ವಿಜ್ಞಾನ

ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)

ಕೆಲವು ಸಂಪಾದಕರು ನುಡಿಯಲ್ಲಿ ಟೈಪು ಮಾಡಿ ಕಳಿಸಿ ಎನ್ನುವರು. ಇನ್ನು ಕೆಲವರು ಯುನಿಕೋಡ್ ಬೇಕು ಎನ್ನುವರು. ನುಡಿಯಿಂದ ಯುನಿಕೋಡ್‌ಗೂ ಯುನಿಕೋಡ್‌ನಿಂದ ನುಡಿಗೂ ‘ಬದಲಿಸುವ ಪರಿವರ್ತಕ’ಗಳು ಇವೆ ಎಂಬುದು ಬೇರೆ ಮಾತು. ಹಲವು ಪತ್ರಿಕೆ, ಮ್ಯಾಗಜೀನುಗಳು ನುಡಿಯನ್ನು ನಿರೀಕ್ಷಿಸುತ್ತವೆ. ಅಂತರ್ಜಾಲ ಪತ್ರಿಕೆ, ಮ್ಯಾಗಜೀನುಗಳು ಯುನಿಕೋಡ್ ಅನ್ನು ನಿರೀಕ್ಷಿಸುತ್ತವೆ. ನನ್ನ ಅನುಭವವನ್ನೇ ಹಂಚಿಕೊಳ್ಳುವುದಾದರೆ ಮನೆಯಲ್ಲಿ ಬಳಸುವ ಲ್ಯಾಪ್‌ಟಾಪಿನಲ್ಲಿ ವಿಂಡೋಸ್‌ನ ಸುಧಾರಿತ ಆವೃತ್ತಿ ಹತ್ತು ಮತ್ತು ಆವೃತ್ತಿ ಹನ್ನೊಂದು ಎರಡೂ ಇದ್ದರೂ ನುಡಿ ಸಿಗುವುದಿಲ್ಲ. ನುಡಿಯಲ್ಲಿ ಟೈಪು ಮಾಡಿದ ಕಡತಗಳನ್ನು ಓದಬಹುದಾದರೂ (ರೀಡ್ ಒನ್ಲಿ) ಟೈಪು ಮಾಡಲು ಅವಕಾಶವಿಲ್ಲ. ಹಾಗಾಗಿ ನಾನು ಯುನಿಕೋಡ್ ಬಳಸುತ್ತೇನೆ. ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಕಾಲಕಾಲಕ್ಕೆ ಅಪ್‌ಡೇಟ್ ಆಗುವಷ್ಟು ವೇಗವಾಗಿ ನಮ್ಮ ಕನ್ನಡದ ತಂತ್ರಾಂಶಗಳು ಅಪ್‌ಡೇಟ್ ಆಗದಿರುವುದೇ ಇದಕ್ಕೆ ಮೂಲ ಕಾರಣ. ಬೃಹತ್ ಪ್ರಮಾಣದಲ್ಲಿ ಬಳಸುವ ವಿಂಡೋಸ್ ಅನ್ನು ಅಲ್ಪ ಪ್ರಮಾಣದಲ್ಲಿ ಬಳಸುವ ಕನ್ನಡ ಭಾಷಾ ತಂತ್ರಾಂಶಗಳು ಅನುಸರಿಸಬೇಕಾದದ್ದು ನ್ಯಾಯೋಚಿತ ಕೂಡ. ವಿಂಡೋಸ್ ಎಂಬುದು ಬರೆಯುವ ಹಲಗೆ; ನುಡಿ ಅಥವಾ ಯುನಿಕೋಡ್ ಎಂಬವು ಬರೆಯುವ ಲೇಖನಿ. ಈ ಮುಂಚೆ ಶೇಷಾದ್ರಿ ವಾಸು ಅವರ ಬರಹ ತಂತ್ರಾಂಶವಿತ್ತು. ಈಗ ಅದನ್ನು ಬಳಸುವವರು ಅಪರೂಪ.

ಹಾಗೆ ನೋಡಿದರೆ ಬರೆಯುವ ಹಲಗೆ ಅಥವಾ ಹಾಳೆಯಾಗಿ ವಿಂಡೋಸ್‌ನ ಎಂಎಸ್ ಆಫೀಸ್ ಇದೆ ಎಂಬುದನ್ನು ಮರೆಯಬಾರದು. ಮೈಕ್ರೋಸಾಫ್ಟ್ ಆಫೀಸ್ ಎಂಬುದೊಂದು ಬರೆವಣಿಗೆ ಮಾಡುವವರ ಆಪ್ತ ತಂತ್ರಾಂಶ. ಇದೊಂದು ಅಕ್ಷಯನಿಧಿ ಎಂದರೂ ತಪ್ಪಾಗದು. (ಗೂಗಲ್ ಡಾಕ್ಸ್ ಅನ್ನೂ ಈ ಉದ್ದೇಶಕ್ಕೆ ಬಳಸಬಹುದು; ಆದರೆ ಅದು ಆನ್‌ಲೈನ್ ಡ್ರೈವು) ಮುದ್ರಕರು ಪುಸ್ತಕ ವಿನ್ಯಾಸ ಮಾಡಲು ಪೇಜ್‌ಮೇಕರ್, ಫೋಟೊಶಾಪ್, ಕೋರೆಲ್ ಡ್ರಾ ಮೊದಲಾದ ಹಣ ಪಾವತಿಸಿದ ತಂತ್ರಾಂಶಗಳನ್ನು ಬಳಕೆ ಮಾಡುವರು. ಏಕೆಂದರೆ ಅವರಿಗೆ ಹಲವು ನಮೂನೆಯ ಟೂಲ್ ಅಂದರೆ ಸಲಕರಣೆಗಳೂ ಅನುಕೂಲಗಳೂ ಬೇಕು. ಆದರೆ ನಮ್ಮಂಥ ಸಾಮಾನ್ಯ ಟೈಪಿಗರಿಗೆ ಎಂಎಸ್ ಆಫೀಸ್ ಸಾಕು. ವಿಂಡೋಸ್ ಸಂಸ್ಥಾಪನೆಯಾದ ಮೇಲೆ ಎಂ ಎಸ್ ಆಫೀಸ್ ಸಾಫ್ಟ್‌ವೇರ್‌ ಅನ್ನು ಉಣಿಸುವರು. ಇನ್ನು ಕನ್ನಡ ಗಣಕ ಪರಿಷತ್ತಿನ (ಕಗಪ) ನುಡಿ 4.0 ಅಥವಾ 5.0 ಎಂಬ ತಂತ್ರಾಂಶವನ್ನು ನಾವು ಅಂತರ್ಜಾಲ ಸಂಪರ್ಕ ಪಡೆದ ಯಾವುದೇ ಕಂಪ್ಯೂಟರಿಗೆ ಗೂಗಲ್ ಮೂಲಕ ಇಳಿಸಿಕೊಂಡು ಬಳಸಬಹುದು. ಕಗಪದವರು ನುಡಿ 5.0 ಆದ ಮೇಲೆ 6.0 ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ. ಅದೀಗ ಯುನಿಕೋಡ್ ಆಗಿದೆ. ಹಾಗಾಗಿ ನುಡಿ 6.0 ಎಂದರೆ ಯುನಿಕೋಡ್ ಆವೃತ್ತಿ ಎಂದು ತಿಳಿಯಬೇಕು. ನುಡಿ ತಂತ್ರಾಂಶದ ಬಳಕೆಯಿಂದ ಹಲವು ಇಕ್ಕಟ್ಟುಗಳು ಎದುರಾಗಿದ್ದವು. ನುಡಿಯಲ್ಲಿ ಟೈಪಿಸಿದ್ದು ಮೊಬೈಲ್ ಫೋನುಗಳಲ್ಲಿ ತೆರೆದುಕೊಳ್ಳುತ್ತಿರಲಿಲ್ಲ; ತೆರೆದುಕೊಂಡರೂ ಓದಲಾಗುತ್ತಿರಲಿಲ್ಲ. ಹಾಗೆಯೇ ಇಮೇಲ್‌ನಲ್ಲಿ ಫೈಲುಗಳನ್ನು ಲಗತ್ತಿಸಿ, ಕನ್ನಡದಲ್ಲಿ ಏನನ್ನೂ ಬರೆಯಲಾಗುತ್ತಿರಲಿಲ್ಲ. ಯುನಿಕೋಡ್ ಬಂದ ಮೇಲೆ ಜಗತ್ತಿನ ಯಾವ ಮೂಲೆಯ ಕಂಪ್ಯೂಟರಿನಲ್ಲೂ ಮೊಬೈಲ್ ಫೋನಿನಲ್ಲೂ ಯುನಿಕೋಡ್ ಕನ್ನಡ ಲಿಪಿಯನ್ನು ಓದಬಹುದು ಮತ್ತು ಯುನಿಕೋಡ್ ಫಾಂಟು (ಅಕ್ಷರಶೈಲಿ)ಗಳನ್ನು ಡೌನ್‌ಲೋಡಿಸಿಕೊಂಡಿದ್ದರೆ ಟೈಪು ಸಹ ಮಾಡಬಹುದು. ಇದನ್ನರಿತೇ ಗೂಗಲ್ ಒಂದು ಹೆಜ್ಜೆ ಮುಂದೆ ಹೋಗಿದೆ. ತನ್ನಲ್ಲಿಯೇ ಕನ್ನಡದಲ್ಲಿ ಟೈಪು ಮಾಡಲು ಅವಕಾಶ ಮಾಡಿಕೊಟ್ಟಿದೆ. ಗೂಗಲ್ ಆನ್‌ಲೈನ್ ಡ್ರೈವ್‌ಗೆ ಹೋಗಿ ಅಲ್ಲಿನ ಗೂಗಲ್ ಡಾಕ್ಸ್ (ಗೂಗಲ್‌ ವರ್ಕ್‌ಸ್ಪೇಸ್)‌ ಓಪನಿಸಿಕೊಂಡು, ನೇರವಾಗಿ ಕನ್ನಡದಲ್ಲಿಯೇ ಟೈಪು ಮಾಡಬಹುದು. ಕನ್ನಡದಲ್ಲಿ ಟೈಪು ಮಾಡಲು ಬರದೇ ಇರುವವರು ಸಹ ಇಂಗ್ಲಿಷಿನಲ್ಲಿ ಟೈಪು ಮಾಡಿದರೆ ಅಲ್ಲಿ ಕನ್ನಡ ಲಿಪಿಯಲ್ಲಿ ಅಕ್ಷರಗಳು ಮೂಡುತ್ತವೆ. ‘ನಾನು’ ಎನ್ನಲು ಇಂಗ್ಲಿಷಿನ ಲಿಪಿಯಲ್ಲೇ ನಾನು (naanu) ಎಂದು ಟೈಪಿಸಿದರೆ ಸಾಕು.

ಹೀಗೆ ನಿಧಾನವಾಗಿ ನುಡಿ ತಂತ್ರಾಂಶದ ಹಳೆಯ ಆವೃತ್ತಿಗಳು ಕಣ್ಮರೆಯಾಗುತ್ತಾ ಅದರ ಜಾಗದಲ್ಲಿ ಯುನಿಕೋಡ್ ಕನ್ನಡ ಬಳಕೆ ಹೆಚ್ಚಾಗುತ್ತಿದೆ. ಜೊತೆಗೆ ಕಗಪದವರನ್ನೂ ಒಳಗೊಂಡು ಇನ್ನೂ ಕೆಲವು ಕನ್ನಡ ತಂತ್ರಾಂಶಿಗರು ನುಡಿಯಿಂದ ಯುನಿಕೋಡ್‌ಗೂ ಯುನಿಕೋಡಿಂದ ನುಡಿಗೂ ಬದಲಾಯಿಸಲು ಪರಿವರ್ತಕ (ಕನ್‌ವರ್ಟರ್)ಗಳನ್ನು ದಯಪಾಲಿಸಿದ್ದಾರೆ. ಕೆಲವೊಮ್ಮೆ ಕಗಪದವರ ಈ ಅದಲಿ ಬದಲಿ ವಿಂಡೋದಲ್ಲಿ ನುಡಿಯಿಂದ ಯುನಿಕೋಡ್‌ಗೆ ಬದಲಾಗದೇ ಸ್ಟಕ್ (ತಡೆದಿಟ್ಟು ಅಲ್ಲಿಯೇ ನಿಂತು ಬಿಡುವುದು) ಆಗುವುದುಂಟು. ಆದರೆ ಯುನಿಕೋಡಿಂದ ನುಡಿಗೆ ಅಚ್ಚುಕಟ್ಟಾಗಿ ಪರಿವರ್ತನೆ ಆಗುತ್ತದೆ. ಈ ಸಂದರ್ಭದಲ್ಲಿ ಕನ್ನಡಿಗರಾದ ಟೆಕ್ಕಿ ಅರವಿಂದ್ ಅವರ ‘ಸಂಕ’ ಎಂಬ ವೆಬ್‌ಪೋರ್ಟಲ್ ಒಂದನ್ನು ಹೆಸರಿಸಲೇಬೇಕು. ಇವರು ನುಡಿಯಿಂದ ಯುನಿಕೋಡ್‌ಗೂ ಯುನಿಕೋಡ್‌ನಿಂದ ನುಡಿಗೂ ಪರಿವರ್ತಿಸುವ ತಂತ್ರಾಂಶದ ಪುಟವನ್ನು ಮುಕ್ತ ಸೋರ್ಸ್‌ಕೋಡಿನೊಂದಿಗೆ ಕೊಟ್ಟಿದ್ದಾರೆ. ಗೂಗಲಿನಲ್ಲಿ ಸಂಕ ಎಂದು ಕನ್ನಡದಲ್ಲಾದರೂ ಸರಿ, ಇಂಗ್ಲಿಷಿನಲ್ಲಾದರೂ ಸರಿ, ಟೈಪು ಮಾಡಿದರೆ ಈ ವೆಬ್‌ಪುಟ ತೆರೆದುಕೊಳ್ಳುತ್ತದೆ. ನುಡಿಯಲ್ಲಿ ಟೈಪಿಸಿದ್ದನ್ನು ನಕಲಿಸಿ, ಈ ಪುಟದಲ್ಲಿ ಅಂಟಿಸಿದರೆ, ಯುನಿಕೋಡಿನಲ್ಲಿ ಪರಿವರ್ತಿಸಿ ಕೊಡುತ್ತದೆ. ಹಾಗೆಯೇ ಯುನಿಕೋಡಿನಿಂದ ನುಡಿಗೂ! ಆದರೆ ನಾವು ಈ ರೀತಿಯ ಪರಿವರ್ತಕಗಳನ್ನು ಮಾಡಿಕೊಂಡ ಪಠ್ಯವನ್ನು ಒಮ್ಮೆ ಕಣ್ಣಾಡಿಸಲೇಬೇಕು. ಏಕೆಂದರೆ ಒಂದೆರಡು ಕಡೆ ಅಕ್ಷರದೋಷಗಳು ಉಳಿದುಕೊಂಡಿರುವ ಸಾಧ್ಯತೆಯೇ ಹೆಚ್ಚು; ಅದನ್ನು ಸರಿಪಡಿಸಿಕೊಳ್ಳಬೇಕು. ಮುಖ್ಯವಾಗಿ ಅನುಸ್ವಾರದಿಂದ ಕೂಡಿದ ಪದಗಳು ಸಮರ್ಪಕವಾಗಿ ಪರಿವರ್ತನೆ ಆಗುವುದಿಲ್ಲ; ಹಾಗಾಗಿ ಕಣ್ಣಾಡಿಸಲೇಬೇಕು. ಅರಾವೊತ್ತು ಮತ್ತು ರಕಾರದ ಒತ್ತಕ್ಷರಗಳು ಸೂಕ್ತವಾಗಿ ಪರಿವರ್ತಿತವಾಗಿರುವುದಿಲ್ಲ ಮತ್ತು ನಮ್ಮ ಪಠ್ಯದಲ್ಲಿ ಬೈಲಿಂಗ್ವಲ್‌ ಅಂದರೆ ದ್ವಿಭಾಷೆ (ಕನ್ನಡದ ಕಡತದಲ್ಲಿ ನಡು ನಡುವೆ ಇಂಗ್ಲಿಷ್‌ ಪದ, ವಾಕ್ಯಗಳಿದ್ದರೆ) ಇದ್ದರೆ ಆ ಸಾಲು ಸಮರ್ಪಕವಾಗಿರುವುದಿಲ್ಲ. ಹಾಗಾಗಿ ಆನಂತರವೂ ಸರಿಪಡಿಸಿಕೊಳ್ಳಬೇಕು. ಇದಕ್ಕೆ ಸಹನೆ ಅಗತ್ಯ.

ಒಟ್ಟಿನಲ್ಲಿ ಈ ಪರಿವರ್ತಕಗಳು ಅಮೂಲ್ಯವೂ ಉಪಯುಕ್ತವೂ ಆಗಿವೆ. ನಾನು ಲ್ಯಾಪ್‌ಟಾಪಿನಲ್ಲಿ ಟೈಪು ಮಾಡಿದ ಯುನಿಕೋಡ್ ಫೈಲನ್ನು ನುಡಿ ತಂತ್ರಾಂಶಕ್ಕೆ ಪರಿವರ್ತನೆ ಮಾಡಿಕೊಳ್ಳುತ್ತೇನೆ. ಕೆಲವೊಂದು ಪತ್ರಿಕೆಗಳಿಗೆ ನುಡಿಯಲ್ಲೂ ಕೆಲವೊಂದಕ್ಕೆ ಯುನಿಕೋಡ್‌ನಲ್ಲೂ ಕಳಿಸುವೆ. ಏಕೆಂದರೆ ಸುದ್ದಿ ವಿನ್ಯಾಸಕಾರರಿಗೆ ಇದರಿಂದ ಸಮಯಾನುಕೂಲ ಒದಗುತ್ತದೆ. ನಾವು ನುಡಿಯಲ್ಲಿ ಟೈಪು ಮಾಡಿ ಕಳಿಸುವ ಕಡತವನ್ನು ಅವರು ಯುನಿಕೋಡಿಗೆ ಪರಿವರ್ತನೆ ಮಾಡಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ; ಜೊತೆಗೆ ಒಂದೆರಡು ಕಡೆ ಅಕ್ಷರಸ್ಖಾಲಿತ್ಯಗಳು ಉಳಿಯುವ ಸಾಧ್ಯತೆಯೂ ಇದೆ. ಹಾಗಾಗಿ ನಾವೇ ಯಾರಿಗೆ ಹೇಗೆ ಬೇಕೋ ಹಾಗೆ ಕಳಿಸಿ ಕೊಟ್ಟರೆ ಸೂಕ್ತವೂ ಹೌದು; ಪುಟ ವಿನ್ಯಾಸಕಾರರಿಗೆ ಸಹಾಯವೂ ಹೌದು.

ಇಲ್ಲೊಂದು ತೊಡಕಿದೆ! ಅದೇನೆಂದರೆ, ನಾವು ಬಳಸುವ ಎಂ ಎಸ್ ಆಫೀಸ್ ತಂತ್ರಾಂಶದ್ದು. ಇದರಲ್ಲಿ ಹಲವು ವರ್ಶನ್ನುಗಳಿವೆ. ಮೈಕ್ರೋಸಾಫ್ಟ್ ಆಫೀಸ್ 95, 97, 2000, ಎಕ್ಸ್‌ಪಿ, 2003, 2007, 2010, 2013, 2016, 2019, 2021 ಮತ್ತು 2024 ಇಷ್ಟು ವಿಧಗಳಿದ್ದು, ಇದೀಗ ಮೊದಲಿನ ಆವೃತ್ತಿಗಳಿಗೆ ಸಪೋರ್ಟ್ ನಿಲ್ಲಿಸಲಾಗಿದೆ ಅಂದರೆ ಅಪ್‌ಡೇಟ್ ಆಗುವುದಿಲ್ಲ. ಈಗ ಎಂ ಎಸ್ ಆಫೀಸ್ 365 ಎಂಬುದೀಗ ನೂತನವಾಗಿದ್ದು, ಚಾಲ್ತಿಯಲ್ಲಿದೆ. ಡೆಸ್ಕ್‌ಟಾಪ್ ಕಂಪ್ಯೂಟರಾಗಲೀ ಲ್ಯಾಪ್‌ಟಾಪ್‌ಗಳಾಗಲೀ ಕಾರ್ಯ ನಿರ್ವಹಿಸಲು ಆಪರೇಟಿಂಗ್ ಸಿಸ್ಟಮ್ (OS) ಬೇಕು. ಓದಿ ಬರೆಯಲು ಎಂ ಎಸ್ ಆಫೀಸ್ ಇರಬೇಕು. ಒಎಸ್ ಮತ್ತು ಎಂ ಎಸ್ ಆಫೀಸ್‌ಗಳು ಹೊಂದಾಣಿಕೆಯಾಗಬೇಕು. ನೂತನ ಒಎಸ್‌ಗಳು ಹಿಂದಿನ ಎಂ ಎಸ್ ಆಫೀಸ್ ಆವೃತ್ತಿಗಳು ಸಂಸ್ಥಾಪನೆಯಾಗದಂತೆ ನಿರ್ಬಂಧಿಸುತ್ತವೆ! ಜೊತೆಗೆ ಒಎಸ್‌ಗಳಾಗಲೀ ಎಂ ಎಸ್ ಆಫೀಸ್‌ಗಳಾಗಲೀ ದುಡ್ಡು ಕೊಟ್ಟು ಕೊಂಡ ತಂತ್ರಾಂಶಗಳಾದರೆ ಸೌಲಭ್ಯ ಮತ್ತು ಸವಲತ್ತುಗಳು ಹೇರಳವಾಗಿ ದೊರೆಯುತ್ತವೆ; ಅಡ್ಡದಾರಿಯಲ್ಲಿ ಕೊಂಡರೆ, ಕ್ರಾಕ್ಡ್ ವರ್ಶನ್ನುಗಳಾದರೆ ತೊಂದರೆ ಕೊಡುತ್ತವೆ; ಪದೇ ಪದೇ ಅಪ್‌ಡೇಟ್ ಆಗಲು ಹಾತೊರೆಯುತ್ತವೆ; ಒಂದೊಮ್ಮೆ ತಮ್ಮ ಸರ್ವೀಸನ್ನು ನಿಲ್ಲಿಸುತ್ತವೆ. ಅಂದರೆ ಟೆಲಿವಿಷನ್ ಅನ್ನು ಕೊಂಡು ತಂದಂತೆ, ಕಂಪ್ಯೂಟರನ್ನು ಒಮ್ಮೆಗೇ ತಂದು ಬಳಸಲು ಬರುವುದಿಲ್ಲ. ಅವು ಕಸ್ಟಮೈಸ್ಡ್! ನಾವು ಯಾವ ಯಾವ ಉದ್ದೇಶಗಳಿಗಾಗಿ ಬಳಸಬೇಕೆಂದು ಕೊಂಡಿದ್ದೇವೆಯೋ ಆ ಕೆಲಸಕಾರ್ಯಗಳನ್ನು ಸುಲಲಿತವಾಗಿ ಮಾಡಲು ಸರಾಗವಾಗುವಂಥ ಯಂತ್ರಾಂಶವೂ ತಂತ್ರಾಂಶವೂ ಇರಬೇಕು. ನಮಗೆ ಬೇಕಾದಂತೆ ಅಲೈನ್ ಮಾಡಿಕೊಳ್ಳಬೇಕು. ಸುಮ್ಮನೆ ಹಾಳೆಯೊಂದನ್ನು ತೆಗೆದುಕೊಂಡು ಪೆನ್ನಿನಲ್ಲಿ ಬರೆದು ಕವರಿನಲ್ಲಿ ಹಾಕಿ ಅಂಚೆಗೆ ಹಾಕುವಂತೆ ಅಲ್ಲ! ಹಿನ್ನೆಲೆಯಲ್ಲಿ ಇಷ್ಟೊಂದು ಕಸರತ್ತೂ ಮಸಲತ್ತೂ ಇರುತ್ತದೆ.

ನಾವು ಬಳಸುತ್ತಿರುವ ಎಂ ಎಸ್ ಆಫೀಸ್ ಆವೃತ್ತಿಯಿಂದ ಟೈಪು ಮಾಡಿ ಮೇಲ್ ಮಾಡಿದ ಬರೆಹವನ್ನು ಡೌನ್‌ಲೋಡಿಸಿಕೊಂಡು ಓದಲು ಅಥವಾ ತಿದ್ದುಪಾಟು ಮಾಡಲು ಪತ್ರಿಕೆಯವರು ಬಳಸುವ ಆವೃತ್ತಿಯು ಪೂರಕವಾಗಿರಬೇಕು; ಅಂದರೆ ಅತ್ತ ಕಡೆ ಇರುವ ಕಂಪ್ಯೂಟರಿನ ಯಂತ್ರ ತಂತ್ರಾಂಶಗಳು ಬೆಂಬಲಿಸುವಂತಿರಬೇಕು. ಇಲ್ಲದಿದ್ದರೆ ನಾವು ಟೈಪು ಮಾಡಿ, ಅಲೈನು ಮಾಡಿ ಕಳಿಸಿದ ಬರೆಹವು ಅಲ್ಲಿ ಓಪನಾಗುವಾಗ ಕೆಲವೊಂದು ಎಡವಟ್ಟುಗಳಾಗುತ್ತವೆ. ಅಕ್ಷರಗಳೆಲ್ಲಾ ಅಂಟಿಕೊಂಡು, ಪದಗಳ ನಡುವಿನ ಸ್ಪೇಸೆಲ್ಲಾ ಮಾಯವಾಗಿ, ಉದ್ದಾನುದ್ದ ವಾಕ್ಯಗಳು ಕಾಣಿಸತೊಡಗುತ್ತವೆ. ಪುಟ ವಿನ್ಯಾಸಕಾರರು ಅವನ್ನೆಲ್ಲಾ ಅರ್ಥಕ್ಕೆ ಅನುಗುಣವಾಗಿ ಬೇರೆ ಮಾಡಲು ಸಾಕಷ್ಟು ಸಮಯ ವ್ಯಯವಾಗುತ್ತದೆ. ಕನ್ನಡದ ವಾಕ್ಯಗಳ ನಡುವೆ ಬರುವ ಅಂದರೆ ನಾವು ಬಳಸಿದ ಇಂಗ್ಲಿಷ್ ಪದ ಅಥವಾ ವಾಕ್ಯಗಳು ಅಲ್ಲಿ ಹಾಗೆಯೇ ಓಪನಾಗದೇ ಎಂಥದೋ ವಿಚಿತ್ರ ಲಿಪಿಯಲ್ಲಿ ಕಾಣಿಸಿಕೊಂಡು ಅದೇನೆಂದೇ ತಿಳಿಯದಂತಾಗುತ್ತದೆ! ಒಂದೊಮ್ಮೆ ಅವರು ಸಹ ಗಡಿಬಿಡಿಯಲ್ಲಿ ಗಮನಿಸದೇ ಹಾಗೆಯೇ ಮುದ್ರಣಕ್ಕೆ ಕಳಿಸಿ ಬಿಟ್ಟರಂತೂ ಮುಗಿದೇ ಹೋಯಿತು; ಓದುಗರಿಗೆ ಅವೇನೆಂದೇ ತಿಳಿಯದಂತಾಗುತ್ತದೆ. ಇದನ್ನು ಕಂಪ್ಯೂ ಭಾಷೆಯಲ್ಲಿ ಕಂಪ್ಯಾಟಬಲಿಟಿ ಎನ್ನುತ್ತಾರೆ. ಹೊಂದಾಣಿಕೆ ಎಂದಿಟ್ಟುಕೊಳ್ಳಬಹುದು.

ಪ್ರಕಟಿಸುವ ಪತ್ರಿಕೆಯ ಸಂಪಾದಕರಿಗಾಗಲೀ, ಪುಟ ವಿನ್ಯಾಸಕಾರರಿಗಾಗಲೀ ತಲೆನೋವಾಗದಂತೆ, ಎಚ್ಚರ ಮತ್ತು ಎಚ್ಚರಿಕೆಗಳನ್ನು ಕಾಯ್ದುಕೊಂಡು, ಬರೆಹಗಳನ್ನು ಕಳಿಸುವುದಿದೆಯಲ್ಲ, ಅದೊಂದು ಕಲೆ ಮತ್ತು ವಿಜ್ಞಾನ. ಇದಕ್ಕೆ ಬೇಕಿರುವುದು ಒಂಚೂರು ಕಂಪ್ಯೂಟರ್ ತಂತ್ರಾಂಶಗಳ ತಿಳಿವು ಮತ್ತು ತಾಂತ್ರಿಕ ಒಲವು! ಲೇಖಕ ಅಥವಾ ಲೇಖಕಿಯರು ಅಪ್‌ಡೇಟ್ ಆಗಬೇಕಿರುವುದೇ ಇಂಥಲ್ಲಿ!! ‘ಏನೋ ಬರೆದೆ, ಹೇಗೋ ಕಳಿಸಿದೆ, ಅವರು ಸರಿ ಮಾಡಿಕೊಳ್ಳಬೇಕು’ ಎಂಬ ಉಡಾಫೆ ತಕ್ಕುದಲ್ಲ; ‘ನನಗೆ ಬರುವುದಿಲ್ಲ; ನನಗೆ ತಿಳಿಯವುದಿಲ್ಲ’ ಎನ್ನುವಂಥವರು ಈ ತಾಂತ್ರಿಕ ತಿಳಿವು ಇರುವವರಿಂದ (ಪೇಯ್ಡ್ ಸರ್ವೀಸು) ಬರೆಹಗಳನ್ನು ಕಳಿಸಿ ಕೊಡುವುದು ಸೂಕ್ತ. ಏಕೆಂದರೆ ಮನಿ ಈಸ್ ನಾಟ್ ಮನಿ; ಟೈಮ್ ಈಸ್ ಮನಿ! ಬರೆಯುವಂಥವರಿಗೂ ಮತ್ತು ಪ್ರಕಟಣಾರಂಗದಲ್ಲಿ ಇರುವಂಥವರಿಗೂ!! ಅದರಲ್ಲೂ ಸುದ್ದಿಪತ್ರಿಕೆಗಳು ಕಲೆ, ಸಾಹಿತ್ಯ, ಸಂಸ್ಕೃತಿ ಸಂಗತಿಗಳನ್ನು ಕುರಿತಂತೆ ಒಂದೆರಡು ಪುಟಗಳನ್ನು ಮೀಸಲಾಗಿರಿಸಿ, ತತ್ಸಂಬಂಧದ ಲೇಖನದ ಬರೆಹಗಳನ್ನು ಪ್ರಕಟಿಸುತ್ತವೆ. ನಾವೇ ಮುಕ್ಕಾಲು ಭಾಗ ತಯಾರು ಮಾಡಿ ಕಳಿಸಿಬಿಟ್ಟರೆ ಅವರ ಕೆಲಸ ಸುಲಭವಾಗುತ್ತದೆ ಜೊತೆಗೆ ಲೇಖಕರನ್ನು ಕುರಿತ ಅವರ ಗೌರವಾದರಗಳು ಹೆಚ್ಚುತ್ತವೆ. ನಾನಂತೂ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ಬರೆವಣಿಗೆಗೆ ಸೂಕ್ತವೆನಿಸುವ ಚಿತ್ರಗಳನ್ನು ಸಹ ಆಯ್ದು ಜೊತೆಗೇ ಕಳಿಸುವ ಅಭ್ಯಾಸ ಇಟ್ಟುಕೊಂಡಿದ್ದೇನೆ.  

ಈ ಬರಹದ ಹಿಂದಿನ ಕಂತು ಇಲ್ಲಿದೆ : http://surahonne.com/?p=42901

(ಮುಂದುವರಿಯುವುದು)
ಡಾ. ಹೆಚ್ ಎನ್ ಮಂಜುರಾಜ್, ಹೊಳೆನರಸೀಪುರ

7 Comments on “ಕಂಪ್ಯೂ ಬರೆಹ : ತಾಂತ್ರಿಕ ತೊಡಕು ಮತ್ತು ತೊಡಗು :- ಭಾಗ 2

  1. ವಿಸ್ತರವಾದ ಮಾಹಿತಿಪೂರ್ಣ ಬರಹ

  2. ಮಹಿತಿ ಪೂರ್ಣ ಬರೆಹ ಅದೆಷ್ಟು ನಮ್ಮ ತಲೆಗೆ ಹೋಗುತ್ತದೆಯೋ ಜಾದು ನೋಡಬೇಕು ಸಾರ್..

  3. ಹಲವಾರು ಮಾಹಿತಿಗಳನ್ನು ತಿಳಿಸಿಕೊಡುತ್ತಿರುವ ಉಪಯುಕ್ತ ಲೇಖನ.

  4. ನಾವು ಟೈಪಿಸುವಾಗ ಅದರ ಹಿಂದೆ ನಡೆಯುವ ಪ್ರತಿಯೊಂದು ತಂತ್ರಗಾರಿಕೆಯನ್ನೂ ಅಚ್ಚುಕಟ್ಟಾಗಿ ವಿವರಿಸಿದ ಕಂಪ್ಯೂಟರ್ ಮೇಷ್ಟಿಗೆ ನಮನಗಳು.

  5. ಶುಭೋದಯ ಸರ್.. ನಾನು ನುಡಿ ಹಾಗೂ ಯೂನಿಟ್ ಕೋಡ್ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಸರ್ ಧನ್ಯವಾದಗಳು. ನಾನು ಎರಡರಲ್ಲೂ ಟೈಪಿಂಗ್ ಮಾಡುತ್ತೇನೆ. ಕೆಲವೊಮ್ಮೆ ಬೇರೆಯವರು ಕಳುಹಿಸಿದ ಯೂನಿಕೊಡನ್ನು ಸುಲಭವಾಗಿ ನುಡಿ ತಂತ್ರಾಂಶಕ್ಕೆ ತಾವು ತಿಳಿಸಿದಂತೆ ಸಂಕ ತಂತ್ರಾಂಶದಲ್ಲಿ ಬದಲಾವಣೆ ಮಾಡಿಕೊಳ್ಳಲು ಸುಲಭವಾಗಿದೆ.

  6. ಬಹಳ ಮಾಹಿತಿಪೂರ್ಣ ಬರಹ. ನಾನೂ ‘ಸಂಕ’ ವೆಬ್‌ಪೋರ್ಟಲ್ ಅನ್ನು ಉಪಯೋಗಿಸುತ್ತೇನೆ.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *