ಪುಸ್ತಕ-ನೋಟ

“ಪ್ರೀತಿ, ನೀ ಗೆಲ್ಲುವೆಯಾ?” ಪುಸ್ತಕಾವಲೋಕನ

Share Button

ಲೇಖಕರು: ಶ್ರೀ ಮೋಹನ್‌ ವೆರ್ಣೇಕರ್‌

ಸುಮಾರು ಅರವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿರುವವರಾದರೂ ಶ್ರೀ ಮೋಹನ್‌ ವೆರ್ಣೇಕರ್ ಅವರು ತಮ್ಮ ವಿಶಿಷ್ಟ, ವಿಭಿನ್ನ, ಅಪರೂಪದ ಕಲೆಯಾದ ಚುಕ್ಕಿ ಚಿತ್ರ ಕಲಾವಿದರೆಂದೇ ಪ್ರಸಿದ್ಧರು.  ತಮ್ಮ ಕಲಾತ್ಮಕವಾದ ಕೈಚಳಕ, ಸುದೀರ್ಘ ತನ್ಮಯತೆ ಮತ್ತು ಸೃಜನಶೀಲತೆಯಿಂದಾಗಿ ತಾವು ರಚಿಸುವ ಸಾಹಿತಿಗಳ, ದೇಶಭಕ್ತರ ಚುಕ್ಕಿ ಚಿತ್ರಗಳಿಗೆ ಜೀವಂತಿಕೆಯನ್ನು ತುಂಬುವವರಾದ್ದರಿಂದ ಜನತೆ ಅವರನ್ನು ಹೆಚ್ಚಾಗಿ ಚುಕ್ಕಿ ಚಿತ್ರ ಕಲಾವಿದರೆಂದೇ ಗುರುತಿಸುತ್ತಾರೆ.  ಆದರೆ ಬಲ್ಲವರಂತೂ ಖಂಡಿತಾ ಬಲ್ಲರು, ಅವರ ಬಹುಮುಖ ಪ್ರತಿಭೆಯನ್ನು.  ಇದಲ್ಲದೆ ನಗೆಯೋಗದ ಕುರಿತಾಗಿ ನಿರಂತರ ಹೊಸ ಹೊಸ ಸಂಶೋಧನೆ, ಅದನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಆಸಕ್ತರಿಗೆ ಕಲಿಸುವುದು, ಆಪ್ತ ಸಮಾಲೋಚನೆ ಮುಂತಾದವುಗಳು ಇವರ ಸುಹವ್ಯಾಸಗಳು ಎಂಬುದು ಉಲ್ಲೇಖನೀಯ ಅಂಶ.

ಅರವತ್ಮೂರು ಕೃತಿಗಳನ್ನು ರಚಿಸುವುದೆಂದರೇನು ಸುಲಭದ ಮಾತಲ್ಲ, ನಿಜ ಅರ್ಥದಲ್ಲಿ ಸಾಹಿತಿಯಾದವರು ಮಾತ್ರ ಸಾಧಿಸಬಹುದಾದ ಸಾಧನೆ ಇದು ಎಂಬ ನನ್ನ  ಅಭಿಪ್ರಾಯವನ್ನು ಓದುಗರು ಒಪ್ಪುತ್ತಾರೆಂಬುದು ನನ್ನ ನಂಬಿಕೆ.

ಇವರು ಕೈಯಾಡಿಸಿರುವ ಸಾಹಿತ್ಯ ಪ್ರಕಾರಗಳು ಕಾದಂಬರಿ, ಸಣ್ಣ ಕಥೆಗಳು, ಮಕ್ಕಳ ಸಾಹಿತ್ಯ, ನಗೆ ಲೇಖನಗಳು, ಪ್ರಬಂಧಗಳು, ವ್ಯಕ್ತಿತ್ವ ವಿಕಾಸ, ದಾಂಪತ್ಯ ಕುರಿತಾದ ವಿಚಾರಪೂರ್ಣ ಲೇಖನಗಳು, ವಿಜ್ಞಾನ ಸಾಹಿತ್ಯ, ಮಾನಸಿಕ ಆರೋಗ್ಯ ಕುರಿತಾದ ಬರಹಗಳನ್ನು ಒಳಗೊಂಡಿದೆ ಎಂದರೆ ಇವರ ಸಾಹಿತ್ಯ ಕೃತಿಗಳ ವೈವಿಧ್ಯತೆ ಮತ್ತು ಅಗಾಧತೆ ಎಷ್ಟಿದೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ ಎಂದುಕೊಳ್ಳುತ್ತೇನೆ.

ಇಂದು ನಾನಿಲ್ಲಿ, ಇವರ ಇತ್ತೀಚೆಗಷ್ಟೇ ಬಿಡುಗಡೆಯಾದ “ಪ್ರೀತಿ, ನೀ ಗೆಲ್ಲುವೆಯಾ?” ಎಂಬ ಸಣ್ಣ ಕಥಾ ಸಂಕಲನವನ್ನು ಕುರಿತಂತೆ ಓದುಗಳಾಗಿ ನನ್ನ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳ ಬಯಸುತ್ತೇನೆ.

ಸುಮಾರು ಇನ್ನೂರ ಹತ್ತು ಪುಟಗಳ “ಪ್ರೀತಿ, ನೀ ಗೆಲ್ಲುವೆಯಾ?” ಸಣ್ಣ ಕಥಾ ಸಂಕಲನ “ದರ್ಪಣ” ಪ್ರಕಾಶನದಿಂದ ಅಚ್ಚುಕಟ್ಟಾಗಿ ಹೊರಬಂದಿದೆ.  ವೈವಿಧ್ಯಮಯವಾದ ಪ್ರೀತಿ, ಪ್ರೇಮಗಳನ್ನು ಕುರಿತಾದ ಹದಿನೇಳು ಕಥೆಗಳನ್ನು ಈ ಸಂಕಲನ ಒಳಗೊಂಡಿದೆ.  ಪ್ರೀತಿಯ ಹಲವಾರು ಮುಖಗಳು, ಬಂದೆರಗುವ ಅಡಚಣೆಗಳು, ಒದಗುವ ಸಹಾಯ ಹಸ್ತಗಳು, ಪರಿಹರಿಸಿಕೊಳ್ಳುವ ವಿವಿಧ ದಾರಿಗಳು ಮುಂತಾದ ವಿಚಾರಗಳನ್ನು ಕುತೂಹಲಭರಿತವಾಗಿ, ಕೌತುಕಮಯವಾಗಿ ಕಥಾರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನುರಿತ ಲೇಖಕರಾದ ಶ್ರೀ ಮೋಹನ್‌ ವೆರ್ಣೇಕರ್‌ ಅವರು.

ನನಗೆ ಈ ಕಥೆಗಳನ್ನು ಓದಿದಾಗ, ಅವುಗಳ ವೈವಿಧ್ಯತೆಗಳನ್ನು ಗಮನಿಸಿದಾಗ, ನಿಜಜೀವನದಲ್ಲಿ ಲೇಖಕರು ಕಂಡ, ಕೇಳಿದ, ನೋಡಿದ ವಾಸ್ತವ ಸಂಗತಿಗಳನ್ನು ತಮ್ಮ ತೀಕ್ಷ್ಣಮತಿಯ ಮೂಸೆಯಲ್ಲಿ ಪುಟಕ್ಕಿಟ್ಟು ಪರಿಪಕ್ವಗೊಳಿಸಿ, ಕಲಾತ್ಮಕವಾಗಿ ಹೆಣೆದುಕೊಟ್ಟಿದ್ದಾರೆ ಎಂಬ ಭಾವ ನನಗಾಯಿತು.

“ಪ್ರೀತಿ ನೀ ಗೆಲ್ಲುವೆಯಾ?”, ಎಂಬ ಪುಸ್ತಕದ ಶೀರ್ಷಿಕೆಯ ಕಥೆಯಲ್ಲಿ ಕಥಾನಾಯಕನ ಅಮ್ಮನ ಬಾಯಲ್ಲಿ ಬರುವ – ಎಲ್ಲರಿಗೂ ಜೀವನದಲ್ಲಿ ಒಂದೊಂದು ಪರಿವರ್ತನೆಯ ಕಾಲ ಬರುತ್ತದೆ, ಆಗಲೂ ಮನುಷ್ಯ ಬದಲಾಗದಿದ್ದರೆ ಈ ಜಗತ್ತಿನಲ್ಲಿ ಬದುಕೋದಕ್ಕೆ ಅಯೋಗ್ಯನಾಗಿ ಬಿಡುತ್ತಾನೆ – ಎಂಬ ಮಾತು, ಕಥೆ ಓದುವಾಗ ಸಿಗುವ ಆನಂದದ ಜೊತೆಗೆ ಜೀವನದ ದಾರಿದೀಪವಾಗಿಯೂ ಒದಗಬಹುದು ಎಂಬ ಸಂತಸದ ಭಾವ ಉಂಟಾಯಿತು.

“ಹರಿದ ತಂತಿ” ಕಥೆಯಂತೂ ಹೃದಯ ವಿದ್ರಾವಕವೆನಿಸುತ್ತದೆ.  ಕೆಲವೊಮ್ಮೆ ವಿಚಾರಗಳ ಕುರಿತಾಗಿ ಅತಿಯಾಗಿ ಯೋಚಿಸುತ್ತಾ ಕೂತು ಕಾಲಹರಣ ಮಾಡಿದರೆ ಉಂಟಾಗುವ ಅನಾಹುತದ ಚಿತ್ರಣ, ಹಾಗೆಯೇ ಕಥೆಯ ಕೊನೆಯಲ್ಲಿ ಕುಲಕರ್ಣಿಯ ಬಾಯಲ್ಲಿ ಬರುವ ಮಾತುಗಳು, ಮನುಷ್ಯ ಎಷ್ಟು ಸ್ವಾರ್ಥತೆಯಿಂದ ಯೋಚಿಸಬಲ್ಲ ಎಂಬ ಭಾವಗಳು ಅತ್ಯಂತ ಪರಿಣಾಮಕಾರಿಯಾಗಿ ಬಿಂಬಿತವಾಗಿದೆ.

“ನಾನು, ಅವನು ಮತ್ತು ಅವಳು” ಹಾಗೂ “ಕಿಟಕಿ ಸುಂದರಿ” ಕಥೆಗಳು ನಟನೆಯ ಕೌಶಲ್ಯವನ್ನು ಸಾರುವಲ್ಲಿ ಯಶಸ್ವಿಯಾಗಿದೆ.

”ಒಮೊಮ್ಮೆ ಹೀಗಾಗುತ್ತದೆ” ಕಥೆ ಭ್ರಮನಿರಸನಕ್ಕೆ ಸಾಕ್ಷೀಭೂತವಾಗಿದೆ.

“ಎಲ್ಲಿಗೆ” ಕಥೆಯಂತೂ ನನ್ನನ್ನು, ನನ್ನಂತಹ ಓದುಗರನ್ನು ಅತಿಯಾಗಿ ಕಾಡುವ ದುರಂತ ಕಥೆಯಾಗಿ ಹೊರಹೊಮ್ಮಿದೆ.  ಜಾತೀಯತೆಯ ಭೂತ ಪ್ರೇಮಿಗಳನ್ನು ದೂರಮಾಡಿದಾಗ ಉಂಟಾದ ಪರಿಣಾಮದಿಂದಾಗಿ ಮನಸ್ಸು ಮೂಕಾಗಿ ರೋಧಿಸುತ್ತದೆ.  ಕಥಾನಾಯಕ ರವಿಯ ತಾಯಿ, ಚಿಕ್ಕಂದಿನಿಂದ ಪಟ್ಟ ಕಷ್ಟಗಳಿಂದಾಗಿ ಸಮಾಜದ ಪ್ರತಿಕ್ರಿಯೆಗಳಿಗೆ ಅತಿಯಾದ ಬೆಲೆಯನ್ನು ನೀಡಿ, ಮಿಕ್ಕ ಮಕ್ಕಳ ಹಿತಕ್ಕಾಗಿ ಹಿರಿಮಗನ ಆಸೆಗೆ ಕೊಡಲಿಪೆಟ್ಟು ನೀಡುವುದು ಎಷ್ಟು ಸರಿ, ಎನ್ನುವುದು ನನ್ನ ಮನದಲ್ಲೆದ್ದ ಪ್ರಶ್ನೆ. ರವಿಯ ಮನವೇ “ತುತ್ತಾ, ಮುತ್ತಾ” ಎಂಬ ಡೋಲಾಯಮಾನವಾದ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಚಿತ್ರಾ ಸಾರಿ ಸಾರಿ ʼತಾಯಿಯ ಮಾತನ್ನು ಕೇಳಬೇಕು, ಅವರನ್ನು ಉಳಿಸಿಕೊಳ್ಳಬೇಕುʼ ಎಂದು ಹೇಳಿ, ರವಿಯ ಮನ ಅಮ್ಮನ ಮಾತನ್ನು ಮೂಕವಾಗಿ ಪಾಲಿಸುವಲ್ಲಿ ನೆಲೆ ನಿಂತಾಗ, ಪ್ರೀತಿಸಿದವನನ್ನು ಬಿಟ್ಟಿರಲಾರೆ, ಅಣ್ಣನೆಂದು ಭಾವಿಸಲಾರೆ, ಎಂದು ಆತ್ಮಹತ್ಯೆಯ ಮೊರೆ ಹೊಕ್ಕರೆ, ಅದ ತಿಳಿದು ತಾಯಿಯೂ ಹೃದಯಾಘಾತಕ್ಕೆ ಒಳಗಾದರೆ ರವಿಯ ಮಾಡೇನು? ಚಿತ್ರಾ ಬಲವಂತ ಪಡಿಸದಿದ್ದರೆ, ರವಿ ತಾಯಿಯನ್ನು ಒಪ್ಪಿಸಲು, ಇನ್ನಷ್ಟು, ಮತ್ತಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದನೇನೋ, ಎಂಬ ಭಾವ ಓದುಗರ ಮನದಲ್ಲಿ ಖಂಡಿತಾ ಉದ್ಭವಿಸದಿರಲಾರದು.  ರವಿಯ ಯಾವ ತಪ್ಪಿಗೆ ವಿಧಿ ಈ ಶಿಕ್ಷೆ ವಿಧಿಸಿತು ತಿಳಿಯಲಾರದೆ ಮನ ಯಾತನೆಯನ್ನು ಅನುಭವಿಸಿತು.

“ಹೀಗೊಂದು ಪ್ರೇಮಪತ್ರಗಳ ವೃತ್ತಾಂತ”ವಂತೂ ನಿಜಕ್ಕೂ ಕಚಗುಳಿಯಿಡುತ್ತಲೇ ಜೀವನದಲ್ಲಿ ಕೆಲವು ಗುಟ್ಟುಗಳು ರಟ್ಟಾಗದೆ ಹಾಗೆಯೇ ಇದ್ದುಬಿಡಬೇಕಾದುದನ್ನು ಅಚ್ಚುಕಟ್ಟಾಗಿ ಬಿಚ್ಚಿ ಹೇಳಿದೆ.  ಕಥೆಯನ್ನು ಓದುತ್ತಿರುವಾಗ ಮುಂದಿನ ಭೀಕರ ಪರಿಣಾಮಗಳನ್ನು ಊಹಿಸಿ ಆತಂಕಗೊಂಡಿದ್ದ ಮನಸ್ಸನ್ನು, ಕಥೆಯ ಮುಕ್ತಾಯ, ತುಟಿಯಂಚಿನಲ್ಲಿ ಕಿರುನಗೆ ಹೊರಹೊಮ್ಮಿಸಿ ಮುದಗೊಳಿಸಿದ್ದು ಸುಳ್ಳಲ್ಲ.


ಶ್ರೀ ಮೋಹನ್ ವೆರ್ಣೇಕರ್

“ಪ್ರೀತಿಯ ಹೊಳೆಯಲ್ಲಿ ಕಥೆ” ನಿಧಾನವಾಗಿ ಯೋಚಿಸಿ ತಂದೆಯ ಸಹಾಯವನ್ನು ಪಡೆದೇ ಹರಿ ತನ್ನ ಪ್ರೀತಿಯನ್ನು ಸಫಲಗೊಳಿಸಿಕೊಂಡ ಪರಿ ಅತ್ಯಂತ ಆಪ್ಯಾಯಮಾನವಾಗಿ ರೂಪುಗೊಂಡಿದೆ.

“ನನ್ನ ನಿನ್ನ ನಡುವೆ” ಕಥೆಯಲ್ಲಿ ನವಿರಾಗಿ ಕಾಮಾದ್ರಿಕ್ತ ಮನ, ದೈಹಿಕ ಆಕರ್ಷಣೆಯಿಂದಾಗಿ ಮೂಡಿಬಂದ ಕಾಮನೆಗಳನ್ನು ಭಾವನೆಗಳಾಗಿ ಪರಿವರ್ತಿಸಿ ಪ್ರೇಮವನ್ನಾಗಿಸಿ ಫಲಿತಗೊಳಿಸಿಕೊಂಡ ರೀತಿ ನಿಜಕ್ಕೂ ಹೀಗೂ ಉಂಟೆ? ಎನ್ನಿಸಿದೆ ಇರದು.

“ನಿರ್ಧಾರ” ಪ್ರೀತಿಯೆಂಬ ಭ್ರಮೆಯ ಮತ್ತೊಂದು ಮುಖವನ್ನು ಪರಿಚಯಿಸುವುದರಲ್ಲಿ ಸಮರ್ಥವಾಗಿದೆ.  ಮನದಲ್ಲಿ ಮೂಡಿದ ಭಾವನೆಗಳನ್ನು ಖಚಿತಗೊಳಿಸಿಕೊಳ್ಳದೆ ಬಲಿಯಬಿಟ್ಟು, ನಂತರದಲ್ಲಿ ನೋವು, ನಿರಾಶೆಗಳನ್ನನುಭವಿಸಿ, ಆದ ತಪ್ಪಿಗೆ ಬೇರೊಬ್ಬರು ಕಾರಣ ಎಂಬ ಭಾವದಿಂದ ಸಿಟ್ಟುಗೊಳ್ಳುವ ಕಥಾನಾಯಕ ವಿನಯ್‌ ಗೆ, ʼಕಸದ ಬುಟ್ಟಿ ಅಲ್ಲಿದೆ ನೋಡಿ ಸರ್‌ʼ ಎನ್ನುವ ನರ್ಮದಾಳ ಮಾತು ಮಾರ್ಮಿಕವೆನಿಸುತ್ತದೆ.

“ಮಗು ಉಳಿಯಬೇಕು ಪ್ಲೀಸ್”‌ ಎಂಬ ಕಥೆಯನ್ನು ಓದುವಾಗ, ಅಂತ್ಯ ಏನಾಗುವುದೋ ಎಂದು ಉದ್ವಿಗ್ನಗೊಂಡ ಮನ, ಕಥೆಯ ಅಂತ್ಯದಿಂದ ನಿರಾಳವಾದರೂ, ಇನ್ನೂ ನಮ್ಮ ಜನ ತಮ್ಮ ಯೋಚನೆಯ ಧಾಟಿಯನ್ನು ಬದಲಿಸಿಕೊಳ್ಳದಿರುವುದನ್ನು ಕಂಡು ಖೇದವೆನಿಸುತ್ತದೆ. 

“ಇಂದವಳು ನಕ್ಕಾಗ”, ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಭ್ರಮಾಧೀನವಾಗಿ ಬದುಕಿದಾಗ ಉಂಟಾಗುವ ನಿರಾಶೆಗೆ ಕನ್ನಡಿ ಹಿಡಿದಂತಿದೆ.

“ವಾಸ್ತವ” ಕಥೆಯ ದುರಂತ ಕರುಳು ಹಿಂಡುವಂತೆ ಮೂಡಿ ಬಂದಿದೆ.

ಹಾಗೆಯೇ “ನಾನು ನಗುತ್ತೇನೆ” ಕಥೆಯೂ ದುರಂತದ ಮತ್ತೊಂದು ಮುಖವಾಗಿ ಮೂಡಿ ಬಂದಿದೆಯಾದರೂ ಇಲ್ಲಿ, ಹೆಣ್ಣಿನ ಕಡಿವಾಣ ಹಾಕಲಾರದ ಬಯಕೆಗೆ ಬಲಿಯಾದ ಕಾಥಾನಾಯಕನ ಭಾವನೆಗಳ ರೋಧನ ಮನ ಕಲಕುತ್ತವೆ.

ಮದುವೆ ವಯಸ್ಸನ್ನು ಮುಟ್ಟಿರುವ ಯುವಕ ಕಾರ್ಯನಿಮಿತ್ತ ಒಬ್ಬನೇ ಇರಬೇಕಾಗಿ ಬಂದಾಗ ಉಂಟಾಗುವ ಬಯಕೆಗಳ ಕಾಮನೆಗೆ ಈಡಾಗಿ ಸಿನಿಮಾವೊಂದನ್ನು ನೋಡಿ ಬಂದು, ನಾಯಕಿಯಂತಹ ಹುಡುಗಿಯನ್ನೇ ಮದುವೆಯಾಗಬೇಕೆಂದು ಆಸೆ ಪಟ್ಟಾಗ,  ಫಲಿತಾಂಶವೇನಾಯಿತೆಂಬುದನ್ನು “ರತಿ ನೀನಾಗು ಬಾರೇ” ಕಥೆಯನ್ನು ಓದಿಯೇ   ತಿಳಿಯಬೇಕು.

“ಆಯ್ಕೆ” ಬುದ್ಧಿವಂತಿಕೆಯಿಂದ ಪ್ರೇಮಿಗಳು ಒಂದಾದ ವಿಭಿನ್ನ ಪರಿಯನ್ನು ಕುತೂಹಲಭರಿತವಾಗಿ ಹೇಳುವ ಕಥೆಯಾಗಿದೆ.

ಹಾಗೆಯೇ “ಪ್ರೀತಿ ಏನೀ ಅವಸ್ಥೆ” ಕಥೆಯೂ, ಕೆಲವೊಮ್ಮೆ ದೈವಾನುಗ್ರಹದಿಂದಾಗಿಯೇ ಪ್ರೇಮಿಗಳು ಒಂದಾಗುವ ಕೌತುಕಮಯ ವಸ್ತುವನ್ನು ಒಳಗೊಂಡಿದೆ.

ಹೀಗೆ ವಿಭಿನ್ನ ಶೈಲಿಯ ಎಲ್ಲಾ ರಸಭಾವಗಳನ್ನು ಒಳಗೊಂಡಿರುವ, ಜೀವನದ ರಸಮಯಭಾಗವಾದ ಪ್ರೀತಿ-ಪ್ರೇಮಗಳ ಕುರಿತಾದ ಹದಿನೇಳು ಕಥೆಗಳನ್ನು ಮನಮುಟ್ಟುವಂತೆ ಕಟ್ಟಿಕೊಟ್ಟಿರುವ ಲೇಖಕ ಶ್ರೀ ಮೋಹನ್‌ ವೆರ್ಣೇಕರ್‌ ಅವರನ್ನು ಅಭಿನಂದಿಸುತ್ತಾ ನನ್ನ ಅನಿಸಿಕೆ, ಅಭಿಪ್ರಾಯಗಳಿಗೆ ವಿರಾಮ ಹಾಕುತ್ತೇನೆ, ಏಕೆಂದರೆ ನಾನೀಗ, “ಪ್ರೀತಿ ನೀ ಗೆಲ್ಲುವೆಯಾ..?” ಕಥಾಸಂಕಲದ ಕಥೆಗಳ ಭಾವಾನಂದವನ್ನು ಇನ್ನಷ್ಟು ಸವಿಯಬೇಕಿದೆ.

ಪದ್ಮಾ ಆನಂದ್, ಮೈಸೂರು

13 Comments on ““ಪ್ರೀತಿ, ನೀ ಗೆಲ್ಲುವೆಯಾ?” ಪುಸ್ತಕಾವಲೋಕನ

  1. ಅನುಭವಿ ಬರಹಗಾರ್ತಿ ಪದ್ಮಾ ಆನಂದ್ ಅವರು ನನ್ನೀ ಕೃತಿಯನ್ನು ಪರಿಚಯಿಸಿದ ರೀತಿಗೆ ಮೆಚ್ಚಿದ ಮನಕ್ಕೆ ಆಪ್ತಭಾವ ಉಂಟಾಯಿತು. ಅವರಿಗೆ ನಾನು ಕೃತಜ್ಞ. ಸುರಹೊನ್ನೆ ಸಾಹಿತ್ಯ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದೆ. ನಾನೂ ಈ ಅಂತರ್ಜಾಲ ಪತ್ರಿಕಾಬಳಗಕ್ಕೆ ಸೇರಬಯಸಿದ್ದೇನೆ.

  2. ಪುಸ್ತಕ ಅವಲೋಕನ ..ಸೊಗಸಾಗಿ ಮಾಡಿದ್ದೀರಾ ನಾನೂ ಆ ಪುಸ್ತಕ ಓದಿರುವುದರಿಂದ ತುಂಬಾ ಆಪ್ತವಾಯಿತು ನಿಮ್ಮ ಸೂಕ್ಷ್ಮ ವಲೋಕನಕ್ಕೆ ನನ್ನ ದೊಂದು ನಮನ ಪದ್ಮಾ ಮೇಡಂ

  3. ತುಂಬಾ ಚೆನ್ನಾಗಿ ಅವಲೋಕನವಾಗಿದೆ ಪದ್ಮಾ ಮೇಡಂ
    ನಿಮಗೆ ಅಭಿವಂದನೆ.

    ಹಾಗೆಯೇ ಅಷ್ಟೊಂದು ಬರೆದ ಮೋಹನರ ಈ ಕೃತಿಯೂ ಅಭಿನಂದನಾರ್ಹ!

    ಅವರಿಗೂ ನಮಗಿರುವಂತೆ ದಿನದಲಿ ಬರೀ ಇಪ್ಪತ್ತನಾಲ್ಕು ಗಂಟೆಗಳು ಮಾತ್ರ ಸಿಗುತ್ತಿದೆಯಾ?

    ನನಗೇಕೋ ಡೌಟು !

    1. ಧನ್ಯವಾದ ನಿಮಗೆ. ಎಲ್ಲರಿಗೂ ಸಿಗುವುದು ೨೪ ಗಂಟೆಯೇ! ಆದರೆ ಸಮಯದ ಉಪಯೋಗವನ್ಮು ಹೇಗೆ ಮಾಡಿಕೊಳ್ಳುತ್ತೇವೆ ಎಂಬುದರಲ್ಲಿ ಸೃಜನಶೀಲತೆಯ ರಹಸ್ಯ ಅಡಗಿರುತ್ತದೆ. ನನಗೆಂದೂ ಸಮಯದ ದುರುಪಯೋಗ ಸಲ್ಲದು.

    2. ಧನ್ಯವಾದ ನಿಮಗೆ. ಎಲ್ಲರಿಗೂ ಸಿಗುವುದು ೨೪ ಗಂಟೆಯೇ! ಆದರೆ ಸಮಯದ ಉಪಯೋಗವನ್ಮು ಹೇಗೆ ಮಾಡಿಕೊಳ್ಳುತ್ತೇವೆ ಎಂಬುದರಲ್ಲಿ ಸೃಜನಶೀಲತೆಯ ರಹಸ್ಯ ಅಡಗಿರುತ್ತದೆ. ನನಗೆಂದೂ ಸಮಯದ ದುರುಪಯೋಗ ಸಲ್ಲದು.

  4. ಪ್ರಕಟಿಸಿದ “ಸುರಹೊನ್ನೆ” ಗೆ ತುಂಬು ಹೃದಯದ ವಂದನೆಗಳು

  5. ಒಳ್ಳೆಯ ಕೃತಿಯೊಂದನ್ನು ಎಳೆ ಎಳೆಯಾಗಿ ವಿಮರ್ಶಿಸಿ ಅವಲೋಕಿಸಿದ ಪರಿ ನಿಜಕ್ಕೂ ಆಪ್ತವೆನಿಸಿತು.

    1. ಮೆಚ್ಚುಗೆಯ ಪ್ರತಿಕ್ರಿಯೆಯಾಗಿ ಧನ್ಯವಾದಗಳು.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *