ವಿಶೇಷ ದಿನ

ಆನೆಗಳ ಸುತ್ತಮುತ್ತ ಒಂದು ನೋಟ……

Share Button

ವಿಶ್ವವಿಖ್ಯಾತ ಮೈಸೂರು ದಸರಾ ಸಮೀಪಿಸುತ್ತಿದೆ. ದಸರಾ ಎಂದರೆ ಆನೆ, ಆನೆಗಳು ಎಂದರೆ ದಸರಾ ಎನ್ನುವಂಥಾಗಿದೆ. ಆನೆಗಳಿಲ್ಲದ ದಸರಾವನ್ನು ನಾವು ಊಹಿಸಿಕೊಳ್ಳುವುದು ಕಷ್ಟ. ಅದಕ್ಕೆ “ಮುನ್ನುಡಿ” ಎನ್ನುವಂತೆ ಈಗಾಗಲೇ ಆನೆಗಳ ಮೊದಲ ತಂಡ ಉದ್ಯಾನನಗರಿ ಮೈಸೂರಿಗೆ ಬಂದಿವೆ. ಬೆಳಿಗ್ಗೆ ಮತ್ತು ಸಂಜೆ ಇನ್ನು ಮುಂದೆ ಆನೆಗಳ ಸಂಚಾರ ನಗರದ ನಿಗದಿತ ಪ್ರದೇಶದಲ್ಲಿ ನಡೆಯುತ್ತದೆ. ಆಗಸ್ಟ್ 12 ನೇ ತಾರೀಕನ್ನು ‘ವಿಶ್ವ ಆನೆಗಳ ದಿನ’ಎಂದು ಗುರುತಿಸುತ್ತಾರೆ. ಇದು ಈ ಸಂದರ್ಭದಲ್ಲಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

“ಆನೆ” ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ?!. ನಾವು ಆನೆಗಳನ್ನು ಕಾಡಿನಲ್ಲಿ ನೇರವಾಗಿ ನೋಡಿದ್ದೇವೆ. ಜೊತೆಗೆ ಪ್ರಾಣಿ ಸಂಗ್ರಹಾಲಯಗಳಲ್ಲಿ ಕೂಡ ನೋಡಿದ್ದೇವೆ. ಅದರಲ್ಲೂ ಆನೆಗಳನ್ನು ದೇವಸ್ಥಾನಗಳಲ್ಲೂ ಕೂಡ ನೋಡಿದ್ದೆವು. ಅದರಲ್ಲೂ ಶಾಶ್ವತವಾಗಿ ಮೈಸೂರಿನ ಅರಮನೆ ಆವರಣದಲ್ಲಿ ನಾಲ್ಕೈದು ಆನೆಗಳು ಇರುತ್ತವೆ. ಆದರೆ ದಸರಾ ಸಂದರ್ಭದಲ್ಲಿ ಮೈಸೂರಿಗೆ ಬರುತ್ತವೆ. ಆನೆಗೆ ತನ್ನದೇ ಆದ ಇತಿಹಾಸವಿದೆ. ಪುರಾಣ ಕಥೆಗಳು ಇವೆ. ಮುಂದೆ ಗಣಪತಿ ಹಬ್ಬ ಕೂಡ ಬರುತ್ತಿದೆ. ಕಥೆಯೊಂದರಲ್ಲಿ ಶಿವನ ಆಜ್ಞೆಯಂತೆ ಗಣೇಶನು ಆನೆಯ ತಲೆಯನ್ನು ಪಡೆದುಕೊಂಡಿದ್ದಾನೆ. “ಆನೆಯ ಮೇಲೆ ಅಂಬಾರಿ ಕಂಡೆ”- ಎನ್ನುವ ಹಾಡು ಕೂಡ ಇದೆ.

ಆನೆಗಳ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಎಂದರೇ ರೋಮಾಂಚನವಾಗುತ್ತದೆ. ಆನೆಗಳ ಗುಂಪಿನಲ್ಲಿ ಹೆಣ್ಣಾನೇ ಯಜಮಾನಿಯಾಗಿರುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಆನೆಗಳು ಒಟ್ಟಾಗಿ ವಾಸಿಸುವುದನ್ನು ರೂಡಿಸಿಕೊಂಡಿವೆ. ನಾವು ಸಾಮಾನ್ಯವಾಗಿ ಕಾಡಿನಲ್ಲಿ ಹಿಂಡು ಹಿಂಡಾಗಿ ವಾಸಿಸುವ ಆನೆಗಳ ತಂಡವನ್ನು ನೋಡಬಹುದು. ಹೆಣ್ಣಾನೆಯು ತನ್ನ ಜೀವಿತಾವಧಿಯಲ್ಲಿ ಒಂದೇ ಗುಂಪಿನಲ್ಲಿ ಇರುತ್ತದೆ. ಗುಂಪಿನಲ್ಲಿ ಜನಿಸಿದ ಮರಿಗಳ ಆರೈಕೆಗೆ ಅದು ತನ್ನ ಬದುಕನ್ನ ಮೀಸಲಿಟ್ಟಿರುತ್ತದೆ. ಜೊತೆಗೆ ತಾಯಿತನವನ್ನು ಕೂಡ ಅನುಭವಿಸುತ್ತದೆ. ಗಂಡಾನೆಗಳು ಕೌಟುಂಬಿಕ ನಿಯಮಗಳಿಂದ ದೂರವಾಗಿರುತ್ತವೆ. ಅದರ ಪುಂಡಾಟ ಸಹಿಸದೆ ಹೆಣ್ಣಾನೆಗಳು ಗಂಡನ್ನ ಹೊರಗಟ್ಟುತ್ತವೆ!. ಇದೆಲ್ಲ ಕೇಳಿದರೆ ಆಶ್ಚರ್ಯವಾಗುತ್ತದೆ. ಹೀಗಾಗಿ 10 ವರ್ಷಕ್ಕೆ ಆ ನಂಟು ಕಳಚಿ ಗಂಡಾನೆ ಏಕಾಂಗಿಯಾಗಿ ಕಾಡಿನಲ್ಲಿ ಜೀವಿಸುವ ಹಂತಕ್ಕೂ ತಲುಪುತ್ತವೆ.

ಮುಖ್ಯವಾದ ವಿಷಯವೆಂದರೆ ಆನೆಗಳು, ಕಾಡಿನ ಯಾವ ಮೂಲೆಯಲ್ಲಿ ಇದ್ದರೂ ಕೂಡ ಏಕರೂಪದಲ್ಲಿ ಇರುತ್ತವೆ. ಆನೆಗಳಿಗೆ ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ. ಅದರಿಂದಾಗಿ ಆನೆಗಳು, ಕಾಲಂತರದಿಂದಲೂ ಕೂಡ ತನ್ನ ವಂಶಸ್ಥರು ಬಳಸುತ್ತಿದ್ದ ದಾರಿಯನ್ನೇ ಅನುಸರಿಸುತ್ತವೆ. ಇದು ಒಂದು ರೀತಿಯಲ್ಲಿ ಅಚ್ಚರಿಯೇ ಸರಿ. ಅದರ ಮೂಲಕವೇ ಕಾಡಿನ ಮೂಲೆ ಮೂಲೆಯಲ್ಲೂ ಕೂಡ ಸಂಚರಿಸುತ್ತವೆ. ಅದರಿಂದಲೇ ನಾವು “ಆನೆ ನಡೆದಿದ್ದೇ ದಾರಿ”- ಎನ್ನುವ ಒಂದು ಮಾತನ್ನು ಕೂಡ ಕೇಳಿದ್ದೇವೆ. ಆನೆ ತನ್ನ ನಡೆಯಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗುವುದಿಲ್ಲ. ಕಾಡಿನ ತುಂಬೆಲ್ಲ ಸಂಚರಿಸುತ್ತದೆ. ಒಂದು ರೀತಿಯಲ್ಲಿ ಆನೆಗಳಿಗೆ ತಲೆತಲಾಂತರದಿಂದ ಸಿದ್ದಿಸಿದ ಜ್ಞಾನವು ಕೂಡ ಹೆಚ್ಚಿನ ಜ್ಞಾಪಕ ಶಕ್ತಿಯಿಂದಾಗಿ ಒಳಗೊಂಡಿದೆ.

ಯಾವುದೇ ಆನೆಗಳು ತನ್ನ ಜೀವಿತಾವಧಿಯಲ್ಲಿ ಅಜ್ಜಿ, ಮುತ್ತಜ್ಜಿ ಓಡಾಡಿದ ಜಾಗಕ್ಕೆ ಬರುತ್ತವಂತೆ. ಇದೊಂದು ವಿಸ್ಮಯ ಕೂಡಾ. ಮುಂದುವರೆದು ಅಂಕಿ ಅಂಶಗಳ ಪ್ರಕಾರ ಒಂದು ವಂಶದಲ್ಲಿ 60 ರಿಂದ 90 ಆನೆಗಳು ಇರುತ್ತವೆ. ವಯಸ್ಕ ಕಾಡಾನೆ ನಿತ್ಯ 200 ರಿಂದ 250 ಕೆಜಿ ಆಹಾರ ಸೇವಿಸುತ್ತದೆ. ಆನೆಗಳಿಗೆ ಎಲೆ, ತೊಗಟೆ, ಬೇರು, ಬಾಳೆಹಣ್ಣು, ಬಿದಿರು ಇದರ ನಿತ್ಯದ ಪ್ರಮುಖ ಆಹಾರವಾಗಿವೆ. ಶೇಕಡ 45 ರಷ್ಟು ಜೀರ್ಣಿಸಿಕೊಂಡು, ಉಳಿದಿದ್ದು ಲದ್ದಿಯಾಗಿ ವಿಸರ್ಜನೆ ಆಗುತ್ತದೆ.

ಆನೆಗಳ ಸುತ್ತಮುತ್ತ ಅನೇಕ ಅಂಶವನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತೇವೆ. ಆನೆ ನಡೆದಿದ್ದೇ ದಾರಿ….. ಗಜಪ್ರಸವ…… ದಪ್ಪಗಿರುವವರನ್ನು ಆನೆಗೆ ಹೋಲಿಸುವುದು…. ಮುಂತಾದ ವಿಷಯವನ್ನು ಬಳಸುತ್ತೇವೆ. “ಗಜ ಪ್ರಸವ” ವಿಷಯಕ್ಕೂ ಕೂಡ ಕಾರಣ ಇದೆ. ಆನೆಯ ಗರ್ಭಧಾರಣೆ ಅವಧಿ 24 ತಿಂಗಳು!. ಗಂಡು ದೈಹಿಕವಾಗಿ ಸದೃಢವಾದಾಗ ಸೂಕ್ತ ಸಂಗಾತಿಯನ್ನು ಹುಡುಕಿ ಅದರೊಟ್ಟಿಗೆ ನಾಲ್ಕೈದು ದಿನ ರಮಿಸಿ ಮುಂದೆ ಸಾಗುತ್ತದೆ. ಗಂಡಾನೆ ವರ್ಷಕ್ಕೆ ಸರಿಸುಮಾರು 1000 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುತ್ತದೆ. ಗಂಟೆಗೆ 40 ಕಿ.ಮೀ ವೇಗದಲ್ಲಿ ಓಡಬಲ್ಲದು. ಆನೆಗಳು ಇನ್ಸ್ಟ್ರಾ ಸೋನಿಕ್ ಧ್ವನಿಗಳೊಂದಿಗೆ ಸಂವಹನ ನಡೆಸುತ್ತವೆ. ಇಂತಹ ಅನೇಕ ಅಂಶಗಳಿಂದ ನಾವು ಆನೆ ಭೂಮಿಯ ಮೇಲಿನ ದೈತ್ಯ ಪ್ರಾಣಿಗಳಲ್ಲಿ ಒಂದೆಂದು ಕೂಡ ಕರೆಯಬಹುದು. ಅದು ಮೊರದಗಲ ಕಿವಿ ಬೀಸುತ್ತಾ, ರಾಜಗಂಭೀರ್ಯದಿಂದ ಕಾಡಿನ ಸುತ್ತೆಲಾ ಸಂಚರಿಸುತ್ತದೆ. ಜೊತೆಗೆ ದೈತ್ಯ ಗಾತ್ರದ ಪ್ರಾಣಿ ಬೇರೆ.

ವರ್ಷ ವರ್ಷವೂ ಕೂಡ “ವಿಶ್ವ ಆನೆಗಳ ದಿನ”ದ ಹಿನ್ನೆಲೆಯಲ್ಲಿ ಧ್ಯೇಯ ವಾಕ್ಯ ಇದ್ದೇ ಇದೆ. ನಿರಂತರವಾಗಿ ಸಮಸ್ಯೆಗಳನ್ನು ಅನುಭವಿಸುತ್ತಿರುವ ಹಿನ್ನೆಲೆ ಯಲ್ಲಿ ಆನೆಗಳ ಸಂರಕ್ಷಣೆಯ ಬಗ್ಗೆ ಒಂದಲ್ಲ ಒಂದು ಕ್ರಮ ವಹಿಸುತ್ತಿದ್ದಾರೆ. ಜೊತೆಗೆ ಅವು ಎದುರಿಸುತ್ತಿರುವ ತೊಂದರೆಯ ನಿವಾರಣೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ. ಜೊತೆಗೆ ಆನೆಗಳು ನಾಡಿಗೆ ಬರದಂತೆ ಕಾಡಿನ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆಯು ಕೂಡ ಮಾಡಲಾಗುತ್ತಿದೆ. ಈ ಹಂತದಲ್ಲಿ ಅನೇಕ ವಿವಿಧ ಪರಿಹಾರ ಸೂತ್ರಗಳನ್ನು ಆಧುನಿಕ ತಂತ್ರಜ್ಞಾನವನ್ನು ಕೂಡ ಅಳವಡಿಸಲಾಗುತ್ತಿದೆ.

ಆನೆಗಳ ಪ್ರಮಾಣವೂ ಕುಸಿಯದಂತೆ ಅನೇಕ ಮಾರ್ಗಗಳನ್ನು ಕೂಡ ಅನುಸರಿಸಲಾಗುತ್ತಿದೆ. ಈ ರೀತಿಯ ಅನೇಕ ಅಂಶಗಳನ್ನು ನಾವು ವಿಶ್ವ ಆನೆಯ ದಿನ ಸಂಕಲ್ಪ ಮಾಡಬೇಕಾಗುತ್ತದೆ. “ಆನೆ ಇದ್ದರೂ ಲಕ್ಷ, ಸತ್ತರೂ ಲಕ್ಷ”- ಎನ್ನುವ ಮಾತು ಕೂಡ ಇದೆ. ಪ್ರಾಣಿ ವರ್ಗಗಳಲ್ಲಿ ಆನೆಗೆ ತನ್ನದೇ ಆದ ಸ್ಥಾನಮಾನ ಇದೆ. ಆಫ್ರಿಕಾ ರಾಷ್ಟ್ರಗಳಲ್ಲಿ ಶಿಕಾರಿ ಸಹಿತ ವಾರ್ಷಿಕ ಸರಾಸರಿ 20,000 ಆನೆಗಳು, ಏಷ್ಯಾದಲ್ಲಿ 550 ಆನೆಗಳು ಸಾವನ್ನಪ್ಪುತ್ತಿವೆ. ಇದೊಂದು ದುರಂತ ವಿಷಯವಾಗಿದೆ. ಜೊತೆಜೊತೆಗೆ ಆನೆಗಳಿಂದಾಗಿ ಎರಡೂ ಖಂಡಗಳಲ್ಲೂ ಕೂಡ ಸರಾಸರಿ 2500 ರಷ್ಟು ಜನರು ಸಾಯುತ್ತಿದ್ದಾರೆ. ಇಲ್ಲಿ ಅಸಹಜ ಸಾವುಗಳು ಕೂಡ ಕಂಡು ಬಂದರೆ….. ಮತ್ತೊಂದೆಡೆ ಕಾಡಿನಲ್ಲಿ ನಮ್ಮ ಬೇಜವಾಬ್ದಾರಿತನದಿಂದಾಗಿ ಆನೆಗಳಿಂದ ಸಾವನ್ನಪ್ಪುವ ಅಂಶವು ಕೂಡ ಈಗ ಹೆಚ್ಚಾಗುತ್ತಿದೆ. ಆನೆಗಳ ಜೊತೆಯಲ್ಲಿ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಹುಚ್ಚುತನದಿಂದಾಗಿ….. ಆನೆಗಳ ಹತ್ತಿರವೇ ಸೆಲ್ಫಿ ತೆಗೆಯುವ ಗುಂಗಿನಿಂದಾಗಿ…… ಸಾವಿನ ಅಂಶವೂ ಕೂಡ ಸೇರಿದೆ.

ರಾಜ್ಯ ವನ್ಯಜೀವಿ ಮಂಡಳಿಯ ಮಾಜಿ ಸದಸ್ಯರಾದ ಜೋಸೆಫ್ ಹೂವರ್ ರವರ ಹೇಳಿಕೆಯ ಪ್ರಕಾರ……. “ಕಾಡಿನಲ್ಲಿ ಪ್ರಸ್ತುತ ಲಂಟಾನಾ, ಸೆನ್ನಾಸ್ಪೆಕ್ಟಾಬಿಲಿಸ್ ನಂತಹ ಕಳೆಗಳು ಹೆಚ್ಚಿವೆ. ತಿನ್ನಲು ಆಹಾರವಿಲ್ಲ ಹೀಗಾಗಿ ಕಳೆದುಕೊಂಡಿರುವ ಹುಲ್ಗಾವಲನ್ನು ಪುನರ್ ಸ್ಥಾಪಿಸಬೇಕು. ಫೆನ್ಸಿಂಗಳ ಸರಿಯಾದ ನಿರ್ವಹಣೆಯಾಗಬೇಕು. ಜೊತೆಗೆ ಕಾಡಂಚಿನಲ್ಲಿರುವ ರೈತರಲ್ಲಿ ಯಾವ ಬೆಳೆ ಬೆಳೆಸಬೇಕೆಂಬ ಅರಿವು ಮೂಡಬೇಕು. ಪ್ರಸ್ತುತ ರಾಜ್ಯದಲ್ಲಿ 200 ಆನೆಗಳು ಕಾಡಿನಿಂದ ಹೊರಗಿದ್ದು, ಅರಣ್ಯ ಇಲಾಖೆ ಇದನ್ನ ಗಂಭೀರವಾಗಿ ಪರಿಗಣಿಸಬೇಕು” ಎನ್ನುತ್ತಾರೆ.

ನಿಜ!, ಇವರು ಹೇಳಿದ ಎಲ್ಲಾ ಅಂಶಗಳು ಕೂಡ ಪ್ರಸ್ತುತವಾಗಿ ಗಂಭೀರವಾಗಿ ಚಿಂತಿಸಬೇಕಾದದ್ದೆ. ಕಾಡಿನಲ್ಲಿ ಅನೇಕ ಕಳೆಗಳು ಹೆಚ್ಚಾಗಿವೆ. ಆನೆಗಳಿಗೆ ತಿನ್ನಲು ಯೋಗ್ಯ ಆಹಾರ ಪದಾರ್ಥ ಸಿಗುತ್ತಿಲ್ಲ. ಜೊತೆಗೆ ಅವುಗಳಿಗೆ ಹುಲ್ಗಾವಲನ್ನ ಪುನರ್ ನಿರ್ಮಿಸಬೇಕು. ಆ ವ್ಯವಸ್ಥೆ ಆಗಲೇಬೇಕು. ಕಾಡಿನಲ್ಲಿ ತಂತಾನೆ ಎಲ್ಲವೂ ಬೆಳೆಯುತ್ತದೆ ನಿಜ ಆದರೂ ಕೂಡ ನಾವು ಒಂದು ಸಮರ್ಪಕ ರೀತಿಯಲ್ಲಿ ಕಾಡನ್ನು ಬೆಳೆಸುವ, ಪ್ರಾಣಿಗಳನ್ನು ಉಳಿಸುವ, ಕಾರ್ಯಕ್ರಮಗಳು ಆಗಬೇಕು ಎನ್ನುವುದು ಅವರ ಆಶಯ. ಜೊತೆಗೆ ಕಾಡಿನ ಸುತ್ತ ಕಬ್ಬಿಣದ ಸರಳು ಅಥವಾ ಗುಂಡಿಯನ್ನು ತೆಗೆಯುವುದು. ಅವು ಈ ಮೂಲಕ ದಾಟದಂತೆ ನೋಡಿಕೊಳ್ಳುವುದು ಸೇರಿದೆ. ಅವರು ಪ್ರಸ್ಥಾಪಿಸಿರುವಂತೆ ಮುಖ್ಯವಾಗಿ ಕಾಡಿನಂಚಿನಲ್ಲಿರುವ ರೈತರು ತಮ್ಮ ಜಮೀನಿನಲ್ಲಿ ಯಾವ ರೀತಿಯ ಬೆಳೆಯನ್ನ ಬೆಳೆಯಬೇಕು ಎಂದು ಕೃಷಿ ಇಲಾಖೆ, ಅರಣ್ಯದ ಅಧಿಕಾರಿಗಳು, ಜೊತೆಗೆ ಸರ್ಕಾರ ಮಾರ್ಗದರ್ಶನ ನೀಡಬೇಕು. ಏಕೆಂದರೆ ಅವರು ಬೆಳೆಯುವ ಬೆಳೆಗೆ ಆನೆಗಳು ಅಥವಾ ಬೇರೆ ಪ್ರಾಣಿಗಳು ಮನಸೋತು ಕಾಡಿನಿಂದ ನಾಡಿಗೆ ದಾಳಿ ಮಾಡಲು ಕೂಡ ಇದು ಒಂದು ಕಾರಣ ಆಗಿರಬಹುದು.

ಎಷ್ಟೋ ಕಡೆ ರೈತರು ಬೆಳೆದ ಫಸಲನ್ನು ಆನೆಗಳು ತಂಡೋಪ ತಂಡವಾಗಿ ನುಗ್ಗಿ ಹಾಳು ಮಾಡಿದ ಉದಾಹರಣೆಗಳೇ ಹೆಚ್ಚಾಗಿವೆ. ಇದರಿಂದಾಗಿ ಅವರು ಹೇಳಿದಂತೆ ಆನೆಗಳು ಹೆಚ್ಚಾಗಿ ಹೊರಗಡೆಯೂ ಕೂಡ ಬರುತ್ತವೆ. ಇದನ್ನ ನಾವು ಗಂಭೀರವಾಗಿ ಪರಿಗಣಿಸಿ ಆನೆಗಳು ಕಾಡಿನಲ್ಲೇ ಸಂಚರಿಸುವಂತೆ ಮಾಡಬೇಕು. ಜೊತೆಗೆ ಅವುಗಳಿಗೆ ಇರಬೇಕಾದ ಮೂಲ ಸವಲತ್ತುಗಳನ್ನು ಕೂಡ ಖಂಡಿತವಾಗಿಯೂ ಒದಗಿಸಲೇಬೇಕು. ಎಷ್ಟೋ ಬಾರಿ ಆನೆಗಳಿಗೆ ಕಾಡಿನಲ್ಲಿ ಕುಡಿಯಲು ನೀರು ಇರದೆ, ಊರಿನ ಒಳಗಡೆ ಬಂದು ಅಲ್ಲಿ ಇರುವ ಕೆರೆ, ನದಿಗಳಿಗೆ ಬಂದು ನೀರು ಕುಡಿಯುವ ನೆಪದಲ್ಲಿ ಮಾರ್ಗ ಮಧ್ಯದಲ್ಲಿ ಸಂಚರಿಸಿ ಅಲ್ಲಿನ ರೈತರ ಜಮೀನಿಗೆ ದಾಳಿ ಮಾಡಿ ಜೊತೆಗೆ ರೈತರನ್ನು ಕೂಡ ತುಳಿದು ಸಾಯಿಸಿ, ಕೋಪದಿಂದ ಅನೇಕ ದುರಂತ ಗಳು ನಡೆದ ವಿಷಯಗಳು ಹೆಚ್ಚಾಗಿ ನಮಗೆ ಕಾಣಿಸಿಗುತ್ತಿವೆ.

ಈ ಸಂದರ್ಭದಲ್ಲಿ ಇನ್ನೊಂದಷ್ಟು ಗಂಭೀರ ವಿಷಯಗಳ ಬಗ್ಗೆ ಚರ್ಚೆ ಮಾಡುವುದಾದರೆ ಆನೆ ಮತ್ತು ಮಾನವನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆನೆಗಳ ಆವಾಸಸ್ಥಾನ ನಷ್ಟವಾಗುತ್ತಿದೆ. ಅಂದರೆ ಕಡಿಮೆಯಾಗುತ್ತಿರುವುದು. ಆನೆ ಕಾರಿಡಾರ್ ಧ್ವಂಸವಾಗುತ್ತಿದೆ. ಜೊತೆಗೆ ಅರಣ್ಯದ ಒತ್ತುವರಿ ಯಿಂದಾಗಿ ಕಾಡಿನಲ್ಲಿ ಹೆಚ್ಚಾಗಿ ಸಿಗದ ಆಹಾರ, ನೀರು. ಜೊತೆಗೆ ಇವೆಲ್ಲದಕ್ಕೂ ಮೂಲ ಕಾರಣ ಕಾಡು ಪ್ರಾಣಿಗಳ ವಿರುದ್ಧ ಮಾನವನ ಹಸ್ತಕ್ಷೇಪ. ಹೀಗೆ ಒಂದಲ್ಲ ಒಂದು ಕಾರಣದಿಂದಾಗಿ ಕರ್ನಾಟಕದಲ್ಲಿ ವಾರ್ಷಿಕ ಸರಾಸರಿ 30ರಿಂದ 35 ಜನ ಆನೆ ತುಳಿತದಿಂದ ಮೃತಪಡುತ್ತಿದ್ದಾರೆ. ಜೊತೆಗೆ 16 ರಿಂದ 20 ಕಾಡಾನೆಗಳು ಸಹಜವಾಗಿ ಸಾಯುತ್ತಿವೆ ಎನ್ನುವ ಪ್ರಮುಖ ಅಂಶಗಳು ಕೂಡ ಈಗ ಕಂಡು ಬಂದಿದೆ.

ವಿಶ್ವ ಆನೆಗಳ ದಿನವನ್ನು ನಾವು ಆಚರಿಸಿದ್ದೇವೆ. ಈ ನಿಟ್ಟಿನಲ್ಲಿ ಕೇವಲ ಅರಣ್ಯ ಇಲಾಖೆ ಸರ್ಕಾರ ಜಿಲ್ಲಾಡಳಿತ ಕ್ರಮವಹಿಸಿದರೆ ಸಾಲದು. ಮುಖ್ಯವಾಗಿ ಸಾರ್ವಜನಿಕರು ಕೂಡ ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ನಾವು ಕಾಡಿನ ರಸ್ತೆಯ ಮೂಲಕ ಸಾಗುವಾಗರಸ್ತೆ ಇಕ್ಕಡೆಗಳನ್ನು ನೋಡಿಕೊಂಡು ಹೋಗಬೇಕು. ಜೊತೆಗೆ ದ್ವಿಚಕ್ರ ವಾಹನದಲ್ಲಿ ಹೋಗುವಾಗಲೆಂದು ಸದಾ ಮುನ್ನೆಚ್ಚರಿಕೆ ವಹಿಸಬೇಕು. ಕಾಡಿನ ಮಧ್ಯವಾಗಿ ನಾವು ಸಾಗುವಾಗ ವಾಹನವನ್ನು ನಿಲ್ಲಿಸಿ ಕಾಲ ಕಳೆಯಬಾರದು. ಹಾರನ್ ಮಾಡಬಾರದು. ಜೊತೆಗೆ ವಾಹನವನ್ನು ವೇಗವಾಗಿ ಚಲಾಯಿಸಬಾರದು. ಯಾವುದೇ ಕಾರಣಕ್ಕೂ ನಡೆದುಕೊಂಡು ಹೋಗಲೇಬಾರದು. ಕಾಡಿನ ಮೂಲಕ ಸಂಚರಿಸುವಾಗ ಯಾವುದೇ ಪ್ಲಾಸ್ಟಿಕ್ ಪದಾರ್ಥಗಳನ್ನು ಎಸೆಯಬಾರದು. ಬಿಡಿ ಸಿಗರೇಟ್ ಸೇದಬಾರದು. ಎಷ್ಟೋ ಬಾರಿ ಬೆಂಕಿಯ ಕಿಡಿ ತಗುಲಿ ಹಲವು ಕಡೆ ಅರಣ್ಯವೇ ನಾಶವಾಗಿದೆ. ನಾವು ತಂದ ತಿಂಡಿ- ತೀರ್ಥಗಳನ್ನು ಪ್ರಾಣಿ- ಪಕ್ಷಿಗಳಿಗೆ ನೀಡಲೇ ಬಾರದು. ಜೊತೆಗೆ ಮುಖ್ಯವಾಗಿ ವಾಹನ ಸಂಚರಿಸುವಾಗ ಎರಡು ಭಾಗಗಳಲ್ಲಿ ಯಾವುದಾದರೂ ಪ್ರಾಣಿಗಳು ಸಿಕ್ಕರೆ ವಾಹನವನ್ನು ದೂರದಲ್ಲಿ ನಿಲ್ಲಿಸಿ, ಶಬ್ದ ಮಾಡದೆ ಇದ್ದರೆ ಅವು ತನ್ನ ಪಾಡಿಗೆ ತಾವು ಹೋಗುತ್ತವೆ.

ಅದರಲ್ಲೂ ಆನೆಗಳು ಗುಂಪಿನಲ್ಲಿ ಇದ್ದಾಗ ತನ್ನ ಮರಿಯ ರಕ್ಷಣೆಗಾಗಿ ಯಾವ ಕ್ಷಣದಲ್ಲಾದರೂ ದಾಳಿ ಮಾಡಬಹುದು. ಅಂತಹ ಸಂದರ್ಭದಲ್ಲಿ ಜೋರಾಗಿ ಕಿರುಚುವುದು, ಫೋಟೋ ತೆಗೆಯುವುದು, ಸೆಲ್ಫಿ ತೆಗೆದುಕೊಳ್ಳುವುದು ಇದನ್ನ ನಿಷೇಧ ಮಾಡಲೇಬೇಕು. ಇಂತಹ ಎಚ್ಚರಿಕೆಗಳನ್ನ ಅರಣ್ಯ ಅಧಿಕಾರಿಗಳು ಪ್ರವೇಶ ದ್ವಾರದಲ್ಲಿಯೇ ತಿಳಿಸಿರುತ್ತಾರೆ. ಇದನ್ನೆಲ್ಲ ಕ್ರಮವಹಿಸದೆ ಅನೇಕ ದುರಂತಗಳಿಗೆ ಒಳಗಾಗುತ್ತಿದ್ದಾರೆ. ಈಗ ಅರಣ್ಯ ಇಲಾಖೆಯು ಕಟ್ಟು ನಿಟ್ಟಿನ ಕ್ರಮವಹಿಸಿ, ಅಲ್ಲಲ್ಲಿ ಸಿಸಿ ಕ್ಯಾಮರಾ ಗಳನ್ನು ಬಳಸಿ ಕಾಡುಪ್ರಾಣಿಗಳ ಜೊತೆಯಲ್ಲಿ ಅಹಿತಕರವಾಗಿ ನಡೆದುಕೊಂಡವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ಕೂಡ ವಿಧಿಸುತ್ತಿದೆ.

ಎಲ್ಲದಕ್ಕೂ ಒಂದು ಮಿತಿ ಇದೆ. ಎಷ್ಟು ಅಂತ ಅರಣ್ಯ ಸಿಬ್ಬಂದಿಗಳು ಕಾಯುತ್ತಾರೆ? ಮೊದಲು ನಮ್ಮ ನಮ್ಮಲ್ಲಿ ಜಾಗೃತಿ ಮೂಡುವಂತಾಗಬೇಕು. ಅದರಲ್ಲೂ ಕಾಡಂಚಿನ ಪ್ರದೇಶಗಳಲ್ಲಿ
ವಾಸಿಸುವ ಗ್ರಾಮಸ್ಥರು ಜನ-ಜಾನುವಾರುಗಳ ಜೊತೆಯಲ್ಲಿ ಎಚ್ಚರಿಕೆಯಿಂದ ಬದುಕಬೇಕು. ಆನೆಗಳ ಗಣತಿ ಕಾರ್ಯವು ಕೂಡ ನಡೆಯುತ್ತಾ ಬರುತ್ತಿದೆ. ಆನೆಗಳ ಪ್ರಮಾಣ ಕಡಿಮೆಯಾಗುವ ಶಂಕೆಯು ಕೂಡ ಇದೆ. ಅದರಿಂದಾಗಿ ನಾವೆಲ್ಲರೂ ಸೇರಿ ಒಟ್ಟಾರೆ ಕಾಡು ಪ್ರಾಣಿಗಳನ್ನು ಸಂರಕ್ಷಿಸೋಣ. ಜೊತೆಗೆ ನಾವು ಜಾಗೃತಿ ಗೊಂಡು ನಾವು ಬದುಕಿ, ಕಾಡು ಪ್ರಾಣಿಗಳನ್ನು ಬದುಕಿಸೋಣ.

ಕಾಳಿಹುಂಡಿ ಶಿವಕುಮಾರ್, ಮೈಸೂರು.

4 Comments on “ಆನೆಗಳ ಸುತ್ತಮುತ್ತ ಒಂದು ನೋಟ……

  1. ಆನೆಯ ದಿನಾಚರಣೆಯ ಪ್ರಯುಕ್ತ ಹಲವಾರು ಮಾಹಿತಿಗಳನ್ನೊಳಗೊಂಡ ಉಪಯುಕ್ತ ಲೇಖನ.

  2. ಆನೆ ದಿನಕೊಂದು ಅರ್ಥಪೂರ್ಣ ಲೇಖನ, ಚೆನ್ನಾಗಿದೆ ಸರ್.

  3. ಆನೆ ದಿನಕ್ಕಾಗಿ ರೂಪುಗೊಂಡ ಸಕಾಲಿಕ ಲೇಖನವು ಬಹಳಷ್ಟು ಮಾಹಿತಿಗಳನ್ನು ಒಳಗೊಂಡಿದೆ…ಧನ್ಯವಾದಗಳು.

Leave a Reply to H N MANJURAJ Cancel reply

 Click this button or press Ctrl+G to toggle between Kannada and English

Your email address will not be published. Required fields are marked *