ಕಾದಂಬರಿ

ಕನಸೊಂದು ಶುರುವಾಗಿದೆ: ಪುಟ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಅವರ ಪಕ್ಕದ ಮನೆಗೆ ಶ್ರೀಪತಿ-ನೀಲಾಂಬಿಕೆ ಬಂದಿದ್ದರು. ನೀಲಾಂಬಿಕೆ ಬಾಗಲಕೋಟೆ ಹುಡುಗಿ. ಅವರ ಮನೆ ಹತ್ತಿರದ ಒಂದು ಶಾಲೆಯಲ್ಲಿ ಶ್ರೀಪತಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಆ ಬಡಾವಣೆಯ ಗಣೇಶೋತ್ಸವದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಪ್ರೇಮವಾಗಿತ್ತು. ಎರಡು ಮನೆಗಳಲ್ಲೂ ಮದುವೆಗೆ ಒಪ್ಪಿರಲಿಲ್ಲ. ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಶ್ರೀಪತಿ ತಾನು ಕೆಲಸ ಮಾಡುತ್ತಿದ್ದ ಶಾಲೆಯ ಬ್ರಾಂಚ್‌ಗೆ ವರ್ಗ ಮಾಡಿಸಿಕೊಂಡಿದ್ದ. ಆಗ ಶಕುಂತಲಾಗೆ ಮಕ್ಕಳಿರಲಿಲ್ಲ. ಸದ್ಯದಲ್ಲಿ ಮಕ್ಕಳು ಬೇಡವೆಂದು ದಂಪತಿಗಳು ನಿರ್ಧರಿಸಿದ್ದರು.

ನೀಲಳ ಎರಡು ಬಾಣಂತನ ಶಕುಂತಲಾ ಮಾಡಿದ್ದರು. ನೀಲಾ ಓದು ಮುಂದುವರೆಸಲು ನೆರವಾಗಿದ್ದರು. ನೀಲಾಂಬಿಕೆ ಬಿ.ಇ. ಮಾಡಿದ್ದಳು. ಮೊದಲು ಅವಳು ದುಬೈಗೆ ಹೋಗಿ, ನಂತರ ಗಂಡ, ಮಕ್ಕಳನ್ನು ಕರೆಸಿಕೊಂಡಿದ್ದಳು. ಶ್ರೀಪತಿ ಎಂ.ಬಿ.ಎ. ಮಾಡಿ ಒಳ್ಳೆಯ ಕೆಲಸದಲ್ಲಿದ್ದ. ಇಬ್ಬರೂ ಚೆನ್ನಾಗಿ ಸಂಪಾದಿಸುತ್ತಿದ್ದರು. ಬೆಂಗಳೂರಿಗೆ ಬಂದು 40×60 ರ ಸೈಟ್‌ನಲ್ಲಿದ್ದ ಮನೆಯನ್ನು ಬಸವನಗುಡಿಯಲ್ಲಿ ಕೊಂಡಿದ್ದರು. ಚಿಕ್ಕ ಮನೆಯಲ್ಲಿ ಎರಡು ಮಕ್ಕಳು, ಇಬ್ಬರ ತಮ್ಮಂದಿರ ಜೊತೆ ಇದ್ದ ಶ್ರೀನಿವಾಸ್‌ರಾವ್‌ಗೆ ಬಾಡಿಗೆಗೆ ಕೊಟ್ಟಿದ್ದರು. ಐದು ಸಾವಿರ ಬಾಡಿಗೆ!
“ಇಷ್ಟು ದೊಡ್ಡ ಮನೆ…. ಕಡಿಮೆ ಬಾಡಿಗೆ.”
“ಪ್ರತಿವರ್ಷ ಒಂದು ಸಾವಿರ ಬಾಡಿಗೆ ಜಾಸ್ತಿ ಮಾಡ್ತೀವಿ. ಸಮಾಧಾನಾನಾ?” ನೀಲಾ ಕೇಳಿದ್ದಳು. ಈಗ 12,000 ರೂ. ಬಾಡಿಗೆ ಕೊಡುತ್ತಿದ್ದರು.
ಸಾಮಾನ್ಯವಾಗಿ ಮಕ್ಕಳು ಚಿಕ್ಕವರಿದ್ದಾಗ ದುಬೈನಿಂದ ಬಂದಾಗಲೆಲ್ಲಾ ನೀಲಾ-ಶ್ರೀಪತಿ ರಾವ್ ಮನೆಯಲ್ಲೇ ಉಳಿಯುತ್ತಿದ್ದರು. ವರು ಶಕು ಇಬ್ಬರನ್ನೂ ತಮ್ಮ ಜೊತೆ ಎಲ್ಲಾ ಕಡೆ ಕರೆದೊಯ್ಯುತ್ತಿದ್ದರು. ವರು ಎಸ್.ಎಸ್.ಎಲ್.ಸಿ.ಗೆ ಬಂದಾಗ ಶಂಕರೂಗೆ 6 ವರ್ಷ. ಈಗವನಿಗೆ 13 ವರ್ಷ, 8ನೇ ತರಗತಿಯಲ್ಲಿ ಓದುತ್ತಿದ್ದ.
“ನಾವು ವಾಪಸ್ಸು ಬರುವವರೆಗೂ ನೀವು ದೀಪ ಹಚ್ಚಿಕೊಂಡಿರಿ. ನಮ್ಮ ಕಷ್ಟದಲ್ಲಿ ನೀವು ಮಾಡಿರುವ ಉಪಕಾರ ಮರೆಯುವಂತಿಲ್ಲ. ನಾನಿವತ್ತು ಇಂಜಿನಿಯರ್ ಆಗಲು ನೀವೇ ಕಾರಣ. ಹಣಬಲಕ್ಕಿಂತ ಜನಬಲ ಮುಖ್ಯ ಅನ್ನುವುದನ್ನು ನಾನು ನಿಮ್ಮಿಂದ ಕಲಿತೆ” ಎಂದಿದ್ದಳು ನೀಲಾಂಬಿಕೆ.

ಮನೆ ಬಾಡಿಗೆ, 13 ಜನರ ಊಟದ ಖರ್ಚು ಪೂರೈಸುವುದರಲ್ಲಿ ಶ್ರೀನಿವಾಸರಾವ್ ಸೋತು ಹೋಗಿದ್ದರು. ತಾವಾಗಿ ಬಾಯಿಬಿಟ್ಟು ತಮ್ಮಂದಿರನ್ನು ಹಣ ಕೇಳಲು ಅವರ ಮನಸ್ಸು ಒಪ್ಪುತ್ತಿರಲಿಲ್ಲ. ಆ ತಮ್ಮಂದಿರು ತಾವಾಗಿ ಹಣ ಕೊಡುತ್ತಿರಲಿಲ್ಲ.
ವಾರುಣಿಗೆ ದೊಡ್ಡ ಕನಸಿತ್ತು. ತಾನು ಕೆಲಸಕ್ಕೆ ಸೇರಿ ತಂಗಿ, ತಮ್ಮನನ್ನು ಓದಿಸಬೇಕು. ಅಪ್ಪ-ಅಮ್ಮನನ್ನು ಸುಖವಾಗಿಟ್ಟುಕೊಳ್ಳಬೇಕು. ಅವರು ಇದುವರೆಗೂ ಅನುಭವಿಸಿದ ಕಷ್ಟಗಳಿಗೆ ಒಂದು ಮುಕ್ತಾಯ ಹಾಡಬೇಕು.
“ಕನಸು ಕಾಣ್ತಿದ್ದೀಯೇನೇ ವರು?”
“ಅಷ್ಟು ಅದೃಷ್ಟ ನನಗೆಲ್ಲಿದೆ?”
“ನೀನು ಮೈಸೂರಲ್ಲಿ ನಮ್ಮ ಜೊತೆ ಇರ‍್ತೀಯ. ನಿಮ್ಮ ತಂದೇನ್ನ ಒಪ್ಪಿಸುವ ಜವಾಬ್ದಾರಿ ನನ್ನದು.”
“ನೀನು ನಾಳೆ 10-30 ಮೇಲೆ ನಮ್ಮ ಮನೆಗೆ ಬಾ. ಚಿಕ್ಕಪ್ಪ, ಚಿಕ್ಕಮ್ಮ, ದೇವಕಿ, ಅತ್ತೆ ಇರುವಾಗ ಬರಬೇಡ.”
“ಆಗಲಿ ಕಣೆ. ಶೋಭಾ ಚಿಕ್ಕಮ್ಮನಿಂದ ತೊಂದರೆ ಇಲ್ಲ ಅಲ್ವಾ?”
“ಖಂಡಿತಾ ಇಲ್ಲ……….”
“ನಾನು ಬಂದು ಮಾತಾಡ್ತೀನಿ. ಆಗ ನೀನು ಏನೂ ಮಾತಾಡಬಾರದು.”
“ಯಾಕೆ?”
“ನಿನ್ನ ಕೆಲಸ ಆಗಬೇಕಾದರೆ ನೀನು ತೆಪ್ಪಗಿರಬೇಕು.”
“ಸರಿ ಮ್ಯಾಡಂ. ನೀವು ಬನ್ನಿ” ಎಂದಳು ವಾರುಣಿ ನಗುತ್ತಾ.

*****

ಮರುದಿನ ವಾರುಣಿ ಕೆಲಸ ಮುಗಿಸಿ ತಿಂಡಿ ತಿನ್ನುತ್ತಿರುವಾಗ ಮಾನಸ ಬಂದಳು. ಅವಳನ್ನು ನೋಡಿದರೆ ಅತ್ತಿದ್ದಂತೆ ಇತ್ತು. ಕಣ್ಣುಗಳು ಕೆಂಪಾಗಿದ್ದವು.
“ಏನಾಯಿತೇ? ಯಾಕೆ ಹೀಗಿದ್ದೀಯಾ?”
ಅವಳು ಉತ್ತರಿಸದೆ ವಾರುಣಿಯನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿದಳು.
“ಯಾಕಮ್ಮ ಏನಾಯಿತು?”
“ಅಂಕಲ್ ನೀವು ವಾರುಣೀನ್ನ ನಿಮ್ಮ ಅಕ್ಕನ ಮನೆಯಲ್ಲಿ ಬಿಡ್ತಿದ್ದೀರ ಅಲ್ವಾ?”
“ಹುಂ. ವರು ನಮ್ಮಕ್ಕನ ಮನೇಲರ‍್ತಾಳೆ. ಯಾಕಮ್ಮ?”
“ಮೈಸೂರಲ್ಲಿ ನಮ್ಮ ಪರಿಚಯದವರ ಮನೆ ಖಾಲಿ ಇದೆ. ಅಪ್ಪನ ಸ್ನೇಹಿತರು ಕೆಳಗಿದ್ದಾರೆ. ನಾವು ಮೂವರು ಸ್ನೇಹಿತರು ಮೇಲಿನ ಮನೆಯಲ್ಲಿರೋದು ಅಂತ ಅಂದ್ಕೊAಡಿದ್ದೆವು……”
“ಓಹೋ!”
“ಆದರೆ ನಮ್ಮ ತಂದೆ, ವರು ನಿನ್ನ ಜೊತೆ ಇಲ್ಲದಿದ್ರೆ ನೀನು ಎಂ.ಎ. ಓದೋದು ಬೇಡಾಂತಿದ್ದಾರೆ.”
“ಯಾಕಮ್ಮಾ ಬೇಡಾಂತಿದ್ದಾರೆ?”
“ಅವರಿಗೆ ವರು ಮೇಲಿರುವ ನಂಬಿಕೆ ಬೇರೆಯವರ ಮೇಲಿಲ್ಲ. ನಾನು ತಾನೆ ಏನು ಮಾಡಲಿ? ಗಂಗೋತ್ರಿಯಲ್ಲಿ ಓದಬೇಕೆನ್ನುವ ನನ್ನ ಕನಸು ನುಚ್ಚು ನೂರಾಯಿತು” ಅವಳು ಕಣ್ಣಿನಲ್ಲಿ ನೀರು ತುಂಬಿಕೊಂಡು ಹೇಳಿದಳು.
“ಮಾನಸ ಅವಳತ್ತೆ ಮನೆಯಿರುವಾಗ ಹೇಗಮ್ಮ ಬೇರೆ ಕಡೆ ಬಿಡುವುದು? ನಾವು ಸಂಬಂಧ ಉಳಿಸಿಕೊಳ್ಳಬೇಕಲ್ವಾ?”
“ಅವಳಿಗೆ ವಿದ್ಯಾರಣ್ಯಪುರಂನಿಂ 2 ಬಸ್‌ನಲ್ಲಿ ಓಡಾಡಲು ಕಷ್ಟವಾಗಲ್ವಾ? ಸೆಮಿನಾರ್‌ಗಳಿರುತ್ತವೆ. ಲೈಬ್ರರಿ ವರ್ಕ್ ಇರುತ್ತದೆ……….”
“ನೀನು ಹೇಳೋದು ನಿಜ……”
“ಬೇಕಾದರೆ ಶನಿವಾರಗಳಲ್ಲಿ ಅವರ ಮನೆಗೆ ಹೋಗಿ ಬರಲಿ ಅಂಕಲ್. ದಯವಿಟ್ಟು ಒಪ್ಪಿಕೊಳ್ಳಿ.”

“ಹೌದೂರಿ. ನಾವು ವರೂನ್ನ ಕಳಿಸುತ್ತಿರುವುದು ಅವಳು ಓದಲೀಂತ. ಅವಳಿಗೆ ಸರಿಯಾಗಿ ಓದಕ್ಕೇ ಆಗದಿದ್ದರೆ ನಾವು ಕಳುಹಿಸಿ ಏನು ಪ್ರಯೋಜನ?”
“ಹಾಗಲ್ಲ ಶಕ್ಕು. ಬೇರೆ ಮನೆಯಲ್ಲಿರುವುದಾದರೆ ಬಾಡಿಗೆ, ಊಟದ ಖರ್ಚು-ಎಲ್ಲಾ ನೋಡಬೇಕಲ್ವಾ?”
“ನೀವು ನಿಮ್ಮಕ್ಕನ ಮನೆಯಲ್ಲಿ ವರೂನ್ನ ಬಿಟ್ಟಾಗ ಏನು ಕೊಡಲು ಸಿದ್ದರಿದ್ದರೋ ಅಷ್ಟೇ ಹಣ ಕೊಡಿ ಸಾಕು.”
ಶ್ರೀನಿವಾಸರಾವ್ ಒಪ್ಪಲೇಬೇಕಾಯಿತು.
“ನೋಡಿ. ಈ ಸೋಮವಾರ ನೀವು ವರೂನ್ನ ನಿಮ್ಮಕ್ಕನ ಮನೆಗೆ ಕರೆದುಕೊಂಡು ಹೋಗಿ ವಿಷಯ ಹೇಳಿಬಿಟ್ಟು ಬನ್ನಿ.”
“ಭಾನುವಾರಾನೇ ಹೋಗಬೇಕಮ್ಮ. ಗುರುವಾರದಿಂದ ಕ್ಲಾಸಸ್ ಶುರು. ಅದಕ್ಕೆ ಮೊದಲು ಮನೆ ಅರೇಂಜ್ ಮಾಡಿಕೊಳ್ಳಬೇಕು.”
“ಹಾಗಾದರೆ ಭಾನುವಾರ ಹೋಗೋಣ. ನಮ್ಮ ತಂದೆ ಕಾರು ಕಳಿಸ್ತಾರೆ. ನಾನು ನಿಮ್ಮನ್ನು ವಿದ್ಯಾರಣ್ಯಪುರಂನಲ್ಲಿ ಬಿಟ್ಟು ಮನೆಗೆ ಹೋಗ್ತೀನಿ” ಎಂದಳು ಮಾನಸ.
ಭಾನುವಾರ ಬೆಳಿಗ್ಗೆ 10 ಗಂಟೆಗೆ ವಾರುಣಿ ಹೊರಡುವುದು ಅವಳ ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆಗೆ ತಿಳಿಯಿತು.

“ಅಕ್ಕನ ಮನೆಯಲ್ಲಿ ಇರ‍್ತೀಯ ತಾನೆ?”
“ಇಲ್ಲ ಅತ್ತೆ. ನಾನು ಮಾನಸ ಜೊತೆ ಇರ‍್ತೀನಿ. ವಿವರಗಳನ್ನು ಅಮ್ಮನ್ನ ಕೇಳಿಕೊಳ್ಳಿ.”
“ನಮ್ಮಕ್ಕನ ಮನೆಯಲ್ಲಿ ಯಾಕೆ ಇರಲ್ಲ? ಪಾರು ಅಕ್ಕಂಗೆ ನೀನು ಅಂದ್ರೆ ಪಂಚಪ್ರಾಣ.”
“ಅಲ್ಲಿಂದ ಒಂದು ಟೆಲಿಪತಿ ಬಂತು ದೇವಕಿ ವರು ಎಂ.ಎ. ಮಾಡಕ್ಕೆ ಮೈಸೂರಿಗೆ ಕಾಲಿಡ್ತಿದ್ದಾಳೇಂತ ತಿಳಿದ ತಕ್ಷಣ…….”
“ತಿಳಿದ ತಕ್ಷಣ ಏನಾಯ್ತು?”
“ನಿಮ್ಮಕ್ಕ ಮನೆಕೆಲಸದವಳನ್ನು ಬಿಡಿಸಿಬಿಟ್ಟರಂತೆ. ಅದಕ್ಕೆ ಮರೂಗೆ ಭಯವಾಗಿ ಮಾನಸ ಜೊತೆ ರ‍್ತಿದ್ದಾಳೆ” ಜಾನಕಿ ಹೇಳಿದಾಗ ಎಲ್ಲರೂ ಜೋರಾಗಿ ನಕ್ಕರು.
“ಇಲ್ಲೇನು ಅವಳಿಗೆ ಕೆಲಸ ಕಡಿಮೆಯಿರೋದು? ದುಡಿಯಕ್ಕೆ ಹೋಗ್ತೀನೀಂತ ನೀವು ಅಡಿಗೆ ಮನೆಗೆ ಕಾಲಿಡಲ್ಲ. ಮಗು ಜವಾಬ್ಧಾರೀನೂ ತೆಗೆದುಕೊಳ್ಳಲ್ಲ. ವರು ಕೆಲಸಕ್ಕೆ ಹೆದರುವ ಹಾಗಿದ್ದಿದ್ರೆ ಯಾವತ್ತೋ ಓಡಿಹೋಗ್ತಿದ್ದಳು” ಎಂದಳು ಶೋಭಾ.
“ಏನಕ್ಕ ನನ್ನನ್ನು ದೂರುತ್ತೀರಾ? ದೇವಕಿ ತುಂಬಾ ಕೆಲಸ ಮಾಡ್ತಾಳಾ?” ಜಾನಕಿ ಧ್ವನಿ ಏರಿಸಿದಳು.
“ಸಾಕು ಮಾತು. ಯಾರ‍್ಯಾರು ಎಷ್ಟು ಕೆಲಸವಂತರು ಅನ್ನುವುದು ನನಗೆ ತಿಳಿದಿದೆ. ಮಾತಾಡಿದ ತಕ್ಷಣ ನನ್ನ ಹಾಗೂ ಶೋಭಾಳ ಕೆಲಸದ ಹೊರೆ ಕಡಿಮೆಯಾಗಲ್ಲ. ವರು ಬಗ್ಗೆ ಯಾರೂ ಮಾತಾಡುವ ಅಗತ್ಯವಿಲ್ಲ” ಶಕುಂತಲಾ ಗದರಿದರು.

ಹತ್ತು ಗಂಟೆಗೆ ವಾರುಣಿ ತಂದೆಯ ಜೊತೆ ಮಾನಸಳ ಕಾರು ಹತ್ತಿದಳು. ಶಕುಂತಲಾ ಮಧ್ಯಾಹ್ನಕ್ಕೆ ವಾಂಗಿಭಾತ್, ಮೊಸರನ್ನ ಕೊಟ್ಟಿದ್ದರು.
ಒಂದು ಗಂಟೆಯ ಹೊತ್ತಿಗೆ ತಂದೆ-ಮಗಳು ಪಾರ್ವತಿ ಮನೆಯಲ್ಲಿದ್ದರು. ಮಾನಸ ಅವರಿಗೆ ಗಂಗೋತ್ರಿ ಕ್ಯಾಂಪಸ್ ತೋರಿಸಿಕೊಂಡು ಬಂದು, ಮನೆಯ ಓನರ್ ಪರಿಚಯ ಮಾಡಿಸಿದ್ದಳು. ಸಿಂಧು, ಕೃತಿಕಾ ಬಂದಿರಲಿಲ್ಲ.
“ಅಂಕಲ್ ನೀವು ಕಾರ್ ತೊಗೊಂಡು ವಿದ್ಯಾರಣ್ಯಪುರಂಗೆ ಹೋಗಿ. ಅದೇ ಕಾರ್‌ನಲ್ಲಿ ಬೆಂಗಳೂರಿಗೆ ವಾಪಸ್ಸಾಗಬಹುದು.”
ಮನೆಯ ಮುಂದೆ ಕಾರು ನಿಂತಾಗ ಪಾರ್ವತಿ ಮುಖ ಊದಿಸಿಕೊಂಡೇ ಬಾಗಿಲು ತೆಗೆದರು.

“ಏನೋ ಸೀನು ಕಾರ್‌ನಲ್ಲಿ ಓಡಾಡಕ್ಕೆ ಪ್ರಾರಂಭಿಸಿದ್ದೀಯಾ? ಶ್ರೀಮಂತ ಆಗಿಬಿಟ್ಟೆ ಬಿಡು.”
“ನನ್ನ ಶ್ರೀಮಂತಿಕೆ ನಿನಗೆ ಗೊತ್ತಿಲ್ವಾ ಅಕ್ಕ. ಮಾನಸ ಮೈಸೂರಿಗೆ ಬರುವಾಗ ನಮ್ಮನ್ನು ಕರ‍್ಕೊಂಡು ಬಂದಳು ಅಷ್ಟೆ.”
“ಏನೇ ವರು ಇಂಗ್ಲೀಷ್ ಎಂ.ಎ.ಗೆ ಸೇರ್ತಿದ್ದೀಯಂತೆ.”
“ಸೇರಾಗಿದೆ ಅತ್ತೆ. ಗುರುವಾರದಿಂದ ಕ್ಲಾಸ್ ಶುರು.”
ಕೂತ್ಕೊಳ್ಳಿ. ಹೇಳಿ ಹೋಗಕ್ಕೆ ಬಂದಿದ್ದೀರಾಂತ ಕಾಣತ್ತೆ. ಸುಮ ನೀರು ಕೊಡು.”
“ವರು ನೀನು ನಮ್ಮನೆಯಲ್ಲೇ ಇರಬಹುದಿತ್ತಲ್ವಾ?”
“ತುಂಬಾ ಓದೋದು ಇರುತ್ತದೆ. ಲೈಬ್ರರಿವರ್ಕ್ ಇರುತ್ತದೆ. ಇಲ್ಲಿಂದ ಓಡಾಡೋದು ಕಷ್ಟ……..”

“ಸೀನು ಇವಳಿಗೆ ಈ ಓದು ಬೇಕಾಗಿತ್ತಾ? ಬೆಂಗಳೂರಿನಲ್ಲಿ ಒಂದು ಕೆಲಸ ನೋಡಿಕೊಂಡಿದ್ರೆ ಆಗ್ತಿತ್ತು. ನಾಗರಾಜಂಗೂ ಬೆಂಗಳೂರಲ್ಲಿ ಕೆಲಸ ನೋಡು. ಆದಷ್ಟು ಬೇಗ ಮದುವೆ ಮುಗಿಸೋಣ. ಗಂಡ-ಹೆಂಡತಿ ಇಬ್ಬರೂ ದುಡಿಯಲಿ ಹೇಗೂ ಇರುವುದಕ್ಕೆ ನಿಮ್ಮನೆ ಇದೆ………..”
“ಇಲ್ಲ ಅತ್ತೆ. ನಾನು ಎಂ.ಎ. ಓದಿ ಕೆಲಸಕ್ಕೆ ಸೇರಬೇಕು. ಇನ್ನು ಮೂರು-ನಾಲ್ಕು ವರ್ಷ ನಾನು ಮದುವೆ ಆಗಲ್ಲ.”
“ನೋಡೋ ಸೀನು ಹೇಗೆ ಮಾತಾಡ್ತಾಳೆ…….?”
“ಅವಳು ಎಂ.ಎ. ಮಾಡಲಿ ಬಿಡಕ್ಕ. ಆಮೇಲೆ ಮದುವೆ ಬಗ್ಗೆ ಯೋಚಿಸೋಣ.”
“ಊಟ ಆಯಿತೋ? ಮಾಡ್ತೀರೋ?”
“ಊಟ ಆಗಿದೆ ಅಕ್ಕ. ಶನಿವಾರ, ಭಾನುವಾರಗಳಲ್ಲಿ ವರು ಬರ‍್ತಿರ‍್ತಾಳೆ. ನಾವಿನ್ನು ಹೊರಡ್ತೀವಿ.”
“ನಾನು ಮುಂದಿನ ತಿಂಗಳು ಸುಮನ್ನ ಕರೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಬಿಡ್ತೀನಿ. ಅವಳು ಪಿ.ಯು.ಸಿ. ಪಾಸು ಮಾಡುವ ಹಾಗೆ ಮಾಡಿ. ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿಸು.”
“ಸುಮಾನ್ನ ಕೆಲಸಕ್ಕೆ ಸೇರಿಸ್ತೀಯಾ?”
“ಹುಂ. ಈಗಿನ ಕಾಲದಲ್ಲಿ ಹುಡುಗರು ಕೆಲಸದಲ್ಲಿರುವ ಹುಡುಗಿಯರೇ ಬೇಕು ಅಂತಾರೆ. ಸುಮ ಕೆಲಸದಲ್ಲಿದ್ದರೆ ಮದುವೆಗೆ ಅನುಕೂಲ ಅಲ್ವಾ?”
“ಆಗಲಿ ನೋಡೋಣ. ನಾವಿನ್ನು ಬರ‍್ತೀವಿ.”
ನಂತರ ಅವರು ಬಲ್ಲಾಳ ಸರ್ಕಲ್ ಹತ್ತಿರದ ಹೋಟೆಲ್‌ನಲ್ಲಿ ಊಟ ಮಾಡಿದರು. ಊಟದ ನಂತರ ಶ್ರೀನಿವಾಸರಾವ್ ಮಗಳನ್ನು ಸರಸ್ವತಿಪುರಂನಲ್ಲಿ ಬಿಟ್ಟು ಬೆಂಗಳೂರಿಗೆ ತೆರಳಿದರು.

ಈ ಕಾದಂಬರಿಯ ಹಿಂದಿನ ಪುಟ ಇಲ್ಲಿದೆ: http://surahonne.com/?p=43181

(ಮುಂದುವರಿಯುವುದು)
ಸಿ.ಎನ್. ಮುಕ್ತಾ

6 Comments on “ಕನಸೊಂದು ಶುರುವಾಗಿದೆ: ಪುಟ 2

  1. ಕಾದಂಬರಿ..ಓದಿಸಿಕೊಂಡುಹೋಯಿತು.. ಸಂಬಂಧ ಸನ್ನಿವೇಶ ಗಳ ಹೊಂದಾಣಿಕೆ ಮಾಡುವುದು ಎಷ್ಟು ಕಷ್ಟ ಎಂಬುದರ ತುಣುಕಿನ ಅನಾವರಣ ಚೆನ್ನಾಗಿ ಬಂದಿದೆ ಮೇಡಂ

    1. ನಿಜ ಜೀವನಕ್ಕೆ ಹತ್ತಿರವಾದ ಕಥೆ.ಚೆನ್ನಾಗಿದೆ.

  2. ಕುತೂಹಲಕಾರಿ ಕಥಾಹಂದರ…ಚೆನ್ನಾಗಿದೆ ಮೇಡಂ.

  3. ಬಹಳ ಚೆನ್ನಾಗಿದೆ. ಒಂದು ರೀತಿ ಖುಷಿ ಕೊಡುತ್ತೆ ಈ ಕಾದಂಬರಿಯ ಓದು.

  4. ಕಾದಂಬರಿ ಪ್ರಕಟಿಸುತ್ತಿರುವ ಹೇಮಮಾಲಾ ಅವರಿಗೆ ,ಕಾದಂಬರಿಯ ಕಂತುಗಳನ್ನು ಓದಿ ಅಭಿಪ್ರಾಯ ತಿಳಿಸಿರುವ ಆತ್ಮೀಯ ಗೆಳತಿಯರಿಗೆ ಧನ್ಯವಾದಗಳು..

  5. ಮನುಷ್ಯ ಸಹಜ ಗುಣ, ಅವಗುಣಗಳು ಕಥಾನಕದ ಪಾತ್ರಗಳಲ್ಲಿ ಹಾಸುಹೊಕ್ಕಾಗಿರುವಂತೆ ನೈಜವಾಗಿ ಮೂಡಿ ಬಂದಿದೆ.

Leave a Reply to C.N.Muktha Cancel reply

 Click this button or press Ctrl+G to toggle between Kannada and English

Your email address will not be published. Required fields are marked *