ಯವನ್ನು ಸುರಿಯುವಾಗ ಬರುತ್ತಿದ್ದ ಆಲ್ಕೋಹಾಲ್ ವಾಸನೆ ನನ್ನ ಪಾಲಿಗೆ ನರಕವೇ ಆಯಿತು. ಮೊದಲೇ ಮೈಗ್ರೇನ್ ರೋಗಿಯಾಗಿದ್ದ ನನಗೆ ಅಂಥ ಸ್ಮೆಲ್ಲುಗಳು ಪರಮಹಿಂಸೆಯಾಗಿ, ‘ಯಾಕಾದರೂ ಇವರ ಬಲವಂತಕ್ಕೆ ಬಂದೆನೋ?’ ಎಂದು ನನ್ನ ಬಗ್ಗೆಯೇ ನನಗೆ ಬೇಸರವಾಗಿತ್ತು. ಈ ಘಟನೆಯ ನಂತರ ನನ್ನ ಪಿಹೆಚ್‌ಡಿ ಮಾರ್ಗದರ್ಶಕ ಮಹಾಶಯನ ದೆಸೆಯಿಂದ ಕೆಲವೊಂದು ಇಂಥ ಇಕ್ಕಟ್ಟು ಬಿಕ್ಕಟ್ಟುಗಳನ್ನು ಎದುರಿಸಬೇಕಾಯಿತು. ಆಗಿಂದಾಗ್ಗ್ಯೆ ಮೈಸೂರಿಗೆ ಬರುತ್ತಿದ್ದ ಖ್ಯಾತನಾಮರಾದ ಸಾಹಿತಿಗಳು, ಉದ್ದಾಮ ಪಂಡಿತರು ಹೊಟೆಲೊಂದರಲ್ಲಿ ತಂಗಿದ್ದು, ಆ ರಾತ್ರಿ ಭರ್ಜರಿ ಪಾನಗೋಷ್ಠಿ ನಡೆಯುವಾಗ ಸಂಶೋಧನಾ ವಿದ್ಯಾರ್ಥಿಗಳಾದ ನಮ್ಮಂಥವರನ್ನು ಅವರಿಗೆ ಸಹಾಯಕರನ್ನಾಗಿ ಬಳಸುತ್ತಿದ್ದರು. ಆ ಕವಿಪುಂಗವರ ಸೇವೆ ಮಾಡುವುದು, ಅವರ ಗ್ಲಾಸಿಗೆ ಬೆರೆಸಿ ಕೊಡುವುದು, ಅವರು ತೂರಾಡುವಾಗ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ನಂಬರ್ ಒನ್ ಮಾಡಿಸುವುದು, ವಾಂತಿಯಾದರೆ ಶುಚಿಗೊಳಿಸುವುದು ಇವೇ ಮೊದಲಾದವು. ಆಗೆಲ್ಲಾ ಆ ಖ್ಯಾತನಾಮ ಸಾಹಿತಿಗಳ ಬಗ್ಗೆ ಇರಲಿ, ನನ್ನ ಬಗ್ಗೆಯೇ ನನಗೆ ಹೇಸಿಗೆ ಉಂಟಾಗುತ್ತಿತ್ತು. ಈ ಗುಲಾಮತನದಿಂದ ರೋಸಿ ಹೋಗಿ ಆನಂತರ ಮಾರ್ಗದರ್ಶಕರನ್ನು ಬದಲಿಸಿಕೊಂಡಿದ್ದು ಈಗ ಇತಿಹಾಸ. ಹಾಗಾಗಿ ನನಗೆ ಇಂಥ ಪಾನಗೋಷ್ಠಿಯ ಕಹಿ ಅನುಭವಗಳು ಬೇಕಾದಷ್ಟಿವೆ. ಕುಡಿಯದಿದ್ದರೂ ಕುಡುಕರ ಸಂಗ ಮತ್ತು ಸಂಗಡ ಆಗಿರುವ ಅನುಭವಗಳು ಇಂಥ ಜುಗುಪ್ಸಿತವಾದವೇ. ಉದ್ಯೋಗ ನಿಮಿತ್ತ ಕೆಲಸ ನಿರ್ವಹಿಸುವಾಗ ಕಾಲೇಜಿಗೆ ನ್ಯಾಕ್ ತಂಡದ ಭೇಟಿ ಸಮಯದಲ್ಲಿ ಆತಿಥ್ಯ ಸತ್ಕಾರದ ಒಂದು ಭಾಗವಾಗಿ, ಮೆಂಬರುಗಳಿಗೆ ಕುಡಿಸಲು (ಎಲ್ಲರೂ ಅಲ್ಲ) ವ್ಯವಸ್ಥೆ ಮಾಡಬೇಕಾಗಿತ್ತು. ಕೋವಿಡ್ ಸಂಬಂಧಿತ ಲಾಕ್ ಡೌನ್‌ಗಳು ಮುಗಿದ ಮೇಲೆ ಮಾಮೂಲೀ ಪರಿಸ್ಥಿತಿಯುಂಟಾಗುತ್ತಿದ್ದ ಸಮಯದಲ್ಲಿ ‘ಡ್ರಂಕ್ ಅಂಡ್ ಡ್ರೈವ್‌’ ಕೇಸುಗಳಿಗಾಗಿ ರಾತ್ರಿಯ ವೇಳೆ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದುರಿಂದ ನಾಲ್ಕೈದು ಬಾರಿ ನನ್ನ ಸಹೋದ್ಯೋಗಿಗಳು ನನ್ನನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಏಕೆಂದರೆ ತಡರಾತ್ರಿ ಕಾರು ಚಲಾಯಿಸಿಕೊಂಡು ಬರಲು ಮತ್ತು ಕುಡಿದು ಚಿತ್ ಆದವರನ್ನು ಅವರವರ ಮನೆಗೆ ತಲಪಿಸಲು! ನನ್ನನ್ನು ಮಾತಾಡಿಸುತ್ತಾ ಮಜ ತೆಗೆದುಕೊಳ್ಳುತ್ತಾ ತಮಗೆ ಬೇಕಾದ ಬ್ರಾಂಡುಗಳನ್ನು ತರಿಸಿಕೊಂಡು ತೊದಲುತ್ತಿದ್ದರು. ನಶೆ ಏರಿದ ಮೇಲೆ ಅವರ ಮಾತಿನ ಧಾಟಿಯೇ ಬದಲಾಗುತ್ತಿತ್ತು. ಇದ್ದಕ್ಕಿದ್ದಂತೆ ಅವರ ಮಾತುಕತೆಗಳು ನನ್ನ ಕಡೆಗೆ ತಿರುಗುತ್ತಿದ್ದವು. ಮೊದಲಲ್ಲಿ ಅವರಿಗೆ ‘ಜೀರೋ’ ಆಗಿ ಕಾಣುತ್ತಿದ್ದ ಸ್ವಲ್ಪ ಸಮಯದಲ್ಲೇ ಕುಡಿಯದ ನಾನು ಅವರ ದೃಷ್ಟಿಯಲ್ಲಿ ‘ಹೀರೋ’ ಆಗುತ್ತಿದ್ದೆ. ತಂತಮ್ಮ ಅಪರಾಧೀಭಾವ ಮುನ್ನೆಲೆಗೆ ಬಂದು, ತಮ್ಮಂಥವರ ಜೊತೆಯಲ್ಲಿ ನನ್ನನ್ನು ಕೂರಿಸಿಕೊಂಡು ತಪ್ಪು ಮಾಡಿದೆವೆಂದು ಗೋಳಾಡುತ್ತಿದ್ದರು. ‘ಪರವಾಗಿಲ್ಲ, ನಿಮ್ಮದು ನಿಮಗೆ, ನನ್ನದು ನನಗೆ’ ಎಂದು ಎಷ್ಟು ಹೇಳಿದರೂ ಅವರು ಸಮಾಧಾನಗೊಳ್ಳುತ್ತಿರಲಿಲ್ಲ. ಕೈ ಕೈ ಮುಗಿದು, ನೀವು ದೇವರು ಸಾರ್ ಎಂದು ತಬ್ಬಿಕೊಳ್ಳಲು ಬರುತ್ತಿದ್ದರು. ಸಹೋದ್ಯೋಗೀ ಸ್ನೇಹಿತರ ಮಧುಪಾನವು ಹೀಗೆ ಮಧುರವಾದ ಪೇಚಿಗೆ ಸಿಕ್ಕಿಸುತ್ತಿತ್ತು. ಹಾಗಾಗಿ ಸಹಜವಾಗಿದ್ದವರೇ ಅಮಲಿನಲ್ಲಿ ಅಸಹಜವಾಗುತ್ತಿದ್ದುದನ್ನು ಕಣ್ಣಾರೆ ಕಂಡವನಾಗಿದ್ದೆ.

ಬಹಳ ಮಂದಿ ಇದನ್ನು ‘ಟೇಬಲ್ ಮ್ಯಾನರ್ಸ್’ ಎಂದು ಕರೆಯುತ್ತಾರೆ. ಮದ್ಯಪಾನ ಮಾಡುವಾಗ ಮಾತ್ರ ಇದು ಮುನ್ನೆಲೆಗೆ ಬರುತ್ತದೆಂಬುದನ್ನು ನಾನು ಗಮನಿಸಿದ್ದೇನೆ. ಬೇರೆ ಸಂದರ್ಭಗಳಲ್ಲಿ ಇದು ಲೆಕ್ಕಕ್ಕಿಲ್ಲ. ಅದರಲ್ಲೂ ಈ ಕಾರ್ಪೊರೇಟ್ ಕಲ್ಚರ್ ಎಲ್ಲೆಡೆಯೂ ಹರಡಿಕೊಳ್ಳುವಲ್ಲಿ ಇದರ ಕೊಡುಗೆ ಅಪಾರ. ಏಕೆಂದರೆ ಮದ್ಯಪಾನವು ಕೇವಲ ಚಟವಲ್ಲ; ಅಮಲಲ್ಲ; ವ್ಯಾಪಾರವಲ್ಲ; ಲಾಬಿಯೂ ಅಲ್ಲ; ಗಳಿಸಿದ್ದು ಉಳಿಸಿದ್ದು ಎಲ್ಲವನೂ ಕಳೆದುಕೊಳ್ಳುವ ಅನಾಹುತವೂ ಅಲ್ಲ; ಇವೆಲ್ಲಕಿಂತ ಹೆಚ್ಚಾಗಿ ಲಕ್ಷ ಕೋಟಿ ಬಂಡವಾಳವೆಂಬ ಉದ್ಯಮರಂಗದ ಮಾತುಕತೆಗೆ ಮುನ್ನುಡಿ! ಸುದೀರ್ಘ ಸಮಯದ ಮೀಟಿಂಗುಗಳಲ್ಲಿ ಬಗೆಹರಿಯದ ಹಲವು ಸಮಸ್ಯೆ ಮತ್ತು ಕಗ್ಗಂಟುಗಳು ಒಂದು ಪಾನಗೋಷ್ಠಿಯಲ್ಲಿ ಸಲೀಸಾಗಿ ಬಗೆಹರಿದು ಬಿಡುತ್ತವೆ. ಕಂಪೆನಿಯ ಕಾರ್ಯಸೂಚಿಗಳೆಲ್ಲ ಹೀಗೆಯೇ ಅಲೈನಾಗಿಯೂ ಅಸೈನಾಗಿಯೂ ಇರುತ್ತವೆ. ಅತಿಥಿ ಸತ್ಕಾರದ ಭಾಗವಾಗಿಯೂ ಮನವೊಲಿಸುವ ತಂತ್ರವಾಗಿಯೂ ಇದನ್ನು ಕಾಣಬೇಕೆಂಬ ಒತ್ತಾಯ ನಮ್ಮ ಈ ಕಾಲದ ಜನರ ಮೆಂಟಾಲಿಟಿ. ಕೆಲವೊಮ್ಮೆ ಕುಡಿಯದ ತಮ್ಮ ಸಿಬ್ಬಂದಿಗಳನ್ನು ಇದಕ್ಕಾಗಿ ನಿಯೋಜಿಸುವುದೇ ಇಲ್ಲ. ಅಂಥವರನ್ನು ಶಿಲಾಯುಗದ ಆದಿಮಾನವರಂತೆ ಭಾವಿಸುತ್ತಾರೆ. ‘ಇಷ್ಟು ಓದಿಕೊಂಡು, ಇಂಥ ದೊಡ್ಡ ಸ್ಥಾನಮಾನ ಅಧಿಕಾರ ಗಳಿಸಿಕೊಂಡು, ಕುಡಿಯುವುದಿಲ್ಲ ಎಂದರೇನು?’ ಎಂಬುದು ಅಂಥವರ ಹುಬ್ಬುಗಂಟಿಕ್ಕಿದ ಪ್ರಶ್ನೆ! ‘ಎಲ್ಲಾ ಸರಿ, ಇದೊಂದು ವಿಚಾರದಲ್ಲಿ ನೀವು ಹಿಂದುಳಿದಿದ್ದೀರಾ!’ ಎಂದು ಪದೇ ಪದೇ ಹೇಳಿ ಕೀಳರಿಮೆ ಹುಟ್ಟುವಂತೆ ನೋಡಿಕೊಳ್ಳುವಲ್ಲಿ ಇಂಥವರು ನಿಸ್ಸೀಮರು. ಏಕೆಂದರೆ ತಾವು ತೋಡಿಕೊಂಡ ಹಳ್ಳದಲ್ಲಿ ತಾವು ಮಾತ್ರವಲ್ಲ, ಉಳಿದವರನ್ನೂ ದೂಡಿಕೊಂಡು ಬಿಡುವ ಜಾಯಮಾನ. ಇನ್ನು ಇಂಥ ಕಂಪೆನಿಗಳ ಯಜಮಾನನಂತೂ ಉದ್ಯಮಪತಿಗಳಿಗೆ ಕುಡಿಸಿಯೇ ಲಾಭ ಮಾಡಿಕೊಳ್ಳಲು ಸದಾ ಹವಣಿಸುತ್ತಿರುತ್ತಾನೆ. ಈ ಸಂದರ್ಭದಲ್ಲಿ ನನ್ನ ಮಗನ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳಲೇ ಬೇಕು.

ಈ ಬರಹದ ಹಿಂದಿನ ಸಂಚಿಕೆ ಇಲ್ಲಿದೆ: https://surahonne.com/?p=43582
(ಮುಂದುವರಿಯುವುದು)


ಡಾ. ಹೆಚ್ ಎನ್ ಮಂಜುರಾಜ್ ಹೊಳೆನರಸೀಪುರ

8 Comments on “ಎತ್ತೆಣಿಂದೆತ್ತ ಸಂಬಂಧವಯ್ಯಾ !- ಭಾಗ 2

  1. ಎತ್ತಣಿದತ್ತ ಸಂಬಂಧ ವಯ್ಯಾ ಲೇಖನ ಕುತೂಹಲ ವನ್ನು ಕಾಯ್ದುಕೊಂಡು ಸಾಗುತ್ತಿದೆ..

  2. ಈ ವಾರದ ಲೇಖನವಂತೂ ನನಗೆ ತುಂಬಾ ಇಷ್ಟವಾಯಿತು. ನನ್ನ ಮನದಲ್ಲಿ ಮೂಡುವ ಭಾವನೆಗಳ, ಬೆಳೆದ ಬಾತಾವರಣದ ಪ್ರತಿಬಿಂಬದಂತಿದೆ.

    1. ಧನ್ಯವಾದಗಳು ಮೇಡಂ………

      ದೂರುವ ಬದಲು ದಾಟಿದ್ದೇನೆ
      ನನ್ನೀ ಲೇಖನಮಾಲೆಯಲಿ………..

  3. ಕುಡಿತದ ಕುರಿತಾದ ಲೇಖನಮಾಲೆ ಅರ್ಥಪೂರ್ಣವಾಗಿದೆ.

    1. ಲೇಖನಮಾಲೆಯನು ಗಮನಿಸುತಿರುವ ನಿಮಗೆ ನನ್ನ ಅನಂತ ಪ್ರಣಾಮ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *