ಬಹಳ ಹಿಂದಿನಿಂದ, ಅನೇಕ ತಲೆಮಾರುಗಳ ಹಿಂದಿನಿಂದ ನಮ್ಮ ಹಿರಿಯರು, ಕೆಲವು ದಶಕಗಳವರೆಗೆ ಈ ತಲೆಮಾರಿನ ನಾವೂ ಅಂಗಡಿ ಸಾಮಾನು ತರಲು, ಅಂಗಡಿಗೆ ಹೋಗುವಾಗ, ತರಕಾರಿ ಮಾರುಕಟ್ಟೆಗೆ ತರಕಾರಿ ತರಲು ಹೋಗುವಾಗ ನಮ್ಮ ಅನೇಕ ವರ್ಷಗಳಿಂದ ನಮ್ಮ ಮನೆಯಲ್ಲಿದ್ದ ಬಟ್ಟೆಯ ಚೀಲವನ್ನ ಮರೆಯದೇ ಒಯ್ಯುತ್ತಿದ್ದೆವು. ಆಗ ಈಗಿನಷ್ಟು ಪ್ಲಾಸ್ಕಿಕ್ ಮಯ ಜೀವನ ನಮ್ಮದಾಗಿರಲಿಲ್ಲ. ಕಡೆಯ ಪಕ್ಷ ನಮ್ಮ ಜೇಬಿನಲ್ಲಿರುತ್ತಿದ್ದ ದೊಡ್ಡ ಕರವಸ್ತ್ರದಲ್ಲಿ ಅವುಗಳನ್ನು ಕಟ್ಟಿ ತರುತ್ತಿದ್ದೆವು. ಆಗ ಎರಡು ರೀತಿ ನಮಗೇ ಅನುಕೂಲವಿತ್ತು. ಪ್ರತೀ ಬಾರಿ ಅಂಗಡಿಯವನಿಗೆ ಪ್ಲಾಸ್ಕಿಕ್ ಬ್ಯಾಗ್ ಕೊಡು ಎಂದು ಹಲ್ಲು ಗಿಂಜಬೇಕಿರಲಿಲ್ಲ; ಪ್ರತೀ ಬಾರಿ ಅಂಗಡಿಯವನಿಗೆ ದುಡ್ಡು ಕೊಟ್ಟು ಅದನ್ನು ಕೊಳ್ಳಬೇಕಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ಅನೇಕ ಅಂಗಡಿಯವರು, ಹಳೆಯ ನ್ಯೂಸ್ ಪೇಪರ್‌ನಿಂದ ತಯಾರಿಸಿದ ಕಾಗದದ ಬ್ಯಾಗ್‌ಗಳಲ್ಲಿ ಸಾಮಾನುಗಳನ್ನ ಕೊಡುತ್ತಿದ್ದರು.
ಈಗ ಮನೆಯ ಮುಂದೆ ತಳ್ಳುವ ಗಾಡಿಯಲ್ಲಿ ಬರುವ ತರಕಾರಿ ಮಾರಾಟಗಾರರು ತಮ್ಮ ತರಕಾರಿಯನ್ನೂ, ಕರಿಬೇವು, ಕೊತ್ತಂಬರಿ ಮುಂತಾದ ಸೊಪ್ಪುಗಳನ್ನೂ ಪ್ಲಾಸ್ಕಿಕ್ ಬ್ಯಾಗ್‌ನಲ್ಲೇ ಕೊಡುತ್ತಾರೆ. ಹಾಲು, ಮೊಸರು ಮಾರುವ ಅಂಗಡಿಯವರೂ ಪ್ಲಾಸ್ಕಿಕ್ ಬ್ಯಾಗ್ ಕೊಡುತ್ತಾರೆ. ತಳ್ಳುವ ಗಾಡಿಯಲ್ಲಿ ಮಿರ್ಚಿ, ಬಜ್ಜಿ, ಬೊಂಡಾ ಮಾರುವವರು ಬಿಸಿ ಬಿಸಿ ಎಣ್ಣೆಯಲ್ಲಿ ಕರಿದ ಆ ಪದಾರ್ಥಗಳನ್ನೂ ಪ್ಲಾಸ್ಕಿಕ್ ಚೀಲದಲ್ಲಿ ಹಾಕಿಕೊಡುತ್ತಾರೆ. ಪ್ಲಾಸ್ಕಿಕ್ ಚೀಲದ ಬಳಕೆ ಹೆಚ್ಚಿದೆ – ಜೊತೆಗೆ ಬಿಸಿ ತಿಂಡಿ ಕಟ್ಟಲ್ಪಟ್ಟ ಪ್ಲಾಸ್ಕಿಕ್‌ನಿಂದ ಜನರ ಆರೋಗ್ಯವೂ ಹಾಳಾಗುತ್ತದೆ. ಹಾಗೆಯೇ ಚಿಕ್ಕಪುಟ್ಟ ಹೋಟೆಲ್‌ಗಳಲ್ಲಿ ಮೆಸ್‌ಗಳಲ್ಲಿ ಪ್ಲಾಸ್ಕಿಕ್ ಚೀಲದಲ್ಲಿ ಇಡ್ಲಿ, ದೋಸೆ, ರೊಟ್ಟಿ, ಚಟ್ನಿ, ಸಾಂಬಾರು ಕಟ್ಟಿಕೊಟ್ಟಾಗ ಜನ ಏನು ಯೋಚಿಸುತ್ತಾರೆ ಗೊತ್ತೇ?. “ಈ ಕ್ಷಣದಲ್ಲಿ ನಾವು ಮನೆಯಿಂದ ಚೀಲ ತಂದಿಲ್ಲ, ಅದನ್ನ ಎಲ್ಲಿ ಅಂಗಡಿಯಲ್ಲಿ ದುಡ್ಡು ಕೊಟ್ಟು ಕೊಳ್ಳುವುದು? ಇವರಾದರೂ ನಮಗೆ ಹುಡುಕುವ ಕಾಟ ಕೊಡದೇ ಈ ಪದಾರ್ಥಗಳನ್ನ ನಮಗೆ ಉಚಿತವಾಗಿ ಸುಲಭವಾಗಿ ಲಭ್ಯಮಾಡಿಕೊಡುವ ಪುಣ್ಯಾತ್ಮರು”.
ಅಂಗಡಿ, ಹೋಟೆಲ್ ಗಾಡಿ ತಳ್ಳುವವರಿಗೆ ವ್ಯಾಪಾರ ಹೆಚ್ಚಬೇಕು, ಅದಕ್ಕಾಗಿ ಪ್ರತಿ ಗಿರಾಕಿಗೆ ಕಾಗದದ ಚೀಲ, ಕಾಗದದ ಬಾಕ್ಸ್ ಎಲ್ಲಿಂದ ಕೊಡುವುದು? ಆದಷ್ಟು ಕಡಿಮೆ ದರದಲ್ಲಿ ಈ ಪದಾರ್ಥ ಬಯಸುವ, ಕೊಳ್ಳುವ ಗಿರಾಕಿಗಳಿಗೆ ಹೆಚ್ಚಿನ ಹಣ ಕೇಳಿದರೆ ತಮ್ಮ ವ್ಯಾಪಾರ ಎಲ್ಲಿ ಕಡಿಮೆಯಾಗುವುದೋ ಎಂಬ ಗಾಬರಿ. ಈಗೀಗ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ, ಎಕ್ಸೆಟ್ರಾ ಹಣ ಪಡೆದು ಕಾಗದದ ಅಥವಾ ಅದರಿಂದ ಮಾಡಿದ ರಟ್ಟಿನ ಡಬ್ಬಗಳಲ್ಲಿ ತಿಂಡಿ ಪದಾರ್ಥಗಳನ್ನ ಪ್ಯಾಕ್ ಮಾಡಿಕೊಡುತ್ತಾರೆ. ಈಗ ಯಾರಿಗೂ ತಾವೊಬ್ಬರು ತಮ್ಮ ಸೋಮಾರಿತನದ – ತಕ್ಷಣದ ಅನುಕೂಲದ ಕಾರಣಕ್ಕಾಗಿ ಬಳಸುವ ಪ್ಲಾಸ್ಕಿಕ್, ಸಾವಿರಾರು ಜನ ಈ ರೀತಿ ಬಳಸಿದಾಗ ಆ ಪ್ಲಾಸ್ಕಿಕ್ ಕಸ ಎಷ್ಟಾಗುತ್ತದೆ ಎಂದು ಖಂಡಿತ ಊಹೆ ಮಾಡುವುದಿಲ್ಲ. ಪ್ರತಿದಿನ ನಮ್ಮ, ನಿಮ್ಮ ಮನೆಯ ಮುಂದೆ ಬರುವ ಪೌರ ಕಾರ್ಮಿಕರು ತರುವ ಹಸಿ-ಒಣ ಕಸದ ಡಬ್ಬಿಗಳಲ್ಲಿ ಪ್ರತಿ ಮನೆಯ ಜನರೂ ಹಾಕುವ ಕಸದಲ್ಲಿ ಕಾಗದದ ಅಂಶಕ್ಕಿಂತ ಪ್ಲಾಸ್ಕಿಕ್ ಅಂಶವೇ ಹೆಚ್ಚು. ದೊಡ್ಡ ಪ್ರಮಾಣದಲ್ಲಿ ಈ ಕಸದ ರಾಶಿಗೆ ಬೆಂಕಿ ಹಾಕಿದರೆ ಅದು ಗಾಳಿಗೆ ಬಿಡುವ ವಿಷ ವಾಯುವಿನಿಂದ ಎಷ್ಟೋ ಜನರಿಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗಿರುವುದನ್ನ ಅನುಭವಿಸಿದವರೇ ಬಲ್ಲರು. ಅವಸರದಲ್ಲಿ, ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಇರುವ ಯುವಜನರು, ಮಹಿಳೆಯರು, ಮಕ್ಕಳು ಕಾಗದದ ಚೀಲ ಬಳಸದಿದ್ದರೆ ಅವರನ್ನು ಶೇಕಡಾ 1ರಷ್ಟಾದರೂ ಕ್ಷಮಿಸಬಹುದೇನೋ! ಆದರೆ ಮನೆಯಲ್ಲಿರುವ ಗೃಹಿಣಿಯರು, ಹಿರಿಯ ನಾಗರೀಕರು, ನಿವೃತ್ತಿ ಹೊಂದಿದವರು ಕಾಗದದ ಚೀಲ ಬಳಸದೇ ಪ್ಲಾಸ್ಕಿಕ್ ಚೀಲ ಬಳಸಿದರೆ ಅವರಿಗೆ ಬಹುಶಃ ಪ್ರಕೃತಿ – ಆ ದೈವ ಕ್ಷಮಿಸಲಾರದೇನೋ!
ಇಲ್ಲಿ ಇನ್ನೊಂದು ಯೋಚನೆ. ಬಟ್ಟಯ ಚೀಲ ಒಯ್ಯುತ್ತಿದ್ದಾಗ ಹೆಚ್ಚಿನ ಜನ ಪೇಪರ್ ಕೊಳ್ಳಲು, ತರಕಾರಿ ಕೊಳ್ಳಲು, ಅಂಗಡಿ ಸಾಮಾನು ಕೊಳ್ಳಲು, ನಡೆದೇ ಹೋಗುತ್ತಿದ್ದರು. ಅವರಿಗೆ ಆಗ ಆ ವಾಕಿಂಗ್‌ನಿಂದ ಆರೋಗ್ಯ ರಕ್ಷಣೆ ಲಭಿಸುತ್ತಿತ್ತು. ಅದು ಸಹಜವಾಗಿ ದೇಹಕ್ಕೆ ವ್ಯಾಯಾಮ, ಮನಸ್ಸಿಗೆ ಆರಾಮ, ಮುದವನ್ನೂ ಕೊಡುತ್ತಿತ್ತು. ಈಗ ಕಾಗದ – ಬಟ್ಟೆಯ ಚೀಲ ಬಳಸಲು ಜನರಿಗೆ ಮನಸ್ಸೇ ಇಲ್ಲ. ದಿಢೀರ್ ಜೀವನದಲ್ಲಿ ಬೈಕ್‌ನಲ್ಲಿ ಹೋಗಬೇಕು, ಬೆಂಗಳೂರಿನಂಹ ನಗರದಲ್ಲಿ ಜಿಲ್ಲೆಯ ನಗರಗಳಲ್ಲಿ ಒಂದೊದು ಮನೆಗಳಲ್ಲೂ ಇರುವ 3-4 ಕಾರೋ, ಬೈಕೋ, ನಿರ್ವಹಣೆ ಮಾಡುವುದರಲ್ಲಿ ಈ ವಿಷಯಗಳತ್ತ ಯಾರಿಗಿದೆ ಗಮನ? ಕೇಂದ್ರ ಹಾಗೂ ರಾಜ್ಯದ ಪರಿಸರ – ಆರೋಗ್ಯ – ಅರಣ್ಯ ಇಲಾಖೆಗಳ, ವಿಜ್ಞಾನಿಗಳು – ತಜ್ಞರು ಇಡೀ ಪ್ರಪಂಚದಲ್ಲಿ ಹಿಂದಿನಿಂದ ಇಂದಿನವರೆಗೆ ನಡೆಯುತ್ತಿರುವ ಸಂಶೋಧನೆಗಳಲ್ಲಿ ಪ್ಲಾಸ್ಕಿಕ್‌ಅನ್ನು ಭಾರೀ ಆಘಾತಕಾರಿ ವಿಷ, ತ್ಯಾಜ್ಯ ಎಂದು ಘೋಷಿಸಿದ್ದಾರೆ. ಇದು ಯಾಕೆ? ಈ ಪ್ರಶ್ನೆಗೆ ಉತ್ತರಕ್ಕಾಗಿ ಮುಂದಿನ ಮಾಹಿತಿ ಓದಿ.
ಎಲ್ಲೆಡೆ ಪಸರಿಸಿರುವ ಪ್ಲಾಸ್ಕಿಕ್ ಚೀಲ, ಅದು ಒಡ್ಡುವ ಅಪಾಯದ ಮಧ್ಯದಲ್ಲೂ, ನಮ್ಮ ಪ್ರತಿನಿತ್ಯದ ಜೀವನದ ಭಾಗವಾಗಿರುವುದು ಎಂಥ ವಿಪರ್ಯಾಸ!?. ಪ್ರತಿ ನಿಮಿಷ ಪ್ರಪಂಚ 1 ದಶಲಕ್ಷ ಪ್ಲಾಸ್ಟಿಕ್ ಅಂಗಡಿ ಚೀಲ ಬಳಸುತ್ತಿದ್ದು, ಪ್ರಪಂಚದಲ್ಲೇ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುವ ದೇಶಗಳಲ್ಲಿ ಒಂದಾಗಿದೆ. ನಮ್ಮ ಭಾರತ. ಎಲ್ಲೆಂದರಲ್ಲಿ ಕಾಣುವ ಪ್ಲಾಸ್ಟಿಕ್ ಚೀಲದ ಕಸ ಪರಿಸರದ ದೊಡ್ಡ ಸಮಸ್ಯೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಪ್ರತಿಬಂಧಿಸಲಾಗಿದ್ದರೂ, ಅನುಷ್ಠಾನ ಪ್ರಶ್ನೆಯಾಗಿದೆ. ಹೀಗಾಗಿ ಪ್ಲಾಸ್ಟಿಕ್ ಚೀಲಗಳ ಭಾರೀ ಸಂಗ್ರಹ ಏರೇರುತ್ತಿದೆ. ನಾಗರಿಕರು ಯಾಕೆ ಇದರ ಬಳಕೆ ನಿಲ್ಲಿಸಬೇಕು? ಇದು ಗ್ರಹಕ್ಕೆ ಮಾರಕವೇ? ಇಲ್ಲಿ 5 ಮುಖ್ಯ ಕಾರಣಗಳಿವೆ.
ನಾಶವಾಗದ ಪ್ಲಾಸ್ಟಿಕ್:- ಈಗಾಗಲೇ ಉತ್ಪಾದಿಸಲ್ಪಟ್ಟ ಪ್ಲಾಸ್ಟಿಕ್ ನಾಶವಾಗಲು ಇನ್ನೂ ಸಾವಿರ ವರ್ಷ ಬೇಕು. ಮರುಬಳಕೆ ಒಳ್ಳೆಯದು. ಆದರೆ ಶೇಕಡಾ 1ಕ್ಕಿಂತ ಕಡಿಮೆ ಚೀಲಗಳು ಪುನರ್ ಬಳಕೆ ಕಾರಖಾನೆಗಳಿಗೆ ಹೋಗುತ್ತಿವೆ. ಉಳಿದದ್ದೇ ಪರಿಸರ ಸಮಸ್ಯೆಯಾಗಿದೆ.
ಪ್ಲಾಸ್ಟಿಕ್ ಚೀಲದ ವಿನಾಶಕಾರಿ ಪರಿಣಾಮ:- ಭೂಮಿ-ನದಿಗಳು-ಸಮುದ್ರಗಳಲ್ಲಿ ಸ್ವಚ್ಛಂಧವಾಗಿ ಪ್ಲಾಸ್ಟಿಕ್ ಎಸೆಯುವುದರಿಂದ ಆಹಾರ ಸರಪಳಿಯ ಭಾಗವಾಗಿ, ಅಲ್ಲಿಯ ಪ್ರಾಣಿಗಳು ಪ್ಲಾಸ್ಟಿಕ್ ಅನ್ನು ಆಹಾರವಾಗಿ ತಿಂದು ಸಾಯುತ್ತಿವೆ. ಪ್ರತಿವರ್ಷ 1 ಲಕ್ಷ ಸಮುದ್ರದಲ್ಲಿಯ ಜಲಚರಗಳು ಪ್ಲಾಸ್ಟಿಕ್ ತೊಡಕಿನಿಂದ ಸತ್ತರೆ, ಸುಮಾರು 1 ದಶಲಕ್ಷ ಸಮುದ್ರ ಹಕ್ಕಿಗಳು ಪ್ಲಾಸ್ಟಿಕ್ ತಿಂದು ಸಾಯುತ್ತಿವೆ ಕಾರಣ ಪ್ಲಾಸ್ಟಿಕ್ ಜೀರ್ಣವಾಗುವುದಿಲ್ಲ. ಅದೇ ಪ್ಲಾಸ್ಟಿಕ್ ಚೀಲ ಅನೇಕ ಸಾವಿರಾರು ಪ್ರಾಣಿಗಳನ್ನು ಕೊಲ್ಲುತ್ತವೆ. ಯಾಕೆಂದರೆ ಪ್ರಾಣಿ ಸತ್ತಾಗ ಅದರ ದೇಹ ವಿಭಜಿಸಲ್ಪಟ್ಟು ನಾಶವಾದರೂ, ಪ್ಲಾಸ್ಟಿಕ್ ಹಾಗೇ ಉಳಿದು ಮತ್ತೆ ಪರಿಸರ ಸೇರಿ, ಇನ್ನೊಂದು ಪ್ರಾಣಿಯ ಸಾವಿಗೆ ಕಾರಣವಾಗುವ ವಿಷವರ್ತುಲವಾಗುತ್ತದೆ. ಪ್ರಪಂಚದ ಸಾಗರಗಳಲ್ಲಿ 5 ಟ್ರಿಲಿಯನ್ (ಒಂದು ಮಿಲಿಯನ್ ಮಿಲಿಯನ್) ಪ್ಲಾಸ್ಟಿಕ್ ಚೂರುಗಳಿವೆ.
ಸ್ವಾಭಾವಿಕ ಸಂಪನ್ಮೂಲಗಳನ್ನು ಬರಿದಾಗಿಸುತ್ತದೆ.:- ಪ್ಲಾಸ್ಟಿಕ್ ಚೀಲ ಮಾಡಲು ಬಳಸುವ ಪೆಟ್ರೋಲಿಯಂ ಅನಿಲಗಳು ಮಿತ ಸಂಪನ್ಮೂಲವಾಗಿದ್ದು, ನಮ್ಮಲ್ಲಿ ಇವು ಅಪರಿಮಿತವಾಗಿಲ್ಲ. ಪ್ಲಾಸ್ಟಿಕ್ ಚೀಲಗಳು ಶಕ್ತಿ ಬಳಸುತ್ತವೆ.
ಬೇಕಾದ ಅಪಾರ ಶಕ್ತಿ :- 9 ಪ್ಲಾಸ್ಕಿಕ್ ಚೀಲ ತಯಾರಿಸುವ ಶಕ್ತಿ, ಒಂದು ಕಾರು 1 ಕಿ.ಮಿ ಚಲಿಸಲು ಬೇಕಾಗುವಷ್ಟು ಇಂಧನ ಬಳಸುತ್ತೆ.
ಪ್ರವಾಹ ಬರಲು ಕಾರಣ:- ಒಳಚರಂಡಿಗಳ ಹರಿವಿಗೆ ಅಡ್ಡಿ ಬರುತ್ತವೆ. ಪ್ಲಾಸ್ಟಿಕ್ ಚೀಲಗಳು. ಯಾವಾಗ ಚೀಲ ಎಸೆಯುತ್ತೇವೋ ಅದು ಭೂ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಎಸೆಯಲ್ಪಟ್ಟ ಪ್ಲಾಸ್ಟಿಕ್ ಚೀಲ ದೀರ್ಘಕಾಲ ಸೂರ್ಯನ ಬೆಳಕಿಗೆ ತೆರೆದುಕೊಂಡರೆ, ಸೂರ್ಯನ ಕಿರಣಗಳಲ್ಲಿಯ ನೇರಳಾತೀತ ಕಿರಣಗಳು ಪ್ಲಾಸ್ಟಿಕ್‌ನ್ನು ಚೂರು ಚೂರು ಮಾಡುತ್ತವೆ. ಈ ಚೂರುಗಳು ಮಣ್ಣಿನಲ್ಲಿ ಸೇರಿ ಸರೋವರದ ಕೆಸರಿನಲ್ಲಿ ಸೇರಿ ಭೂ ಮಾಲಿನ್ಯಕ್ಕೆ ಕೊಡುಗೆ ನೀಡಿ, ಪರಿಸರದಲ್ಲಿ ಕಸರಾಶಿಯ ತೇಪೆ ಕಾಣುತ್ತದೆ. ಪ್ರತಿದಿನ ಈ ದೇಶದಲ್ಲಿಯ ಪ್ಲಾಸ್ಟಿಕ್ ಉತ್ಪಾದನೆ ಎಷ್ಟು ಗೊತ್ತೇ? ಅದು 15000ಟನ್. ಭಾರತೀಯ ಪೆಟ್ರೋಲಿಯಂ ಸಂಸ್ಥೆ, ಪ್ಲಾಸ್ಟಿಕ್‌ನಿಂದ ಇಂಧನ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ ಎಂದು ಕೇಳಿದರೆ ಅಚ್ಚರಿಯಾಗಬಹುದು. ನಿಮಗೆ ದಿನೇ ದಿನ ಪ್ಲಾಸ್ಟಿಕ್‌ನ ಮೇಲಿನ ಅವಲಂಬನೆ ಹೆಚ್ಚಿದಂತೆ, ಅದರ ವಿಲೇವಾರಿ ಸಹ ದುರ್ಗಮವಾಗಿದೆ. ಆದರೆ ಅನೇಕ ವರ್ಷಗಳಿಂದ ತ್ಯಾಜ್ಯದಿಂದ ಅಸ್ತಿ ನಿರ್ಮಾಣದ ಅನೇಕ ಪ್ರಯತ್ನಗಳು ನಡೆದು ಪುನರ್ ಚಕ್ರ ಹಾಗೂ ಪುನರ್ ಬಳಕೆಗಾಗಿ ಅನೇಕ ನವೀನ ಮಾರ್ಗಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಗೃಹಬಳಕೆ ಹಾಗೂ ಕೈಗಾರಿಕಾ ಉದ್ದೇಶಗಳಿಗಾಗಿ.
ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಉತ್ಪಾದನೆ:- ಸ್ವಚ್ಛ ಭಾರತ ಅಭಿಯಾನದ ಮೂಲಕ ತ್ಯಾಜ್ಯ ನಿರ್ವಹಣೆ ಬಗ್ಗೆ ಕೇಂದ್ರ ಸರಕಾರದ ಗಮನ ಕೇಂದ್ರಿಕರಿಸಲ್ಪಟ್ಟಿದೆ. ಈಗಾಗಲೇ ಜಪಾನ್, ಜರ್ಮನಿ ಹಾಗೂ ಅಮೇರಿಕಾ ದೇಶಗಳಲ್ಲಿ ಈ ಬದಲಾವಣೆ ಸಾಕಷ್ಟು ಯಶಸ್ಸು ಕಂಡಿದೆ. ಡೆಹರಾಡೋನ್‌ದಲ್ಲಿಯ ಭಾರತೀಯ ಪೆಟ್ರೋಲಿಯಂ ಸಂಸ್ಥೆ 2014ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಶೆಕಡಾ 60 ಭಾಗವಾಗಿರುವ ಪಾಲಿಥೈಲಿನ್ ಹಾಗೂ ಪಾಲಿಪ್ರಾಪೈಲಿನ್‌ಗಳನ್ನು, ಗ್ಯಾಸೋಲಿನ್ ಅಥವಾ ಡೀಸೆಲ್ ಆಗಿ ಪರಿವರ್ತಿಸುವ ತಂತ್ರಜ್ಞಾನ ಕಂಡುಹಿಡಿದಿದೆ. ಇದರಿಂದ ಒಂದು ಕಿಲೋಗ್ರಾಂ ಪ್ಲಾಸ್ಟಿಕ್‌ನಿಂದ 750 ಮಿ.ಲಿ. ಗ್ಯಾಸೋಲಿನ್ ಉತ್ಪಾದನೆ ಮಾಡಬಹುದು. ಇದರಿಂದ ಪ್ರತಿ ಲೀಟರ್‌ಗೆ ಕನಿಷ್ಠ 2 ಕಿಲೋಮೀಟರ್ ಹೆಚ್ಚು ಓಡಲಿದೆ ವಾಹನ. ಈ ತಂತ್ರಜ್ಞಾನದಿಂದ ಬರುವ ಇಂಧನದಲ್ಲಿ ಗಂಧಕವಿರದೇ ಅದು ಶುದ್ಧವಾಗಿದ್ದು ಯೂರೋ-3 ಮಟ್ಟದ್ದಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು ವಿಷಕಾರಿ ವಸ್ತುಗಳಿಂದ ದೂರವಾಗಿದೆ. ಪೆಟ್ರೋಲಿಯಂ ಹಾಗೂ ಡೀಸೆಲ್ ಉತ್ಪಾದನೆ ಜೊತೆಗೆ ನಗರಗಳು ಹಾಗೂ ಶಹರಗಳು ಪ್ಲಾಸ್ಟಿಕ್ ಮುಕ್ತವಾಗಲಿವೆ ಮಹಾರಾಷ್ಟ್ರದ ಪುಣೆಯಲ್ಲಿ ಮೇದಾ ತಡಪತ್ರಿಕಾರ್ ಯಾವುದೇ ಆಕರ್ಷಕ ಪ್ರಯೋಗ ಶಾಲೆ ಅಥವಾ ವೈಜ್ಞಾನಿಕ ಹಿನ್ನಲೆಯಿಲ್ಲದೇ, ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಧನ ಉತ್ಪಾದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. 2009ರಲ್ಲಿ ಇವರು ತಮ್ಮ ಸ್ನೇಹಿತ ಶಿರೀಶ್ ಫಡ್ತಾರೆ ಅವರೊಂದಿಗೆ, ಸುತ್ತಲೂ ಸುರಿದಿದ್ದ ಪ್ಲಾಸ್ಟಿಕ್ ನೋಡಿ ಹೌಹಾರಿ, ಇದರಿಂದ ಏನಾದರೂ ಮಾಡಲು ಸಾಧ್ಯವೇ ಎಂದು ಯೋಚಿಸಿ, ಸುದೀರ್ಘ ಸಂಶೋಧನೆ ಮಾಡಿ ಪುಣೆಯಲ್ಲಿ ರುದ್ರ ಪರಿಸರ ಪರಿಹಾರ ಕಾರ್ಖಾನೆ ಸ್ಥಾಪಿಸಿದರು. ಪ್ಲಾಸ್ಕಿಕ್‌ನ್ನು ಕಚ್ಛಾ ತೈಲದಿಂದ ಮಾಡಿರುವುದರಿಂದ ಈ ಸಂಸ್ಕರಣೆಯನ್ನು ಉಲ್ಟಾ ಮಾಡಲು ಬಯಸಿದರು. ಪ್ಲಾಸ್ಟಿಕ್ ಕಾಯಿಸುವುದರಿಂದ ಉತ್ಪನ್ನವಾಗುವ ಅನಿಲವನ್ನು ಯಂತ್ರಕ್ಕೆ ಉರಿ ಹಚ್ಚಲು ಬಳಸುತ್ತಿದ್ದಾರೆ. ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಚೂರು ಚೂರು ಮಾಡಿ ಅದನ್ನು ಪ್ರತಿಕ್ರಿಯಾಕಾರಿ ಯಂತ್ರದಲ್ಲಿ ರಾಶಿ ಹಾಕುತ್ತಾರೆ. ಅದಕ್ಕೆ ಪರಿವರ್ತನಾ ಪ್ರಚೋದಕ ಸೇರಿಸುತ್ತಾರೆ. 150 ಡಿಗ್ರಿ ತಾಪಮಾನದಲ್ಲಿ ಇದನ್ನು ಕಾಸುತ್ತಾರೆ. ಹೊರಬಂದ ಮೆಥೇನ್ ಹಾಗೂ ಪ್ರೊಪೇನ್‌ಗಳನ್ನು ಪ್ರತ್ಯೇಕ ಅನಿಲ ತೊಟ್ಟಿಗಳಲ್ಲಿ ಸಂಗ್ರಹಿಸುತ್ತಾರೆ. ಪಡೆದ ತೈಲವನ್ನು ಸೋಸಿ, ಸಂಗ್ರಹಿಸಿ ಹೊರ ಕಳಿಸುತ್ತಾರೆ. ಒಂಡು ಟನ್ ಪ್ಲಾಸ್ಟಿಕ್‌ನಿಂದ ಸುಮಾರು 600 ರಿಂದ 650 ಲೀಟರ್ ಇಂದನ. ಶೇಕಡಾ 25 ರಷ್ಟು ಅನಿಲಗಳು, ಶೇಕರಾ 5ರಿಂದ 10ರಷ್ಟು, ಸುಟ್ಟು ಕರಕಲಾದ ಕೃತಕ ಸಂಯೋಗದ ಉಳಿಕೆ ಸಿಗುತ್ತದೆ. ಕೊನೆಯದನ್ನು ಡಾಂಬರಿನ ಜೊತೆ ರಸ್ತೆ ತುಂಬಲು ಬಳಸಬಹುದು.ಗೋವಾದಲ್ಲಿ ಬೈಖೋಲಿಂ ಹಾಗೂ ಸಾನ್‌ಸೊಡ್ಡೋಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಎರಡು ಕಾರಖಾನೆಗಳಿವೆ. ಗೋವಾದಲ್ಲಿ ಪ್ರತಿದಿನ 66 ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವಿದ್ದು, ಈ ಕಾರಖಾನೆಗಳಿಗೆ ಭಾರೀ ಕೆಲಸವಿದೆ. ಹೈದರಬಾದ್‌ನ ವೆಂಟನ, ರಾಮ್ಕಿ ಪರಿಸರದೊಂದಿಗೆ ಸೇರಿ, ಅನೇಕ ತ್ಯಾಜ್ಯದಿಂದ ಇಂಧನ ಕಾರಖಾನೆಗಳನ್ನು ಸ್ಥಾಪಿಸುವುದಾಗಿ ಪ್ರಕಟಿಸಿತ್ತು.
ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ:-ಚೆನೈನಲ್ಲಿ 600 ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 1035 ಕಿ.ಮಿ ರಸ್ತೆ ನಿರ್ಮಿಸಲಾಗಿದೆ. ಇಂದೂರ್ ಶೇಕಡಾ 50 ಕ್ಕಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯವನ್ನು, ರಸ್ತೆ ನಿರ್ಮಾಣಕ್ಕೆ ಪರಿಸರ ಸ್ನೇಹಿಯಾಗಿ ಬಳಸಿದೆ. ಮಳೆಗಾಲದಲ್ಲಿ ಒಳಚರಂಡಿಗಳಲ್ಲಿಯ ನೀರಿನ ಹರಿವಿಗೆ ಅಡ್ಡವಾಗಿ, ನೀರು ಅಲ್ಲೇ ನಿಲ್ಲುವಂತೆ ತಡೆ ಯುವ ಪ್ಲಾಸ್ಟಿಕ್ ಪಾಲಿತೈನ್ ಚೀಲಗಳು, ಜೈವಿಕವಾಗಿ ನಾಶವಾಗುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್ ಬಳಸಿ ಕಟ್ಟಿದ ರಸ್ತೆಗಳಲ್ಲಿ ಯಾವುದೇ ಗುಂಡಿಗಳು, ಗಾಲಿಯ ಹಳ್ಳ, ಗಂಟು, ಗೋಜು, ತುದಿಸೀಳು ಬರುವುದಿಲ್ಲ ತಾರು ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ಚೂರುಗಳನ್ನು ಬೇರೆ ಬೇರೆಯಾಗಿ ಹೆಚ್ಚಿನ ತಾಪಮಾನದಲ್ಲಿ ಕಾಸಿ ಬೆರಸಿದಾಗ, ಅವೆರಡೂ ತಾಪ ಪೆಟ್ರೋಲಿಯಂ ಉತ್ಪನ್ನಗಳೇ ಆಗಿರುವುದರಿಂದ, ಅವು ಸೇರಿಕೊಳ್ಳುತ್ತವೆ. ಒಂದು ಕಿಲೋ ಡಾಂಬರಿಗೆ 20 ರೂ. ಆದರೆ ಒಂದು ಕಿಲೋ ಪ್ಲಾಸ್ಟಿಕ್ ಚೂರುಗಳ ಬೆಲೆ 10ರಿಂದ 20 ಪೈಸೆ. ಅಲ್ಲದೇ ಮಳೆಗಾಲದಲ್ಲಿ ನೀರು ನಿಲ್ಲುವುದು, ಇಂಗುವುದು ಈ ರಸ್ತೆಗಳಲ್ಲಿ ಆಗುವುದಿಲ್ಲ ಕೇರಳದ ಇಂಜನಿಯರಿಂಗ್ ಕಾಲೇಜಿನ ಕೆಲ್ವಿನ್ ಜಾಕಬ್ ಪ್ಲಾಸ್ಟಿಕ್ ತ್ಯಾಜ್ಯವಿರದ ದೇಶದ ಕನಸು ಕಂಡ. ತನ್ನ ಇತರ ಇಂಜಿನಿಯರ್ ಸ್ನೇಹಿತರ ಜೊತೆ ಸೇರಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಗಟ್ಟಿ ಇಟ್ಟಿಗೆಗಳನ್ನಾಗಿ ಪರಿವರ್ತಿಸಿದ. ಅದು ಪ್ಲಾಸ್ಟಿಕ್ ಚೀಲವಿರಲಿ, ಬಾಟಲಿಗಳಿರಲಿ, ಪೆನ್ನು, ಪೊಟ್ಟಣ, ಏನೇ ಇರಲಿ. ಇವುಗಳಿಂದ ಮಾಡಿದ ಈ ಇಟ್ಟಿಗೆಗಳು ಶೇಕಡಾ 88ರಷ್ಟು ಗಟ್ಟಿ ಹಾಗೂ ಸಾಂಪ್ರದಾಯಿಕ ಇಟ್ಟಿಗೆಗಳಿಗಿಂತ ಕಡಿಮೆ ನೀರು ಹೀರಿಕೊಳ್ಳುತ್ತವೆ. ಈ ಯುವ ಅಭಯಂತರ ಹಾಗೂ ಈತನ ಸ್ನೇಹಿತರು ಪ್ಲಾಸ್ಟಿಕ್‌ನಿಂದ ಇಂಧನ ತಯಾರಿಸಿ, ಪರೀಕ್ಷೆಗಾಗಿ ಭಾರತ್ ಪೆಟ್ರೋಲಿಯಂ ಸಂಸ್ಥೆಗೆ ಕಳಿಸಿದ್ದಾರೆ. ಇವರ ಯೋಜನೆ ಸೊನ್ನೆ ಮಾಲಿನ್ಯದ ವಿದ್ಯುತ್ ಕಾರಖಾನೆ ಸ್ಥಾಪಿಸಿ, ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ಇಟ್ಟಿಗೆ ಹಾಗೂ ಇಂಧನ ಉತ್ಪಾದಿಸಲಿದ್ದಾರೆ.
(ಜುಲೈ 12 ರಂದು ವಿಶ್ವ ಕಾಗದ ಚೀಲ ಬಳಸುವ ದಿನ)
–ಎನ್. ವ್ಹಿ. ರಮೇಶ್
ಮಾಹಿತಿ ಪೂರ್ಣ ಬರೆಹ..ಸಾರ್
Nice
ಮಹಾಮಾರಿಯಾಗಿ ಪರಿಣಮಿಸಿದ ಪ್ಲಾಸ್ಟಿಕ್ ಚೀಲದ ಬಳಕೆಗೆ ಪರ್ಯಾಯವಾಗಿ ಬಟ್ಟೆ ಅಥವಾ ಪೇಪರ್ ಚೀಲದ ಬಳಕೆಯ ಅಗತ್ಯತೆಯನ್ನು ಒತ್ತಿ ಹೇಳುವ ಲೇಖನವು ಚಿಂತನಯೋಗ್ಯವಾಗಿದೆ.
ಪರಿಸರ ಕಾಳಜಿಯುಳ್ಳ ಮಾಹಿತಿಪೂರ್ಣ ಲೇಖನ