(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಬಿಸಿನೀರ ಬುಗ್ಗೆಗಳು
ನಾವು ನಾಳೆ ಬಿಸಿನೀರ ಬುಗ್ಗೆಗಳನ್ನು ನೋಡಲು ಹೋಗುತ್ತಿದ್ದೇವೆ ಎಂದು ನಮ್ಮ ಗೈಡ್ ಹೇಳಿದಾಗ ತಟ್ಟನೆ ನನ್ನ ನೆನಪಿಗೆ ಬಂದದ್ದು, ‘ಕೇದಾರದ ಗೌರಿಕುಂಡ, ಬದರಿ ಮತ್ತು ಯಮುನೋತ್ರಿಯ ಬಿಸಿ ನೀರ ಬುಗ್ಗೆಗಳು. ಹಿಂದೊಮ್ಮೆ ಇಂಗ್ಲೆಂಡಿನಲ್ಲಿದ್ದ ಮಗಳ ಮನೆಗೆ ಹೋದಾಗ ‘ಅಕ್ವಾ ಸೊಲೀಸ್’ ಎಂಬ ಬಿಸಿನೀರ ಬುಗ್ಗೆ ನೋಡಿದ್ದ ನೆನಪಾಗಿತ್ತು. ‘ರೋಮನ್ ಬಾತ್’ ಎಂಬ ಹೆಸರು ಹೊತ್ತ ಈ ತಾಣದಲ್ಲಿ ರೋಮನ್ನರು ಮೀಯಲು ಬರುತ್ತಿದ್ದರು ಎಂಬ ದಾಖಲೆಯೂ ಇದೆ.
ನ್ಯೂಝೀಲ್ಯಾಂಡಿನ ಅತ್ಯಂತ ದೊಡ್ಡದಾದ ‘ವಾಕೆರೇವರೇವಾ’ ಗೀಸರ್ ನೋಡೋಣ ಬನ್ನಿ — ನಾವು ಸಾಗಿದ ಹಾದಿಯಲ್ಲಿ ದಟ್ಟವಾದ ಹೊಗೆ ಭೂಮಿಯಿಂದ ಮೇಲೇಳುತ್ತಿತ್ತು. ಅದು ಕಾಡ್ಗಿಚ್ಚು ಇರಬಹುದೇ ಎಂಬ ಅನುಮಾನ ಕಾಡಿತ್ತು. ಆಗ ನಮ್ಮ ಗೈಡ್ ಆ ತಾಣವನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ. ರೋಟೋರುವಾ ಮತ್ತು ತೌಪುವೋ ಜಿಲ್ಲೆಗಳು ಸಾವಿರಾರು ವರ್ಷಗಳ ಹಿಂದೆ ಸ್ಫೋಟಿಸಿದ್ದ ಜ್ವಾಲಾಮುಖಿಗಳಿಂದಲೇ ನಿರ್ಮಾಣವಾದ ನಾಡು. ಜ್ವಾಲಾಮುಖಿ ತಣ್ಣಗಾದ ನಂತರದಲ್ಲಿ ಸುರಿದ ಮಳೆ ಭೂಮಿಯಲ್ಲಿ ಉಂಟಾದ ಬಿರುಕುಗಳಲ್ಲಿ ಒಳನುಗ್ಗಿ ಬಿಸಿಯಾಗಿದ್ದ ಬಂಡೆಗಳ ಮೇಲೆ ಶೇಖರವಾಯಿತು. ದಿನಕಳೆದಂತೆ ಉಂಟಾದ ಒತ್ತಡದಿಂದ ಬಿಸಿಯಾದ ನೀರು ಚಿಲುಮೆಗಳಾಗಿ ಹೊರನುಗ್ಗಿತು, ಆಮ್ಲೀಯ ಗುಣ ಹೊಂದಿರುವ ಈ ಬಿಸಿನೀರಿನ ಬುಗ್ಗೆಗಳಿಂದ ಸುತ್ತಲಿದ್ದ ಕಲ್ಲುಕರಗಿ ಕುದಿಯುವ ಕೆಸರಿನ ಹೊಂಡಗಳಾದವು. ಇಲ್ಲಿ ಭೂ ಉಷ್ಣ ಶಕ್ತಿ ಅಥವಾ ಜಿಯೋ ಥರ್ಮಲ್ ಎನರ್ಜಿ ಉತ್ಪಾದನೆಯಾಗುವುದರಿಂದ, ಇದರ ಲಾಭವನ್ನು ಮಾವೊರಿಗಳು ಪಡೆದರು, ತಮ್ಮ ಮನೆಯನ್ನು ಬೆಚ್ಚಗಾಗಿಸಲಿಕ್ಕೆ, ಸ್ನಾನ ಮಾಡಲು, ಅಡುಗೆ ಮಾಡಲಿಕ್ಕೆ ಬಳಸಿದರು. ಇಲ್ಲಿ ಸುಮಾರು ಐನೂರು ಗೀಸರ್‌ಗಳು, ಬಿಸಿ ನೀರ ಬುಗ್ಗೆಗಳೂ, ಕುದಿಯುತ್ತಿರುವ ಕೆಸರಿನ ಹೊಂಡಗಳೂ, ನೀಲವರ್ಣದ ಸರೋವರಗಳೂ ಇವೆ.
ನಾವು ವಾಕೆರೇವರೇವಾ ಗೀಸರ್ ಸಮೀಪಿಸುತ್ತಿದ್ದ ಹಾಗೆಯೇ ಬಿಸಿನೀರ ಚಿಲುಮೆ ಇಪ್ಪತ್ತು ಅಡಿ ಎತ್ತರಕ್ಕೆ ಜಿಗಿದಿತ್ತು. ಬರ‍್ರೋ ಎಂಬ ಸದ್ದು, ಜೊತೆಗೇ ಹರಡುತ್ತಿದ್ದ ದಟ್ಟವಾದ ಹೊಗೆಯೊಂದಿಗೆ ಸಲ್ಫರ್ ವಾಸನೆ ಎಲ್ಲೆಡೆ ಹರಡಿತ್ತು. ಕೆಲವರು ರೊಟೊರುವಾ ಎಂದರೆ ‘ರಾಟನ್ ಎಗ್ ವಾಸನೆ’ (ಕೊಳೆತ ಮೊಟ್ಟೆಯ ವಾಸನೆ) ಎಂದು ಲೇವಡಿ ಮಾಡುವರು. ಕಲ್ಲನ್ನೂ ಕರಗಿಸುವ ಶಕ್ತಿಯುಳ್ಳ ಈ ಗೀಸರ್‌ಗಳಿಂದ ಉಂಟಾಗುವ ನೀರಾವಿಯಿಂದ ಆಗಾಗ್ಗೆ ತುಂತುರು ತುಂತುರಾಗಿ ಮಳೆಯು ನಮ್ಮ ಮೇಲೆ ಬೀಳುವುದು. ಈ ಬಿಸಿನೀರ ಚಿಲುಮೆಗಳ ಅಬ್ಬರವನ್ನು ಕಂಡಾಗ ನನಗೆ ನೆನಪಾಗಿದ್ದು ಶಿವನ ತಾಂಡವ ನೃತ್ಯ, ಅವನ ಹಣೆಗಣ್ಣು ತೆರೆದಾಗ ಉಂಟಾದ ಜ್ವಾಲೆ, ಜ್ವಾಲಾಮುಖಿಯಂತೆ ಸ್ಫೋಟಿಸಿದರೆ, ಅವನ ನೃತ್ಯದಿಂದ ಉಂಟಾದ ಭೂಕಂಪನದಿಂದ ಅಲ್ಲೋಲಕಲ್ಲೋಲವಾದ ಸಾಗರದ ತೆರೆಗಳು, ಭೂಗರ್ಭದಿಂದ ಚಿಮ್ಮಿದ ಬಿಸಿನೀರ ಬುಗ್ಗೆಗಳು. ಈ ಚಿಲುಮೆ ಒಂದು ಬಾರಿ ತೊಂಬತ್ತು ಅಡಿ ಎತ್ತರಕ್ಕೆ ಜಿಗಿದಿದ್ದಂತೆ. ಪ್ರವಾಸಿಗರ ತಾಳ್ಮೆಯನ್ನು ಪರೀಕ್ಷಿಸುವಂತೆ, ಕೆಲವು ಬಾರಿ ಮೌನ ವಹಿಸಿ ಬಿಡುತ್ತವೆ.
ನಾವು ಈ ಗೀಸರ್‌ಗಳ ಮುಂದೆ ನಿಂತಾಗ ಹತ್ತು ನಿಮಿಷಕ್ಕೊಮ್ಮೆ ಮಕ್ಕಳ ಹಾಗೆ ಕೇಕೆ ಹಾಕುತ್ತಾ ಇಪ್ಪತ್ತು ಅಡಿ ಎತ್ತರಕ್ಕೆ ಚಿಮ್ಮಿದ್ದವು. ಹಾಗೆಯೇ ಮನಸ್ಸು ಈ ಗೀಸರ್‌ಗಳ ಪೌರಾಣಿಕ ಹಿನ್ನೆಲೆಯ ಹಿಂದೋಡಿತ್ತು, ‘ಒಮ್ಮೆ ಪಾಲಿನೇಷಿಯಾದಿಂದ ನಿವಾಸಿಯಾದ ಧರ್ಮಗುರು ನಾತೋಯಿರಾಯಿ (Ngatoroirangi) ಎಂಬ ಮಾವೊರಿ ನಾಯಕ ತನ್ನ ಸಹಚರರೊಂದಿಗೆ ಸಾಗರದಲ್ಲಿ ಸಂಚಾರ ಮಾಡುತ್ತಾ ಪೆಚಿಫಿಕ್ ಸಾಗರದ ಮಧ್ಯೆಯಿದ್ದ ಈ ದ್ವೀಪಗಳ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ತಂಗುವರು. ಆಗ ಬಾರಿ ಹಿಮಪಾತವಾಗಿ, ಅವನು ಚಳಿಯಿಂದ ನಡುಗುತ್ತಾ ಅಗ್ನಿಯ ಅಧಿದೇವತೆಗಳಾದ ತನ್ನ ಸಹೋದರಿಯರಾದ ‘ಥ ಹೊವಾತಾ’ (Te Hoata) ಮತ್ತು ‘ಥ ಫುಪಾ’(Te Papa) ಇವರಲ್ಲಿ ತನ್ನನ್ನು ಚಳಿಯಿಂದ ಕಾಪಾಡಬೇಕೆಂದು ಕೋರುವನು. ‘ಹವಾಯಿತಿ’ಯಲ್ಲಿ ನೆಲೆ ಕಂಡುಕೊಂಡಿದ್ದ ಸಹೋದರನ ಕೋರಿಕೆಯನ್ನು ಆಲಿಸಿದ ಅಗ್ನಿ ದೇವತೆಗಳು ತಕ್ಷಣವೇ ಭೂಮಿಯ ಅಡಿಯಲ್ಲಿ ವೇಗವಾಗಿ ಚಲಿಸುತ್ತಾ, ಸಾಗರಗಳು ಎದುರಾದಾಗ ನೀರಿನಡಿಯಲ್ಲಿ ಸಾಗುತ್ತಾ, ಈ ದ್ವೀಪ ರಾಷ್ಟ್ರಕ್ಕೆ ಧಾವಿಸಿ ಬಂದು, ಹಿಮದ ಮಧ್ಯೆ ಸಿಲುಕಿದ್ದ ತಮ್ಮ ಅಣ್ಣನನ್ನು ರಕ್ಷಿಸುವರು. ಈ ಬಿಸಿನೀರಬುಗ್ಗೆಗಳು, ಕೆಸರಿನ ಹೊಂಡಗಳು, ಗೀಸರ್‌ಗಳು ಅಣ್ಣನ ಜೀವ ಉಳಿಸಲು ಬಂದ ಸಹೋದರಿಯರ ಕೊಡುಗೆ ಎಂಬ ನಂಬಿಕೆ ಇದೆ. ಅವರು ವಿಶ್ರಮಿಸಿದ ಕಡೆಯಲ್ಲೆಲ್ಲಾ ಜ್ವಾಲಾಮುಖಿಗಳು, ಬಿಸಿನೀರಬುಗ್ಗೆಗಳದ್ದೇ ಆರ್ಭಟ.
ಈ ದ್ವೀಪ ರಾಷ್ಟ್ರದ ಮೂಲನಿವಾಸಿಗಳಾದ ಮಾವೊರಿಗಳಲ್ಲಿ ಜನಜನಿತವಾದ ಹಲವು ರೋಚಕವಾದ ಜಾನಪದ ಕಥೆಗಳಿವೆ. ‘ತ ಅರಾವಾ’ ಬುಡಕಟ್ಟಿನವರ ಕಥೆಯೊಂದನ್ನು ಕೇಳೋಣ ಬನ್ನಿ, ‘ಹಿನೇಮೋವ ಮತ್ತು ಟ್ಯೂಟಾನಿಕಾಯ್ ಎಂಬ ಅಮರ ಪ್ರೇಮಿಗಳ ಕಥೆಯಿದು. ಒಂದು ಬುಡಕಟ್ಟಿನ ನಾಯಕನ ಮಗಳು ಹಿನೇಮೋವ, ಇವಳಾದರೋ ಅದ್ವಿತೀಯ ಸುಂದರಿ. ಇವಳನ್ನು ವರಿಸಲು ಹಲವಾರು ರಾಜಕುವರರು ತುದಿಗಾಲಲ್ಲಿ ನಿಂತಿದ್ದರು. ಆದರೆ ಇವಳ ಮನಸ್ಸಿನಲ್ಲಿ ಇದ್ದವನು ಟ್ಯೂಟಾನಿಕಾಯ್ ಎಂಬ ಚೆಲುವ ಮಾತ್ರ. ಆದರೆ ಟ್ಯೂಟಾನಿಕಾಯ್ ಮತ್ತು ಹಿನೇಮೋವಾಳ ವಂಶಸ್ಥರ ಮಧ್ಯೆ ಇದ್ದ ವಿರಸದಿಂದ, ಇವರ ಮದುವೆಗೆ ಹಿರಿಯರ ಒಪ್ಪಿಗೆ ಸಿಗಲಿಲ್ಲ. ಟ್ಯೂಟಾನಿಕಾಯ್‌ನನ್ನು ಒಂದು ದ್ವೀಪದಲ್ಲಿ ಕೂಡಿ ಹಾಕುವರು, ದ್ವೀಪದಲ್ಲಿ ಬಂದಿಯಾಗಿದ್ದ ಟ್ಯೂಟಾನಿಕಾಯ್ ನಿತ್ಯ ಕೊಳಲನ್ನೂದುತ್ತಾ ತನ್ನ ವಿರಹವನ್ನು ವ್ಯಕ್ತಪಡಿಸುತ್ತಿದ್ದ. ಆ ಕೊಳಲನಾದವನ್ನು ಕೇಳಿದ ಹಿನೇಮೋವಾ ತನ್ನ ಪ್ರೇಮಿಯ ಬಳಿ ಹೋಗಲು ಚಡಪಡಿಸುತ್ತಿದ್ದಳು, ಆದರೆ ಅವಳ ಮನೆತನದವರು ಪ್ರೇಮಿಗಳನ್ನು ತಡೆಯಲು ಆ ದ್ವೀಪಕ್ಕೆ ಹೋಗುವ ಎಲ್ಲಾ ತೆಪ್ಪಗಳನ್ನು ಅಡಗಿಸಿಟ್ಟಿದ್ದರು. ಒಂದು ದಿನ ಕಾರ್ಗತ್ತಲ ರಾತ್ರಿಯಲ್ಲಿ, ಹಿನೇಮೋವ ನಾಲ್ಕಾರು ಸೋರೆಬುರುಡೆಗಳನ್ನು ಹಗ್ಗದಿಂದ ಕಟ್ಟಿ, ಅವುಗಳ ನೆರವಿನಿಂದ ಮಂಜುಗಡ್ಡೆಯಂತೆ ಕೊರೆಯುತ್ತಿದ್ದ ನೀರಿನಲ್ಲಿ ಈಜುತ್ತಾ, ಆ ಕೊಳಲ ನಾದ ಬರುತ್ತಿದ್ದ ದಿಕ್ಕಿನಲ್ಲಿ ಸಾಗಿ ತನ್ನ ಪ್ರಿಯಕರನಿದ್ದ ದ್ವೀಪವನ್ನು ಸೇರಿದಳು. ಅಲ್ಲಿದ್ದ ಬಿಸಿನೀರ ಬುಗ್ಗೆಯಲ್ಲಿ ಸ್ನಾನ ಮಾಡಿ ವಿಶ್ರಮಿಸುತ್ತಿರುವಾಗ, ಟ್ಯೂಟಾನಿಕಾಯ್‌ನ ಸೇವಕನೊಬ್ಬ ತನ್ನ ಒಡೆಯನಿಗೆ ಬಿಸಿ ನೀರು ತೆಗೆದುಕೊಂಡು ಹೋಗಲು ಬರುವನು. ಆ ಚೆಲುವೆಯನ್ನು ಕೊಳದ ಬಳಿ ಕಂಡವನು, ಗಾಬರಿಯಿಂದ ಓಡುತ್ತಾ ಬಂದು, ತನ್ನ ಧಣಿಗೆ ವಿಷಯವನ್ನು ತಿಳಿಸುವನು. ಸುದ್ದಿ ಕೇಳಿದ ಟ್ಯೂಟಾನಿಕಾಯ್ ಆ ಕೊಳದ ಬಳಿ ಧಾವಿಸಿದಾಗ ತನ್ನ ಪ್ರಿಯತಮೆಯನ್ನು ಕಂಡು ಸಂಭ್ರಮದಿಂದ ತನ್ನ ಮಹಲಿಗೆ ಕರೆ ತರುವನು. ಅವರಿಬ್ಬರೂ ಮದುವೆಯಾಗಿ ಬಹಳ ಕಾಲ ಸಂತಸದಿಂದ ಬಾಳುವರು.
ರೊಟೋರುವಾದಲ್ಲಿ ಪ್ರವಾಸಿಗರಿಗಾಗಿ ಹಲವು ಕ್ರೀಡೆಗಳನ್ನು ಆಯೋಜಿಸಲಾಗಿದೆ. ನೆಲದ ಮೇಲೆ ಹಾಗು ನೀರಿನ ಮೇಲೆ ಸರಾಗವಾಗಿ ಚಲಿಸುವ ಹಳದಿ ಬಣ್ಣ ಹೊತ್ತ ‘ಡಕ್ ಬೋಟ್’ ನಲ್ಲಿ ಕುಳಿತು, ನಾವು ಇಲ್ಲಿರುವ ಸರೋವರದಲ್ಲಿ ಸಂಚರಿಸುತ್ತಾ ದಟ್ಟವಾದ ಅರಣ್ಯವನ್ನೂ, ಬಿಸಿನೀರ ಬುಗ್ಗೆಗಳನ್ನೂ, ಕುದಿಯುತ್ತಿರುವ ಕೆಸರಿನ ಹೊಂಡಗಳನ್ನೂ ಕಂಡು ಸಂಭ್ರಮಿಸಿದೆವು. ಅಲ್ಲಲ್ಲಿ ಬಿಸಿನೀರಿನ ಬುಗ್ಗೆಗಳ ಸ್ಪಾ ಎಂಬ ಹೆಸರು ಹೊತ್ತ ಪ್ರಕೃತಿ ಚಿಕಿತ್ಸಾ ತಾಣಗಳೂ ಇದ್ದವು. ಕೆಸರಿನ ಹೊಂಡಗಳ ದಡದಲ್ಲಿ ಕುಳಿತು ಕೆಲವರು ಮಣ್ಣನ್ನು ಮೈಗೆಲ್ಲಾ ಮೆತ್ತಿಕೊಂಡು ಬಿಸಿಲಿಗೆ ಮೈಯೊಡ್ಡಿ ಕುಳಿತಿದ್ದರು. ಪೌಂಡು ಡಾಲರ್‌ಗಳನ್ನು ದುಡಿಯುವ ಪಾಶ್ಚಿಮಾತ್ಯರಿಗೆ ಈ ಚಿಕಿತ್ಸಾ ಕೇಂದ್ರಗಳಲ್ಲಿ ಮಸಾಜ್ ಹಾಗೂ ಇನ್ನಿತರೇ ಚಿಕಿತ್ಸೆಗಳನ್ನು ಪಡೆಯುವುದು ಸುಲಭವಾಗಿತ್ತು. ಆದರೆ ರೂಪಾಯಿಗಳಲ್ಲಿ ಹಣ ಸಂಪಾದಿಸುವ ನಾವು ಈ ಚಿಕಿತ್ಸೆಗಳಿಗೆ ನಮೂದಿಸಿದ್ದ ಹಣ ನೋಡಿ ಹಿಂಜರಿದೆವು.
ಕುಯಿರಾವೋ ನದಿಯಲ್ಲಿ ‘ಜೆಟ್‌ಬೋಟ್’ ಪಯಣವಂತೂ ಅವಿಸ್ಮರಣೀಯ. ತೊಂಭತ್ತು ಕಿ.ಮೀ ವೇಗದಲ್ಲಿ ಒಮ್ಮೆ ಚಲಿಸಿದರೆ ಮತ್ತೊಮ್ಮೆ ನೀರಿನ ಸುಳಿಯಲ್ಲಿ ಸಿಲುಕಿದಂತೆ ದೋಣಿಯನ್ನು ತಿರುಗಿಸುತ್ತಿದ್ದ, ದೋಣಿ ಸ್ವಲ್ಪ ಮೇಲೆ ಜಿಗಿದಿದ್ದೂ ಉಂಟು, ನೀರಿನ ಅಲೆಗಳಿಗೆ ದೋಣಿ ಅಪ್ಪಳಿಸಿದಾಗ ನಾವೆಲ್ಲಾ ತೊಯ್ದು ತೊಪ್ಪೆಯಾಗಿದ್ದೂ ಉಂಟು. ನಾವೆಲ್ಲಾ ಮಕ್ಕಳಂತೆ ಕಿರುಚಾಡಿ ಆನಂದಿಸಿದೆವು. ಅರ್ಧ ಗಂಟೆಯ ಜೆಟ್‌ಬೋಟ್ ವಿಹಾರ ನಮ್ಮ ಬಾಲ್ಯವನ್ನು ಮರುಕಳಿಸುವಂತೆ ಮಾಡಿತ್ತು. ಕುಯಿರಾವೂ ನದಿಯ ಹಿನ್ನೆಲೆಯೂ ಸ್ವಾರಸ್ಯಕರವಾಗಿತ್ತು – ಲಾವಣ್ಯವತಿಯಾದ ಕುಯಿರಾವೂ ತನ್ನ ಪತಿ ತೊಮಾಹಿಕಾ ಜೊತೆ ಆ ಸರೋವರದ ದಡದಲ್ಲಿ ವಾಸವಾಗಿರುತ್ತಾಳೆ. ಒಮ್ಮೆ ಅವಳು ನದಿಯಲ್ಲಿ ಜಲಕ್ರೀಡೆಯಾಡುವಾಗ, ಅವಳಲ್ಲಿ ಮೋಹಿತನಾದ ತಾನಿವಾಹಾ ಎಂಬ ರಕ್ಕಸನು ಅವಳನ್ನು ಅಪಹರಿಸಿ ನದಿಯ ತಳದಲ್ಲಿದ್ದ ತನ್ನ ಗುಹೆಯಲ್ಲಿ ಬಂಧಿಸುತ್ತಾನೆ. ಇವಳ ಚೀರಾಟ ಹಾಗೂ ರಕ್ಕಸನ ಅಟ್ಟಹಾಸ ಕಂಡ ದೇವತೆಗಳು ತಂಪಾದ ನದಿಯ ನೀರು ಬಿಸಿಯಾಗಿ ಕುದಿಯಲಿ ಎಂದು ಶಪಿಸುತ್ತಾರೆ. ದೇವತೆಗಳ ಶಾಪದಿಂದ ನೀರು ಬಿಸಿಯಾಗಿ ಮರಳತೊಡಗಿದಾಗ ರಕ್ಕಸನ ಜೊತೆ ಸುಂದರಿಯಾದ ಕುಯಿರಾವೂ ಸಹ ಮರಣ ಹೊಂದುತ್ತಾಳೆ. ಅಂದಿನಿಂದ ಆ ನದಿಗೆ ಕುಯಿರಾವೂ ಎಂಬ ಹೆಸರು ಬಂದಿದೆ.
ಮಾವೊರಿಗಳು ತಮ್ಮ ಸುತ್ತಮುತ್ತಿನ ಪ್ರಕೃತಿಯನ್ನು ಆರಾಧಿಸುವರು, ತಮಗೆ ಅನ್ನ ನೀಡುವ ಭೂದೇವಿಯನ್ನು, ದಾಹ ತಣಿಸುವ ಗಂಗೆಯನ್ನು, ಉಸಿರು ನೀಡುವ ಗಂಗೆಯನ್ನು ಹಾಗೆಯೇ ತಮಗೆ ಬೆಳಕು ನೀಡುವ ಸೂರ್ಯ ಚಂದ್ರರನ್ನು ಪೂಜಿಸುವರು. ವನದೇವತೆಯನ್ನು ‘ತಾನೆ’ ಎಂದೂ, ಸಮುದ್ರ ದೇವತೆಯನ್ನು ‘ತಂಗರೋವಾ’ ಎಂದೂ ಪ್ರಾಣದೇವರನ್ನು ‘ತಾಹಿರಿಮಾತಿಯಾ’ ಎಂದು ಪೂಜಿಸುವರು. ಅತ್ಯಂತ ಎತ್ತರವಾದ ಸ್ಥಳದಲ್ಲಿರುವ ‘ಕೇಪ್ ರೆಯಿಂಗಾ’ ಇವರ ಪವಿತ್ರವಾದ ಧಾರ್ಮಿಕ ಕ್ಷೇತ್ರ. ಇಲ್ಲಿರುವ ಪುರಾತನವಾದ ‘ಪೊಹುತುಕವಾ’ ವೃಕ್ಷದ ರೆಂಬೆ ಕೊಂಬೆಗಳೇ, ಮರಣ ಹೊಂದಿದ ಮಾವೊರಿಗಳ ಆತ್ಮಗಳ ಆವಾಸ ಸ್ಥಾನ ಎಂದು ನಂಬುತ್ತಾರೆ. ಇವರ ಘೋಷ ವಾಕ್ಯ, ‘ತಾತುವ್ ತಾತುವ್’ ಎಂದರೆ ‘ಬನ್ನಿ, ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸೋಣ.’ ಪ್ರಕೃತಿಯೊಂದಿಗೆ ಸಾಮರಸ್ಯದೊಂದಿಗೆ ಬಾಳಿದ ಮಾವೊರಿಗಳ ಇತಿಹಾಸ ಇದು.
ಈ ಪ್ರವಾಸಕಥನದ ಹಿಂದಿನ ಪುಟ ಇಲ್ಲಿದೆ: http://surahonne.com/?p=43006
(ಮುಂದುವರಿಯುವುದು)
–ಡಾ.ಗಾಯತ್ರಿದೇವಿ ಸಜ್ಜನ್ , ಶಿವಮೊಗ್ಗ.
ಮಾಹಿತಿಪೂರ್ಣ
ಮಾಹಿತಿ ಪೂರ್ಣ ಬರೆಹ..ಅಚ್ಚುಕಟ್ಟಾಗಿ ಮೂಡಿಬಂದಿದೆ ಮೇಡಂ..
ಇತ್ತೀಚೆಗೆ ಮಗಳು ಹೋಗಿ ಕಳುಹಿಸಿದ ಎಲ್ಲೋ ಸ್ಟೋನ್ ನ ಬಿಸಿನೀರಿನ ಬುಗ್ಗೆ ವೀಡಿಯೋ, ಅಮೆರಿಕದಲ್ಲಿ ನಾನು ನೋಡಿದ ಬೆಟ್ಟದ ಮೇಲಿನ ಗಂಧಕದ ಚಿಲುಮೆಗಳನ್ನು ನೆನಪಿಸಿದ ತಮ್ಮ ಲೇಖನವು, ಸುಂದರ ನ್ಯೂಝಿಲ್ಯಾಂಡಿನ ಬಿಸಿನೀರಿನ ಬುಗ್ಗೆಗಳ ವೈವಿಧ್ಯಮಯ ನೋಟಗಳನ್ನು ಪರಿಚಯಿಸಿತು. ಆಯಾಯ ತಾಣಗಳ ಪೌರಾಣಿಕ ಹಿನ್ನಲೆಗಳು ಸ್ವಾರಸ್ಯಕರವಾಗಿವೆ ಮೇಡಂ…ಧನ್ಯವಾದಗಳು.
ಹಲವಾರು ಉಪಕಥೆಗಳೊಂದಿಗೆ ಬಿಸಿನೀರ ಬುಗ್ಗೆಗಳ ಕುರಿತಾದ ಆಕರ್ಷಕ ಲೇಖನ ಈ ಬಾರಿಯ ಪ್ರವಾಸ ಕಥನದ ವಿಶೇಷವೆನಿಸಿತು.