ಪ್ರವಾಸ

ಪುನರುತ್ಥಾನದ ಪಥದಲ್ಲಿ: ಹೆಜ್ಜೆ 32

Share Button

ವಿಯೆಟ್ನಾಂ, ಕಾಂಬೋಡಿಯ  ಪ್ರವಾಸಕಥನ..ದಿನ  11/12:
ಪೊನಾಮ್ ಕೂಲೆನ್….ಮರಳಿ ಗೂಡಿಗೆ.

ಪುನ: ಕಾರಿನಲ್ಲಿ ಸ್ವಲ್ಪ ದೂರ ಪ್ರಯಾಣಿಸಿ, ಅದೇ   ಮಹೇಂದ್ರ ಪರ್ವತದ ಅಂಗವಾದ  ‘ಪೊನಾಮ್  ಕುಲೇನ್  ನ್ಯಾಶನಲ್ ಪಾರ್ಕ್’ ನಲ್ಲಿರುವ  ರಮಣೀಯವಾದ ಜಲಪಾತವನ್ನು ವೀಕ್ಷಿಸಿದೆವು.  ಇಲ್ಲಿ ಸೀಮ್ ರೀಪ್ ನದಿಯು ಎರಡು ಹಂತದಲ್ಲಿ  ಜಿಗಿಯುತ್ತದೆ.   ಮೊದಲ ಹಂತದಲ್ಲಿ   ಸುಮಾರು 12 ಅಡಿ ಎತ್ತರದ ಅಗಲವಾದ  ಜಲಪಾತವಿತ್ತು. ಮುಂದಿನ ಹಂತದಲ್ಲಿ ಕಾಡಿನೊಳಗೆ ಅರ್ಧ ಕಿಮೀ  ನಡೆದು , ಅಂದಾಜು ಮುನ್ನೂರು ಮೆಟ್ಟಿಲುಗಳನ್ನಿಳಿದು ಹೋದರೆ 80 ಅಡಿ ಎತ್ತರದ ಜಲಪಾತ ಕಾಣಿಸುತ್ತದೆ. ಎರಡೂ ಕಡೆಯ  ಜಲಪಾತಗಳ ಸಮೀಪ ಪ್ರವಾಸಿಗರಿದ್ದರು . ಆಲ್ಲಿ ಪ್ಲಾಸ್ಟಿಕ್ ಗೆ ಅವಕಾಶವಿರಲಿಲ್ಲ  ಹಾಗೂ ಸ್ವಚ್ಚತೆಯನ್ನು ಕಾಯ್ದುಕೊಂಡಿರುವುದು ಮುದ ಕೊಟ್ಟಿತು.

ಈ ಕಾಡಿನ ದಾರಿಯಲ್ಲಿ ಒಂದೆರಡು ಕಡೆ ಬಿದಿರಿನಿಂದ ಅಥವಾ ಬೆತ್ತದಿಂದ ಮಾಡಿದ ಚೆಂದದ ಜೋಕಾಲಿಗಳನ್ನು ಮರದಿಂದ ತೂಗುಬಿಟ್ಟಿದ್ದರು. ನಿಗದಿತ ಶುಲ್ಕ ಕೊಟ್ಟರೆ, ಆ ಜೋಕಾಲಿಯಲ್ಲಿ ಕುಳಿತು ಫೊಟೊ ಕ್ಲಿಕ್ಕಿಸುವ ಅವಕಾಶವಿತ್ತು. ಆ ಕಾಡಿನ ಪರಿಸರದಲ್ಲಿ ಈ ಸರಳ ಸುಂದರ ಪ್ರವಾಸಿ ಆಕರ್ಷಣೆ ಸೊಗಸಾಗಿತ್ತು. ನನಗೆ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರಸಂಗದಲ್ಲಿ ಕಲಾವಿದರು ರಂಗಸ್ಥಳದಲ್ಲಿ ಸೃಷ್ಟಿಸುವ ‘ಕದಂಬ ವನದಲ್ಲಿ, ಜೋಕಾಲಿಯಲ್ಲಿ ವಿರಾಜಿಸುವ ಶಾಂಭವಿ’ ನೆನೆಪಾದಳು.

ಜಲಪಾತ ವೀಕ್ಷಣೆಯ ನಂತರ ಮಾರ್ಗದರ್ಶಿ ನಮ್ಮನ್ನು ಪೊನಾಮ್   ಕುಲೇನ್ ಪರ್ವತದ ತುತ್ತತುದಿಯಲ್ಲಿರುವ  ‘ರಿಕ್ಲೈನಿಂಗ್ ಬುದ್ಧ ಟೆಂಪಲ್ ‘ ಗೆ  ಕರೆದೊಯ್ದ.  ಇದನ್ನು   ಪ್ರೇ ಆಂಗ್ ಟೋಮ್ (Preah Ang Thom)    ಎಂದೂ ಕರೆಯುತ್ತಾರೆ. ಈ ಮಂದಿರವನ್ನು ತಲಪಲು ಸುಮಾರು ಇನ್ನೂರು ಮೆಟ್ಟಿಲುಗಳನ್ನೇರಬೇಕಿತ್ತು. ಮೆಟ್ಟಿಲುಗಳ  ಎರಡೂ ಪಾರ್ಶ್ವದಲ್ಲಿ ಸೊಗಸಾದ ನಾಗಶಿಲ್ಪವಿತ್ತು.  ಮಂದಿರದ ಆವರಣದಲ್ಲಿ ಗಣೇಶ, ಶಿವ ಹಾಗೂ  ಕೆಲವು  ಪರಿವಾರ ದೇವತೆ ಅಥವಾ ಮುನಿಗಳ ವಿಗ್ರಹಗಳಿದ್ದುವು. ಎರಡು ಅಡಿ ಇದ್ದಿರಬಹುದಾದ  ಶಿವಲಿಂಗವಿತ್ತು.  ಪಕ್ಕದಲ್ಲಿದ್ದ ನೀರಿನ ತೊಟ್ಟಿಯಿಂದ ನೀರನ್ನು  ಮೊಗೆದು   ಶಿವಲಿಂಗಕ್ಕೆ ಅಭಿಷೇಕ ಮಾಡುವ ವ್ಯವಸ್ಥೆಯಿತ್ತು.  ಹೈಮವತಿ ಮತ್ತು ನಾನು  ಶಿವಲಿಂಗಕ್ಕೆ ಅಭಿಷೇಕ ಮಾಡಿದೆವು.

ನಾಗಶಿಲ್ಪ

ಪಕ್ಕದಲ್ಲಿ ದೊಡ್ಡದಾದ ಏಕಶಿಲೆಯಿತ್ತು.  ಕೆಲವು ಮೆಟ್ಟಿಲುಗಳನ್ನೇರಿ ಅದರ ಮೇಲೆ ಹೋದಾಗ  ಪವಡಿಸಿದ ಶೈಲಿಯಲ್ಲಿರುವ 8 ಮೀಟರ್ ಉದ್ದದ ಭವ್ಯವಾದ, ಹಸನ್ಮುಖಿ ಬುದ್ಧನ ವಿಗ್ರಹವು ಕಂಗೊಳಿಸುತ್ತಿತ್ತು. ಬುದ್ಧನ ವಿಗ್ರಹದ ತಲೆಯ ಭಾಗದಲ್ಲಿ ದೊಡ್ಡದಾದ ನಗಾರಿಯಿತ್ತು.  ಪಕ್ಕದಲ್ಲೊಂದು  ಬಟ್ಟೆಯಿಂದ ಸುತ್ತಿದ ಕೋಲು ಇತ್ತು.  ಪ್ರವಾಸಿಗರು ಕೋಲಿನಿಂದ ನಗಾರಿಗೆ ಹೊಡೆದು  ನಾದ ಹೊಮ್ಮಿಸಿ , ಬುದ್ಧನಿಗೆ ಶಿರಬಾಗಿ ವಂದಿಸುತ್ತಿದ್ದರು.  ನಾವೂ ಹಾಗೆಯೇ ಮಾಡಿದೆವು. ಅಂತೂ ಒಂದೇ ಮಂದಿರದ ಆವರಣದಲ್ಲಿ, ಗಣೇಶನಿಗೆ ನಮಸ್ಕರಿಸಿ, ಮಹೇಶ್ವರನಿಗೆ ಅಭಿಷೇಕ ಮಾಡಿ,  ಅವಲೋಕಿತೇಶ್ವರನಿಗೆ ನಗಾರಿ ನುಡಿಸಿ, ವಂದಿಸಿದ ಖುಷಿ ನಮ್ಮದಾಯಿತು. ಈ  ವಾತಾವರಣವನ್ನು  ಸೃಷ್ಟಿಸಿ, ಪೋಷಿಸುವ  ಕಾಂಬೋಡಿಯಾದ   ಜನರ ಸುಸಂಸ್ಕೃತ  ಪರಧರ್ಮಸಹಿಷ್ಣುತೆಯನ್ನು ಮೆಚ್ಚಲೇ ಬೇಕು.

ಪವಡಿಸಿದ ಬುದ್ಧ

ಅಷ್ಟ್ರರಲ್ಲಿ ಮಧ್ಯಾಹ್ನದ ಊಟದ ಸಮಯವಾಗಿತ್ತು. ಮಾರ್ಗದರ್ಶಿ ನಮ್ಮನ್ನು  ರೋಂ ಚೋರ್ಂಗ್ ಆಂಗ್ ಕೋರ್ (Rom Cherung Angkor) ಎಂಬ ಹೆಸರಿನ , ಹಸಿರು ಪರಿಸರದಲ್ಲಿದ್ದ ಚೆಂದದ ರೆಸ್ಟಾರೆಂಟ್ ಗೆ ಕರೆದೊಯ್ದ.  ಆ ರೆಸ್ಟಾರೆಂಟ್ ನಲ್ಲಿದ್ದ  ಅಪ್ಸರಾ ಮೂರ್ತಿಗಳಲ್ಲಿ ಮೂಡಿಸಿದ್ದ ಮರದ   ಕುಸುರಿ ಕಲೆ ಬಹಳ ಸೊಗಸಾಗಿತ್ತು.  ಚನ್ಮನ್  ನಮಗೆ ಬೇಕಾದ ಸಸ್ಯಾಹಾರದ ವ್ಯವಸ್ಥೆ ಮಾಡಿದ.  ಅನ್ನ, ತರಕಾರಿಗಳಿದ್ದ ಸೂಪ್, ಪಲ್ಯ, ವೆಜ್ ರೋಲ್ ಇದ್ದ ಊಟ ಚೆನ್ನಾಗಿತ್ತು. 

ಅಪ್ಸರಾ ಕಾಷ್ಠಶಿಲ್ಪಗಳು

ಆಮೇಲೆ  ನಮ್ಮ ಕಾರು  ಸೀಮ್ ರೀಪ್ ನೆಡೆಗೆ ಹೊರಟಿತು.   ಚನ್ಮನ್ ನೊಂದಿಗೆ ಅದೂ ಇದೂ ಹರಟುತ್ತಾ, ಸುಮಾರು ಒಂದು ಗಂಟೆ ಪ್ರಯಾಣಿಸಿ   ಹೋಟೆಲ್ ಪಿಯರಿ ತಲಪಿದಾಗ ಸಂಜೆಯಾಗಿತ್ತು.     ‘ನಮ್ಮ ಪ್ಯಾಕೇಜ್ ನಲ್ಲಿ ನಿಗದಿಯಾದ ಸ್ಥಳೀಯ ವೀಕ್ಷಣೆ ಮುಗಿಯಿತು. ನಿಮ್ಮ ರಾತ್ರಿಯ ಊಟಕ್ಕೆ ಎದುರುಗಡೆ ಕಾಣುವ  ಪಗೋಡಾದ ಹತ್ತಿರದಲ್ಲಿರುವ  ಭಾರತೀಯ ರೆಸ್ಟಾರೆಂಟ್ ಹೋಟೇಲ್ ರಾಯನ್ ನಲ್ಲಿ ವ್ಯವಸ್ಥೆಯಾಗಿದೆ. ಅಲ್ಲಿ ಊಟ ಮಾಡಿ, ಆಸಕ್ತಿ ಇದ್ದರೆ ಸುತ್ತುಮುತ್ತಲಿನ ಮಾರ್ಕೆಟ್ ನೋಡಿ ಬನ್ನಿ. ನಾಳೆ ಹನ್ನೆರಡು ಗಂಟೆಗೆ ನಿಮ್ಮನ್ನು ಸೀಮ್  ರೀಪ್ ವಿಮಾನನಿಲ್ದಾಣಕ್ಕೆ ಬಿಡಲು   ಕಾರು ಬರುತ್ತದೆ. ನಿಮ್ಮ ಪ್ರಯಾಣ ಸುಗಮವಾಗಲಿ. ನಮ್ಮ ದೇಶಕ್ಕೆ ಬಂದುದಕ್ಕಾಗಿ ಧನ್ಯವಾದಗಳು’ ಎಂದು ಇಂಗ್ಲಿಷ್ ನಲ್ಲಿ ಹೇಳಿದ ಚನ್ಮನ್.  ನಾವು ಆತನ ಮಾರ್ಗದರ್ಶನ ನಮಗೆ ಇಷ್ಟವಾಯಿತೆಂದು ತಿಳಿಸಿ ಆತನಿಗೂ, ಡ್ರೈವರ್ ಗೂ ಸಣ್ಣ ಭಕ್ಷೀಸು ಕೊಟ್ಟು  ಬೀಳ್ಕೊಂಡೆವು.

ಸಂಜೆ ಸ್ವಲ್ಪ ವಿರಮಿಸಿ, ಅಕ್ಕ ಪಕ್ಕ ಸುತ್ತಾಡಿ  ಹೋಟೆಲ್ ರಾಯನ್ ಗೆ ಹೋದೆವು.  ದಕ್ಷಿಣ ಭಾರತ ಶೈಲಿಯ ಊಟ ಮಾಡಿದೆವು. ನಾಳೆ ನಾವು ಹೊರಡಲಿರುವುದರಿಂದ , ನಮಗೆ  ಮಧ್ಯಾಹ್ನದ ಊಟಕ್ಕೆ ಪಾರ್ಸೆಲ್ ಕೊಡಬಹುದೇ ಎಂದು ವಿಚಾರಿಸಿದೆವು. ಖಂಡಿತಾ, ನೀವು ಉಳಕೊಂಡಿರುವ ಹೋಟೆಲ್ ಗೆ ಕಳುಹಿಸಿಕೊಡುವೆ ಎಂದರು. ಪಲಾವ್, ಚಿತ್ರಾನ್ನಕ್ಕೆ ಆರ್ಡರ್ ಕೊಟ್ಟು,  ಸೀಮ್ ರೀಪ್ ನದಿಯುದ್ದಕ್ಕೂ ನಡೆಯುತ್ತಾ ನಮ್ಮ ಕೊಠಡಿಗೆ ಬಂದು  ನಮ್ಮ ಪ್ರವಾಸದ ಬಗ್ಗೆ  ಹರಟುತ್ತಾ ಪ್ಯಾಕಿಂಗ್ ಮುಗಿಸಿದೆವು. 

26 ನೇ ಸೆಪ್ಟೆಂಬರ್ 2024 ರ ಮುಂಜಾನೆ ಎಂದಿನಂತೆ ಬೆಳಗಾಯಿತು. ನಿಧಾನಕ್ಕೆ  ಸಿದ್ಧರಾಗಿ, ಹೋಟೆಲ್ ಪಿಯರಿಯ  ರೆಸ್ಟಾರೆಂಟ್ ಗೆ ಬಂದು ಬಫೆಯಲ್ಲಿ ಉಪಾಹಾರ ಮಾಡಿ,  ರಿಸೆಪ್ಷನ್ ನಲ್ಲಿ ನಾವು ಚೆಕ್ ಔಟ್ ಆಗುತ್ತೇವೆ ಎಂದು ತಿಳಿಸಿದ್ದಾಯಿತು.   ಹೋಟೆಲ್ ರಾಯನ್ ನಿಂದ ನಾವು ಆರ್ಡರ್ ಮಾಡಿದ್ದ ಮಧ್ಯಾಹ್ನದ ಊಟವನ್ನು ಯುವತಿಯೊಬ್ಬಳು ತಂದು ಕೊಟ್ಟಳು. 12 ಗಂಟೆಗೆ ಸರಿಯಾಗಿ ಕಾರು ಕೂಡಾ ಬಂತು. ಅರ್ಧ ಗಂಟೆ ಪ್ರಯಾಣಿಸಿ  ಸೀಮ್ ರೀಪ್ ವಿಮಾನ ನಿಲ್ದಾಣ ತಲಪಿದೆವು.   ವಿಮಾನ ನಿಲ್ದಾಣದ   ಮುಖ್ಯದ್ವಾರದಲ್ಲಿದ್ದ   ಭವ್ಯವಾದ ಚತುರ್ಮುಖ ಬ್ರಹ್ಮದೇವರ ಚಿನ್ನದ ಬಣ್ಣಲೇಪಿತ ಮೂರ್ತಿ  ಗಮನ ಸೆಳೆಯಿತು.

ಚೆಕ್ ಇನ್ ಆಗಿ ಲಗೇಜನ್ನು ಕಳುಹಿಸಿ ಕೊಟ್ಟು ,    ಅಲ್ಲಿದ್ದ ಸೊಗಸಾದ ವರ್ಣಚಿತ್ರಗಳನ್ನು ನೋಡುತ್ತಾ ಕಾಲಕ್ಷೇಪ ಮಾಡಿದೆವು.  ಈ ವಿಮಾನ ನಿಲ್ದಾಣ ವಿಶಾಲವಾಗಿ ಜನಜಂಗುಳಿಯಿಲ್ಲದೆ ನಿಶ್ಶಬ್ದವಾಗಿತ್ತು.  ಒಂದೆಡೆ ಕುಳಿತು ನಾವು  ಪಾರ್ಸೆಲ್ ಮಾಡಿಸಿ ತಂದಿದ್ದ  ಪಲಾವ್   ಮತ್ತು ಚಿತ್ರಾನ್ನಕ್ಕೆ ಉಪ್ಪಿನಕಾಯಿ ನೆಂಚಿಕೊಂಡು  ತಿಂದೆವು.  ಹೈಮವತಿಯವರು ತಂದಿದ್ದ ಮಾವಿನಕಾಯಿ ಉಪ್ಪಿನಕಾಯಿ ಅದಾಗಲೇ ಮುಗಿದಿತ್ತು. ನಾನು ತಂದಿದ್ದ  ಕಹಿ-ಹುಳಿ-ಉಪ್ಪು-ಖಾರ  ಮಿಶ್ರರುಚಿಯ ಹೆರಳೆಕಾಯಿ/ಕಂಚುಹುಳಿಯ ಉಪ್ಪಿನಕಾಯಿಯ ಬಾಟಲಿಯಲ್ಲಿ ಸುಮಾರು ಇನ್ನೂರು ಗ್ರಾಂನಷ್ಟು ಉಳಿದಿತ್ತು. ಹೈಮವತಿಯವರಿಗೆ  ಅದರ ರುಚಿ ಹಿಡಿಸಿತ್ತು ಮತ್ತು ಆರೋಗ್ಯಕ್ಕೂ ಹಿತಕಾರಿ, ಎಸೆಯುವುದು ಬೇಡ  ಎಂದು ತನ್ನ ಕೈಚೀಲದಲ್ಲಿ ಇರಿಸಿಕೊಂಡರು. ಊಟದ ನಂತರ ಸೆಕ್ಯೂರಿಟಿ  ಚೆಕ್  ವಿಭಾಗಕ್ಕೆ ಹೋದಾಗ , ಹೈಮವತಿಯವರ ವ್ಯಾನಿಟಿ ಬ್ಯಾಗ್ ನೇರವಾಗಿ ಬಾರದೆ ಅಡ್ಡದಾರಿಯಲ್ಲಿ ಬಂತು. ಅಲ್ಲಿದ್ದ  ಮಹಿಳಾ ಸಿಬ್ಬಂದಿ ಬ್ಯಾಗ್ ಅನ್ನು ತೆರೆದು, ಉಪ್ಪಿನಕಾಯಿಯ ಬಾಟಲ್ ಅನ್ನು ಕೈಯಲ್ಲಿ ಹಿಡಿದು, ಪರೀಕ್ಷಕ ದೃಷ್ಟಿಯಿಂದ ನೋಡುತ್ತಾ ‘  ದಿಸ್ ಸಾಸ್ ಈಸ್ ಮೋರ್ ದ್ಯಾನ್  ಹಂಡ್ರೆಡ್ ಎಮ್.ಎಲ್, ನಾಟ್ ಎಲ್ಲೊವ್ಡ್ ‘ ಎಂದರು. ‘ದಟ್ ಇಸ್ ಪಿಕಲ್ , ನಾಟ್ ಡೆಂಜರಸ್’ ಎಂದು ನಾವು ಹೇಳಿದರೂ, ಆಕೆ ಮನ್ನಿಸಲಿಲ್ಲ. ಉಪ್ಪಿನಕಾಯಿಯ  ಬಾಟಲಿಯನ್ನು  ನಿರ್ದಾಕ್ಷಿಣ್ಯವಾಗಿ ಕಸದ ಬುಟ್ಟಿಗೆ ಎಸೆದರು.   ಅಲ್ಲಿಗೆ, ಹೈಮವತಿಯವರ ಕೈಚೀಲಕ್ಕೂ, ವಿಮಾನ ನಿಲ್ದಾಣದ  ಸ್ಕ್ಯಾನಿಂಗ್ ಯಂತ್ರಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ ಎಂದು ಮತ್ತೊಮ್ಮೆ ರುಜುವಾತಾಯಿತು!

ಮಧ್ಯಾಹ್ನ ಮೂರುಕಾಲು ಗಂಟೆಗೆ ಕಾಂಬೋಡಿಯಾದ ಸೀಮ್ ರೀಪ್ ನಿಂದ ಹೊರಟ ವಿಮಾನ ಥೈಲ್ಯಾಂಡ್ ನ ಡಾನ್ ಮುವಾಂಗ್  ವಿಮಾನನಿಲ್ದಾಣಕ್ಕೆ ತಲಪಿಸಿತು. ಅಲ್ಲಿಂದ ರಾತ್ರಿ ಹತ್ತೂವರೆಗೆ ಹೊರಟ ಇನ್ನೊಂದು ವಿಮಾನದಲ್ಲಿ ಬೆಂಗಳೂರಿನ  ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತಲಪಿದಾಗ ಮಧ್ಯರಾತ್ರಿ ಕಳೆದಿತ್ತು.  ಲಗೇಜು ಪಡೆದುಕೊಂಡು  ಹೊರಗೆ ಬಂದು ಹೈಮವತಿ  ಬೆಂಗಳೂರಿನಲ್ಲಿರುವ ತನ್ನ ಮನೆ ಸೇರಿದರು. ನನಗೆ ಫ್ಲೈ ಬಸ್ ಮೂಲಕ ಮೈಸೂರಿಗೆ ಇನ್ನೂ ನಾಲ್ಕು ಗಂಟೆ ಪ್ರಯಾಣಿಸಬೇಕಿತ್ತು. ಹೀಗಾಗಿ, ಮರುದಿನ ಮುಂಜಾನೆ ಮೈಸೂರು ತಲಪಿದೆ. 

ಬಹಳಷ್ಟು ಆಸಕ್ತಿ ಕೆರಳಿಸಿದ್ದ,  ಚಿಕ್ಕಪುಟ್ಟ ಗೊಂದಲವನ್ನೂ ಮೂಡಿಸಿದ್ದ  ಹಾಗೂ ಅನಿರೀಕ್ಷಿತ ತಿರುವುಗಳನ್ನೂ  ಹೊಂದಿದ್ದ  ಈ ಪ್ರವಾಸವು ಒಟ್ಟಿನಲ್ಲಿ  ಬಹಳ ಅಚ್ಚುಕಟ್ಟಾಗಿ ನೆರವೇರಿ ಸಂತಸ ತಂದಿತು. ಈ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಮುಖ್ಯವಾಗಿ,  ಹನ್ನೆರಡು ದಿನಗಳ ಕಾಲ  ನನ್ನೊಂದಿಗೆ  ಪ್ರವಾಸಕ್ಕೆ ಸಾಥ್ ನೀಡಿದ ಹೈಮವತಿಯವರಿಗೆ ಆಭಾರಿ. ಟ್ರಾವೆಲ್ಸ್ ಫಾರ್ ಯು ಸಂಸ್ಥೆಯ  ಮೂಲಕ, ದೊಡ್ಡ ಗುಂಪಿನೊಂದಿಗೆ ಭಾರತದಲ್ಲಿ ಹಲವಾರು ಪ್ರಯಾಣ ಮಾಡಿದ್ದ ಅನುಭವವಿದೆ.   ಆದರೂ ವಿದೇಶದಲ್ಲಿ ಅವರ ಸಂಪರ್ಕದಲ್ಲಿರುವ ಸ್ಥಳೀಯ ಏಜೆನ್ಸಿಗಳ ಸೇವೆ ಹೇಗಿರುತ್ತದೋ ಎಂಬ  ಅಳುಕಿತ್ತು. ಎಲ್ಲಿಯೂ ಏನೂ ತೊಂದರೆಯಾಗಿಲ್ಲ ಹಾಗೂ ಪ್ರವಾಸ ಸುಸೂತ್ರವಾಗಿ ನೆರವೇರಿತು ಎಂಬುದು ಖುಷಿಯ ವಿಚಾರ. 

ಹೈಮವತಿ ಮತ್ತು ಹೇಮಮಾಲಾ -ಆಂಗ್ ಕೋರ್ ವಾಟ್ ದೇವಾಲಯದ ಎದುರು, ಕಾಂಬೋಡಿಯಾ

ನಮ್ಮ ‘ಸುರಹೊನ್ನೆ’ ಅಂತರ್ಜಾಲ ಪತ್ರಿಕೆಯಲ್ಲಿ, ಪ್ರತಿ ಗುರುವಾರ ಪ್ರಕಟಿಸಲೆಂದು  ‘ವಿಯೆಟ್ನಾಂ-ಕಾಂಬೋಡಿಯಾ ಪ್ರವಾಸ ಕಥನ’ದ ಮೊದಲ  ಕಂತು ಅಕ್ಟೋಬರ್ 31,2024 ರಂದು ಬರೆದಿದ್ದೆ.  ಇದು ಹೆಚ್ಚೆಂದರೆ ಹತ್ತು-ಹನ್ನೆರಡು ಕಂತುಗಳಲ್ಲಿ ಬರೆದು ಮುಗಿಸಬಹುದೆಂದು ಅಂದುಕೊಂಡಿದ್ದೆ. ಆದರೆ , ಬರೆಯುತ್ತಾ ಹೋದಂತೆ, ಪ್ರವಾಸದಲ್ಲಿ ಗಮನಿಸಿದ ವಿಚಾರಗಳು, ಅಲ್ಲಲ್ಲಿ ಹೆಕ್ಕಿದ ಐತಿಹಾಸಿಕ ಮಾಹಿತಿಗಳು ಸೇರಿ ನಿರಂತರವಾಗಿ 32 ಕಂತುಗಳನ್ನು ಬರೆಸಿಕೊಂಡು ಹೋಯಿತು ಎಂಬುದು ನನಗೆ ಸೋಜಿಗವಾಗುತ್ತಿದೆ. ದೀರ್ಘವೆನಿಸಿತು, ಬೋರ್ ಹೊಡೆಸಿತು ಎಂದು ಅನಿಸಿದರೆ ಕ್ಷಮಿಸಿ. ತಾಳ್ಮೆಯಿಂದ ಓದಿದ, ತಮ್ಮ ಓದಿನ ಖುಷಿಯನ್ನು ವಿವಿಧ ರೂಪದಲ್ಲಿ ಪ್ರತಿಕ್ರಿಯಿಸಿ    ಪ್ರೋತ್ಸಾಹಿಸಿದ ಎಲ್ಲರಿಗೂ ಆಭಾರಿ. 

ಈ ಪ್ರವಾಸ ಕಥನದ ಹಿಂದಿನ ಕಂತು ಇಲ್ಲಿದೆ : http://surahonne.com/?p=42843

(ಮುಗಿಯಿತು)
ಹೇಮಮಾಲಾ.ಬಿ, ಮೈಸೂರು
   

10 Comments on “ಪುನರುತ್ಥಾನದ ಪಥದಲ್ಲಿ: ಹೆಜ್ಜೆ 32

  1. ಪ್ರವಾಸ ಕಥನ ಮುಗಿದೇಹೋಯಿತೇ ಎನ್ನುವಂತಾಯಿತು ಗೆಳತಿ ಹೇಮಾ..ಬಹಳ ಮುದಕೊಟ್ಟಿತು ಎನ್ನುವುದಕ್ಕಿಂತ ನಾವೂ ನಿಮ್ಮೊಡನೆ..ವಿಯಟ್ನಾಂ ಹಾಗೂ ಕಾಂಬೋಡಿಯ… ಸ್ಥಳಗಳನ್ನು ಸುತ್ತಿ ಬಂದೆವೆನಿಸಿತು …ಅಷ್ಟು ಸೊಗಸಾದ ನಿರೂಪಣೆ… ಸಾಂದರ್ಭಿಕ ಚಿತ್ರಗಳೂ.. ಚೆನ್ನಾಗಿ ದ್ದವು…ಒಟ್ಟು ಅತ್ಯಂತ ಅಚ್ಚು ಕಟ್ಟಾದ ಪ್ರವಾಸ ಕಥನ ಉಣಬಡಿಸಿದ ನಿಮಗೆ ಧನ್ಯವಾದಗಳು… ಇದನ್ನು ಪುಸ್ತಕ ರೂಪದಲ್ಲಿ ನೋಡ ಬಯಸುತ್ತೇನೆ..ಆ ಕಡೆ ನಿಮ್ಮ ಚಿತ್ತ ಹರೆಯಲಿ ಎಂದು ಹಾರೈಸುತ್ತೇನೆ…

    1. ಪ್ರತಿ ಕಂತನ್ನೂ ಆಸ್ಥೆಯಿಂದ ಓಡಿ ಆಪ್ತವಾಗಿ ಪ್ರತಿಕ್ರಿಯಿಸುವ ತಮಗೆ ಅನಂತ ಧನ್ಯವಾದಗಳು ಮೇಡಂ..ಪುಸ್ತಕ ಪ್ರಕಟಣೆಯ ಬಗ್ಗೆ ನಿಧಾನಕ್ಕೆ ಗಮನ ಹರಿಸುವೆ..

    2. ಚೆನ್ನಾಗಿತ್ತು ಮಾಲಾ ಎಂಗಗೂ ಹೋದಾಂಗೆ‌ ಆತಿದ.

      1. ಬರಹವನ್ನು ಮೆಚ್ಚಿ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು.

  2. ಪ್ರವಾಸ ಕಥನ ಇಷ್ಟು ಬೇಗ ಮುಗಿಯಬಾರದಿತ್ತು. ಬಹಳ ಆಕರ್ಷಕವಾಗಿ ಮೂಡಿ ಬಂತು.

    1. ಪ್ರತಿ ಕಂತನ್ನೂ ಓದಿ, ಪ್ರೀತಿಯಿಂದ ಮೆಚ್ಚಿದ, ಪ್ರತಿಕ್ರಿಯಿಸಿದ ತಮಗೆ ಧನ್ಯವಾದಗಳು ನಯನಾ…

  3. ಕೊನೆಯ ಹೆಜ್ಜೆಯೊಂದಿಗೆ ಮರಳಿ ಗೂಡಿಗೆ ಹಿಂತಿರುಗುವ ದಿನ ಬಂತೇ ಬಂತು!
    ಕಾಂಬೋಡಿಯಾದ ಪೊನಾಮ್ ಕುಲೇನ್ ನಲ್ಲಿ ಎರಡು ಹಂತಗಳಲ್ಲಿ ಜಿಗಿಯುವ ಜಲಪಾತ, ಪ್ಲಾಸ್ಟಿಕ್ ರಹಿತ ಸ್ವಚ್ಛ ಪರಿಸರ, ಹೂಗಳಿಂದ ಅಲಂಕೃತ ಜೋಕಾಲಿ, ಅಲ್ಲಿಯವರ ಪರಧರ್ಮ ಸಹಿಷ್ಣುತೆ, ಮಾರ್ಗದರ್ಶಿ ಚನ್ಮನ್ ನ ಸಕಾಲಿಕ ಸರ್ವ ಸಹಕಾರ, ಹಿಂತಿರುಗುತ್ತಾ ವಿಮಾನ ನಿಲ್ದಾಣದಲ್ಲಿ ಗಮನ ಸೆಳೆದ ಅಪರೂಪದ ಸುಂದರ ಚತುರ್ಮುಖ ಬ್ರಹ್ಮನ ಮೂರ್ತಿ, ಇಷ್ಟವಾದ ಉಪ್ಪಿನಕಾಯಿ ಕಸದ ಬುಟ್ಟಿಗೆ ಪ್ರಿಯವಾದ ಘಟನೆಗಳೆಲ್ಲಾ ಯಥಾವತ್ತಾಗಿ ಲೇಖನದಲ್ಲಿ ಮೂಡಿಬಂದು ಮನರಂಜಿಸಿದವು. ಸುಂದರ ಪ್ರವಾಸ ಕಥನಕ್ಕೆ ಓದುಗರೆಲ್ಲರ ಧನ್ಯವಾದಗಳು ಮಾಲಾ ಅವರಿಗೆ…

  4. ‘ಅಯ್ಯೋ ಮುಗಿದೇ ಹೋಯಿತಲ್ಲಾ’ ಎನಿಸುವಷ್ಟರ ಮಟ್ಟಿಗೆ ಸುಲಲಿತವಾಗಿ, ಸರಾಗವಾಗಿ, ಕುತೂಹಲಭರಿತವಾಗಿ, ಮಾಹಿತಿಪೂರ್ಣವಾಗಿ ಆಸಕ್ತಿಭರಿತವಾಗಿ ಮೂಡಿಬಂದ ಪ್ರವಾಸ ಕಥನ ಇದಾಗಿತ್ತು. ಆದಷ್ಟು ಬೇಗ. ಪುಸ್ತಕ ರೂಪದಲ್ಲೂ ಹೊರಬರಲಿ.

  5. ಮತ್ತೆ ಕಾಂಬೋಡಿಯ ಪ್ರವಾಸ ಮಾಡಿದಂತಾಯಿತು ಅಭಿನಂದನೆಗಳು, ಹೇಮ ಮಾಲಾ ಮೇಡಂ ಅವರಿಗೆ

  6. ನೀವು ಈ ಕಂತಿನಲ್ಲಿ ಬರೆದಿರುವ ಸ್ಥಳ ನಾನು ನೋಡಲಿಲ್ಲ. ಬಹಳ ಚೆನ್ನಾಗಿ ದೆ. ಥ್ಯಾಂಕ್ಸ್

Leave a Reply to Hema Mala Cancel reply

 Click this button or press Ctrl+G to toggle between Kannada and English

Your email address will not be published. Required fields are marked *