ಪ್ರವಾಸ

ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-4

Share Button

ಮಾವೊರಿಗಳ ವಾಸಸ್ಥಳ -Maori House PC: Internet

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಮಾವೊರಿಗಳ ಸಾಂಸ್ಕೃತಿಕ ನೃತ್ಯ – ಹಾಕ
ಬಿಸಿನೀರ ಬುಗ್ಗೆಗಳನ್ನು ಇನ್ನೂ ಹತ್ತಿರದಿಂದ ನೋಡಲು ನಮ್ಮನ್ನು ಒಂದು ಜೀಪಿನಲ್ಲಿ ಕೂರಿಸಿಕೊಂಡು ಬೆಟ್ಟಗುಡ್ಡಗಳ ಮಧ್ಯೆ ಒಂದು ಸುತ್ತು ಹಾಕಿಸಿದರು. ಪ್ರಕೃತಿಯ ವಿಸ್ಮಯವನ್ನು ಕಂಡು ಬೆರಗಾದೆವು, ಬಿಸಿನೀರ ಕಾರಂಜಿಗಳ ರುದ್ರ ರಮಣೀಯ ನರ್ತನವನ್ನು ನೋಡುತ್ತಾ ಮಾವೊರಿಗಳ ಹಳ್ಳಿಯೊಂದರೊಳಗೆ ಹೋಗುವ ಅವಕಾಶ ಲಭಿಸಿತ್ತು. ಇಪ್ಪತ್ತೈದರಿಂದ ಮೂವತ್ತು ಮನೆಗಳು ಇದ್ದು ಮಧ್ಯದಲ್ಲಿ ಒಂದು ಸುಂದರವಾದ, ದೊಡ್ಡದಾದ ಕುಟೀರ ಇತ್ತು. ‘ವಾರೆನೂಯಿ’ ಎಂದು ಕರೆಯಲ್ಪಡುವ ಈ ಕುಟೀರವು ಮಾವೊರಿಗಳ ಧಾರ್ಮಿಕ ಕೇಂದ್ರವಾಗಿದ್ದು ಇಲ್ಲಿ ಪುರಾಣ ಪ್ರವಚನಗಳನ್ನೂ, ಧಾರ್ಮಿಕ ಆಚರಣೆಗಳನ್ನು ನಡೆಸುವರು. ಇವರ ಪುರಾಣಗಳಲ್ಲಿ ಕುತೂಹಲ ಹುಟ್ಟಿಸುವಂತಹ ಕಾಲ್ಪನಿಕ ಪ್ರಸಂಗಗಳಿದ್ದು, ಸ್ವರ್ಗದಲ್ಲಿರುವ ದೈವಗಳ, ಪೂರ್ವಜರ ಹಾಗೂ ನಿಸರ್ಗದ ಸುತ್ತ ಹೆಣೆಯಲ್ಪಟ್ಟಿವೆ. ಮಾವೊರಿಗಳ ನಾಡನ್ನು ‘ಮಯೀ’ ಎಂಬ ದೇವತೆಯು ಒಂದು ಮಂತ್ರದಂಡವನ್ನು ಸಾಗರದಾಳಕ್ಕೆ ಇಳಿಸಿ, ಅಲ್ಲಿಂದ ಒಂದು ಭೂಭಾಗವನ್ನು ಮೇಲೆತ್ತಿ ತಂದು ಬೆಟ್ಟ ಗುಡ್ಡಗಳು, ದಟ್ಟವಾದ ಅರಣ್ಯಗಳು, ಸರೋವರಗಳಿಂದ ಸಿಂಗರಿಸಿದನಂತೆ. ಎಂತಹ ಸುಂದರವಾದ ಕಲ್ಪನೆ. ಪ್ರವಾಸಿಗರಿಗೆ ಈ ಸುಂದರವಾದ ನಾಡು ಅಮರಾವತಿಯಂತೆ ಕಂಗೊಳಿಸುವುದು.

ಬನ್ನಿ ಮಾವೊರಿಗಳ ಜೀವನಶೈಲಿಯನ್ನು ಪರಿಚಯಿಸಿಕೊಳ್ಳೋಣ. ಈ ಕುಟೀರದೊಳಗೆ ಪ್ರವೇಶಿಸುವ ಮೊದಲು ತಮ್ಮ ಪಾದರಕ್ಷೆಗಳನ್ನು ಹೊರಗಡೆಯೇ ಕಳಚಿಟ್ಟು ಹೋಗುವುದು ಇವರ ಸಂಪ್ರದಾಯ, ಕಾರಣ ಈ ಭವನದೊಳಗಿನ ಲೋಕವು ಶಾಂತಿಯ ಪ್ರತೀಕವಾದರೆ ಈ ಭವನದ ಹೊರಗಿರುವ ಪ್ರಪಂಚವು ಯುದ್ಧದ ಪ್ರತೀಕವಾಗಿ ನಿಲ್ಲುವುದು. ಈ ಭವನದೊಳಗೆ ಪೂರ್ವಜರ ಆತ್ಮಗಳು ನೆಲಸಿದ್ದು, ಅವರಿಗೆ ತೆರೆದ ಹೃದಯದಿಂದ, ಬರಿಗಾಲಿನಲ್ಲಿ ನಿಂತು ಗೌರವ ಸಲ್ಲಿಸುವ ವಾಡಿಕೆ. ಅಬ್ಬಾ ಈ ಪದ್ಧತಿ ಹಿಂದೂಗಳ ಸಂಸ್ಕೃತಿಯ ಪಡಿಯಚ್ಚು ಎನ್ನಿಸಿತ್ತು. ಈ ಕುಟೀರದ ಪಕ್ಕದಲ್ಲಿದ್ದ ಮಾವೊರಿಗಳ ಸಾಂಪ್ರದಾಯಿಕ ಅಡುಗೆ ಮಾಡುವ ಸ್ಥಳ ನಮ್ಮ ಗಮನ ಸೆಳೆದಿತ್ತು. ವಿಶೇಷವಾದ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಇಡೀ ಸಮುದಾಯದವರು ಒಟ್ಟಾಗಿ ಊಟ ಮಾಡುವ ಪದ್ದತಿ ಇವರಲ್ಲಿದೆ. ನೆಲದೊಳಗೆ ಹೂತಿದ್ದ ‘ಹಾಂಗಿ’ ಎಂಬ ಹೆಸರು ಹೊತ್ತ ಬಿಸಿಯಾದ ಕಲ್ಲುಗಳ ಮೇಲೆ ಮಸಾಲೆಯೊಂದಿಗೆ ಬೆರೆಸಿದ ಮಾಂಸ ಹಾಗೂ ತರಕಾರಿಗಳನ್ನು ಎಲೆಗಳಲ್ಲಿ ಅಥವಾ ಒದ್ದೆ ಬಟ್ಟೆಗಳಲ್ಲಿ ಸುತ್ತಿ ಉರಿಯುವ ಕಲ್ಲಿದ್ದಲು ಅಥವಾ ಬಿಸಿಯಾದ ಉಗಿಯನ್ನು ಹಾಯಿಸಿ ನಿಧಾನವಾಗಿ ಬೇಯಿಸುತ್ತಾರೆ. ಇವರು ಅತಿಥಿ ಸತ್ಕಾರದಲ್ಲಿ ಎತ್ತಿದ ಕೈ, ಬಂದ ಅತಿಥಿಗಳನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಾ, ಸಂಗೀತ ನೃತ್ಯದಿಂದ ಅವರನ್ನು ರಂಜಿಸುತ್ತಾ, ರುಚಿ ರುಚಿಯಾದ ಭಕ್ಷ್ಯಭೋಜ್ಯಗಳನ್ನು ಉಣ್ಣಿಸುತ್ತಿದ್ದರು.

ಮತ್ತೊಂದು ಸಂಗತಿ ನಮ್ಮನ್ನು ಆಕರ್ಷಿಸಿತ್ತು, ಎಲ್ಲಾ ಮಾವೊರಿಗಳ ಮುಖ, ಕೈ ಕಾಲುಗಳ ಮೇಲೆ ‘ಥ ಮಾಕೋ’ ಎಂದು ಕರೆಯಲ್ಪಡುವ ಹಚ್ಚೆಯ ಗುರುತುಗಳಿದ್ದವು. ಇತ್ತೀಚಿನ ದಿನಗಳಲ್ಲಿ ಯುವಜನಾಂಗದಲ್ಲಿ ‘ಟ್ಯಾಟೋ’ ಒಂದು ಫ್ಯಾಷನ್ ಆಗಿದೆ. ಮಾವೊರಿಗಳಲ್ಲಿ ಇದೊಂದು ಧಾರ್ಮಿಕ ಸಂಪ್ರದಾಯವಾಗಿದ್ದು ಮನುಷ್ಯ ಸತ್ತ ನಂತರವೂ ಅವನ ಜೊತೆ ಸಾಗುವುದು ಹಚ್ಚೆಯ ಗುರುತೊಂದೇ ಎಂಬ ಗಾಢವಾದ ನಂಬಿಕೆ ಇವರಲ್ಲಿ ಮನೆ ಮಾಡಿದೆ. ಹೆಚ್ಚಿನ ಟ್ಯಾಟೋಗಳು ಪೌರಾಣಿಕ ಪಕ್ಷಿ, ಪ್ರಾಣಿಗಳ ಹಾಗೂ ನಿಸರ್ಗದೇವತೆಯನ್ನು ಬಿಂಬಿಸುವ ಆಕೃತಿಗಳಾಗಿರುತ್ತವೆ. ಕಣ್ಣಿನ ಮೇಲ್ಭಾಗದಲ್ಲಿ ಬಿಡಿಸಿರುವ ಆಕೃತಿಗಳು ಅವರವರು ಪಡೆದ ಆಧ್ಯಾತ್ಮಿಕ ಜ್ಞಾನದ ಸಂಕೇತವಾದರೆ ಕಣ್ಣಿನ ಕೆಳಭಾಗದಲ್ಲಿ ಹಾಕಿರುವ ಹಚ್ಚೆ ಲೌಕಿಕ ಸಾಧನೆಗಳ ಗುರುತಾಗಿರುವುದು. ಅಚ್ಚರಿಯ ಸಂಗತಿ ಎಂದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿಯೂ ಜನರು ಇಂತಹ ಹಚ್ಚೆಯ ಗುರುತುಗಳನ್ನು ತಮ್ಮ ಮುಖ, ಕೈ ಕಾಲುಗಳ ಮೇಲೆ ಹಾಕಿಸಿಕೊಳ್ಳುತ್ತಿದ್ದರು. ತಮ್ಮ ಮರಣಾನಂತರದಲ್ಲಿ ಈ ಹಚ್ಚೆಯ ಗುರುತುಗಳು ತಮ್ಮನ್ನು ಕಾಪಾಡುತ್ತವೆ ಎಂದು ನಂಬಿದ್ದರು.

ನಾವು ಮಾವೊರಿಗಳ ವಾಸ ಸ್ಥಳವನ್ನು ನೋಡುತ್ತಿರುವಾಗ, ಇದ್ದಕ್ಕಿದ್ದಂತೆ ಯುದ್ಧ ಕಹಳೆಯೊಂದು ಮೊಳಗಿತ್ತು. ಗಾಬರಿಯಿಂದ ನಾವೆಲ್ಲಾ ಅತ್ತ ನೋಡಿದಾಗ ಮೂಲನಿವಾಸಿಗಳಾದ ಮಾವೊರಿಗಳು ‘ಹಾಕಾ’ ನೃತ್ಯಕ್ಕೆ ಪ್ರವಾಸಿಗರನ್ನು ಆಹ್ವಾನಿಸುವ ಕರೆ ಅದಾಗಿತ್ತು. ‘ಹಾಕಾ’ ಎಂದರೆ ಯುದ್ಧಕ್ಕೆ ಹೊರಡುವ ಮೊದಲು ಯೋಧರನ್ನು ಹುರಿದುಂಬಿಸಲು ಮಾಡುವ ನರ್ತನ. ಯೋಧರು ರಣರಂಗದಲ್ಲಿ ಕೆಚ್ಚೆದೆಯಿಂದ ಹೋರಾಡಲು, ಅವರಲ್ಲಿ ಧೈರ್ಯ ಉತ್ಸಾಹ ತುಂಬಲು ಹಾಗೂ ಶತ್ರುಗಳನ್ನು ನಿರ್ನಾಮ ಮಾಡಲು ಹಾಕಾ ನೃತ್ಯಗಳನ್ನು ಮಾಡಲಾಗುತ್ತಿತ್ತು. ಕಾಲ ಬದಲಾದಂತೆ ಹಾಕಾ ನೃತ್ಯಪಟುಗಳ ಉದ್ದೇಶವೂ ಬದಲಾಗುತ್ತಾ ಹೋಯಿತು, ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರನ್ನು ಸ್ವಾಗತಿಸಲು, ತಮ್ಮ ಯಶೋಗಾಥೆಗಳನ್ನು ಪ್ರಚುರ ಪಡಿಸಲು ಹಾಗೂ ತಮ್ಮ ಶಕ್ತಿ, ಒಗ್ಗಟ್ಟು ಹಾಗೂ ಬಾಂಧವ್ಯವನ್ನು ಪ್ರದರ್ಶಿಸಲು ಈ ನೃತ್ಯಗಳ ರೂಪು ರೇಷಗಳನ್ನು ಬದಲಿಸಿದ್ದದಾರೆ. ಈ ಸಾಂಸ್ಕೃತಿಕ ಪ್ರದರ್ಶನದಲ್ಲಿ ನಮ್ಮ ಮನ ಸೆಳೆದದ್ದು ಲಯಬದ್ಧವಾದ ಹಾಡುಗಾರಿಕೆ, ಬಿರುಸಾದ ಹುರುಪಿನಿಂದ ಕೂಡಿದ ಚಲನೆ, ಕಾಲುಗಳನ್ನು ನೆಲಕ್ಕೆ ಅಪ್ಪಳಿಸಿ ನೆಗೆಯುವ, ತಮ್ಮ ತೊಡೆ ಹಾಗು ಎದೆಯನ್ನು ತಟ್ಟಿಕೊಂಡು ತಮ್ಮ ಶೌರ್ಯವನ್ನು ಪ್ರದರ್ಶಿಸುವ ಮಾವೊರಿಗಳ ನೃತ್ಯ. ಕಣ್ಣುಗುಡ್ಡೆಗಳನ್ನು ಉಬ್ಬಿಸಿ, ನಾಲಗೆಯನ್ನು ಹೊರಚಾಚಿದ ರೌದ್ರಮುಖಭಾವ ಎಂತಹವರ ಎದೆಯನ್ನೂ ನಡುಗಿಸಿತ್ತು. ನನಗೆ ನೆನಪಾಗಿದ್ದು ಶಿವತಾಂಡವ ನೃತ್ಯ ಹಾಗೂ ಯಕ್ಷಗಾನ. ‘ನಾನು ಬಂದೆ, ಗೆದ್ದೆ, ಈಗ ನನ್ನದೇ ಸಾಮ್ರಾಜ್ಯ’ ಎಂದು ಗುಡುಗುವ ಮಾವೊರಿಗಳು, ಪಾಶ್ಚಿಮಾತ್ಯರ ಹಿಡಿತದಿಂದ ತಮ್ಮ ನಾಡನ್ನು ಬಿಡಿಸಿಕೊಂಡು ಸ್ವತಂತ್ರರಾಗುವ ಕನಸುಗಳು ಅವರೆದೆಯಲ್ಲಿ ಇನ್ನೂ ಹಚ್ಚ ಹಸಿರಾಗಿಯೇ ಉಳಿದೆವೆ.

ಮಾವೊರಿಗಳ ಸಾಂಸ್ಕೃತಿಕ ನೃತ್ಯ – ಹಾಕ PC: Internet

ಅವರ ವೇಷಭೂಷಣಗಳೆಲ್ಲಾ ರಣರಂಗದಲ್ಲಿ ಯೋಧರು ತೊಡುವಂತಹ ಪೋಷಾಕನ್ನು ಹೋಲುತ್ತಿದ್ದವು. ‘ಪೊವ್ಹಿರಿ’ ಎಂದು ಕರೆಯಲ್ಪಡುವ ಈ ಭವ್ಯವಾದ ಸಭಾಂಗಣದ ಮುಂದೆ ನಿಂತ ಈ ನೃತ್ಯಪಟುಗಳ ಗುಂಪಿನಲ್ಲಿ ನಾಲ್ಕಾರು ಹೆಣ್ಣುಮಕ್ಕಳೂ ಇದ್ದರು. ಇವರು ಕಹಳೆಯನ್ನು ಊದುತ್ತಾ, ನಗಾರಿಗಳನ್ನು ಬಾರಿಸುತ್ತಾ ತಮ್ಮ ಮುಖಂಡನೊಂದಿಗೆ ನಮ್ಮ ಕಡೆ ಬಂದರು. ಇವರ ಮುಖಂಡನು ಪ್ರವಾಸಿಗರನ್ನು ಸ್ವಾಗತಿಸಲು, ಶುಭಕಾಮನೆಗಳನ್ನು ಅರ್ಪಿಸಲು ಪ್ರವಾಸಿಗರ ಮುಂದೆ ಇದ್ದ ಪಾಶ್ಚಿಮಾತ್ಯನ ಬಳಿ ಬಂದು ತನ್ನ ಮೂಗನ್ನು ಅವನ ಮೂಗಿಗೆ ಒತ್ತಿದನು. ಉಸಿರಿಗೆ ಉಸಿರನ್ನು ಸೇರಿಸಿ ಆತ್ಮೀಯತೆಯಿಂದ ಪರಕೀಯರನ್ನು ಸ್ವಾಗತಿಸುವ ವಾಡಿಕೆ ಇವರದು. ಯುವಕನೊಬ್ಬ ತಾನು ಮೆಚ್ಚಿದ ಯುವತಿಗೆ ಮೂರು ಬಾರಿ ಹೀಗೆ ಮೂಗನ್ನು ಒತ್ತಿದರೆ, ‘ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ’ ಎಂದು ಹೇಳುವ ಸಾಂಕೇತಿಕ ಭಾಷೆಯೂ ಹೌದು. ನಾವೆಲ್ಲಾ ಆ ರಂಗಮಂದಿರದಲ್ಲಿ ಕುಳಿತ ಮೇಲೆ ಮಾವೊರಿಗಳು ತಮ್ಮ ನೃತ್ಯವನ್ನು ಆರಂಭಿಸಿದರು. ಮಾವೊರಿಗಳು ನೃತ್ಯ ಪ್ರದರ್ಶಿಸುವಾಗ ಅವರ ಉಬ್ಬಿದ ಕಣ್ಣುಗುಡ್ಡೆಗಳನ್ನಾಗಲೀ, ಮುಂದೆ ಚಾಚಿದ ನಾಲಿಗೆಯನ್ನಾಗಲೀ, ರೌದ್ರ ಮುಖಭಾವವನ್ನಾಗಲೀ ನೋಡಿ ಅಪಹಾಸ್ಯ ಮಾಡಬೇಡಿ, ಅವರು ಅದನ್ನು ಅವಹೇಳನಕಾರಿ ಎಂದು ಭಾವಿಸಿ ನಿಮ್ಮ ಮೇಲೆ ಆಕ್ರಮಣ ಮಾಡಿಯಾರು ಎಂಬ ಎಚ್ಚರಿಕೆಯನ್ನು ನಮಗೆ ಮೊದಲೇ ನೀಡಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆ, ನಂತರದಲ್ಲಿ ಯೋಧರ ಆಕ್ರಮಣಕಾರಿ ನೃತ್ಯ ನಮ್ಮ ಎದೆ ನಡುಗಿಸಿದರೆ, ಮಹಿಳೆಯರು ತಮ್ಮ ಅಂಗೈಗಳನ್ನು ಚಿಟ್ಟೆಯ ರೆಕ್ಕೆಗಳಂತೆ ಪಟಪಟನೇ ಆಡಿಸುತ್ತಾ ಮಾಡಿದ ನೃತ್ಯ ನಮ್ಮಲ್ಲಿ ಉಲ್ಲಾಸ ಮೂಡಿಸಿತ್ತು. ನಂತರದಲ್ಲಿ ದುರ್ಗೆಯ ಅವತಾರವೆತ್ತ ಮಹಿಳೆಯರು ತಮ್ಮ ಪುರುಷರನ್ನು ಯುದ್ಧಕ್ಕೆ ಕಳುಹಿಸುವ ಮೊದಲು ಶತ್ರು ಸಂಹಾರ ಮಾಡಲು ಕರೆ ನೀಡುತ್ತಿರುವ ದೃಶ್ಯ, ಒಂದಾದ ಮೇಲೆ ಒಂದರಂತೆ ಮಾಡುತ್ತಿದ್ದ ನೃತ್ಯಗಳು ಅತಿಥಿಗಳ ಮನಸೂರೆಗೊಂಡಿದ್ದವು. ಹಾಕಾ ನೃತ್ಯದ ಹಿಂದೆ ಒಂದು ಪೌರಾಣಿಕ ಹಿನ್ನೆಲೆಯೂ ಇದೆ, ಒಮ್ಮೆ ಸೂರ್ಯನ ಮಗನಾದ ‘ಥಾನೆ ರೋರೆ’ ಯು ತನ್ನ ಹಡೆದವ್ವನಿಗಾಗಿ ಹಂಬಲಿಸುತ್ತಾ ಮಾಡಿದ ನೃತ್ಯ ಇದು’.

ಮಾವೊರಿಗಳು ಕುಶಲಕಲೆಗಳಲ್ಲಿ ಪರಿಣಿತರು, ಸೆಣಬಿನಿಂದ ಹಲವು ಬಗೆಯ ಉಡುಪುಗಳನ್ನು, ಚೀಲಗಳನ್ನು ಹಾಗೂ ವಸ್ತುಗಳನ್ನು ನೇಯುವರು. ಮರದ ತುಂಡುಗಳ ಮೇಲೆ ಕೆತ್ತನೆ ಮಾಡಲಾದ ವಿಶಿಷ್ಟವಾದ ಮೂರ್ತಿಗಳು ನಮ್ಮ ಮನ ಸೆಳೆದವು. ಯುವಜನಾಂಗಕ್ಕೆ ಈ ಕುಶಲಕಲೆಗಳ ತರಬೇತಿ ನೀಡುವ ಕೇಂದ್ರಕ್ಕೆ ಭೇಟಿ ನೀಡಿದೆವು. ಇವರ ಶಿಲ್ಪಕಲೆ, ನೇಯ್ಗೆ, ಪೇಂಟಿಂಗ್‌ಗಳ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆಯೂ ಇಲ್ಲಿದೆ.

ನ್ಯೂಝಿಲ್ಯಾಂಡಿನ ಮೂಲ ನಿವಾಸಿಗಳಾದ ಮಾವೊರಿಗಳು ತಮ್ಮ ಆಸ್ತಿತ್ವವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಹೋರಾಟ ಅವಿಸ್ಮರಣೀಯ. ಅವರ ಮಾತೃಭಾಷೆಯಾದ ‘ಥ ರಿಯೋ ಮಾವೊರಿ’ಯು ಇಂದು ನ್ಯೂಝಿಲ್ಯಾಂಡಿನ ಅಧಿಕೃತ ಭಾಷೆಯಾಗಿ ಪರಿಗಣಿಸಲ್ಪಟ್ಟಿದೆ. ನ್ಯೂಝೀಲ್ಯಾಂಡನಲ್ಲಿ 23 ಪ್ರತಿಶತ ಜನರು ಮಾವೊರಿ ಭಾಷೆಯನ್ನು ಮಾತನಾಡುವರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಾವೊರಿಗಳ ಕೊಡುಗೆ ಅಪಾರವಾಗಿದೆ. ಮಾವೊರಿಗಳಲ್ಲಿ ಕಂಡು ಬರುವ ಗುಣಗಳು ಅನುಕರಣೀಯ– ದಯೆ, ಕರುಣೆ, ಪರಸ್ಪರ ಗೌರವ, ಸ್ನೇಹ, ವಿಶ್ವಾಸ, ವಿನಯ, ಗಾಂಭಿರ್ಯ ಇತ್ಯಾದಿ ಗುಣಗಳು ಇವರಲ್ಲಿ ಮನೆಮಾಡಿವೆ. ‘ಅತಿಥಿ ದೇವೋ ಭವ’ ಎಂಬ ಭಾವ, ಪ್ರಕೃತಿಯೊಂದಿಗೆ ಸಹಬಾಳ್ವೆ, ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯ ಜೊತೆ ಜೊತೆಗೇ ತಮ್ಮ ಸಮಾಜದ ಬಗ್ಗೆ ಸಮಗ್ರ ದೃಷ್ಟಿಕೋನ, ಹಿಂದಿನ, ಇಂದಿನ ಹಾಗೂ ಮುಂದಿನ ಬದುಕಿನ ಬಗ್ಗೆ ಇವರ ದೂರದೃಷ್ಟಿ ಕಂಡು ಬರುವುದು. ಧಾರ್ಮಿಕ ಸ್ವಾಸ್ಥ್ಯ, ಮಾನಸಿಕ ಹಾಗೂ ಭಾವನಾತ್ಮಕ ಸ್ವಾಸ್ಥ್ಯ, ದೈಹಿಕ ಸ್ವಾಸ್ಥ್ಯ, ಮತ್ತು ಕೌಟುಂಬಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ ಎಂಬ ನಾಲ್ಕು ಕಂಬಗಳ ಆಧಾರದ ಮೇಲೆ ಮಾವೊರಿ ಸಂಸ್ಕೃತಿಯು ನಿಂತಿದೆ.

ಬನ್ನಿ, ಇವರನ್ನು ಭೇಟಿ ಮಾಡಲು ಬಂದ ನಾವೂ ‘ಹಲೋ’ (ಶುಭೋದಯ) ಎಂದು ಮಾವೊರಿ ಭಾಷೆಯಲ್ಲಿ ಹೇಳೋಣ ‘ಕಿಯೋ ವೋರಾ’. ಹೊರಡುವ ವೇಳೆಯಾಯಿತು, ಇವರಿಗೆ ವಂದನೆಗಳನ್ನು ತಿಳಿಸೋಣವೇ ‘ಕಿಯೋ ವೋರಾ’. ಈ ಪದಕ್ಕೆ ಮೇಲಿನ ಎರಡೂ ಅರ್ಥಗಳಿವೆ.

ಈ ಪ್ರವಾಸಕಥನದ ಹಿಂದಿನಪುಟ ಇಲ್ಲಿದೆ:  http://surahonne.com/?p=43066
(ಮುಂದುವರಿಯುವುದು)

ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.

11 Comments on “ಚೆಲುವಿನ ತಾಣ ನ್ಯೂಝಿಲ್ಯಾಂಡ್: ಪುಟ-4

  1. ಪ್ರವಾಸ ಕಥನ ಬಹಳ ಕುತೂಹಲದಿಂದ ಹಾಗೂ..ನಮ್ಮ ಕಣ್ಣಮುಂದೆ ನೆಡೆಯುತ್ತಿದೆ ಎಂಬಂತಹ..ರೀತಿಯಲ್ಲಿ.. ಸೊಗಸಾದ ನಿರೂಪಣೆಯನ್ನು ಹೊತ್ತು ಸಾಗಿಸುತ್ತಿರುವ ನಿಮಗೆ ನಮನ ಮೇಡಂ..

  2. ಪ್ರವಾಸ ಕಥನ ಬಹಳ ಸೊಗಸಾಗಿ ಮೂಡಿ ಬರುತ್ತಿದೆ..

  3. ಈ ಪ್ರವಾಸ ಕಥನವನ್ನು ಪ್ರಕಟಿಸುತ್ತಿರುವ ಸುರಹೊನ್ನೆ ಸಂಪಾದಕರಾದ ಹೇಮಮಾಲಾ ಮೇಡಂ ರವರಿಗೆ ಧನ್ಯವಾದಗಳು

  4. ಲೇಖನವನ್ನು ಓದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ನಾಗರತ್ನ ಮೇಡಂ ಹಾಗೂ ಶೈಲಾಗೆ ವಂದನೆಗಳು

  5. ಮಾವೊರಿಗಳ ಧಾರ್ಮಿಕ ಜೀವನ, ಭಯಾನಕ ಹಾಗೂ ಮನಸೆಳೆಯುವ ನೃತ್ಯ ಸಂಯೋಜನೆಯ ಪ್ರದರ್ಶನ, ಸೆಣಬಿನ ಕುಶಲಕಲೆ ಇತ್ಯಾದಿಗಳನ್ನು ಒಳಗೊಂಡ ಪ್ರವಾಸ ಲೇಖನವು ಕುತೂಹಲಕಾರಿಯಾಗಿದೆ… ಗಾಯತ್ರಿ ಮೇಡಂ, ಧನ್ಯವಾದಗಳು.

  6. ಹಲವಾರು ವಿಷಯಗಳನ್ನೊಳಗೊಂಡ ಪ್ರವಾಸ ಕಥನ ಹಲವಾರು ಮಾಹಿತಿಗಳೊಂದಿಗೆ ಸುಂದರವಾಗಿ ಮೂಡಿ ಬಂದಿದೆ.

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *